ಪರಾಗ

ಮಹಾಲಕ್ಷ್ಮಿಯ ಮಗಳು

Share Button

“ಅಕ್ಷಯ ತದಿಗೆ ದಿನ ನಿಮ್ಮ ಪಕ್ಕದ ಸೈಟಿನಲ್ಲಿ ನಾವು ಗುದ್ದಲಿ ಪೂಜೆ ಮಾಡ್ತೀವಿ. ಬೆಳಿಗ್ಗೆ ಒಂಬತ್ತು ಗಂಟೆಗೆ ಬಂದುಬಿಡಿ….” ಆ ದಂಪತಿಗಳು ಬಂದು ಕರೆದಾಗ ಖುಷಿಯಾಯ್ತು. ತುಂಬಾ ದಿನಗಳಿಂದ ಈ ಸೈಟು ಖಾಲಿ ಇತ್ತು. ಈಗ ನೀವು ಮನೆ ಕಟ್ಟಿಸ್ಕೊಂಡು ಬರ‍್ತಾ ಇರೋದು ಕೇಳಿ ತುಂಬಾ ಸಂತೋಷ ಆಗ್ತಿದೆ.” ಅಂದೆ ನಾನು.
“ನಾವು ಮನೆ ಕಟ್ಟಿಸ್ತಾ ಇರೋದು ನಿಜ, ಆದ್ರೆ ನಾವಿರೋದು ಕೋಲಾರದಲ್ಲಿ ಆದ್ರಿಂದ ಮನೆ ಕಟ್ಟಿಸಿ ಬಾಡಿಗೆಗೆ ಕೊಡ್ತೀವಿ” ಅಂತ ಅವರು ಉತ್ತರಿಸಿದಾಗ ಕೊಂಚ ನಿರಾಸೆಯಾದ್ರೂ ಅಂತೂ ಯಾರೋ ಒಬ್ರು ಬರ‍್ತಾರಲ್ಲ ಬಿಡು ಅಂತ ಸಮಾಧಾನ ಪಟ್ಕೊಂಡು ಅವರಿಗೆ ಕಾಫಿ ಕೊಟ್ಟು ಬೀಳ್ಕೊಟ್ಟೆ.

ಶುಭ ದಿವಸ ಸರಳವಾಗಿ ಗುದ್ದಲಿ ಪೂಜೆ ಮಾಡಿ ಸ್ವೀಟ್ ಬಾಕ್ಸ್ ಕೊಟ್ಟಾಗ “ಒಳ್ಳೆಯದಾಗಲಿ ಮನೆ ಕೆಲಸ ಬೇಗ ಮುಗೀಲಿ ಅಂತ ಹಾರೈಸಿ ಮನೆಗೆ ಬಂದೆ. ಮನೆ ಕಟ್ಟುವ ಕೆಲಸ ಪ್ರಾರಂಭವಾಯಿತು. ಒಂದು ವಾರದೊಳಗೇ ವಾಚ್‌ಮನ್ ಶೆಡ್ ಕೂಡ ಸಿದ್ಧವಾಯಿತು. ಆಳುಗಳ ಕೂಗಾಟ…. ಧೂಳು…. ಇವುಗಳಿಂದ ಕೊಂಚ ತೊಂದರೆ ಆದ್ರೂ ಬೇಸರವಂತೂ ಆಗಲಿಲ್ಲ.

ವಾಚ್‌ಮನ್ ನಾರಾಯಣ ತುಂಬಾ ಒಳ್ಳೆಯ ವ್ಯಕ್ತಿ. ಕುಡಿಯೋದು, ಬೀಡಿ ಸೇದೋದು ಯಾವ ದುರಭ್ಯಾಸವೂ ಇರಲೇ ಇಲ್ಲ. ಆಗಾಗ ನಮ್ಮನೆಯೊಳಕ್ಕೆ ಬಂದು ಕೂತು ಟಿವಿ ನೋಡ್ತಿದ್ದ. ರಾಜಕೀಯದ ಬಗ್ಗೆ ಮಾತಾಡೋದು ಅಂದ್ರೆ ತುಂಬಾ ಉತ್ಸಾಹ… ಹಳ್ಳಿಯಲ್ಲಿ ನಮ್ಮಪ್ಪ, ಅಮ್ಮನ ಜೊತೆ ಇರೋ ಹೆಂಡತಿನ ಬರ‍್ಕೊಂಡು ಬಂದುಬಿಡ್ತೀನಿ, ನನ್ನ ಊಟ ತಿಂಡಿಗೆ ಕಷ್ಟ ಆಗ್ತಿದೆ ಅಂದ ಒಮ್ಮೆ. ನಾನು ಪ್ರತಿದಿನ ಹುಳಿ ಅಥವಾ ಸಾರು ಕೊಡ್ತಾ ಇದ್ದದ್ದು ನಿಜವಾದ್ರೂ ಅವನಿಗೆ ಸಂಕೋಚವಾಗಿರಬಹುದು. ನಮ್ಮೂರಿನಲ್ಲಿರೋ ಸಂಬಂಧಿಕರ ಹತ್ರ ಸ್ವಲ್ಪ ಸಾಲ ಮಾಡಿಬಿಟ್ಟಿದ್ದೀನಿ ಸ್ವಾಮಿ, ಅದ್ನ ತೀರಿಸೋಕೆ ಇಲ್ಲಿ ಬಂದು ದುಡೀತಾ ಇದೀನಿ ಅಂತ ನಾರಾಯಣ ಹೇಳಿದಾಗ ಯಾರ ತಾಪತ್ರಯ ಹೇಗೇಗಿರುತ್ತೋ ಪಾಪ…. ಅಂದುಕೊಂಡೆ.

ಅದೊಂದು ದಿವಸ ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯ ಅಡಿಗೆ ಮನೆ ಕೆಲಸ ಮುಗಿಸಿ ಹಾಲಿಗೆ ಬಂದು ಅಂದು ಬೆಳಿಗ್ಗೆ ಬಂದಿದ್ದ ವಾರಪತ್ರಿಕೆ ಕೈಗೆತ್ತಿಕೊಂಡೆ, ಅಷ್ಟರಲ್ಲೇ ಕಾಲಿಂಗ್ ಬೆಲ್ ಸದ್ದಾಯ್ತು. ಪತ್ರಿಕೆಯನ್ನು ಟೀಪಾಯ್ ಮೇಲಿಟ್ಟು ಹೋಗಿ ಬಾಗಿಲು ತೆಗೆದೆ. ಹೊರಗಡೆ ಒಬ್ಬ ಹೆಂಗಸು ಮಗುವನ್ನು ಎತ್ತಿಕೊಂಡು ನಿಂತಿದ್ದಳು. ಪಕ್ಕದಲ್ಲಿ ಏಳೆಂಟು ವರ್ಷದ ಪುಟ್ಟ ಹುಡುಗಿ….
“ಯಾರಮ್ಮ ನೀವು ಏನ್ ಬೇಕಾಗಿತ್ತು?”
“ಅಕ್ಕ…. ಪಕ್ಕದಲ್ಲಿ ಮನೆ ಕೆಲಸ ಮಾಡ್ತಾ ಅವ್ರಲ್ಲ, ಅಲ್ಲಿ ವಾಚ್‌ಮನ್ ಆಗ್‌ವ್ನಲ್ಲ ಅವ್ನ ಎಂಡ್ತಿ”
“ಓ ಹೌದಾ…. ಯಾವಾಗ ಬಂದ್ರಿ ನೀವುಗಳು?”
“ಬೆಳಿಗ್ಗೆ ಬಂದ್ವಿ ಕಣಕ್ಕ.”
“ಒಳ್ಳೇದಾಯ್ತು, ಒಳಗೆ ಬನ್ನಿ. ನಿನ್ನ ಹೆಸರೇನಮ್ಮ?”
“ಅಕ್ಕಾ… ನಾನು ಮಾಲಕ್ಷ್ಮಿ. ಇವ್ಳು ನನ್ ಮಗ್ಳು ಪಾರೋತಿ, ಇವ್ನು ನನ್ ಮಗ ರಾಮು.”
“ಹೌದಾ? ನೀವುಗಳು ಬಂದದ್ದು ಒಳ್ಳೇದಾಯ್ತು ಮಹಾಲಕ್ಷ್ಮಿ. ನಿನ್ನ ಮಗಳು ಪಾರ್ವತಿ ತುಂಬಾ ಮುದ್ದಾಗಿದ್ದಾಳೆ.”
“ಅಕ್ಕಾ… ನಾನು ಮಾಲಕ್ಷ್ಮಿ, ನನ್ ಮಗ್ಳು ಪಾರೋತಿ, ನಮ್ಮನ್ನ ಅಂಗೇ ಕರೀರಿ ಅಕ್ಕ.”
“ನಿನ್ನನ್ನ ಬೇಕಾದ್ರೆ ಮಾಲಕ್ಷ್ಮಿ ಅಂತ್ಲೇ ಕರೀತಿನಿ, ಆದ್ರೆ ನಿನ್ನ ಮಗಳನ್ನ ಮಾತ್ರ ಪಾರ್ವತಿ ಅಂತ್ಲೇ ಕರೀತಿನಿ. ನಿನ್ ಮಗ್ಳು ಪಾರ್ವತಿದೇವಿಯ ಹಾಗೇ ತುಂಬಾ ಲಕ್ಷಣವಾಗಿದ್ದಾಳೆ.”
“ಸರಿ ಅಕ್ಕ…. ಎಂಗಾದ್ರೂ ಕರೀರಿ, ಅದು ನಿಮ್ ಸಂತೋಸ.”
“ಮಾಲಕ್ಷ್ಮಿ….ನಿಮಗೆ ಕುಡಿಯೋದಕ್ಕೆ ಏನಾದ್ರೂ ಕೊಡ್ಲಾ?”
“ಬೇಡಿ ಅಕ್ಕ, ಮನೇಲಿ ನಾನು ಅನ್ನ, ಸಾರು, ಮುದ್ದೆ ಮಾಡಿಟ್ವಿವ್ನಿ, ಈಗ ಓಗಿ ಉಣ್ತೀವಿ.”
“ಆಗ್ಲೇ ಅಡಿಗೆ ಆಗೋಯ್ತ?”
“ಆಯ್ತು ಅಕ್ಕ, ನಮ್ಮೆಜಮಾನ್ರು ಅಕ್ಕ ದಿನಾ ಸಾಂಬಾರ್ ಕೊಡ್ತಾರೆ. ಈಗ ನೀನು ಬಂದ್ಯಲ್ಲ, ಸಾಂಬಾರ್ ಬೇಡ ಅಂತ ಏಳ್ಬುಡು, ಅವ್ರಿಗ್ಯಾಕೆ ಸುಮ್ನೇ ತೊಂದ್ರೆ ಅಂದ್ರು ಅದ್ಕೇ ನಿಮ್ಗೆ ಏಳ್ಬುಡೋಣ ಅಂತ ಬಂದೆ.”
“ನಾರಾಯಣ ಹಾಗೆ ಹೇಳಿದ್ನಾ?”
“ಊಂ.”
“ಸರಿಯಮ್ಮ ಕೂತ್ಕೋ, ಸಾರು ಕೊಡೋಲ್ಲ, ಶರಬತ್ತು ಮಾಡಿಕೊಡ್ತೀನಿ”. ಅಂದೆ
ಅವರುಗಳು ಶರಬತ್ತು ಕುಡಿದ ಮೇಲೆ ಮಹಾಲಕ್ಷ್ಮಿ ಲೋಟಗಳನ್ನು ತೊಳೆದಿಟ್ಟಳು.

ಯಜಮಾನ್ರು ಬಂದ ಮೇಲೆ ಮಹಾಲಕ್ಷ್ಮಿ ಬಂದಿದ್ದ ವಿಷಯ ಹೇಳಿದೆ. “ಅವನು ನಾರಾಯಣ, ಇವಳು ಮಹಾಲಕ್ಷ್ಮಿ… ಹೆಸರು ಚೆನ್ನಾಗಿ ಮ್ಯಾಚ್ ಆಗುತ್ತೆ.” ಅಂತ ನಕ್ಕರು
ನಾನೂ ನಕ್ಕುಬಿಟ್ಟೆ
“ಆದ್ರೂ ಅವರ‍್ನ ತುಂಬಾ ಹಚ್ಕೋ ಬೇಡ, ಯಾರ ಸ್ವಭಾವ ಹೇಗಿರುತ್ತೋ….”
ಯಜಮಾನ್ರು ಸಣ್ಣ ಎಚ್ಚರಿಕೆ ಕೊಟ್ಟರು.
ನಾನು ತಲೆ ಆಡಿಸಿದೆ.
ಆದರೆ ನಾನು ನಂಗೇ ಅರಿವಾಗದಂತೆ ಮಹಾಲಕ್ಷ್ಮಿಯ ಮಗಳು ಪಾರ್ವತಿಯನ್ನು ತುಂಬಾ ಹಚ್ಚಿಕೊಂಡುಬಿಟ್ಟೆ. ಪಾರ್ವತಿ ತುಂಬಾ ಮುದ್ದಾದ ಹುಡುಗಿ, ಅಷ್ಟೇ ಚುರುಕು, ತಮ್ಮನನ್ನು ತುಂಬಾ ಜವಾಬ್ಧಾರಿಯಿಂದ ನೋಡಿಕೊಳ್ಳುತ್ತಿದ್ದ ಬುದ್ಧಿವಂತೆ.
ಮಹಾಲಕ್ಷ್ಮಿ ಟಿವಿ ನೋಡುತ್ತಾ ಕೂತಿದ್ರೆ ಪಾರ್ವತಿ ಟೀಪಾಯ್ ಮೇಲಿಟ್ಟಿದ್ದ ಪತ್ರಿಕೆಯನ್ನು ತಿರುವಿ ಹಾಕುತ್ತಿದ್ದಳು.
“ನೀನು ನಿಮ್ಮೂರಿನಲ್ಲಿ ಸ್ಕೂಲಿಗೆ ಹೋಗ್ತಿದ್ಯಾ ಪಾರ್ವತಿ?”
“ಓಗ್ತಿದ್ದೆ ಅಕ್ಕ.”
“ಎಷ್ಟನೇ ಕ್ಲಾಸು?”
“ಎರಡನೇ ಕ್ಲಾಸು ಮುಗಿದಿತ್ತು.”
“ಈಗ”
“ಈಗ ಓಗ್ತಿಲ್ಲ ಅಕ್ಕ”

ಪುಸ್ತಕದಂಗಡಿಗೆ ಹೋಗಿ ಮೂರನೇ ಕ್ಲಾಸಿನ ಪುಸ್ತಕಗಳನ್ನು ತಂದು ನಾನೇ ಅವಳಿಗೆ ಮನೆಯಲ್ಲಿ ಪಾಠ ಹೇಳಿಕೊಡಲು ಪ್ರಾರಂಭಿಸಿದೆ. ಸಂಜೆಯ ಹೊತ್ತಿನಲ್ಲಿ ನಾನು ಬೇರೇ ಮಕ್ಕಳಿಗೆ ಸಂಗೀತ ಹೇಳಿಕೊಡುವಾಗ ಅವಳು ಅವರ ಜೊತೆಯಲ್ಲಿ ಕೂತು ಸಂಗೀತ ಕಲಿಯತೊಡಗಿದಳು. ಒಂದು ನೋಟ್ ಬುಕ್ಕಿನಲ್ಲಿ ಕೆಲವು ಹಾಡುಗಳನ್ನು ಅವಳಿಗೆ ಬರೆದುಕೊಟ್ಟೆ. ಬೆಳಗಿನ ಹೊತ್ತಿನಲ್ಲಿ ಪಾಠ ಹೇಳಿಸಿಕೊಂಡು ಸಂಜೆ ಸಂಗೀತ ಕಲಿಯುತ್ತಿದ್ದ ಜಾಣ ಹುಡುಗಿ ಪಾರ್ವತಿ ದಿನದಿನಕ್ಕೆ ನನಗೆ ಹತ್ತಿರವಾಗುತ್ತಾ ಹೋದಳು…..

ನೋಡ ನೋಡುತ್ತಲೇ ಎರಡು ವರ್ಷ ಕಳೆದು ಹೋಯಿತು…. ಪಕ್ಕದ ಮನೆ ಕೆಲಸ ಮುಗಿಯಿತು ಗೃಹಪ್ರವೇಶಕ್ಕೆ ಹೋಗಿ ಬಂದ ಮೇಲೆ ನನ್ನ ಹೃದಯದಲ್ಲಿ ಮಿಶ್ರ ಭಾವನೆಗಳ ಮಿಸುಕಾಟ…. ಪಕ್ಕದ ಮನೆಗೆ ಜನ ಬರುತ್ತಾರೆ ಅನ್ನುವ ಸಂತೋಷ ಒಂದು ಕಡೆಯಾದರೆ ಪಾರ್ವತಿ ದೂರವಾಗಿ ಬಿಡುತ್ತಾಳೆ ಅನ್ನೋ ನೋವು ಇನ್ನೊಂದೆಡೆ. ಅಂತೂ ಕೆಲವು ದಿನಗಳಾದ ಮೇಲೆ ಮಹಾಲಕ್ಷ್ಮಿಯ ಕುಟುಂಬ ಈ ಶೆಡ್ ಬಿಟ್ಟು ಬೇರೆ ಕಡೆಗೆ ಬಿಡಾರ ಬದಲಿಸುವ ಸಮಯ ಬಂದೇ ಬಿಡ್ತು. ಅವರ ಕಂಟ್ರಾಕ್ಟರ್ ಬೇರೆ ಏರಿಯಾದಲ್ಲಿ ಮನೆ ಕಟ್ಟಿಸಲು ಪ್ರಾರಂಭಿಸಿದ್ದರು. ಹೊರಡುವ ದಿವಸ ನಾರಾಯಣ, ಮಹಾಲಕ್ಷ್ಮಿ, ಪಾರ್ವತಿ, ಅವಳ ತಮ್ಮ ಎಲ್ಲರೂ ಹೇಳಿ ಹೋಗಲು ಬಂದರು. ನಾನು ಪಾರ್ವತಿಗೆ ಒಂದಿಷ್ಟು ಪುಸ್ತಕಗಳು, ಪೆನ್ನು, ಮಹಾಲಕ್ಷ್ಮಿಗೆ ಸೀರೆ, ಮಗುವಿಗೆ ಆಟದ ಸಾಮಾನು ಹೀಗೆ ಏನೇನು ಕೊಡಬೇಕು ಅನಿಸಿತೋ ಅದನ್ನೆಲ್ಲ ಕೊಟ್ಟೆ. ನನ್ನ ಕಣ್ಣು ತುಂಬಿ ಬಂದಿತ್ತು. ಪಾರ್ವತಿಯ ಕೈಹಿಡಿದು “ನೀನು ಮತ್ತೆ ಸ್ಕೂಲಿಗೆ ಸೇರ‍್ಕೊ ಪಾರ್ವತಿ. ನೀನು ತುಂಬಾ ಜಾಣೆ, ಖಂಡಿತವಾಗ್ಲೂ ನೀನು ಓದನ್ನು ಮುಂದುವರಿಸ್ಲೇಬೇಕು. ಏನಾದ್ರೂ ಹೆಲ್ಪ್ ಬೇಕಾದ್ರೆ ನನ್ನ ಕೇಳು.” ಅಂದೆ.
“ಆಯ್ತು ಅಕ್ಕ. ಖಂಡಿತ ನೀವು ಏಳ್ದಂಗೇ ಮಾಡ್ತೀನಿ. ಸ್ಕೂಲಿಗೆ ಸರ‍್ಕೋತೀನಿ.” ಅಂದ್ಲು ಆ ಮುಗ್ಧ ಹುಡುಗಿ.
ಅವರೆಲ್ರೂ ಹೊರಟು ಹೋದ ಮೇಲೆ ಮನಸ್ಸು ಭಾರವಾಯಿತು.

ಆಮೇಲೆ ಪಾರ್ವತಿ ಬಂದು ಪಾಠ ಹೇಳಿಸಿಕೊಳ್ಳುತ್ತಿದ್ದ ಸಮಯ ಖಾಲಿಯಾಗೇ ಉಳಿದು ಬಿಟ್ಟಿತು. ಪಾರ್ವತಿಗೆ ಇಷ್ಟವಾದ ಅವಲಕ್ಕಿ ಪೊಂಗಲ್ ಮಾಡಿದಾಗಲೆಲ್ಲ ನಾನು ಅವಳನ್ನು ಜ್ಞಾಪಿಸಿಕೊಳ್ಳುತ್ತಿದ್ದೆ. ಪಕ್ಕದ ಮನೆಗೆ ಬಾಡಿಗೆಗೆ ಬಂದ ಗಂಡ ಹೆಂಡತಿ ಇಬ್ಬರು ಕೆಲಸಕ್ಕೆ ಹೋಗ್ತಾ ಇದ್ರು. ಸಹಜವಾಗಿಯೇ ಅವರುಗಳಿಗೆ ನನ್ನ ಜೊತೆ ಮಾತನಾಡಲು ಪುರುಸೊತ್ತಿರಲಿಲ್ಲ. ನಾನು ನಿಧಾನವಾಗಿ ಬದಲಾದ ಸಂದರ್ಭಕ್ಕೆ ಒಗ್ಗಿಕೊಂಡೆ. ಆದರೂ ಎಲ್ಲಾದರೂ ಹೊಸದಾಗಿ ನಿರ್ಮಾಣವಾಗುತ್ತಿದ್ದ ಮನೆ ಮುಂದೆ ವಾಚ್‌ಮನ್ ಶೆಡ್ ಕಂಡಾಗಲೆಲ್ಲ ಪಾರ್ವತಿಯ ನೆನಪಾಗುತ್ತಿತ್ತು.

ಕಾಲಚಕ್ರ ಉರಳಿತು. ನನ್ನ ಮಕ್ಕಳು ವಿದ್ಯಾವಂತರಾಗಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಮದುವೆಯಾಗಿ ದೂರದೂರಿನಲ್ಲಿ ನೆಲೆಸಿದರು. ಇತ್ತ ಯಜಮಾನರು ರಿಟೈರ್ ಆದ್ಮೇಲೆ ನಮ್ಮ ಸರಳ ಬದುಕು ಹೆಚ್ಚಿನ ಏರುಪೇರಿಲ್ಲದೇ ನಡೆದಿತ್ತು. ಒಮ್ಮೊಮ್ಮೆ ಸಂಗೀತ, ನಾಟಕ ಮತ್ತು ಸಾಹಿತ್ಯದ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದೆವು. ಅಪರೂಪಕ್ಕೆ ಬಂಧು ಮಿತ್ರರ ಮನೆಗೆ ಭೇಟಿ ಕೊಡುವುದು ಇತ್ತು.

ಅದೊಂದು ದಿವಸ ಸಂಜೆ ನಾಲ್ಕು ಗಂಟೆಯ ಸಮಯ. ಸಂಜೆಯ ಟೀ ಕುಡಿದು ರಾತ್ರಿಯ ಊಟಕ್ಕೆ ಚಪಾತಿ ಹಿಟ್ಟು ಕಲಿಸುತ್ತಿದ್ದೆ. ಗೇಟ್ ಸದ್ದಾಯ್ತು. ಅಡಿಗೆ ಮನೆ ಕಿಟಕಿಯಿಂದ ಬಗ್ಗಿ ನೋಡಿದೆ. ಇಬ್ಬರು ಹೆಂಗಸರು ಗೇಟು ಮುಚ್ಚಿ ಒಳಗೆ ಬರುತ್ತಿದ್ದರು. ಕೈ ತೊಳೆದುಕೊಂಡು ಹೋಗಿ ಬಾಗಿಲು ತೆಗಿದೆ. ಹೊರಗಡೆ ಒಬ್ಬ ಮಧ್ಯ ವಯಸ್ಸಿನ ಹೆಂಗಸ್ಸಿನ ಜೊತೆಗೆ ವಯಸ್ಸಾದ ಮಹಿಳೆಯೊಬ್ಬರು ನಿಂತಿದ್ದರು. ನನ್ನನ್ನು ನೋಡಿದ ಆ ಮಧ್ಯ ವಯಸ್ಸಿನ ಹೆಂಗಸು ನಗುತ್ತಾ
“ಅಕ್ಕಾ…. ಚೆನ್ನಾಗಿದ್ದೀರಾ ನನ್ನ ನೆನಪಿದೆಯ ನಿಮ್ಗೆ?” ಅನ್ನುತ್ತಾ ನಕ್ಕಳು.
ತುಂಬಾ ಪರಿಚಿತ ಮುಖ ಅನಿಸಿದರೂ ತಕ್ಷಣಕ್ಕೆ ನೆನಪಾಗಲಿಲ್ಲ.
“ಸಾರಿ ಗೊತ್ತಾಗ್ತಾ ಇಲ್ಲ ತಪ್ಪು ತಿಳ್ಕೋಬೇಡಿ.” ಅಂದೆ.
“ಅಕ್ಕ…. ನನ್ನ ಗುರ‍್ತು ಸಿಗ್ಲಿಲ್ವ….. ನಾನಕ್ಕ…… ಪಕ್ಕದ ಮನೆ ವಾಚ್‌ಮನ್ ಹೆಂಡತಿ ಮಹಾಲಕ್ಷ್ಮಿ…. ನನ್ನ ಮಗಳು ಪಾರ್ವತಿಗೆ ನೀವು ಪಾಠ ಹೇಳ್ಕೊಡ್ತಾ ಇದ್ರಲ್ಲಕ್ಕ…..”
“ಓ…. ಮಹಾಲಕ್ಷ್ಮಿ….. ಈಗ ಗುರ‍್ತು ಸಿಕ್ತು. ಬಾಮ್ಮ ಒಳಗೆ. ಪಾರ್ವತಿ ಹೇಗಿದ್ದಾಳೆ? ನಿಂಜೊತೆ ಬಂದಿರೋರು ಯಾರು?”
“ನನಗೆ ತುಂಬಾ ಸಂತೋಷವಾಗಿತ್ತು. ಕಳೆದು ಹೋದದ್ದು ಸಿಕ್ಕಿದ ಸಂಭ್ರಮವಿತ್ತು. ನನ್ನ ಮಾತಿನಲ್ಲಿ.
ಮಹಾಲಕ್ಷ್ಮಿ ಒಳಗೆ ಬಂದಳು.
“ಅಕ್ಕ ಪಾರ್ವತಿ ಚೆನ್ನಾಗಿದ್ದಾಳೆ. ಇವರು ನಮ್ಮ ತಾಯಿ”
“ಪಾರ್ವತಿ ಏನ್ ಮಾಡ್ತಾ ಇದ್ದಾಳೆ? ಮದುವೆ ಮಾಡಿಬಿಟ್ಯಾ?”
“ಇನ್ನೂ ಮದುವೆ ಮಾಡಿಲ್ಲ ಅಕ್ಕ. ಎಂ.ಎಸ್.ಸಿ ಓದ್ತಾ ಇದ್ದಾಳೆ.”
ಮಹಾಲಕ್ಷ್ಮಿಯ ಭಾಷೆ ತುಂಬಾ ಸುಧಾರಿಸಿತ್ತು.
ಪಾರ್ವತಿ ಎಂ.ಎಸ್.ಸಿ. ಓದುತ್ತಾ ಇದ್ದಾಳೆ ಅನ್ನೋ ವಿಷಯ ಕೇಳಿ ನಂಗಂತೂ ತುಂಬಾ ಸಂತೋಷವಾಗಿತ್ತು.

“ನೀನು ಬಂದಿದ್ದು ತುಂಬಾ ಸಂತೋಷ ಕಣೆ, ನಿಮ್ಮನ್ನೆಲ್ಲಾ ನಾನು ತುಂಬಾ ಜ್ಞಾಪಿಸಿಕೊಳ್ತಾ ಇದ್ದೆ. ಇಷ್ಟು ದಿವಸ ಎಲ್ಲಿದ್ರಿ?”
“ನಾವುಗಳೂ ನಿಮ್ಮನ್ನ ಮರೆತಿಲ್ಲ ಅಕ್ಕ. ನಾವು ಈ ಜಾಗ ಬಿಟ್ಟು ಬೇರೆ ಕಡೆಗೆ ಹೋಗಿ ಒಂದು ವರ್ಷವಾದ ಮೇಲೆ ನಮ್ಮ ಪಾರ್ವತಿಯನ್ನ ನಮ್ಮ ಹಳ್ಳಿಗೇ ಕಳಿಸಿಬಿಟ್ಟೆ.”
“ಹೌದಾ?”
“ಹೂಂ, ಹೇಗೋ ಅಲ್ಲಿ ನಮ್ಮತ್ತೆ ಮಾವ ಇದ್ದಾರಲ್ಲ, ಅಲ್ಲೇ ಪಾರ್ವತಿ ಸ್ಕೂಲಿಗೆ ಸೇರಿಕೊಂಡ್ಳು. ಹತ್ತನೇ ಕ್ಲಾಸು ಮುಗಿದ ಮೇಲೆ ಇಲ್ಲೇ ಒಂದು ಸಣ್ಣ ಮನೆ ಮಾಡ್ಕೊಂಡು ಮಕ್ಕಳನ್ನ ಓದಿಸ್ತಿದ್ದೆ.”
“ನಿಮ್ಮೆಜಮಾನ್ರು….?”
“ನಮ್ಮೆಜಮಾನ್ರು ಹಳ್ಳಿಯೋರ ಹತ್ರ ತಗೊಂಡಿದ್ದ ಸಾಲ ತರ‍್ಸಿ ಈಗ ಅಲ್ಲೇ ನಮ್ತೋಟದಲ್ಲೆ ತರಕಾರಿ ಬೆಳೆದುಮಾರ‍್ತಾರೆ. ನಮ್ಮತ್ತೆ ಮಾವಂಗೂ ವಯಸ್ಸಾಗಿದೆ, ಈಗ ನಾನು ನಮ್ ಹಳ್ಳಿಗೇ ಹೋಗಿದ್ದೀನಿ. ಪಾರ್ವತಿ, ರಾಮು ಇಬ್ರೂ ಇದೇ ಊರಲ್ಲಿ ಹಾಸ್ಟೆಲ್‌ನಲ್ಲಿದ್ಕೊಂಡು ಓದ್ತಾ ಇದಾರೆ. ಸರ್ಕಾರದ ಹಾಸ್ಟೆಲ್ಲು ಅಕ್ಕ….”
“ಪಾರ್ವತಿ ಎಂ.ಎಸ್.ಸಿ ಓದ್ತಾ ಇರೋದು ಕೇಳಿ ನಂಗೆ ತುಂಬಾ ಖುಷಿ ಆಯ್ತು ಕಣೆ ಮಹಾಲಕ್ಷ್ಮಿ. ಅವಳು ತುಂಬಾ ಜಾಣೆ ಬಿಡು.”
“ಎಲ್ಲಾ ನಿಮ್ಮಿಂದ್ಲೇ ಅಕ್ಕ…. ನಾನು ಅಕ್ಕಂಗೆ ಮಾತು ಕೊಟ್ಟಿದ್ದೀನಿ ನಾನು ತುಂಬಾ ಓದ್ಲೇಬೇಕು ಅಂತ ಹಠ ಹಿಡಿದು ಬಿಟ್ಳು. ನೀವು ಆವತ್ತು ಕೊಟ್ಟಿದ್ದ ಪುಸ್ತಕ, ಪೆನ್ನು ಇನ್ನೂ ಜೋಪಾನವಾಗಿಟ್ಕೊಂಡಿದ್ದಾಳೆ. ನೀವು ಅಂದ್ರೆ ತುಂಬಾ ಗೌರವ ನನ್ನ ಮಗಳಿಗೆ.”
“ನಿನ್ನ ಭಾಷೆ ತುಂಬಾ ಸುಧಾರಿಸಿದೆ ಕಣೆ ತುಂಬಾ ಚೆನ್ನಾಗಿ ಸ್ಪಷ್ಟವಾಗಿ ಮಾತಾಡ್ತೀಯ ಈಗ.”
“ಎಲ್ಲಾ ನನ್ನ ಮಗಳ ಪ್ರಭಾವ ಕಣಕ್ಕ, ಅವಳು ನಂಗೆ ಕನ್ನಡ ಓದೋದು, ಬರೆಯೋದು ಹೇಳ್ಕೊಟ್ಟಿದ್ದಾಳೆ. ನಮ್ಮ ಅಕ್ಕ ಪಕ್ಕದ ಮನೆಯೋರು ಇವ್ಳಿಂದ ಕನ್ನಡ ಓದೋದು ಬರೆಯೋದು ಕಲಿತ್ಕೊಂಡಿದ್ದಾರೆ.”
“ತುಂಬಾ ಬುದ್ಧಿವಂತೆ, ಜೊತೆಗೆ ಏನಾದ್ರೂ ಒಳ್ಳೆಯ ಕೆಲಸ ಮಾಡ್ಬೇಕು ಅನ್ನೋ ಮನಸ್ಸಿದೆ ನಿನ್ನ ಮಗಳಿಗೆ.”
“ಅಕ್ಕ… ನಮ್ಮ ಪಾರ್ವತಿ ನಿಮಗೊಂದು ಪರ್ಸ್ ಕೊಟ್ಟಿದ್ದಾಳೆ. ಅವಳ ಎಂ.ಎಸ್.ಸಿ. ಮುಗಿದ ಮೇಲೆ ಬಂದು ನಿಮ್ಮ ಆಶೀರ್ವಾದ ತಗೋತಾಳಂತೆ. ಇನ್ನು ಎರಡು ವರ್ಷ ಮದುವೆ ಬೇಡ ಅಂತಿದ್ದಾಳೆ.”
“ಹಾಗೇ ಆಗ್ಲಿ ಬಿಡು.”

ಮಹಾಲಕ್ಷ್ಮಿ ನನ್ನ ಕೈಗಿಟ್ಟ ಪರ್ಸು ತುಂಬಾ ಮುದ್ದಾಗಿತ್ತು.
“ಟೀ ಮಾಡ್ಲಾ ಮಹಾಲಕ್ಷ್ಮಿ? ಅಥವಾ ಕಾಫಿ ಕುಡಿತಿರೋ?”
“ಏನೂ ಬೇಡ ಅಕ್ಕ… ಈಗ ನಾವು ನಮ್ಮೂರಿಗೆ ಹೊರಟಿದ್ದೀವಿ. ಬಸ್ಸಿಗೆ ತಡ ಆಗುತ್ತೆ, ಇನ್ನೊಂದು ಸಾರಿ ಬರ‍್ತೀವಿ.”
ಅವರಿಬ್ಬರೂ ಹೋರಾಟಾಗ ಮಹಾಲಕ್ಷ್ಮಿಯ ಕೈಗೆ ಒಂದಿಷ್ಟು ಹಣ ಕೊಟ್ಟು “ಪಾರ್ವತಿಗೆ ಇದನ್ನು ಕೊಡು, ಅವಳಿಗೆ ಬೇಕಾದ ಪುಸ್ತಕ ತೆಗೆದುಕೊಳ್ಳಲಿ….” ಅಂದೆ.
“ಸರಿ ಅಕ್ಕ ಕೊಡ್ತೀನಿ, ಪಾರ್ವತಿ ಪರೀಕ್ಷೆ ಮುಗಿದ ಮೇಲೆ ಇಬ್ರೂ ಬರ‍್ತೀವಿ. ಅಣ್ಣಂಗೆ ಹೇಳಿಬಿಡಿ.” ಅನ್ನುವಷ್ಟರಲ್ಲಿ ಹೊರಗಿನಿಂದ ಯಜಮಾನ್ರು ಬಂದರು. ಪಾರ್ವತಿಯ ವಿಷಯ ಕೇಳಿ ಅವರಿಗೂ ಸಂತೋಷವಾಯಿತು.
“ಪಾರ್ವತಿಯನ್ನು ತುಂಬಾ ಕೇಳಿದೆ ಅಂತ ಹೇಳು, ಆದಷ್ಟು ಬೇಗ ಕರ‍್ಕೊಂಡು ಬಾ ಮಹಾಲಕ್ಷ್ಮಿ” ಅಂದಾಗ ಅವಳ ತಾಯಿ ನಕ್ಕು ಕೈಮುಗಿದರು.
“ಖಂಡಿತ ಕರ‍್ಕೊಂಡು ಬರ‍್ತೀನಿ ಅಕ್ಕ, ನಿಮ್ಮನೆಗೆ ಬಂದು ನಿಮ್ಮ ಆಶೀರ್ವಾದ ತಗೊಳ್ಳದಿದ್ರೆ ದೇವರು ಮೆಚ್ತಾನ?”
ನಾನು ಅವರಿಬ್ಬರನ್ನು ಕಳಿಸಿ ಗೇಟು ಮುಚ್ಚಿ ಒಳಗೆ ಬಂದೆ, ಪಾರ್ವತಿಯ ಬದುಕು ಉಜ್ವಲವಾಗಲಿ…. ಎಂದು ನನ್ನ ಮನ ಹಾರೈಸಿತು.

ಸವಿತಾ ಪ್ರಭಾಕರ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *