ಪ್ರೇಮಿಗಳ ಸ್ವರ್ಗ ಉದಯಪುರ ಚರಣ – 1
ನನ್ನ ತಂಗಿ ಮಲ್ಲಿಕಾ ಫೋನ್ ಮಾಡಿ ತನ್ನ ಮಗ ರಾಜೂನ ಮದುವೆ ಉದಯ್ಪುರ್ನಲ್ಲಿ ನಡೆಯಲಿದೆ. ಎಲ್ಲರೂ ತಪ್ಪದೇ ಬನ್ನಿ ಎಂದು ಆತ್ಮೀಯತೆಯಿಂದ ಆಹ್ವಾನಿಸಿದಾಗ ಇಲ್ಲ ಎನ್ನಲಾದೀತೆ. ರಾಜೂ ಉದಯ್ಪುರ್ನಲ್ಲಿ ಎಂ.ಡಿ. ವ್ಯಾಸಂಗ ಮಾಡುತ್ತಿದ್ದ. ಅವನ ಜೂನಿಯರ್ ಆಗಿದ್ದ ಪದ್ಮಿನಿಯಲ್ಲಿ ಪ್ರೀತಿ ಚಿಗುರೊಡೆದಿತ್ತು. ಅಂತರ್ ರಾಜ್ಯ ಮದುವೆಯಾದ್ದರಿಂದ ಇಬ್ಬರು ಪ್ರೇಮಿಗಳ ಮಧ್ಯೆ ಹಲವು ಅಡೆತಡೆಗಳು ಎದುರಾಗುವುದು ಸಹಜ. ಆದರೆ ಈ ಭಲೇ ಜೋಡಿ ಎಲ್ಲಾ ಸಂಕಷ್ಟಗಳನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ತಂದೆತಾಯಿಯರನು ಒಪ್ಪಿಗೆ ಪಡೆದೇ ಬಂಧುಬಾಂಧವರ ಮುಂದೆ ತಮ್ಮ ವಿವಾಹ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ನನ್ನ ಗೆಳತಿ ಶೀಲಾಳ ಮುಂದೆ ಉದಯಪುರದಲ್ಲಿ ನಡೆಯುತ್ತಿರುವ ಮದುವೆಯ ಸುದ್ದಿ ಹೇಳಿದಾಗ, ತಟ್ಟನೆ ಅವಳ ಮಗಳು ಕೇಳಿದ್ದು, ‘ಡೆಸ್ಟಿನೇಷನ್ ವೆಡ್ಡಿಂಗ್ಗೆ’ (Destination Wedding) ಹೋಗ್ತಿದ್ದೀರಾ ಎಂದು. ಹೌದಲ್ಲ, ಉದಯ್ಪುರ್ ಸೆಲಿಬ್ರಿಟಿಗಳ ಮದುವೆಯ ತಾಣವೆಂದೇ ಪ್ರಖ್ಯಾತವಾಗಿದೆಯಲ್ವಾ? ಬ್ರಿಟಿಷರು ಹೇಳಿದ್ದ ಮಾತುಗಳು ನೆನಪಾಯಿತು – ಉದಯ್ಪುರ್ ಭಾರತದ ರ್ಯೊಮಾಂಟಿಕ್ ಕೇಂದ್ರಬಿಂದು, ಪ್ರಣಯಪಕ್ಷಿಗಳ ನೆಲೆವೀಡು, ಪ್ರೇಮಿಗಳ ಸ್ವರ್ಗ ಇತ್ಯಾದಿ.
ನಾವೆಲ್ಲಾ ಮದುವೆಗೆ ಹೊರಡಲು ಮೂರು ತಿಂಗಳಿನಿಂದಲೇ ಸಿದ್ಧತೆ ನಡೆಸಿದೆವು. ನಮ್ಮದು ದೊಡ್ಡ ಕುಟುಂಬ. ಮೊದಲಿಗೆ ವಿಮಾನದ ಟಿಕೆಟ್ ಕೊಳ್ಳಬೇಕಿತ್ತು, ತಡವಾದಷ್ಟೂ ಟಿಕೆಟ್ ದರ ಹೆಚ್ಚು. ಹಿರಿಯ ನಾಗರೀಕರಿಗೆ ಸ್ವಲ್ಪ ರಿಯಾಯಿತಿ, ಒಟ್ಟಿಗೇ ಒಂಬತ್ತು ಟಿಕೇಟ್ ಬುಕ್ ಮಾಡಿದರೆ ಇನ್ನೂ ಹೆಚ್ಚಿನ ರಿಯಾಯಿತಿ. ಎರಡು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಪೂರ್ಣ ಟಿಕೆಟ್ ಕೊಳ್ಳಬೇಕು. ಎಲ್ಲರ ಟಿಕೆಟ್ ಕೊಳ್ಳುವ ಪ್ರಕ್ರಿಯೆಯನ್ನು ಮುಗಿಸಿದ ತಂಗಿ ಮಗ ಮಿಥುನ್ಗೆ ಉಘೇ ಎನ್ನಲೇಬೇಕು. ಪ್ರಯಾಣಕ್ಕೆ ನಿಗದಿಯಾದ ದಿನಾಂಕದ ಎರಡು ದಿನ ಮೊದಲು ವೆಬ್ ಚೆಕ್ಇನ್ ಮಾಡಿಸಬೇಕು ಹಾಗೂ – ಕಿಡಕಿಯ ಪಕ್ಕದಲ್ಲಿರುವ ಸೀಟು ಆಯ್ಕೆ ಮಾಡಿದವರು, ವಿಮಾನದ ಮುಂಭಾಗದಲ್ಲಿ ಆಸನಗಳನ್ನು ಆಯ್ಕೆ ಮಾಡಿದವರು ಹೆಚ್ಚಿನ ಶುಲ್ಕ ತೆರಬೇಕಾಯಿತು. ಇರಲಿ, ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿರುವವರಿಗೆ ಕಿಡಕಿಯ ಪಕ್ಕದಲ್ಲಿ ಕುಳಿತು ವಿಮಾನ ಮೇಲೆ ಹಾರುವಾಗ ಆಗುವ ರೋಮಾಂಚನಕ್ಕೆ ಸ್ವಲ್ಪ ಬೆಲೆ ತೆರಲೇಬೇಕಲ್ಲ? ವಿಮಾನ ಮೇಲೇರುತ್ತಿದ್ದಂತೆ ಭೂಮಿಯ ಮೇಲಿರುವ ಮನೆಗಳು ಪುಟ್ಟ ಪುಟ್ಟದಾಗುತ್ತಾ ಹೋಗುವ ದೃಶ್ಯ, ಪುಟ್ಟ ಚೌಕಗಳಂತೆ ಕಾಣುವ ಹೊಲ, ಗದ್ದೆಗಳು, ಮೋಡಗಳು ತೇಲಾಡುವ ದೃಶ್ಯ, ನಮಗೆ ಸಮಾನಾಂತರವಾಗಿ ಸೂರ್ಯ ಉದಯಿಸುತ್ತಿರುವ ಸುಂದರ ನೋಟ, ಎಲ್ಲವೂ ಅತ್ಯಂತ ರಮಣೀಯ ದೃಶ್ಯಗಳೇ. ವಿಮಾನ ಮೇಲೆ ಹಾರುವಾಗ ವಾಯುವಿನ ಒತ್ತಡದಿಂದ ಕಿವಿನೋವು ಬರುವ ಸಂಭವವಿದ್ದುದರಿಂದ, ಚ್ಯೂಯಿಂಗ್ಗಮ್ ಜಗಿಯುತ್ತಾ, ಮಕ್ಕಳ ಹಾಗೆ ಸಂಭ್ರಮಿಸಿದೆವು. ನಾವು ಬೆಂಗಳೂರಿನಿಂದ ಮುಂಜಾನೆ ಐದು ಗಂಟೆಗೆ ಹೊರಟು, ಹೈದರಾಬಾದ್ ಮಾರ್ಗವಾಗಿ ಪಯಣಿಸಿ ಹನ್ನೊಂದು ಗಂಟೆಗೆ ಉದಯಪುರ ತಲುಪಿದೆವು. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಉಪಹಾರ ಮಾಡಿದೆವು, ಕೆಲವರು ತಮ್ಮ ಡೆಬಿಟ್ ಕಾರ್ಡ್ ಬಳಸಿ ಲೌಂಜಿನಲ್ಲಿ ಉಚಿತ ಉಪಹಾರ ಪಡೆದರೆ, ಮತ್ತೆ ಕೆಲವರು ಮನೆಯಿಂದಲೇ ತಂದಿದ್ದ ಚಪಾತಿ, ಖರ್ಜಿಕಾಯಿ ಚಪ್ಪರಿಸಿದೆವು. ನಾನು ನೀರಿನ ಬಾಟಲಿ ಕೊಳ್ಳಲು ಹೋದೆ – ಅರ್ಧ ಲೀಟರ್ ನೀರಿನ ಬಾಟಲಿಗೆ ಎಪ್ಪತ್ತು ರೂಗಳು. ವಿಮಾನದಲ್ಲಿ ನೀರಿನ ಬಾಟಲಿ ಒಯ್ಯುವಂತಿಲ್ಲ ಆದರೆ ಖಾಲಿ ಬಾಟಲಿ ತೆಗೆದುಕೊಂಡು ಹೋಗಬಹುದು, ನಂತರದಲ್ಲಿ ನಾವು ಖಾಲಿ ಬಾಟಲಿ ಒಯ್ದು, ವಿಮಾನ ನಿಲ್ದಾಣದಲ್ಲಿ ನೀರು ತುಂಬಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡೆವು.
ಉದಯಪುರದ ವಿಮಾನ ನಿಲ್ದಾಣಕ್ಕೆ, ತಂಗಿಯ ಬೀಗರು ಟೆಂಪೋ ಟ್ರಾವೆಲರ್ ಕಳುಹಿಸಿದ್ದರು. ನಮ್ಮ ಲಗೇಜನ್ನೆಲ್ಲಾ ಟೆಂಪೋ ಮೇಲೆ ಹಾಕಿ ಮದುವೆ ನಡೆಯಲಿದ್ದ ಸ್ಥಳ ‘ಜೀವನ್ ತಾರಾ ರೆಸಾರ್ಟ್ಗೆ’, ಹೊರಟೆವು. ತಂಗಿಯ ಮಗಳು ಇಂಪನಾಗೆ ತನ್ನ ಸೂಟ್ ಕೇಸ್ ಮೇಲಿನಿಂದ ಕೆಳಗೆ ಬಿದ್ದರೆ ಎಂಬ ಆತಂಕ, ಕಾರಣ ಅವಳ ಸೂಟ್ಕೇಸ್ ತುದಿಯಲ್ಲಿ ತೂಗಾಡುತ್ತಿತ್ತು. ಎರಡು ಮಾರು ಬಾರಿ, ವಾಹನ ನಿಲ್ಲಿಸಿ, ಅವಳ ಸೂಟ್ಕೇಸ್ ಜೋಪಾನವಾಗಿದೆ ಇದೆ ಎಂದು ಖಾತರಿ ಪಡಿಸಿಕೊಂಡೇ ಮುಂದೆ ಸಾಗಿದೆವು. ನಗರದ ಸುತ್ತ ಇರುವ ಒಂದೊಂದೇ ಸರೋವರಗಳು ಕಣ್ಣಿಗೆ ಬೀಳುತ್ತಿದ್ದವು, ಸರೋವರಗಳ ಹಿಂದೆ ಅರಾವಳಿ ಪರ್ವತದ ಸಾಲುಗಳು ಗಿಡ ಮರಗಳಿಂದ ಕಂಗೊಳಿಸುತ್ತಿದ್ದವು. ನಮ್ಮ ಮಲೆನಾಡಿನ ಪಶ್ಚಿಮಘಟ್ಟಗಳ ಹಸಿರ ಸಿರಿಯ ಮುಂದೆ ಅರಾವಳಿ ಪರ್ವತ ಸಾಲುಗಳು ಬೋಳು ಬೋಳಾಗಿ ಕಂಡವು. ಸರೋವರಗಳ ನಾಡೆಂದೇ ಪ್ರಖ್ಯಾತವಾಗಿರುವ ಉದಯಪುರದ ಮಹಾರಾಣ ಉದಯಸಿಂಹನ ಬದುಕಿನ ಪುಟಗಳು ನಮ್ಮ ಕಣ್ಣಮುಂದೆ ತೇಲಿಬಂದವು. ಚಿತ್ತೋರ್ಗಡ್ನ ರಾಣಾ ಕುಂಭನ ಅರಮನೆ, ಮೊಗಲರು ಆಕ್ರಮಣ ಮಾಡಿ ರಾಣಾನ ಸೈನ್ಯವನ್ನು ಸೋಲಿಸಿ ಅರಮನೆಗೆ ನುಗ್ಗುವರು, ರಾಜವಂಶದವರನ್ನೆಲ್ಲಾ ಸಂಹರಿಸಿ, ರಾಣಾನ ವಂಶೋದ್ಧರಕನಾದ ಪುಟ್ಟ ಮಗು ಉದಯಸಿಂಹನನ್ನು ಹತ್ಯೆ ಮಾಡಲು ಅರಮನೆಯೊಳಗೆ ನುಗ್ಗುವರು. ಆಗ ಮಗುವನ್ನು ನೋಡಿಕೊಳ್ಳುತ್ತಿದ್ದ ಪನ್ನಾ ಎಂಬ ದಾದಿಯೊಬ್ಬಳು ಮಾಡಿದ ತ್ಯಾಗ ಮತ್ತು ಬಲಿದಾನದ ಕಥೆ ಇಂದಿಗೂ ಮನೆಮಾತಾಗಿದೆ. ತನ್ನ ಹಸುಗೂಸಿಗೆ ರಾಜಪೋಷಾಕು ತೊಡಿಸಿ, ರಾಜಕುವರ ಉದಯಸಿಂಗನಿಗೆ ಸಾಧಾರಣ ಉಡುಪು ಹಾಕಿದಳು. ತನ್ನ ಮಗುವನ್ನು ರಾಜಕುವರನ ತೊಟ್ಟಿಲಲ್ಲಿ ಮಲಗಿಸಿ, ರಾಜಕುವರನನ್ನು ಹಣ್ಣಿನ ಪುಟ್ಟಿಯಲ್ಲಿ ಅಡಗಿಸಿಟ್ಟು ಗುಪ್ತ ಮಾರ್ಗದ ಮೂಲಕ ಪಲಾಯನ ಮಾಡಿ ಸುರಕ್ಷಿತ ತಾಣವನ್ನು ತಲುಪಿದಳು. ಶತ್ರುಗಳು ದಾದಿ ಪನ್ನಾಳ ಕೂಸನ್ನು, ರಾಜಕುವರನೆಂದೇ ಭ್ರಮಿಸಿ, ಹತ್ಯೆಗೈದು ಸಂಭ್ರಮಿಸಿದರು. ಆದರೆ ವಿಧಿಲಿಖಿತ ಬೇರೆಯಾಗಿತ್ತು. ರಾಣಾನ ವಂಶ ಉದಯಸಿಂಹನ ಮೂಲಕ ಮುಂದುವರೆದಿತ್ತು. ಬೆಳೆದು ದೊಡ್ಡವನಾದ ರಾಜಕುವರನು ಹೊಸ ನಗರವನ್ನು ನಿರ್ಮಿಸಿ ಉದಯಪುರವೆಂದು ಹೆಸರಿಸಿ, ಮೇವಾಡದ ರಾಜಧಾನಿಯನ್ನಾಗಿ ಘೋಷಿಸಿದ. ನಾವಿಂದು ಈ ಸುಂದರವಾದ ಉದ್ಯಾನ ನಗರಿಯಲ್ಲಿ ನಿಂತಿದ್ದೆವು.
ಉದಯಪುರದ ವಿಮಾನ ನಿಲ್ದಾಣದ ಹೊರಗೆ ಮದುವೆಯ ಆಮಂತ್ರಣದ ಕರೆಯೋಲೆಯ ಫ್ಲೆಕ್ಷ್ ಹಾಕಿದ್ದರು. ನಗರದೆಲ್ಲೆಡೆ ಇದೇ ಪ್ಲೆಕ್ಸ್ ರಾರಾಜಿಸುತ್ತಿತ್ತು. ವಿವಾಹ ನಡೆಯುವ ಸ್ಥಳ ಉದಯಪುರದ ಅರಮನೆಯಾಗಿತ್ತು. ನಾವೂ, ಅಂದು ಉದಯಪುರದ ಅರಮನೆಗೆ ಭೇಟಿ ನೀಡಲಿದ್ದೆವು. ಅದೃಷ್ಟವಿದ್ದಲ್ಲಿ ಅರಮನೆಯಲ್ಲಿ ನಡೆಯುವ ಮದುವೆಯ ವೈಭವವನ್ನು ನೋಡೋಣ ಎಂಬ ಹಂಬಲ ಮನದಲ್ಲಿ ಮೂಡಿತ್ತು.
ವಿಮಾನ ನಿಲ್ದಾಣದಿಂದ ನೇರವಾಗಿ ರಾಜುವಿನ ಮದುವೆ ನಡೆಯಲಿದ್ದ ‘ಜೀವನ್ ತಾರಾ’ ರೆಸಾರ್ಟ್ಗೆ ಬಂದೆವು. ನೆಂಟರು ನಮ್ಮನ್ನು ಆತ್ಮೀಯತೆಯಿಂದ ಸ್ವಾಗತಿಸಿದರು. ನಾವು ಅವರು ಸಿದ್ಧಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡು, ಎರಡು ಕಿ.ಮೀ. ದೂರದಲ್ಲಿದ್ದ ಉದಯಪುರದ ಅರಮನೆ ನೋಡಲು ಹೊರಟೆವು. ಅರಾವಳಿ ಬೆಟ್ಟಗಳ ಮಡಿಲಲ್ಲಿ ನೆಲೆಯಾಗಿರುವ, ಮುಗಿಲೆತ್ತರಕ್ಕೆ ಎದ್ದು ನಿಂತಿರುವ ಭವ್ಯವಾದ ಅರಮನೆಗಳ ಸಂಕೀರ್ಣ ಇದು. ಅರಮನೆಯ ಮುಂದೆ ವಿಶಾಲವಾದ ಪಿಚೋಲ ಸರೋವರ, ಸುತ್ತಲೂ ಹಸಿರುಡುಗೆ ತೊಟ್ಟ ವನಸಿರಿ ಪ್ರವಾಸಿಗರ ಮನ ಸೆಳೆಯುವಂತಿತ್ತು. ರಾಣಾ ಉದಯಸಿಂಹನು, ಮೊಗಲರ ಆಕ್ರಮಣದಿಂದ ತನ್ನ ರಾಜ್ಯವನ್ನು ಸಂರಕ್ಷಿಸಲು, ಮೇವಾಡದ ರಾಜಧಾನಿಯನ್ನು ಚಿತ್ತೋಡಿನಿಂದ ಉದಯಪುರಕ್ಕೆ ವರ್ಗಾಯಿಸುವನು. ಪ್ರೇಮ್ಜೀ ಗೋಸ್ವಾಮಿ ಎಂಬ ಋಷಿಗಳ ಅಣತಿಯಂತೆ ಉದಯಪುರದಲ್ಲಿ ತನ್ನ ಅರಮನೆಯನ್ನು ನಿರ್ಮಿಸುತ್ತಾನೆ. 1559 ರಲ್ಲಿ ಮೊದಲ ಹಂತದ ಕಟ್ಟಡದ ನಿರ್ಮಾಣವಾಗುತ್ತದೆ. ನಂತರದಲ್ಲಿ ಬಂದ ರಾಜ ಮಹಾರಾಜರು ಈ ಅರಮನೆಯನ್ನು ವಿಸ್ತರಿಸುತ್ತಾರೆ. ಸುಮಾರು ನಾನ್ನೂರು ವರ್ಷಗಳ ಕಾಲ, ಈ ಅರಮನೆಗೆ ಹೊಂದಿಕೊಂಡಂತೆ ಹನ್ನೊಂದು ಮಹಲುಗಳನ್ನು ನಿರ್ಮಿಸುತ್ತಾರೆ. ಒಂದಕ್ಕಿಂತ ಒಂದು ಸುಂದರವಾದ ಮಹಲುಗಳನ್ನು ಗ್ರಾನೈಟ್, ಮಾರ್ಬಲ್ ಗಳಿಂದ ಕಟ್ಟಲಾಗಿದೆ. ಈ ಅರಮನೆಯ ವಾಸ್ತುಶಿಲ್ಪ ರಾಜಸ್ಥಾನ, ಬ್ರಿಟನ್ ಹಾಗೂ ಚೀನಾದವರ ಶಿಲ್ಪಕಲೆಯ ಸಂಗಮವಾಗಿದೆ. ಬೆಟ್ಟದ ಮೇಲೆ ಕಟ್ಟಲಾಗಿರುವ ಅರಮನೆಯ ಎತ್ತರ 244 ಮೀಟರ್ ಇದ್ದು ಅಗಲ 30.4 ಮೀಟರ್ ಇದೆ. ಅರಮನೆಯ ಪ್ರವೇಶ ದ್ವಾರದಲ್ಲಿ ಮೂರು ಮುಖ್ಯ ದ್ವಾರಗಳಿದ್ದು, ಇದನ್ನು ಟ್ರಿಪೋಲಿ ಎಂದು ಕರೆಯಲಾಗುತ್ತದೆ. ಇಲ್ಲಿ ವಿಶೇಷ ದಿನಗಳಂದು ನಾಡಿನ ದೊರೆಗಳ ತುಲಾಭಾರವನ್ನು ಚಿನ್ನ ಬೆಳ್ಳಿಯಿಂದ ಮಾಡಿ ಬಡ ಬಗ್ಗರಿಗೆ ಹಂಚಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಮುಂದೆ ಸಾಗಿದಂತೆ ವಿಶಾಲವಾದ ಸಭಾ ಭವನಗಳು, ವೈಭವೋಪೇತ ಕೊಠಡಿಗಳು, ಕಿರಿದಾದ ಕಾರಿಡಾರ್ಗಳು, ಶತ್ರುಗಳಿಂದ ತಪ್ಪಿಸಿಕೊಳ್ಳಲು ರಹದಾರಿಗಳಂತೆ ತೋರುವ ಮೆಟ್ಟಿಲುಗಳು, ಪೂಜಾ ಮಂದಿರ, ರಾಣಿಯರ ಅಂತಃಪುರ, ಸುಂದರವಾದ ಬಾಲ್ಕನಿಗಳು, ನೀರಿನ ಕಾರಂಜಿಗಳೂ ಕಂಡುಬಂದವು. ಎಲ್ಲಾ ಬಾಗಿಲುಗಳ ಎತ್ತರ ತುಸು ಕಡಿಮೆಯೇ, ಈ ದ್ವಾರದ ಮೂಲಕ ಹೋಗುವವರೆಲ್ಲಾ ತಲೆ ಬಾಗಿಸಿಯೇ ಹೋಗಬೇಕು. ಅಕಸ್ಮಾತ್ ಶತ್ರುಗಳೇನಾದರೂ ಅರಮನೆಯೊಳಗೆ ನುಸುಳಿದರೆ, ಅವರು ತಲೆ ಬಾಗಿಸಿ ಪ್ರವೇಶ ದ್ವಾರದ ಬಳಿ ಸಾಗುವಾಗ, ಅವರ ಹತ್ಯೆ ಸುಲಭವಾಗಿ ಮಾಡಬಹುದಿತ್ತು. ಅಲ್ಲೊಂದು ಬಾಗಿಲು ನೋಡಿದೆವು, ತೆರೆಯಲು ಶತಪ್ರಯತ್ನ ಮಾಡಿದರೂ, ಆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಅದು ಗೋಡೆಯ ಮೇಲೆ ಬರೆದ ಒಂದು ಬಾಗಿಲಿನ ಚಿತ್ರವಾಗಿತ್ತು. ಇಲ್ಲಿ ಪಾರಿವಾಳಗಳಿಗೆ ವಿಶೇಷವಾದ ಗೂಡುಗಳಿವೆ. ಸೈನ್ಯದ ಮುಖಂಡರಿಗೆ ಸಂದೇಶ ಮುಟ್ಟಿಸಲು ಪಾರಿವಾಳಗಳಿಗೆ ತರಬೇತಿ ನೀಡುತ್ತಿದ್ದರಂತೆ. ಅಲ್ಲೊಂದು ದೊಡ್ಡದಾದ ಚಿತ್ರಪಟದಲ್ಲಿ ಅಶ್ವದಳದ ಚಿತ್ರ ಇದ್ದು, ದೂರದಿಂದ ಬರುವ ಶತ್ರುಗಳಿಗೆ, ಸುಸಜ್ಜಿತವಾದ ಸೈನ್ಯವೊಂದು ತಮ್ಮನ್ನು ಎದುರಿಸಲು ಸಿದ್ದವಾಗಿದೆ ಎಂಬ ಭ್ರಮೆ ಹುಟ್ಟಿಸುತ್ತಿತ್ತಂತೆ.
ಅಮರ ವಿಲಾಸ, ಬಡಿ ಮಹಲ್, ಭೀಮ ವಿಲಾಸ, ದರ್ಬಾರ್ ಹಾಲ್, ಶೀಷ್ ಮಹಲ್ ಒಂದಕ್ಕಿಂತ ಒಂದು ರಜಪೂತರ ಕಲಾನೈಪುಣ್ಯತೆಗೆ ಸಾಕ್ಷಿಯಾಗಿ ನಿಂತಿವೆ. ಕೆಲವು ಮಹಲುಗಳಲ್ಲಿ ಗೋಡೆಗಳ ಮೇಲೆ ಮ್ಯೂರಲ್ ವರ್ಣಚಿತ್ರಗಳನ್ನು ಬಿಡಿಸಿದ್ದರೆ, ಮತ್ತೆ ಕೆಲವು ಗೋಡೆಗಳ ಮೇಲೆ ರಾಜ ಮಹಾರಾಜರ, ನರ್ತಕಿಯರ ವರ್ಣಚಿತ್ರಗಳನ್ನು ಬಿಡಿಸಿದ್ದರು. ಆನೆಯ ದಂತದಿಂದ ನಿರ್ಮಿಸಿದ ಪೂಜಾ ಮಂದಿರದ ಬಾಗಿಲ ಮೇಲಿನ ಸುಂದರವಾದ ಕುಸುರಿ ಕೆಲಸ ಎಲ್ಲರ ಮನ ಸೆಳೆಯುತ್ತಿತ್ತು. ಶೀಷ್ ಮಹಲ್ ಎಂದೇ ಹೆಸರಾದ ರಾಣಿಯ ಅಂತಃಪುರವನ್ನು ಐದು ಸಾವಿರ ಬಣ್ಣ ಬಣ್ಣದ ಗಾಜುಗಳಿಂದಲೇ ಅಲಂಕರಿಸಿದ್ದರು, ಹಸಿರು, ನೀಲ ಹಾಗೂ ಬಂಗಾರದ ವರ್ಣಗಳನ್ನು ಪ್ರತಿಫಲಿಸುತ್ತಿದ್ದ ಗೋಡೆಗಳನ್ನೂ, ಕಮಲದಾಕಾರದ ತಾರಸಿಯನ್ನು ನೋಡಿ ಪ್ರವಾಸಿಗರು ಬೆರಗಾಗಿ ನಿಲ್ಲುವರು. ಕೇವಲ ಮೂರು ಹಣತೆಗಳನ್ನು ಹಚ್ಚಿಟ್ಟರೆ ಸಾಕು, ಇಡೀ ಕೊಠಡಿ ದೇದೀಪ್ಯಮಾನವಾಗಿ ಬೆಳಗುತ್ತಿತ್ತು.
ಅಲ್ಲೊಂದು ಬಾಲ್ಕನಿಯಲ್ಲಿ ಕುಳಿತ ರಾಜ, ದೀನ ದಲಿತರಿಗಾಗಿ, ಕೆಳಗಿದ್ದ ಮಾರ್ಬಲ್ಲಿನ ಚೌಕಾಕಾರದ ಕೊಣಿಗೆಯಲ್ಲಿ ಬೆಳ್ಳಿಯ ನಾಣ್ಯಗಳನ್ನು ಎಸೆಯುತ್ತಿದ್ದನಂತೆ. ಇನ್ನು ಹೋಲಿ ಹಬ್ಬ ಆಚರಿಸುವಾಗ ಓಕುಳಿ ನೀರನ್ನು ತುಂಬಿಸಲು ಒಂದು ಸುಂದರವಾದ ಕೊಳ ಇದೆ. ಮುಂದೆ ಸಾಗಿದಂತೆ ರಾಣಾ ಪ್ರತಾಪಸಿಂಹನ ಆಯುಧಗಳೂ, ಲೋಹದ ಕವಚಗಳೂ, ಶಿರಸ್ತ್ರಾಣಗಳೂ, ಅವರ ಉಡುಪುಗಳನ್ನೂ ಪ್ರದರ್ಶಿಸಿದ್ದರು. ರಾಜ ಮನೆತನದವರ ಮನರಂಜನೆಗಾಗಿ ಆನೆಗಳ ಕಾಳಗವನ್ನು ಏರ್ಪಡಿಸಲಾಗುತ್ತಿತ್ತು. ಎಲ್ಲರೂ ನೋಡಲೇಬೇಕಾದ, ‘ಮೋರ್ ಚೌಕ್’ ನಲ್ಲಿ ಮೂರು ನರ್ತಿಸುತ್ತಿರುವ ನವಿಲುಗಳನ್ನು ಚಿತ್ರಿಸಲಾಗಿದೆ. ಈ ಮೂರು ನವಿಲುಗಳೂ ಬೇಸಿಗೆ, ಮಳೆಗಾಲ, ಚಳಿಗಾಲದ ರೂಪಕವಾಗಿ ನಿಲ್ಲುತ್ತವೆ. ರಾಜವಂಶಸ್ಥರ ವಿವಾಹ ಮಂಟಪದಲ್ಲಿ, ಚಿನ್ನ ಬೆಳ್ಳಿಯಿಂದ ಮಾಡಲ್ಪಟ್ಟಿರುವ ವಸ್ತುಗಳು, ಇವರ ಸಿರಿವಂತಿಕೆಯ ಸಂಕೇತವಾಗಿ ನಿಂತಿವೆ.
ಎರಡು ಮಹಲುಗಳನ್ನು ಹೆರಿಟೇಜ್ ಹೊಟೇಲುಗಳಾಗಿ ಪರಿವರ್ತಿಸಲಾಗಿದೆ. ಇಂದಿನ ಅರಸ ರಾಣಾ ಅರವಿಂದ ಸಿಂಗರು ವಾಸಿಸುವ ಅರಮನೆಗೆ ಪ್ರವಾಸಿಗರ ಪ್ರವೇಶ ನಿಷಿದ್ದ. ಈ ಭವ್ಯವಾದ ಅರಮನೆ ರಾಜಸ್ಥಾನದಲ್ಲಿ ಮೊದಲನೆಯ ಸ್ಥಾನ ಹಾಗೂ ಇಡೀ ದೇಶದಲ್ಲಿ ಎರಡನೆಯ ಸ್ಥಾನದಲ್ಲಿ ನಿಲ್ಲುವುದು. ಒಮ್ಮೆ ಕಣ್ಣು ಮುಚ್ಚಿ ಮಹಾರಾಣ ಪ್ರತಾಪಸಿಂಹನ ಕಾಲಕ್ಕೆ ಹೋಗೋಣ ಬನ್ನಿ -‘ದರ್ಬಾರಿನಲ್ಲಿ ಕುಳಿತು ಪ್ರಜೆಗಳ ಅಹವಾಲನ್ನು ಸ್ವೀಕರಿಸುತ್ತಿರುವ ಅಜಾನುಬಾಹು ತೇಜಸ್ವಿ ದೊರೆ, ರಾಜನಿಗೆ ಸೂಕ್ತವಾದ ಸಲಹೆಗಳನ್ನು ನೀಡುತ್ತಿರುವ ಮಂತ್ರಿಗಳು, ಅರಮನೆಯ ಮೇಲಿನ ಬಾಲ್ಕನಿಗಳಲ್ಲಿ ಕುಳಿತು ರಾಜಕಾರಣವನ್ನು ವೀಕ್ಷಿಸುತ್ತಿರುವ ಸುರ ಸುಂದರಿಯರಾದ ರಾಜಮನೆತನದವರು, ನವಿಲಿನಂತೆ ನರ್ತಿಸುತ್ತಿರುವ ಚೆಲುವೆಯರು, ಕೋಗಿಲೆಯಂತೆ ಹಾಡುತ್ತಿರುವ ಕನ್ನಿಕೆಯರು, ರಾಜನಿಷ್ಠೆಗೆ ಹೆಸರಾದ ಸೈನಿಕರು, ಪ್ರಜೆಗಳು, ಉದ್ಯಾನವನಗಳು, ಪುಟಿಯುವ ಕಾರಂಜಿಗಳು, ಆನೆ ಕುದುರೆಗಳ ಲಾಯಗಳು, ಅಬ್ಬಾ, ಎಂತಹ ಸಂಪದ್ಬರಿತ ರಾಜ್ಯವಾಗಿತ್ತು ಮೇವಾಡ, ಎಂತಹ ದಯಾಳು ರಾಜರು, ಮಂತ್ರಿಗಳು, ವೀರ ಸೈನಿಕರು ಇದ್ದ ನಾಡಿದು. ಮಹಾರಾಣ ಪ್ರತಾಪಸಿಂಹನ ಪ್ರಾಣ ಉಳಿಸಿದ ಕುದುರೆ ಚೇತಕ್ ನನ್ನು ಮರೆಯಲಾದೀತೆ. ತನ್ನ ಪ್ರಾಣವನ್ನೇ ಬಲಿಕೊಟ್ಟು, ಒಡೆಯನ ಜೀವ ಉಳಿಸಿದ ಚೇತಕ್ ಎಲ್ಲರ ಮನದಲ್ಲಿ ಅಜರಾಮರವಾಗಿ ನಿಂತಿದೆ. ಚೇತಕ್ನ ಸ್ಮಾರಕವೂ ಈ ಮಹಲಿನಲ್ಲಿದೆ.’
ಉದಯಪುರದ ಅರಮನೆಯನ್ನು ಎದೆ ತುಂಬಾ, ಮನದ ತುಂಬಾ ತುಂಬಿಕೊಂಡ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು. ವಿಶಾಲವಾದ ಸಭಾ ಭವನವನ್ನು ಮದುವೆಗಾಗಿ ಸಜ್ಜಾಗಿತ್ತು. ವರ್ಣಮಯವಾದ ಹೂಗಳ ಅಲಂಕಾರ, ಝಗಝಗಿಸುವ ಬಣ್ಣ ಬಣ್ಣದ ದೀಪಗಳ ಅಲಂಕಾರ, ಆಕರ್ಷಕ ತೋರಣಗಳು ರಾಣಾ ಉದಯಸಿಂಹನ ವೈಭವೋಪೇತ ರಾಜಸಭೆಯನ್ನು ನೆನಪಿಗೆ ತರುವಂತಿದ್ದವು. ಬಾರಾತ್ನಲ್ಲಿ ರಜಪೂತನ ಉಡುಗೆ ತೊಟ್ಟು, ತಲೆಗೊಂದು ಪಗಡಿ ಧರಿಸಿ, ಕೈಲೊಂದು ಕತ್ತಿ ಹಿಡಿದು ಕುದುರೆ ಏರಿ ಬಂದ ಮದುವೆ ಗಂಡು, ಸರ್ವಾಲಂಕಾರಭೂಷಿತಳಾಗಿ ಪಲ್ಲಕ್ಕಿ ಏರಿ ಬಂದ ಮದುವೆ ಹೆಣ್ಣು, ಮದುವೆ ದಿಬ್ಬಣದಲ್ಲಿ ಸಂಭ್ರಮದಿಂದ ಕುಣಿಯುತ್ತಿದ್ದ ಯುವಕ ಯುವತಿಯರು ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ದವು.
(ಮುಂದುವರೆಯುವುದು)
-ಡಾ.ಎಸ್ ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ತಮ್ಮ ಸೊದರಿಯ ಮಗನ ಮದುವೆಗೆ ಉದಯಪುರಕ್ಕೆ ಹೊರಡುವ ತಯಾರಿ ವಿಮಾನ ಪ್ರಯಾಣದ ಅನುಭವ ತಾವು ತಲುಪಿದ ಸ್ಥಳ ಆಥಿತ್ಯ ಜೊತೆ ಜೊತೆಗೆ ಅಲ್ಲಿ ನ ಅರಮನೆಗೆ ಭೇಟಿ ಐತಿಹಾಸಿಕ ವಿಚಾರ ಎಲ್ಲವನ್ನೂ ವಿವರಿಸುತ್ತಾ ಮದುವೆಯ ಸಡಗರಕ್ಕೆ ತಂದು ನಿಲ್ಲಿಸಿರುವ ನಿಮ್ಮ ಲೇಖನ ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ…ಮೇಡಂ ಆಸಕ್ತಿ ಮೂಡಿಸುವಂತಹ ನಿರೂಪಣೆ… ಅಭಿನಂದನೆಗಳು ಮೇಡಂ
.
ಉದಯಪುರದ ವರ್ಣನೆ ಖುಷಿ ಕೊಡುತ್ತದೆ
ಚೆನ್ನಾಗಿದೆ
ಉದಯಪುರದ ಅರಮನೆಯಲ್ಲಿ ನಡೆಯುವ ಅಭೂತಪೂರ್ವ ಮದುವೆಗೆ ನಮ್ಮನ್ನೂ ಒಯ್ದಿರಿ ಮೇಡಂ.. ಸೊಗಸಾದ ಪ್ರವಾಸ ಲೇಖನ.
Thanks a lot for your kind responses