ಅವಿಸ್ಮರಣೀಯ ಅಮೆರಿಕ-ಎಳೆ 44
ಹಲವು ವಿಶೇಷತೆಗಳ ಸುತ್ತ…
ಅದಾಗಲೇ ಸಂಜೆ ಗಂಟೆ ಆರು…ನಸುಗತ್ತಲು ಆವರಿಸುತ್ತಿದ್ದಂತೆಯೇ ಮಹಾನಗರದ ನಿಜ ವೈಭವ ಕಣ್ಣಮುಂದೆ ಧುತ್ತೆಂದು ಎದ್ದು ನಿಂತಿತು! ನಡೆದಾಡಲು ಜಾಗವಿಲ್ಲದಷ್ಟು ಜನಜಂಗುಳಿ! ಕಣ್ಣು ಕೋರೈಸುವ ಬಣ್ಣ ಬಣ್ಣದ ಬೆಳಕಿನಲ್ಲಿ ಇಡೀ ಮಹಾನಗರವೇ ಮಿಂದೆದ್ದಿದೆ… ಪ್ರತಿಯೊಂದು ಬಹುಮಹಡಿ ಕಟ್ಟಡಗಳು ಪೂರ್ತಿ ಝಗಝಗಿಸುವ ವಿವಿಧ ರೀತಿಯ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ಆದರೆ ರಸ್ತೆ ಪಕ್ಕದ ವಿಶಾಲವಾದ ಕಾಲುದಾರಿಗಳಲ್ಲಿ ಮಂದಬೆಳಕು ಮಾತ್ರ ಹರಡಿತ್ತು. ವಿಶೇಷವೆಂದರೆ, ಹಗಲಿನಲ್ಲಿ ಹೊರಗಿನಿಂದ ಎಲ್ಲಾ ಪಟ್ಟಣಗಳಂತೆ ಸಾಮಾನ್ಯವಾಗಿ ಕಂಡರೂ, ಕತ್ತಲೆಯಾಗುತ್ತಿದ್ದಂತೆ ಇಲ್ಲಿ ಚಟುವಟಿಕೆಗಳು ಆರಂಭವಾಗುತ್ತವೆ…ಅಂದರೆ ಇಲ್ಲಿ ಜನರು ಹಗಲು ನಿದ್ರಿಸಿ ವಿಶ್ರಾಂತಿ ಪಡೆದು, ರಾತ್ರಿ ಪೂರ್ತಿ ಎಚ್ಚರವಿರುತ್ತಾರೆ! ಇಡೀ ಪಟ್ಟಣವೇ ಹಗಲಲ್ಲಿ ನಿಶ್ಶಬ್ದವಾಗಿ; ಹಗಲೇ ರಾತ್ರಿಯಾಗಿ, ರಾತ್ರಿಯೇ ಹಗಲಾಗಿ ಪರಿವರ್ತಿತವಾಗುವುದು ನೋಡುವಾಗ ಅಚ್ಚರಿಯೆನಿಸುತ್ತದೆ. ಹೆಂಗಸರು ಗಂಡಸರೆಂಬ ಭೇದವಿಲ್ಲದೆ ಕತ್ತಲೆಯಾಗುತ್ತಿದ್ದಂತೆಯೇ ಸಿಂಗರಿಸಿಕೊಂಡು ಹೊರಡುತ್ತಾರೆ. ರಸ್ತೆ ಪಕ್ಕಗಳಲ್ಲಿ ಅವರ ದಂಡೇ ದಂಡು! ಕೈಯಲ್ಲಿ ಕಾರ್ಡ್ ಗಳನ್ನು ಹಿಡಿದು ಪ್ರವಾಸಿಗರನ್ನು ಕರೆಯುವ ಪರಿಯಂತೂ ಮುಜುಗರ ಹುಟ್ಟಿಸುತ್ತದೆ. ತಾಸಿನೊಳಗೆ ರಸ್ತೆ ಬದಿಗಳಲ್ಲಿ ಕಾರ್ಡುಗಳ ರಾಶಿ ರಾಶಿಗಳೇ ರೂಪುಗೊಂಡು ಕಾಲುದಾರಿ ಪೂರ್ತಿ ಹೊಲಸಾಗಿರುತ್ತದೆ… ಅವುಗಳದೇ ಸಾಮ್ರಾಜ್ಯ ಎಂದರೆ ನಂಬುವಿರಾ? ಅದೇ.. ಬೆಳಗಾಗುತ್ತಿದ್ದಂತೆಯೇ ಎಲ್ಲವೂ ಸ್ವಚ್ಛ…ಸುಂದರ, ಅದರ ಕುರುಹೂ ಕಾಣದು! ಪುನ: ಸಂಜೆಯಾಗುತ್ತಿದ್ದಂತೆಯೇ ರಾತ್ರಿಯ ಕಾರ್ಯಕ್ರಮಗಳಿಗೆ ನಗರವಿಡೀ ಪುನಃ ಸಜ್ಜುಗೊಳ್ಳುತ್ತದೆ. ಇಲ್ಲಿಗೆ ಜೂಜಾಡಲು ಬರುವ ಮಿಲಿಯಾಧೀಶ್ವರರು ತಮ್ಮ ಸ್ವಂತ ವಿಮಾನಗಳಲ್ಲಿ ಬರುವರು. ಮಜಾ ಮಾಡಿ, ಜೂಜಾಟದಲ್ಲಿ ಬಹಳಷ್ಟು ಹಣ ಕಳೆದುಕೊಂಡರೂ ಅಂತಹವರಿಗೆ ಅಷ್ಟೇನೂ ಬೇಸರವಾಗಲಾರದು ಎಂದು ನನ್ನೆಣಿಕೆ. ಇಲ್ಲಿ ಅದೃಷ್ಟ ಖುಲಾಯಿಸಿ ಹಣ ಬಾಚುವ ಅದೃಷ್ಟವಂತರು ಮಾತ್ರ ಬಹಳ ಕಡಿಮೆ. ಈ ವೇಗಸ್ ಎಂಬುದು ಕಾನೂನು ಪ್ರಕಾರ ಜೂಜಾಡಬಹುದಾದಂತಹ ಜಗತ್ತಿನಲ್ಲೇ ಅತೀ ದೊಡ್ಡ ಜೂಜು ಅಡ್ಡೆ! ಇದರೊಂದಿಗೆ ಅನಿರ್ದಿಷ್ಟ ಮದ್ಯಪಾನವು ನಡೆಯುತ್ತಿದ್ದರೂ ಯಾರೂ ಅತಿರೇಕವಾಗಿ, ಅಸಭ್ಯವಾಗಿ ನಡೆದುಕೊಳ್ಳುವುದು ಕಾಣಸಿಗಲಾರದು.
ಇಷ್ಟೇ ಅಲ್ಲ… ಇಲ್ಲಿ ನಾವು ಅಡ್ಡಾಡುವಾಗ, ಆಗ ತಾನೇ ವಿವಾಹವಾಗಿ ಹೊರಬಂದಂತಹ ಮದುವೆ ಅಲಂಕಾರದಲ್ಲಿರುವ ನವಜೋಡಿಗಳು ಅಲ್ಲಲ್ಲಿ ಕಾಣಸಿಗುತ್ತಾರೆ. ಇದೇನು, ಇಲ್ಲಿಯೂ ನಮ್ಮಂತೆ ಸಾಮೂಹಿಕ ಮದುವೆ ನಡೆಯುತ್ತಿದೆಯೇ ಎಂದು ಮಗಳಲ್ಲಿ ವಿಚಾರಿಸಿದಾಗ ತಿಳಿದುಬಂದ ವಿಷಯ ನಿಜಕ್ಕೂ ಗಾಬರಿಗೊಳ್ಳುವಂತಹುದಾಗಿತ್ತು. ಇಲ್ಲಿರುವ ಬಹಳಷ್ಟು ಮದುವೆ ಸಭಾಂಗಣಗಳಲ್ಲಿ ರಾತ್ರಿ ಮದುವೆ ನಡೆಯುತ್ತದೆ…ಬೆಳಗಾದಂತೆಯೇ ವಿಚ್ಛೇದನವೂ ಆಗಿಹೋಗುವುದು! ವಧುವಾದವಳು ವರನಿಂದ ಸಾಕಷ್ಟು ದುಡ್ಡನ್ನು ಪರಿಹಾರ ರೂಪದಲ್ಲಿ ಕಿತ್ತುಕೊಂಡು(?!) ಇನ್ನೊಂದು ಮಿಕಕ್ಕೆ ಗಾಳ ಹಾಕಲು ಸಿದ್ಧಳಾಗುವಳು! ಇದನ್ನು ಅರಿತಾಗ, ಮದುವೆಯೂ ಇಲ್ಲಿ ಹಣ ಮಾಡುವ ಒಂದು ಸಾಮಾನ್ಯ ಆದರೆ ವಿಚಿತ್ರ ದಂಧೆಯಾಗಿದೆಯಲ್ಲಾ ಎಂದು ನಮಗನಿಸುವುದು ಸುಳ್ಳಲ್ಲ!
ನಗರದ ಸುಂದರತೆಗೆ ಕಿರೀಟಪ್ರಾಯವಾಗಿ ಪಟ್ಟಣದ ಮಧ್ಯಭಾಗದಲ್ಲಿರುವ ಕಾರಂಜಿ ಕೆರೆಯೊಂದು ಪ್ರವಾಸಿಗರನ್ನು ಬಹಳಷ್ಟು ಆಕರ್ಷಿಸುತ್ತದೆ. The Fountain of Bellagio ಎಂಬ ಹೆಸರಿನ ಈ ಅದ್ಭುತ ಕಾರಂಜಿಯು Bellagio ಎಂಬ 36 ಅಂತಸ್ತುಗಳುಳ್ಳ, 508 ಅಡಿಗಳಷ್ಟು ಎತ್ತರವಿರುವ ಬೃಹತ್ ಕಟ್ಟಡದ ಮುಂಭಾಗದಲ್ಲಿದೆ. ಈ ಕಟ್ಟಡದಲ್ಲಿ 3,015 ಕೋಣೆಗಳು ಮಾತ್ರವಲ್ಲದೆ, ಕ್ಯಾಸಿನೋ ಮತ್ತು ರೆಸೋರ್ಟ್ ಗಳೂ ಇವೆ. ಈ ಕಾರಂಜಿ ಕೆರೆಯ ಸ್ಥಾಪನೆಗೆ ಸುಮಾರು 40ಮಿಲಿಯ ಡಾಲರ್ ಖರ್ಚಾಗಿದೆಯೆಂಬ ಮಾಹಿತಿಯಿದೆ. ಸುಮಾರು 8 ಎಕರೆಗಳಷ್ಟು ಜಾಗದಲ್ಲಿ ಹರಡಿಕೊಂಡಿರುವ ಈ ಕೆರೆಯು ಸುಮಾರು 22 ಮಿಲಿಯ ಗ್ಯಾಲನ್ ನೀರನ್ನು ತನ್ನಲ್ಲಿ ಹಿಡಿದಿಟ್ಟುಕೊಂಡಿದೆ. ರಜಾದಿನಗಳಲ್ಲಿ ಸಂಜೆ 7 ಗಂಟೆಯಿಂದ ಮಧ್ಯರಾತ್ರಿ ವರೆಗೆ, ಪ್ರತೀ 15 ನಿಮಿಷಗಳಿಗೊಮ್ಮೆ ಹಾಗೂ ಉಳಿದ ದಿನಗಳಲ್ಲಿ ಸಂಜೆ 3 ಗಂಟೆಯಿಂದ 7 ಗಂಟೆ ವರೆಗೆ ಪ್ರತೀ 30 ನಿಮಿಷಗಳಿಗೊಮ್ಮೆ ಈ ಅತ್ಯಪೂರ್ವ ಕಾರಂಜಿ ನೃತ್ಯವು ಪ್ರದರ್ಶಿಸಲ್ಪಡುತ್ತದೆ.(ಇದು ನಮ್ಮ ಮೈಸೂರಿನ ವೃಂದಾವನದ ಸಂಗೀತ ಕಾರಂಜಿಯನ್ನು ನೆನಪಿಸುತ್ತದೆ.) ಕೆರೆಯೊಳಗಿನ ಯಂತ್ರಗಳು 77 ಅಡಿಗಳಷ್ಟು ಎತ್ತರಕ್ಕೆ 140 ಗ್ಯಾಲನ್ ನೀರನ್ನು ಮೇಲಕ್ಕೆ ಚಿಮ್ಮಿಸುತ್ತವೆ. ಯಾವುದಾದರೂ ಕಥಾಪ್ರಸಂಗ ಅಥವಾ ಸಂಗೀತ ಗಾಯನದ ಹಿನ್ನೆಲೆಯ ಜೊತೆಗೆ ಬಹುವರ್ಣಗಳ ಲೇಸರ್ ಕಿರಣಗಳು ಕಾರಂಜಿಯ ಮೇಲೆ ಬಿದ್ದು ಅವುಗಳು ನರ್ತಿಸುವುದು ನೋಡಲು ಎರಡೂ ಕಣ್ಣುಗಳು ಸಾಲವು. ಸ್ವರ್ಗದಿಂದ ದೇವ ಕನ್ನಿಕೆಯರು ಇಳಿದು ಬಂದು, ಬಣ್ಣದ ವಸನ ತೊಟ್ಟು ನಾಟ್ಯವಾಡಿದಂತೆ ಭಾಸವಾಗುತ್ತದೆ! ಒಂದೊಂದು ನರ್ತನವೂ ಸುಮಾರು ನಾಲ್ಕು ನಿಮಿಷಗಳ ವರೆಗೆ ಪ್ರದರ್ಶಿಸಲ್ಪಡುತ್ತದೆ. ಅದನ್ನು ಕಣ್ತುಂಬಿಕೊಂಡು, ಬಿಟ್ಟು ಹೋಗಲಾಗದೆ, ಮನಸ್ಸಿಲ್ಲದ ಮನಸ್ಸಿನಿಂದ ಮುಂದಕ್ಕೆ ಹೊರಟೆವು… Planet Hollywood ಎಂಬ ಥಿಯೇಟರಿಗೆ.
1967ರಲ್ಲಿ ಪ್ರಾರಂಭವಾದಾಗ ಇದರ ಹೆಸರು ಅಲ್ಲಾದ್ದೀನ್ ಎಂದಾಗಿತ್ತು ಹಾಗೂ ಹೋಟೆಲ್ ಮತ್ತು ಕ್ಯಾಸಿನೋಗಳಿಗಾಗಿ ಮೀಸಲಾಗಿತ್ತು.1998ರಲ್ಲಿ ಇದರ ವಿಸ್ತರಣೆಗಾಗಿ ಪೂರ್ತಿ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ರಚಿಸಿದಾಗ ಇದರಲ್ಲಿ ವಿಶೇಷ ರೀತಿಯ ಹೊಸ ತೆರನಾದ ವ್ಯವಸ್ಥೆಯನ್ನು ಮಾಡಲಾಯಿತು… ಅದುವೇ, ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಬಹುದಾದಂತಹ ವೇದಿಕೆ. 2003ರಲ್ಲಿ ಹೊಸ ಒಡೆತನ ಬಂದಾಗ ಇದರ ಹೆಸರನ್ನೂ ಬದಲಾಯಿಸಿ Planet Hollywood ಎಂಬುದಾಗಿ ಇರಿಸಲಾಯಿತು. ಈ ಕಟ್ಟಡವು ಸುಮಾರು 126 ಎಕರೆಗಳಷ್ಟು ಜಾಗವನ್ನು ಆವರಿಸಿಕೊಂಡಿದೆ.
ಇಲ್ಲಿಯ ವೇದಿಕೆಯಲ್ಲಿ ನಡೆಯುವ ಪ್ರದರ್ಶನಗಳ ವಿವರಗಳು ದ್ವಾರದ ಮುಂಭಾಗದಲ್ಲಿ ಲಭ್ಯವಿರುತ್ತದೆ. ಇದರ ಒಂದು ಪ್ರದರ್ಶನದ ಟಿಕೆಟ್ ದರ ಅತ್ಯಂತ ದುಬಾರಿ…ಒಬ್ಬರಿಗೆ $150. ಅಂತರ್ಜಾಲದ ಮೂಲಕ ಕಾದಿರಿಸಿದರೆ ದರ 65% ಕಡಿಮೆ ಇದೆಯಂತೆ. ಸಂಜೆ 7ರಿಂದ 8ಗಂಟೆ ವರೆಗಿನ ಪ್ರದರ್ಶನಕ್ಕೆ ನಾವು ಹೋಗುವುದಿತ್ತು. ಇನ್ನೂ ಗಂಟೆ ಆರು ಆಗಿತ್ತಷ್ಟೇ. ಅಲ್ಲಿಯವರೆಗೆ ಅಲ್ಲೇ ಹೊರಗಡೆ ಅಡ್ಡಾಡಲು ಹೊರಟೆವು.
ಹಾಗೆಯೇ ನಡೆದಾಡುತ್ತಾ ಮೇಲೆ ನೋಡಿದರೆ, ಶುಭ್ರವಾದ ನೀಲಿ ಆಗಸವು ಬಿಳಿಮೋಡಗಳಿಂದ ತುಂಬಿತ್ತು. ಆದರೆ ಸುತ್ತುಮುತ್ತಲು ಮುಸ್ಸಂಜೆಯಂತೆ ಮಂದಬೆಳಕು ಹರಡಿತ್ತು. ಸ್ವಲ್ಪ ಅಸ್ವಾಭಾವಿಕವಾಗಿ ಕಂಡರೂ ಜಾಸ್ತಿ ತಲೆಕೆಡಿಸಲು ಹೋಗಲಿಲ್ಲವೆನ್ನಿ… ಹೇಗೂ ಕತ್ತಲಾಗುತ್ತಾ ಬರುತ್ತಿದೆಯಲ್ಲಾ ಎಂದುಕೊಂಡೆ. ಮಗಳು ಕೇಳಿದಳು,”ಆಕಾಶ ಎಷ್ಟು ಚೆನ್ನಾಗಿದೆಯಲ್ವಾ?” ಹೌದೆಂದೆ.. ಅಲ್ಲಿಯ ಸೊಗಸನ್ನು ಆಸ್ವಾದಿಸುತ್ತಾ. ಆದರೆ ಅಲ್ಲಿ ಒಂದು ಆಶ್ಚರ್ಯ ಕಾದಿತ್ತು! ಅಲ್ಲಿ ದಿನವಿಡೀ ಅದೇ ತರಹ ಇರುವುದಂತೆ! ಅಂದರೆ, ಆ ಆಗಸ, ಮುಸ್ಸಂಜೆಯ ಬೆಳಕು ಎಲ್ಲವೂ ಮಾನವ ನಿರ್ಮಿತವಾಗಿತ್ತು! ನನಗಂತೂ ಆಶ್ಚರ್ಯದಲ್ಲಿ ತೆರೆದ ಬಾಯಿ ಮುಚ್ಚಲೇ ಮರೆತುಹೋಯ್ತು! ನಾವು ಹೋಗಬೇಕಿದ್ದ ಥಿಯೇಟರ್ ನಲ್ಲಿ ಇನ್ನೂ ಪ್ರದರ್ಶನ ನಡೆಯುತ್ತಿತ್ತು. ಆದ್ದರಿಂದ ಅದು ಮುಗಿಯಲು ಕಾಯುತ್ತಾ ಅಲ್ಲೇ ಎದುರು ಭಾಗದಲ್ಲಿರುವ ಚಂದದ ಕಾರಂಜಿಯ ಪಕ್ಕ ಕುಳಿತೆವು. ಅಲ್ಲಿಂದಲೂ ನನ್ನ ಕಣ್ಣು ಆ ನೀಲಿ ಬಾನ ಮೇಲೆಯೇ ನೆಟ್ಟಿತ್ತು… ಎಲ್ಲಿಯಾದರೂ ಚಂದ್ರಮ ಬರುವನೋ ಎಂದು!
ಗಂಟೆ 6:30… ಸರತಿಯ ಸಾಲು ಪ್ರಾರಂಭವಾಗಿ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಯಿತು. ಆದರೂ ಎಲ್ಲೂ ಗಲಿಬಿಲಿ, ಧಾವಂತ ಕಂಡುಬರಲಿಲ್ಲ. ಸಾವಧಾನವಾಗಿ ಟಿಕೆಟ್ ಖರೀದಿಸಿ, ನಮಗಾಗಿ ನಮೂದಿಸಿದ್ದ ಸೀಟಿನಲ್ಲಿ ಕುಳಿತಾಗ ತಿಳಿಯಿತು ನೋಡಿ, ನಮ್ಮ ಸೀಟು ವೇದಿಕೆಯ ತೀರಾ ಎಡಭಾಗದಲ್ಲಿತ್ತು. ಎದುರು ಭಾಗದಲ್ಲಿ ಕುಳಿತರೆ ಬಹಳ ಚೆನ್ನಾಗಿತ್ತು ಎಂದು ಅಂದುಕೊಂಡರೂ ನಾವೇನೂ ಮಾಡುವ ಹಾಗಿರಲಿಲ್ವಲ್ಲಾ…ಆದರೂ ಅಷ್ಟು ಹಣ ಕೊಟ್ಟುದಕ್ಕೆ ಸರಿಯಾಗಿ ನೋಡಲಾಗುವುದಿಲ್ಲವಲ್ಲಾ ಎಂದು ಕೊರಗುತ್ತಾ ನಾನು ಹೊಟ್ಟೆಯುರಿಸಿಕೊಂಡದ್ದಂತೂ ಸತ್ಯ.
ಸುಮಾರು 300 ಜನರು ಕುಳಿತುಕೊಳ್ಳಬಹುದಾದಂತಹ ಥಿಯೇಟರಿನಲ್ಲಿ ಅದಾಗಲೇ ಮುಕ್ಕಾಲು ಭಾಗ ಪ್ರೇಕ್ಷಕರು ತುಂಬಿದ್ದರು. 7ಗಂಟೆಗೆ ಸರಿಯಾಗಿ ಸೂತ್ರಧಾರನು ವೇದಿಕೆ ಮೇಲಕ್ಕೆ ಬಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದನು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ; ಇಲ್ಲಿ ಕಾರ್ಯಕ್ರಮ ನೀಡುವ ಎಲ್ಲಾ ವ್ಯಕ್ತಿಗಳೂ ಅಂತಾರಾಷ್ಟ್ರೀಯ ಖ್ಯಾತಿಯುಳ್ಳವರು! ಕೆಲವೊಮ್ಮೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದವರೂ ಇರುವರು!
ಮೊತ್ತ ಮೊದಲನೆಯದಾಗಿ ವೇದಿಕೆಗೆ ಬಂದ ಯುವಕನನ್ನು ನಾನೆಲ್ಲೋ ಈ ಮೊದಲೇ ನೋಡಿದಂತೆನಿಸಿತು… ಆಗಲೇ ಗೊತ್ತಾಯಿತು ಸೋನಿ ವಾಹಿನಿಯಲ್ಲಿ ಬರುತ್ತಿದ್ದ ಅಂತಾರಾಷ್ಟ್ರೀಯ ಪ್ರತಿಭಾಪ್ರದರ್ಶನದಲ್ಲಿ ಎಂದು! ತನ್ನ ಶರೀರದ ಸಕಲ ಭಾಗಗಳನ್ನೂ ಬಗ್ಗಿಸಿ, ತಿರುಚಿ(Bone Twister!) ಪ್ರದರ್ಶನ ನೀಡುತ್ತಿದ್ದ ಆ ಯುವಕನ ಮೈಯಲ್ಲಿ ಎಲುಬುಗಳೇ ಇಲ್ಲವೇನೋ ಎನಿಸುತ್ತಿತ್ತು! ಬಟ್ಟೆಯಂತೆ ಅಂಗಾಂಗಗಳನ್ನು ಮಡಚುವುದನ್ನು ನೋಡಿ ದಿಗ್ಭ್ರಾಂತರಾದೆವು! ಮುಂದಿನ ಪ್ರದರ್ಶನಕ್ಕೆ ಸಜ್ಜಾಗಿ ಬಂದ ಮಹಿಳೆಯದು, ದೊಡ್ಡದಾದ ಲೋಹದ ವೃತ್ತಗಳನ್ನು ತಲೆ ಮೇಲಿನಿಂದ ತನ್ನ ಸೊಂಟಕ್ಕೆ ತಂದು ನಿಲ್ಲಿಸಿ, ಅದನ್ನು ತಿರುಗಿಸುತ್ತಾ ಮಾಡುವ ನೃತ್ಯ. (Loop Rings Dance) ಮೊದಲಿಗೆ ಒಂದು ರಿಂಗಿನಿಂದ ಪ್ರಾರಂಭವಾದ ನೃತ್ಯವು, ಕೊನೆಗೆ 30 ರಿಂಗ್ ಗಳನ್ನು ಧರಿಸಿ ಮಾಡುವ ನೃತ್ಯದ ಪರಿಯಂತೂ ಅತ್ಯದ್ಭುತ! ಇಷ್ಟೂ ರಿಂಗ್ ಗಳು ಅವಳ ಸಪೂರವಾದ ಸೊಂಟದಲ್ಲೇ ಅತ್ಯಂತ ರಭಸದಲ್ಲಿ ಸುತ್ತುತ್ತಿದ್ದಂತೆಯೇ, ಚಂದದ ಹಿನ್ನೆಲೆ ಸಂಗೀತಕ್ಕೆ ಸರಿಯಾಗಿ ಮಾಡುವ ವಿಶೇಷ ರೀತಿಯ ನೃತ್ಯ ನೋಡಲು, ತುಂಬಾ ಸಂತೋಷದೊಂದಿಗೆ ಆಶ್ಚರ್ಯವೂ ಆಗುವುದು ಸುಳ್ಳಲ್ಲ. ಅಷ್ಟು ರಿಂಗ್ ಗಳು ಕೈಯಲ್ಲಿ ಹೊತ್ತು ತರಲೇ ಕಷ್ಟವಾಗುವಷ್ಟು ಭಾರವಾಗಿರುವಾಗ, ಅವುಗಳನ್ನು ಲೀಲಾಜಾಲವಾಗಿ ಸೊಂಟದಲ್ಲಿ ವೃತ್ತಾಕಾರವಾಗಿ ಸುತ್ತಿಸುತ್ತಾ ನೃತ್ಯ ಮಾಡುವುದು ಸುಲಭವಲ್ಲ ಅಲ್ಲವೇ? ನಂತರದ ಪ್ರದರ್ಶನವು ಒಂದು ಗಂಡು ಮತ್ತು ಹೆಣ್ಣು ಜೋಡಿಯದು. ಇವರ ಅತ್ಯಮೋಘ ನೃತ್ಯ ಮತ್ತು ಕಸರತ್ತು (Dwarf of Dance)ಗಳನ್ನು ನೋಡಿಯೇ ಕಣ್ಣುಗಳು ತಣಿದವು! ಪ್ರದರ್ಶನಗಳ ಮಧ್ಯಂತರಗಳಲ್ಲಿ ಸೂತ್ರಧಾರ ಅನೇಕ ಇಂದ್ರಜಾಲಗಳನ್ನು ಮಾಡಿ ತೋರಿಸುತ್ತಿದ್ದುದು ಕಾರ್ಯಕ್ರಮಕ್ಕೆ ಕಿರೀಟಪ್ರಾಯವಾಗಿತ್ತು. (ಮಧ್ಯದಲ್ಲಿ ನಮ್ಮ ಪುಟ್ಟ ಮಗುವಿಗೆ ಅಸಹನೆಯಿಂದ ಅಳು…ಮಗಳಿಗೆ ಮಗುವಿನೊಂದಿಗೆ ಹೊರಗಡೆ ಸಮಯ ಕಳೆಯುವ ಅಸಹಾಯಕತೆ!) ದೂರದರ್ಶನದಲ್ಲಿ ನೋಡಿದ ಅದೆಷ್ಟೋ ವಿಶೇಷ ವ್ಯಕ್ತಿಗಳ ಅಭೂತಪೂರ್ವ ಪ್ರದರ್ಶನಗಳನ್ನು ಸ್ವತ: ವೀಕ್ಷಿಸಲು ಒದಗಿದ ಅವಕಾಶವನ್ನು ಮನ:ಪೂರ್ತಿ ಸವಿದೆ. ಪ್ರತಿಯೊಂದು ಕಾರ್ಯಕ್ರಮವೂ ಒಂದಕ್ಕಿಂತ ಒಂದು ಮಿಗಿಲಾಗಿತ್ತು… ಒಂದು ಗಂಟೆ ಸರಿದುದೇ ತಿಳಿಯಲಿಲ್ಲ ನೋಡಿ…!
(ಮುಂದುವರಿಯುವುದು….)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=36373
–ಶಂಕರಿ ಶರ್ಮ, ಪುತ್ತೂರು.
ಅಮೆರಿಕ ಪ್ರವಾಸ..ಕಥನ… ಓದಿ ಸಿಕೊಂಡು..ಹೋಯಿತು..ಅದರಂತೆ… ಅಪ್ಪನ…ಹೆಗಲ..ಮೇಲೆ.. ಕುಳಿತ…ಮೊಮ್ಮಗಳ..ಚಿತ್ರ ವೂ..ಮುದ..ತಂದಿತು… ಶಂಕರಿ.. ಮೇಡಂ.. ಧನ್ಯವಾದಗಳು..
ಧನ್ಯವಾದಗಳು ನಾಗರತ್ನ ಮೇಡಂ.
Beautiful
ಧನ್ಯವಾದಗಳು
I remembered my visit to bellageo. And artificial sky
ಪ್ರವಾಸಿ ಕಥನ ಸುಂದರವಾಗಿ ಮುಂದುವರಿದಿದೆ.