ಕಳ್ಳತನದ ಭಯದಲ್ಲಿ…
ಈ ಮಾರ್ಚ್ ತಿಂಗಳ ಒಂದು ಭಾನುವಾರ “ರಜ ಅಲ್ವಾ ಬಿಡು” ಎಂದುಕೊಂಡು ತಡವಾಗಿ ಎದ್ದು, ಕಣ್ಣುಜ್ಜುತ್ತಾ, ಆಕಳಿಸುತ್ತಾ ಅಡುಗೆ ಮನೆಗೆ ಬಂದವಳ ಕಣ್ಣು ಯಾಕೋ ಅಚಾನಕ್ ಆಗಿ ಕಿಟಕಿಯಿಂದ ಆಚೆ ಹೋಯಿತು.ನೋಡಿದರೆ ನಮ್ಮ ಹಿಂದಿನ ಮನೆ ಬಾಗಿಲ ಬಳಿ ಜನ ಮುಕುರಿಕೊಂಡು ನಿಂತಿದ್ದಾರೆ! ಮನೆ ಹತ್ತಿರ ಪೊಲೀಸ್ ಪ್ಯಾಟ್ರೋಲ್ ವಾಹನ ಒಂದು ಬೇರೆ ನಿಂತಿದೆ! ನನಗೆ ಒಂದು ಗಳಿಗೆ ಕಾಲು ಗಡಗಡನೆ ನಡುಗಿ ಹೋದವು.ಏಕೆಂದರೆ ಇತ್ತೀಚೆಗೆ ನಮ್ಮ ಏರಿಯಾದಲ್ಲಿ ನಾಲ್ಕೈದು ಮನೆಗಳ್ಳತನದ ಪ್ರಸಂಗಗಳಾಗಿವೆ. ನಮ್ಮ ಮನೆಯ ಹಿಂದಿನ ಸಾಲಿನ ಮನೆ ಬೇರೆ ಅಕ್ಕ ಪಕ್ಕ ಹಿಂದೆ ಮುಂದೆ ಯಾವುದೇ ಮನೆಯಿಲ್ಲದ ಒಂದು ತಬ್ಬಲಿ ಒಂಟಿ ಮನೆ. ಅಲ್ಲಿ ವಾಸ ಮಾಡ್ತಾ ಇರೋದು ಒಬ್ಬರು ಹಿರಿಯ ಮಹಿಳೆ ಮಾತ್ರ.ಅವರ ಗಂಡ ತೀರಿ ಹೋದ ಬಳಿಕ ಆ ಅಜ್ಜಿ ಯಾವ ಮಕ್ಕಳ ಮನೆಗೂ ಹೋಗಿ ಇರಲು ಒಪ್ಪದೇ,”ಕೈ ಕಾಲು ಗಟ್ಟಿ ಇರೋವರೆಗೆ ನನ್ನ ಮನೆ ಬಿಟ್ಟು ನಾನು ಎಲ್ಲಿಗೂ ಹೋಗಲ್ಲ,” ಎಂದು ಹಠದಲ್ಲಿ ಅಷ್ಟು ದೊಡ್ಡ ಮನೆಯಲ್ಲಿ ಒಬ್ಬರೇ ಇದ್ದ ಗಟ್ಟಿಗಿತ್ತಿ.
ಅದಷ್ಟೂ ಒಮ್ಮೆಗೇ ನೆನಪಾಗಿ ” ದೇವ್ರೆ ಅಜ್ಜಿಗೆ ಏನೂ ಆಗಿರದಿದ್ದರೆ ಸಾಕಪ್ಪಾ ” ಅಂತ ಮನದಲ್ಲೇ ಬೇಡುತ್ತಾ,” ರೀ ಒಂದ್ ನಿಮಿಷ ಬನ್ರಿ ಇಲ್ಲಿ,” ಎಂದು ನನ್ನ ಗಂಡನನ್ನು ಕೂಗಿದೆ.ನನ್ನ ದನಿಯಲ್ಲಿದ್ದ ಗಾಬರಿಯನ್ನು ಗುರುತಿಸಿದರೇನೋ ” ಏನಾಯ್ತೇ” ಎಂದು ಅವರೂ ಅವಸರದಲ್ಲಿ ಅಡುಗೆ ಮನೆಗೆ ಓಡಿ ಬಂದರು. ಕಿಟಕಿಯಿಂದ ಆಚೆ ನೋಡಿ ಅವರಿಗೂ ಗಾಬರಿ.” ಅಯ್ಯೋ ಅಜ್ಜಿ ಒಬ್ರೇ ಇರೋದು!ಏನಾಯ್ತೋ ಏನೋ ಬಾ ನೋಡಿ ಬರೋಣ” ಅಂತ ಅವಸರವಸರವಾಗಿ ನನ್ನನ್ನೂ ಎಳೆದುಕೊಂಡು ಹೋದರು.
ಹಿಂದಿನ ಮನೆಗೆ ಹೋಗಿ ನೋಡಿದರೆ ಪುಣ್ಯಕ್ಕೆ ಅಜ್ಜಿಗೆ ಏನೂ ಆಗಿರಲಿಲ್ಲ,ಆದರೆ ಕಳ್ಳನೊಬ್ಬ ಬೆಳಗಿನ ಜಾವ ಮೂರು ಗಂಟೆಯಲ್ಲಿ ಬಾಗಿಲು ಒಡೆದು ಒಳ ನುಗ್ಗಲು ಪ್ರಯತ್ನಿಸಿದ್ದ.ಚಿಲಕ, ಲಾಕ್ ಗಳೆಲ್ಲ ಕಿತ್ತುಕೊಂಡು ಅಲ್ಲೇ ಬಿದ್ದು ವದ್ದಾಡುತ್ತಿದ್ದವು.ಕಬ್ಬಿಣದ ಬಾಗಿಲನ್ನೇ ಒಡೆದು ನುಗ್ಗಲು ಯತ್ನಿಸಿದ್ದದ್ದನ್ನು ನೋಡಿ ಇನ್ನೂ ದಿಗಿಲಾಗಿ ಹೋಯಿತು.ಅಲ್ಲಿದ್ದ ಒಬ್ಬ ಪೋಲಿಸಪ್ಪ ” ಈಗೇನು ಮೇಡಂ ಕಬ್ಬಿಣವನ್ನ ಕೂಡ ಸದ್ದು ಬರದ ಹಾಗೆ ಕಟ್ ಮಾಡೋ ಮೆಷಿನ್ ಇಟ್ಕೊಂಡೇ ಕಳ್ರು ಬತ್ತರೆ ” ಅಂತ ಹೇಳಿ ಇನ್ನೂ ಹೆದರಿಸಿದರು.ಅಜ್ಜಿ ಹೇಳಿದ ಪ್ರಕಾರ ಬಾಗಿಲು ಒಡೆಯುವ ಸದ್ದು ಕೇಳಿ ಅವರಿಗೆ ಎಚ್ಚರವಾಗಿ,ದೀಪ ಹಾಕಿ “ಯಾರು,ಯಾರದು ?” ಎಂದು ಕೂಗುತ್ತಾ ಬಂದಾಗ ಕಳ್ಳ ಓಡಿ ಹೋಗಿದ್ದ.ಬಂದಿದ್ದ ಕುರುಹಿಗೆ ಹೆಲ್ಮೆಟ್ ಒಂದನ್ನು ಅಲ್ಲೇ ಬಿಟ್ಟು ಹೋಗಿದ್ದ.ಪೊಲೀಸಿನವರು ಅಜ್ಜಿಯ ಹೇಳಿಕೆ ತೊಗೊಂಡು , ಹೆಲ್ಮೆಟ್ ನ್ನು ಬೆರಳಚ್ಚು ಗುರುತು ಏನಾದರೂ ಸಿಗಬಹುದು ಎಂದು ಸೀಜ್ ಮಾಡಿಕೊಂಡು ತೆಗೆದು ಕೊಂಡು ಹೋದರು.ಅಷ್ಟರಲ್ಲಿ ಅಜ್ಜಿ ಮನೆ ಕಡೆಯವರು ಎಲ್ಲಾ ಬಂದು ಸೇರಲು ತೊಡಗಿದರು. ನಾವೂ ಅವರಿಗೆ ಸಾಕಷ್ಟು ಧೈರ್ಯ ಹೇಳಿ ಮನೆಗೆ ಹಿಂದಿರುಗಿದೆವು.
ಮನೆಗೆ ಬಂದ ಬಳಿಕ ನನ್ನ ತಲೆಯಲ್ಲಿ ಕಳ್ಳನ ಭಯದ ಕೀಟ ನುಗ್ಗಿ ಗುಯ್ ಗುಡಲಾರಂಭಿಸಿತು.ನಾನೋ ಬಾಂಬೆಯಲ್ಲಿ ಜೋರು ಮಳೆ ಅಂತ ಸುದ್ದಿ ಬಂದರೆ ಮೈಸೂರಿನಲ್ಲಿ ಕೊಡೆ ಹಿಡಿಯುವಷ್ಟು ಮುಂಜಾಗ್ರತೆಯ ಪ್ರಾಣಿ. ಅಂತಹದರಲ್ಲಿ ಮನೆ ಪಕ್ಕದಲ್ಲೇ ಕಳ್ಳ ನುಗ್ಗಿರುವುದನ್ನು ಕಣ್ಣಾರೆ ಕಂಡ ಬಳಿಕ ಸುಮ್ಮನಿರುತ್ತೇನೆಯೇ! ನಮ್ಮ ಏರಿಯಾವಂತೂ ಅಲ್ಲೊಂದು ಇಲ್ಲೊಂದು ಮನೆಗಳಿರುವ, ನಗರದ ಹೊರ ವಲಯದ ಒಂದು ಬಡಾವಣೆ.
” ಅಲ್ಲ ಕಣ್ರೀ ನಮ್ ಏರಿಯಾದಲ್ಲಿ ರಾತ್ರೆ ನಾಲ್ಕೈದು ರೌಂಡು ಪೊಲೀಸ್ ಪ್ಯಾಟ್ರೋಲ್ ಕಾರ್ ತಿರುಗುತ್ತೆ. ಅವರ ಮನೆ ಎದುರಿಗೇ ಒಂದು ಬೀದಿ ದೀಪ ಇದೆ, ಅದೂ ಅಲ್ಲದೆ ಕಬ್ಬಿಣದ ಲಾಕಿಂಗ್ ಡೋರ್ ಬೇರೆ ಮಾಡಿಸಿಕೊಂಡವ್ರೆ, ಅಷ್ಟಿದ್ದೂ ಬಾಗಿಲು ಮುರಿದವನಲ್ಲ! ಇನ್ನೆಂತಹ ಕಳ್ಳ ಇರ್ಬೇಕು! ನಮ್ಮನೆಯೆಲ್ಲಾ ಸೇಫು ಅಂತ ಏನು ಗ್ಯಾರಂಟಿ? ನಾವಂತೂ ಹಗಲೊತ್ತು ಒಬ್ರೂ ಮನೇಲಿರಲ್ಲ, ನಮ್ಮನೆಗೂ ಯಾವಾನಾರ ನುಗ್ಗುದ್ರೆ ಏನ್ ಕಥೆ!” ಎಂದು ನನ್ನ ಗಂಡನಿಗೆ ಹೇಳುತ್ತಾ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತೆ.
ನನ್ನ ಗಂಡ ಮಾತ್ರ ಸೂಪರ್ ಕೂಲ್ ಮನುಷ್ಯ.” ಅದೆಲ್ಲ ಮನೇಲಿ ಯಾರೂ ಇಲ್ಲದಿರುವಾಗ ಆಗಿರೋದು. ಹಿಂದಿನ ಮನೇಲಿ ಕೂಡ ಯಾರೂ ಇಲ್ಲ ಅಂದುಕೊಂಡು ನುಗ್ಗಿರಬೇಕು. ನಮ್ಮ ಮನೆಯಲ್ಲಿ ನಾವು ಯಾವಾಗಲೂ ರಾತ್ರೆ ಇರ್ತಿವಲ್ಲ,ಮತ್ಯಾಕೆ ಭಯ!” ಎಂದು ಗದರಿದರೂ ನನಗೆ ತಳಮಳ ತಪ್ಪಲಿಲ್ಲ.
ಅದಾಗಿ ಸ್ವಲ್ಪ ದಿನಗಳಲ್ಲೇ ಬೇಸಿಗೆ ರಜೆ ಶುರುವಾಯಿತು.ರಜೆಯಲ್ಲಿ ತವರು ಮನೆಗೆ ಹೋಗದಿದ್ದರೆ ಹೇಗೆ? ಆದ್ರೆ ಈ ಕಳ್ಳನ ಭಯದಲ್ಲಿ ಹೇಗೆ ಮನೆ ಖಾಲಿ ಬಿಟ್ಟು ಹೋಗೋದು? ನನ್ನ ಪಜೀತಿ ನೋಡಿ ಸಾಕಾದ ನನ್ನ ಗಂಡ ” ನೀನೂ ಮಕ್ಕಳು ಮಾತ್ರ ಹೋಗಿ ಬನ್ನಿ,ನಾನು ಮನೇಲೇ ಇರ್ತೀನಿ” ಎಂದು ಆಶ್ವಾಸನೆ ಕೊಟ್ಟರು.ಆದ್ರೆ ನನಗೆ ಅವರೊಬ್ಬರೇ ಇರ್ತಾರಲ್ಲ ಆಗ ಏನಾದ್ರೂ ಆದ್ರೆ ಅನ್ನೋ ಹೊಸ ಭಯ ಬೇರೆ ಶುರುವಾಯ್ತು.ಆದ್ರೆ ಅವರಿಗೆ ಹೇಳಿದರೆ ಮತ್ತೆ ನನ್ನ ಆತಂಕದ ಕಾಟ ತಡೆಯಲಾಗದೆ ಕಿರುಚಿಯೇ ಬಿಡುತ್ತಾರೆ ಅನ್ನಿಸಿ ಅವರಿಗೆ ಹೇಳದೆ ಸುಮ್ಮನಾದೆ.ಆದ್ರೆ ಯಾರಾದರೂ ಮನೆಗೆ ನುಗ್ಗಲು ಪ್ರಯತ್ನಿಸಿದರೆ ಅವರಿಗೆ ಗೊತ್ತಾಗೋ ಹಾಗೆ ಏನಾದ್ರೂ ವ್ಯವಸ್ಥೆ ಮಾಡಿಯೇ ಹೋಗೋಣ ಅನ್ನಿಸಿತು.
ಅದಕ್ಕೆ ಮೊದಲಿಗೆ ಮನೆಯ ಪಕ್ಕವೇ ಇರುವ ಯುಟಿಲಿಟಿಯ ಕಬ್ಬಿಣದ ಬಾಗಿಲ ಬಳಿ ಮನೆಯಲ್ಲಿದ್ದ ಗಿಡಗಳ ಕುಂಡಗಳಲ್ಲಿ ಅತಿ ಭಾರವಾಗಿದ್ದವನ್ನು ಕಷ್ಟಪಟ್ಟು ಎತ್ತಿ ತಂದು ಇಟ್ಟು ಬಿಟ್ಟೆ.ಅದರಲ್ಲಿ ನಾಲ್ಕೈದು ಅಡಿ ಬೆಳೆದು,ಮೈ ಮೇಲೆಲ್ಲಾ ಮುಳ್ಳುಗಳು ತುಂಬಿಕೊಂಡಿದ್ದ ನಿಂಬೆ ಗಿಡವಂತೂ ದೊಡ್ಡ ಕಾವಲುಗಾರನಂತೆ ಇಡೀ ಬಾಗಿಲನ್ನು ಆವರಿಸಿಕೊಂಡು,” ಅಕ್ಕ ನಾನಿರುವಾಗ ಯಾರು ಈ ಬಾಗಿಲು ಮುರಿಯಲು ಸಾಧ್ಯ?ಯಾರಾದರೂ ಬಂದರೆ ಮುಖ ಮೂತಿಗೆಲ್ಲ ಮುಳ್ಳು ಚುಚ್ಚಿ ಬಿಡ್ತೀನಿ,ನೀನು ಧೈರ್ಯವಾಗಿ ತಮ್ಮನ ಮನೆಗೆ ಹೋಗಿ ಬಾ,” ಅಂತ ಧೈರ್ಯ ಹೇಳುವಂತೆ ಗಟ್ಟಿಯಾಗಿ ಅಲ್ಲೇ ತಳವೂರಿತು.
ಸರಿ ಬಿಡು ಇನ್ನು ಹೊರಡೋ ಸಿದ್ದತೆ ಮಾಡೋಣ ಅನ್ನುವಷ್ಟರಲ್ಲಿ ಇನ್ನೊಂದು ಹುಳ ತಲೆಯೊಳಗೆ ನುಗ್ಗಿ ಬಂತು.ಅದು ಏನೆಂದರೆ ಯುಟಿಲಿಟಿ ಬಲಬದಿಗೆ ಕಬ್ಬಿಣದ ಬಾಗಿಲು ಇದ್ದರೆ ಎಡಬದಿಗೆ ಒಂದು ಚಿಕ್ಕ ಟಾಯ್ಲೆಟ್ ರೂಮ್ ಇದೆ.ನಗರ ಪಾಲಿಕೆ ಪ್ರಕಾರ ಮನೆ ಸುತ್ತ ಮೂರಡಿ ಜಾಗ ಬಿಡಬೇಕಾದ್ದರಿಂದ,ಮನೆ ಹಿಂಬದಿಯಲ್ಲೂ ಜಾಗ ಬಿಟ್ಟು ಅಲ್ಲೂ ಕಬ್ಬಿಣದ ಜಾಲರಿಯಿಂದ ಬಂದೋಬಸ್ತ್ ಮಾಡಿ ಕೊಂಡಿದ್ದೇವೆ.ಆದರೆ ಮನೆ ಹಿಂದಕ್ಕೆ ಹೋಗಬೇಕಾದರೆ ಯುಟಿಲಿಟಿಯಲ್ಲಿರುವ ಟಾಯ್ಲೆಟ್ ಮೂಲಕವೇ ಹೋಗಬೇಕು.ಹಾಗಾಗಿ ಆ ಟಾಯ್ಲೆಟ್ ಗೆ ಎರಡು ಬಾಗಿಲಿವೆ. ಹಿಂಬದಿಯ ಕಬ್ಬಿಣದ ಜಾಲರಿ ತೆಗೆದರೆ ಸಲೀಸಾಗಿ ಟಾಯ್ಲೆಟ್ ಮೂಲಕ ಒಳಬಂದು ನಮ್ಮ ಮನೆಯ ಯುಟಿಲಿಟಿಗೆ ತೆರೆದುಕೊಳ್ಳುವ ಬಾಗಿಲಿನ ಮೂಲಕ ನುಗ್ಗಬಹುದು.ಹಾಗಾದ್ರೆ ಈ ಸಮಸ್ಯೆಗೆ ಏನು ಮಾಡೋದು ಅನ್ನೋ ಇನ್ನೊಂದು ಚಿಂತೆ ಬಿಡದೆ ಕಾಡ ಹತ್ತಿತು.
ನನಗೆ ಏನೇ ಸಮಸ್ಯೆ ಎದುರಾದರೂ ನಾನು ಮೊದಲು ಸಂಪರ್ಕಿಸುವ ವ್ಯಕ್ತಿ ನನ್ನ ಜೀವದ ಗೆಳತಿ.ಅವಳೋ ದಿನವೂ ಫೇಸ್ ಬುಕ್ಕು, ವಾಟ್ಸ್ಯಾಪ್ಪು,ಟಿವಿ,ಪೇಪರ್ರು ಅಂತೆಲ್ಲ ನೋಡಿಕೊಂಡು,ಓದಿಕೊಂಡು ತಾನು ಪಡೆಯುವ ಜ್ಞಾನವನ್ನೆಲ್ಲ ಅದೇನೂ ಮಾಡದ ನನ್ನಂತಹ ಸೋಂಬೇರಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹಂಚುವ ಕರುಣಾಮಯಿ,ದಯಾಮಯಿ. ಅದೂ ಅಲ್ಲದೆ ನನ್ನೆಲ್ಲಾ ಆತಂಕ,ಭ್ರಮೆಗಳು ಬಹಳಷ್ಟು ಬಾರಿ ಒಂಚೂರೂ ವ್ಯತ್ಯಾಸವಿಲ್ಲದೆ,ರೇಖಾಗಣಿತದ ಸರ್ವಸಮತೆಯಂತೆ ಅವಳದೂ ಆಗಿರುವುದು ನನಗೆ ದೇವರು ಕೊಟ್ಟ ವರವೇ ಬಿಡಿ.ಇಲ್ಲದಿದ್ದರೆ ನನ್ನನ್ನೂ,ನನ್ನ ಸಮಸ್ಯೆಯನ್ನೂ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕ ಪರಿಹಾರೋಪಾಯಗಳನ್ನು ನೀಡುವ ಜೀವಿ ಅನ್ಯಗ್ರಹ ಯಾವುದಾದರೂ ಒಂದರಿಂದ ಬರಬೇಕಷ್ಟೆ.
ಈ ಕಳ್ಳನನ್ನು ಎದುರಿಸುವ ಉಪಾಯಗಳಿಗೂ ನಾನು ಅವಳ ಮೊರೆ ಹೊಕ್ಕೆ.ದೂರದ ಊರಲ್ಲಿದ್ದರೂ ತಂತ್ರಜ್ಞಾನದ ಮಹಿಮೆಯಿಂದಾಗಿ ವಿಡಿಯೋ ಕಾಲ್ ಗಳ ಮೂಲಕ ಅವಳು ಯಾವಾಗಲೂ ನನಗೆ ಹತ್ತಿರವೇ.ನನಗೆ ಎದುರಾಗಿರುವ ಸಮಸ್ಯೆಯನ್ನು ಗಹನವಾಗಿ ಆಲಿಸಿದ ಅವಳು ಬಹಳ ವಿಚಾರ ಮಂಥನದ ಬಳಿಕ ಒಂದು ಅಮೂಲ್ಯ ಸಲಹೆಯೊಂದನ್ನು ದಯಪಾಲಿಸಿದಳು.” ನೋಡೇ ನಿಮ್ಮನೆ ಯುಟಿಲಿಟಿ ಬಾಗಿಲಿಗೆ ಹತ್ತಿದ ಹಾಗೆ ಒಳಗಡೆಯಿಂದ ಒಂದು ಉದ್ದನೆಯ ಸ್ಟೀಲ್ ಪಾತ್ರೆ ಯಾವುದಾದರೂ ಒಂದನ್ನು ಇಟ್ಟು ಬಿಡು. ಕಳ್ಳ ಏನಾದ್ರೂ ಬಾಗಿಲು ನೂಕಿದರೆ ಅದು ಡಣ್ ಎಂದು ಬಿದ್ದು ದೊಡ್ಡ ಶಬ್ದ ಮಾಡಿದಾಗ ನಿನ್ನ ಗಂಡನಿಗೇನು ಇಡೀ ಏರಿಯಾಗೆ ಗೊತ್ತಾಗುತ್ತೆ.” ಎಂದು ಸಲಹೆ ನೀಡಿ ಪುಣ್ಯ ಕಟ್ಟಿಕೊಂಡಳು.
“ಅರೆ ವಾಹ್ ಎಂಥಾ ಸುಲಭದ ಸೂಪರ್ ಐಡಿಯಾ” ಎಂದು ನಾನು ಆ ದಿನ ರಾತ್ರಿಯೇ ಒಂದು ಉದ್ದನೆ ಕುಡಿಯುವ ನೀರಿನ ಲೋಟ ಬಾಗಿಲ ಹತ್ತಿರ ಇಟ್ಟು,ಒಂದೆರಡು ಬಾರಿ ಬಾಗಿಲು ತಳ್ಳಿ ನೂಕಿ ಡಣ್ಡಣ್ ಶಬ್ದಕ್ಕೆ ಬೀಗಿ ನಂತರ ಬಾಗಿಲಿನ ಚಿಲಕಗಳ ಬಿಗಿಯಾಗಿ ಹಾಕಿ ಮಲಗಲು ಹೋದೆ.ನನ್ನ ಉಪಾಯವನ್ನು ನೋಡಿ ಬೆಕ್ಕಸ ಬೆರಗಾದ ನನ್ನ ಗಂಡ ಮಕ್ಕಳು ಅಳಲೂ ತೋಚದೆ ನಗಲೂ ಆಗದೆ “ದೇವಾ ಕಳ್ಳನಿರಲಿ ಇವಳ ಭಯಂಕರ ಉಪಾಯಗಳಿಂದ ಈ ಮನೆಯನ್ನು ಕಾಪಾಡು” ಎಂದು ಪ್ರಾರ್ಥಿಸುತ್ತಾ ಮಲಗಲು ಹೋದರು.
ನಾನು ಮಲಗಿ ಇನ್ನೇನು ಕಣ್ಣಿಗೆ ಒಂಚೂರು ನಿದ್ದೆ ಹತ್ತಿಲ್ಲ ಆಗಲೇ ಡಣ್ಡಣ್ ಶಬ್ದ ಮೊಳಗಬೇಕೆ! ನನಗೆ ಜೀವ ಬಾಯಿಗೆ ಬಂದು ಪಕ್ಕದಲ್ಲಿ ಲೋಕಜ್ಞಾನವಿಲ್ಲದೆ ಮಲಗಿ ಗೊರಕೆ ಹೊಡೆಯುತ್ತಿದ್ದ ನನ್ನ ಪತಿದೇವರ ನಿದ್ರಾಭಂಗಗೊಳಿಸಿ “ಮನೆ ಕೊಳ್ಳೆ ಹೋದ್ರೂ ನಿಮ್ಮ ನಿದ್ದೆ ಮಾತ್ರ ಹೋಗಲ್ಲ” ಎಂದು ಗದರಿ ಒಂದೇ ಉಸಿರಿಗೆ ರೂಮಿನ ದೀಪ ಹಾಕಿ ಹಿತ್ತಲ ಬಾಗಿಲ ಕಡೆ ಓಡಿದೆ.ಅಲ್ಲಿ ಹೋಗಿ ನೋಡಿದರೆ ಕಂಡಿದ್ದೇನು! ಕತ್ತಲಲ್ಲಿ ಮೊಬೈಲ್ ನ ನೀಲಿ ಬೆಳಕನ್ನು ಆಚೆ ಈಚೆ ಆಡಿಸುತ್ತಾ ಹಲ್ಲು ಕಿರಿಯುತ್ತಾ ನಿಂತಿರುವ ನನ್ನ ಮಗ! ” ಲೋ ನಿಂಗೆನೋ ಆಯ್ತು!ಇದೇನೋ!?” ಎಂದು ನಾನು ಕಿರುಚಿದರೆ ಅವನು ಕೂಲಾಗಿ,” ನಿನ್ನ ಐಡಿಯಾ ವರ್ಕ್ ಆಗುತ್ತೋ ಇಲ್ವೋ ಅಂತ ನೋಡಲು ಬಂದೆ ಕಣಮ್ಮ,” ಎಂದಾಗ ಎದ್ದು ಬಂದಿದ್ದ ನನ್ನ ಗಂಡ ಮಗಳಿಬ್ಬರೂ ಹೊಟ್ಟೆ ಹಿಡಿದು ನಗಲಾರಂಭಿಸಿದರು.ನನಗೆ ಕೋಪ ಉಕ್ಕೇರಿ ಬಂತು.” ಏನೋ ಮನೆಯನ್ನು ಕಳ್ಳನಿಂದ ಕಾಪಾಡುವ ಅಂತ ನಾನು ಪರದಾಡಿದರೆ ನಿಮಗೆಲ್ಲಾ ಅಹಂಕಾರ,” ಎಂದು ಬೈದು ,” ಇನ್ನು ಇದು ಹುಲಿ ಬಂತು ಹುಲಿ ಕಥೆಯಾಗುತ್ತೆ ಅಷ್ಟೇ,” ಎಂದುಕೊಂಡು,ಆ ಲೋಟವನ್ನು ತೆಗೆದು ಸಿಂಕ್ ಗೆ ಎಸೆದು ಮಲಗಲು ಹೋದೆ.ಉಳಿದವರೂ ಮುಸಿ ಮುಸಿ ನಗುತ್ತಾ ಮಲಗಲು ಹೋದರು.
ಮಾರನೇ ದಿನ ನನ್ನ ಗೆಳತಿಗೆ ನನ್ನ ಫಲಿಸದ ಉಪಾಯ ಹೇಳಿದೆ.ಅವಳಿಗೂ ಚಿಂತೆಯಾಯಿತು.” ಇರೇ,ಬೇರೆ ಇನ್ಯಾವುದಾದರೂ ಐಡಿಯಾ ಮಾಡನ, ನನಗೊಂಚೂರು ಟೈಮ್ ಕೊಡು” ಎಂದು ಸಮಾಧಾನ ಮಾಡಿದಳು. ಒಂಚೂರು ಟೈಮ್ ಅಂದ್ರೆ ಎರಡೇ ನಿಮಿಷ ,ಮತ್ತೆ ಅವಳ ಫೋನ್ ಬಂತು.” ನೋಡೇ ಇನ್ನೊಂದು ಕೆಲಸ ಮಾಡು,ನಿಮ್ಮ ಮನೆ ಹೊರಗಡೆ ಟಾಯ್ಲೆಟ್ ಇದೆಯಲ್ಲ ಅದರ ಹಿಂದುಗಡೆ ಡೋರ್ ಗೆ ಒಂದು ಗಂಟೆ ಕಟ್ಟಿ ಬಿಡು,ಆ ಬಾಗಿಲು ಮುರಿಯಲು ಹೋದರೆ ಸಾಕು ಚೆನ್ನಾಗಿ ಶಬ್ದ ಆಗುತ್ತೆ,” ಅಂತ ಅವಳ ಮೊದಲ ಐಡಿಯಾದ ಒಂದು ಇಂಪ್ರೂವ್ಡ್ ವರ್ಷನ್ ಬಿಸಾಡಿದಳು.” ನೋಡುವ ಇದನ್ನೂ ಮಾಡುವ,ಮನೆಯಲ್ಲಿ ಯಾರಿಗೂ ಹೇಳದಿದ್ದರೆ ಸಾಕು” ಅಂದುಕೊಂಡು,ಟಾಯ್ಲೆಟ್ ಬಾಗಿಲ ಮೇಲೆ ಮೊಳೆ ಹೊಡೆದು ಒಂದು ಚಿಕ್ಕ ಗಂಟೆಯನ್ನು ಒಂದು ತುಂಡನೆಯ ದಾರದ ಸಹಾಯದಿಂದ ತೂಗುಬಿಟ್ಟೆ.
ಒಂದೆರಡು ದಿನ ಏನೂ ಆಗಲಿಲ್ಲ.ಆಮೇಲೆ ಒಂದಿನ ರಾತ್ರಿ ಇನ್ನೂ ನಾವ್ಯಾರೂ ಮಲಗಿಯೇ ಇಲ್ಲ ಆಗಲೇ ಗಂಟೆ ಕಿಣಿ ಕಿಣಿ ಕಿಣಿ ಎನ್ನಲು ಶುರು ಮಾಡಿತು. ಓಡಿ ಹೋಗಿ ನೋಡಿದರೆ ಹೆಗ್ಗಣವೊಂದು ಗಂಟೆಯ ದಾರವನ್ನು ಹಿಡಿದು ನೇತಾಡಿಕೊಂಡು ಪರದಾಡುತ್ತಿದೆ! ಕಳ್ಳನನ್ನು ನೋಡಿದ್ದರೂ ಅಷ್ಟು ಭಯವಾಗುತ್ತಿರಲಿಲ್ಲವೇನೋ! ಹೆಗ್ಗಣ ನೋಡಿ ಮೈಯೆಲ್ಲಾ ಬೆವರಿ ಕಿರುಚಿಕೊಂಡು ಓಡಿ ಬಂದೆ.ನನ್ನ ಗಂಡ ಒಂದು ಕೋಲು ಹಿಡಿದು ಆ ಹೆಗ್ಗಣವನ್ನು ಬೆರೆಸಿ ಓಡಿಸಿ,ಆ ಘಂಟೆಯನ್ನೂ ಕಿತ್ತು ಹಾಕಿದರು.” ನೋಡೇ ಆ ಕಳ್ಳ ಬಂದ್ರೆ ಬಂದ,ನಮ್ಮ ಮನೆ ಸೂರೆ ಹೋದ್ರೂ ಹೋಯ್ತು, ಆದ್ರೆ ನಿನ್ನ ಈ ಕೆಟ್ಟ ಐಡಿಯಾಗಳನ್ನ ಮಾತ್ರ ತಡೆಯೋಕೆ ಆಗ್ತಾ ಇಲ್ಲ.ಥತ್,” ಎಂದು ಬೈದಾಗ ನೋಡುತ್ತಿದ್ದ ನನ್ನ ಮಕ್ಕಳಿಬ್ಬರಿಗೂ ನಗುವೋ ನಗು.”ಛೆ ಈ ಶಬ್ದ ಮಾಡೋ ಐಡಿಯಾಕ್ಕಿಂತ ಬೇರೆ ಏನಾದ್ರೂ ಹುಡುಕಿದ್ರಾಯ್ತು.ಬೇಸಿಗೆ ರಜೆಗೆ ಈ ಬಾರಿ ಎಲ್ಲೂ ಹೋಗ್ಬಾರ್ದು, ಇನ್ನು ಮುಂದೆ ಯಾರಲ್ಲೂ ಸಲಹೆ ಮಾತ್ರ ಏನೂ ಕೇಳ್ಬಾರ್ದು.” ಅಂತ ನಿಶ್ಚಯಿಸಿಕೊಂಡೆ.
ಬೇಸಿಗೆ ರಜೆಗೆ ತವರಿಗೆ ಹೋಗುವುದನ್ನು ಬಿಟ್ಟು ಕೊಟ್ಟರೂ ಹತ್ತಿರದ ಬಂಧುಗಳ ಮನೆಯ ಒಂದು ಮದುವೆಗೆ ಹೋಗಲೇಬೇಕಾಗಿ ಬಂತು. ಮನೆಯಲ್ಲಿದ್ದಾಗಲೇ ಕಳ್ಳನ ಭಯ ಅಷ್ಟೊಂದು,ಇನ್ನ ಮನೆಯಿಂದ ಹೊರಗೆ ಹೋಗಬೇಕಾದರೆ ಇನ್ನೆಷ್ಟು ಗಾಬರಿಯಾಗಬೇಡ ನನಗೆ!ನನ್ನ ತಲೆಹರಟೆ ಮಕ್ಕಳು,” ಅಮ್ಮ ಗಾಬರಿಯಾಗಬೇಡ,ಮದುವೆಗೆ ಒಂದು ಸೀರೆ ಕಮ್ಮಿ ತೊಗೊ,ಆ ದುಡ್ಡಲ್ಲಿ ಮನೆಯ ಹಿಂದಿನ,ಮುಂದಿನ ಬಾಗಿಲಿಗೆಲ್ಲಾ ಸಿಸಿ ಟಿವಿ ಕ್ಯಾಮೆರಾ ಹಾಕಿಸಬಹುದು,” ಎಂದು ಹಲ್ಲು ಕಿರಿಯುತ್ತಾ ಮನೆಹಾಳು ಐಡಿಯಾ ವೊಂದನ್ನು ಕೊಟ್ಟರು.” ಇಲ್ದೇ ಹೋದ್ರೆ ಹೊಸ ಲೇಸರ್ ಟೆಕ್ನಾಲಜಿ ಬರ್ಗ್ಲಾರ್ ಅಲಾರ್ಮ್ ಹಾಕಿಸಿಬಿಡು” ಎಂದು ನನ್ನ ಗಂಡ ಬೇರೆ ಕಾಲೆಳೆದರು.ಅವರಿಗೆ ಗೊತ್ತು ದುಡ್ಡು ಖರ್ಚು ಮಾಡುವ ವಿಷಯದಲ್ಲಿ ಸೀರೆಗಳಿಗೆ ನಾನು ಕೈ ಮುಂದೆ ಮಾಡುವಷ್ಟು ಇತರೆ ಖರ್ಚುಗಳಿಗೆ ಮಾಡುವುದಿಲ್ಲವೆಂದು.
‘ದುಷ್ಮನ್ ಕಹಾಂ ಹೈ ಅಂದ್ರೆ ಬಗಲ್ ಮೆ’ ಅನ್ನುವ ಹಾಗೆ ನನ್ನ ಸೀರೆ ಪ್ರೇಮದ ವೈರಿಗಳು ನನ್ನ ಗಂಡ ಮಕ್ಕಳೇ ಆಗಿಬಿಟ್ಟಿದ್ದಾರೆ.ಯಾವುದೇ ಹೊಸ ಖರ್ಚಿನ ಸಂದರ್ಭ ಬಂದರೂ ಅವರ ಕಣ್ಣು ಬೀಳೋದು ನನ್ನ ಸೀರೆ ಕೊಳ್ಳುಬಾಕತನದ ಮೇಲೆಯೇ. ನಾನೂ ಕೂಡ ನನ್ನ ಸಕಲ ವಾಕ್ ಚಾತುರ್ಯದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ನನ್ನ ಸೀರೆ ಖಜಾನೆಯನ್ನು ಕಾಪಾಡಿಕೊಂಡು ಬರುತ್ತಿದ್ದೇನೆ.ಅಂತಹದರಲ್ಲಿ ಒಬ್ಬ ಚಿಲ್ರೆ,ಇನ್ನೂ ಬಾರದ, ಕಳ್ಳನಿಗಾಗಿ ಮದುವೆಯಲ್ಲಿ ಹೊಚ್ಚ ಹೊಸ ಸೀರೆಯುಟ್ಟು ಮೆರೆಯುವ ನನ್ನ ಸಂಭ್ರಮವನ್ನು ಅಷ್ಟು ಸುಲಭದಲ್ಲಿ ಬಲಿ ಕೊಟ್ಟು ಬಿಡುವೆನೆ! ಹಾಗಾಗಿ ನನ್ನ ಗಂಡ ಮಕ್ಕಳಿಬ್ಬರಿಗೂ “ಸಿಸಿ ಟಿವಿ ಕ್ಯಾಮೆರಾ ಕಳ್ಳ ಬಂದು ಹೋದ ಮೇಲೆ ಪ್ರಯೋಜನಕ್ಕೆ ಬರೋದು.ಮುಂಚೆಯೇ ಬರದ ಹಾಗೆ ಮುನ್ನೆಚ್ಚರಿಕೆಯಾಗಿ ಏನಾದ್ರೂ ಹೇಳ್ರಿ ಅಂದ್ರೆ ಬರೀ ತಲೆಹರಟೆ ಹೇಳ್ತೀರಾ,ಲೇಸರ್ ಟೆಕ್ನಾಲಜಿ ಅಲಾರ್ಮ್ ಹಾಕ್ಸಕೆ ಇದೇನು ಮನೆಯಾ, ಬ್ಯಾಂಕಾ?” ಅಂತ ಬೈದು ಗಂಡ ಮಕ್ಕಳಿಬ್ಬರ ಬಾಯಿ ಮುಚ್ಚಿಸಿದೆ.
ನಂತರ ಗಂಡ ಮಕ್ಕಳಿಗೆ ಯಾವ ಕಾರಣಕ್ಕೂ ನನ್ನ ಯಾವುದೇ ಉಪಾಯವನ್ನು ಹೇಳಬಾರದೆಂದು ಶಪಥ ಮಾಡಿಕೊಂಡು”ಛೆ ಎರಡೇ ದಿನ ಅಲ್ವಾ ಮದುವೆಗೆ ಹೋಗಿ ಬರೋದು,ಹೆಂಗಿದ್ರು ಎದುರು ಮನೆಯವರಿಗೆ ನಮ್ಮನೆ ಯುಟಿಲಿಟಿ ಬಾಗಿಲು ಕಾಣಿಸುತ್ತೆ, ಅವರಿಗೇ ನಮ್ಮನೆ ಕಡೆ ಒಂದು ಕಣ್ಣಿಡಿ ಎಂದರಾಯ್ತು.” ಎಂದುಕೊಂಡೆ.ಆದರೆ ಯುಟಿಲಿಟಿ ಬಾಗಿಲು ತೆರೆದು ಎದುರುಮನೆ ಕಡೆ ನೋಡಿದರೆ ಎದಿರುಮನೆ ಎಲ್ಲಿ ಕಾಣುತ್ತಿದೆ! ನಮ್ಮನೆ ರಸ್ತೆಯ ಇಕ್ಕೆಲಗಳಲ್ಲಿ ನಾನೂ ನನ್ನ ಎದಿರುಮನೆ ಗೆಳತಿಯೂ ಕರೋನ ಕಾಲದಲ್ಲಿನೆ ಟ್ಟಿದ್ದ ಹೊಂಗೆ ಗಿಡಗಳು ಸೊಕ್ಕಿ ಬೆಳೆದು ಎದಿರುಮನೆ ಕಾಣ್ತನೇ ಇಲ್ಲ!
ಅದು ಏನಾಯ್ತಪ್ಪ ಅಂದ್ರೆ, ಕರೋನಾದಲ್ಲಿ ಹೆಂಗಿದ್ರೂ ಶಾಲಾಕಾಲೇಜಿಗೆ ರಜ ಇತ್ತು.ಲಾಕ್ ಡೌನ್ ಅಂತ ಒಂದೆರಡು ತಿಂಗಳು ಮನೆಯೊಳಗೇ ಇದ್ದು ಇದ್ದು ತಲೆ ಚಿಟ್ಟು ಹಿಡಿದು ಹೋಗಿತ್ತು.ಹೆಂಗೋ ಅಂತರ ಕಾಪಾಡಿಕೊಂಡು ನಾನೂ ಎದುರು ಮನೆಯವರು ಇಬ್ಬರೂ ಸಂಜೆ ಹೊತ್ತು ಮನೇ ಸುತ್ತಲೇ ನಾಲ್ಕೈದು ರೌಂಡು ವಾಕ್ ಮಾಡಿಕೊಂಡು ಇದ್ದೋ.ಆಗ ಒಂದಿನ ಒಂದು ಚರಂಡಿ ಪಕ್ಕದಲ್ಲಿ ಸೊಂಪಾಗಿ ಬೆಳೆದಿದ್ದ ಹೊಂಗೆಮರದ ಬುಡದಲ್ಲಿ ಬೆಳೆದಿದ್ದ ಹೊಂಗೆ ಸಸಿಗಳು ಕಣ್ಣಿಗೆ ಬಿದ್ದಾಗ ನಮ್ಮೊಳಗಿನ ಪರಿಸರ ಪ್ರೇಮ ಜಾಗೃತವಾಗಿ ಬಿಟ್ಟಿತು.ತೊಗೊ ಇರೋ ಬರೋ ಸಸಿಗಳನ್ನೆಲ್ಲ ಕಿತ್ತು ತಂದು,ನಮ್ಮ ಮನೆ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ಗುಣಿ ತೋಡಿ, ಒಂದು ಗುಣಿಗೆ ಎರಡು ಮೂರರಂತೆ ಸಸಿ ನೆಟ್ಟು ,” ಭಲಾ, ಈ ಆತಂಕದ ಹೊತ್ತಿನಲ್ಲೂ ನಾವು ಇಷ್ಟೊಂದು ಜೀವನ ಪ್ರೀತಿಯಲ್ಲಿ ಬದುಕುತ್ತಾ ಇದ್ದೀವಲ್ಲ,ಶಭಾಷ್,” ಎಂದು ಒಬ್ಬರ ಬೆನ್ನು ಒಬ್ಬರು ತಟ್ಟಿಕೊಂಡು,ನಂತರ ಕೈ ತೊಳೆದುಕೊಂಡು ಬೀಗಿದ್ದೆವು.ಆದರೆ ಆ ಖುಷಿಯೆಲ್ಲಾ ಸೊಕ್ಕಿ ಬೆಳೆದು ಒಬ್ಬರ ಮನೆ ಒಬ್ಬರಿಗೆ ಕಾಣದಂತೆ ಮಾಡಿರುವ ಹೊಂಗೆಮರಗಳ ನೋಡಿ ಗಾಳಿಗೆ ತೆರೆದಿಟ್ಟ ಪೆಟ್ರೋಲ್ ನಂತೆ ಒಂದೇ ಕ್ಷಣಕ್ಕೆ ಆರಿ ಹೋಯಿತು.
“ಛೆ ಎದುರು ಮನೆಯವರಿಗೆ ನಮ್ಮನೆ ಕಾಣೋದೇ ಇಲ್ಲ, ಇನ್ನು ನೋಡೋದೇನು ಬಂತು, ಈ ಕಡೆ ಪಕ್ಕದ ಮನೆಯವರಿಗೆ ಹೇಳಿ ಹೋದರಾಯಿತು,” ಎಂದುಕೊಂಡು ಪಕ್ಕದ ಮನೆಯವರಿಗೆ,” ಅಕ್ಕ ಒಂಚೂರು ನಮ್ಮ ಮನೆ ಕಡೆ ಗಮನ ಇರಲಿ,” ಎಂದು ಹೇಳಿ ಬಂದೆ.ಆದರೂ ನನ್ನ ಮನಸ್ಸಿಗೆ ಸಮಾಧಾನವಿಲ್ಲ.” ರಾತ್ರೆ ಹೊತ್ತು ಯಾರನ್ನಾದರೂ ಮನೆಯಲ್ಲಿ ಮಲಗಲು ಹೇಳುವ,” ಎಂದು ನನ್ನ ಗಂಡನನ್ನು ಕಾಡಿಸತೊಡಗಿದೆ.ನನ್ನ ಪರದಾಟವನ್ನೆಲ್ಲಾ ನೋಡುತ್ತಿದ್ದ ನನ್ನ ಮಗ ತಡೆಯಲಾರದೆ ನನ್ನನ್ನು ಎಳೆದುಕೊಂಡು ಹೋಗಿ ಒಂದು ಕಡೆ ಕೂರಿಸಿ ಹೇಳಿದ.” ನೋಡಮ್ಮ ನಿಜಕ್ಕೂ ಕಳ್ಳ ಬಂದು ನಮ್ಮ ಮನೆಯಲ್ಲಿ ಏನಾದ್ರೂ ತೊಗೊಂಡು ಹೋಗಿದ್ರೂ ನೀನು ಇಷ್ಟು ಪರದಾಡುತ್ತಿರಲಿಲ್ಲವೇನೋ,we suffer more in our imagination than in real ಅಂತ ಯಾರೋ ಪುಣ್ಯಾತ್ಮ ಹೇಳಿದ್ದಾನೆ.ಮೊದಲು ಹಿಂಗೆಲ್ಲಾ ಹೆದರಿಕೊಳ್ಳೋದು ಬಿಡು. ಹಿಂದೆಗಡೆ ಮನೇಲಿ ಯಾರೂ ಇಲ್ಲ ಅಂದುಕೊಂಡು ಕಳ್ಳ ನುಗ್ಗಿದೋನು ಆ ಅಜ್ಜಿ ನೋಡಿ ಅವನೂ ಹೆದರಿಕೊಂಡು ಓಡಿ ಹೋಗಿಲ್ವಾ?ಪೊಲೀಸಿನವರು ಕೂಡ ನಮ್ಮ ಏರಿಯಾದಲ್ಲಿ ಗಸ್ತು ಜಾಸ್ತಿ ಮಾಡಿದ್ದಾರೆ.ಒಂದು ಮನೆಗೆ ನುಗ್ಗೋದು ಅಂದ್ರೆ ಅಷ್ಟು ಸುಲಭವಲ್ಲ, ಅದೂ ಅಲ್ದೆ ನಮ್ಮನೇಲಿ ಅಂತ ಬೆಲೆಬಾಳುವ ಒಡವೆ ಏನಿದೆ ಹೇಳು,ಏನಾದ್ರೂ ಇದ್ರೆ ಅದು ನೀನೇ! ನಿನ್ನ ಏನಾದ್ರೂ ಕಳ್ಳ ಎತ್ತಿಕೊಂಡು ಹೋದ್ರೆ ” ಕಾಪಾಡಿ ಕಾಪಾಡಿ” ಅಂತ ಕೂಗಿಕೊಂಡು ಅವನೇ ಮಾರನೇ ದಿನಕ್ಕೇ ತಂದು ಬಿಟ್ಟು ಹೋಗ್ತಾನೆ ಅಷ್ಟೇ,ಸುಮ್ಮನೆ ಧೈರ್ಯವಾಗಿರು,” ಎಂದು ಹಲ್ಲು ಕಿರಿದಾಗ ನನಗೂ ನಗು ಬಂದು ಸುಮ್ಮನಾದೆ.
ನಂತರ ಸುಮ್ಮನೆ ಕುಳಿತು ಯೋಚಿಸಿದಾಗ ಮಗನ ಮಾತು ಎಷ್ಟು ನಿಜ ಅಲ್ವಾ ಅಂತ ಅನ್ನಿಸಿತು.ಧೈರ್ಯವಾಗಿ ಆ ದಿನದ ಜಂಜಾಟಗಳ ಅವು ಬಂದ ಹಾಗೇ ಎದುರಿಸುವುದು ಬಿಟ್ಟು ಇಲ್ಲದ ಭ್ರಮೆಗಳಲ್ಲಿ ಸಿಲುಕಿ ಎಷ್ಟು ನರಳಿದೆನಲ್ಲ ಅನ್ನಿಸಿ ಬೇಸರವಾಯಿತು.ನಂತರ ಆ ಕಳ್ಳನ ಕೀಟವನ್ನು ತಲೆಯಿಂದ ತೆಗೆದು ಹಾಕಿ,ಮದುವೆ ಸಂಭ್ರಮದಲ್ಲಿ ಚೆನ್ನಾಗಿ ಪಾಲ್ಗೊಂಡೆ.ಮದುವೆಯಿಂದ ಬಂದ ಬಳಿಕ ಇದ್ದ ಚಿನ್ನ ಗಿನ್ನ ಎಲ್ಲವನ್ನೂ ಬ್ಯಾಂಕ್ ಲಾಕರ್ ಗೆ ಹಾಕಿ,ಕಳ್ಳನ ಚಿಂತೆಯ ಭಾರವನ್ನೆಲ್ಲ ದೇವರ ಮೇಲೂ,ಆ ಬ್ಯಾಂಕ್ ಮ್ಯಾನೇಜರ್ ತಲೆ ಮೇಲೂ ಹಾಕಿ ನೆಮ್ಮದಿಯಿಂದ ರಾತ್ರಿ ಹೊತ್ತು ಮಲಗಿ ನಿದ್ರಿಸುತ್ತಿದ್ದೇನೆ.
– ಸಮತಾ ಆರ್
ಕಳ್ಳತನದ ಭಯದಲ್ಲಿ…ಲೇಖನ ಹಾಸ್ಯದ ತೆಳು ಲೇಪನ ಹೊಂದಿ..ಸೊಗಸಾಗಿ ಅಭಿವ್ಯಕ್ತಿಗೊಂಡಿದೆ ಹಾಗೇ ಮಗನ..ಆಲೋಚನಾ ಲಹರಿ,ವಾಸ್ತವವಾಗಿ ಚಿಂತನೆ… ಚೆನ್ನಾಗಿದೆ… ಮೇಡಂ..
ಕಳ್ಳತನದ ಭಯದಲ್ಲಿ ಮೂಡಿಬಂದಿರುವ ಲೇಖನ ಸೊಗಸಾಗಿದೆ
ತುಂಬಾ ಚೆನ್ನಾಗಿದೆ ಓದಿಸಿಕೊಂಡು ಹೋಗುತ್ತದೆ .ಈಗ ನಾವು ಎದುರಿಸುವ ತೊಳಲಾಟಗಳೇ ಕಣ್ಣಿಗೆ ಕಟ್ಟುವಂತಿದೆ. ಚೆನ್ನಾಗಿದೆ ಮೇಡಂ
ಹ್ಹ… ಹ್ಹ.. ಹ್ಹ… ಮಸ್ತ್
ಅಬ್ಬ, ಕಳ್ಳನ ಭಯದ ಹುಳುವನ್ನು ನಮ್ಮ ತಲೆಗೂ ಬಿಟ್ಟು, ನೀವೇ ಅದನ್ನು ನಿವಾರಿಸಿದ್ದು ಚಂದವೆನಿಸಿತು. ಮುದ ನೀಡಿತು.
ಕಳ್ಳನ ಭಯದಲ್ಲಿ ಆದ ಆತಂಕಗಳನ್ನೆಲ್ಲಾ ಕರಗಿಸಿದ ನಿಮ್ಮ ಮಗರಾಯನಿಗೆ ಶಾಭಾಶ್ ಎನ್ನಲೇಬೇಕು! ತಿಳಿಹಾಸ್ಯ ಮಿಶ್ರಿತ ಬರಹ ಖುಷಿಕೊಟ್ಟಿತು.
ತುಂಬಾ ಚೆನ್ನಾಗಿ ಬರೆದಿದ್ದೀರ ಸಮತ madam ಇದು ಪ್ರತಿ ಗೃಹಿಣಿಯ ಆಲೋಚನೆ ಅದನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಅಕ್ಷರ ರೂಪಕ್ಕೀಳಿಸಿದ್ದಿರಿ
ಸರಳ ಸುಂದರ ಲೇಖನ ಸಮತ
ಎಂದಿನಂತೆ ನಗು ತರಿಸುವ ಬರೆಹ ಸಮತಾ..
Very nice.. Samath..