ನವಗ್ರಹಗಳ ಒಡೆಯ ಸೂರ್ಯ
ಜಗತ್ತಿನ ಎಲ್ಲ ಚರಾಚರ ವಸ್ತುಗಳ ಅಸ್ಥಿತ್ವಕ್ಕೆ ಕಾರಣನಾದವನು, ಅವುಗಳಿಗೆ ಚೇತನ ನೀಡುವವನು, ಜೀವ ತುಂಬುವವನು, ದಿನ ಬೆಳಗಾಗಲು ಕಾರಣನಾದವನು ಪ್ರತಿಯೊಬ್ಬರೂ ಮಾಡುವ ಕರ್ಮಗಳಿಗೆ ಸಾಕ್ಷಿಯಾಗುವವನು, ಪಂಚಭೂತಗಳಾದ ಪೃಥ್ವಿ, ಅಪ್, ತೇಜ, ವಾಯು, ಆಕಾಶ ಇವುಗಳನ್ನು ಜಾಗೃತಾವಸ್ಥೆಗೆ ತರುವವನು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟೋ ಉದ್ದ ಬೆಳೆಯುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಎಲ್ಲ ಪ್ರಕೃತಿ ವ್ಯವಸ್ಥೆಗಳ ಕೇಂದ್ರ ಬಿಂದು ಎಂದು ಕರೆಯಬಹುದು. ಈತನು ಯಾರೆಂದು ಕೇಳಿದರೆ ಎಲ್ಲರಿಗೂ ತಿಳಿದಿದೆ. ಇವನೇ ಸೂರ್ಯ ನಾರಾಯಣ. ನಮಗೆ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು! ನವಗ್ರಹಗಳ ಒಡೆಯ ಈತನ ಹುಟ್ಟು ಹೇಗಾಯಿತು? ಯಾರಿಂದ ತಿಳಿಯೋಣ.
ಕಶ್ಯಪ-ಅದಿತಿಯರ ಪುತ್ರನೇ ಸೂರ್ಯ. ಅದಿತಿಯ ಗರ್ಭಾವಸ್ಥೆಯಲ್ಲಿರುವಾಗಲೇ ಒಮ್ಮೆ ಮೃತನಾಗಿ ಮತ್ತೆ ತನ್ನ ಜನನಿ-ಜನಕರ ಪುಣ್ಯ ಫಲದಿಂದ ಜೀವ ತಳೆದು ಬಂದ. ಅದಕ್ಕಾಗಿ ಈತನಿಗೆ ಮಾರ್ತಾಂಡ ಎಂದು ಹೆಸರಿದೆ.
ಅದಿತಿಯು ಗರ್ಭಿಣಿಯಾಗಿದ್ದಾಗ ಒಂದು ದಿನ ಕಶ್ಯಪರು ಎಂದಿನಂತೆ ಗಂಗಾಸ್ನಾನಕ್ಕೆ ಹೋಗಿದ್ದ ಹೊತ್ತು. ಅದಿತಿಯು ದೇವರ ಮನೆಯಲ್ಲಿ ಕುಳಿತು ಭಕ್ತಿಯಿಂದ ದೇವರನ್ನು ಧ್ಯಾನಿಸುತ್ತಿದ್ದಳು. ಹೊರಗಿನಿಂದ ‘ಭವತಿ ಭಿಕ್ಷಾಂದೇಹಿ’ ಎಂಬ ಕೂಗು ಕೇಳಿಸಿತಂತೆ. ಸರಿ. ಭಿಕ್ಷೆ ನೀಡುವುದಕ್ಕೆಂದು ತುಂಬು ಗರ್ಭಿಣಿ ಮೆಲ್ಲನೆದ್ದು ಬರುತ್ತಾಳೆ. ತಕ್ಷಣ ಎದ್ದು ಬರುವಂತೆ ಗರ್ಭಿಣಿಗೆ ಬರುವುದಕ್ಕಾಗುತ್ತದೆಯೇ? ಒಂದಿನಿತು ವಿಳಂಬವಾಗುತ್ತದೆ. ಅಷ್ಟರಲ್ಲಿ ಭಿಕ್ಷೆಯನ್ನು ದೇಹಿ ಎಂದವನಿಗೆ ಸಿಟ್ಟು ಬರುತ್ತದೆ. ಹೀಗೆ ತಾಳ್ಮೆ ವಹಿಸದವನು ಬುಧ ಮಹರ್ಷಿ. `ನನಗೆ ಭಿಕ್ಷೆ ನೀಡಲು ವಿಳಂಬ ಮಾಡಿದೆಯಲ್ಲ! ನಿನ್ನ ಗರ್ಭದಲ್ಲಿರುವ ಶಿಶುವು ಸತ್ತು ಹೋಗಲಿ’ ಎಂದು ಶಾಪವಿತ್ತು ಹೊರಟು ಹೋದನಂತೆ, ಇದರಿಂದ ಅದಿತಿ ಹತಾಶಳಾದಳು, ಏನು… ತಾಪಸೋತ್ತಮರು ಹೀಗಾಡುವುದೇ! ಪತಿವರ್ಯರಾದ ಕಶ್ಯಪರು ಸ್ನಾನ ತೀರಿಸಿ ಹಿಂತಿರುಗಿ ಬಂದಾಗ ವಿಷಯ ತಿಳಿಸಿದಳು. ವಿಷಯ ತಿಳಿದ ಕಶ್ಯಪರೂ ಖಿನ್ನರಾದರು. ಆದರೇನು ಮಾಡುವುದು? ಋಷಿಯ ಶಾಪವಲ್ಲವೇ! ಶ್ರೀಹರಿಯನ್ನು ಅನನ್ಯವಾಗಿ ಧ್ಯಾನಿಸಿ ಪ್ರಾರ್ಥಿಸಿದರು.
ಮಹರ್ಷಿಯ ಶಾಪದಿಂದ ತನ್ನ ಗರ್ಭದೊಳಗಿರುವ ಅಂಡವು ಮೃತವಾಗಿದೆ ಎಂದು ಅದಿತಿಗೆ ಭಾಸವಾಯಿತು. ಆದರೂ ಪಟ್ಟು ಬಿಡದೆ ಇಬ್ಬರೂ ಶ್ರೀಹರಿಯ ಮೊರೆಹೋದರು. ಅದಿತಿಯ ವ್ರತ, ಕಶ್ಯಪರ ಪೂಜೆ ಇವುಗಳ ಫಲರೂಪವಾಗಿ ಶಿಶುವು ಬದುಕಿ ಉಳಿಯಿತು! ಅದೂ ವಿಚಿತ್ರವಾಗಿ ಅಂಡದಂತೆ ಹೊರಬಂದು ಅದು ಮೃತವಾಗಿ ಕಂಡರೂ ಕೆಲ ಕ್ಷಣದಲ್ಲಿ ಅದು ಒಡೆದು ಅದರೊಳಗಿಂದ ದೇದಿಪ್ಯಮಾನವಾದ ಶಿಶುವು ಹೊರಬಂತು. ಕಶ್ಯಪ-ಅದಿತಿಯವರಿಗೆ ಪರಮಾನಂದವಾಯಿತು. ಮೃತ ಅಂಡವಾಗಿ ಜನಿಸಿ ಮತ್ತೆ ಮಗುವಾಗಿ ಹೊರಬಂದ ಈ ಮಗುವಿಗೆ ಕಶ್ಯಪರು ‘ಮಾರ್ತಾಂಡ’ ಎಂದು ಹೆಸರಿಟ್ಟರು. ಇಲ್ಲಿ ಮುನಿಯ ಶಾಪವೂ ನಿಜವಾಯಿತು. ಕಶ್ಯಪ-ಅದಿತಿಯ ವ್ರತ-ಪೂಜೆಗೂ ಫಲ ದೊರೆಯಿತು. ಈ ಮಗುವು ಬೆಳೆದು ದೊಡ್ಡವನಾಗುತ್ತಿದ್ದಂತೆ ಒಂದು ದಿನ ಸ್ನಾನಕ್ಕೆಂದು ಒಂದು ಕೊಳಕ್ಕೆ ಹೋಗಿದ್ದಾಗ ಇವನು ನೋಡುತ್ತಿದ್ದ ಕೊಳದಲ್ಲಿ ಮುದುಡಿಕೊಂಡಿದ್ದ ತಾವರೆ ಅರಳಿತು. ಈ ಸುದ್ದಿಯನ್ನು ಹಿಂತಿರುಗಿ ಬಂದು ತನ್ನ ತಂದೆಗೆ ಹೇಳಿದನು. ಕಶ್ಯಪರಿಗೆ ಬಹಳ ಸಂತಸವಾಯಿತು. ಯಾಕೆಂದರೆ ತಾವರೆಗೂ ಇವನಿಗೂ ಸಂಬಂಧವಿದೆ. ಭವಿಷ್ಯದಲ್ಲಿ ಈ ಮಗುವು ಲೋಕ ಬೆಳಗಲಿದ್ದಾನೆ ಎಂಬ ಅರಿವಾಯಿತು.
ಕಶ್ಯಪರ ಊಹನೆ ನಿಜವಾಯಿತು. ಮುಂದೆ ಶ್ರೀಹರಿಯು ಮಾರ್ತಾಂಡನನ್ನು ಲೋಕ ಬೆಳಗುವ ಸೂರ್ಯನನ್ನಾಗಿ ನಿಯೋಜಿಸಿದನು. ಸೂರ್ಯನಿಗೆ ‘ಆದಿತ್ಯ’, ‘ಭಾನು’ ‘ಭಾಸ್ಕರ’ ‘ರವಿ’ ಎಂಬ ಹೆಸರೂ ವಿಶೇಷವಾಗಿದೆ. ಹನ್ನೆರಡು ಮಂದಿ ಆದಿತ್ಯರು ದ್ವಾದಶಾದಿತ್ಯರೆಂದು ಪ್ರಸಿದ್ಧರು. ಇವರ ಹೆಸರು-ರಾತಾ, ಮಿತ್ರ, ಆರ್ಯಯಾ, ರುದ್ರ, ವರುಣ, ಅಂಶ, ಭಗ, ವಿವಸ್ಥಾನ್, ಪೂಷನ್, ಸವಿತಾ, ತ್ವಷ್ಟಾ, ವಿಷ್ಣು.
ಸೂರ್ಯನ ಪತ್ನಿಯರು ಸಂಜ್ಞಾದೇವಿ ಹಾಗೂ ಛಾಯಾದೇವಿ, ಸಂಜ್ಞಾದೇವಿಯಲ್ಲಿ ಯಮ, ಮನು, ಯಮನೆಯರೂ ಛಾಯಾದೇವಿಯಲ್ಲಿ ಸಾವರ್ಣ, ಶನೈಶ್ವರ ಎಂಬಿಬ್ಬರು ಮಕ್ಕಳೂ ಹುಟ್ಟಿದ್ದರು. ಮನುವು ಮಾನವ ವಂಶಕ್ಕೆ ಮೂಲಾಧಾರ, ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರ ಈ ನಾಲ್ಕು ವರ್ಣದವರೂ ಮನು ಸಂತತಿಯವರು. ದೇವತೆಗಳು ಸೂರ್ಯನಿಗೆ ಸಾರಥಿಯಾಗಿ ಆರುಣನನ್ನು ನೇಮಿಸಿದರು. ಗಾಯತ್ರಿ ಮಂತ್ರವು ನಾಲ್ಕು ವೇದಗಳಲ್ಲೂ ಇರುವಂತಹ ಒಂದೇ ಒಂದು ಮಂತ್ರ ಇದು ಸೂರ್ಯನ ಕುರಿತಾಗಿ ವಿಶ್ವಾಮಿತ್ರ ಮಹರ್ಷಿಯಿಂದ ರಚಿಸಲ್ಪಟ್ಟಿತು.
ಸೂರ್ಯನಿಂದ ಕುಂತಿಯು ಕರ್ಣನನ್ನು ಪಡೆದಳು. ಸುಗ್ರೀವನೂ ಸೂರ್ಯನ ಅಂಶದಿಂದ ಜನಿಸಿದನು. ಪಾಂಡವರು ವನವಾಸದಲ್ಲಿದ್ದಾಗ ಅವರ ಅಳಲನ್ನು ಕಡಿಮೆ ಮಾಡಿ ಸಾಂತ್ವನಿಸಲು ಅವರಿದ್ದಲ್ಲಿಗೆ ಧೌಮ್ಯ ಮಹರ್ಷಿಗಳು ಬರುತ್ತಾರೆ. ಅವರ ಆದೇಶ ಪ್ರಕಾರ ಧರ್ಮರಾಯನು ಸೂರ್ಯದೇವನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಲು ಸೂರ್ಯನು ಪ್ರತ್ಯಕ್ಷನಾಗಿ ಅಕ್ಷಯ ಪಾತ್ರೆಯನ್ನು ಕರುಣಿಸುತ್ತಾನೆ.
|ಲೋಕ ಸಮಸ್ತಾ ಸುಜನೋ ಭವಂತು|
-ವಿಜಯಾಸುಬ್ರಹ್ಮಣ್ಯ, ಕುಂಬಳೆ
ಅಡ್ಮಿನ್ ಹೇಮಮಾಲ ಹಾಗೂ ಓದುಗರಿಗೆ ಧನ್ಯವಾದಗಳು.
ನವಗ್ರಹಗಳ ಒಡೆಯ ಸೂರ್ಯದೇವನ ಕುರಿತಾದ ವಿವರಣೆಯ ಸೊಗಸಾದ ಲೇಖನ.
ಪುರಾಣ ಕಥೆ ಗಳನ್ನು ಬರೆದು…ಮೆಲುಕುಹಾಕುವಂತೆ ಮಾಡುವ ನಿಮಗೆ… ಧನ್ಯವಾದಗಳು ವಿಜಯಾ ಮೇಡಂ
ನವಗ್ರಹಗಳ ಒಡೆಯ, ಪ್ರಕೃತಿಯಲ್ಲಿನ ಸಂಚಲನಾ ವ್ಯವಸ್ಥೆಯ ಮೂಲನಾದ ಸೂರ್ಯನ ವಿಚಿತ್ರ ಜನನ ಹಾಗೂ ಅವನ ಕುರಿತ ಹಲವಾರು ಕಥೆಗಳನ್ನೊಳಗೊಂಡ ಲೇಖನ ಖುಷಿಕೊಟ್ಟಿತು.