(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತಬಾನನ್ ಬೀಚ್ ನಲ್ಲಿರುವ ‘ತನಹ್ ಲಾಟ್’ ಮಂದಿರ (Tanah Lot)
ಇಂಡೋನೇಶ್ಯಾದ ಬಾಲಿಯಲ್ಲಿ ನಾವು ಇದುವರೆಗೆ ನೋಡಿದ ದೇವಾಲಯಗಳ ವಾಸ್ತುವಿನ್ಯಾಸ ಒಂದೇ ರೀತಿಯದಾಗಿತ್ತು ಎಂದು ಭಾವನೆ ಆವರಿಸತೊಡಗಿ, ಬೇರೆ ರೀತಿಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಡಬಹುದಿತ್ತು ಅನಿಸುವಷ್ಟರಲ್ಲಿ , ಮಾರ್ಗದರ್ಶಿ ಮುದ್ದಣ ನಮ್ಮನ್ನು ಉದ್ದೇಶಿಸಿ, ಇನ್ನು ನಾವು ‘ತನಹ್ ಲಾಟ್’ ಮಂದಿರಕ್ಕೆ ಹೋಗಲಿದ್ದೇವೆ, ತನಹ್ ಲಾಟ್ ಎಂದರೆ ‘ಸಮುದ್ರದ ಭೂಮಿ’ ಎಂದರ್ಥ. ಅದು ಹಿಂದೂ ಮಹಾಸಾಗರದ ದ್ವೀಪದಲ್ಲಿದೆ. ಅಲೆಗಳ ಅಬ್ಬರ ಇಲ್ಲದಿರುವಾಗ ಮಾತ್ರ ನಾವು ಹೋಗಬಹುದು. ಇಲ್ಲವಾದರೆ ದೂರದಿಂದ ನೋಡಬೇಕಷ್ಟೆ ಎಂದಿದ್ದರು. ನಾವು ಉಳಕೊಂಡಿದ್ದ ಉಬೂದ್ ನಗರದಿಂದ ಸುಮಾರು ಒಂದುವರೆ ಗಂಟೆ ಪ್ರಯಾಣಿಸಿ ‘ತಬಾನನ್ ಬೀಚ್’ (Tabanan Beach) ತಲಪಿದಾಗ ಬಲು ಸುಂದರವಾದ, ಸ್ವಚ್ಚವಾಗಿದ್ದ ಕಡಲ ತೀರ ಆಕರ್ಷಿಸಿತು.
ಅಲ್ಲಲ್ಲಿ ಫೊಟೊ ಕ್ಲಿಕ್ಕಿಸುತ್ತಿದ್ದ ವಿವಿಧ ದೇಶಗಳ ಪ್ರವಾಸಿಗರು, ಬಂಡೆಗಳಿಗೆ ಅಪ್ಪಳಿಸುತ್ತಿದ್ದ ದಣಿವರಿಯದ ಅಲೆಗಳು , ಚೆಂದದ ಉದ್ಯಾನವನ ಇತ್ಯಾದಿ ನೋಡುತ್ತಾ ಕಾಲುದಾರಿಯ ಮೂಲಕ ಮಂದಿರದ ಸಮೀಪ ತಲಪಿದೆವು . ದ್ವೀಪದ ಆ ಭಾಗದಲ್ಲಿಯೂ ಹಲವಾರು ಸಣ್ಣ ಪುಟ್ಟ ಗುಡಿಗಳಿದ್ದುವು. ತನಾಹ್ ಲಾಟ್ ದೇವಾಲಯವು ದ್ವೀಪದ ತೀರದಿಂದ ಸುಮಾರು 300 ಮೀಟರ್ ದೂರದಲ್ಲಿದೆ. ಇದು ಸುಮಾರು 500 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವಾಗಿದೆ. 16 ನೇ ಶತಮಾನದ ಹಿಂದೂ ಪ್ರಯಾಣಿಕ ಮತ್ತು ಧಾರ್ಮಿಕ ವ್ಯಕ್ತಿ ದನ್ಹ್ ಹಯಾಂಗ್ ನಿರರ್ಥ ಅವರು ಈ ಬಂಡೆಯಲ್ಲಿ ವಿಶ್ರಾಂತಿ ಪಡೆದಿದ್ದರಂತೆ. ಅವರು ಆ ಬಂಡೆಯ ಮೇಲೆ ‘ವರುಣ ದೇವ’ನ ಮಂದಿರವನ್ನು ನಿರ್ಮಿಸಿದರಂತೆ. ನಿರಂತರವಾಗಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕ ಬಂಡೆಯ ಕೆಲವು ಭಾಗಗಳು ಮತ್ತು ದೇವಾಲಯವು ಕಾಲಾನಂತರದಲ್ಲಿ ಶಿಥಿಲಗೊಂಡಿವೆಯಂತೆ. ಹಾಗಾಗಿ ಈಗ ಇಲ್ಲಿಗೆ ಪೂರ್ವಾನುಮತಿಯಿಲ್ಲದ ಪ್ರವೇಶ ನಿರ್ಬಂಧಿಸಲಾಗಿದೆ .
ನೀಲಾಕಾಶ ಮತ್ತು ನೀಲಸಮುದ್ರದ ನೈಸರ್ಗಿಕ ವರ್ಣಸಂಯೋಜನೆಯುಳ್ಳ ಈ ವಿಶಾಲ ಸ್ಥಳದಲ್ಲಿ ಸೂರ್ಯಾಸ್ತ ವೀಕ್ಷಣೆಯು ಮುಖ್ಯ ಪ್ರವಾಸಿ ಆಕರ್ಷಣೆಯಂತೆ. ಇಲ್ಲಿಯೂ ಸಂಜೆಯ ಸಮಯ ಬಾಲಿಯ ಸಾಂಪ್ರದಾಯಿಕ ‘ಕೆಚಕ್ ನೃತ್ಯ’ ಪ್ರದರ್ಶನವಿರುತ್ತದೆ. ಒಟ್ಟಿನಲ್ಲಿ ತಬಾನನ್ ಬೀಚ್’ ಅನ್ನು ಛಾಯಾಗ್ರಾಹಕರ ಸ್ವರ್ಗ ಎಂದು ಪರಿಗಣಿಸಲಾಗುತ್ತದೆ.
ನಾವು ಹೋಗಿದ್ದ ಸಮಯದಲ್ಲಿ ಸಮುದ್ರದಲ್ಲಿ ಭರತದ ಅಲೆಗಳ ಅಬ್ಬರ ಇದ್ದ ಕಾರಣ ನಮಗೆ ‘ತನಹ ಲಾಟ್ ‘ ದೇಗುಲವಿರುವ ಬಂಡೆಗೆ ಹೋಗಲು ಅವಕಾಶವಿರಲಿಲ್ಲ. ಅಂತೂ ಸಮುದ್ರರಾಜನ ಅನುಮತಿ ಇದ್ದರೆ ಮಾತ್ರ ‘ ತನಹ್ ಲಾಟ್ ‘ ಮಂದಿರಕ್ಕೆ ಭೇಟಿ ಕೊಡಬಹುದು ಎಂದಾಯಿತು. ನನಗೆ ಭಾರತದ ಗುಜರಾತ್ ನ ಭಾವನಗರದ ‘ ಕೋಳಿಯಾಕ್’ ಕಡಲ ತೀರದಲ್ಲಿರುವ ‘ನಿಷ್ಕಳಂಕ ಮಹಾದೇವ್’ ಮಂದಿರದ ನೆನಪಾಯಿತು. ಅಲ್ಲಿಗೂ, ಅರಬೀ ಸಮುದ್ರದಲ್ಲಿ ಇಳಿತ ಇರುವಾಗ ಮಾತ್ರ ಭೇಟಿಕೊಡಲು ಸಾಧ್ಯವಾಗುತ್ತದೆ.
‘ತನಹ್ ಲಾಟ್ ‘ ನ ಆಸುಪಾಸಿನಲ್ಲಿ ಬಾಲಿನೀಸ್ ಮಾರುಕಟ್ಟೆಯಿತ್ತು. ಬಿದಿರು, ನಾರಿನ ಕರಕುಶಲ ವಸ್ತುಗಳು , ಸ್ಮರಣಿಕೆಗಳು, ಚೀಲಗಳು, ಟೋಪಿಗಳು , ಬಾಲಿಯ ಸಾಂಪ್ರದಾಯಿಕ ಉಡುಪುಗಳು ಇತ್ಯಾದಿ ಇದ್ದುವು. ಇಲ್ಲಿ ಚೌಕಾಸಿ ಮಾಡಿದರೆ ದರ ಕಡಿಮೆ ಮಾಡುತ್ತಾರೆ ಎಂದಿದ್ದರು ಮಾರ್ಗದರ್ಶಿ. ನಾವು ಕೆಲವರು ಸಣ್ಣ ಪುಟ್ಟ ವ್ಯಾಪಾರ ಮಾಡಿದೆವು. ಇನ್ನೊಂದು ಕಡೆ ಮಹಿಳೆಯೊಬ್ಬರು ಸಾಂಪ್ರದಾಯಿಕ ಬಾಲಿ ಆಹಾರವನ್ನು ತಯಾರಿಸಿ ಮಾರುತ್ತಿದ್ದರು. ಅಂಡಾಕಾರದ ಕಡು ಹಸಿರು ಬಣ್ಣದ, ತೆಂಗಿನ ತುರಿಯ ಲೇಪವಿದ್ದ ತಿನಿಸು ನೋಡಲು ಆಕರ್ಷಕವಾಗಿತ್ತು. ಅದೇನೆಂದು ಕೇಳಿದಾಗ ಅಕ್ಕಿಯಿಂದ ತಯಾರಿಸಿರುವ ‘ಕೆಪ್ಲಾನ್’ (Keplan) ಎಂಬ ಸಿಹಿತಿಂಡಿಯೆಂದೂ, ‘ಪಂದನ್ ಎಲೆ’ಯ (Pandan Leaves) ಸಾರವನ್ನು ಸೇರಿಸಿದ ಕಾರಣ ಹಸಿರು ಬಣ್ಣ ಬಂದಿದೆಯೆಂದೂ ಗೊತ್ತಾಯಿತು.
ಹಬೆಯಲ್ಲಿ ಬೇಯಿಸಿದ ಹಸಿರು ಬಣ್ಣದ ‘ಕೆಪ್ಲಾನ್ ‘ ಅನ್ನು ತೆಂಗಿನ ತುರಿಯಲ್ಲಿ ಹೊರಳಿಸಿ, ಸಣ್ಣ ಕಡ್ಡಿಯಲ್ಲಿ ಚುಚ್ಚಿ ಕೊಟ್ಟರು. ಅಕ್ಕಿಯಿಂದ ಮಾಡಿದ ಕಣಕ, ತೆಂಗಿನಕಾಯಿ ತುರಿ ಮತ್ತು ಬೆಲ್ಲ ಹಾಕಿದ ಹೂರಣವನ್ನು ಹಬೆಯಲ್ಲಿ ಬೇಯಿಸಿರುವ ತಿಂಡಿ ಎಂದು ಗೊತ್ತಾಯಿತು. ರುಚಿ ಸುಮಾರಾಗಿ ನಮ್ಮ ಗಣಪತಿ ಹಬ್ಬದ ಕಾಯಿಕಡುಬಿನ ಹಾಗಿತ್ತು. ‘ಪಂದನ್ ‘ಎಲೆಯ ಸುವಾಸನೆ ವಿಶಿಷ್ಟವಾಗಿತ್ತು, ಆದರೆ ಇಷ್ಟವಾಗಲಿಲ್ಲ.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44231

ಹೇಮಮಾಲಾ.ಬಿ. ಮೈಸೂರು




ತಬನನ್ ಬೀಚ್ ನ ದೃಶ್ಯ ಬಹಳ ಸುಂದರವಾಗಿದೆ. ಸುಂದರವಾದ ವಿವರಣೆ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು ಗೆಳತಿ.
ಸಮುದ್ರ ರಾಜನ ಅಪ್ಪಣೆಯಿಲ್ಲದೆ ಪ್ರವೇಶವಿಲ್ಲದಿದ್ದರೂ ಛಾಯಾಗ್ರಾಹಕರ ಸ್ವರ್ಗ ಎಂದೆನಿಸುವ ಬೀಚ್ ವರ್ಣನೆ ಸೊಗಸಾಗಿ ಮೂಡಿ ಬಂದಿದೆ.
ಹೂರಣದ ಲಾಲಿಪಪ್ ವರ್ಣನೆ ಬಾಯಲ್ಲಿ ನೀರೂರಿಸಿ ಕೊನೆಯಲ್ಲಿ ಪಂದನ್ ಎಲೆಯ ಸುವಾಸನೆ ಇಷ್ಟವಾಗದ್ದು ‘ಛೆ’ ಎನಿಸಿತು.
ವಾವ್, ಕೆಪ್ಲಾನ್ ಗೆ ಲಾಲಿಪಾಪ್ ನ ಪರಿಕಲ್ಪನೆ! ನನ್ನ ವರ್ಣನೆಗಿಂತ, ನಿಮ್ಮ ಪ್ರತಿಕ್ರಿಯೆ ಸೂಪರ್ ಆಗಿದೆ! ಧನ್ಯವಾದಗಳು!
ಸೊಗಸಾದ ನಿರೂಪಣೆಯೊಂದಿಗೆ ಅನಾವರಣ ಗೊಂಡಿರುವ ಪ್ರವಾಸ ಕಥನ ..ಓದಿಸಿಕೊಂಡುಹೋಯಿತು.. ನಿಮ್ಮ ಸೂಕ್ಷ್ಮ ಅವಲೋಕನ ಅದನ್ನು ಪಡಿಮೂಡುಸುವ ಬಗೆ ನನಗೆ ಇಷ್ಟ… ಸೂಕ್ತ ಚಿತ್ರ ಗಳನ್ನು ಹಾಕುವುದು..ಸಮಂಜಸವಾಗಿರುತ್ತದೆ…ಗೆಳತಿ ಹೇಮಾ..
ಪ್ರತಿ ಬರಹವನ್ನೂ ಓದಿ, ಪ್ರತಿಕ್ರಿಯಿಸುವ ನಿಮ್ಮ ಪ್ರೀತಿಗೆ ಆಭಾರಿ. ಧನ್ಯವಾದಗಳು.
ತಬಾನನ್ ಬೀಚ್ ನ ವರ್ಣ ನೆಯ ಜೊತೆ ಜೊತೆಗೆ ಅಲ್ಲಿನ ಜನ ಜೀವನದ ಚಿತ್ರಣವೂ ಸೊಗಸಾಗಿ ಮೂಡಿ ಬಂದಿದೆ
ಆಕರ್ಷಕ ವಾದ ಚಿತ್ರಗಳೂ ಮನಸ್ಸಿಗೆ ಮುದ ನೀಡುತ್ತವೆ ವಂದನೆಗಳು