ತಪ್ಪಿದ ದುರಂತ
ಇತ್ತೀಚೆಗೆ ಜಾರ್ಖಂಡ್ ರಾಜ್ಯದ ದೇವಘರ್ ಜಿಲ್ಲೆಯಲ್ಲಿರುವ ಬಾಬಾ ವೈದ್ಯನಾಥ ದೇವಸ್ಥಾನಕ್ಕೆ ಹೋಗಿದ್ದೆವು. ಪ್ರವಾಸ ಸಂಸ್ಥೆಯ ಕಾರ್ಯಕ್ರಮ ರಾಜಗಿರ್ ನಲ್ಲಿ ಮುಕ್ತಾಯವಾದ್ದರಿಂದ ನಾವು ನಾಲ್ಕು ಜನ ಪ್ರವಾಸಿಗಳು ರಾಜಗಿರ್ ನಿಂದ ಒಂದು ಕಾರು ಮಾಡಿಕೊಂಡು 196 ಕಿ ಮೀ ದೂರದ ದೇವಘರ್ ಗೆ ಪ್ರಯಾಣ ಬೆಳೆಸಿದೆವು. ದೇವಘರ್ ತಲುಪಿ ವಸತಿ ಹುಡುಕಿ ಊಟ ಮುಗಿಸಿದೆವು. ಆಗ ಮಧ್ಯಾಹ್ನ ಮೂರು ಗಂಟೆ. ದೇವಸ್ಥಾನಕ್ಕೆ ಸಾಯಂಕಾಲ ಏಳು ಗಂಟೆಗೆ ಬಂದು ಕರೆದುಕೊಂಡು ಹೋಗುವುದಾಗಿ ಅಲ್ಲಿನ ಪಂಡಿತ್ ಸುಧೀರ್ ಶರ್ಮ ಹೇಳಿದ್ದರು.
ನಮ್ಮ ಜತೆ ಸಹಪ್ರಯಾಣಿಕರಾಗಿದ್ದ ಬೆಂಗಳೂರಿನವರೇ ಆದ ಯೋಗಾನರಸಿಂಹ ಅವರನ್ನು ನಾನು”ಹೇಗೂ ಸಮಯವಿದೆ ನಮ್ಮ ಸುಪರ್ದಿಯಲ್ಲೇ ಕಾರೂ ಇದೆ. ಇಲ್ಲಿಂದ ಮೂವತ್ತು ಕಿ ಮೀ ದೂರ ಇರುವ ಪ್ರಸಿದ್ಧ ತ್ರಿಕೂಟ ಪರ್ವತಕ್ಕೆ ಹೋಗಿ ಬರೋಣವೇ?” ಎಂದು ಕೇಳಿದೆ. ಅವರು ಅರೆಮನಸ್ಸಿನಿಂದ ಒಪ್ಪಿದರು.ಏಕೆಂದರೆ ಅವರ ಗಮನವೆಲ್ಲ ದೇವಸ್ಥಾನ ಮತ್ತು ಐದು ಗಂಟೆಗೆ ಹೋಟೆಲ್ ಬಳಿ ಬರುತ್ತೇನೆಂದು ಹೇಳಿದ್ದ ಪಂಡಿತ್ ಸುಧೀರರತ್ತಲೇ ಇತ್ತು.
ತ್ರಿಕೂಟ ಪರ್ವತವು ಜಾರ್ಖಂಡ್ ರಾಜ್ಯದ ದೇವಘರ್ ಪಟ್ಟಣದಿಂದ ಮೂವತ್ತು ಕಿ ಮೀ ದೂರದಲ್ಲಿ ಡುಮ್ಕ ಮಾರ್ಗದಲ್ಲಿದೆ. ಮೂರು ಪರ್ವತ ಶೃಂಗದಿಂದ ಕೂಡಿರುವುದರಿಂದ ತ್ರಿಕೂಟ ಪರ್ವತ ಎಂಬ ಹೆಸರು. ಇದರ ಸರಾಸರಿ ಎತ್ತರ 2470 ಅಡಿ. ಒಂದು ಅಗಲವಾದ ಬಂಡೆಯಿದ್ದು ಅದು ರಾವಣ ಪುಷ್ಪಕ ವಿಮಾನ ನಿಲ್ಲಿಸಿದ ಸ್ಥಳ ಎನ್ನುತ್ತಾರೆ. ರಾವಣ ಆತ್ಮಲಿಂಗವನ್ನು ಕೈಲಾಸದಿಂದ ತರುವಾಗ ಮಾರ್ಗಮಧ್ಯ ಸಂಧ್ಯಾವಂದನೆಯ ಸಮಯವಾಯಿತೆಂದು ಅದನ್ನು ಅಲ್ಲಿದ್ದ ಗೊಲ್ಲಬಾಲಕನಿಗೆ ನೀಡಿ ವಿನಂತಿಸುತ್ತಾನೆ, ಮೂರು ಬಾರಿ ನಿನ್ನ ಹೆಸರು ಕರೆಯುತ್ತೇನೆಂದೂ ಅದರೊಳಗೆ ನೀನು ಬಾರದಿದ್ದರೆ ನೆಲಕ್ಕೆ ಇಡುತ್ತೇನೆಂದೂ ವಿಷ್ಣುರೂಪಿಯಾದ ಬಾಲಕ ಷರತ್ತು ಹಾಕುತ್ತಾನೆ. ಒಮ್ಮೆ ನೆಲಕ್ಕಿಟ್ಟರೆ ಅದು ಅಲ್ಲೇ ಸ್ಥಿರವಾಗಿರುತ್ತದೆ. ಇಂಥದೇ ಕಥೆಯನ್ನು ನಮ್ಮ ಗೋಕರ್ಣದಲ್ಲೂ ತಿಳಿಸುತ್ತಾರೆ.
ತ್ರಿಕೂಟ ಒಂದು ರುದ್ರರಮಣೀಯ ಪ್ರಕೃತಿಯ ತವರು.ಹಿಮ ಆವರಿಸಿದಾಗ ಇದನ್ನು ಛೋಟಾ ಹಿಮಾಲಯವೆಂದೂ ಕರೆಯುತ್ತಾರಂತೆ. ಅಂತೂ ನಾನು ನನ್ನ ಪತ್ನಿ ಮತ್ತು ಯೋಗಾನರಸಿಂಹ ದಂಪತಿಗಳು ಕಾರಿನಲ್ಲಿ ತ್ರಿಕೂಟ ಪರ್ವತದತ್ತ ಹೊರಟೆವು.
ಅಲ್ಲಿ ತಲುಪಿದಾಗ ಮಾರ್ಗದರ್ಶಿ ಒಬ್ಬ ಬಂದು ಮೇಲೆ ಹೋಗಲು ಮೆಟ್ಟಲುಗಳು ಇದ್ದರೂ ಇಲ್ಲಿ ವಿಪರೀತ ಕೋತಿಕಾಟ ಇರುವುದರಿಂದ ಹೊಸದಾಗಿ ಬಂದವರು ಕೇಬಲ್ ಕಾರಿನಲ್ಲಿ ಹೋಗುವುದು ಉತ್ತಮ ಮಾರ್ಗವೆಂದೂ ಟಿಕೇಟಿನ ಮೊತ್ತದ ಜತೆ ನೂರ ಐವತ್ತು ರೂಪಾಯಿ ಕೊಟ್ಟರೆ ತಾನು ಬಂದು ಮಾರ್ಗದರ್ಶನ ಮಾಡುವುದಾಗಿಯೂ ಹೇಳಿದ. ನಮಗೂ ಅದು ಸರಿಯೆಂದು ತೋರಿತು. ಅಪರಿಚಿತ ಸ್ಥಳದಲ್ಲಿ ನಮ್ಮ ಸ್ವಂತ ಬುದ್ಧಿಯ ಪ್ರಯೋಗ ಬೇಡವೆನಿಸಿ ಅವನೊಂದಿಗೆ ಹೊರಟೆವು.ಆಗ ಮಧ್ಯಾಹ್ನ ಮೂರು ಮೂರೂಕಾಲು ಸಮಯ. ಕೇಬಲ್ ಕಾರಿನಲ್ಲಿ ಕುಳಿತು ಪರ್ವತದ ಶೃಂಗ ತಲುಪಿದೆವು. ಬಹಳ ಸುಂದರ ನೋಟ, ಭರ್ರನೆ ಬೇಸುವ ಗಾಳಿ,ಸುತ್ತಲೂ ಹಸಿರು,ಪುರಾಣ ಇತಿಹಾಸದ ಕುರುಹುಗಳು ಎಲ್ಲವನ್ನೂ ಅನುಭವಿಸಿ ದೇವಘರ್ ಗೆ ವಾಪಸು ಬಂದೆವು.
ಅಂದು ರಾತ್ರಿ ಮತ್ತು ಮಾರನೆಯ ದಿನ ಬೆಳಿಗ್ಗೆ ಬಾಬಾ ವೈದ್ಯನಾಥ ಧಾಮಕ್ಕೆ ಹೋಗಿ ದರ್ಶನ ಹಾಗೂ ಪ್ರಸಾದ ಪಡೆದು ಹತ್ತು ಗಂಟೆಯ ಹೊತ್ತಿಗೆ ಪಟ್ನಾದತ್ತ ಚಲಿಸಿದೆವು. ಏಳು ಗಂಟೆಯ ಪ್ರಯಾಣದ ನಂತರ ಪಟ್ನಾದ ಬುದ್ಧ ಇನ್ ಹೋಟೆಲ್ ತಲುಪಿ ವಿಶ್ರಾಂತಿ ಪಡೆಯುತ್ತಿದ್ದೆವು.
ಇದ್ದಕ್ಕಿದ್ದಂತೆ ನನ್ನ ಮೊಬೈಲಿಗೆ ಒಂದು ಫೋನ್. ರಾಜಗಿರ್ ವರೆಗಿನ ಪ್ರವಾಸದಲ್ಲಿ ನಮ್ಮ ಸಹ ಪ್ರವಾಸಿಯಾಗಿದ್ದ ರುದ್ರಮುನಿಯವರದ್ದು. ”ಆರಾಮೇನ್ರಿ ಸಾಹೇಬರಾ?”ಎಂದು ಆತಂಕದಲ್ಲೇ ಕೇಳಿದರು.
“ಚೆನ್ನಾಗಿದ್ದೇವೆ ಮಾಸ್ತರ್ರೆ”ಎಂದು ಉತ್ತರಿಸಿದೆ.
“ನಿಮಗೇನೂ ಅಪಾಯ ಆಗಿಲ್ಲ ತಾನೇ,ನೀವು ಅಕ್ಕಾವ್ರು,,ನಿಮ್ಮ ಜತೆ ಹೊರಟಿದ್ದ ಯೋಗಣ್ಣ, ಅವರ ಮನಿಯಾಕೆ ಎಲ್ಲ ಕ್ಷೇಮ ಹೌದಲ್ಲೋ?”
ನನಗೇಕೋ ರುದ್ರಮುನಿಯವರು ಕುಶಲೋಪರಿ ವಿಚಾರಿಸಿದ ರೀತಿಯೇ ವಿಲಕ್ಷಣವಾಗಿ ಕಂಡಿತು. ”ಎಲ್ಲ ಚೆನ್ನಾಗಿದ್ದೇವೆ. ಹೋಟೆಲಿನಲ್ಲಿ ಕೂತು ಆರಾಮಾಗಿ ಕಾಫಿ ಕುಡೀತಾ ಇದ್ದೀವಿ ಏನು ಸಮಾಚಾರ”ಎಂದು ಕೇಳಿದೆ.
ʼ ಅಲ್ರಪಾ ನಿಮಗೆ ವಿಷಯ ಗೊತ್ತಿಲ್ಲೇನು?ʼ ಎಂದು ಕೇಳಿದರು.
ʼಯಾವ ವಿಷಯ?ʼಕೇಳಿದೆ.
ʼನೀವು ದೇವಘರ್ ಹತ್ತಿರ ತ್ರಿಕೂಟ ಪರ್ವತಕ್ಕೆ ಹೋಗಬೇಕು ಅಂದಿದ್ದೀರಿ.ಹೋಗಿದ್ದರೇನು?”
“ಮೊನ್ನೆ ಹೋಗಿದ್ದೆವು ರುದ್ರಮನಿ.”
“ಎಷ್ಟು ಹೊತ್ತಿಗೆ?”
ʼಮೂರು ಗಂಟೆ ಹದಿನೈದು ನಿಮಿಷದ ಹೊತ್ತಿಗೆʼಎಂದೆ.
“ನಾಲ್ಕೂವರೆ ಹೊತ್ತಿಗೆ ಅಲ್ಲಿ ಎರಡು ಕೇಬಲ್ ಕಾರುಗಳು ಢಿಕ್ಕಿ ಹೊಡೆದು ಇಬ್ಬರು ಸತ್ತಿದ್ದಾರಂತೆ. ಕೇಬಲ್ ಕಾರಿನಲ್ಲಿ ಸಿಕ್ಕಿದವರನ್ನು ಹೊರತರಲು ಇಂಡಿಯನ್ ಏರ್ ಫೋರ್ಸ್ ಹೆಲಿಕಾಪ್ಟರು ಬಂದಿದೆಯಂತೆ. ಕೆಲವರು ನಲವತ್ತು ಗಂಟೆ ಕಾಲ ಕೇಬಲ್ ಕಾರಿನಲ್ಲೇ ಸಿಕ್ಕಿಬಿದ್ದರಂತೆ. ರಕ್ಷಣೆ ಮಾಡುವಾಗ ಒಬ್ಬ ಹೆಣಮಗಳು ಹೆಲಿಕಾಪ್ಟರಿನಿಂದ ಬಿದ್ದು ಸತ್ತಳಂತೆ?ಇವು ಯಾವುದೂ ನಿಮಗೆ ತಿಳೀದೆ?” ವಿವರಿಸಿದರು.
ನಾವು ನಾಲ್ಕು ಗಂಟೆಗೆ ಪರ್ವತದ ತುದಿಯಿಂದ ವಾಪಸಾಗಿದ್ದೆವು. ಮುಂದಿನ ಟ್ರಿಪ್ಪಿನಲ್ಲಿ ಈ ದುರಂತ ಸಂಭವಿಸಿತ್ತು. ರುದ್ರಮುನಿಯವರಿಗೆ ವಿವರಿಸಿದೆ.
“ಆ ಬಾಬಾ ವೈದ್ಯನಾಥನೇ ನಿಮ್ಮನ್ನ ಕಾಪಾಡಿದ ಬಿಡ್ರಿ. ಕ್ಷೇಮವಾಗಿ ಬೆಂಗಳೂರಿಗೆ ಬನ್ರೀ“ ಹಾರೈಸಿ ಫೋನ್ ಇಟ್ಟರು.
ಅಂದರೆ ನಮಗೂ ಅಪಘಾತಕ್ಕೂ ಕೇವಲ ಇಪ್ಪತ್ತು ನಿಮಿಷದ ಅಂತರ ಅಷ್ಟೆ. ಯೋಗಾನರಸಿಂಹ ಅವರಿಗೆ ಈ ವಿಷಯ ತಿಳಿಸಿದಾಗ ಅವರು “ ಅಲ್ಲಿಗೆ ಬರಲು ನನಗೂ ಅರ್ಧಮನಸ್ಸು ಇತ್ತು. ಅದು ಈಗ ನಿಜ ಅನ್ನಿಸ್ತಾ ಇದೆ. ಹೋಗ್ಲಿ ಬಿಡಿ ನಾವು ಅಲ್ಲಿ ಸಿಕ್ಕಿಕೊಳ್ಳಲಿಲ್ಲವಲ್ಲ”ಎಂದರು.
ನಾವು ಪರ್ವತ ಪ್ರದೇಶಗಳಿಗೆ ಪ್ರವಾಸ ಹೋದಾಗ ನಾವು ಕೇಬಲ್ ಕಾರ್ ,ಟ್ರಾಲಿಗಳಲ್ಲಿ ಹೋಗುವುದು ಸಾಧಾರಣವಾದ ವಿಷಯವೇ. ದಿನಪತ್ರಿಕೆ ಓದದೆ ಟಿ ವಿ ನೋಡದೆ ಇದ್ದುದರಿಂದ ನಮಗೆ ಆ ದುರಂತದ ವಿಷಯವೇ ತಿಳಿದಿರಲಿಲ್ಲ.
ವಾಪಸು ಬರುವಾಗ ಪಟ್ನಾ ಏರ್ ಪೋರ್ಟಿನ ಟಿ ವಿ ಯಲ್ಲಿ ದುರಂತದ ದೃಶ್ಯ ಬಿತ್ತರವಾಗುತ್ತಿತ್ತು. ಹೆಲಿಕಾಪ್ಟರಿನಿಂದ ಬಿಸಾಡಿದ ಹಗ್ಗ ಹಿಡಿದು ಕೊಳ್ಳಲಾಗದ ವಯಸ್ಸಾದ ಮಹಿಳೆ ಜಾರಿ ಜನ ನೋಡುತ್ತಿದ್ದಂತೆ ಬಿದ್ದು ಸತ್ತದ್ದು ಎದೆ ನಡುಗಿಸುವಂತಿತ್ತು. ಸಧ್ಯ ಈ ದುರಂತನಾಟಕದಲ್ಲಿ ನಾವು ಪಾತ್ರಧಾರಿಗಳಾಗಲಿಲ್ಲ ಎಂಬುದೇ ಸಮಾಧಾನ.
-ಕೆ ಎನ್ ಮಹಾಬಲ
ಪ್ರವಾಸ.. ಸ್ಥಳ ವೀಕ್ಷಣೆಯ..
ನಂತರದಲ್ಲಾದ….ಅವಘಡ..ಅದರಿಂದ.. ಪಾರಾಗಿಬಂದ..ರೀತಿ.. ಸೊಗಸಾದ ನಿರೂಪಣೆ..ಒಳಗೊಂಡ ಲೇಖನ.. ಚೆನ್ನಾಗಿ ದೆ..ಧನ್ಯವಾದಗಳು..
ಅಬ್ಬಾ…ಎದೆ ನಡುಗಿಸುವಂತಿದೆ!! ದೇವರ ದಯ…ತಾವೆಲ್ಲರೂ ಸುರಕ್ಷಿತವಾಗಿದ್ದುದು! ಲೇಖನ ಮಾತ್ರ ಚೆನ್ನಾಗಿದೆ ಸರ್.
ಅಬ್ಬಾ ಎಂತಹ ಅವಘಡ,ಒಮ್ಮೆ ಹಿಂತಿರುಗಿ ನೋಡಿದಾಗ ಎದೆ ಝಲ್ಲೆನಿಸುವುದು
ಎಲ್ಲರಿಗೂ ಧನ್ಯವಾದ
ಲೇಖನ ಚೆನ್ನಾಗಿದೆ ಸರ್. ಅದೃಷ್ಟ ಅನ್ನುವುದು ಜೊತೆಗಿರುವವರೆಗೂ ನಾವು ಸೇಫ್ ಅಷ್ಟೇ
ರುದ್ರ ಭಯಂಕರ….ಅನುಭವ…
ಅಭಿನಂದನೆಗಳು..