ಕಾದಂಬರಿ : ತಾಯಿ – ಪುಟ 2
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)
ಮಗಳು ಹೋದ ಮೇಲೆ ಮೂರ್ತಿಗಳು ಕುಗ್ಗಿ ಹೋಗಿದ್ದರು. ಒಂದು ವರ್ಷದ ನಂತರ ಕ್ರಮೇಣ ಖಿನ್ನತೆಗೆ ಜಾರಿದ್ದರು. ಮೈಸೂರಿಗೆ ತೆರಳಲು ನಿರಾಕರಿಸಿದ್ದರು. ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಸ್ನೇಹಿತರು ಬಂದರೂ ಮಾತನಾಡುತ್ತಿರಲಿಲ್ಲ. ಮಗಳ ಕೊರಗಿನಲ್ಲೇ ಅವರು ಕಣ್ಮುಚ್ಚಿದ್ದರು.
ರಾಹುಲ್-ಮೈತ್ರಿ ಧಾವಿಸಿದ್ದರು. ನಂಜನಗೂಡಿನಲ್ಲೇ ಕರ್ಮಗಳು ನಡೆದಿದ್ದವು. ವೈಕುಂಠ ಸಮಾರಾಧನೆ ಮುಗಿದ ನಂತರ ಮೈತ್ರಿ ಹೊರಟು ಹೋಗಿದ್ದಳು. ರಾಹುಲ್ ಮಾತ್ರ ಉಳಿದಿದ್ದ.
“ಮೈತ್ರಿ ಯಾಕಪ್ಪ ಹೊರಟುಹೋದಳು?”
“ಅವಳಿಗೆ ರಜ ಇಲ್ಲ. ನಾನು ಕಾಲೇಜ್ನಲ್ಲಿರುವುದರಿಂದ ರಜ ಸಿಕ್ಕಿತು. ಇಲ್ಲಿ ಸ್ವಲ್ಪ ಕೆಲಸಗಳಿವೆ……..”
ಏನು ಕೆಲಸಾಪ್ಪ?”
“ಇಲ್ಲಿ ನೀನು ಒಬ್ಬಳೇ ಹೇಗಿರ್ತೀಯ? ಮೈಸೂರಿಗೆ ಬಂದು ಬಿಡು.”
“ನಾನು ಎಲ್ಲಿಗೂ ಬರಲ್ಲ. ಇಲ್ಲೇ ಇರ್ತೀನಿ. ತೀರಾ ಕೈಲಾಗದಿದ್ದಾಗ ನೋಡೋಣ.”
ರಾಹುಲ್ ಒತ್ತಾಯ ಮಾಡಿರಲಿಲ್ಲ. ರಾಜಲಕ್ಷ್ಮಿ ನೆಮ್ಮದಿಯಿಂದ ಉಸಿರಾಡಿದ್ದರು. ಒಂದು ವಾರದ ನಂತರ ಲಾಯರ್ ಮೋಹನ್ ಅವರ ಮನೆಗೆ ಬಂದಿದ್ದರು. ಮೋಹನ್ ತಂದೆ ರಾಜೇಶ್ವರ ಶಾಸ್ತ್ರಿಗಳು ಮೂರ್ತಿಗಳ ಸ್ನೇಹಿತರು. ಮೋಹನ ರಾಜಲಕ್ಷ್ಮಿಯ ಪರಿಚಯದ ಹುಡುಗ. ಹೀಗಾಗಿ ಅವನು ಮುಕ್ತವಾಗಿ ಮಾತನಾಡಿದ್ದ.
“ಅಮ್ಮ ರಾಹುಲ್ ಮೇಷ್ಟ್ರು ಮಾಡಿರುವ ಆಸ್ತಿ ಬಗ್ಗೆ, ಅವರ ಹೆಸರಿನಲ್ಲಿರುವ ಫಿಕ್ಸೆಡ್ ಡಿಪಾಸಿಟ್ಗಳ ಬಗ್ಗೆ ಕೇಳಿದ. ರಜನಿ ಅಮ್ಮ-ಅಪ್ಪನಿಗೆ ಹಣದ ಸಹಾಯ ಮಾಡ್ತಿದ್ದಾಳಾಂತನೂ ಕೇಳಿದ….”
“ಹೌದಾ?”
“ಅಮ್ಮ…. ನೀವು ಹೈಸ್ಕೂಲು ಓದಿದ್ದೀರಾ. ಓದು ಬರಹ ಗೊತ್ತಿದೆ. ನೀವು ನಾನು ಹೇಳುವ ಮಾತುಗಳನ್ನು ಗಮನವಿಟ್ಟು ಕೇಳಿ.
“ಹೇಳಪ್ಪ…”
“ಈ ಮನೆ ಮೇಷ್ಟ್ರು ಸ್ವಯಾರ್ಜಿತ ಆಸ್ತಿ. ಇದು ನಿಮ್ಮ ಹೆಸರಿಗೆ ಮಾಡಿದ್ದಾರೆ. ನಿಮ್ಮ ಅನುಮತಿಯಿಲ್ಲದೆ ನಿಮ್ಮ ಮಗ ಅದನ್ನು ಮಾರುವಂತಿಲ್ಲ.”
“ಸರಿಯಪ್ಪ.”
“ನಿಮ್ಮ ಹೆಸರಲ್ಲಿ 10 ಲಕ್ಷ ಫಿಕ್ಸೆಡ್ ಡಿಪಾಸಿಟ್ ಇದೆ. ಮೇಷ್ಟ್ರು ಜಾಯಿಂಟ್ ಅಕೌಂಟ್ನಲ್ಲಿ ಇಟ್ಟಿರುವುದರಿಂದ ಆ ಡಿಫಾಸಿಟ್ ನಿಮಗೆ ಬರುತ್ತದೆ.”
“ನಂಗೆ ಈ ವಿಚಾರ ಗೊತ್ತಿರಲಿಲ್ಲ.”
“ಮೈಸೂರಿನಲ್ಲಿರುವ ಮನೆ ಪಿತ್ರಾರ್ಜಿತ ಆಸ್ತಿ. ಈಗ ರಜನಿ ಇಲ್ಲದಿರುವುದರಿಂದ ಆ ಮನೆ ರಾಹುಲ್ಗೆ ಹೋಗುತ್ತದೆ. ಅವನು ಅದನ್ನು ಮಾರಬಹುದು……..”
“ಅವನನ್ನು ತಡೆಯುವ ಶಕ್ತಿ ನನಗಿಲ್ಲ. ಮದುವೆಯಾದ ಮೇಲೆ ಅವನು ತುಂಬಾ ಬದಲಾಗಿಬಿಟ್ಟ.”
“ನನಗೆ ಆ ವಿಚಾರ ಗೊತ್ತಮ್ಮ. ನೀವು ಮೈಸೂರಿಗೆ ಹೋಗ್ತೀರೋ, ಇಲ್ಲೇ ಇರ್ತೀರೋ?”
“ಇಲ್ಲೇ ಇರ್ತೀನಪ್ಪ..”
“ನನಗೆ ಪರಿಚಯದ ಒಬ್ಬ ಅನಾಥ ಹುಡುಗ ಇದ್ದಾನೆ. ಭಾಸ್ಕರ್ ಅಂತ ಅವನ ಹೆಸರು. ಬಿ.ಎ. ಓದ್ತಿದ್ದಾನೆ. ನೀವು ಅವನಿಗೆ ಆಶ್ರಯ ಕೊಡಿ. ಅವನು ನಿಮ್ಮ ಎಲ್ಲಾ ಕೆಲಸಗಳನ್ನೂ ಮಾಡಿಕೊಡ್ತಾನೆ….”
“ಅವನಿಗೆ ತಂದೆ-ತಾಯಿ ಇಲ್ವಾ?”
“ಇಲ್ಲಮ್ಮ ಅವನು ಚಿಕ್ಕವನಿರುವಾಗಲೇ ತಂದೆ ಹೋಗಿಬಿಟ್ಟಿದ್ದರು. ತಾಯಿ ಅವರಿವರ ಮನೆಯಲ್ಲಿ ಅಡಿಗೆ ಮಾಡಿಕೊಂಡು ಮಗನನ್ನು ಸಾಕುತ್ತಿದ್ದರು. ಒಂದು ತಿಂಗಳ ಹಿಂದೆ ಅವನ ತಾಯಿ ಕಪಿಲಾನದಿಯಲ್ಲಿ ಮುಳುಗಿಬಿಟ್ರು. ಬೇಕೂಂತ ಮುಳುಗಿದರೋ, ಆಕಸ್ಮಿಕ ಸಾವೋ ಗೊತ್ತಾಗ್ತಿಲ್ಲ. ಹುಡುಗ ತುಂಬಾ ಕಷ್ಟದಲ್ಲಿದ್ದಾನೆ.”
“ಅವನನ್ನು ಕಳಿಸಪ್ಪ. ನೀನು ಹೇಳಿದ ನಂತರ ಅವನು ಒಳ್ಳೆಯವನೇ ಆಗಿರುತ್ತಾನೆ.”
ಆ ದಿನವೇ ಭಾಸ್ಕರ ಅವರ ಮನೆಗೆ ಬಂದಿದ್ದ. ರಾಜಲಕ್ಷ್ಮಿಗೆ ಅವನು ಇಷ್ಟವಾಗಿದ್ದ. ಅವನನ್ನು ಮನೆಮಗನಂತೆ ನೋಡಿಕೊಂಡಿದ್ದರು. ಅವನು ಅವರಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದ.
ಎರಡು ವರ್ಷಗಳು ಉರುಳಿದ್ದವು. ಭಾಸ್ಕರ ಬಿ.ಎ. ಮುಗಿಸಿ ಮೈಸೂರಿನಲ್ಲಿ ಒಬ್ಬ ಲಾಯರ್ ಆಫೀಸ್ನಲ್ಲಿ ಕೆಲಸದಲ್ಲಿದ್ದ. ಅವನಿಗೆ ಓಡಾಟ ಕಷ್ಟವಾಗಿತ್ತು. ಲಾಯರ್ ಆಫೀಸ್ನಿಂದ ರಾತ್ರಿ ಅವನು ಎಂಟುಗಂಟೆಗೆ ಹೊರಡುತ್ತಿದ್ದ. ನಂಜನಗೂಡಿಗೆ ಬರುವುದು ತಡವಾಗುತ್ತಿತ್ತು.
ಇದೇ ಸಂದರ್ಭದಲ್ಲಿ ರಾಹುಲ್ ಬಂದು ತಾಯಿಗೆ ಹೇಳಿದ್ದ. “ನೀನು ಮೈಸೂರಿಗೇ ಬಂದು ಬಿಡಮ್ಮ. ಎಷ್ಟು ದಿನ ಒಂಟಿಯಾಗಿರುತ್ತೀಯ? ಅಕ್ಕ ಇದ್ದಿದ್ದರೆ ನೀನು ಒಬ್ಬಳೇ ಇರಲು ಬಿಡುತ್ತಿದ್ದಳಾ?”
“ನಾನು ಯೋಚಿಸಿ ಹೇಳ್ತೀನಪ್ಪ.”
“ಇದರಲ್ಲಿ ಯೋಚಿಸುವುದೇನಿದೆ? ಈಗಾಗಲೇ ನೀನು ಸೊರಗಿದ್ದೀಯ. ಮೊದಲಿನ ಹಾಗೆ ಕೆಲಸ ಮಾಡಲು ಆಗ್ತಿಲ್ಲ. ನಮ್ಮನೆಗೆ ಬಂದು ರಾಣಿಯಂತಿರು.”
ಮೈಸೂರಿನ ತಮ್ಮ ಮನೆ ನೆನಪಾಗಿ ಅವರಿಗೆ ಖುಷಿಯಾಗಿತ್ತು. ಗಂಡ, ಮಕ್ಕಳ ಜೊತೆ ಅವರು ಕಳೆದಿದ್ದ ದಿನಗಳು ನೆನಪಾಗಿದ್ದವು. ಎಂತಹ ಸುಂದರ ದಿನಗಳವು !
ರಾಜಲಕ್ಷ್ಮಿ ಖುಷಿಯಿಂದ ಮಗನ ಜೊತೆ ಮೈಸೂರಿಗೆ ಬರಲು ಒಪ್ಪಿದ್ದರು.
“ಅಮ್ಮಾ, ನಿನ್ನ ಬಟ್ಟೆ ಬರೆ, ಒಡವೆಗಳನ್ನು ಬಿಟ್ಟು ಬೇರೇನೂ ತರಬೇಡ. ನಮ್ಮನೆಯಲ್ಲಿ ಅವುಗಳನ್ನು ಇಡಲು ಜಾಗವಿಲ್ಲ. ತಪ್ಪು ತಿಳಿಯಬೇಡ. ಮುಂದಿನ ಭಾನುವಾರ ನಾನು ಬಂದು ನಿನ್ನನ್ನು ಕರೆದುಕೊಂಡು ಹೋಗ್ತೀನಿ.”
“ಆಗಲಪ್ಪ” ಎಂದಿದ್ದರು ರಾಜಲಕ್ಷ್ಮಿ.
ತಮಗೆ ಅಗತ್ಯವೆನ್ನಿಸಿದ್ದ ಸಾಮಾನುಗಳನ್ನು ಸೂಟ್ಕೇಸ್ಗೆ ಹಾಕಿದ್ದರು. ಬೆಳ್ಳಿ ಪಾತ್ರೆಗಳನ್ನು, ಕೆಲವು ಒಡವೆಗಳನ್ನು ಬ್ಯಾಂಕ್ನಲ್ಲಿ ಲಾಕರ್ನಲ್ಲಿ ಇಟ್ಟಿದ್ದರು. ಕೆಲವು ಬಟ್ಟೆಬರೆಗಳನ್ನು ದಾನಮಾಡಿದ್ದರು. ತಮ್ಮ ಮನೆಗೆ ಆಪ್ತರಾಗಿದ್ದ ರಾಮಾವಧಾನಿ ದಂಪತಿಗಳಿಗೆ ತಮ್ಮ ಮನೆ ಬಾಡಿಗೆಗೆ ಕೊಟ್ಟಿದ್ದರು.
“ನಿಮ್ಮ ಮಗ-ಸೊಸೆ ಚೆನ್ನಾಗಿ ನೋಡಿಕೊಳ್ತಿಲ್ಲ ಎನ್ನುವುದು ನನಗೆ ಗೊತ್ತು ಎಂದರು. ಆಗ ರಾಜಲಕ್ಷ್ಮಿ, ನೀವು ಆರಾಮವಾಗಿ ಈ ಮನೆಯಲ್ಲಿರಿ. ಮನೆ ಬಾಡಿಗೆ 500 ರೂ. ಮಾತ್ರ. ಪ್ರತಿದಿನ ನಮ್ಮನೆ ದೇವರಿಗೆ ದೀಪ ಹಚ್ಚಿ. ಒಳ್ಳೆಯದಾಗಲೀಂತ ಪ್ರಾರ್ಥಿಸಿ. ನನಗಷ್ಟು ಸಾಕು” ಎಂದರು.
ರಾಮಾವಧಾನಿ ದಂಪತಿಗಳಿಗೆ ತುಂಬಾ ಖುಷಿಯಾಗಿತ್ತು.
ರಾಹುಲ್ ತಾಯಿಯನ್ನು ಕರೆದೊಯ್ಯಲು ತನ್ನ ಕಾರ್ ತಂದಿದ್ದ. ಮೈಸೂರು ತಲುಪಿದೊಡನೆ ಕಾರು ಒಂಟಿಕೊಪ್ಪಲ್ ಕಡೆ ಹೋಗದಿದ್ದಾಗ ರಾಜಲಕ್ಷ್ಮಿ ಕೇಳಿದ್ದರು. “ರಾಹುಲ್ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದೀಯಾ?”
“ನಾವು ವಿಜಯನಗರದಲ್ಲಿದ್ದೇವಮ್ಮ. ಮಕ್ಕಳಿಗೆ ಸ್ಕೂಲು ಹತ್ತಿರವಿದೆ. ಮೈತ್ರಿಗೂ ಇನ್ಫೋಸಿಸ್ ಹತ್ತಿರವಾಗತ್ತೆ. ನಮ್ಮ ಕಾಲೇಜ್ಗೂ ಹತ್ತಿರಾಂತ ಅಲ್ಲಿ ಮನೆ ಮಾಡಿದ್ದೇನೆ.”
ರಾಜಲಕ್ಷ್ಮಿಗೆ ತುಂಬಾ ಬೇಜಾರಾಗಿತ್ತು. ಅವನ ಕಾರು ಒಂದು ದೊಡ್ಡ ಕಾಂಪೌಂಡ್ ಪ್ರವೇಶಿಸಿತ್ತು. ಅಲ್ಲಿ ೫-೬ ಗಗನಚುಂಬಿ ಕಟ್ಟಡಗಳಿದ್ದವು. ರಾಜಲಕ್ಷ್ಮಿ ಆಶ್ಚರ್ಯದಿಂದ ಅದರತ್ತ ನೋಡಿದ್ದರು.
“ಅಮ್ಮಾ ನಾವೀಗ ಅಪಾರ್ಟ್ಮೆಂಟ್ನಲ್ಲಿದ್ದೇವೆ ಬಾ” ಎನ್ನುತ್ತಾ ರಾಹುಲ್ ಕರೆದೊಯ್ದಿದ್ದ. ಲಿಫ್ಟ್ ಮೂಲಕ ೭ನೇ ಮಹಡಿ ತಲುಪಿ ಮನೆ ತಲುಪಿದ್ದರು. ರಾಹುಲ್ ಬೆಲ್ ಮಾಡಿದಾಗ ನಗುಮುಖದ ೪೦-೪೨ರ ಅಂಚಿನಲ್ಲಿದ್ದ ಹೆಂಗಸೊಬ್ಬರು ಬಾಗಿಲು ತೆಗೆದಿದ್ದರು.
“ಸುನಂದಮ್ಮ ಇವರು ನಮ್ಮ ತಾಯಿ.”
“ಬನ್ನಿಮ್ಮ” ಎಂದು ಸ್ವಾಗತಿಸಿದ್ದರು. ಅವರು ನಿಂಬೆಹಣ್ಣಿನ ಪಾನಕ ತಂದು ತಾಯಿ, ಮಗನಿಗೆ ಕೊಟ್ಟಿದ್ದರು.”
“ಮೈತ್ರಿ, ಹುಡುಗರು ಎಲ್ಲಿ ರಾಹುಲ್?”
“ಅವರು ಶಾಪಿಂಗ್ ಮಾಡಲು ಹೋಗಿದ್ದಾರೆ. ಸಾಯಂಕಾಲಾನೇ ಅವರು ಬರುವುದು.”
ನಂತರ ಅವರಿಗೆ ಸುನಂದ ಮನೆ ತೋರಿಸಿದ್ದರು. ೩ ಬೆಡ್ರೂಮ್ ಮನೆಯದು. ದೊಡ್ಡಹಾಲ್. ಆಮೇಲೊಂದು ಚಿಕ್ಕ ಪ್ಯಾಸೇಜ್. ಹಾಲ್ಗೆ ಸೇರಿದಂತೆ ಎರಡು ಕೋಣೆಗಳಿದ್ದವು. ಡೈನಿಂಗ್ ಹಾಲ್ ಪಕ್ಕ ಒಂದು ಕೋಣೆಯಿತ್ತು. ಅಡಿಗೆ ಮನೆ, ಸ್ಟೋರ್ರೂಂ ಒಟ್ಟಿಗೆ ಸೇರಿದಂತಿತ್ತು. ಅಡಿಗೆ ಮನೆಯಲ್ಲೇ ದೇವರನ್ನು ಇಡಲು ಜಾಗಮಾಡಿದ್ದರು. ದೇವರ ಗೂಡಿನಲ್ಲಿ ಗಣಪತಿ, ಸಾಯಿಬಾಬಾನ ವಿಗ್ರಹಗಳಿದ್ದವು. ಲಕ್ಷಿö್ಮÃ ನರಸಿಂಹನ ಫೋಟೋ ಇತ್ತು. ಒಂದು ಜೊತೆ ನೀಲಾಂಜನವಿತ್ತು. ಅರಿಶಿಣ, ಕುಂಕುಮ, ಮಂತ್ರಾಕ್ಷತೆ ಬಟ್ಟಲುಗಳಿದ್ದವು.
ತಮ್ಮ ಸೂಟ್ಕೇಸ್ ಹಿಡಿದು ರಾಜಲಕ್ಷ್ಮಿ ರೂಮು ಪ್ರವೇಶಿಸಿದ್ದರು. ದೊಡ್ಡ ಕಿಟಕಿಯಿಂದ ಕೆಳಗಡೆ ನೋಡಬಹುದಿತ್ತು. ಗೇಟ್ ಕಾಣುತ್ತಿತ್ತು.
ಮಧ್ಯಾಹ್ನ ತಾಯಿ-ಮಗ ಒಟ್ಟಿಗೆ ಊಟ ಮಾಡಿದರು. ಸುಮಾರು ಏಳುಗಂಟೆಯ ಹೊತ್ತಿಗೆ ಮೈತ್ರಿ, ಮಕ್ಕಳು ಬಂದಿದ್ದರು.
“ಚೆನ್ನಾಗಿದ್ದೀರಾ ಅತ್ತೆ?” ಮೈತ್ರಿ ಕೇಳಿದ್ದಳು.
“ಹುಂ. ಹೀಗಿದ್ದೀನಿ ನೋಡು.”
ಮಕ್ಕಳು “ಹಾಯ್ ಅಜ್ಜಿ” ಎಂದರು. ಆದರೆ ಹತ್ತಿರ ಬಂದಿರಲಿಲ್ಲ.
ಒಂದು ವಾರ ಕಳೆಯುವುದರಲ್ಲಿ ಅವರಿಗೆ ಸಾಕಾಗಿತ್ತು. ಕೆಲಸದ ದೇವಿ ಆರುಗಂಟೆಗೆ ಬರುತ್ತಿದ್ದಳು. ಅವಳೇ ಬೀಗ ತೆಗೆದುಕೊಂಡು ಒಳಗೆ ಬಂದು, ಪಾತ್ರೆ ತೊಳೆದು, ಕಸಗುಡಿಸಿ, ಒರೆಸಿ, ವಾಷಿಂಗ್ಮಿಷಿನ್ನಲ್ಲಿದ್ದ ಬಟ್ಟೆ ಒಣಗಲು ಹಾಕುತ್ತಿದ್ದಳು. ಸುನಂದಾ 7ಗಂಟೆಗೆ ಬಂದು ಕೈಕಾಲು ತೊಳೆದು ದೇವರ ದೀಪ ಹಚ್ಚಿ ಕಾಫಿ ಮಾಡುತ್ತಿದ್ದರು. ನಂತರ ತಿಂಡಿ ಮಾಡಿ ಗಂಡ-ಹೆಂಡತಿ, ಮಕ್ಕಳು-ನಾಲ್ವರ ಡಬ್ಬಿಗಳಿಗೆ ಪುಳಿಯೋಗರೆ, ವಾಂಗಿಭಾತ್, ಪಲಾವ್-ಇತ್ಯಾದಿ ಮಾಡಿ ಹಾಕುತ್ತಿದ್ದರು. ಮೈತ್ರಿ ಏಳು ಗಂಟೆಗೆ ಎದ್ದು ಕಾಫಿಕುಡಿದು ಸ್ನಾನ ಮಾಡಿ ತಯಾರಾಗುತ್ತಿದ್ದಳು. ರಾಹುಲ್ ರೆಡಿಯಾಗಿ ಮಕ್ಕಳ ಜೊತೆ ತಿಂಡಿ ತಿಂದು ಮಕ್ಕಳನ್ನು ಕರೆದುಕೊಂಡು ಹೊರಡುತ್ತಿದ್ದ. ಮೈತ್ರಿ ೯ ಗಂಟೆಗೆ ಮನೆ ಬಿಡುತ್ತಿದ್ದಳು. ನಂತರ ಸುನಂದಮ್ಮ ರಾಜಲಕ್ಷ್ಮಿಗೆ ತಿಂಡಿ ಕೊಟ್ಟು, ತಾವೂ ತಿಂಡಿ ತಿಂದು ಹಾಲ್ನಲ್ಲಿ ಚಾಪೆಹಾಸಿಕೊಂಡು ಅರ್ಧ ಗಂಟೆ ಮಲಗುತ್ತಿದ್ದರು. ರಾಜಲಕ್ಷ್ಮಿ ಬಂದ ಮೇಲೆ ಅವರೇ ದೇವರ ದೀಪ ಹಚ್ಚುತ್ತಿದ್ದರು. ಹತ್ತೂವರೆಗೆ ಕೆಲಸದ ದೇವಿ ಬಂದು ಬಟ್ಟೆಗಳನ್ನು ವಾಷಿಂಗ್ ಮೆಷಿನ್ಗೆ ಹಾಕಿ ಸುನಂದಮ್ಮ ಕೊಡುವ ತಿಂಡಿ ತೆಗೆದುಕೊಂಡು ಹೊರಡುತ್ತಿದ್ದಳು.
ಸುನಂದ, ದೇವಿ ಬಂದಾಗ ಟೀ ಮಾಡುತ್ತಿದ್ದರು. ಒಮ್ಮೊಮ್ಮೆ ರಾಜಲಕ್ಷ್ಮಿಯೂ ಕುಡಿಯುತ್ತಿದ್ದರು.
12-30 ಹೊತ್ತಿಗೆ ಅಡಿಗೆ ಮಾಡಿಟ್ಟು ಸುನಂದ ಹೊರಡುತ್ತಿದ್ದರು.
ಮೈತ್ರಿ, ಮಕ್ಕಳು ಯಾರೂ ಅವರನ್ನು ಸರಿಯಾಗಿ ಮಾತಾಡಿಸುತ್ತಿರಲಿಲ್ಲ. ಸಾಯಂಕಾಲ ಸ್ಕೂಲಿನಿಂದ ಬಂದ ಮಕ್ಕಳು ತಂದೆ ಕೊಡುವ ತಿಂಡಿ ತಿಂದು, ಹಾರ್ಲಿಕ್ಸ್ ಕುಡಿದು ಆಟಕ್ಕೆ ಹೋಗುತ್ತಿದ್ದರು. ಮೈತ್ರಿ ಬಂದು ಅವರಿಗೆ ಹೋಂವರ್ಕ್ ಮಾಡಿಸುತ್ತಿದ್ದಳು. ೮ ಗಂಟೆಗೆ ಸುನಂದಮ್ಮ ಚಪಾತಿ, ಪಲ್ಯ ಕಳಿಸುತ್ತಿದ್ದರು.
ರಾಹುಲ್ ತಾಯಿ ಜೊತೆ ಒಂದೆರಡು ಮಾತಾಡಿದರೆ ಹೆಚ್ಚು. ರಾಜಲಕ್ಷ್ಮಿ ರಾತ್ರಿ ಹೊತ್ತು ಹಾಲು, ಹಣ್ಣು ತೆಗೆದುಕೊಳ್ಳುತ್ತಿದ್ದರು. ಅವರೇ ಬಾಳೆಹಣ್ಣು, ಕಿತ್ತಲೆ, ಸೇಬು ಇತ್ಯಾದಿ ಸುನಂದಮ್ಮನ ಕೈಲಿ ತರಿಸುತ್ತಿದ್ದರು.
ರಾಜಲಕ್ಷ್ಮಿಗೆ ಬೇಸರದಿಂದ ತಲೆಚಿಟ್ಟು ಹಿಡಿದಂತಾಗಿತ್ತು. ದೇವಿ, ಸುನಂದಮ್ಮ ಬಿಟ್ಟರೆ ಬೇರೆ ಯಾರ ಪರಿಚಯವೂ ಅವರಿಗಿರಲಿಲ್ಲ. ಮನೆಯಲ್ಲಿದ್ದ ಜನರು ಮಾತು ಮರೆತವರಂತೆ ಇದ್ದರು.
ಒಂದು ಸಾಯಂಕಾಲ ರಾಹುಲ್ ಕಾಲೇಜ್ನಿಂದ ಬಂದು ಕಾಫಿ ಕುಡಿಯುತ್ತಿದ್ದಾಗ ರಾಜಲಕ್ಷ್ಮಿ ಬಂದು ಅವನ ಎದುರಿಗೆ ಕುಳಿತರು.
“ಏನಮ್ಮಾ ಹೇಗಿದ್ದೀಯ?”
“ನನಗೆ ಹೊತ್ತೇ ಹೋಗ್ತಿಲ್ಲ. ಕೆಲಸಾನೂ ಇಲ್ಲ. ನಮ್ಮೂರಲ್ಲಿ ವಾರಕ್ಕೆ ಮೂರು ದಿನಗಳಾದರೂ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಇಲ್ಲಿಗೆ ಬಂದ ಮೇಲೆ ಕಾಲು ಕಟ್ಟಿ ಹಾಕಿದಂತಾಗಿದೆ.”
“ಸುನಂದಮ್ಮನ ಜೊತೆ ಹೋಗಿ ಬಾಮ್ಮ.”
“ಅವರಿಗೆ ಬಿಡುವೇ ಇಲ್ಲವಲ್ಲ. ನಾನು ನಂಜನಗೂಡಿಗೆ ವಾಪಸ್ಸು ಹೋಗ್ತೀನಿ.”
“ಅಲ್ಲಿ ಒಬ್ಬಳೇ ಏನ್ಮಾಡ್ತೀಯಮ್ಮಾ?”
“ಇಲ್ಲಿಯೂ ಕೂಡ ನಾನು ಒಬ್ಬಳೇ ತಾನೆ? ನೀವು ಯಾರೂ ಮಾತಾಡೋದೇ ಇಲ್ಲ. ಕೆಲಸದ ದೇವಿ, ಅಡಿಗೆ ಸುನಂದಾ ಹೊರಟು ಹೋದಮೇಲೆ ನನಗೆ ಹುಚ್ಚು ಹಿಡಿದಂತಾಗತ್ತೆ” ರಾಜಲಕ್ಷ್ಮಿ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಹೇಳಿದಾಗ, ರಾಹುಲ್ ಕಸಿವಿಸಿಯಾಯಿತು.
“ಅಮ್ಮ, ಮೈತ್ರಿ ಹೊರಗೆ ಹೋಗಿ ದುಡಿದು ಬರ್ತಾಳೆ. ಅವಳು ಬಂದ ತಕ್ಷಣ ಹೋಂವರ್ಕ್ ಮಾಡಿಸಬೇಕು. ಅವಳಿಗೆ ಮಾತಾಡಕ್ಕೆ ಟೈಂ ಇರಲ್ಲ. ಮಕ್ಕಳಿಗೆ ನಿನ್ನ ಅಭ್ಯಾಸವಾಗಿಲ್ಲ….”
“ರಾಹುಲ್ ಮನೆಯಲ್ಲಿ ಅಡಿಗೆ-ತಿಂಡಿ ಮಾಡಿಕೊಂಡು ಹೊರಗೆ ದುಡಿದು ಬರುವ ಹೆಂಗಸರಿಲ್ವಾ? ನನಗೆ ಇಲ್ಲಿರಕ್ಕೆ ಆಗ್ತಿಲ್ಲ ಅರ್ಥ ಮಾಡಿಕೋ….”
“ಅಮ್ಮ ಬೇಜಾರು ಮಾಡಿಕೊಳ್ಳಬೇಡ. ಈ ಭಾನುವಾರ ನಾನೇ ನಿನ್ನನ್ನು ದೇವಸ್ಥಾನಗಳಿಗೆ ಕರ್ಕೊಂಡು ಹೋಗ್ತೀನಿ” ಎಂದಿದ್ದ ರಾಹುಲ್.
“ಅಮ್ಮಾ ಊಟಕ್ಕೆ ರ್ತೀರಾ?” ಸುನಂದಮ್ಮನ ಮಾತು ಕೇಳಿ ರಾಜಲಕ್ಷ್ಮಿ ಇಹಲೋಕಕ್ಕೆ ಬಂದರು.
“ಏನೋ ಯೋಚಿಸ್ತಾ ಕುಳಿತಿದ್ದೀರಿ?”
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=41366
-ಸಿ.ಎನ್. ಮುಕ್ತಾ
ಕಾದಂಬರಿಓದಿಸಿಕೊಂಡುಹೋಗುತ್ತಿದೆ ವಾಸ್ತವಿಕ ಬದುಕಿನ ಅನಾವರಣ ವಾಗುತ್ತಾ ಸಾಗುತ್ತಾ..ಕುತೂಹಲ ಮೂಡಿಸಿಕೊಂಡು ಹೋಗುತ್ತಿದೆ..ಮೇಡಂ
ಇಂದಿನ ದಿನಗಳ ಮನೆಮನೆಯ ಕಥೆ ಇದೇ ಆಗಿ ಹೋಗಿದೆ. ಕಾದಂಬರಿ ಮುಂದೆ ಹೇಗೆ ಸಾಗುವುದೋ ಎಂಬ ಭಾವ ಮನದಲ್ಲಿ ತೂಗುಯ್ಯಾಲೆ ಆಡಹತ್ತಿದೆ.
ಚೆನ್ನಾಗಿದೆ ಕಾದಂಬರಿ. ಇವತ್ತು ಹೆಚ್ಚಿನವರ ಬದುಕು ಹೀಗೆಯೇ ಇದೆ. ಯಾರನ್ನು ಅಂತ ದೂರುವುದು ಕಾಲ ಬದಲಾದಂತೆ, ಅವಶ್ಯಕತೆ ಗಳು ಬದಲಾದಂತೆ ಬದುಕಿನ ರೀತಿಯೂ ಬದಲಾಗುತ್ತಿದೆ. ಆದರೆ ಮಾಗಿದ ಜೀವಗಳು ಈ ಬದಲಾವಣೆಗೆ ಹೊಂದಿಕೊಳ್ಳಲು ಪರದಾಡುತ್ತವೆ.
ಪ್ರಸ್ತುತ ಸಮಾಜದಲ್ಲಿ ಕಂಡುಬರುವ ವಾಸ್ತವಿಕತೆಯ ಚಿತ್ರಣ ಕಥೆಯಲ್ಲಿ ಪೂರಕವಾಗಿ ಕಂಡುಬಂದರೂ, ಈ ಕಟುಸತ್ಯವನ್ನು ಅರಗಿಸಿಕೊಳ್ಳಲೇ ಬೇಕಾಗಿದೆ!.