ಮಲ್ಲಿಗೆ
ಶುಭ್ರ ಶ್ವೇತಾಚ್ಚಾದಿತೆ ಸುಮ
ಹಸಿರ ಮಧ್ಯದಲ್ಲಿ ಮಿಂಚುವೆಯಲ್ಲೇ
ಸುಂದರ ಕಂಪಿನ ಘಮ ಘಮ
ಎಲ್ಲರನ್ನೂ ಬಳಿಗೆ ಕರೆದಿದೆಯಲ್ಲೇ
ನಿನ್ನಯ ಬಗೆಬಗೆಯ ವಿವಿಧ ರೀತಿ
ಪರಿಪರಿಯ ರೂಪದ ಪ್ರೀತಿ
ಹಲನಾಮ ಹೊಂದಿದ್ದರೂ ದೇವರೊಂದೇ
ಎಂಬಂತೆ ನಿನ್ನ ಅವತಾರಗಳಂತೆ
ಸಂಧ್ಯೆಯಲ್ಲಿ ಮೆಲ್ಲಗೆ ಬಿರಿವ ಮುಗುಳು
ಷೋಡಶಿ ನಾಚಿದ ನೋಟದಂತೆ
ರವಿ ದರ್ಶನದಲ್ಲಿ ಅರಳಿದ ಮೊಗಕೆ
ಕೊಡಲಸಾಧ್ಯ ಯಾವುದೇ ಹೋಲಿಕೆ
ಲಕ್ಷ್ಮೀ ಅರ್ಚನೆಗೆ ನೀ ತಾನೇ ಶುಭವು
ಚಾಮುಂಡಿ ಪಾದಕೆ ಅರ್ಪಿತವಾದ ಹೂವು
ಪೂಜೆಗೆ ಗೌರವದ ಹಾರಕ್ಕೆ ಸಲ್ಲುವೆ
ಮಾನಿನಿಯರ ಹೆರಳ ಆಭರಣವಾಗುವೆ
ಬೆಳದಿಂಗಳೂ ನಿನ್ನ ಕಂಡು ನಾಚಿತಂತೆ
ತನ್ನ ಪ್ರಕಾಶವೇ ಕುಂದು ಎಂದಿತಂತೆ
ಮೃದು ಮಧುರ ಭಾವನೆಗಳ ಪ್ರಚೋದಕಿ
ಅದಕೇ ನೀ ಕವಿ ಕಾವ್ಯಗಳ ರಸನಾಯಕಿ
–ಸುಜಾತಾ ರವೀಶ್
ನನ್ನ ಕವನ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು ಸುರಹೊನ್ನೆ ಸಂಪಾದಕರಿಗೆ. ಸಾಂಧರ್ಭಿಕ ಚಿತ್ರವೂ ಮನೋಹರ .
ಸುಜಾತಾ ರವೀಶ್
ಮಲ್ಲಿಗೆ ಹೂವನ್ನು ಹಲವು ಮಗ್ಗಲುಗಳಲ್ಲಿ ಅವಲೋಕಿಸಿ ಬರೆದಿರುವ ಕವನ ಸುಂದರ ವಾಗಿ ಮೂಡಿ ಬಂದಿದೆ ಅಭಿನಂದನೆಗಳು.
ನನ್ನ ಕವನವನ್ನು ಓದಿ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ ತಮಗೆ ಅನಂತ ಧನ್ಯವಾದಗಳು ನಾಗರತ್ನ ಅವರೇ
ಸುಜಾತಾ ರವೀಶ್
ನಿಮ್ಮ ಕವನ ಮಲ್ಲಿಗೆಯಂತೆಯೇ ಮನಕೆ ನವಿರಾದ ಕಂಪನ್ನು ಸಿಂಪಡಿಸಿತು.
ನಿಮ್ಮ ಸವಿ ಸ್ಪಂದನದಿಂದ ಮನ ಮಲ್ಲಿಗೆಯಂತೆಯೇ ಅರಳಿತು. ಧನ್ಯವಾದಗಳು ಪದ್ಮಾ ಆನಂದ್ ಮೇಡಂ.
ಸುಜಾತಾ ರವೀಶ್
Beautiful
ಶ್ವೇತ, ಶುಭ್ರ ಮಲ್ಲಿಗೆ ನೆನಪೇ ಬಹು ಸುಗಂಧ…ಅಷ್ಟೆ ಸುಂದರ ಮಲ್ಲಿಗೆ ಮಾಲೆ ಹೆಣೆದಂತಿದೆ ತಮ್ಮ ಕವನ…ಸುಜಾತ ಮೇಡಂ.
ಚೆನ್ನಾಗಿದೆ ಕವನ
ಶುಭ್ರ ಶ್ವೇತಾಚ್ಚಾದಿತೆ ಸುಮ| ಸುಂದರ ಕಂಪಿನ ಘಮ ಘಮ! Beautiful!