ದ್ರೋಣ ಸುತ ಅಶ್ವತ್ಥಾಮ
‘‘ಕೈಯಲ್ಲಿ ಕಾಸಿಲ್ಲಿ ಕಡಕೆ ನಂಬುವರಿಲ್ಲೆ| ಹರಹರ್ ಶಿವನೆ ಬಡತನ| ಈ ಒಂದು ಬರದಿರಲಿ ನಮ್ಮ ಬಳಗಕ್ಕೆ|” ಎಂಬುದು ಜಾನಪದ ಸೊಲ್ಲು. ಹೌದು ಬಡತನವನ್ನು ಎಲ್ಲರೂ ದ್ವೇಷಿಸುತ್ತಾರೆ. ಆದರೆ ಯಾರೂ ಇಂದು ಇದ್ದಂತೆ ನಾಳೆ ಇರಲಾರ! ಬಡವ ಬಲ್ಲಿದನಾಗಬಹುದು, ಬಲ್ಲಿದ ಬಡವನಾಗಲೂಬಹುದು. ‘ಮಿಡಿ ಹಣ್ಣಾಗದೇ ದೈವದೊಲ್ಮೆಯಿರಲ್ ಕಾಲಾನುಕಾಲಕ್ಕೆ ತಾಂ ಬಡವಂ ಬಲ್ಲಿದನಾಗನೇ’ ಎಂದಿದ್ದಾನೆ ಕವಿ ಸೋಮೇಶ್ವರ ಶತಕದಲ್ಲಿ. ಬಡತನ-ಸಿರಿತನಗಳು ಶಾಶ್ವತವಲ್ಲ ಎಂಬುದೇ ಜೀವನಾನುಭವ, ಆತ ಬಡ ಬ್ರಾಹ್ಮಣ. ಪಾಪ ಹೊಟ್ಟೆ-ಬಟ್ಟೆಗೆ ಗತಿ ಇಲ್ಲ ಎಂದು ಅನುಕಂಪದ ಮಾತುಗಳಿದ್ದರೂ ಹೀಯಾಳಿಸುವವರೇ ಅಧಿಕ. ಅಂತಹ ಒಬ್ಬ ಬಡ ಬ್ರಾಹ್ಮಣ. ಏನಕ್ಕೂ ಗತಿ ಇಲ್ಲದವನು ತನ್ನ ಸಹಪಾಠಿಯಾಗಿದ್ದವ ಪ್ರಸ್ತುತ ಅರಸನಾಗಿ ಮೆರೆಯುವಾತನಲ್ಲಿಗೆ ತೆರಳಿ ಸಹಾಯಹಸ್ತ ಚಾಚಿದಾಗ ಹೀನಾಯವಾಗಿ ಹೀಯಾಳಿಸಲ್ಪಟ್ಟ ಈತನೇ ದ್ರೋಣಾಚಾರ್ಯ, ಇವನು ಉತ್ತರಪಾಂಚಾಲ ದೇಶದ ದ್ರುಪದ (ತನ್ನ ಸಹಪಾಠಿ) ರಾಜನಲ್ಲಿಗೆ ಸಹಾಯ ಕೋರಲು ಹೋಗಿ ತಿರಸ್ಕರಿಸಲ್ಪಟ್ಟು ಬಂದವ. ತನ್ನ ಒಬ್ಬನೇ ಒಬ್ಬ ಮಗನಿಗೆ ಒಂದು ಕುಡುತೆ ಹಾಲು ಕೊಡುವುದಕ್ಕೂ ಗತಿಯಿಲ್ಲದ ಕಡು ಬಡವನಾಗಿದ್ದ. ಮತ್ತೆ ದೈವಾನುಗ್ರಹದಿಂದ ಹಸ್ತಿನಾವತಿ ಅರಸನಾದ ಭೀಷ್ಮನ ಆಶ್ರಯ ದೊರಕಿತು. ಅಲ್ಲಿ ಕುರುಕುಲಕ್ಕೆ ಶಸ್ತ್ರಾಸ್ತ್ರ ಕಲಿಸುವ ಗುರುವಾಗಿ ನೇಮಿಸಲ್ಪಟ್ಟು ಅಶನ-ವಸನ ಕಂಡುಕೊಂಡು ಹೆಸರೂ ಗಳಿಸುತ್ತಾನೆ.
ಅಶ್ವತ್ಥಾಮನ ಜನಕ ದ್ರೋಣಾಚಾರ್ಯ, ತಾಯಿಯು ಶರದ್ವಂತನ ಮಗಳಾದ ‘ಕೃಷಿ’. ದ್ರೋಣನು ಬೃಹಸ್ಪತಿಯ ಅವತಾರವಾದರೆ, ಅಶ್ವತ್ಥಾಮನು ಶಿವನ ಅಂಶದಿಂದ ಜನಿಸಿದನು ಎಂದು ತಿಳಿದುಬರುತ್ತದೆ. ಈತನು ಹುಟ್ಟಿದೊಡನೆ ಎಲ್ಲ ಮಕ್ಕಳಂತೆ ಅಳುವುದಕ್ಕೆ ಬದಲಾಗಿ ಕುದುರೆಯಂತೆ ಕೆನೆದುದರಿಂದ ಇವನಿಗೆ ಅಶ್ವತ್ಥಾಮನೆಂದು ನಾಮಕರಣ ಮಾಡಿದರು. ಕಡು ಬಡತನದಿಂದಾಗಿ ಮಗುವಿಗೆ ಒಂದು ಕುಡುತೆ ಹಾಲು ಕೊಡುವುದಕ್ಕೂ ಗತಿಯಿಲ್ಲದೆ ಅವನ ತಾಯಿ ಒಂದು ಚೂರು ಅಕ್ಕಿಹಿಟ್ಟನ್ನು ಕದಡಿ ಹಾಲೆಂದು ಕೊಡುತ್ತಿದ್ದಳಂತೆ. ತನ್ನಮ್ಮ ಹಸುವಿನ ಹಾಲೆಂದು ಕೊಡುವುದು ಅಪ್ಪಟ ಹಾಲಲ್ಲ. ನಿಜವಾದ ಹಾಲು ಸ್ನೇಹಿತರ ಮನೆಯಲ್ಲಿ ಕುಡಿದ ಅಶ್ವತ್ಥಾಮ ನನಗೆ ಸರಿಯಾದ ಹಾಲು ಕೊಡಿರೆಂದು ತಾಯಿ-ತಂದೆಯರನ್ನು ಪೀಡಿಸತೊಡಗಿದನಂತೆ.
ಇದರಿಂದ ನೊಂದುಕೊಂಡ ದ್ರೋಣಾಚಾರ್ಯ ಪತ್ನಿ ಪುತ್ರ ಸಮೇತನಾಗಿ ಊರೂರು ಅಲೆಯುತ್ತಿರುವಾಗ ಹಸ್ತಿನಾವತಿಯ ಒಂದು ಬಯಲಿನಲ್ಲಿ ಕುರುಸುತರು ಚಿಣ್ಣಿಕೋಲು ಆಡುತ್ತಿದ್ದ ವೇಳೆ ಹೊಡೆದ ಚಿಣ್ಣಿಯು ಹತ್ತಿರದ ಪಾಳು ಬಾವಿಗೆ ಬಿತ್ತು. ಆ ಚಿಣ್ಣಿಯನ್ನು ಬಾವಿಯಿಂದ ಹೊರತೆಗೆಯುವ ಬಗೆಯೆಂತು? ಎಂಬುದಾಗಿ ಮಕ್ಕಳು ಪಿಳಿಪಿಳಿ ನೋಡುತ್ತಿದ್ದಾಗ ದ್ರೋಣನು ಪುತ್ರ ಸಮೇತನಾಗಿ ಆ ದಾರಿಯಾಗಿ ಬಂದನು. ವಿಷಯ ತಿಳಿದ ವಿಪ್ರನಾದ ದ್ರೋಣನು ತನ್ನ ಮಗ ಅಶ್ವತ್ಥಾಮನಿಗೆ ಕಣ್ಣನ್ನೆಯ ಮೂಲಕ ಆ ಚಿಣ್ಣೆಯನ್ನು ಬಾವಿಯಿಂದ ತೆಗೆಯಲು ಸೂಚಿಸಿದನು. ಅಶ್ವತ್ಥಾಮನು ತನ್ನ ಕೈಯಲ್ಲಿದ್ದ ಮುಷ್ಠಿ ದರ್ಭೆಯಿಂದ ಒಂದೊಂದನ್ನೇ ಒಂದರ ಹಿಂದೆ ಒಂದರಂತೆ ಬಾಣವನ್ನಾಗಿ ಎಸೆದು ಚಿಣ್ಣಿಯು ಮೇಲೆ ಬರುವಂತೆ ಮಾಡಿದನು. ಈ ಸುದ್ದಿಯನ್ನು ಕೂಡಲೇ ಹುಡುಗರು ಅರಮನೆಯಲ್ಲಿರುವ ಅಜ್ಜ ಭೀಷ್ಮರಿಗೆ ತಿಳಿಸಿದರು. ಭೀಷ್ಮರು ಕೂಡಲೇ ಆ ದ್ರೋಣಾಚಾರ್ಯ ಕುಟುಂಬವನ್ನು ಅರಮನೆಗೆ ಬರಮಾಡಿಕೊಂಡರು. ದ್ರೋಣನು ದರಿದ್ರ ಬ್ರಾಹ್ಮಣನಾದರೂ ಶರಪಂಡಿತನು. ಈತನಿಗೆ ರಾಜಾಶ್ರಯ ನೀಡಿದರೆ ನಮ್ಮೀ ವೀರಕುಮಾರರು ಧನುರ್ವಿದ್ಯಾ ಪ್ರವೀಣರಾಗಬಹುದೆಂದು ಚಿಂತಿಸಿದ ಭೀಷ್ಕರು ದ್ರೋಣಾಚಾರ್ಯರಿಗೆ ಆಶ್ರಯ ನೀಡುವುದಾಗಿ ಭರವಸೆಯಿತ್ತು ಉಳಕೊಳ್ಳುವ ವ್ಯವಸ್ಥೆ ಮಾಡಿದರು. ಅಂದಿನಿಂದ ದ್ರೋಣರು ತಮ್ಮ ಅಮೋಘವಾದ ಶಸ್ತ್ರಾಸ್ತ್ರ ವಿದ್ಯೆಯನ್ನು ಕುರುಸುತರಿಗೆ ಧಾರೆಯೆರೆಯಲು ಸನ್ನದ್ಧರಾದರು. ಅಲ್ಲಿಂದ ಮುಂದೆ ಅಶ್ವತ್ಥಾಮನ ಬಡತನ ನೀಗಿತು. ರಾಜಕುಮಾರರೊಂದಿಗೆ ತಾನೂ ಒಬ್ಬನಾಗಿ ಬೆಳೆದನು. ಅಶ್ವತ್ಥಾಮ ಹುಟ್ಟಿದ್ದು ಬ್ರಾಹ್ಮಣ ಕುಲದಲ್ಲಾದರೂ ಶಸ್ತ್ರಾಸ್ತ್ರ ಕಲಿತಿದ್ದನು. ಪರಿಣಾಮವಾಗಿ ಬಿಲ್ಗಾರಿಕೆಯಲ್ಲಿ ಶೂರನಾಗಿದ್ದನು.
ಮಹಾಭಾರತದ ಹದಿನೆಂಟನೆಯ ಯುದ್ಧದ ದಿವಸ ದ್ರೋಣರ ಅವಸಾನವಾಯಿತು. ಇದಕ್ಕೆ ಕಾರಣ ಅಶ್ವತ್ಥಾಮ ಸತ್ತನೆಂದು ಪುಕಾರು ಎಬ್ಬಿಸಿದ್ದೇ ಆಗಿತ್ತು. ಇದಕ್ಕೆ ಕಾರಣಕರ್ತ ಸೂತ್ರಧಾರಕನಾದ ಶ್ರೀಕೃಷ್ಣ ದೃಷ್ಟದ್ಯುಮ್ಮನಿಗೂ ದ್ರೋಣರಿಗೂ ಯುದ್ಧವಾಗುತ್ತಿದ್ದ ವೇಳೆಯಲ್ಲಿ ಶ್ರೀಕೃಷ್ಣನ ಮನದಲ್ಲಿ ಒಂದು ಅಭಿಪ್ರಾಯ ಮೂಡಿತು. ದ್ರೋಣಾಚಾರ್ಯರು ಯುದ್ಧದಿಂದ ವಿರಮಿಸದೆ ಪಾಂಡವರಿಗೆ (ಧರ್ಮಕ್ಕೆ) ಜಯವಾಗದು. ಇದಕ್ಕಾಗಿ ಒಂದು ಸಣ್ಣ ಸುಳ್ಳನ್ನು ಹೇಳಬೇಕು! ಅತೀವ ಪುತ್ರ ವ್ಯಾಮೋಹವುಳ್ಳ ದ್ರೋಣರು ಅಶ್ವತ್ಥಾಮ ಸತ್ತನೆಂದು ತಿಳಿದರೆ ಯುದ್ಧದಲ್ಲಿ ಸೋಲುವರು. ಎದುರಾಳಿಯಾದ ದೃಷ್ಟದ್ಯುಮ್ನ ದ್ರೋಣರನ್ನು ವಧಿಸುವನು ಎಂದು ಯುಧಿಷ್ಠಿರನಲ್ಲಿ ಸಮಾಲೋಚಿಸಿ ಅಶ್ವತ್ಥಾಮಾಹತಃ ಕುಂಜರಃ ಎಂದು ಬೊಬ್ಬಿರಿದು ಉಸುರಲು ಸೂಚಿಸಿದನು. ಶ್ರೀಕೃಷ್ಣನ ಆದೇಶವನ್ನು ಯುಧಿಷ್ಠಿರನು ಪಾಲಿಸಿದನು. ಕೊನೆಯ ಶಬ್ದವಾದ ಕುಂಜರ: (ಆನೆ) ಎನ್ನುವುದು ಕೇಳಿಸದಂತೆ ಕೃಷ್ಣನು ಶಂಖ ಊದಿದನು. ದ್ರೋಣರು ಪುತ್ರ ವ್ಯಾಮೋಹದಿಂದ ಜರ್ಝರಿತರಾಗಿ ಶಸ್ತ್ರ ತ್ಯಾಗ ಮಾಡಿದರು. ಈ ಸಮಯ ನೋಡಿ ಧೃಷ್ಟದ್ಯುಮ್ನನು ದ್ರೋಣರ ಶಿರಸ್ಸನ್ನು ಕತ್ತರಿಸಿ ಕೌರವನ ಮುಂದೆ ಎಸೆದನು.
ಸ್ವಲ್ಪ ಹೊತ್ತಿನಲ್ಲಿ ಅಶ್ವತ್ಥಾಮನಿಗೆ ನಡೆದ ಘಟನೆ ಅರಿವಾಯಿತು. ಕೃಪಾಚಾರ್ಯರಿಂದ ವಿವರ ಸಂಗ್ರಹಿಸಿದ ಅಶ್ವತ್ಥಾಮ ಪ್ರಳಯ ರುದ್ರನಂತಾದನು. ತನ್ನ ತಂದೆಯ ಮರಣಕ್ಕೆ ಕಾರಣನಾದ ಧೃಷ್ಟದ್ಯುಮ್ನನ ವಧೆಗಾಗಿ ಹೊಂಚು ಹಾಕತೊಡಗಿದನು. ಭೀಮನ ಗದಾಯುದ್ಧಕ್ಕೆ ಹೆದರಿ ವೈಶಂಪಾಯನ ಸರೋವರದ ಜಲದೊಳಗೆ ಅಡಗಿನಿಂತ ಕೌರವನಿಗೆ ಧೈರ್ಯ ಹೇಳಲು ಅವನಿದ್ದೆಡೆಗೆ ಅಶ್ವತ್ಥಾಮ ತೆರಳಿ ಎಲ್ಲಾ ಪಾಂಚಾಲರನ್ನೂ ಧೃಷ್ಟದ್ಯುಮ್ನನನ್ನೂ ಸಂಹಾರ ಮಾಡುವೆನೆಂದು ಶಪಥ ಮಾಡಿದನು. ಪಾಂಡವರ ಮೇಲೆ ನಾರಾಯಣಾಸ್ತ್ರ ಪ್ರಯೋಗ ಮಾಡಲು ಕೃಷ್ಣನು ತಡೆದನು, ಮುಂದೆ ಮೃತ್ಯುಂಜಯನನ್ನು ಕೈಜೋಡಿಸಿ ಭಜಿಸಿದನು. ನನ್ನ ಮನೋಭಿಲಾಷೆ ನೆರವೇರುವಂತೆ ಮಾಡು ಎಂದು ಭಕ್ತಿಭಾವ ವಿನೀತನಾಗಿ ಬೇಡಿಕೊಂಡನು. ಖಡ್ಗ ಝಳಪಿಸುತ್ತಾ ಶಿಬಿರಕ್ಕೆ ದೌಡಾಯಿಸಿ ನಿದ್ರಿಸುತ್ತಿದ್ದ ದೃಷ್ಟದ್ಯುಮ್ನನನ್ನು ಕಾಲಿನಿಂದ ತಿವಿದು ಎಬ್ಬಿಸಿ ಜುಟ್ಟನ್ನು ಹಿಡಿದು ಎದೆಯ ಮೇಲೆ ತುಳಿದು ಕತ್ತು ಹಿಸುಕಿ ಹತ್ಯೆಗೈದನು, ರಥವನ್ನೇರಿ ಮುಂದುವರಿದು ಪಾಂಡವರ ಐವರು ಪುತ್ರರನ್ನೂ ಮುಗಿಸಿದನು. ಇದೆಲ್ಲ ಮುಗಿಸಿ ದುರ್ಯೋಧನನಿದ್ದೆಡೆಗೆ ಸಮೀಪಿಸಿದಾಗ ಭೀಮನಿಂದ ತೊಡೆ ಮುರಿಸಿಕೊಂಡ ದುರ್ಯೋಧನನು ಮರಣದುಯ್ಯಾಲೆಯಲ್ಲಿದ್ದನು. ಆದರೂ ತನ್ನೊಡೆಯನಿಗೆ ತನ್ನ ಪರಾಕ್ರಮವನ್ನು ತಿಳಿಸಿ ಬಿಟ್ಟು ಕೃತಕೃತ್ಯನಾದನು.
ಸಪ್ತ ಚಿರಂಜೀವಿಗಳಲ್ಲಿ ಅಶ್ವತ್ಥಾಮನೂ ಒಬ್ಬ.
–ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಸುರಹೊನ್ನೆ ಬಳಗದ ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.
ಎಂದಿನಂತೆ ಪುರಾಣಪುಣ್ಯ ಕಥೆಗಳಲ್ಲಿ.. ಅಶ್ವಥಾಮನ ಕತೆ..ಮುದ ನೀಡಿತು ವಿಜಯಾ ಮೇಡಂ
ಚೆನ್ನಾಗಿದೆ
ಅಶ್ವಥ್ಥಾಮನ ಕಥೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ
ಚಿರಂಜೀವಿ ಅಶ್ವತ್ಥಾಮನ ಕಥೆ ತುಂಬಾ ಚೆನ್ನಾಗಿದೆ.
ಧನ್ಯವಾದಗಳು ಅಡ್ಮಿನ್ ಹೇಮಮಾಲಾ ಹಾಗೂ ಓದುಗರಿಗೆ.