ವಾಟ್ಸಾಪ್ ಕಥೆ 51 : ಪ್ರಭಾವ.
ಶನಿದೇವರನ್ನು ಅತ್ಯಂತ ಭಯಭಕ್ತಿಯಿಂದ ಪೂಜಿಸುವ ಜನರು ಅವನ ದೃಷ್ಟಿ ಬಿತ್ತೆಂದರೆ ಸಾಕು ಸಂಕಷ್ಟಗಳು ತಪ್ಪಿದ್ದಲ್ಲ ಎಂದು ನಂಬುವುದುಂಟು. ಆತನು ತನ್ನ ತಂದೆಯನ್ನೂ ಬಿಡದೆ ಭೂಮಿಯ ಮೇಲೆ ಜನಿಸಿದ ಸಕಲರನ್ನೂ ಕಾಡಬಲ್ಲನಾದ್ದರಿಂದ ಸಾಕಪ್ಪಾ ಅವನ ಸಹವಾಸ ಎಂದು ಎಲ್ಲರೂ ನಿಟ್ಟುಸಿರು ಬಿಡುತ್ತಾರೆ. ಅಂತಹ ಶನಿದೇವನು ಒಮ್ಮೆ ಒಬ್ಬನೇ ಕುಳಿತು ಆಲೋಚಿಸುತ್ತಿರುವಾಗ “ನನ್ನ ಪ್ರಭಾವವಲಯಕ್ಕೆ ಸಿಗದರ‍್ಯಾರು? ಹಾ ! ಈಗ ನೆನಪಾಯಿತು. ಪರಮೇಶ್ವರ ಪಾರ್ವತಿದೇವಿಯರ ಪುತ್ರ ಗಣಪ” ಎಂದುಕೊಂಡ. “ಆದರೂ ಅವನು ಗುಂಡಗುಂಡಗೆ ಮುದ್ದಾಗಿದ್ದಾನೆ. ಅವನನ್ನು ಕಾಡುವುದು ಬೇಡ. ಆದರೆ ಅವನನ್ನು ಒಂದುಸಾರಿ ಕಂಡು ಮಾತನಾಡಿಸಿ ಬರಬೇಕು” ಎಂದುಕೊಂಡು ಗಣಪತಿಯನ್ನು ಹುಡುಕಿ ಹೊರಟ.
ಶನಿದೇವನು ಬರುತ್ತಿರುವುದನ್ನು ದೂರದಿಂದಲೇ ನೋಡಿಬಿಟ್ಟ ಗಣೇಶ. ಅಲ್ಲಿಂದ ಪರಾರಿಯಾಗಲು ಯೋಚಿಸುತ್ತಾ ವಿನಯದಿಂದ “ ನಮಸ್ಕಾರ ಶನಿದೇವ, ತಾವು ಈಕಡೆಗೆ ಯಾರನ್ನು ಹುಡುಕಿಕೊಂಡು ಹೊರಟಿದ್ದೀರಿ?” ಎಂದು ಕೇಳಿದ.
ಶನಿದೇವನು “ಏನಿಲ್ಲ ಗಣಪತಿ, ನಾನು ನಿನ್ನನ್ನೇ ನೋಡಬೇಕೆಂದು ಬಂದೆ” ಎಂದ. “ಹೆದರಬೇಡ, ನಾನು ನಿನಗೇನೂ ಕೇಡು ಮಾಡುವುದಿಲ್ಲ. ಒಮ್ಮೆ ನಿನ್ನನ್ನು ಮುದ್ದುಮಾಡಬೇಕೆಂಬ ಆಸೆ ಬಂತು. ಅದಕ್ಕೆ ಒಂದೇ ಒಂದು ಸಾರಿ ನಿನ್ನನ್ನು ಮುಟ್ಟುತ್ತೇನಷ್ಟೇ” ಎಂದು ಮುಂದುವರಿದ.
“ಬೇಡಪ್ಪಾ ಬೇಡ, ನಾನು ತಮಗೇನೂ ಅಪಚಾರವಾಗಲೀ, ಅವಮಾನವಾಗಲೀ ಮಾಡಿಲ್ಲ. ಹಾಗಿದ್ದರೂ ಏಕೆ ನನ್ನನ್ನು..”
“ ಹೆದರಿಕೊಳ್ಳಬೇಡ ಗಣಪತಿ. ನಿನ್ನನ್ನು ಒಮ್ಮೆ ಮುದ್ದಿಸಿ ಹೊರಟುಹೋಗುತ್ತೇನೆ” ಎಂದ.
“ಬೇಡಪ್ಪಾ ಮುದ್ದೂ ಬೇಡ, ಗುದ್ದೂ ಬೇಡ. ತಾವು ಒಮ್ಮೆ ದೃಷ್ಟಿ ಬೀರಿದರೆ ಸಾಕು, ಏಳು ವರ್ಷಗಳ ವರೆಗೆ ಕಾಟ ತಪ್ಪದು” ಎಂದು ಹೇಳಿ ವೇಗವಾಗಿ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ.
ಶನಿದೇವನು ಬೆಂಬತ್ತಿ ಹೋಗುತ್ತಾ “ ನಿಲ್ಲು ನಿಲ್ಲು” ಅವನನ್ನು ಹಿಡಿಯಲು ಪ್ರಯತ್ನಿಸಿದ.
ಗಣಪತಿ ಮುಂದೆ, ಶನಿದೇವ ಹಿಂದೆ ಹೀಗೆ ಬಹಳ ದೂರದವರೆಗೆ ಓಡಿದರು. ಗಣಪತಿಗೆ ಓಡಿ ಓಡಿ ಆಯಾಸವಾಗತೊಡಗಿತು. ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಅಲ್ಲೊಂದು ಹಸು ಹುಲ್ಲು ಮೇಯುತ್ತಾ ಇತ್ತು. ಗಣಪತಿಯು ತಕ್ಷಣ ಹುಲ್ಲಿನ ರೂಪ ಧರಿಸಿದ. ಅಲ್ಲಿದ್ದ ಹಸು ಆ ಹುಲ್ಲನ್ನು ತಿಂದು ಬಿಟ್ಟಿತು. ಇದನ್ನು ನೋಡಿದ ಶನಿದೇವನು ಏನು ಮಾಡಬೇಕೆಂದು ತೋಚದೆ ನಿಂತುಬಿಟ್ಟ. ಹಸುವು ಹುಲ್ಲನ್ನು ತಿಂದು ಜೀರ್ಣಿಸಿಕೊಂಡು ಸಗಣಿ ಹಾಕಿತು. ಸಗಣಿಯನ್ನು ಮುಟ್ಟದೆ ಅಸಹ್ಯಪಟ್ಟು ಶನಿದೇವ “ಛೀ..ಛೀ.. ಬೇಡಪ್ಪಾ ಸಗಣಿ ಸಹವಾಸ” ಎಂದುಕೊಂಡು ಅಲ್ಲಿಂದ ಹಿಂದಿರುಗಿ ಹೋಗಿಬಿಟ್ಟ.
ಅದೇ ಕಾರಣದಿಂದ ಈಗಲೂ ಶುಭಕಾರ್ಯ ಮಾಡುವ ಮೊದಲು ಗಣಪತಿಯನ್ನು ಪಿಳ್ಳಾರಿಯ ರೂಪದಲ್ಲಿ ಪೂಜಿಸುವುದು ವಾಡಿಕೆಯಾಗಿದೆ. ಸಗಣಿಯನ್ನು ಸಣ್ಣ ಮುದ್ದೆ ಮಾಡಿ ಅದರ ತಲೆಯಮೇಲೆ ಕೆಲವು ಗರಿಕೆಯ (ಹುಲ್ಲಿನ) ದಂಟುಗಳನ್ನು ಸಿಕ್ಕಿಸಿ ‘ಪಿಳ್ಳಾರಿ’ ಎಂದು ಕರೆಯುತ್ತಾರೆ. ಹಾಗೆ ಗಣಪತಿಯನ್ನು ಪೂಜಿಸಿದರೆ ಶನಿದೇವನ ಪ್ರಭಾವವಿರುವುದಿಲ್ಲ. ಅವನು ಯಾವುದೇ ಕಂಟಕವನ್ನು ತಂದೊಡ್ಡುವುದಿಲ್ಲ ಎಂಬುದೊಂದು ನಂಬಿಕೆ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ ಹೇಮಾ
Nice story
ಧನ್ಯವಾದಗಳು ಗಾಯತ್ರಿ ಮೇಡಂ
ಪಿಳ್ಳಾರಿ ಎಂಭ ಹೆಸರಿನಿಂದ ಸಗಣಿಯಿಂದ ಮಾಡಿ ಗರಿಕೆ ಸಿಕ್ಕಿಸಿದ ಗಣಪನನ್ನು ಪೂಜಿಸುವುದು ಗೊತ್ತಿತ್ತು, ಕಾರಣ ತಿಳಿದುದು ಹೆಚ್ಚು ಅರ್ಥವತ್ತಾಗಿ ಪಿಳ್ಳಾರಿಯನ್ನು ಪೂಜಿಸಲು ಅನುವು ಮಾಡಿಕೊಟ್ಟಿತು. ಅಭಿನಂದನೆಗಳು.
ಧನ್ಯವಾದಗಳು ಪದ್ಮಾ ಮೇಡಂ
Nice
ಧನ್ಯವಾದಗಳು ನಯನಮೇಡಂ
ವಾಹ್… ಪಿಳ್ಳಾರಿ ರೂಪದಲ್ಲಿ ಗಣಪತಿಯನ್ನು ಪೂಜಿಸುವ ಸಂಗತಿ ನನಗೆ ಹೊಸತು! ಚಂದದ ಕಥೆ ಕೇಳಿ ಖುಷಿಯಾಯ್ತು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ