ಅಂತಾರಾಷ್ಟ್ರೀಯ ಅಗ್ನಿಶಾಮಕ ದಳ ದಿನ-ಮೇ 4

Share Button

ಎಲ್ಲಿ ಬೆಂಕಿ ಅವಘಡ ಸಂಭವಿಸಿದರೂ ನಮಗೆ ಫಕ್ಕನೆ ನೆನಪಾಗುವುದು ಅಗ್ನಿಶಾಮಕ ದಳದವರನ್ನು ಅಲ್ಲವೇ? 101ನಂಬರಿಗೆ ತುರ್ತುಕರೆ ಮಾಡಿ ಅವರು ಬಂದ ಮೇಲೆಯೇ ಮನಸ್ಸಿಗೆ ಸಮಾಧಾನ! ಇಂತಹ ಸಂದರ್ಭಗಳಲ್ಲಿ ಕೆಲಸ ಮಾಡುವುದು ಬಹಳ ಕಷ್ಟ ಹಾಗೂ ಅಪಾಯವೂ ಹೌದು. ಇದಕ್ಕೆ ಅಸಮಾನ ಧೈರ್ಯ, ಸಾಹಸದ ಮನೋಭಾವ ಅತ್ಯಗತ್ಯ. ಇಂತಹ ಅಸಮಾನ ಶೂರರಿಗಾಗಿ ಅಂತಾರಾಷ್ಟ್ರೀಯ ಅಗ್ನಿಶಾಮಕ ದಳ ದಿನವನ್ನು ಆಚರಿಸಲಾಗುತ್ತದೆ.

1999ರ ಜನವರಿ 4ರಂದು ಆಸ್ಟ್ರೇಲಿಯಾದಲ್ಲಿ ನಡೆದ ಕಾಡ್ಗಿಚ್ಚು ದುರಂತದಲ್ಲಿ ಐವರು ಅಗ್ನಿಶಾಮಕ ದಳದವರು ದಾರುಣವಾದ ಮೃತ್ಯುವಿಗೆ ಬಲಿಯಾದರು. ಇದರ ಸಲುವಾಗಿ ಸಹಸ್ರಾರು ಅಂತರ್ಜಾಲ ಸಂದೇಶಗಳು ರವಾನೆಯಾಗಿ , ಜೆ. ಜೆ. ಎಡ್ಮಂಡ್ ಸನ್ ಎಂಬ ಮಹಿಳಾ ಅಗ್ನಿಶಾಮಕ ಸಿಬ್ಬಂದಿ, ಪ್ರತಿ ವರ್ಷ, ಮೇ 4ರಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಳ ದಿನವನ್ನಾಗಿ ಆಚರಿಸಲು ಸಲಹೆ ನೀಡಿದರು. ಇವರು ಕೂಡಾ ಓರ್ವ ಅಗ್ನಿಶಾಮಕ ದಳದ ಸಿಬ್ಬಂದಿಯಾಗಿದ್ದು ಹಲವಾರು ಅಗ್ನಿ ದುರ್ಘಟನೆಗಳಲ್ಲಿ ಪ್ರಾಣದ ಹಂಗು ತೊರೆದು ಹಲವು ಜೀವಗಳನ್ನು ರಕ್ಷಿಸಿರುವರು. ಇವರ ಇನ್ನೊಂದು ಅಮೂಲ್ಯ ಸಲಹೆಯಂತೆ, ಪ್ರಮುಖ ಚಿಹ್ನೆಯಾಗಿ ಕೆಂಪು ಮತ್ತು ನೀಲಿ ಬಣ್ಣದ ರಿಬ್ಬನ್ ಉಪಯೋಗಿಸಲಾಗುತ್ತದೆ. ಇಂತಹ ಕೆಲಸಗಳಲ್ಲಿ ತಮ್ಮ ಜೀವದ ಹಂಗು ತೊರೆದು ಹೋರಾಡಿ ಜೀವ, ವಸ್ತು ಇತ್ಯಾದಿಗಳನ್ನು ರಕ್ಷಿಸುವವರಿಗೆ ಅಷ್ಟೇ ಕಟ್ಟುನಿಟ್ಟಾದ ಕಠಿಣ ತರಬೇತಿಯೂ ಅವಶ್ಯ. ಯಾವುದೇ ಸಂದರ್ಭಗಳಲ್ಲೂ ಮಾನಸಿಕ ಸಂತುಲನೆ ಕಳೆದುಕೊಳ್ಳದಂತಿರುವುದು ಕೂಡಾ ಅಷ್ಟೇ ಮುಖ್ಯ. ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಧೈರ್ಯ ತುಂಬುವುದೂ ಕೂಡಾ ತುಂಬಾ ಮುಖ್ಯ ವಿಚಾರವಾಗಿದೆ.

ನಮ್ಮ ಮನೆ ಹತ್ತಿರ, ಎರಡು ಘಟನೆಗಳಲ್ಲಿ 101ಕ್ಕೆ ತುರ್ತುಕರೆ ಮಾಡುವ ಸಂದರ್ಭ ಒದಗಿಬಂದಿತ್ತು. ನಮ್ಮ ತುರ್ತುಕರೆಗೆ ಅವರು ಸ್ಪಂದಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ನಾವಿರುವ ಜಾಗವು ನಗರದಿಂದ ಸ್ವಲ್ಪ ದೂರವಿದ್ದರೂ ಬಹಳ ಬೇಗನೆ ಬಂದು ಸಾರ್ವಜನಿಕರ ಸಹಾಯವನ್ನೂ ಪಡೆದು ಗುಡ್ಡಕ್ಕೆ ಹತ್ತಿದ ಬೆಂಕಿಯನ್ನು ನಂದಿಸಿದ್ದರು. ಇನ್ನೊಂದು ಸಂದರ್ಭದಲ್ಲಿ ಪಕ್ಕದ ಮನೆಯೊಳಗೆ ಉಂಟಾದ ಬೆಂಕಿಗಾಗಿ ಅವರಿಗೆ ಕರೆಮಾಡಿ ಸ್ವಲ್ಪ ಹೊತ್ತಿನಲ್ಲಿ ಬೆಂಕಿಯನ್ನು ಸ್ಥಳೀಯರೇ ನಂದಿಸಿದುದರಿಂದ ಅಗ್ನಿ ಶಾಮಕದಳದವರಿಗೆ ತಕ್ಷಣ ಕರೆಮಾಡಿ ಅವರು ಬರದಂತೆ ತಡೆದೆವು…ಅನಾವಶ್ಯಕ ಅವರಿಗೂ ತೊಂದರೆಕೊಡುವುದು ಸರಿಯಲ್ಲ ಅನ್ನಿಸಿತು. ಹೀಗೆ ಸದಾ ನಮ್ಮೊಡನೆ ನಮ್ಮ ರಕ್ಷಣೆಗೆ ಇರುವ ಈ ನಿಸ್ವಾರ್ಥ ಭಾವದ ಸೂಪರ್ ಹೀರೋಗಳಿಗೆ ನಾವು ಗೌರವಕೊಡಬೇಕಾದುದು ಕೂಡಾ ನಮ್ಮ ಕರ್ತವ್ಯ ತಾನೇ?


-ಶಂಕರಿ ಶರ್ಮ, ಪುತ್ತೂರು.

6 Responses

  1. ಅಗ್ನಿಶಾಮಕ ದಳದವರಿಗೆ ನನ್ನದೊಂದು ಸಲ್ಯೂಟ್…ಅದನ್ನು ನೆನಪಿಸಿ ಅವರ ಉಪಕಾರ ಸ್ಮರಿಸಿದ ಲೇಖನ ಬರೆದವರಿಗೂ ಒಂದು ಸಲ್ಯೂಟ್..

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.

  2. ನಯನ ಬಜಕೂಡ್ಲು says:

    Nice

    • . ಶಂಕರಿ ಶರ್ಮ says:

      ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು

  3. Padma Anand says:

    ಸಕಾಲಿಕ ಮಾಹಿತಿಪೂರ್ಣ ಲೇಖನ. ಖಂಡಿತಾ ಅಗ್ನಿಶಾಮಕ ದಳದ ಸಿಬ್ಬಂದಿಗೆ ಗೌರವಪೂರ್ವಕವಾದ ನಮನಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವೇ ಹೌದು. .ಲೇಖಕಿಗೆ ಅಭಿನಂದನೆಗಳು.

    • . ಶಂಕರಿ ಶರ್ಮ says:

      ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು ಪದ್ಮಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: