ವಾಟ್ಸಾಪ್ ಕಥೆ 3: ಸ್ವಂತ ಪ್ರಯತ್ನವೇ ಎಲ್ಲಕ್ಕಿಂತ ಮೇಲು.
ಒಂದು ಹಸಿರಾದ ಹುಲ್ಲುಗಾವಲು. ಅಲ್ಲಿ ಮೊಲವೊಂದು ಹಾಯಾಗಿ ಹುಲ್ಲು ತಿನ್ನುತ್ತಿತ್ತು. ದೂರದಲ್ಲಿ ಬೇಟೆನಾಯಿಗಳು ಬೊಗಳುತ್ತಿರುವ ಶಬ್ದ ಕೇಳಿಬಂತು. ಅದಕ್ಕೆ ಭಯವಾಯಿತು. ಈಗೇನು ಮಾಡುವುದು ಎಂದು ಆಲೋಚಿಸಿತು. ಸುತ್ತಮುತ್ತ ನೋಡಿದಾಗ ಸಮೀಪದಲ್ಲೇ ಒಂದು ಕುದುರೆ ಹುಲ್ಲು ಮೇಯುವುದು ಕಾಣಿಸಿತು. ಅದರ ಹತ್ತಿರ ಹೋಗಿ ಅಣ್ಣಾ ಸಮೀಪದಲ್ಲೆಲ್ಲೋ ಬೇಟೆನಾಯಿಗಳು ಬರುತ್ತಿವೆ. ನೀನು ನನ್ನನ್ನು ನಿನ್ನ ಬೆನ್ನಿನ ಮೇಲೆ ಕೂಡಿಸಿಕೊಂಡು ದೂರಕ್ಕೆ ಕರೆದೊಯ್ಯುವಿಯಾ? ಎಂದು ಅದರ ಸಹಾಯ ಕೇಳಿತು.
ಮೊಲದ ಬೇಡಿಕೆಯನ್ನು ಕೇಳಿದ ಕುದುರೆ ಗೆಳೆಯಾ, ನಿನಗೆ ಸಹಾಯ ಮಾಡಬಹುದಿತ್ತು. ಆದರೆ ಏನುಮಾಡಲಿ, ನನ್ನ ಯಜಮಾನ ಬರುವ ಹೊತ್ತಾಯಿತು. ನಾನು ಬೇಗನೇಗ ಹುಲ್ಲು ಮೇಯ್ದು ಹೊಟ್ಟೆ ತುಂಬಿಸಿಕೊಳ್ಳಬೇಕು. ಅವನು ಬರುವಷ್ಟರಲ್ಲಿ ಸಿದ್ಧವಾಗಿರಬೇಕು. ಇಲ್ಲದಿದ್ದರೆ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಸಹಾಯ ಮಾಡಲು ನಿರಾಕರಿಸಿತು.
ಮೊಲ ಅಲ್ಲಿಯೇ ಪಕ್ಕದಲ್ಲಿ ಹುಲ್ಲು ಮೇಯುತ್ತಿದ್ದ ಎತ್ತನ್ನು ನೋಡಿತು. ಅದರ ಹತ್ತಿರಹೋಗಿ ಕುದುರೆಗೆ ಹೇಳಿದಂತೆಯೇ ಹೇಳಿ ಅದರ ನೆರವನ್ನು ಕೋರಿತು. ಆ ಎತ್ತು ಗೆಳೆಯನೇ ನಿನಗೆ ಸಹಾಯ ಮಾಡಬಹುದಿತ್ತು. ಆದರೆ ಏನು ಮಾಡಲಿ, ನನ್ನ ಯಜಮಾನ ಹೊಸದಾಗಿ ಕೆಲಸವೊಂದನ್ನು ಪ್ರಾರಂಭ ಮಾಡಿದ್ದಾನೆ ಅದಕ್ಕಾಗಿ ನಾನು ಹೊಲಕ್ಕೆ ಬೇಗ ಹೋಗಿ ಅದನ್ನು ಮುಗಿಸಿಕೊಡಬೇಕಾಗಿದೆ. ಅಷ್ಟರೊಳಗೆ ನನ್ನ ಹೊಟ್ಟೆ ಭರ್ತಿ ಮಾಡಿಕೊಳ್ಳಬೇಕು ಎಂದು ಸಹಾಯ ಮಾಡಲು ಒಪ್ಪಲಿಲ್ಲ.
ಸಮೀಪದಲ್ಲಿ ಒಂದು ಕತ್ತೆಯು ಕಾಣಿಸಿತು. ಮೊಲ ಅದರ ಬಳಿಗೆ ಹೋಗಿ ಸಹಾಯ ಕೇಳೋಣವೆಂದು ಆಲೋಚಿಸುವಷ್ಟರಲ್ಲಿ ಬೇಟೆನಾಯಿಗಳು ಹತ್ತಿರವಾಗಿ ಬರುತ್ತಿರುವುದು ಕಾಣಿಸಿತು. ಮೊಲ ಕತ್ತೆಯನ್ನು ಕೋರುವ ಆಲೋಚನೆಯನ್ನೇ ಕೈಬಿಟ್ಟಿತು. ತನ್ನಲ್ಲಿದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿಹೋಗಿ ದಟ್ಟವಾದ ಕಾಡಿನ ಪೊದೆಯೊಂದರ ಹಿಂದೆ ಅವಿತುಕೊಂಡು ಪ್ರಾಣ ಉಳಿಸಿಕೊಂಡಿತು. ಆಗ ಯೋಚಿಸಿತು ನಾನು ಇವರನ್ನೆಲ್ಲ ಕೇಳುತ್ತಾ ಸಮಯ ವ್ಯರ್ಥ ಮಾಡುವ ಬದಲು ಮೊದಲೇ ಓಡಿಹೋಗಿದ್ದರೆ ಇನ್ನಷ್ಟು ದೂರ ಹೋಗಿ ಸುರಕ್ಷಿತವಾಗುತ್ತಿದ್ದೆ ಎಂದುಕೊಂಡು ಸಮಾಧಾನ ಪಟ್ಟುಕೊಂಡಿತು.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಕತೆಯೂ ಚಂದ ರೇಖಾಚಿತ್ರವೂ ಚಂದ ಸೂಪರ್ ಮೇಡಂ
ತುಂಬಾ ಚೆನ್ನಾಗಿದೆ
ಬಹಳ ಚಂದವಾಗಿದೆ ಚಿತ್ರ.
ಧನ್ಯವಾದಗಳು ಗೆಳತಿ ಮೀನಾ
ಧನ್ಯವಾದಗಳು ರುಕ್ಮಿಣಿ ಮಾಲಾ ಹಾಗೂ ನಯನಮೇಡಂ
ಸುಂದರವಾದ ಸೂಕ್ತ ಚಿತ್ರದೊಂದಿಗೆ ಬರುವ ಕಥೆಗಳು ಬಹಳ ಚೆನ್ನಾಗಿವೆ.
ಧನ್ಯವಾದಗಳು ಶಂಕರಿ ಮೇಡಂ