ಕೃಷ್ಣನ ಆಪ್ತಸಖ ಪಾರ್ಥ

Share Button


ಅರ್ಜುನನೆಂದರೆ ತಿಳಿಯದವರಾರು? ಪರಾಕ್ರಮಶಾಲಿ, ಶ್ರೀಕೃಷ್ಣನ ಆಪ್ತ ಸಖ. ಮಾತ್ರವಲ್ಲ ಸೋದರತ್ತೆಯ ಮಗನೂ ಹೌದು. ಎಲ್ಲಿ ಅರ್ಜುನನಿದ್ದಾನೋ ಆತನಿಗೆ ನೆರಳಾಗಿ ಕೃಷ್ಣನೂ ಇದ್ದಾನೆ ಎಂಬ ಮಾತಿದೆ.

ಅರ್ಜುನನ ಜನನ:  ಚಂದ್ರ ವಂಶದಲ್ಲಿ ವಿಚಿತ್ರವೀರ್ಯನ ಮಗನೆ  ಪಾಂಡು ಚಕ್ರವರ್ತಿ. ಈ ಪಾಂಡು ಹಾಗೂ ಕುಂತಿಯರ ಪುತ್ರನೇ ಅರ್ಜುನ. ಪಂಚಪಾಂಡವರಲ್ಲಿ ಮೂರನೆಯವ. ಮಧ್ಯಮ ಪಾಂಡವನೆಂದೂ ಇವನನ್ನು ಕರೆಯುತ್ತಾರೆ. ಪಾಂಡು ಚಕ್ಕವರ್ತಿಯು ಒಮ್ಮೆ ಬೇಟೆಯಾಡುತ್ತಾ ಅಡವಿಯಲ್ಲಿದ್ದಾಗ ಎರಡು ಜಿಂಕೆಗಳು ಒಟ್ಟಿಗೆ ಇದ್ದುವದನ್ನು ಕಂಡು ಬಾಣ ಹೂಡುತ್ತಾನೆ. ಬಾಣವು ಗಂಡು ಜಿಂಕೆಗೆ ತಗಲಿ ಅದು ಪ್ರಾಣ ಬಿಡುತ್ತದೆ. ಆದರದು ಕೇವಲ ಜಿಂಕೆಯಾಗಿರದೆ ‘ಕಿಂದಮ’ ಮಹರ್ಷಿ, ಜಿಂಕೆಯ ರೂಪಧರಿಸಿ ತನ್ನ ಪತ್ನಿಯೊಂದಿಗೆ ಸೇರಿದ ಸಂದರ್ಭವಾಗಿತ್ತು. ಕಿಂದಮನು ಪ್ರಾಣ ತೊರೆಯುವ ವೇಳೆ ‘ರಾಜಾ…, ನೀನೂ ನಿನ್ನ ಪತ್ನಿಯೊಂದಿಗೆ ಸೇರಿದಾಗ ನಿನಗೆ ಮರಣ ಉಂಟಾಗಲಿ’ ಎಂದು ಶಾಪ ಕೊಟ್ಟು ಅಸುನೀಗುತ್ತಾನೆ. ಕಾರ್ಯ ಮಿಂಚಿ ಹೋಗಿತ್ತು. ಪಾಂಡುರಾಜ ಪಶ್ಚಾತ್ತಾಪ ಪಡುತ್ತಾನೆ. ಇನ್ನೇನು ಪ್ರಯೋಜನ! ಅನುಭವಿಸಿಯೇ ತೀರಬೇಕು. ವ್ಯಥೆಗೊಂಡ ಅರಸನು ಅರಣ್ಯವಾಸ ಮಾಡುತ್ತಾನೆ. ಆತನ ಜೊತೆಯಲ್ಲಿ ಮಡದಿಯರಾದ ‘ಕುಂತಿ’ ಹಾಗೂ ‘ಮಾದ್ರಿ’ಯರೂ ಅಡವಿಗೆ ಬರುತ್ತಾರೆ. ಕಾಲ ಸರಿಯುತ್ತದೆ.

ರಾಜ್ಯ ತ್ಯಜಿಸಿದರೂ ಮಕ್ಕಳನ್ನು ಪಡೆಯುವಾಸೆ ನಶಿಸಿ ಹೋಗುವುದಿದೆಯೇ? ತನ್ನಿಂದ ಮಕ್ಕಳಾಗುವುದಕ್ಕೆ ಅಸಾಧ್ಯ! ಅದು ವಿಧಿಯೊಡ್ಡಿದ ಸಂಚು. ಮಡದಿಯರೊಂದಿಗೆ ಹಂಚಿಕೊಳ್ಳುತ್ತ ವ್ಯಥೆಪಡುತ್ತಾನೆ. ಒಂದು ಗಳಿಗೆ ಯೋಚಿಸಿದ ಕುಂತಿಯು ಹಿಂದೊಮ್ಮೆ ತನಗೆ ದೂರ್ವಾಸರು ನೀಡಿದ ಐದು ವರಗಳನ್ನು ನೆನಪಿಸಿಕೊಳ್ಳುತ್ತಾಳೆ. ನೀನು ಬಯಸಿದಾಗ ನಿನ್ನ ಇಷ್ಟಾರ್ಥ ದೇವತೆಯನ್ನು ಧ್ಯಾನಿಸಿ ಐದು ಪುತ್ರರನ್ನು ಪಡೆದುಕೋ’ ಎಂದಿದ್ದಾರೆ. ಅವುಗಳಲ್ಲಿ ಒಂದು ಮುಗಿದಿದೆ. ಆಟ ಆಟಕ್ಕಾಗಿ ಕರ್ಣನನ್ನು ಪಡೆದು ಲೋಕಾಪವಾದ ತಪ್ಪಿಸುವುದಕ್ಕಾಗಿ ಮಗುವನ್ನು ಪಡೆದು ನದಿಯಲ್ಲಿ ತೇಲಿ ಬಿಟ್ಟಾಗಿದೆ. ಆಗ ಕನ್ಯೆಯಾಗಿದ್ದೆ. ಆದರೆ ಈಗ ಹಾಗಲ್ಲ. ಪತಿಯ  ಅನುಮತಿ ಪಡೆಯುತ್ತಾಳೆ. ಪಾಂಡು ಒಪ್ಪದೆ ಇರುತ್ತಾನೆಯೇ? ತನ್ನಿಂದ ಅಸಾಧ್ಯವಾದ ಕೆಲಸ! ಪರಿಹಾರ ಕೇಳಿದಾಗ ಒಪ್ಪಲೇಬೇಕಲ್ಲ! ಸರಿ, ಯಮಧರ್ಮರಾಯನನ್ನು  ನೆನೆದು ಯುಧಿಷ್ಠರನನ್ನೂ, ವಾಯುವಿನ ಅನುಗ್ರಹದಿಂದ ಭೀಮನನ್ನು ಪಡೆಯುತ್ತಾಳೆ. ಇನ್ನೂ ತೃಪ್ತಿಯಾಗದೆ ಮೂರನೆ ಬಾರಿ ಇಂದ್ರನನ್ನು ಧ್ಯಾನಿಸುತ್ತಾಳೆ. ಇಂದ್ರನು ಬರುತ್ತಾನೆ. ಜಗದೇಕ ವೀರನಾದ ಅರ್ಜುನನ್ನು ಇಂದ್ರನ ಮೂಲಕ ಪಡೆಯುತ್ತಾಳೆ. ‘ಇನ್ನು ನಿನಗೆ ಸಾಕು. ಉಳಿದಿರುವ ಒಂದು ಮಂತ್ರವನ್ನು ಮಾದ್ರಿಗೆ ಉಪದೇಶಿಸು’ ಎನ್ನುತ್ತಾನೆ’ ಪಾಂಡು.  ‘ನೀನು ಯಾವ ದೇವತೆಯನ್ನು ನೆನೆಸುತ್ತಿಯೋ ಅವರನ್ನು ನೆನೆದು ಈ ಮಂತ್ರ ಪಠಿಸು ಎನ್ನುತ್ತಾಳೆ ಮಾದ್ರಿಗೆ. ಮಾದ್ರಿಯು ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸುತ್ತಾಳೆ. ಇದರ ಪರಿಣಾಮವಾಗಿ ಮಾದ್ರಿಗೆ ನಕುಲ-ಸಹದೇವರು ಜನಿಸುತ್ತಾರೆ.

ದಿವ್ಯನಾಮಗಳು: ಅರ್ಜುನನಿಗೆ ಹತ್ತಾರು ಹೆಸರುಗಳು. ಅವುಗಳಲ್ಲಿ ಮುಖ್ಯವಾದವುಗಳು ಅರ್ಜುನ, ಪಾರ್ಥ, ಫಲ್ಗುಣ, ಕಿರೀಟಿ, ಜಿಷ್ಣು, ಶ್ವೇತವಾಹನ, ಬೀಭತ್ಸು, ಧನಂಜಯ, ಸವ್ಯಸಾಚಿ, ವಿಜಯ, ಗಾಂಢೀವಿ ಮೊದಲಾದವುಗಳು.

ರಾಜಸೂಯ ಯಾಗ ಕಾಲದಲ್ಲಿ ಭಗದತ್ತನ ಪಟ್ಟಣವಾದ ಪ್ರಾಗ್ವೋತಿಷವನ್ನೂ,ಕಿಂಪುರುಷ, ಇಲಾವೃತ ಮೊದಲಾದ ಖಂಡಗಳನ್ನು ಜಯಿಸಿದ್ದಲ್ಲದೆ ಹೇರಳ ಧನವನ್ನೂ ಸಂಪಾದಿಸಿ ಧನಂಜಯ ಎಂಬ ಬಿರುದು ಸಿಕ್ಕಿತು. ಇಂದ್ರನಿಂದ ಅಮೂಲ್ಯವಾದ ಕಿರೀಟವನ್ನು ಪಡೆದುದರಿಂದ ‘ಕಿರೀಟಿ’ ಎಂಬ ಹೆಸರಾಯಿತು. ಎಡಗೈಯಿಂದಲೂ ಬಾಣ ಹೊಡೆಯಬಲ್ಲವನಾದುದರಿಂದ ‘ಸವ್ಯಸಾಚಿ’ ಎನಿಸಿದನು. ಅರ್ಜುನನು ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಹುಟ್ಟಿದುದರಿಂದ ಇವನಿಗೆ ಈ ಹೆಸರು ‘ಫಲ್ಗುಣ’ ಎಂದು ಪ್ರಾಪ್ತವಾಯಿತು. ಕುಂತಿಗೆ ಬಾಲ್ಯದಲ್ಲಿ ಪೃಥೆ ಎಂಬ ಹೆಸರಿತ್ತು. ಆದುದರಿಂದ ಈತನಿಗೆ ಪಾರ್ಥ ಎಂಬ ಹೆಸರು ಬಂತು. ಯುಧಿಷ್ಠಿರ ಮತ್ತು ಭೀಮರಿಗೂ ಇದು ಸಲ್ಲುವುದಾದರೂ ಇದು ಅರ್ಜುನನಿಗೇ ಬಳಕೆಗೆ ಬಂತು. ‘ಜಿಷ್ಣು’ ಎಂದರೆ ಎಲ್ಲವನ್ನೂ ಜಯಿಸಬಲ್ಲವ. ಇಂದ್ರನ ಮೂಲಕ ಬಂದು ಹೆಸರಾಯಿತು. ಜಿಷ್ಣು ಎಂದರೆ ಇಂದ್ರ. ಅರ್ಜುನನ ಧನಸ್ಸಿನ ಹೆಸರು ಗಾಂಢೀವ. ಇದರಿಂದಾಗಿ ‘ಗಾಂಢೀವಿ’ ಎನಿಸಿದೆ. ಇದು ಅಗ್ನಿಯಿಂದ ಲಭಿಸಿದ್ದು.

ಅರ್ಜುನನು ಇಂದ್ರಕೀಲ ಪರ್ವತದಲ್ಲಿ ಪರಮೇಶ್ವರನನ್ನು ತಪಸ್ಸು ಮಾಡಿ ಪಾಶುಪತಾಸ್ತ್ರವನ್ನು ಪಡೆದನು. ಇಲ್ಲಿ ಶಿವನು ಕಿರಾತನ ವೇಷದಲ್ಲಿ ಬಂದು ಅರ್ಜುನನೊಡನೆ ಯುದ್ಧ ಮಾಡಿ ಪರೀಕ್ಷಿಸಿ ಪಾಶುಪತಾಸ್ತ್ರವನ್ನು ಕೊಡುತ್ತಾನೆ. ಈ ಸಂದರ್ಭದ ಕತೆಯೇ `ಭಾರವಿ’ ಕವಿ ಬರೆದ ‘ಕಿರಾತಾರ್ಜುನೀಯ’ ಎಂಬ ಕಾವ್ಯ ಪಂಚಮಹಾಕಾವ್ಯಗಳಲ್ಲಿ ಒಂದು.

ಮಡದಿಯರು ಮತ್ತು ಮಕ್ಕಳು: ದೌಪದಿ, ಸುಭದ್ರೆ ಮತ್ತು ಉಲೂಪಿ ಮತ್ತು ಚಿತ್ರಾಂಗದೆಯರು ಅರ್ಜುನನ ಮಡದಿಯರು, ದೌಪದಿಯಲ್ಲಿ ಶ್ರುತಕೀರ್ತಿ, ಸುಭದ್ರೆಯಲ್ಲಿ ಅಭಿಮನ್ಯು, ಉಲೂಪಿಯಲ್ಲಿ ಇರಾವಂತ, ಚಿತ್ರಾಂಗದೆಯಲ್ಲಿ ಬಬ್ರುವಾಹನ.

ಗುರುಗಳು: ದ್ರೋಣಾಚಾರ್ಯರು ಈತನ ಗುರುಗಳು. ಬಾಲ್ಯದಲ್ಲೇ ಇವನು ಮಹಾ ಮೇಧಾವಿಯೂ ಸಾಹಸಿಯೂ ಆಗಿದ್ದನು. ಆದುದರಿಂದ ದ್ರೋಣಾಚಾರ್ಯರು ಇವನಿಗೆ ಶಬ್ದವೇದಿ ಎಂಬ ವಿದ್ಯೆಯನ್ನು ಕಲಿಸಿದರು. ದ್ರೋಣಾಚಾರ್ಯರು ಅರ್ಜುನನಲ್ಲಿ ಗುರುದಕ್ಷಿಣೆಯಾಗಿ ತನ್ನನ್ನು ಪರಿಹಾಸ್ಯ ಮಾಡಿದ ದ್ರುಪದನನ್ನು ಸೆರೆ ಹಿಡಿಯುವಂತೆ ಕೇಳಿಕೊಂಡು ಇಷ್ಟಾರ್ಥ ಈಡೇರಿಸಿಕೊಂಡರು.

ಅರ್ಜುನನ ಶಂಖದ ಹೆಸರು ‘ದೇವದತ್ತ’. ಇದು ಖಾಂಡವವನ ದಹನ ಕಾಲದಲ್ಲಿ ಮಯಾಸುರನಿಂದ ಲಭಿಸಿತು. ಅಕ್ಷಯ ಬತ್ತಳಿಕೆಯಲ್ಲಿ ಗಾಂಢೀವ ಧನಸ್ಸು ಮತ್ತು ರಥವೂ ಅಗ್ನಿಯಿಂದ ದೊರೆಯಿತು. ಅರ್ಜುನನ ಧ್ವಜದಲ್ಲಿ ಹನುಮನ ಲಾಂಛನ ರಾರಾಜಿಸುವನು. ಇದಕ್ಕೊಂದು ಕಥೆಯಿದೆ. ಅರ್ಜುನನು ಧನುಷ್ಕೋಡಿಯಲ್ಲಿ ಹನುಮಂತನನ್ನು ಕಂಡು ಶ್ರೀರಾಮನ ಸೇತುಬಂಧನ ಕಾರ್ಯವನ್ನು ಅಪಹಾಸ್ಯ ಮಾಡಿದನು. ಆಗ ಹನುಮಂತನು ಅವನೊಡನೆ ಬಾಣದ ಸೇತುವೆಯನ್ನು ನಿರ್ಮಿಸಲು ಹೇಳಿ ತಾನು ಒಂದು ಬೆರಳೂರಿ ಬಾಣದ ಸೇತುವೆಯನ್ನು ತುಂಡರಿಸಿದನು. ಇದಕ್ಕಾಗಿ ಬೇಸತ್ತ ಅರ್ಜುನ ಅಗ್ನಿ ಪ್ರವೇಶ ಮಾಡಲು ಹೊರಟಾಗ ಶ್ರೀಕೃಷ್ಣನು ಬ್ರಾಹ್ಮಣ ರೂಪಿಯಾಗಿ ಬಂದು ಅರ್ಜುನನೊಡನೆ ಬಾಣದ ಸೇತುವೆಯನ್ನು ರಚಿಸುವಂತೆ ಹೇಳಿ, ಕೃಷ್ಣನು ಅದರ ನಡುವೆ ತನ್ನ ಸುದರ್ಶನ ಚಕ್ರವನ್ನಿರಿಸಲು ಹನುಮನು ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿದರೂ ಮುರಿಯದಾಯಿತು. ಕೊನೆಗೆ ಆ ಬ್ರಾಹ್ಮಣನೇ ಶ್ರೀರಾಮ (ಕೃಷ್ಣ)ನೆಂದು ತಿಳಿದ ಹನುಮನು ಅರ್ಜುನನ ಧ್ವಜದಲ್ಲಿ ಕುಳಿತನಂತೆ. ಊರ್ವಶಿ ಶಾಪದಿಂದ ನಪುಂಸಕನಾಗಿ ವೇಷ ಧರಿಸುವಂತಾಯಿತು, ಊರ್ವಶಿ ಶಾಪ ಅರ್ಜುನನಿಗೆ ಉಪಕಾರವಾಯಿತು. ಅಜ್ಞಾತವಾಸ ಕಾಲದಲ್ಲಿ ಒಂದು ವರ್ಷ ‘ಬ್ರಹನ್ನಳೆ’ಯಾಗಿ ಉತ್ತರೆಗೆ ನರ್ತನ ವಿದ್ಯೆಯನ್ನು ಕಲಿಸಿದನು.

ಪಾರ್ಥಸಾರಥಿಯೊಂದಿಗೆ ಪಾರ್ಥ: ಪಾರ್ಥನನ್ನು ಲೋಕ ಗುರುತಿಸುವುದು ಪಾರ್ಥಸಾರಥಿ(ಕೃಷ್ಣನ ಜೊತೆಯಲ್ಲಿ, ಹೂವು, ಗಂಧ ಸೇರಿದಂತೆ ಅವರಿಬ್ಬರ ಒಡನಾಟ. ಹಾಗೊಂದು ದೃಷ್ಟಿಯಿಂದ ನೋಡಿದರೆ ಕೃಷ್ಣನಿಲ್ಲದಿದ್ದರೆ ಅರ್ಜುನನು ಸುಗಂಧವಿಲ್ಲದ ಪುಷ್ಪ. ಅರ್ಜುನನಿಗೆ ಕೃಷ್ಣನು ಆಪ್ತ ಸ್ನೇಹಿತನಾಗಿ, ಸೋದರತ್ತೆಯ ಮಗ ಭಾವನಾಗಿ,ಗುರುವಾಗಿ, ಬಿದ್ದಲ್ಲಿ ಮೇಲೆತ್ತುವ ಬಂಧುವಾಗಿ, ರಣರಂಗದ ಯುದ್ಧ ರಥದ ಸಾರಥಿಯಾಗಿ ಗುರುತಿಸಲ್ಪಡುತ್ತಾನೆ. ಒಮ್ಮೆ ಶತ್ರುವಿನಂತೆ ಯುದ್ಧ ಮಾಡಿ ಆತನ ಸಾಮರ್ಥ್ಯವನ್ನು ಕೃಷ್ಣ ಪರೀಕ್ಷಿಸುತ್ತಾನೆ. ಅದುವೇ ಕೃಷ್ಣಾರ್ಜುನರ ಕಾಳಗ ಎಂದು ಪ್ರಸಿದ್ಧಿಯು, ಎಲ್ಲಕ್ಕಿಂತ ಮಿಗಿಲಾಗಿ ಕುರುಕ್ಷೇತ್ರ ಯುದ್ಧದಲ್ಲಿ ಸಾರಥಿಯಾಗಿರುವುದನ್ನೇ ಲೋಕ ನೆನೆಯುತ್ತದೆ. ವ್ಯಾಸ ಮಹಾಭಾರತವು ಪಂಚಮ ವೇದವೆಂದು ಕರೆಸಿಕೊಂಡಿರುವಂತಾಗಿದ್ದು, ಅದರಲ್ಲೂ ಪಾಂಡವರವರೊಳಗಣ ಯುದ್ಧ ಭೂಮಿಯಲ್ಲಿ ಅರ್ಜುನನ ಮನಸೊಳಗೆ ನುಸುಳಿದ ಅಳುಕು, ಅಜ್ಞಾನಗಳನ್ನು ದೂರ ಮಾಡಿ ಬೆಳಕು ತೋರಿದ ಶ್ರೀಕೃಷ್ಣನ ಉಪದೇಶಾಮೃತವೇ ಭಗವದ್ಗೀತೆ, ಇದು ವಿಶ್ವಮಾನ್ಯತೆ ಪಡೆದು ಸಾಹಿತ್ಯ ಲೋಕದಲ್ಲಿ ಕಿರೀಟ ಪ್ರಾಯವಾದದ್ದು.  ಒಂದು ಜಾತಿ, ಮತ ಅಥವಾ ಜನಾಂಗಕ್ಕೆ ಸೀಮಿತವಾಗಿರದೆ ಸಕಲ ಮಾನವರ ಕಲ್ಯಾಣವನ್ನು ಉದ್ದೇಶಿಸಿರುವುದರಿಂದ ಪಾಶ್ಚಾತ್ಯರ ಮೇಲೂ ಪ್ರಭಾವ ಬೀರಿತು. ಹದಿನೆಂಟು ಅಧ್ಯಾಯಗಳನ್ನೊಳಗೊಂಡ ಈ ಉಪದೇಶಾಮೃತವು ಪಾರ್ಥನ ನೆಪದಲ್ಲಿ ಪಾಮರರನ್ನೂ ದೈವಿಕವಾಗಿ ಪರಿವರ್ತಿಸುವ ಶಕ್ತಿ ಅದರಲ್ಲಿ ಅಡಗಿದೆ. ಭಗವದ್ಗೀತೆಯಲ್ಲಿ ಎಲ್ಲವೂ ಇದೆ. ಅದರೊಳಗೆ ಇಲ್ಲದಿರುವುದು ಹೊರಗೂ ಇಲ್ಲ ಎಂಬುದು ಪ್ರಾಜ್ಞರ ಮಾತು.


ಕುರುಕ್ಷೇತ್ರದಲ್ಲಿ ಸೇನಾವಲೋಕನ, ಗೀತಾಸಾರ, ಸಂಗ್ರಹ, ಕರ್ಮಯೋಗ, ರಹಸ್ಯತಮಜ್ಞಾನ, ವಿಭೂತಿಯೋಗ, ಧ್ಯಾನಯೋಗ, ಭಗವತ್ ಪ್ರಾಪ್ತಿ, ವಿಶ್ವರೂಪ, ಭಕ್ತಿಸೇವೆ, ಭೌತಿಕ ಪ್ರಕೃತಿಯ ಗುಣಗಳು, ಪುರುಷೋತ್ತಮಯೋಗ, ಶ್ರದ್ಧೆಯ ಪ್ರಬೇಧಗಳು ಕೊನೆಗೆ ವೈರಾಗ್ಯದ ಪರಿಪೂರ್ಣತೆಯನ್ನೊಳಗೊಂಡಿದೆ.

ಒಟ್ಟಿನಲ್ಲಿ ಕೃಷ್ಣಾರ್ಜುನರ ಸಂವಾದವು ಮಾನವ ಕುಲಕ್ಕೆ ತಿಳಿದಿರುವ ಅತ್ಯಂತ ಶ್ರೇಷ್ಠ ತಾತ್ವಿಕ ಮತ್ತು ಧಾರ್ಮಿಕ ಸಂವಾದಗಳಲ್ಲಿ ಒಂದು. ಯುದ್ಧವೂ ಹದಿನೆಂಟು ದಿನಗಳ ಪರ್ಯಂತ ನಡೆದು ಕೌರವರ ನಾಶದ ಮೂಲಕ ಧರ್ಮಕ್ಕೆ ಜಯವಾಯಿತು. ಶ್ರೀಕೃಷ್ಣನ ನಿರ್ಯಾಣವಾದ ಮೇಲೆ ಮಹಾಪ್ರಸ್ಥಾನ ಕಾಲದಲ್ಲಿ ತ್ರಿಲೋಕ ವೀರನಾದ ಅರ್ಜುನನು ಮಾರ್ಗದ ಮಧ್ಯೆ ತನ್ನ ಶರೀರವನ್ನು ತ್ಯಜಿಸಿದನು.

ವಿಜಯಾಸುಬ್ರಹ್ಮಣ್ಯ, ಕುಂಬಳೆ

6 Responses

  1. ಅರ್ಜುನನ ಹಲವು ಉಪನಾಮಗಳು ಹಾಗೂ ಈ ನಾಮಗಳ ಹಿಂದಿರುವ ಕಥೆಗಳನ್ನು ಸವಿಸ್ತಾರವಾಗಿ ತಿಳಿಸಿರುವುದಕ್ಕೆ ವಂದನೆಗಳು

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ಶಂಕರಿ ಶರ್ಮ says:

    ಕಿರೀಟಿಯ ಹಲವು ನಾಮಗಳ ಜೊತೆಗೆ ಅವುಗಳನ್ನು ಪಡೆದ ಸಂದರ್ಭ ಹಾಗೂ ಕಾರಣಗಳು, ಅವನ ಹುಟ್ಟು, ಬೆಳವಣಿಗೆ, ಸಾಧನೆ, ಪರಮಾತ್ಮನ ಆತ್ಮೀಯ ಸಖನೆಂಬ ಹೆಮ್ಮೆಯ ಪಟ್ಟ ಹೊತ್ತ ಪರಿ…ಎಲ್ಲವನ್ನೂ ಸಂಕ್ಷಿಪ್ತವಾಗಿ ತಮ್ಮ ಲೇಖನದಲ್ಲಿ ಪಡಿಮೂಡಿಸಿರುವಿರಿ ವಿಜಯಕ್ಕಾ…ಧನ್ಯವಾದಗಳು.

  4. ಅರ್ಜುನನ ಬಗ್ಗೆ ಸುವಿಸ್ತಾರ ಕಥೆ ತಿಳಿಸಿ ದ ನಿಮಗೆ ಧನ್ಯವಾದಗಳು ವಿಜಯಾಮೇಡಂ

  5. Padma Anand says:

    ಅರ್ಜುನನನ್ನು ಕುರಿತ ಹಲವಾರು ಮಾಹಿತಿಗಳನ್ನು ವಿಷದವಾಗಿ ನೀಡುವ ಚಂದದ ಲೇಖನ.

  6. K. ರಮೇಶ್ says:

    ಬಹಳ ವಿಸ್ತಾರವಾಗಿ ಮೂಡಿಬಂದ ಬರಹ
    ಧನ್ಯವಾದಗಳು ಮೇಡಮ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: