ಗೋಪುರಗಳ ನಾಡಿನಲ್ಲಿ…ಹೆಜ್ಜೆ 3
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಜಟಾಯು ನೇಚರ್ ಪಾರ್ಕ್, ಕೊಲ್ಲಂ ಜಿಲ್ಲೆ
ಅನಂತ ಪದ್ಮನಾಭನ ದರ್ಶನದ ನಂತರ ನಮ್ಮ ಪ್ರಯಾಣ ಕೊಲ್ಲಂ ಜಿಲ್ಲೆಯತ್ತ ಮುಂದುವರಿಯಿತು.ಎಂದಿನಂತೆ ಟ್ರಾವೆಲ್ಸ್4ಯು ತಂಡದ ಟೂರ್ ವ್ಯವಸ್ಥಾಪಕರು ನಮಗೆ ಪುಷ್ಕಳವಾದ ಸಸ್ಯಾಹಾರ ಊಟೋಪಚಾರವನ್ನು ಸೂಕ್ತವಾಗಿ ಒದಗಿಸಿದರು. ದಾರಿಯಲ್ಲಿ ಒಂದೆಡೆ ಬಸ್ಸನ್ನು ನಿಲ್ಲಿಸಿ ಎಳನೀರನ್ನೂ ಕೊಡಿಸಿದರು. ತೆಂಗಿನ ನಾಡಿಗೆ ಹೋದ ಮೇಲೆ ‘ನಾರಿಕೇಳ’ಕ್ಕೆ ಗೌರವ ಸಲ್ಲಿಸಬೇಡವೇ? ನಮ್ಮ ಎರಡು ಬಸ್ಸುಗಳ ಜನರು ಬಂದಾಗ, ಮಾರ್ಗದ ಬದಿಯಲ್ಲಿದ್ದ ವ್ಯಾಪಾರಿ ನೇತು ಹಾಕಿದ್ದ ಎಳನೀರಿನ ಗೊನೆಗಳು ಖಾಲಿಯಾದುವು. ನಮ್ಮ ಬಸ್ಸಿನಲ್ಲಿದ್ದ ಸಹಯಾತ್ರಿಯೊಬ್ಬರು ‘ಕೋಟಿ ಚೆನ್ನಯ್ಯ’ ತುಳು ಚಲನಚಿತ್ರದ ‘ಮಲ್ಲ ಮಲ್ಲ ಬೊಂಡ, ದೆತ್ತುತು ಕೆತ್ತುತು ಕೊರುಲೆಯಾ..’ ಎಂಬ ತುಳು ಭಾಷೆಯ ಹಾಡನ್ನು ಸಾಂದರ್ಭಿಕವಾಗಿ ನೆನಪಿಸಿ ಎಲ್ಲರನ್ನೂ ರಂಜಿಸಿದರು. ಆಮೇಲೆ ಹೋಟೆಲ್ ‘ಹಿಲ್ ವೇ ಪಾರ್ಕ್’ ಎಂಬಲ್ಲಿ, ತೊರನ್ (ಪಲ್ಯ), ಓಲನ್ (ಗ್ರೇವಿ), ಪೆರಕ್ (ಸಾಸಿವೆ) ಇತ್ಯಾದಿ ಹಲವಾರು ಕೇರಳ ಶೈಲಿಯ ಅಡುಗೆಗಳಿದ್ದ ರುಚಿಕಟ್ಟಾದ ಥಾಲಿ ಊಟ ಉಂಡೆವು.
ಜಟಾಯು ನೇಚರ್ ಪಾರ್ಕ್ ಅಥವಾ ಜಟಾಯು ರಾಕ್ ಎಂದೂ ಕರೆಯಲ್ಪಡುವ ಜಟಾಯು ಅರ್ಥ್ ಸೆಂಟರ್ ಕೇರಳದ ಕೊಲ್ಲಂ ಜಿಲ್ಲೆಯ ಚಡಯಮಂಗಲಂನಲ್ಲಿರುವ ಉದ್ಯಾನವನ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿದೆ. ಇದು ಕೊಲ್ಲಂ ನಗರದಿಂದ ಸುಮಾರು 38 ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 1200 ಅಡಿ ಎತ್ತರದಲ್ಲಿರುವ ಜಟಾಯು ನೇಚರ್ ಪಾರ್ಕ್ ಪ್ರಪಂಚದ ಅತಿ ದೊಡ್ಡ ಪಕ್ಷಿ ಶಿಲ್ಪವಾಗಿದ್ದು, 200 ಅಡಿ ಉದ್ದ, 150 ಅಡಿ ಅಗಲ, 70 ಅಡಿ ಎತ್ತರವಾಗಿದೆ. ಶ್ರೀ ರಾಜೀವ್ ಅಂಚಲ್ ಎಂಬವರು ಈ ಪಕ್ಷಿಶಿಲ್ಪದ ರೂವಾರಿ.
ರಾಮಾಯಣದ ಕಥೆಯ ಪ್ರಕಾರ, ರಾವಣನು ಸೀತೆಯನ್ನು ಲಂಕೆಗೆ ಅಪಹರಿಸಿ ಒಯ್ಯುತ್ತಿರುವಾಗ, ದಶರಥ ಮಹಾರಾಜನ ಸ್ನೇಹಿತನಾದ ಜಟಾಯುವು ಸೀತೆಯ ಆರ್ತನಾದವನ್ನು ಕೇಳಿ, ಅವಳನ್ನು ಕಾಪಾಡಲು ರಾವಣನೊಂದಿಗೆ ಹೋರಾಡಿದನು, ಆದರೆ ಜಟಾಯುವು ವಯಸ್ಸಾದ ಪಕ್ಷಿಯಾಗಿದ್ದ ಕಾರಣ, ರಾವಣನೊಂದಿಗೆ ಸೆಣಸಲಾಗದೆ ಸೋತ. ರಾವಣನು ಜಟಾಯುವಿನ ಒಂದು ಭಾಗದ ರೆಕ್ಕೆಗಳನ್ನು ಕತ್ತರಿಸಿದನು. ಈ ಆಘಾತದ ನಂತರ ಜಟಾಯುವು ಬಂಡೆಗಳ ಮೇಲೆ ಬಿದ್ದ ಜಾಗವನ್ನು ಈಗ ‘ಚಡಯಮಂಗಲ’ ಎಂದು ಕರೆಯುತ್ತಾರೆ. ರಾಮ ಮತ್ತು ಲಕ್ಷ್ಮಣರು ಸೀತೆಯ ಹುಡುಕಾಟದಲ್ಲಿದ್ದಾಗ, ಸಾಯುವ ಸ್ಥಿತಿಯಲ್ಲಿದ್ದ ಜಟಾಯುವು, ಅವರಿಗೆ ಮತ್ತು ರಾವಣನು ಸೀತೆಯನ್ನು ಅಪಹರಿಸಿ ದಕ್ಷಿಣದ ಕಡೆಗೆ ಹೋಗಿದ್ದಾನೆ ಎಂದು ತಿಳಿಸಿ ಪ್ರಾಣ ಬಿಡುತ್ತಾನೆ. ಈ ಕಥೆಯ ಆಧಾರದ ಮೇಲೆ ರೂಪಿಸಲಾದ ಅದ್ಭುತವಾದ ಬೃಹತ್ ಶಿಲ್ಪವಿದು. ಈ ಪ್ರತಿಮೆಯು ರಾಮಾಯಣದ ಕಥೆಗೆ ಥಳಕು ಹಾಕಿರುವುದರ ಜೊತೆಗೆ ಮಹಿಳೆಯರ ರಕ್ಷಣೆ, ಗೌರವ ಮತ್ತು ಸುರಕ್ಷತೆಯನ್ನು ಸಂಕೇತಿಸುತ್ತದೆ. ಮಹಿಳಾ ಸುರಕ್ಷತೆ ಹಾಗೂ ಘನತೆಗಾಗಿ ತ್ರೇತಾಯುಗದಲ್ಲಿಯೇ ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಡಿದ ಮಹಾನ್ ಚೇತನ ಜಟಾಯು. ಈ ಚಿಂತನೆ, ಈ ಯುಗಕ್ಕೂ ಅನ್ವಯಿಸುತ್ತದೆ ಅಲ್ಲವೇ?
ಜಟಾಯುವಿನ ಶಿಲ್ಪವು ಇರುವ ತುದಿಯನ್ನು ತಲುಪಲು, ಅಂದಾಜು 800 ಮೆಟ್ಟಿಲುಗಳುಳ್ಳ ಕಾಲುದಾರಿಯಿದೆ. ರೂ.350/- ಶುಲ್ಕ ಕೊಟ್ಟರೆ ಕೇಬಲ್ ಕಾರ್ ಮೂಲಕ ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾ ಪ್ರಯಾಸವಿಲ್ಲದೆ ಬೆಟ್ಟದ ತುದಿ ತಲಪಬಹುದು. ನಮ್ಮ ತಂಡದವರಿಗೆಲ್ಲರಿಗೂ ಟೂರ್ ಮ್ಯಾನೇಜರ್ ಕೇಬಲ್ ಕಾರ್ ನ ವ್ಯವಸ್ಥೆ ಮಾಡಿದ್ದರು. ಆರಾಮವಾಗಿ ಕೇಬಲ್ ಕಾರ್ ನಲ್ಲಿ ಹೋಗೆ, ಜಟಾಯು ಪಕ್ಷಿಶಿಲ್ಪವನ್ನೂ, ಅಲ್ಲಿದ್ದ ‘ರಾಮನ ಪಾದ’ ಎಂಬ ರಚನೆಯನ್ನೂ, ಕೋದಂಡರಾಮನ ಗುಡಿಯನ್ನೂ ನೋಡಿ ಬಂದೆವು.
ಅನಂತರ ಬಸ್ಸಿನಲ್ಲಿ ಪರಸ್ಪರ ಪರಿಚಯ, ಹಾಸ್ಯ ಮಾತುಕತೆಗಳೊಂದಿಗೆ ನಮ್ಮ ಪ್ರಯಾಣ ಕನ್ಯಾಕುಮಾರಿಯತ್ತ ಸಾಗಿತು. ತಿರುವನಂತಪುರದಿಂದ ಹೊರಟ ನಾವು , ಕನ್ಯಾಕುಮಾರಿಯ ಹೋಟೆಲ್ ಎ.ಆರ್.ರೆಸಿಡೆನ್ಸಿ ತಲಪುವಾಗ ರಾತ್ರಿ 10 ಗಂಟೆ ಕಳೆದಿತ್ತು.
ಈ ಬರಹದ ಹಿಂದಿನ ಕಂತು ಇಲ್ಲಿದೆ: https://www.surahonne.com/?p=39140
(ಮುಂದುವರಿಯುವುದು)
-ಹೇಮಮಾಲಾ.ಬಿ. ಮೈಸೂರು
ಪ್ರವಾಸ ಕಥನ… ಸೊಗಸಾದ ನಿರೂಪಣೆಯೊಂದಿಗೆ ಸಾಗುತ್ತಿದೆ.. ಅದಕ್ಕೆ ಪೂರಕವಾದ ಚಿತ್ರ ವೂ ಸ್ಪಷ್ಟವಾಗಿ ಮೂಡಿ ಮುದತಂದಿತು..ಗೆಳತಿ ಹೇಮಾ
ಧನ್ಯವಾದಗಳು
ನಾವೂ ಅಲ್ಲೇ ಇದ್ದು ಪ್ರವಾಸದ ಸವಿಯನ್ನು ಸವಿದಿದ್ದೆವೋ ಏನೋ ಅನ್ನುವ ಫೀಲ್ ತರುವಂತಹ ಬರಹ.
Nice travelogue with beautiful pictures
ಜಟಾಯು ನೇಚರ್ ಪಾರ್ಕ ಅಥವಾ ಜಟಾಯು ರಾಕ್ ನ ವಿವರಣೆ, ಸೂಕ್ತ ಸಂದರ್ಭದೊಂದಿಗೆ ವಿವರಿಸಿದ ಪರಿ ಸೊಗಸಾಗಿದೆ. ಬೃಹದಾಕಾರದ ಜಟಾಯು ಶಿಲ್ಪದ ಚಿತ್ರವೂ ಚಂದಿದೆ.
ವಿಶೇಷವಾದ ಜಟಾಯು ಪಾರ್ಕ್ ಕುರಿತ ಪ್ರವಾಸ ಲೇಖನವು ಬಹಳ ಕುತೂಹಲಕಾರಿಯಾಗಿದೆ…ಧನ್ಯವಾದಗಳು ಮಾಲಾ.
ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಒಳ್ಳೆಯ ಲೇಖನ. ನನ್ನ ಭೇಟಿಯ ನೆನಪಾಯಿತು. ಹಾಗೂ ಬಾಲಿ ದ್ವೀಪದ ಗರುಡ ಕೆಂಚನ ಪಾರ್ಕ್ ನೆನಪಾಗುತ್ತದೆ.