ಮದುವೆ ಬೇಕು,ಮಗು ಬೇಡ
” ನೋಡು ರವೀ ನಾನು ಮದುವೆಗೆಲ್ಲ ಒಪ್ಪಿದ್ದೇನೋ ನಿಜ.ಆದ್ರೆ ಈಗ್ಲೇ ಮಕ್ಕಳಾಗಬೇಕು ಎಂಬ ವರಸೆ ನಿನ್ನ ಅಪ್ಪ+ಅಮ್ಮಂದಾದರೆ ಅದಕ್ಕೆಲ್ಲ ನಾನು ರೆಡಿ ಇಲ್ಲ.” ಮೊಬೈಲ್ ಕಿವಿಗಾನಿಸಿ ತುಸು ಗಟ್ಟಿ ದನಿಯಲ್ಲೇ ಹೇಳುತ್ತಿದ್ದಳು ಚಿನ್ಮಯಿ.
“ಈಗ್ಲೇ ಇಷ್ಟ ಇಲ್ಲಾಂದ್ರೆ ಬೇಡ ಬಿಡು, ಒಂದು ವರ್ಷ, ಎರಡು ವರ್ಷ ಹೋದಮೇಲಾದ್ರೂ ಆಗಬಹುದಲ್ಲ ಚಿನ್ನು..? ಅದನ್ಯಾಕಿಷ್ಟು ತಲೆಗೆ ಹಚ್ಚಿ ಕೊಳ್ತಿಯಾ? ಒಂದು ವರ್ಷಕ್ಕೆ ಮೊಮ್ಮಗು ಬರ್ಬೇಕು ಅಂದಿದ್ರು ಅಮ್ಮ ಅಷ್ಟೇ!. ಅದು ಹಿರಿಯರು ಹೇಳೋ ಮಾತು ತಾನೇ?”
ರವಿಯ ಮಾತಿಗೆ “ಹೆಚ್ಚು ಹೇಳ್ಬೇಕೂಂದ್ರೆ ನನಗೆ ಮಕ್ಕಳನ್ನ ಹೆರೋದಕ್ಕೆ ಇಷ್ಟವಿಲ್ಲ ರವಿ. ಇಂತದ್ದಕ್ಕೆಲ್ಲ ಯಾರು ಈಗಿನವರು ಪೇಚಾಡ್ತಾರೆ..? ಈ ಬಸ್ರಿ,ಬಯಕೆ,ಹೆರಿಗೆ ಬಾಣಂತನ, ಮಕ್ಕಳ ಲಾಲನೆ-ಪಾಲನೆ! ಅಬ್ಬ..ಬ್ಬ ಒಂದೇ ಎರಡೇ ಈ ಗೋಳು!? ಯಾರಿಗೆ ಬೇಕಿದೆಲ್ಲ? ನಿನಗೋ ನಿನ್ನ ಅಪ್ಪ-ಅಮ್ಮನಿಗೋ ಮಕ್ಕಳು,ಮೊಮ್ಮಕ್ಕಳು ಬೇಕೂಂದ್ರೆ ಅನಾಥಾಶ್ರಮದಿಂದ ಸರಿಯಾದ್ದು ನೋಡಿ ಒಂದೋ ಎರಡೋ ತಂದು ಸಾಕಿ ಕೊಳ್ಳಲಿ.ನನ್ನ ಅಭ್ಯಂತರವೇನಿಲ್ಲ.ಪಾಶ್ಚಾತ್ಯರೆಲ್ಲ ಹೆಚ್ಚಿನವರೂ ಹೀಗೆ ತಾನೇ ಮಾಡೋದು?”.
“ಯಾವುದಕ್ಕೂ ಮದುವೆಯೊಂದು ಆಗ್ಲಿ ಚಿನ್ನು;ಮತ್ತೆ ತಾನೇ ಅದೆಲ್ಲ”
ಆಚ ಬದಿಯಿಂದ ರವಿ ಹೇಳ್ತಿದ್ದ.
ಮಗಳ ಮಾತನ್ನು ಆಲಿಸಿದ ಮಮತ “ಏನೇ ಚಿನ್ನು…?ನಿಂದು? ಮಕ್ಕಳಾಗೋದು ಬೇಡ,ಮಕ್ಕಳನ್ನ ಹೆರೋದಿಲ್ಲ ಅಂತಿದ್ದಿಯಲ್ಲ! ಮದುವೆದು ಮಾತುಕತೆ ಆಗುತ್ತಷ್ಟೆ ಮುಂದಿನ ವಾರ ನಿಶ್ಚಿತಾರ್ಥ. ಈಗ್ಲೇ ಮಕ್ಕಳಾಗೋ ಮಾತುಕತೆ ಯಾಕೆ? ಅದೇ ಹೇಳ್ತಾರಲ್ಲ ‘ಹುಟ್ಟದೆ ಇರೋ ಮಗುವಿಗೆ ಕುಲಾವಿ ಹೊಲಿಸಿದರೂಂತ!!?”
“ಅದೆಲ್ಲ ಈಗ್ಲೇ ಮಾತ್ನಾಡಿ ನಮ್ಮ ಅಭಿಪ್ರಾಯ ಹೇಳ್ಬೇಕು ಮಮ್ಮಿ. ಮತ್ತೆ ರವಿಯ ಮನೆಯವರಿಂದ ‘ನೀನು ಮೊದ್ಲೇ ಹೇಳ್ಬಾರದಿತ್ತೇ,’ ಎನ್ನೋ ಮಾತು ಬರ್ಬಾರದಲ್ಲ ಅದಕ್ಕೆ ಹೇಳ್ದೆ..”
ಏನು ಮಾತೂಂತ ಆಡ್ತಿಯಾ ಮಗಳೇ? ಮದುವೆಯಾದ್ಮೇಲೆ ಮಕ್ಕಳಾಗ್ಲೇ ಬೇಕು ಕಣೇ.ವಂಶ ವೃದ್ಧಿಯೇ ಮದುವೆಯ ಮೊದಲ ಉದ್ದೇಶ.ಏನೇನೋ ಮಾತ್ನಾಡಿ ಇಲ್ಲದ ತರ್ಲೆ ತೆಗೀಬೇಡ ಸುಮ್ನಿರು”.
“ನಿಂಗೊತ್ತಿಲ್ಲಮ್ಮ,ಈಗಿನ ಕಾಲದಲ್ಲಿ ಮಗುವನ್ನು ಹೊಟ್ಟೆಯಲ್ಲಿ ಹೊತ್ತು,ಹೆತ್ತು,ಸಾಕಿ ಸಲಹುವ ಕಷ್ಟ ಹೊರೋಕೆ ಯಾರೂ ರೆಡಿಯಿಲ್ಲಮ್ಮ.ನಾನು,ನನ್ನ ಗೆಳತಿಯರೆಲ್ಲ ಸೇರ್ಕೊಂಡು ಹೀಗೆ ಐಡಿಯಾ ಹಾಕ್ತೀವಿ. ಬೇಕಿದ್ರೆ ಶಿಶುಗಳ ಆಶ್ರಮದಿಂದಲೋ ಅನಾಥಾಶ್ರಮದಿಂದಲೋ ದತ್ತು ಸ್ವೀಕಾರ ಮಾಡಿದ್ರಾಯ್ತು. ಅಮೇರಿಕದಲ್ಲೆಲ್ಲ ಹೀಗೆ ಮಾಡೋದು”.
ಯಾಕೆ ಈಗನ ಯುವತಿಯರಲ್ಲಿ ಇಂತಹ ಮನೋಭಾವನೆ ಮೂಡುತ್ತಿದೆ! ಮದುವೆಯಾಗೋದಕ್ಕೆ ರೆಡಿಯಿದ್ದ ಯುವತಿಗೆ ಮಕ್ಕಳಾಗೋದಕ್ಕೆ ಜುಗುಪ್ಸೆ! ಯಾಕೆ ಹೀಗಾಡ್ತಿದ್ದಾರೆ? ಏನಾಗಿದೆ ಇವರಿಗೆ!? ಇವರೆಲ್ಲ ನಮ್ಮ ಹಿಂದೂ ಸನಾತನ ಸಂಸ್ಕೃತಿಯಲ್ಲಿ ಬೆಳೆದವರಲ್ಲವೇ ಕಂಗೆಟ್ಟಳು ಚಿನ್ಮಯಿಯ ಅಮ್ಮ.
ಇಂದಿನ ಕಂಪ್ಯೂಟರ್ ಯುಗದಲ್ಲಿ ಸಾಫ್ಟ್ ವೇರ್ ಹೊರತು ಹಾರ್ಡ್ ವೇರ್ ಬೇಡ .ಇವಳು ನನ್ನ ಉದರದಿಂದ ಭೂಮಿಗೆ ಬಿದ್ದವಳಿಗೇಕೆ ಈ ಭಾವನೆ!!!
ಬೇನೆ- ಬೇಗುದಿ ಒಂದಿಷ್ಟೂ ಬೇಡ.ಒಂದು ನೌಕರಿ ಬೇಕು.ಆರ್ಥಿಕ ವಿಷಯಕ್ಕೆ ಮನೆಯವರದ್ದಾಗಲೀ ಪತಿಯ ಹಂಗಾಗಲಿ ಬೇಡ. ಒಟ್ಟಿನಲ್ಲಿ ಇಷ್ಟ ಬೇಕು.ಎಳ್ಳಷ್ಟೂ ಕಷ್ಟ ಬೇಡ!!!.
ಸ್ವಂತ ವಿಷಯಕ್ಕೆ ಪ್ರಯೋಜನ ಇರುವುದು ಸತ್ಯವಾದರೂ ಆ ನೆವದಲ್ಲಿ ಇನ್ನೇನೋ ಆಗಬಾರದಲ್ಲ!. ನಮ್ಮ ಕುಟುಂಬ ವ್ಯವಸ್ಥೆಯೇ ಬುಡ ಮೇಲಾಗುವ ಪರಿಸ್ಥಿತಿ ತಂದೊಡ್ಡ ಬಾರದಲ್ಲ..
ಗಂಡು- ಹೆಣ್ಣು ನಾಗರಿಕರಾಗಿ ಬಾಳಲು ಇರುವ ವ್ಯವಸ್ಥೆಯೇ ವಿವಾಹ. ಇಲ್ಲಿ ಸಪ್ತಪದಿ ತುಳಿದು; ಹೆಣ್ಣು ಗಂಡಿನ ಕಡೆಗೆ ಬರುತ್ತಾಳೆ. ವಿವಾಹವಾದ ದಂಪತಿಗಳಿಗೆ ಸತ್ಸಂತಾನವಾಗಬೇಕು.ಆಗ ಅದೊಂದು ಒಳ್ಳೆಯ ಕುಟುಂಬ. ಇದು ನಮ್ಮ ಹಿಂದೂ ಸಂಸ್ಕಾರ.
-ವಿಜಯಾಸುಬ್ರಹ್ಮಣ್ಯ ಕುಂಬಳೆ.
ಇಂದಿನ ಬಹುತೇಕರ ಮನಸ್ಥಿತಿ ಯ ಅನಾವರಣ
ವಾಸ್ತವಿಕತೆಯ ಚಿತ್ರ ಣ ಮೇಡಂ
ಪ್ರಸ್ತುತ ಪರಿಸ್ಥಿಯ ವಾಸ್ತವಿಕ ಚಿತ್ರಣವು ಓದುಗರನ್ನು ಚಿಂತೆಯ ಜೊತೆಗೆ ಚಿಂತನೆಗೂ ಎಡೆಮಾಡಿ ಕೊಡುತ್ತದೆ.
ವಾಸ್ತವ ಸಮಾಜದ ಚಿತ್ರಣ
ಸೋ ಕಾಲ್ಡ್ ಮುಂದುವರೆದವರು ಎಂದಂದುಕೊಂಡಿರುವ ಇಂದಿನ ಜನಾಂಗದವರಲ್ಲಿ ಇಂದೊಂದು ಜಲ್ವಂತ ಸಮಸ್ಯೆಯಾಗುತ್ತಿರುವುದು ವಿಷಾದನೀಯ.
ಯೋಚಿಸಬೇಕಾದ ವಿಷಯ. ಲೇಖನ ಮನಮುಟ್ಟುವಂತಿದೆ.