ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 2
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..)
ಮಾರನೆಯ ದಿನ ಬೆಳಗ್ಗೆಯೇ ತಿಂಡಿ ತಿಂದು, ನೇಪಾಳದ ಎರಡು ಬಸ್ಸುಗಳಲ್ಲಿ ಎಲ್ಲರೂ ಜೈ ಭೊಲೇನಾಥ್, ಓಂ ನಮಃ ಶಿವಾಯ – ಎನ್ನುತ್ತಾ ಪ್ರಯಾಣ ಆರಂಭಿಸಿದಾಗ ಉತ್ಸಾಹ ಪುಟಿಯ ತೊಡಗಿತು. ಅಲ್ಲಿಂದ ಸುಮಾರು 6 – 8 ಗಂಟೆಗಳಷ್ಟು ಪ್ರಯಾಣ ಮಾಡಿ, ಸಂಜೆ ನಾಲ್ಕರ ವೇಳೆಗೆ ‘ಸೇಬುಬಸಿ’ ಎಂಬ ಜಾಗವನ್ನು ತಲುಪಿದಾಗ, ನೇಪಾಳದ ರಸ್ತೆಗಳ ದುರವಸ್ತೆಗಳಿಗೆ ಮೈಕೈಗಳು ಮುಲುಗುಟ್ಟತೊಡಗಿದರೂ, ಪ್ರಕೃತಿಯ ರಮಣೀಯ ದೃಷ್ಯಗಳು ಮನವನ್ನು ಮುದಗೊಳಿಸಿತು. ಅಲ್ಲೇ ಯಾರೋ ಹೇಳಿದರೆಂದು ಒಂದು, ಒಂದೂವರೆ ಕಿ.ಮಿ. ದೂರದಲ್ಲಿದ್ದ ಬಿಸಿನೀರಿನ ಬುಗ್ಗೆಯನ್ನು ನೋಡಿಕೊಂಡು ಬರಲು ಹೊರಟೆವು.
ಏನಿದೀ ವಿಚಿತ್ರ, ಪಕ್ಕದಲ್ಲೇ ಭೋರೆಂದು ತ್ರಿಶೂಲಿ ನದಿ ಹರಿಯುತ್ತಿದ್ದರೂ, ಈ ಕಡೆಗೊಂದು, ಕೈ ಇಟ್ಟರೆ, ಸುಡುವಷ್ಟು ಬಿಸಿನೀರನ್ನು ಚಿಮ್ಮಿಸುತ್ತಿದ್ದ ಬುಗ್ಗೆ. ಪಕ್ಕದಲ್ಲೂ ಮತ್ತೊಂದು ಹದವಾದ ಬಿಸಿನೀರಿನ ಬುಗ್ಗೆ. ಎಲ್ಲವನ್ನೂ ನೋಡಿಕೊಂಡು ಪ್ರಕೃತಿಯ ರಮ್ಯ ತಾಣದಲ್ಲಿ ಮತ್ತಷ್ಟು ¸ ಸುತ್ತಾಡಿ ಹೋಟೆಲ್‍ಗೆ ಹಿಂದುರಿಗಿದಾಗ ಬಿಸಿ ಬಿಸಿ ಊಟ ನಮಗಾಗಿ ಕಾಯುತ್ತಿತ್ತು. ಮುಂದಿನ ದಿನ ಅಲ್ಲಿಂದ ಚೈನಾ ಬಾರ್ಡರ್‍ಗೆ ಪ್ರಯಾಣ. ಸುಮಾರು ಹೊತ್ತು ಕ್ಯೂ ನಲ್ಲಿ ಕಾದು, ಇಮ್ಮಿಗ್ರೇಷನ್ ಮುಗಿಸಿ ಮುಂದೆ ‘ಕಿಯಾಂಗ್’ ಎಂಬ ಪ್ರದೇಶದೆಡೆಗೆ ಬೇರೆಯ, ಚೈನಾ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆವು. ಪ್ರಯಾಣದುದ್ದಕ್ಕೂ ಅಕ್ಕಪಕ್ಕದಲ್ಲಿ ಪರ್ವತ ಶ್ರೇಣಿಗಳ ಸುಂದರ ಪ್ರಕೃತಿ, ನೇಪಾಳದ ಸೆಖೆಯಿಂದ ನಿಧಾನವಾಗಿ ಛಳಿ ಪ್ರದೇಶದೆಡೆಗೆ ಪ್ರಯಾಣ. ಎಲ್ಲಾ ಸುಂದರ, ರಮಣೀಯ, ದೃಷ್ಯಗಳು ಸಹ್ಯವಾಗಿದ್ದರೂ, ಸಮುದ್ರ ಮಟ್ಟದಿಂದ ಎತ್ತರೆತ್ತರಕ್ಕೆ ಹೋಗುತ್ತಿದ್ದುದರಿಂದಲೋ ಏನೋ ದೇಹದಲ್ಲಿ ಹತ್ತು ಹಲವಾರು ತರಹದ ವ್ಯತ್ಯಾಸಗಳು, ಇರಸು ಮುರುಸುಗಳು ಉಂಟಾಗಿ, ಹೇಗಪ್ಪಾ ಮುಂದೆ, ಅನ್ನಿಸಹತ್ತಿತ್ತು. ಚೀನಾ ಆಕ್ರಮಿತ ಕಿಂಯಾಂಗ್ ಎಂಬ ಪಟ್ಟಣ ತಲುಪಿ, ಅಂದು ಅಲ್ಲಿ ವಿಶ್ರಾಂತಿ. ಮರುದಿನ ಕಿಯಾಂಗ್ ನಿಂದ ಹೊರಟು ‘ಸಾಗಾ’ ಎಂಬಲ್ಲಿಗೆ ಪ್ರಯಾಣ. ಈ ಪ್ರಯಾಣದ ಅವಧಿಯಲ್ಲಿ ಯಾತ್ರಿಕರು 4700 ಮೀಟರ್ ಎತ್ತರದಲ್ಲಿ ಪ್ರಯಾಣಿಸುತ್ತಾದದರಿಂದ ನನ್ನನ್ನೂ ಸೇರಿ ಹಲವರಿಗೆ ದೇಹಾಲಸ್ಯ, ಸ್ವಲ್ಪ ಜಾಸ್ತಿಯೇ ಉಂಟಾಯಿತೆನ್ನಬಹುದು.
ಅಲ್ಲಿಂದ ಮರುದಿನ ಬಹುದಿನದ ಕನಸು, ಹಿಂದೂ ಹಾಗೂ ಅನೇಕ ಮತಸ್ಥರ ಪವಿತ್ರ¸ ಸ್ಥಳವಾದ, ದೇವಾನುದೇವತೆಗಳ ವಾಸಸ್ಥಾನವಾದ ಮಾನಸ ಸರೋವರದ ತೀರದಲ್ಲಿ ಬೀಡು ಬಿಟ್ಟಾಗ, ಅಲ್ಲಿಯ ರಮಣೀಯತೆಗೆ, ಅಲ್ಲಿಯ ಪವಿತ್ರತೆಗೆ, ಸರೋವರದ ಅಗಾಧತೆಗೆ, ಸುತ್ತಲ ಸುಂದರ ಪರ್ವತ ಶ್ರೇಣಿಗಳ ವೀಕ್ಷಣೆಗೆ ಮನ ಮೂಕವಾಯಿತು, ಹೃದಯ ತುಂಬಿ ಬಂದಿತು. ಬೆಳ್ಳನೆಯ ಹಂಸ ಪಕ್ಷಿಗಳು, ಚಿನ್ನದ ವರ್ಣದ ಕತ್ತುಗಳನ್ನು ಹೊಂದಿನ ಹಂಸ ಪಕ್ಷಿಗಳು, ಹಿಂಡು ಹಿಂಡಾಗಿ ಬಂದು ಸರೋವರದಲ್ಲಿ ಕೆಲವು ಸಮಯ ಕುಳಿತು, ಪುರ್ ಎಂದು ಒಟ್ಟಿಗೆ ಹಾರಿ ಹೋಗುವಾಗಿನ ದೃಷ್ಯ, “ಓ, ನಾ ಹೇಗೆಂದು ವರ್ಣಿಸಲಿ, ಅತೀ ಸುಂದರ”, ಎಂದಷ್ಟೇ ಹೇಳಬಲ್ಲೆ.
ಸಹ ಯಾತ್ರಿಕರಾದ ಶ್ರೀಮತಿ.ಸುಮಾ ದಂಪತಿಗಳು, ಮಾರನೆಯ ದಿನ ಬೆಳಗಿನ, ಬ್ರಾಹ್ಮೀ ಮುಹೂರ್ತದಲ್ಲಿ ಸರೋವರದ ವೀಕ್ಷಣೆಗೆಂದು ತೆರಳಿದಾಗ, ನಾನೂ ಅವರೊಂದಿಗೆ ಹೋಗಿ, ನನ್ನ ಬಹುದಿನಗಳ ಕನಸಾದ, ಹಿಂದೂಗಳಿಗೆ “ಅಲ್ಟಿಮೇಟ್” ಅನ್ನಿಸಿದ ಮಾನಸ ಸರೋವರದ ಮುಂದೆ, ಪವಿತ್ರ ಘಳಿಗೆಯಾದ ಬ್ರಾಹ್ಮೀಮುಹೂರ್ತದಲ್ಲಿ ಧ್ಯಾನಿಸುತ್ತಾ ಕುಳಿತಾಗ, ಜೀವನ ಸಾರ್ಥಕ ಎನ್ನಿಸಿದ್ದು ಸುಳ್ಳಲ್ಲ.
ಮತ್ತೆ ಕೊಠಡಿಗೆ ಬಂದು ವಿಶ್ರಮಿಸಿ, ನಂತರ ಸ್ವಲ್ಪ ಬಿಸಿಲೇರಿದ ಮೇಲೆ ಸರೋವರ ಸ್ನಾನ. ನೇಪಾಳದಿಂದ ಆಗಮಿಸಿದ್ದ ಶ್ರೀಯುತ ನಾರಾಯಣ ಪುರೋಹಿತರ ನೇತ್ರತ್ವದಲ್ಲಿ ಸ್ಪಟಿಕ ಲಿಂಗಕ್ಕೆ, ಮಾನಸ ಸರೋವರದ ತೀರ್ಥದಿಂದ ಸಾಮೂಹಿಕ ರುದ್ರಾಭಿಷೇಕ, ಹೋಮ, ಹವನಗಳು, ಪೂರ್ಣಾಹುತಿಗಳನ್ನು ನೆರವೇರಿಸಿದಾಗ ಮನ ಮತ್ತೊಮ್ಮೆ ಧನ್ಯತಾ ಭಾವವನ್ನು ಅನುಭವಿಸಿತು. ಸರೋವರದಲ್ಲಿ ಸ್ವಲ್ಪ ಮುಂದೆ ಹೋಗಿ ಬಾಟಲಿಗಳಲ್ಲಿ ನನ್ನ ಜನರಿಗೆ ಹಂಚಲು, ತೀರ್ಥಕ್ಕೆಂದು ಮಾನಸ ಸರೋವರದ ನೀರನ್ನು ತುಂಬಿಸಿಕೊಂಡು , ಮುಂದೆ ಪ್ರಯಾಣಿಸಿ, ಕೈಲಾಶ ಪರ್ವತದ ಬೇಸ್ ಕ್ಯಾಂಪ್, ಆದ ‘ಡಾರ್ಚಿನ್ʼ ಎಂಬ ಪ್ರದೇಶವನ್ನು ತಲುಪಿದಾಗ, ಮನಸ್ಸಿನ ಇಚ್ಚಾ ಶಕ್ತಿ ಸ್ವಲ್ಪ ಹೆಚಾಗಿಯೇ ಇತ್ತೆಂದರೆ ತಪ್ಪಾಗಲಾರದು. ಆದರೆ¸ ಸಂಜೆ ಶರ್ಪಾಗಳು ಬಂದು, ದೇಹದ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಿ, ನಾಳೆಯ ಪರಿಕ್ರಮಕ್ಕೆ ಎಲಿಜಿಬಲ್ ಹೌದೋ ಅಲ್ಲವೋ ಹೇಳುತ್ತಾರೆ, ಎಂದಾಗ ಎದೆ ಮತ್ತೊಮ್ಮೆ ಢವಗುಟ್ಟತೊಡಗಿತು.
ಅಷ್ಟರಲ್ಲೇ ಸಹಯಾತ್ರಿಗಳಿಬ್ಬರ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ, ಅವರುಗಳು ಮತ್ತೊಬ್ಬ ಸಹಯಾತ್ರಿಯೊಂದಿಗೆ ಕಠ್ಮಂಡುವಿಗೆ ಹಿಂದಿರುಗುವ ವ್ಯವಸ್ಥೆಯಾಗುತ್ತಿದೆ ಎಂಬ ಸುದ್ಧಿ ಗೊತ್ತಾದಾಗ ಆತ್ಮಸ್ಥೈರ್ಯ ಮತ್ತೊಮ್ಮೆ ಕುಸಿಯಿತು. ಸಂಜೆಯ ವೇಳೆಗೆ ಶರ್ಪಾ ಅವರು ಬಂದು, ಕೈಲಾಶ ಪರ್ವತ ಶ್ರೇಣಿಯ ಪರಿಕ್ರಮದ ಹಾದಿಯಲ್ಲಿ ಹವಾಮಾನ, ವೈಪರೀತ್ಯದಿಂದ ಕೂಡಿದೆ, ಹಾಗಾಗಿ 60 ವರ್ಷದ ಮೇಲ್ಪಟ್ಟವರು ಹೋಗುವುದು ಅಸಾಧ್ಯ, ಎಂದಾಗ, ಕಣ್ಣು, ಮನಸ್ಸುಗಳಲ್ಲಿ, ಗಂಗಾ ಭಾಗೀರತಿಯರುಗಳು ಧುಮ್ಮಿಕ್ಕಿ ಹರಿಯ ತೊಡಗಿದರು. ನನ್ನ ಕಣ್ಣೀರ ಧಾರೆ ಹಾಗೂ ಪೆಚ್ಚು ಮುಖವನ್ನು ನೋಡಲಾಗದೆ ಶರ್ಪಾ ಅವರು, ನನ್ನ ದೇಹದ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಿ, – ‘ನಿಮ್ಮ ಮುಖ ನೋಡಲಾಗುತ್ತಿಲ್ಲ, ಆಮ್ಲಜನಕದ ಮಟ್ಟ ಪರವಾಗಿಲ್ಲ,ಸುಮಾರಾಗಿ ಚೆನ್ನಾಗಿಯೇ ಇದೆ ಹೋಗುವಿರಂತೆ ಅಳಬೇಡಿ’, – ಎಂದಾಗ ಸ್ವರ್ಗಕ್ಕೆ ಮೂರೇ ಗೇಣು.
ಶರ್ಪಾ ಬಂದು, ಕಷ್ಟದಿಂದ ಮಾರನೆ ದಿನದ ಪರಿಕ್ರಮಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಖುಷಿಯಲ್ಲಿ, ಬೇಗ ಬೇಗ ಸೇರದ ಊಟವನ್ನು ಏನೋ ಒಂದಷ್ಟು ತಿಂದು, ಬೆಳಗ್ಗೆ ಬೇಗ ಎದ್ದು ಬಹುದಿನಗಳ ಆಸೆ, ಕನಸು ಸಾಕಾರಗೊಳ್ಳುವ ಅಮೃತ ಘಳಿಗೆಯನ್ನು ನೆನೆ ನೆನೆದು ರೋಮಾಂಚನಗೊಳ್ಳುತ್ತಾ ನಿದ್ದೆಗೆ ಜಾರೋಣವೆಂದರೆ, ಏನೋ ದೇಹಾಲಸ್ಯ. ಸಣ್ಣಗೆ ನೋಯುತ್ತಾ, ವಿಪರೀತ ಢವಗುಟ್ಟುವ ಎದೆ, ಭುಜಗಳಲ್ಲಿ ನೋವು, ಹೊಟ್ಟೆ ತೊಳಸು, ಏನೇನೋ ಆಗತೊಡಗಿದರೂ – ‘ಅಯ್ಯೋ ಇಲ್ಲಪ್ಪಾ, ಇವೆಲ್ಲಾ ಇದ್ದದ್ದೆ, ಇವುಗಳನ್ನು ಪಕ್ಕಕ್ಕೆ ಒತ್ತರಿಸಿ ಮುಂದುವರಿಯಲೇ ಬೇಕು. ನನಗೇನೂ ಆಗಿಲ್ಲ, ನನಗೇನೂ ಆಗಿಲ್ಲ, ಪದ್ಮ, ನೀನು ಹುಷಾರಾಗಿದೀಯ, ಸುಮ್ಮನೆ ಜಗದೀಶ್ವರನನ್ನು ನೆನೆದು ಮಲಗು‛ – ಎಂದು ನನ್ನ ದೇಹ ಮನಸ್ಸುಗಳಿಗೆ ನಾನೇ ಸಮಾಧಾನ ಹೇಳುತ್ತಾ, ಹೇಗೋ ರಾತ್ರಿಯನ್ನು ಕಳೆದು, ಬೆಳಗ್ಗೆ ಎದ್ದು ತಯ್ಯಾರಾಗಿ ಆಚೆ ಬಂದು ಬಸ್ಸಿನಲ್ಲಿ ಕುಳಿತಿದ್ದಾಯಿತು. ಅಲ್ಲಿಂದ ಕೇವಲ ಹತ್ತು-ಹದಿನೈದು ನಿಮಿಷಗಳ ಪ್ರಯಾಣ ಮಾಡಿ‚ ಪರಿಕ್ರಮದ ಹೆಬ್ಬಾಗಿಲು ‚ ಯಮದ್ವಾರದ ಹತ್ತಿರ ಬಂದು ಬಸ್ಸು ನಿಂತಾಗ ‘ಧೋ’ ಎಂದು ಮಳೆ ಸುರಿಯತೊಡಗಿತು.
ಒಂದರ ಮೇಲೊಂದರಂತೆ ಆರು ಸೆಟ್ಟುಗಳು ಬಟ್ಟೆಯನ್ನು ತೊಟ್ಟಿದ್ದರೂ, ಕಿವಿಗೆ ಹತ್ತಿ, ತಲೆಗೆ ಮಂಕಿ ಕ್ಯಾಪ್, ಮೇಲೊಂದು ವಾಟರ್ ಪ್ರೂಫ್ ಆದ ಕುಲಾವಿಯಂತೆ ಕಟ್ಟ ಬಹುದಾದ ಟೋಪಿ, ಹಾಕಿದ್ದರೂ ದೇಹ ಗಡ ಗಡ ನಡುಗ ತೊಡಗಿದಾಗ ಮನದಲ್ಲಿ ಆತಂಕ ಶುರುವಾಯಿತು. ತಡೆಯಲಾಗದೆ ಮನದಲ್ಲೇ ಮಣ ಮಣ ಎಂದು ನಮ್ಮ ಯೋಗ ತರಗತಿಯಲ್ಲಿ ಸೂರ್ಯ ನಮಸ್ಕಾರ ಮಾಡುವ ಸಮಯದಲ್ಲಿ ಹೇಳುವ ಸ್ತೋತ್ರಗಳನ್ನೆಲ್ಲಾ ಹೇಳಿಕೊಳ್ಳುತ್ತಾ, – ಸೂರ್ಯ ಭಗವಾನ್, ಕರುಣೆ ತೋರಿ ಬಾರಪ್ಪ ತಂದೆ – ಎಂದು ಪ್ರಾರ್ಥಿಸತೊಡಗಿದೆ. ಅಲ್ಲಿ ನೆರೆದಿದ್ದ ಭಕ್ತ ಜನರ ಪುಣ್ಯವೋ, ಏನೋ ಮಳೆಹನಿಗಳು ಕಮ್ಮಿಯಾಗಿ, ಬಾಲರವಿ ನಮ್ಮನ್ನೆಲ್ಲಾಅನುಗ್ರಹಿಸುವಂತೆ ಎಳೆಬಿಸಿಲನ್ನು ಪಸರಿಸತೊಡಗಿದ.
ಏಳನೇ ಲೇಯರ್ ಆಗಿ ತೊಟ್ಟಿದ್ದ ರೈನ್ ಕೋಟನ್ನು ಬಿಚ್ಚಿ ಬ್ಯಾಕ್ ಪ್ಯಾಕಿನಲ್ಲಿಟ್ಟು ಉತ್ಸಾಹದಿಂದ, ಮೈ ಛಳಿಬಿಟ್ಟು, ಕೈ ಕಾಲುಗಳನ್ನು ಆಡಿಸುತ್ತಿದ್ದಾಗ, ನಮ್ಮ ಶರ್ಪಾಗಳ ಟೀಂ ಬಂದು, ಎಲ್ಲರಿಗೂ ದಾರಿಯಲ್ಲಿ ತಿನ್ನಲು ಆಹಾರದ ಪ್ಯಾಕೆಟ್ಟುಗಳನ್ನು ಹಂಚಿ, ಅನತಿ ದೂರದಲ್ಲಿ ಕಾಣುವ ‘ಯಮದ್ವಾರ’ವನ್ನು ತೋರಿಸುತ್ತಾ, – ಈ ಯಮದ್ವಾರಕ್ಕೆ ಮೂರು ಬಾರಿ ಪರಿಕ್ರಮ, ಅಂದರೆ ಪ್ರದಕ್ಷಿಣೆ ಬಂದು ಆ ದ್ವಾರದ ಒಳಹೊಕ್ಕಿ, ಹೊರಬಂದರೆ ಸ್ವರ್ಗ ಪ್ರವೇಶಿಸಿದಂತೆ, ಎಂಬುದು ಪ್ರತೀತಿ. ಹಾಗಾಗಿ ಪ್ರತಿಯೊಬ್ಬರೂ ಭಕ್ತಿಭಾವದಿಂದ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಒಳಹೊಕ್ಕು ಹೊರಬನ್ನಿರಿ. ನಂತರ ದೀರ್ಘ ಪರಿಕ್ರಮ ಸಾಧ್ಯವಾಗದವರು ನಮಸ್ಕರಿಸಿ ಹಿಂದಿರುಗಬಹುದು. ಮಿಕ್ಕವರು ಹಾಗೇ ಮುಂದುವರೆಯಿರಿ – ಎಂದಾಗ, ಎಲ್ಲರೂ ಭಕ್ತಿಭಾವದಿಂದ ಅದರಂತೆ ನಡೆದುಕೊಂಡೆವು. ನಂತರ, ಇಬ್ಬರು – ಮೂವರು, ಸಹಪ್ರಯಾಣಿಕರು, – ನಮ್ಮ ಕೈಲಿ ಇಷ್ಟೇ ಆಗುವುದು- ಎಂದಾಗ, ಅವರುಗಳನ್ನು ಹಿಂದೆ ಕಳುಹಿಸಿ, ಬೇಸ್ ಕ್ಯಾಂಪ್ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ನಾವು, ಉಳಿದವರೆಲ್ಲ ಮುಂದೆ ಮುಂದೆ ನಡೆಯತೊಡಗಿದೆವು.
ಈ ಪ್ರವಾಸಕಥನದ ಹಿಂದಿನ ಕಂತು ಇಲ್ಲಿದೆ : https://surahonne.com/?p=34201
(ಮುಂದುವರಿಯುವುದು)
-ಪದ್ಮಾ ಆನಂದ್
ಪ್ರವಾಸ ಕಥನ ಸೊಗಸಾಗಿ ಮೂಡಿ ಬರುತ್ತಿದೆ..
ಮೆಚ್ಚುಗೆಗಾಗಿ ಧನ್ಯವಾದಗಳು
ನಾವು ಪ್ರವಾಸ ಮಾಡಿದ ಅನುಭವ
ಧನ್ಯವಾದಗಳು
ತಮ್ಮ ಅನಿಸಿಕೆ ಸಂತಸ ತಂದಿದೆ. ವಂದನೆಗಳು.
ಪ್ರವಾಸದ ಅನುಭವ ಕಥನ ಸೊಗಸಾಗಿ ಮೂಡಿಬಂದಿದೆ ಮುಂದಿನ ಕಂತುಗಳಿಗೆ ಕಾಯುವಂತೆ ಮಾಡಿದೆ ಗೆಳತಿ ಪದ್ಮಾ…
ನಿಮ್ಮಭಿಮಾನಕ್ಕೆ ಧನ್ಯವಾದಗಳು.
Very nice
Thank you very much.
ತಮ್ಮ ಪ್ರವಾಸದ ಅನುಭವಗಳ ಲೇಖನವು, ನಮ್ಮನ್ನೂ ನಿಮ್ಮೊಂದಿಗೆ ಎಲ್ಲಾ ಕಡೆಗಳಿಗೂ ಒಯ್ಯುತ್ತಿದೆ! ಧನ್ಯವಾದಗಳು ಪದ್ಮಾ ಮೇಡಂ.
ತಮ್ಮ ಮೆಚ್ಚುಗೆಯ ನಲ್ನುಡಿಗಳಿಗಾಗಿ ವಂದನೆಗಳು
ಚೆನ್ನಾಗಿ ಮೂಡಿಬರುತ್ತಿದೆ ಮೇಡಮ್.
ತಮ್ಮ ಸದಭಿಪ್ರಾಯಕ್ಕಾಗಿ ವಂದನೆಗಳು.
ಹಿಮಗಿರಿಯ ಹಂದರದಲ್ಲಿ ಪ್ರವಾಸ ಕಥನ ಚೆನ್ನಾಗಿ ಮೂಡಿ ಬರುತ್ತದೆ
ಹಿಮಗಿರಿಯ ಹಂದರದಲ್ಲಿ ಈ ಪ್ರವಾಸ ಕಥನ ಚೆನ್ನಾಗಿ ಮೂಡಿ ಬರುತ್ತಿದೆ
ನೀವೇ ಧನ್ಯರು.
ಪ್ರವಾಸ ಕಥನ ಸೊಗಸಾಗಿದೆ!
ಚೆನ್ನಾಗಿ ಮೂಡಿ ಬಂದಿದೆ ಮೇಡಂ ಹಿಂದಿನ ಕಂತು ಓಪನ್ ಆಗ್ತಾ ಇಲ್ಲ.ಹಿಂದಿನದ್ದು ಮತ್ತು ಮುಂದಿನದ್ದು ಓದುವಾಸೆ.ದಯವಿಟ್ಟು ನನ್ನ ಇ ಮೇಲ್ ಗೆ ಕಳುಹಿಸಿ.