ಅಮಾಯಕಿ
”ನಿಂಗವ್ವಗ ಛೊಲೋನೇ ಸೊಕ್ಕ ಬಂದಾದ ಹೊಲ ಮನಿ ರೊಕ್ಕಾ ರುಪಾಯಿ ಬೆಳ್ಳಿ ಬಂಗಾರ ಇದ್ದಿದ್ದರೆ ಇನ್ನೂ ಹೆಚ್ಚಿನ ಸೊಕ್ಕು ಬರುತಿತ್ತು. ಖುರ್ಪಿಯೊಂದು ಬಿಟ್ಟು ಇವಳ ಹತ್ರಾ ಮತ್ತೆನದಾ? ಕೂಲಿ ಮ್ಯಾಲ ಬದುಕತಿದ್ದೀನಿ ಅನ್ನೋದು ಮರೆತಂಗ ಕಾಣಸ್ತಾದ” ಅಂತ ಜಂಬವ್ವ ಒಂದೇ ಸವನೆ ಕೂಗಾಡಿದಳು.
ಅವಳ ಬೈಗುಳ ಕೇಳಿಸಿಕೊಂಡರೂ ನಿಂಗವ್ವ ಕಿವುಡಿಯಾಗಿ ತನ್ನ ಕೆಲಸದಲ್ಲಿ ನಿರತಳಾದಳು. ಇಬ್ಬರ ಮಧ್ಯೆ ಯಾವುದೋ ಒಂದು ಸಣ್ಣ ವಿಷಯಕ್ಕೆ ವೈಮನಸ್ಸು ಬೆಳೆದು ದಿನ ಕಳೆದಂತೆ ಅದು ಹೆಚ್ಚಾಗಿ ಹೋಗಿತ್ತು. ದಿನಾ ಇಬ್ಬರ ಮಧ್ಯೆ ಜಗಳ ಆರೋಪ ಪ್ರತ್ಯಾರೋಪ ಹಾಗೇ ಮುಂದುವರೆದಿತ್ತು.
ಕೆಲವೊಮ್ಮೆ ಜಗಳ ವಿಕೋಪಕ್ಕೆ ಹೋಗಿ ಹಾದಿರಂಪ ಬೀದಿರಂಪವಾದಾಗ ಓಣಿಯವರು ಮಧ್ಯೆ ಪ್ರವೇಶಿಸಿ ”ಯಾಕೆ ಜಗಳಾ ಆಡತೀರಿ ಜಗಳಾ ಆಡೋದರಿಂದ ಯಾವ ಫಾಯದಾನೂ ಇಲ್ಲ. ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗರಿ ನಾಲ್ಕು ದಿನದ ಬದುಕಿನ್ಯಾಗ ಇದೆಲ್ಲ ಛೊಲೊ ಅಲ್ಲ” ಅಂತ ಬುದ್ಧಿವಾದ ಹೇಳಿದ್ದರು.
ಯಾರೇನೇ ಬುದ್ಧಿವಾದ ಹೇಳಿದರೂ ಜಂಬವ್ವ ಕೇಳುತಿರಲಿಲ್ಲ ತನ್ನ ಚಾಳಿ ಮುಂದುವರೆಸುತ್ತಲೇ ಇದ್ದಳು. ಇದರಿಂದ ಸಮಸ್ಯೆ ಬಗೆಹರಿಯದೆ ಇಬ್ಬರ ಮಧ್ಯೆ ವೈಮನಸ್ಸು ಹಾಗೇ ಮುಂದುವರೆದಿತ್ತು.
ಇಬ್ಬರೂ ಕೂಲಿಯ ಮೇಲೆಯೇ ಅವಲಂಬಿತರು. ಒಬ್ಬಳು ಕೂಲೀಗಿ ಹೋದ ಕಡೆ ಇನ್ನೂಬ್ಬಳು ಹೋಗುತಿರಲಿಲ್ಲ. ಯಾರಾದರೂ ಕೂಲೀಗಿ ಕರೆಯಲು ಬಂದರೆ ”ನಿಂಗವ್ವ ಬಂದರೆ ನಾನು ಬರಂಗಿಲ್ಲ” ಅಂತ ಜಂಬವ್ವ ಖಡಕ್ಕಾಗಿ ಹೇಳುತಿದ್ದಳು. ”ಜಂಬವ್ವ ಬರ್ತಾಳಂದರ ನಾನೂ ಬರಂಗಿಲ್ಲ” ಅಂತ ನಿಂಗವ್ವನೂ ಹೇಳುತಿದ್ದಳು.
ಜಂಬವ್ವ ಸ್ವಭಾವತಃ ಜಗಳಗಂಟಿ ಓಣಿಯವರ ಮುಂದೆ ನಿಂಗವ್ವಳಿಗೆ ಬೈಯುವದು ಅವಳ ಬಗ್ಗೆ ಎಲ್ಲಿಲ್ಲದ ಚಾಡಿ ಹೇಳುವದು ಮಾಡುತ್ತಿದ್ದಳು. ಆದರೆ ನಿಂಗವ್ವ ಹಾಗಲ್ಲ ಮೃದು ಸ್ವಭಾವದವಳು.ಅವಳಿಗೆ ಬೈಯುವದಾಗಲಿ ಚಾಡಿ ಹೇಳುವದಾಗಲಿ ಮಾಡುತಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಅಂತ ತನ್ನ ಪಾಡಿಗೆ ತಾನಿರುತಿದ್ದಳು. ಆದರೂ ಜಂಬವ್ವಳ ಕಿರಿಕಿರಿ
ತಪ್ಪುತಿರಲಿಲ್ಲ.
”ನೀನೇ ಛೊಲೊ ನಿಂಗವ್ವ, ದೊಡ್ಡ ಮನಸ್ಸು ಮಾಡತಿ, ಕಾಲು ಕೆದರಿ ಜಗಳಕ್ಕೆ ನಿಲ್ಲೋದಿಲ್ಲ, ಬೈದವಳು ಬೇವಿನಕಾಯಿ, ಬೈಸಿಕೊಂಡವಳು ಮಾವಿನಕಾಯಿ. ಅವಳು ಬೈದರೂ ಬೈಲಿ ಬಿಡು, ಅವಳ ಸ್ವಭಾವ ನಿನಗೂ ಗೊತ್ತೇ ಇದೆ. ಅವಳ ಬೈಗುಳೇನು ಮೈಗೆ ಹತ್ತತಾವಾ? ಯಾವುದೂ ಕಿವ್ಯಾಗ ಹಾಕೋಬ್ಯಾಡ” ಅಂತ ಓಣಿಯ ದೊಡ್ಡ ಗುಂಡವ್ವ ಹಿತೋಪದೇಶ ನೀಡಿದ್ದಳು.
ಕೂಲಿ ಕೆಲಸದಲ್ಲಿ ನಿಂಗವ್ವ ಯಾರ ಕಡೆಯಿಂದಲೂ ಬೊಟ್ಟು ಮಾಡಿ ತೋರಿಸಿಕೊಳ್ಳುತಿರಲಿಲ್ಲ. ತನ್ನ ಕೆಲಸಾ ಸರಿಯಾಗಿ ಮಾಡಿ ಮುಗಿಸುತಿದ್ದಳು. ಅವಳ ಕೆಲಸಾ ನೋಡಿ ಎಲ್ಲರೂ ಮೆಚ್ಚಿ ಹೊಗಳುತಿದ್ದರು. ಆಗ ಜಂಬವ್ವಗೆ ಕೆಂಡದಂತಹ ಕೋಪ ಬರುತಿತ್ತು. ಜೊತೆಗೆ ಹೊಟ್ಟೆಕಿಚ್ಚಿಗೂ ಕಾರಣವಾಗುತಿತ್ತು.
”ಎಲ್ಲರೂ ಆ ನಿಂಗವ್ವಗೇ ಛೊಲೊ ಅಂತಾರೆ ನನಗ್ಯಾರೂ ಹೊಗಳೋದೇ ಇಲ್ಲ. ಹಿಂಗೇ ಆದರೆ ಊರಾಗ ಓಣ್ಯಾಗ ನನ್ನ ಕಿಮ್ಮತ್ತು ಕಡಿಮೆ ಆಗ್ತಾದೆ. ನಿಂಗವ್ವಳಿಗೆ ಒಂದು ಗತಿ ಕಾಣಿಸಲೇಬೇಕು ಅವಳ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಬೇಕು, ಅಂದಾಗಲೇ ಅವಳಿಗೆ ಬುದ್ಧಿ ಬರ್ತಾದೆ, ನನಗೂ ಮನಸ್ಸಿಗೆ ಸಮಾಧಾನ ಸಿಗ್ತಾದೆ” ಅಂತ ಯೋಚಿಸಿದಳು.
ಓಣಿಯ ಹುಂಜವೊಂದು ದಿನಾಲೂ ನಸುಕಿನಲ್ಲಿ ಕೂಗಿ ಎಲ್ಲರಿಗೂ ಎಬ್ಬಿಸುತಿತ್ತು. ಆಗಲೇ ನಿಂಗವ್ವ ಎದ್ದು ತನ್ನ ಕೆಲಸ ಕಾರ್ಯದಲ್ಲಿ ನಿರತಳಾಗುತಿದ್ದಳು. ಅಂದು ಹುಂಜ ಕೂಗಿದ ಶಬ್ದ ಕೇಳಿದರೂ ಏಳಲು ಆಗದೇ ಹಾಗೇ ಮಲಗಿದಳು. ನಿಂಗವ್ವ ಬೇಗ ಎಳದಿರುವದು ನೋಡಿ ಪಕ್ಕದ ಮನೆ ಪಾರವ್ವಳಿಗೆ ಆಶ್ಚರ್ಯವಾಯಿತು. ತನ್ನ ಅಂಗಳ ಕಸ ಹೊಡೆಯೋದು ಬಿಟ್ಟು ಇವಳ ಮನೆಯ ಹತ್ತಿರ ಬಂದು ”ಏ ನಿಂಗವ್ವ ಬೆಳಗಾಗಿದ್ದು ಗೊತ್ತಾಗ್ಯಾದೊ ಇಲ್ಲೊ ? ಇವತ್ತು ಗಿರೆಪ್ಪನ ಹೊಲಕ್ಕೆ ಕೂಲೀಗಿ ಹೋಗಬೇಕು ಇನ್ನೂ ಹಂಗೇ ಮಲಗಿದಿಯಲ್ಲ, ಯಾವಾಗ ತಯ್ಯಾರಾಗಿ ಬರ್ತಿ” ಅಂತ ಟಪಟಪನೆ ಬಾಗಿಲು ಬಾರಿಸಿದಳು.
ನಿಂಗವ್ವ ಕೌದಿಯ ಮುಸುಕು ತೆಗೆದು ಅರಿಛಪ್ಪರದ ಕಡೆ ದೃಷ್ಟಿ ಹಾಯಿಸಿ ನೋಡಿದಾಗ ಕಿಂಡಿಯಿಂದ ಬೆಳಕು ನಿಚ್ಚಳವಾಗಿ ಕಂಡಿತು.
”ಈ ಮಾಗಿಯ ಚಳಿ ಎಷ್ಟು ಮಲಗಿದರೂ ಇನ್ನೂ ಮಲಗಬೇಕು ಅನಿಸ್ತಾದೆ. ಸೂರಜಾ ನೆತ್ತಿಯ ಮ್ಯಾಲ ಬಂದರೂ ಎದ್ದು ಕೆಲಸಾ ಮಾಡಬೇಕು ಅಂತ ಅನಿಸುವುದಿಲ್ಲ” ಅಂತ ಹೊದ್ದುಕೊಂಡ ಕೌದಿ ತೆಗೆದು ಕಣ್ಣು ತಿಕ್ಕಿಕೊಂಡು ಆಕಡೆ ಈಕಡೆ ಮೈ
ಮಣೆಸಿ ಮೇಲೆದ್ದಳು. ಮೂಲ್ಯಾಗಿನ ಕಸಬಾರಿಗೆ ತೊಗೊಂಡು ಮನೆಯ ಒಳ ಹೊರಗೂ ಕಸ ಗೂಡಿಸಿ ಅಂಗಳಕ್ಕೆ ನೀರು ಸಿಂಪಡಿಸಿದಳು.
ಈ ಜೀವ ಛಳಿಗೆ ಮಳೆಗೆ ಬಿಸಿಲಿಗೆ ಯಾವದಕ್ಕೂ ತಾಳೋದಿಲ್ಲ ಅಂತ ಹಿತ್ತಲದಾಗಿನ ಕಟಗಿ ತಂದು ಒತ್ತಲದಾಗ ತುರುಕಿ ಚಿಮಣ್ಯಾಗಿನ ಸೀಮೆ ಎಣ್ಣೆ ಸುರುವಿ ಪುಟುವಿಟ್ಟಳು. ಛಳಿಗೆ ಮುದುಡಿದ ತನ್ನ ಕೈ ಸ್ವಲ್ಪ ಕಾಸಿಕೊಂಡು ಕುದಿ ಎಸರು ಬಂದು ಹೊಯಿದಾಡುವ ಹಾಂಡ್ಯಾದನ ನೀರು ಎಣ್ಣಿ ಹಚ್ಚಿಕೊಂಡು ಸುರುವಿಕೊಂಡಾಗ ತನು ಮನ ಹಾಯೆನಿಸಿತು. ಸೂರ್ಯ ಕಣ್ಣು
ಕುಕ್ಕಿಸಿ ಬೆಳಗುತಿದ್ದ ಗಿರೆಪ್ಪನ ಹೊಲಕ್ಕೆ ಸದೀ ಕೂಲೀಗಿ ಹೋಗಬೇಕು ಆತ ಮೊದಲೇ ಹೇಳ್ಯಾನ ಅಂತ ಅಡುಗೆ ಮನೆಗೆ ಬಂದು ಒಲೆ ಮೇಲೆ ಹಂಚಿಟ್ಟು ಟಪಟಪನೆ ಎಂಟು ಹತ್ತು ರೊಟ್ಟಿ ಬಡಿದು ಗಡಿಗ್ಯಾಗ ಪುಂಡಿಪಲ್ಯಾ ಕುದಿಸಿ ಬೆಳ್ಳೊಳ್ಳಿ ಕುಟ್ಟಿ ಹಾಕಿದಾಗ ಅದರ ವಾಸನೆ ಮೂಗಿಗೆ ಘಮ ಅಂತ ಬಡಿಯಿತು.
ಅಷ್ಟರಲ್ಲಿ ”ನಿಂಗವ್ವಕ್ಕಾ ಬಾರವ್ವೊ ಎಲ್ಲರೂ ಹೊಲದ ಕಡೆ ಹೋಗ್ಯಾರ, ಮೊದಲೇ ದೂರದ ಹೊಲಾ, ಜಲ್ದಿ ಹೋದರೆ ಕೆಲಸಾ ಆಗ್ತಾದೆ” ಅಂತ ಗಿರೆಪ್ಪ ಬಂದು ಅಂಗಳದಾಗ ನಿಂತು ಕೂಗಿದ.
”ಆಯ್ತಪ್ಪೊ ತಮ್ಮಾ ಬುತ್ತಿ ಕಟ್ಟಿಕೊಂಡು ಇನ್ನೇನು ಹೊರಗೆ ಹೆಜ್ಜೆ ಇಡವಳೇ ಇದ್ದೀನಿ” ಅಂತ ಹೇಳಿದಾಗ ಆಯಿತು ಅಂತ ಆತ ತಲೆಯಾಡಿಸಿ ಹೊಲದ ಕಡೆ ಹೊರಟು ಹೋದ.
ನಿಂಗವ್ವ ಬುತ್ತಿ ಗಂಟು ಕಟ್ಟಿ ಸದಿ ತೆಗಿಯೊ ಖುರ್ಪಿಗಾಗಿ ಹುಡುಕಿದಳು. ಅದು ಎಲ್ಲೂ ಕಾಣದೇ ಹೋದಾಗ ಗಾಬರಿ ಆವರಿಸಿತು. ”ಯಾಕೆ ಇನ್ನೂ ತಡಾ ಮಾಡ್ತೀದಿ ಜಲ್ದಿ ಬರಬಾರದಾ?” ಅಂತ ಪಾರವ್ವ ಒತ್ತಾಯ ಪೂರ್ವಕವಾಗಿ ಕೂಗಿದಳು.
”ತಡಿಯವ್ವೊ, ಖುರುಪಿ ಸಿಗ್ತಿಲ್ಲ, ಅದು ಇಲ್ಲದೆ ಹ್ಯಾಂಗ ಬರಲಿ, ಖುರ್ಪಿ ಇದ್ದರೆ ನಮ್ಮ ಕೆಲಸಾ ಇಲ್ಲದಿದ್ದರೆ ಯಾವ ಕೆಲಸಾನೂ ಆಗಂಗಿಲ್ಲ. ಅದನ್ನು ಬಿಟ್ಟು ಹೋದರ ಮದಿಮಗನಿಗಿ ಬಿಟ್ಟು ಮದೀಗಿ ಹೋದಂಗ ಆಗ್ತಾದೆ” ಅಂತ ವಾಸ್ತವ ಹೇಳಿದಳು.
”ಅದೇನು ಬಂಗಾರ ಬೆಳ್ಳಿನಾ? ಅಲ್ಲೇ ಎಲ್ಯಾದರೂ ಇದ್ದಿರಬೇಕು, ಛೊಲೊ ಹುಡುಕು” ಅಂತ ಸಲಹೆ ಕೊಟ್ಟಾಗ. ”ಎಲ್ಲಾ ಕಡೆ ಹುಡುಕೀನಿ, ಹುಡುಕಲಾರದ ಜಾಗಾ ಒಂದೂ ಉಳಿದಿಲ್ಲ ನಮ್ಮ ಮನೆ ಏನು ದೊಡ್ಡಮನೀನಾ” ಅಂತ ಪ್ರಶ್ನಿಸಿದಳು.
”ಹೊಲದಿಂದ ನಿನ್ನೆ ಬರುವಾಗ ತಂದೀದೊ? ಇಲ್ಲೋ? ಛೊಲೊ ನೆನಪು ಮಾಡಿಕೊ, ಅಲ್ಲೇ ಬಿಟ್ಟು ಬಂದರೂ ಬಂದಿರಬೇಕು ಯಾರಿಗೆ ಗೊತ್ತು” ಅಂತ ಪಾರವ್ವ ಅನುಮಾನಿಸಿದಾಗ ”ಕೂಲಿ ಮಾಡೋದ್ರಾಗೇ ಮೂವತ್ತು ವರ್ಷ ಕಳೆದು ಹೋಯಿತು. ಒಮ್ಮೆನೂ ಖುರ್ಪಿ ಬಿಟ್ಟು ಬಂದಿಲ್ಲ ಈಗ ಬಿಟ್ಟು ಬರ್ತೀನಾ? ಇದೇ ಖುರ್ಪಿಯಿಂದ ಊರ ಹೊಲಗೋಳೇ ಸದಿ ಹೊಡದೀನಿ” ಅಂತ ಅನುಭವ ಬಿಚ್ಚಿಟ್ಟಳು.
”ನಿನಗೇನು ಹತ್ತೆಂಟು ಮಕ್ಕಳು ಮರೀನಾ? ಸಣ್ಣ ಮನ್ಯಾಗ ಅದು ಹ್ಯಾಂಗ ಸಿಗ್ತಿಲ್ಲ ? ಇದು ಛೊಲೊ ಕತೀ ಆಯಿತು” ಅಂತ ಪಾರವ್ವ ಪ್ರಶ್ನಿಸಿದಳು.
”ಗಿರೆಪ್ಪನ ಹೊಲದಾಗ ಖುರುಪಿ ಇಲ್ಲದೆ ಹ್ಯಾಂಗ ಸದೀ ತೆಗೀಲಿ, ನೀನು ಹೋಗು ನಾನು ಬರಂಗಿಲ್ಲ” ಅಂತ ಹೇಳಿದಾಗ ”ಇವತ್ತೊಂದಿನ ಹಾದಿ ಮನಿ ಸರವ್ವನ ಖುರ್ಪಿ ಕಡಾ ತೊಗೊಂಡು ಬಾ . ಅವಳು ಮಗಳು ಮನೀಗಿ ಹೋಗ್ಯಾಳ ವಾಪಸ್ ಬರಬೇಕಾದರ ಇನ್ನೂ ಎರ್ಡ್ಮೂರು ದಿನ ಬೇಕು” ಅಂತ ಸಲಹೆ ನೀಡಿದಳು.
ಪಾರವ್ವಳ ಸಲಹೆ ಸೂಕ್ತವೆನಿಸಿತು. ಆದರೆ ಸ್ವಂತ ಖುರ್ಪಿಯ ಚಿಂತೆ ಮಾತ್ರ ನಿಂಗವ್ವಳ ತಲೆಯಿಂದ ದೂರಾಗಲಿಲ್ಲ. ನನ್ನ ಖುರ್ಪಿ ಛೊಲೊ ಇತ್ತು. ಇದರಂಗ ಯಾವದೂ ಇಲ್ಲ, ಯಾರೋ ಹೊಟ್ಟೆ ಕಿಚ್ಚಿಗೆ ನನ್ನ ಖುರ್ಪಿ ಮುಚ್ಚಿಟ್ಟಿರಬೇಕು. ಏನು ಮಾಡೋದು ಎಲ್ಲಿ ಹುಡುಕೋದು ? ಯಾರಿಗೆ ಕೇಳೋದು ಅಂತ ಇಡೀ ದಿನ ಚಿಂತೆಯಲ್ಲೇ ಕಾಲ ಕಳೆದಳು.
”ಸಾಹುಕಾರ್ ಶೇಂಗಾದ ಹೊಲದಾಗ ಹೋಗಿ ಒಂದು ಸಲ ಹುಡುಕಿ ಬಾ ಅಲ್ಲೇ ಸಿಕ್ಕರೂ ಸಿಗಬಹುದು. ನಿನ್ನೆ ಅವರ ಹೊರಕ್ಕೆ ಕೂಲೀಗಿ ಹೋಗಿದ್ದೆ” ಅಂತ ಜೊತೆಗೆ ಕೆಲಸಾ ಮಾಡುವ ಒಬ್ಬಿಬ್ಬರು ಸಲಹೆ ಕೊಟ್ಟರು.
ಅವರ ಮಾತಿಗೆ ನಿಂಗವ್ವ ತಲೆಯಾಡಿಸಿ ಒಂದಿನ ಕೂಲೀಗಿ ವಿರಾಮ ನಿಡಿ ಖುರ್ಪಿ ಹುಡುಕಲು ಸಾಹುಕಾರ ಹೊಲಕ್ಕೆ ತೆರಳಿದಳು. ಇದನ್ನೇ ಕಾಯುತ್ತಿದ್ದ ಜಂಬವ್ವ ”ಛೊಲೊ ಸಮಯ ಸಿಕ್ಕಿದೆ . ನಿಂಗವ್ವಳ ಮ್ಯಾಲ ಕಳ್ಳತನ ಹೊರಿಸಿ ಮಾನ ಮರ್ಯಾದೆ ಹರಾಜ ಹಾಕಬೇಕು” ಅಂತ ಲೆಕ್ಕ ಹಾಕಿ ತಕ್ಷಣ ಸಾಹುಕಾರ್ ಮನೀಗಿ ಚಾಡಿ ಹೇಳಲು ಧಾವಿಸಿದಳು.
ಅಚಾನಕ ಜಂಬವ್ವ ಬಂದಿದ್ದು ನೋಡಿ ”ಯಾಕೆ ಏನು ವಿಷಯ” ಅಂತ ಸಾಹುಕಾರ ಮನ್ಯಾಗ ಎಲ್ಲರೂ ಗಾಬರಿಯಾಗಿ ಪ್ರಶ್ನಿಸಿದರು.
”ನಿಮ್ಮ ಹೊಲಕ್ಕೆ ನಿಂಗವ್ವ ಶೇಂಗಾ ಕಳುವಿಗೆ ಹೋಗ್ಯಾಳ. ನಾನೇ ಕಣ್ಣಾರೆ ಕಂಡೀದ್ದೀನಿ” ಅಂತ ಹೇಳಿದಳು. ಜಂಬವ್ವಳ ಮಾತಿಗೆ ಸಾಹುಕಾರ ಗಾಬರಿಯಾಗಿ ”ಹೌದಾ? ನಿನ್ನ ಮಾತು ಖರೇ ಆದರೆ ನಾನು ಅವಳಿಗೆ ಸುಮ್ಮನೆ ಬಿಡೋದಿಲ್ಲ, ನಡು ಊರ ಕಟ್ಟೀಗಿ ಪಂಚಾಯಿತಿ ಸೇರಿಸಿ ಅವಳಿಗೆ ತಕ್ಕ ಶಾಸ್ತಿ ಮಾಡತೀನಿ” ಅಂತ ಸಿಟ್ಟು ಹೊರ ಹಾಕಿದ.
”ನಿಂಗವ್ವ ಅಂಥ ಮನುಷ್ಯಾಳು ಅಲ್ಲವೇ ಅಲ್ಲ. ನನಗೆ ಅವಳ ಮ್ಯಾಲ ಬಹಳ ನಂಬಿಕೆ ಅದಾ” ಅಂತ ಸಾಹುಕಾರ್ತಿ ಗಂಡನಿಗೆ ಸಲಹೆ ನೀಡಿದಳು.
”ಯಾರು ಯಾವಾಗ ಹ್ಯಾಂಗ ಬದಲೀ ಆಗ್ತಾರೊ ಗೊತ್ತಿಲ್ಲ. ನಾವೇ ಖುದ್ದು ಹೋಗಿ ಪರೀಕ್ಷೆ ಮಾಡಿದಾಗ ನಿಜ ಗೊತ್ತಾಗ್ತದೆ. ನಡೀರಿ ಹೋಗೋಣ” ಅಂತ ಎಲ್ಲರ ಜೊತೆಗೂಡಿ ಸಾಹುಕಾರ ಹೊಲದ ಕಡೆ ಬಂದ
ತಾವು ಬಂದ ವಿಷಯ ನಿಂಗವ್ವಳಿಗೆ ಗೊತ್ತಾಗಬಾರದಾ ಅಂತ ಎಲ್ಲರೂ ಗಿಡದ ಮರೆಯಲ್ಲಿ ನಿಂತು ಪರೀಕ್ಷಿಸತೊಡಗಿದರು.
ಸ್ವಲ್ಪ ಸಮಯದ ನಂತರ ನಿಂಗವ್ವ ಸಾಹುಕಾರ ಹೊಲದಿಂದ ಮನೆಕಡೆ ವಾಪಸ್ ಹೊರಟಳು. ಆದರೆ ಇವಳ ಹತ್ತಿರ ಯಾವುದೇ ಶೇಂಗಾದ ಕಳ್ಳ ಗಂಟು ಕಾಣಿಸಲಿಲ್ಲ ಕೈಯಲ್ಲಿ ಮಾತ್ರ ಬರೀ ಖುರ್ಪಿಯೊಂದೇ ಕಾಣಿಸುತಿತ್ತು .
”ನಾನು ಹೇಳಿಲ್ಲವೇ ನಿಂಗವ್ವ ಅಂತಹ ಮನುಷ್ಯಳಲ್ಲವೇ ಅಲ್ಲ. ನಾವು ಪ್ರತ್ಯಕ್ಷ ನೋಡದೇ ಅವಳ ಮೇಲೆ ತಪ್ಪು ಹೊರೆಸಿದ್ದರೆ ಎಂಥಹ ಅನಾಹುತವಾಗುತಿತ್ತು” ಅಂತ ಸಾಹುಕಾರ್ತಿ ಹೇಳಿದಾಗ ಸಾಹುಕಾರ್ ‘ಹೌದು’ ಅಂತ ತಲೆಯಾಡಿಸಿ. ‘ನನ್ನಿಂದ ದೊಡ್ಡ ಪ್ರಮಾದವಾಗುತಿತ್ತು’ ಅಂತ ಹಳಾಳಿಸಿದ.
ಜಂಬವ್ವಳೇ ಸುಳ್ಳುಗಾರತಿ ಅಂತ ಖಾತ್ರಿಯಾಯಿತು. ಕಳೆದು ಹೋದ ಖುರ್ಪಿ ಸಿಕ್ಕಿದ್ದು ನಿಂಗವ್ವಳಿಗೆ ಸ್ವರ್ಗ ಸಿಕ್ಕಷ್ಟೇ ಖುಷಿಯಾಯಿತು. ಮಂದಹಾಸ ಬೀರುತ್ತಾ ಮನೆ ಕಡೆ ಸರಸರನೆ ಹೆಜ್ಜೆ ಹಾಕಿದಳು !!!
-ಶರಣಗೌಡ ಬಿ ಪಾಟೀಲ, ತಿಳಗೂಳ
ಚೊಕ್ಕವಾದ ಉತ್ತಮಸಂದೇಶ ನೀಡಿದ ಕಥೆ..ಧನ್ಯವಾದಗಳು ಸಾರ್
ಕಥೆ ಹರಿವು ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು.
ಬಹಳ ಚಲೋ ಐತ್ರಿ ಸಾಹೇಬ್ರ ಕತೆ.
ಕತೂಹಲದಿಂದ ಓದಿಸಿಕೊಂಡ ಗ್ರಾಮೀಣ ಸೊಗಡಿನ ಬಾಷೆಯ ಸೊಗಸಾದ ಕಥೆ ಸುಖಾಂತವಾಗಿ ಸಂತಸ ನೀಡಿತು. ಅಭಿನಂದನೆಗಳು..
ಸೊಗಸಾದ ಸಂದೇಶ ಹೊತ್ತ ಕಥೆ ಚಲೋ ಐತೆ ಸರ್.