ಸೌಂದರ್ಯಪ್ರಜ್ಞೆ : ಹೂವಾಡಗಿತ್ತಿ, ಹೂಗಳು, ಹೂಗಾರರು
1 ಹಾಡುಗಾರ್ತಿ:
ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು| ಘಮಘಮ ಹೂಗಳು ಬೇಕೇ ಎನುತ ಹಾಡುತ ಬರುತಿಹಳು||
ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ ಹಸಿರಿನ ಹೊಸ ಮರುಗ| ಹಾಕಿ ಕಟ್ಟಿರುವೆ ಬೇಕೇ ಎನುತ ಹಾಡುತ ಬರುತಿಹಳು||
ಹೊಸ ಸೇವಂತಿಗೆ ಹೊಸ ಇರುವಂತಿಗೆ ಅರಿಸಿನ| ತಾಳೆಯಿದೆ ಅಚ್ಚ ಮಲ್ಲಿಗೆಯಲಿ ಪಚ್ಚೆ ತೆನೆಗಳು ಸೇರಿದ ಮಾಲೆಯಿದೆ||
ಕಂಪನು ಚೆಲ್ಲುವ ಕೆಂಪು ಗುಲಾಬಿ ಅರಳಿದ ಹೊಸ ಕಮಲ| ಬಿಳುಪಿನ ಜಾಜಿ ಅರಳಿದ ಬಿಳಿ ಕಮಲ||
ಹಾಕಿ ಕಟ್ಟಿರುವೆ ಬೇಕೇ ಎನುತ ಹಾಡುತ ಬರುತಿಹಳು| ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು||
ಇದು ಹೂಗಳು ಎಂದಾಗ ನೆನಪಿಗೆ ಬರುವ ವಿ. ಸೀತಾರಾಮಯ್ಯರವರ ಹೂವಾಡಗಿತ್ತಿ ಎನ್ನುವ ಪದ್ಯ. ಇದು ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ಪಠ್ಯ ಆಗಿತ್ತು. ಅದನ್ನು ಕಂಠಪಾಠ ಮಾಡಬೇಕಿತ್ತು. ಆಗ ಅದರ ಬೆಲೆ ಅಷ್ಟೇ, ಕಂಠಪಾಠ ಮಾಡಲು ಸಾಧ್ಯವಾಗುವುದು. ಕಂಠಪಾಠ ಮಾಡದೇ ಇದ್ದವರನ್ನು ತರಗತಿ ನಡೆಯುವಷ್ಟೂ ಹೊತ್ತೂ ತರಗತಿಯ ಹಿಂಭಾಗದ ಗೋಡೆಯ ಬಳಿ ಅಥವಾ ಕಪ್ಪುಹಲಗೆಯ ಪಕ್ಕದ ಮೂಲೆಯ ಗೋಡೆಯ ಬಳಿ ನಿಲ್ಲಿಸಿಬಿಡುತ್ತಿದ್ದರು ಉಪಾಧ್ಯಾಯರು. ಕಂಠಪಾಠ ಮಾಡಿದವರು ಇವರನ್ನು ನೋಡಿ ಕಿಸಕ್ಕೆಂದು ನಗುತ್ತಿದ್ದರು. ಆದರೆ ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು ಎಂದು ಆರಂಭವಾಗುವ ಪದ್ಯದ ನಾಯಕಿಯಾದ ಹೂವಾಡಗಿತ್ತಿ ನಗುತ್ತಿರುವುದು ತನ್ನಲ್ಲಿರುವ ಹೂಗಳನ್ನು ನೋಡಿ.
ಪದ್ಯ ಹೂವುಗಳನ್ನು ಬಣ್ಣಿಸುವುದರ ಮೂಲಕ ಹೂಮಾರುವ ಹೂವಾಡಗಿತ್ತಿಯ ಮಾನಸಿಕ ಸ್ತರವನ್ನು ವರ್ಣಿಸುತ್ತದೆ. ಹೂವುಗಳನ್ನು ಕಟ್ಟಿ ಬೀದಿ ಬೀದಿಯಲ್ಲಿ ಮಾರಾಟ ಮಾಡುವುದು ಒಂದು ವೃತ್ತಿ, ವ್ಯವಹಾರ, ಜೀವನರೀತಿ ಮಾತ್ರ ಆಗಿರದೆ ತಾವು ಒಂದು ಅಮೂಲ್ಯವಾದ ಕೆಲಸವನ್ನು ಮಾಡುತ್ತಿದ್ದೇವೆ ಎಂಬ ಸಂತೋಷವನ್ನು ಅನುಭವಿಸುತ್ತಿದ್ದ ಮತ್ತು ಸಮಾಜಕ್ಕೆ ತಾವು ಬೇಕಾದವರು ಎಂಬ ತೃಪ್ತಿ, ಸಮಾಧಾನ ಪಟ್ಟುಕೊಳ್ಳುತ್ತಿದ್ದ ಕಾಲಘಟ್ಟವನ್ನು ಗಮನಕ್ಕೆ ತರುತ್ತದೆ. ಪದ್ಯ ಕಟೆದು ನಿಲ್ಲಿಸುತ್ತಿರುವದು ಹಾಡುತ್ತಾ ಬರುತ್ತಿರುವ ಹೂವಾಡಗಿತ್ತಿಯನ್ನು. ಹಾಡು ಸ್ವಸಂತೋಷದಿಂದ ಹುಟ್ಟುವಂತಹುದು.
ವ್ಯಕ್ತಿಯೊಬ್ಬ ಆಯ್ಕೆ ಮಾಡಿಕೊಳ್ಳುವ ವೃತ್ತಿಯೊಂದಿಗೆ ವ್ಯಕ್ತಿಯನ್ನು ಸಮೀಕರಿಸುವ ದೇಸೀ ಪದ ಹೂವಾಡಗಿತ್ತಿ. ವೈಯಕ್ತಿಕ ಹೆಸರಿಗಿಂತ ತಾನು ನಿರ್ವಹಿಸುವ ಕೆಲಸದ ಮೂಲಕ ತನ್ನನ್ನು ಗುರುತಿಸುವುದು ಸೂಕ್ತ ಎಂದುಕೊಂಡ ಕಾಲಘಟ್ಟ ಅದು. ಆ ಕಾಲಘಟ್ಟದಲ್ಲಿ ವೃತ್ತಿ-ನಾಮಧೇಯ ಸಮಾಜಕ್ಕೆ ಆ ವೃತ್ತಿಯವನು ಬೇಕಾದವನು ಎಂಬುದನ್ನು ಸೂಚಿಸುತ್ತಿತ್ತು ಮತ್ತು ವ್ಯಕ್ತಿಗೆ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಅನನ್ಯತೆಯನ್ನು ಒದಗಿಸಿಕೊಡುತ್ತಿತ್ತು. ಹಾಗೆಯೇ ವೃತ್ತಿ ನಾಮಧೇಯ ವೈಯಕ್ತಿಕವಾಗಿ ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನೂ ಸೂಚಿಸುತ್ತಿತ್ತು. ಆ ಮೂಲಕ ಅವನ ಸಾಮಾಜಿಕ ಬದ್ಧತೆಯ ರೀತಿಯನ್ನು ಸ್ಪಷ್ಟಗೊಳಿಸುತ್ತಿತ್ತು.
ಹೂವಾಡಗಿತ್ತಿ ಹಾಡುತ್ತಿರುವುದು ತನ್ನ ಬಳಿ ಇರುವ ಹೂಗಳ ಗುಣದ ಸ್ತುತಿಯನ್ನು. ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಇರವಂತಿಗೆ, ಅರಿಸಿನ ತಾಳೆ, ಗುಲಾಬಿ, ಜಾಜಿ, ಕಮಲ ಒಂದೇ ಎರಡೇ ಅವಳು ತಂದಿರುವ ಪರಿಮಳ ಭರಿತ ಹೂಗಳ ಮಾಲೆ! ಅವಳು ತನ್ನ ಬಳಿ ಇರುವ ಹೂಗಳ ಮಾಲೆಯ ವೈವಿಧ್ಯತೆಯನ್ನು, ಹೂಗಳ ವಿವಿಧ ಬಣ್ಣಗಳನ್ನು, ಮಾಲೆಯಲ್ಲಿ ಹೂಗಳು ಜೋಡಣೆಗೊಂಡಿರುವ ವಿಭಿನ್ನತೆಯನ್ನು ತನ್ನ ಹಾಡಿನಲ್ಲಿ ವರ್ಣಿಸುತ್ತಿದ್ದಾಳೆ. ಬೇಕೇ ಇಂತಹ ಹೂಮಾಲೆ ಎನ್ನುವುದನ್ನೂ ಹಾಡಿಕೆಯಲ್ಲೇ ಕೇಳುತ್ತಿದ್ದಾಳೆ. ಯಾಕೆ ತನ್ನ ಬಳಿ ಇರುವ ಹೂಮಾಲೆ ಕೊಳ್ಳಬೇಕು ಎನ್ನುವುದಕ್ಕೆ ಅವಳು ಕೊಡುವ ಕಾರಣ ಅವು ಹೊಚ್ಚ ಹೊಸತು ಮತ್ತೆ ಕಂಪನ್ನು ಉಳ್ಳವು ಅವು ಹಾಗೂ ತನ್ನ ಮಾಲೆಯ ವರ್ಣ ಸಂಯೋಜನೆ ಆಕರ್ಷಕವಾದದ್ದು ಎನ್ನುವುದು. ಅವಳ ಒಂದು ಹೂಮಾಲೆಯಲ್ಲಿ ಅಚ್ಚ ಮಲ್ಲಿಗೆಯೊಂದಿಗೆ ಹಸಿರು ಪಚ್ಚೆತೆನೆ ಸೇರಿದೆ. ಇನ್ನೊಂದು ಹೂಮಾಲೆಯಲ್ಲಿ ಬಿಳುಪಿನ ಮಲ್ಲಿಗೆಯೊಂದಿಗೆ ಹಳದಿ ಸಂಪಿಗೆಯೂ ಜೋಡಣೆಗೊಂಡಿದೆ, ಹಸಿರು ಮರುಗವೂ ಸೇರಿಕೊಂಡಿದೆ. ಅವಳ ವರ್ಣನೆ, ಅವಳ ಸಂತೋಷ ಯಾರಿಗೂ ಹೂ ಬೇಡ ಎಂದು ಹೇಳಲು ಬಿಡುವುದೇ ಇಲ್ಲ ಎಂದೆನ್ನಿಸುತ್ತದೆ.
ಇಂದಿನ ಬರಿಯ ಲಾಭಕೇಂದ್ರಿತ ಹೂಮಾರುವವರಿಗೆ ಎದುರಾಗಿ ಈ ಪದ್ಯದಲ್ಲಿರುವ ಸ್ವಸಂತೋಷದೊಂದಿಗೆ ಬೆಸೆದುಕೊಂಡಿರುವ ಹೂ ಮಾರುವ ಹೂವಾಡಗಿತ್ತಿಯ ಚಿತ್ರ ಚೇತೋಹಾರಿಯಾಗಿದೆ. ಪದ್ಯದಲ್ಲಿ ಹೆಸರಿಸಿರುವ ಹೂಗಳ ಪರಿಮಳವೆಲ್ಲಾ ಎಲ್ಲೆಲ್ಲೂ ಹರಡಿಕೊಂಡಿರುವಂತೆ ಭಾಸವಾಗುವ ವರ್ಣನೆ ಇಲ್ಲಿದೆ. ಹೂಮಾರುವವಳು ತಾನು ಮಾರಲು ತಂದಿರುವುದು ಅಂತಿಂಥ ಹೂವುಗಳಲ್ಲ; ಘಮ ಘಮ ಎಂದು ಗಾಢವಾಗಿ ಪರಿಮಳ ಬೀರುವ ಹೂಗಳು ಎಂದು ಸಾರುತ್ತಿದ್ದಾಳೆ. ಅವಳಿಗೆ ತನ್ನ ಹತ್ತಿರ ಇಂಥ ಹೂವುಗಳಿವೆ ಎಂಬುದು ಸಂತೋಷದ ಸಂಗತಿ, ಅತ್ಯುತ್ತಮವಾದ ಹೂಗಳನ್ನು ಮಾರಲು ಬಂದಿದ್ದೇನೆ ಎಂಬುದು ಸಂಭ್ರಮದ ವಿಷಯ. ಅದರಿಂದಲೇ ಅವಳು ಹೂ ಬೇಕೇ ಎಂದು ಹಾಡುತ್ತಿದ್ದಾಳೆ. ತನ್ನಲ್ಲಿರುವ ಹೂಗಳ ವಿಶೇಷತೆ ಇದು ಎಂದು ಹೂಗಳನ್ನು ಹಾಡಿ ಹೊಗಳಿ ಹರಸುತ್ತಿದ್ದಾಳೆ. ಅವಳು ತಾನು ಕೊಡಲು ಬಯಸಿರುವ ವಿವಿಧ ರಂಗು ರಂಗಿನ ಹೂಗಳ ದೇಸೀ ಪರಿಮಳವನ್ನು ಎಲ್ಲ ಕಡೆಗೆ ಬೀರುತ್ತಿದ್ದಾಳೆ.
ಹೂಗಳು ಹೊಚ್ಚ ಹೊಸತು ನೋಡಿ, ಹೂಗಳ ಬಣ್ಣ ಹೇಗಿದೆ ನೋಡಿ ಎಂದು ವರ್ಣಿಸಿ ಹೂಗಳ ಲಾವಣ್ಯವನ್ನು ಎತ್ತಿ ತೋರಿಸುತ್ತಿದ್ದಾಳೆ. ಹೂಗಳು ಹೊಚ್ಚ ಹೊಸತು ಎಂಬುದನ್ನು ಹೂಗಳ ಬಣ್ಣವನ್ನು ವರ್ಣಿಸಿ ಸ್ಪಷ್ಟಪಡಿಸುತ್ತಿದ್ದಾಳೆ. ಅವಳು ತಂದಿರುವ ಮಲ್ಲಿಗೆ ಅಚ್ಚ ಬಿಳುಪಿನದಾದರೆ ಸಂಪಿಗೆಯು ಹಳದಿ, ಮರುಗ ದಟ್ಟ ಹಸಿರು ಬಣ್ಣದ್ದು. ಅವಳು ತಂದಿರುವ ಜಾಜಿ, ಕಮಲದ ಹೂಗಳು ಬಣ್ಣ ವೈವಿಧ್ಯತೆಯುಳ್ಳದ್ದು. ನೋಡುವುದಕ್ಕೆ ಮಾತ್ರ ಅವಳು ತಂದಿರುವ ಹೂಗಳು ಹೊಚ್ಚ ಹೊಸತಾದದ್ದು ಅಲ್ಲ. ಸೇವಂತಿಗೆ, ಇರವಂತಿಗೆ, ಕೆಂಪು ಗುಲಾಬಿ, ತಾಳೆ ಹೂವು, ಮರುಗ, ಪಚ್ಚೆತೆನೆಗಳು ಪ್ರತ್ಯೇಕ ಪ್ರತ್ಯೇಕವಾಗಿ ಹೊರ ಸೂಸುವ ಗಂಧವೂ ಅದನ್ನು ಸಮರ್ಥಿಸುತ್ತಿದೆ.
ಹೂವಾಡಗಿತ್ತಿಗೆ ಹೂಗಳು, ಅವುಗಳ ಹೊಸತನ, ವರ್ಣ ವೈವಿಧ್ಯ, ಅವು ಪಸರಿಸುವ ಸುಗಂಧ ಅತ್ಯಂತ ಇಷ್ಟವಾದದ್ದು ಆಗಿದ್ದರೂ ಉಳಿದವರಿಗೆ ಹೂವೇ ಬೇಕಾಗದೇ ಇರಬಹುದು. ಅದರಿಂದಲೇ ಹೂ ಬೇಕೇ ಎಂದು ಮಾತ್ರ ಕೇಳುತ್ತಾಳೆ. ಆದರೂ ಅವಳಿಗೆ ವಿಶ್ವಾಸವಿದೆ ಜನ ಹೊಸತಾದುದನ್ನು ಆಶಿಸುವ ಹಾಗೆ ಮನಸ್ಸಿಗೆ ಹಿತವಾಗುವುದನ್ನೂ ಆಶಿಸುತ್ತಾರೆ ಎಂದು. ಅದರಿಂದಲೇ ಅವಳ ಹೂಗಳು ಬೇಕೇ ಎಂದು ಕೇಳುವುದು ದೈನ್ಯತೆಯ ಮನವಿ ಆಗಿರದೆ ಗುನುಗುನಿಸುವ ಹಾಡು ಆಗಿದೆ. ಅದರ ಬಿಂಬ ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು| ಘಮಘಮ ಹೂಗಳು ಬೇಕೇ ಎನುತ ಹಾಡುತ ಬರುತಿಹಳು!
2 ಹೂವಮ್ಮ:
ಈ ಪದ್ಯದ ಹೂವಾಡಗಿತ್ತಿಯನ್ನು ಹೋಲುವ ಹೂವಾಡಗಿತ್ತಿ ನಾನು ಸಣ್ಣವಳಿದ್ದಾಗ ದಿನವೂ ಬೆಳಿಗ್ಗೆ ೭ ಗಂಟೆಯ ಹೊತ್ತಿಗೆ ತಪ್ಪದೆ ನಮ್ಮ ಮನೆಗೆ ಬರುತ್ತಿದ್ದಳು. ಆಕೆಯ ಮನೆ ಇದ್ದದ್ದು ನಾವು ಇದ್ದ ಕೋಲಾರದ ಸಮೀಪದ ಹಳ್ಳಿಯಲ್ಲಿ. ನಾವು ಆಕೆಯನ್ನು ಹೂವಮ್ಮ ಎಂದೇ ಕರೆಯುತ್ತಿದ್ದೆವು. ನಮ್ಮ ತಂದೆ ದಿನಾ ಬಗೆ ಬಗೆಯ ಹೂಗಳಿಂದ ಪೂಜೆ ಮಾಡುತ್ತಿದ್ದರು. ಅವರು ಪೂಜೆಗೆ ಕೆಂಪು ಬಣ್ಣದ ಹೂವನ್ನು ಹೊರತು ಪಡಿಸಿ ಪರಿಮಳ ಇರುವ ಎಲ್ಲಾ ಬಗೆ ಬಗೆಯ ಬಣ್ಣದ ಹೂಗಳು ಮತ್ತು ಹಸಿರು ತುಳಸಿಯನ್ನು ಬಳಸುತ್ತಿದ್ದರು. ಹೂವಮ್ಮನಿಗೆ ನಮ್ಮ ತಂದೆಯ ಅವಶ್ಯಕತೆ ಗೊತ್ತಿತ್ತು. ಅವರಿಗಾಗಿ ಪ್ರತ್ಯೇಕವಾಗಿ ಒಂದು ಬುಟ್ಟಿಯಲ್ಲಿ ತರುತ್ತಿದ್ದಳು. ಅದಕ್ಕೆ ಪ್ರತಿಯಾಗಿ ನಮ್ಮಿಂದ ಆಕೆ ದಿನವೂ ಅಕ್ಕಿ ತೆಗೆದುಕೊಳ್ಳುತ್ತಿದ್ದಳು. ವಿಶೇಷ ಪೂಜೆಯ ದಿನಗಳಾದ ಕೃಷ್ಣಾಷ್ಟಮಿ, ನವರಾತ್ರಿ ಹಬ್ಬಗಳಿಗೆ ಹೆಚ್ಚಿನ ಪ್ರಮಾಣದ ಹೂಗಳು ಬೇಕಾಗುತ್ತಿತ್ತು ಅದು ಆಕೆಗೆ ಗೊತ್ತು. ಆ ದಿನಗಳಲ್ಲಿ ದೊಡ್ಡ ಬುಟ್ಟಿಯಲ್ಲಿ ಹೂ ತಂದು ಕೊಡುತ್ತಿದ್ದಳು. ಅದಕ್ಕೂ ಅಕ್ಕಿಯೇ ಆಕೆ ತೆಗೆದುಕೊಳ್ಳುತ್ತಿದ್ದದ್ದು.
ನಾವು ಇದ್ದದ್ದು ನಾಲ್ಕು ಮನೆಗಳು ಎದುರು ಬದುರಾಗಿ ಇದ್ದ ಒಂದು ವಠಾರದಲ್ಲಿ. ನಾವು ಮಾತ್ರ ಹೂವು, ತುಳಸಿ ತೆಗೆದುಕೊಳ್ಳುತ್ತಿದ್ದೆವು. ಮತ್ತೆ ಇನ್ನು ಯಾರೂ ನಮ್ಮ ಬೀದಿಯಲ್ಲಿ ಆಕೆಯಿಂದ ಹೂ ತೆಗೆದುಕೊಂಡದ್ದು ನನಗೆ ಕಂಡಿಲ್ಲ. ಆಕೆ ಮಾತಾಡಿದುದನ್ನು ಒಂದು ದಿನವೂ ನಾನು ಕೇಳಿರಲಿಲ್ಲ. ಕೊಟ್ಟಷ್ಟು ಅಕ್ಕಿಯನ್ನು ತೆಗೆದುಕೊಳ್ಳುತ್ತಿದ್ದಳು. ನನ್ನ ಅಮ್ಮನಿಗೂ ಆಕೆಗೂ ಮಾತಾಡದೆಯೇ ಹೂವಿನ ವ್ಯವಹಾರವನ್ನು ನಿರ್ವಹಿಸುವುದು ಗೊತ್ತಿತ್ತು. ಆಕೆ ಯಾವಾಗಲೂ ಸ್ನಾನ ಮಾಡಿ ಬಾಚಿದ ಕೂದಲಿನ ತುರುಬು ಕಟ್ಟಿಕೊಂಡು, ಹಣೆಯ ಮೇಲೆ ವಿಭೂತಿಯ ಬಟ್ಟು ಇಟ್ಟುಕೊಂಡು ತೊಳೆದ ಸೀರೆಯನ್ನು ಉಟ್ಟು ಬರುತ್ತಿದ್ದ ಚಿತ್ರ ಕಣ್ಣ ಮುಂದೆ ಈಗಲೂ ಬರುತ್ತದೆ.
3 ಮೊಗ್ಗಿನಜಡೆ:
ಹೂಗಳು ಎಂದಾಗ ನನ್ನ ಕಣ್ಣ ಮುಂದೆ ಕುಣಿಯುವುದು ಮೊಗ್ಗಿನ ಜಡೆಯ ನನ್ನ ಜೊತೆಗಾರ ಸಣ್ಣ ಹುಡುಗಿಯರು. ನಾವು ಇದ್ದ ಬೀದಿಯಲ್ಲಿಯ ಶೆಟ್ಟರ ಮನೆಯವರಿಗೆ ಮಲ್ಲಿಗೆ ಹೂ ಬಿಡುವ ಕಾಲದಲ್ಲಿ ತಮ್ಮ ಹೆಣ್ಣುಮಕ್ಕಳಿಗೆ ಮೊಗ್ಗಿನ ಜಡೆ ಹಾಕಿಸಿ ಎದ್ದು ಕಾಣುವ ಜರಿ ಅಂಚಿನ ಜರಿ ಹೂಗಳ ಬುಟ್ಟ ಇರುವ ಲಂಗ ರವಿಕೆ ತೊಡಿಸಿ ಅವರನ್ನು ಹೊಳೆಯುವ ಆಭರಣಗಳಿಂದ ಅಲಂಕರಿಸುವುದು ಒಂದು ಸಡಗರ, ಸಂಭ್ರಮದ ವಿಷಯ. ಮೊಗ್ಗಿನ ಜಡೆ ಹಾಕಿಸಿಕೊಳ್ಳಲು ಗಂಟೆಗಟ್ಟಲೆ ತಾಳ್ಮೆಯಿಂದ ಮೊಗ್ಗಿನ ಜಡೆ ಹಾಕುವವರ ಮುಂದೆ ಕುಳಿತಿರಬೇಕಿತ್ತು. ಈಗಿನಂತೆ ರೆಡಿಮೇಡ್ ಮೊಗ್ಗಿನ ಜಡೆ ಆಗ ಸಿಗುತ್ತಿರಲಿಲ್ಲ. ಜಡೆ ಹೆಣೆದು ಹಂಚಿ ಕಡ್ಡಿಗೆ ಅಲಂಕಾರಿಕವಾಗಿ ಪೋಣಿಸಿಕೊಂಡ ಮೊಗ್ಗುಗಳನ್ನು ಅದರ ಮೇಲೆ ಉದ್ದಕ್ಕೂ ಜಡೆಯ ಅಗಲಕ್ಕೆ ಅನುಗುಣವಾಗಿ ೪ ಅಥವಾ ನಾಲ್ಕಕ್ಕಿಂತ ಹೆಚ್ಚು ಇಟ್ಟು ಜಡೆಯ ಮಧ್ಯದಲ್ಲಿ ಸಮಾನಾಂತರವಾಗಿ ಜಾಗ ಬಿಟ್ಟು ಅದನ್ನು ಹೊಲೆಯುತ್ತಾ ಹೋಗುತ್ತಿದ್ದರು. ಮಧ್ಯದ ಸ್ಥಳಾವಕಾಶದಲ್ಲಿ ಅಲ್ಲಿಗೆ ಹೊಂದಿಕೊಳ್ಳುವ ಉದ್ದದ ಹಂಚಿಕಡ್ಡಿಯಲ್ಲಿ ಪೋಣಿಸಿಕೊಂಡ ಮೊಗ್ಗುಗಳನ್ನು ಜಡೆಗೆ ಅಡ್ಡಲಗಿ ಇಡುತ್ತಿದ್ದರು, ಹೊಲಿಗೆಯಿಂದ ಭದ್ರಪಡಿಸುತ್ತಿದ್ದರು.
ಜಡೆಯ ಮೇಲ್ಭಾಗದಲ್ಲಿ ರಾಗಟೆಯಿಟ್ಟು ಅದರ ಸುತ್ತಲೂ ಪೋಣಿಸಿದ ಹೂಗಳನ್ನು ಚೆಂದಾಗಿ ಜೋಡಿಸುತ್ತಿದ್ದರು. ಕೂದಲಿಗೆ ಅಗತ್ಯವಿದ್ದರೆ ಚೌರಿ ಸೇರಿಸುತ್ತಿದ್ದರು. ಅಲಂಕಾರಿಕವಾದ ಕುಚ್ಚಂತೂ ಇದ್ದೇ ಇರುತ್ತಿತ್ತು. ಜಡೆಯ ಪ್ರಾರಂಭದಲ್ಲಿ ಈ ಕಿವಿಯಿಂದ ಆ ಕಿವಿಯವರೆಗೂ ಎನ್ನುವ ಹಾಗೆ ಪೋಣಿಸಿದ ಹೂದಂಡೆಯನ್ನು ಇರಿಸುತ್ತಿದ್ದರು. ಜಡೆಯ ತುದಿಯಲ್ಲಿ ಕುಚ್ಚಿನ ಮೇಲ್ಭಾಗದಲ್ಲಿ ಸಣ್ಣ ಹೂದಂಡೆ ಇದ್ದು ಜಡೆಯ ಮುಕ್ತಾಯವನ್ನೂ ಹೇಳುತ್ತಿತ್ತು, ಕುಚ್ಚಿನ ಅಂದಚಂದವನ್ನೂ ತೋರುತ್ತಿತ್ತು. ಮೊಗ್ಗಿನ ಜಡೆಯ ಮಧ್ಯೆ ಬಣ್ಣ ಬಣ್ಣದ ಹರಳುಗಳನ್ನು ಮತ್ತು ಸಣ್ಣ ಸಣ್ಣ ಗೊಂಬೆಗಳನ್ನೂ ಸೇರಿಸುತ್ತಿದ್ದರು. ಅದರಿಂದ ಮೊಗ್ಗಿನ ಜಡೆ ಮತ್ತಷ್ಟು ಎದ್ದು ಕಾಣುತ್ತಿತ್ತು. ನೆತ್ತಿಯ ಮಧ್ಯೆ ಚಿನ್ನದ ಬಣ್ಣದ ಅರ್ಧ ಚಂದ್ರಾಕಾರದ ಪದಕವಿರುವ ಬೈತಲೆ ಬಟ್ಟು, ಅದರ ಅಕ್ಕ ಪಕ್ಕ ಸೂರ್ಯ, ಚಂದ್ರರ ಬಿಲ್ಲೆ, ಅವುಗಳ ಸುತ್ತ ಸಣ್ಣ ಮೊಗ್ಗಿನ ದಂಡೆ. ಈ ಎಲ್ಲ ಅಲಂಕಾರವನ್ನು ಎರಡು ದಿನಗಳ ಕಾಲವಾದರೂ ಇಟ್ಟುಕೊಳ್ಳುತ್ತಿದ್ದ ಆ ಹುಡುಗಿಯರು ಹಾಕಿಸಿಕೊಂಡ ನಂತರ ನಮಗೆಲ್ಲಾ ತೋರಿಸಲು ನಮ್ಮ ಮನೆಗಳಿಗೆ ಬರುತ್ತಿದ್ದರು. ನಾವು ಅವರನ್ನು ಕುತೂಹಲ ಮತ್ತೆ ಖುಷಿಯಿಂದ ನೋಡುತ್ತಿದ್ದೆವು. ದೊಡ್ಡವರು ಜಡೆಯ ಚೆಂದವನ್ನೂ, ಜಡೆಗೆ ಒಪ್ಪುವಂತೆ ಅವರು ಹಾಕಿಕೊಂಡಿರುವ ಲಂಗ ರವಿಕೆಯನ್ನೂ, ತೊಟ್ಟಿರುವ ಒಡವೆಗಳನ್ನೂ ಬಣ್ಣಿಸಿ ಸಂತೋಷಪಡುತ್ತಿದ್ದರು. ಅದರಿಂದ ಆ ಹುಡುಗಿಯರಿಗೆ ಹೆಮ್ಮೆ ತಾವು ಎಲ್ಲರ ಕೇಂದ್ರಬಿಂದು ಆಗಿದ್ದೇವೆ ಎಂದು.
ಎಲ್ಲರಿಗೂ ಮೊಗ್ಗಿನ ಜಡೆ ಹಾಕಲು ಬರುತ್ತಿರಲಿಲ್ಲ. ಮೊಗ್ಗಿನ ಜಡೆ ಹಾಕುವ ಪರಿಣತರೇ ಇರುತ್ತಿದ್ದರು. ಅವರೂ ತಾಳ್ಮೆಯಿಂದಲೇ ಮೊಗ್ಗಿನ ಜಡೆ ಹಾಕಿಕೊಡಬೇಕಿತ್ತು. ಅದಕ್ಕಾಗಿ ಅವರಿಗೆ ಬೇಸರವೇನೂ ಆಗುತ್ತಿರಲಿಲ್ಲ. ತಾವು ಇದನ್ನು ಮಾಡಬಲ್ಲೆವು ಎಂಬ ಸಂತೋಷವೇ ಅವರಿಗೆ ಇರುತ್ತಿದ್ದದ್ದು. ಅದೇನೂ ಅವರಿಗೆ ವ್ಯವಹಾರ ಆಗಿರಲಿಲ್ಲ. ಹಾಕುವುದು ಮತ್ತು ಹಾಕಿಸಿಕೊಳ್ಳುವುದು ಎರಡೂ ಸ್ವ ಸಂತೋಷದ ಭಾಗವೇ! ಮೊಗ್ಗಿನಜಡೆ ಹಾಕುವವರು ಮನೆಯ ಬಳಿಗೆ ಬಂದು ಮೊಗ್ಗು ಮಾರುವವರಿಗೆ ತಾವೇ ಮುಂದಾಗಿ ಹೇಳಿ ತಮಗೆ ಬೇಕಾದಷ್ಟು ಮತ್ತೆ ಜಡೆಯ ಹೆಣಿಗೆಯನ್ನು ಓರೆಕೋರೆ ಮಾಡದ ಮೊಗ್ಗುಗಳನ್ನು ಕೊಳ್ಳುತ್ತಿದ್ದರು. ಹಾಗೆ ಕೊಂಡ ಮೇಲೂ ಮತ್ತೆ ಹರಡಿಕೊಂಡು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅವುಗಳನ್ನು ನೀರಿನಲ್ಲಿ ಹಾಕಿಟ್ಟುಕೊಂಡು ಜಡೆ ಹಾಕಿ ಮುಗಿಯುವವರೆಗೂ ಒಂದೇ ರೀತಿಯಲ್ಲಿ ಹಸಿಯಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಮೊಗ್ಗಿನ ಜಡೆ ಹಾಕಿಸಿಕೊಳ್ಳುವ ಹುಡುಗಿಯ ಮುಂದೆ ಮೊಗ್ಗುಗಳನ್ನು ಪೋಣಿಸುತ್ತಾ ಅದೂ ಇದೂ ಮಾತಾಡುತ್ತಾ ಹೆಣಿಗೆಯ ಬಗೆಗೆ ಕುತೂಹಲ ಹುಟ್ಟಿಸುತ್ತಿದ್ದರು. ಮೊಗ್ಗಿನ ಜಡೆ ಹೆಣೆಯುವುದನ್ನು ಕಲಿತುಕೊಳ್ಳುವವರಿಗೆ ಡೆಮೋ ಕೊಡುತ್ತಿದ್ದರು.
4 ಅನುಕರಣೆಯ ಮೊಗ್ಗಿನ ಜಡೆ:
ಮಲ್ಲಿಗೆ ಹೂವಿನ ಅಲಂಕಾರದ ಆಕರ್ಷಣೆ ನಮಗೆ ಇದ್ದಂತೆ ನಮ್ಮಮ್ಮನಿಗೂ ಇತ್ತು. ನಮಗೆ ಮೊಗ್ಗಿನಜಡೆ ಹಾಕಿಸಿಕೊಳ್ಳುವ ಸಹನೆ ಮಾತ್ರ ಇರಲಿಲ್ಲ. ಸದಾ ಅಲ್ಲಿ ಇಲ್ಲಿ ಓಡಾಡಿಕೊಂಡಿರುವ ಮಿಣಕರ ಪೂಚಿಗಳು ನಾವು. ನಾವು ಕೇಳದಿದ್ದರೂನೂ ಆಗಾಗ ನನ್ನ ಅಮ್ಮ ನನ್ನ ಮತ್ತೆ ನನ್ನ ತಂಗಿಯ ಉದ್ದ ಕೂದಲಿಗೆ ಉದ್ದ ಚೌರಿ ಸೇರಿಸಿ ಜಡೆ ಹೆಣೆದು ಉದ್ದ ದೇಟಿನ ಸೂಜಿ ಮಲ್ಲಿಗೆ ಹೂಗಳು ಅಥವಾ ನಮ್ಮ ಮನೆಯ ಹತ್ತಿರವೇ ಮನೆಮಾಡಿಕೊಂಡಿದ್ದ ನಮ್ಮ ತಂದೆಯ ಪರಿಚಿತರ ಮನೆಯ ಮುಂದೆ ಬೆಳೆದುಕೊಂಡಿದ್ದ ಮರುಗ, ದವನ, ಪಚ್ಚೆತೆನೆಗಳನ್ನು ಕೂಡಿಸಿಕೊಂಡು ನಮ್ಮ ಜಡೆಗೆ ನೇರವಾಗಿ ಸೂಜಿ ದಾರದಿಂದ ಹೊಲಿದು ಬಿಡುತ್ತಿದ್ದರು. ನಾವು ಎರಡು ದಿನ ಜಡೆ ಬಿಚ್ಚದೆ ಮರುಗ, ಮಲ್ಲಿಗೆ, ದವನ, ಪಚ್ಚೆತೆನೆಗಳ ಪರಿಮಳವನ್ನು ಮೂಸುತ್ತಾ ಜಡೆಯನ್ನು ಹಿಂದೆ ಮುಂದೆ ಆ ಪಕ್ಕ ಈ ಪಕ್ಕ ಅಲ್ಲಾಡಿಸಿ ಅದರ ಸೌಂದರ್ಯವನ್ನು ನೋಡಿ ಸಂತೋಷ ಪಡುತ್ತಿದ್ದೆವು. ಶಾಲೆಗೆ ಹೋದಾಗ ಜೊತೆಯ ಮಕ್ಕಳು ನಮ್ಮ ಜಡೆಯ ಅಲಂಕಾರದ ಜೊತೆಗೆ ಉದ್ದದ ದಪ್ಪದ ಜಡೆಯನ್ನೂ ನೋಡಿ ಆಶ್ಚರ್ಯ ಪಡುತ್ತಿದ್ದರು. ನನ್ನ ಅಮ್ಮ ಈ ಅಲಂಕಾರ ಮಾಡಿದುದು ಎಂದರೆ ನಂಬಲಾಗದಷ್ಟು ವಿಸ್ಮಯ ತೋರುತ್ತಿದ್ದರು. ಒಮ್ಮೊಮ್ಮೆ ಉದ್ದದ ದೇಟಿನಂತಹ ಕೇದಿಗೆ ಹೂವಿನಿಂದಲೂ ಜಡೆಗೆ ಅಲಂಕಾರ ಮಾಡುತ್ತಿದ್ದರು ಅಮ್ಮ.
5 ಹೂವಿನ ಪ್ರಭಾವಳಿ:
ಕೋಲಾರ ಒಂದು ಕಾಲದಲ್ಲಿ ಗಂಗರ ರಾಜಧಾನಿ. ಅದರಿಂದಾಗಿ ಅಲ್ಲಿ ವರ್ಷವಿಡೀ ಎನ್ನುವ ಹಾಗೆ ಬಗೆ ಬಗೆಯ ಉತ್ಸವಗಳು. ನವರಾತ್ರಿಯ ಸಂದರ್ಭದಲ್ಲಿ ದೇವ ದೇವಿಯರ ವಿಶೇಷ ಮೆರವಣಿಗೆ. ಅಕ್ಕ ಪಕ್ಕದ ಊರುಗಳಿಂದಲೂ ದೇವ ದೇವಿಯರು ಮೆರವಣಿಗೆಯಲ್ಲಿ ಕೋಲಾರಕ್ಕೆ ಬರುತ್ತಿದ್ದರು. ಅದಕ್ಕಾಗಿ ಹೂವಿನ ಪ್ರಭಾವಳಿಯನ್ನು ಸಿದ್ಧಮಾಡುತ್ತಿದ್ದವರು ಇದ್ದರು. ಅದು ವ್ಯವಹಾರದ ವಿಷಯ. ಆದರೂ ಅದನ್ನು ಸ್ವ ಸಂತೋಷದ ವೃತ್ತಿಯನ್ನಾಗಿಯೇ ನಿರ್ವಹಿಸುತ್ತಿದ್ದವರು ಇದ್ದರು. ಹೆಚ್ಚಾಗಿ ಈ ವೃತ್ತಿಯನ್ನು ಮುಸ್ಲಿಮರು ಆತುಕೊಂಡಿದ್ದರು. ಆ ವಿಶೇಷ ಮೆರವಣಿಗೆಯ ಪ್ರಭಾವಳಿಯಂತೂ ಸುಮಾರು ಎರಡು ಮೂರು ಅಡಿ ಎತ್ತರದ ಮತ್ತು ಅಗಲದ ಕಮಾನಿನಂತಹ ಅಲಂಕಾರ. ಅದಕ್ಕಾಗಿ ಕಮಾನಿನಂತಹ ಆಕಾರದ ರೇಷ್ಮೆಗೂಡಿನಂತಹ ಬಿದಿರಿನ ತಟ್ಟಿಯನ್ನು ಇಟ್ಟುಕೊಂಡಿರುತ್ತಿದ್ದರು. ಅರ್ಧವೃತ್ತಾಕಾರದಲ್ಲಿ ಸಾಲಾಗಿ ಸಮಾನಾಂತರವಾಗಿ ಇರುತ್ತಿದ್ದ ಸಾಲುಗಳಲ್ಲಿ ಸ್ವಲ್ಪವೂ ಜಾಗಬಿಡದೆ ಒಂದರ ಹಿಂದೆ ಒಂದರಂತೆ ಒಂದೇ ಉದ್ದ, ಗಾತ್ರದ ದುಂಡು ಮಲ್ಲಿಗೆಯ ಮೊಗ್ಗುಗಳನ್ನು ಜೋಡಿಸುತ್ತಿದ್ದರು. ಅದರ ಮಧ್ಯೆ ಅಲ್ಲಲ್ಲಿ ಬೆಳ್ಳಗಿನ ಹೊಳಪಿನ ನೂಲಿನಂತಹ ಸುನಾರಿ ಎಳೆಗಳು ಇರುತ್ತಿದ್ದವು. ಅದರಿಂದಾಗಿ ಅದು ರಾತ್ರಿ ಪೆಟ್ರೊಮ್ಯಾಕ್ಸಿನ ದೀಪದಲ್ಲಿ ಹೊಳೆಯುತ್ತಿದ್ದಂತೆ ಹಗಲಿನಲ್ಲಿಯೂ ಹೊಳೆಯುತ್ತಿತ್ತು. ಕೆಲವು ಶೆಟ್ಟರ ಮದುಮಕ್ಕಳ ಮೆರವಣಿಗೆಯಲ್ಲಿಯೂ ಈ ರೀತಿಯ ಪ್ರಭಾವಳಿ ಮದುಮಕ್ಕಳ ಹಿಂದೆ ಮೆರೆಯುತ್ತಿತ್ತು. ನಮಗೆ ಮದುಮಕ್ಕಳು ಲಕ್ಷ್ಮಿ, ನಾರಾಯಣಸ್ವರೂಪಿಗಳು!
ನಮ್ಮ ಮನೆಯಿಂದ ಸುಮಾರು ಒಂದು ಮೈಲಿ ದೂರದಲ್ಲಿ ಈ ಪ್ರಭಾವಳಿಗಳನ್ನು ಸಿದ್ಧಪಡಿಸುವವರ ಮನೆಗಳು ಒಂದೇ ಕಡೆ ಸಾಲಾಗಿ ಇದ್ದವು. ಎಲ್ಲರೂ ಕೂಡಿಕೊಂಡು ಕೆಲಸಮಾಡುತ್ತಿದ್ದರು. ನಮ್ಮ ಶಾಲೆಯ ಮೇಡಂ ಮನೆಗೆ ಹೋದಾಗ ಹೂವಿನ ಪ್ರಭಾವಳಿಯನ್ನು ಸಿದ್ಧಪಡಿಸುವ ಕೆಲಸವನ್ನು ನೋಡಿದ್ದೆ. ಅವರು ತಮಗೆ ಬೇಕಾದ ಮೊಗ್ಗುಗಳನ್ನು ಬೇರೆ ಊರಿನಿಂದ ತರಿಸಿಕೊಳ್ಳುತ್ತಿದ್ದರು. ಅವರು ಹೂಕುಂಡ ಎನ್ನುವ ಪಟಾಕಿಯನ್ನು ಸ್ಥಳೀಯವಾಗಿ ತಯಾರು ಮಾಡುತ್ತಿದ್ದರು. ಉತ್ಸವದಲ್ಲಿ ಆ ಹೂಕುಂಡಗಳನ್ನು ಅಲ್ಲಲ್ಲಿ ಉರಿಸುತ್ತಿದ್ದರು. ಅವುಗಳ ಬಣ್ಣ ಬಣ್ಣದ ಬೆಳಕಿನಲ್ಲಿ ಪ್ರಭಾವಳಿಯ ಮೊಗ್ಗುಗಳ ಜೋಡಣೆ ಮತ್ತಷ್ಟು ಎದ್ದು ಕಾಣುತ್ತಿತ್ತು. ನಮ್ಮ ಬೀದಿ ಸುಮಾರು ಒಂದು ಮೈಲಿ ಉದ್ದದ್ದು. ಅದರ ಒಂದು ತುದಿಯಲ್ಲಿ ಶ್ರೀನಿವಾಸನ ದೇವಸ್ಥಾನ. ದೇವಸ್ಥಾನಕ್ಕೆ ಹೋಗದೆ ಬಲಕ್ಕೆ ಇರುವ ಬೀದಿಗೆ ತಿರುಗಿ ಸ್ವಲ್ಪ ದೂರದ ನಂತರ ಮತ್ತೆ ಬಲಕ್ಕೆ ತಿರುಗಿದರೆ ಆಂಜನೇಯನ ದೇವಸ್ಥಾನ. ಶ್ರೀನಿವಾಸ ದೇವಸ್ಥಾನಕ್ಕೆ ಹೋಗದೆ ಎಡಕ್ಕೆ ಇರುವ ಬೀದಿಗೆ ತಿರುಗಿದರೆ ಕನ್ನಿಕಾ ಪರಮೇಶ್ವರಿ ದೇವಸ್ಥಾನ. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಮತ್ತೆ ಬಲಕ್ಕೆ ಇರುವ ಬೀದಿಗೆ ತಿರುಗಿದರೆ ಗಣೇಶನ ದೇವಸ್ಥಾನ. ನಾಲ್ಕೂ ದೇವರ ಮೆರವಣಿಗೆ ಹೂವಿನ ಪ್ರಭಾವಳಿಯೊಂದಿಗೆ ಬರುತ್ತಿತ್ತು. ಗಣೇಶ ಮತ್ತೆ ನವರಾತ್ರಿಯ ಹಬ್ಬಗಳಲ್ಲಿ ಅಲ್ಲಲ್ಲಿ ಮನೆಯ ಮುಂದೆಯೂ ಹೂವಿನ ಅಲಂಕಾರದ ಹಿನ್ನೆಲೆಯ ಗಣೇಶ ಮತ್ತೆ ಲಕ್ಷ್ಮಿ, ಸರಸ್ವತಿ ಅಥವಾ ಪಾರ್ವತಿಯ ಸಣ್ಣ ಸಣ್ಣ ವಿಗ್ರಹಗಳು ಬನ್ನಿ ನಮ್ಮ ಬಳಿಗೆ ಎಂದು ಕರೆಯುವಂತೆ ಕುಳಿತಿರುತ್ತಿದ್ದವು.
ಬೀದಿಯ ಈ ತುದಿಯಿಂದ ಆ ತುದಿಯವರೆಗೂ ಮೆರವಣಿಗೆ ಅಲ್ಲಲ್ಲಿ ಮನೆಗಳ ಮುಂದೆ ನಿಲ್ಲುತ್ತಾ ಹಣ್ಣು ಕಾಯಿ ನೈವೇದ್ಯ, ಮಂಗಳಾರತಿ ಮಾಡಿಸಿಕೊಳ್ಳುತ್ತಾ ಮುಂದರಿಯುತ್ತಿದ್ದರೆ ನಾವು (ಮಕ್ಕಳು) ಅದರೊಂದಿಗೇ ಎಲ್ಲವನ್ನೂ ನೋಡುತ್ತಾ ಹೋಗುತ್ತಿದ್ದೆವು. ಮಂಗಳಾರತಿ ತೆಗೆದುಕೊಳ್ಳುವ ನೆವದಲ್ಲಿ ದೇವರ ದಂಡಿಗೆಯ ಮಧ್ಯೆ ದೇವರ ಮುಂದೆ ನೇರವಾಗಿ ನಿಂತು ಹೂಗಳ ಅಂದವನ್ನು ಹತ್ತಿರದಿಂದ ನೋಡಿ ಸಂತೋಷ ಪಡೆಯುತ್ತಿದ್ದೆವು. ಕೆಲವೊಮ್ಮೆ ಮುಂದಿನ ಬೀದಿಗೂ ಅದರ ಹಿಂದೆ ಹೋಗಿಬಿಡುತ್ತಿದ್ದೆವು. ಅಂತಹ ಆಕರ್ಷಕ ಹೂವಿನ ಅಲಂಕಾರ ಅದಾಗಿರುತ್ತಿತ್ತು. ಆಗಾಗ ನಡೆಯುತ್ತಿದ್ದ ಉತ್ಸವದಲ್ಲಿ ಹೂಗಳ ಪ್ರಭಾವಳಿ ಸಣ್ಣದು. ನವರಾತ್ರಿಯಲ್ಲಿ ಮಾತ್ರ ತುಂಬಾ ದೊಡ್ಡದು. ವಿಜಯದಶಮಿಯ ದಿನ ಸುತ್ತುಮುತ್ತಿನ ಊರುಗಳಿಂದಲೂ ಮೆರವಣಿಗೆಯಲ್ಲಿ ಬಂದ ದೇವರುಗಳು ಒಂದು ದೊಡ್ಡ ಮೈದಾನದಲ್ಲಿ ಸೇರುತ್ತಿದ್ದವು. ಅದೇ ಮಲ್ಲಿಗೆಯ ಅಲಂಕಾರ ಆಗಿದ್ದರೂ ಹೇಳಲಾಗದ ವಿಭಿನ್ನತೆ ಅದರಲ್ಲಿ ಇರುತ್ತಿತ್ತು. ನಮಗೆ ಆ ಅಲಂಕಾರವನ್ನು ನೋಡುತ್ತಾ ನಿಲ್ಲುವುದೇ ಒಂದು ಸಂಭ್ರಮ.
6 ಹೂವಿನ ಕರಗ:
ಕೋಲಾರದ ಹೂವಿನ ಕರಗ ಬಹಳ ಪ್ರಸಿದ್ಧವಾದದ್ದು. ಅಂತರಗಂಗೆ ಬೆಟ್ಟದಿಂದ ಹಸಿ ಕರಗವನ್ನು ನಾಲ್ಕಾರು ಜನ ಕೈಗಳಲ್ಲಿ ಹೊತ್ತು ತಂದು ಧರ್ಮರಾಯನ ಗುಡಿಯಲ್ಲಿ ಇರಿಸುವುದರಿಂದ ಕರಗ ಮಹೋತ್ಸವ ಆರಂಭವಾಗುತ್ತಿತ್ತು. ಆ ಹಸಿಕರಗವೂ ಬಿಳಿ ಮಲ್ಲಿಗೆಯ ಹೂಗಳಿಂದ ಅಲಂಕೃತ ಆಗಿರುತ್ತಿತ್ತು. ಅದು ಸಾಧಾರಣವಾದ ಸಣ್ಣ ಪ್ರಮಾಣದ ಅಲಂಕಾರ. ತಲೆಯ ಮೇಲೆ ಒಂದರ ಮೇಲೊಂದರಂತೆ ಗೋಪುರದಾಕಾರದಲ್ಲಿ ಮಡಿಕೆಗಳನ್ನಿಟ್ಟುಕೊಂಡು ಅವುಗಳನ್ನೆಲ್ಲಾ ಮುಚ್ಚುವ ಹಾಗೆ ಬೆನ್ನಮೇಲಿನಿಂದ ಕಾಲಿನವರೆಗೆ ಇಳಿಬಿದ್ದ ಒತ್ತಾಗಿ ಸುಮಾರು ಒಂದು ಗಜ ಅಗಲದ ಮಲ್ಲಿಗೆ ಹೂಗಳ ಸರಮಾಲೆಯಿಂದ ಅಲಂಕೃತನಾದ ವ್ಯಕ್ತಿ ದ್ರೌಪದಿ ವೇಷಧಾರಿ; ಅವನೇ ಹೂಕರಗಧಾರಿ. ಆತ ಕೆಲವೊಮ್ಮೆ ಬೀದಿಯಲ್ಲಿ ಓಡಿ ಬರುತ್ತಿದ್ದ. ಕೆಲವರ ಮನೆಯ ಮುಂದೆ ನರ್ತಿಸುತ್ತಿದ್ದ. ಮುಂದೆ ಬಂದವನು ಹಾಗೆಯೇ ಹಿಂದಕ್ಕೆ ಓಡಿಹೋಗಿಬಿಡುತ್ತಿದ್ದ. ಅವನ ಹಿಂದೆ ಮುಂದೆ ಕೊರಳಲ್ಲಿ ಸಣ್ಣ ಹೂ ಮಾಲೆ ಹಾಕಿಕೊಂಡ ಹತ್ತಿಪ್ಪತ್ತು ಜನ ಕತ್ತಿ ಹಿಡಿದುಕೊಂಡು ಅವನು ಹೋದ ಹಾಗೆ ಇವರೂ ಹೋಗುತ್ತಿದ್ದರು. ವೀರಾವೇಷದಿಂದ ಕುಣಿಯುತ್ತಿದ್ದರು.
ಕತ್ತಿಯ ಬೀಸು, ವೀರಾವೇಷದ ಕುಣಿತ ಭಯ ಹುಟ್ಟಿಸುತ್ತಿದ್ದರೂ ದ್ರೌಪದಿ ವೇಷಧಾರಿಯ ದಟ್ಟವಾದ ಹೂವಿನ ಅಲಂಕಾರ, ತಲೆಯ ಮೇಲಿನ ಮಡಿಕೆ ಒಂದು ಚೂರೂ ಅಲುಗಾಡದಂತೆ ಮಾಡುತ್ತಿದ್ದ ಕುಣಿತ ಬಿಟ್ಟ ಕಣ್ಣು ಬಿಟ್ಟಂತೆ ನೋಡುವ ಹಾಗೆ ಮಾಡುತ್ತಿತ್ತು. ನಮ್ಮ ಮನೆಯ ಮಾಡನ್ನು ಏರಿದರೆ ನಮ್ಮ ಬೀದಿ. ನಮ್ಮ ಪಕ್ಕದ ಬೀದಿ, ನಮ್ಮ ಹಿಂದಿನ ಬೀದಿ ಈ ಮೂರೂ ಬೀದಿಯಲ್ಲಿ ಹೂಕರಗದ ವಿಜೃಂಭಣೆಯನ್ನು ನೋಡಬಹುದಿತ್ತು. ನಮ್ಮ ಅಜ್ಜಿಯ ಮನೆಯ ಚೌಕದಲ್ಲಿ ಸುಮಾರು ಹೊತ್ತು ಆತ ಕುಣಿಯುತ್ತಿದ್ದ. ಅಲ್ಲೇ ಹತ್ತಿರವಿದ್ದ ಒಬ್ಬರ ಮನೆಯ ಅಂಗಳದಲ್ಲಿಯೂ ಹಾಗೆಯೇ ಕುಣಿಯುತ್ತಿದ್ದ. ಒಮ್ಮೆ ಆತ ನೆಲದ ಮೇಲೆ ಇಟ್ಟಿದ್ದ ಒಂದು ರೂಪಾಯಿಯ ನೋಟನ್ನು ಕುಣಿಯುತ್ತಲೇ ಬಗ್ಗಿ ತೆಗೆದುಕೊಂಡದ್ದನ್ನು ನೋಡಿದ್ದೆ. ಹೀಗೆ ಆತ ಕುಣಿದುದಕ್ಕೆ ಕರಗ ಉತ್ಸವ ಮುಗಿದ ನಂತರ ನಮ್ಮ ಅಜ್ಜಿಯ ಮನೆಯವರು, ಆ ದೊಡ್ಡ ಅಂಗಳದ ಮನೆಯವರು, ನಮ್ಮ ತಾಯಿಯ ಸೋದರತ್ತೆಯ ಮನೆಯವರು ಆತನಿಗೆ ಗೌರವ ಸತ್ಕಾರ ಮಾಡಿ ಹಣ ಕೊಡುತ್ತಿದ್ದರು.
ಕೋಲಾರದಲ್ಲಿ ಕರಗ ಆದ ನಂತರ ಬೆಂಗಳೂರಲ್ಲಿ ಕರಗ ಆಗುತ್ತದೆ. ನನ್ನ ತಾಯಿಯ ಸೋದರತ್ತೆಯ ಮಗನ ಮಕ್ಕಳು ಬೆಂಗಳೂರಿನಲ್ಲಿ ಇರುತ್ತಿದ್ದರು. ನಾನು ಮತ್ತು ನನ್ನ ತಂಗಿ ಕರಗ ನೋಡಲೆಂದೇ ಅವರ ಮನೆಗೆ ಹೋಗುತ್ತಿದ್ದೆವು. ಅಲ್ಲಿಯ ಧರ್ಮರಾಯನ ದೇವಸ್ಥಾನದಲ್ಲಿ ದ್ರೌಪದಿ ವೇಷಧಾರಿಯ ಪ್ರಾರಂಭದ ಕುಣಿತ ನೋಡಿದೆ. ಕರಗ ಉತ್ಸವ ಏಳು ದಿನಗಳ ಕಾಲ ನಡೆಯುತ್ತದೆ. ಸುತ್ತಮುತ್ತಲ ಹಳ್ಳಿಗಳನ್ನೆಲ್ಲಾ ಸುತ್ತಾಡಿ ಬರುತ್ತಾನೆ ಕರಗ ಹೊತ್ತವನು. ಅದಕ್ಕೆ ಬೇಕಾದ ಮಾನಸಿಕ ದೈಹಿಕ ದೃಢತೆಯನ್ನು ಗಳಿಸಿಕೊಳ್ಳುವ ಕುಣಿತ ಧರ್ಮರಾಯನ ದೇವಸ್ಥಾನದಲ್ಲಿ ಮಾಡುವ ಪ್ರಾರಂಭದ ಕುಣಿತ ಆಗಿರುತ್ತದೆ. ಕರಗದಲ್ಲಿ ಭಾಗಿಯಾಗುವ ಮನೆತನದವರು ಉಳಿದವರಿಗಿಂತ ಬೇರೆ. ಅವರು ಸಾಕಷ್ಟು ನೇಮಗಳನ್ನು ಪಾಲಿಸುತ್ತಾರೆ. ದೇಹಧಾರ್ಡ್ಯತೆಯನ್ನು ಕಾಯ್ದುಕೊಳ್ಳುತ್ತಾರೆ. ಕರಗದ ಕುಣಿತವನ್ನು ಅಭ್ಯಾಸ ಮಾಡುತ್ತಾರೆ. ಹೂ ಹಗುರವಾಗಿದ್ದರೂ ಅದು ಅಷ್ಟು ವಿಸ್ತಾರವಾದ ಜಾಗವನ್ನು ಆಕ್ರಮಿಸಿಕೊಂಡಾಗ ಕಬ್ಬಿಣದಂತೆ ಭಾರವಾಗಿಬಿಡುತ್ತದೆ! ಉಸಿರು ಮೇಲೆ ಕೆಳಗೆ ಆಗಿಬಿಡುತ್ತದೆ!
7 ಪುಷ್ಪ ಕಾಡು!
ಕೋಲಾರದಿಂದ ತುಮಕೂರಿಗೆ ಬಂದ ಮೇಲೆ ಹೂವಿನ ಈ ವೈಭವಗಳೆಲ್ಲಾ ಇಲ್ಲವಾದವು. ಆದರೆ ಹೂಗಳ ರಾಶಿಯೇ ನಮ್ಮ ಮನೆ ಆಗಿಬಿಟ್ಟಿತ್ತು. ದೊಡ್ಡ ಕಂಪೌಂಡಿನ ಬಾಡಿಗೆ ಮನೆ ನಮ್ಮದು. ೬೦’ ಉದ್ದ, ೪೦’ ಅಗಲದ ಜಾಗದಲ್ಲಿ ಅಲ್ಲಿ ಸ್ವಾಭಾವಿಕವಾಗಿ ಬೆಳೆದಿದ್ದ ತುಂಬೆ, ಕಾಶಿ ತುಂಬೆ (ಕೆಂಪು ಬಣ್ಣದ್ದು, ಕೇಸರಿಬಣ್ಣದ್ದು), ಕರ್ಣಕುಂಡಲ (ಎಳೆ ಹಳದಿ, ಬಿಳಿ, ಅರೆಗೆಂಪು, ಕೇಸರಿ, ವಯಲೆಟ್ ಬಣ್ಣದ್ದು), ಕ್ಯಾನಾ, ಕಾಕಡಾ (ಉದ್ದ ದೇಟಿನದು, ಗಿಡ್ಡ ದೇಟಿನದು), ಲಿಲ್ಲಿ, ಬೆಟ್ಟದತಾವರೆ, ಬಿಳಿ ಮತ್ತು ಹಳದಿ ಬಣ್ಣದ ಸ್ಫಟಿಕ, ರಾಮಬಾಣ, ಬಿಳಿ ಜಾಜಿ, ಹಳದಿ ಬಣ್ಣದ ಕಸ್ತೂರಿ ಜಾಜಿ, ಹಳದಿ ಬಣ್ಣದ ಪಗಡೆ ಹೂ, ಗಂಟೆ ಹೂ, ದಟ್ಟ ನೇರಳೆ ಬಣ್ಣದ ಮತ್ತು ಕೆಂಪು ಮಿಶ್ರಿತ ನೇರಳೆ ಬಣ್ಣದ ರುದ್ರಾಕ್ಷಿ, ಹಳದಿ ವಯಲೆಟ್ ಕೆಂಪು ಬಿಳಿ ಬಣ್ಣಗಳ ದೊಡ್ಡ ಡೇರೆ ಸಣ್ಣ ಡೇರೆ ಹೂ, ಪನ್ನೀರು ಗುಲಾಬಿ, ಬಿಳಿ ಕಣಿಗಲೆ, ನಂಜಬಟ್ಟಲು, ಎಳೆ ಹಳದಿ ಬಣ್ಣದ ದಾಸವಾಳ, ಪಾಟಲ ವರ್ಣದ ಸಂಜೆ ಮಲ್ಲಿಗೆ, ಕಾಸ್ಮಾಸ್ ಹೂ, ಆಸ್ಟ್ರಾ, ವೆಲ್ವೆಟ್ ಹೂ, ಮನೆಗೆ ಏರಿಬರಲು ಇದ್ದ ಮೆಟ್ಟಿಲು ಬಳಿ ಬೆಳೆದಿದ್ದ ನಿತ್ಯ ಮಲ್ಲಿಗೆ ಬಳ್ಳಿ(ಅಂಬೂರ್ ಮಲ್ಲಿ), ಬಳ್ಳಿ ಗುಲಾಬಿ ಮತ್ತು ಬೋಗನ್ ವಿಲ್ಲಾ, ತಂತಿ ಬೇಲಿಯ ಕಾಂಪೌಂಡಿನ ಅಂಚಿಗೆ ಇದ್ದ ಕೆಂಡ ಸಂಪಿಗೆ, ಚೈನಾ ಸಂಪಿಗೆ, ದೊಡ್ಡ ಸಂಪಿಗೆ ಮತ್ತು ಚಿಕ್ಕ ಸಂಪಿಗೆ – ಹೀಗೆ ನಮ್ಮದು ಪುಷ್ಪೋದ್ಯಾನ! ಅಲ್ಲಲ್ಲ, ಪುಷ್ಪ-ಕಾಡು! ಅದು ನಮ್ಮ ತಂದೆಗೆ ಹೂವಮ್ಮ ಇಲ್ಲಿ ಇಲ್ಲ ಎನ್ನುವ ಕೊರಗನ್ನು ಇಲ್ಲವಾಗಿಸಿತ್ತು. ಆದರೆ ಹಬ್ಬದ ಪೂಜೆಯ ಸಡಗರವೂ ಇಲ್ಲಿ ಇಲ್ಲವಾಗಿತ್ತು. ಇಲ್ಲಿ ನಮ್ಮ ಬೀದಿ ಕಾಸ್ಮೊಪಾಲಿಟನ್! ಜೈನರು, ನಾಯಕರು, ಅರಸುಗಳು, ವೀರಶೈವರು, ರೈತರು, ರೆಡ್ಡಿಗಳು ಹೀಗೆ ಬಗೆ ಬಗೆಯ ಜನಾಂಗ ಅಲ್ಲಿದ್ದದ್ದು. ಎಲ್ಲರಿಗೂ ಸಾಮಾನ್ಯ ಎನ್ನುವ ಹಬ್ಬದಾಚರಣೆ ಇರದೆ ಹೂಗಳಿದ್ದರೂ ಹಬ್ಬಗಳು ಸಪ್ಪೆ ಸಪ್ಪೆ ಆಗಿಬಿಟ್ಟವು.
ನಾವಿದ್ದದ್ದು ಅಕ್ಕ ಪಕ್ಕ ಹೊಂದಿಕೊಂಡಂತೆ ಇರುವ ಟ್ವಿನ್ ಹೌಸ್‌ನಲ್ಲಿ. ನಾವು ಬಾಡಿಗೆಗೆ ಹೋದಾಗ ಇನ್ನೊಂದು ಮನೆಯಲ್ಲಿ ಇದ್ದವರು ಪೋಲೀಸ್ ಸಬ್ ಇನ್ಸ್ ಪೆಕ್ಟರ್. ಅವರದು ಪುಷ್ಪೋದ್ಯಾನವೇ! ಅದು ಅವರು ಸಾಕ್ಷಿಗಳಿಗೆ ಮಾತು ಕಲಿಸುತ್ತಿದ್ದ ಮುಕ್ತ ಆವರಣ. ಅವರ ಮಕ್ಕಳು, ಹೆಂಡತಿ ಗಿಡ ಮರಗಳನ್ನೆಲ್ಲಾ ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು, ಕಟಿಂಗ್ ಮಾಡಿ ಅವುಗಳ ಚೆಂದವನ್ನು ಹೆಚ್ಚಿಸಿದ್ದರು. ಅಂದ ಚಂದವಾಗಿಯೂ ಪಾತಿ ಮಾಡಿ ಅವುಗಳ ಚೆಂದಕ್ಕೆ ಕಳೆ ಕೊಟ್ಟಿದ್ದರು. ಅವರಿಗೆ ವರ್ಗವಾದ ನಂತರ ಬಂದವರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಲೆಕ್ಚರರ್. ಅವರದು ರೈತಾಪಿ ಕುಟುಂಬ. ಅವರು ತಮ್ಮೊಂದಿಗೆ ತಮ್ಮ ವೃದ್ಧ ತಂದೆ ತಾಯಿಯರನ್ನು ಕರೆದುಕೊಂಡು ಬಂದಮೇಲೆ ಹೂಗಿಡ ಮರಗಳ ದೆಸೆ ಬದಲಾಗಿ ಹೋಯಿತು. ಗೇಟಿನಿಂದ ಮನೆಯವರೆಗೂ ಬರಲು ಇದ್ದ ದಾರಿಯನ್ನು ಹಿಂದೆ ಇದ್ದ ಸಬ್ ಇನ್ಸ್ ಪೆಕ್ಟರ್ ಮನೆಯವರು ಇಟ್ಟಿಗೆಗಳನ್ನು ದಾರಿಯ ಇಕ್ಕೆಲಗಳಲ್ಲೂ ಕ್ರಾಸ್ ಕ್ರಾಸ್ ಆಗಿ ಜೋಡಿಸಿ ಚೆನ್ನಾಗಿ ಕಾಣುವಂತೆ ಮಾಡಿಕೊಂಡಿದ್ದರು. ಅದರ ಆಚೆಗೆ ಇದ್ದ ಜಾಗದಲ್ಲಿ ಬೆಳೆದಿದ್ದ ಗಿಡಗಳನ್ನೂ ಹಾಗೆಯೇ ವರ್ಣರಂಜಿತವಾಗಿ ಇರಿಸಿಕೊಂಡಿದ್ದರು. ಇವರು ಬಂದ ಮೇಲೆ ಇವರ ಅಪ್ಪ ಸೊಂಪಾಗಿ ಬೆಳೆದಿದ್ದ ಹೂಗಿಡಗಳಲ್ಲಿ ಪೂಜೆಗೆಂದು ಒಂದಷ್ಟು ಮಾತ್ರ ಉಳಿಸಿ ಉಳಿದವುಗಳನ್ನೆಲ್ಲಾ ಕಿತ್ತು ಹಾಕಿ ಹಾರೆಯಿಂದ ಜಾಗವನ್ನೆಲ್ಲಾ ಚೆನ್ನಾಗಿ ಹದಮಾಡಿ ಆಯತಾಕಾರವಾಗಿ ನೆಲವನ್ನು ಸಮ ಮಾಡಿ ಮೆಣಸಿನ ಕಾಯಿಯ ಮಡಿಗಳನ್ನು ಮಾಡಿದರು. ಮನೆಗೆ ವರ್ಷವಿಡೀ ಬೇಕಾಗುವಷ್ಟು ಮೆಣಸಿನಕಾಯಿ ಬೆಳೆದುಕೊಂಡರು. ನಾವು ಐದು ವರ್ಷ ಆ ಮನೆಯಲ್ಲಿ ಇದ್ದೆವು. ಪ್ರತಿ ವರ್ಷ ಹೀಗೆ ಏನೋ ಒಂದು ಹಣದ ಬೆಳೆ ತೆಗೆದರು.
8 ಕಲಿಕೆ:
ತುಮಕೂರಿನ ಮನೆಯಲ್ಲಿ ಅಷ್ಟು ಹೂಗಿಡ ಮರಗಳು ಇದ್ದರೂ ಇನ್ನು ಯಾರದೋ ಮನೆಯಲ್ಲಿ ಬೇರೆ ಯಾವುದೋ ಜಾತಿಯ ಹೂಗಳಿವೆ ಎಂದು ಗೆಳತಿಯೊಬ್ಬಳು ಹೇಳಿದಳು ಎಂದು ಅವುಗಳನ್ನು ತರಲು ಹೋದದ್ದು, ಅಲ್ಲಿಗೆ ಹೋದಾಗ ನಾವು ಹೂ ಕೊಯ್ಯಲು ಅಥವಾ ಹೂ ಬಿಡಿಸಲು ಬಂದವರಲ್ಲ; ಬದಲಿಗೆ ಕದಿಯಲು ಬಂದವರು ಎಂದು ನನಗೆ ಗೊತ್ತಾಗಿ ಸಿಗ್ಗಾ(ನಾಚಿಕೆಯಾ)ದದ್ದು ಯಾವಾಗಲೂ ನೆನಪಾಗುತ್ತಿರುತ್ತದೆ. ಹಾಗೆಯೇ ನಮ್ಮ ಮನೆಯಲ್ಲಿ ಬೆಳೆದಿದ್ದ ಹೂಗಳು ಅವುಗಳನ್ನು ಕಟ್ಟಿ ಮುಡಿದುಕೊಳ್ಳಬೇಕೆನ್ನಿಸುವಂತಿದ್ದವು, ಅದರಿಂದಾಗಿ ಹೂ ಕಟ್ಟುವುದನ್ನು ಕಲಿತೆ ಎನ್ನುವುದೂ ಸಹಾ ಯಾವಾಗಲೂ ನೆನಪಿನಲ್ಲಿ ಇರುವಂತಹುದು; ಆದರೆ ಇದು ಯಾರಿಂದಲೂ ಹೇಳಿಸಿಕೊಳ್ಳದೆ ನಾನೇ ಕಲಿತುಕೊಂಡದ್ದು ಎನ್ನುವ ಅಭಿಮಾನದ ನೆನಪು. ಕಾಲಿನ ಹೆಬ್ಬೆರಳಿಗೆ ದಾರದ ಕುಣಿಕೆ ಮಾಡಿ ಹೂ ಕಟ್ಟುವುದು, ನನ್ನ ಬೆರಳುಗಳ ಮಧ್ಯೆ 4, 6, 8 ಅಥವಾ 10 ಹೂಗಳನ್ನಿರಿಸಿ ಕಟ್ಟುವುದು, ಇನ್ನೊಬ್ಬರನ್ನು ಎದುರಿಗಿರಿಸಿಕೊಂಡು ಅವರ ತೋರುಬೆರಳು ಮತ್ತು ಉಂಗುರದ ಬೆರಳಿಗೆ ದಾರದ ಕುಣಿಕೆ ಹಾಕಿ ಅಥವಾ ಬಾಗಿಲ ಗೂಟಕ್ಕೆ ದಾರದ ಕುಣಿಕೆ ಹಾಕಿ ಹೂ ಕಟ್ಟುವುದು ಇವನ್ನೆಲ್ಲಾ ಕಲಿತೆ.
9 ಅತಿಶಯ ಹೂಗಳು:
ಆಗ ತಲೆಯ ತುಂಬಾ ಕೂದಲು, ಉದ್ದ ಜಡೆ, ತಲೆಯಲ್ಲಿ ಮಾತ್ರವಲ್ಲದೆ ಮನಸ್ಸಿನ ತುಂಬಾ ಹೂವಿನ ರಾಶಿ. ಈಗ ಸಣ್ಣ ತುಂಡು ಹೂಮಾಲೆ ಮುಡಿದರೂ ಅದು ನಿಲ್ಲದೆ ಜಾರಿಹೋಗುತ್ತದೆ. ಕ್ಲಿಪ್ ಹಾಕಿ ಮುಡಿಯುವ ಮನಸ್ಸು ಬರುವುದಿಲ್ಲ. ಅದು ಚುಚ್ಚುತ್ತೆ ಎನ್ನಿಸುತ್ತದೆ. ಯಾವಾಗಲಾದರೂ ಹೂ ಮುಡಿದರೆ ಅದು ನನಗೂ ಅತಿಶಯವಾದದ್ದು, ನೋಡಿದವರಿಗೂ ಅತಿಶಯವಾಗಿ ಕಾಣುವಂತಹುದು. ಕೆಲವರು ಏನು ಹೂ ಮುಡಿದಿದ್ದೀರಿ ಎಂದು ಹುಬ್ಬೇರಿಸುತ್ತಾರೆ.
”ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ ಬಾಡಿ ಹೋಗುವ ಮುನ್ನ ಕೀಳುವವರಾರೆಂದು…..(ದೇವರ)ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ, ಮುಡಿಯ ಸೇರುವ ದಾರಿ ನಾ ಕಾಣೆನಲ್ಲ, ಕಳವಳಿಸಿ ಕೇಳುತಿಹೆ ಕರುಣೆ ತೋರೆಂದು ಮುಡಿವ ಮಲ್ಲಿಗೆಯಾಗಿ ಬಾಳಬೇಕೆಂದು” – ಇವು ಕವನವೊಂದರ ಕೆಲವು ಸಾಲುಗಳು. ಹೀಗೆ ಹೂಗಳು ಭಾವಿಸುತ್ತವೆಯೋ ಇಲ್ಲವೋ ಗೊತ್ತಿಲ್ಲ. ”ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜಸೌರಭವ ಸೂಸಿ ನಲಿವಿಂ ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ”- ಹೀಗೆ ಪ್ರಾರ್ಥಿಸುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಹೂಗಳು ಮತ್ತು ಹೂವಾಡಗಿತ್ತಿಯರು (= ಹೂಗಳ ಮಾರಾಟದಿಂದ ತಮ್ಮ ಜೀವನ ನಿರ್ವಹಣೆ ಮಾಡುವ ಹೂಮಾರುವವರು, ಹೂಗಳಿಂದ ತಮ್ಮ ಭೌತಿಕ ಹಾಗೂ ಮಾನಸಿಕ ಪರಿಸರದ ಮತ್ತು ಕೂದಲಿನ ಸೌಂದರ್ಯ ವರ್ಧಿಸಿಕೊಳ್ಳಲು ಬಯಸುವವರು) ಸೌಂದರ್ಯಪ್ರಜ್ಞೆಗೆ ಒಂದು ಹೆಸರು ಎನ್ನುವುದನ್ನಂತೂ ಸಾಬೀತು ಪಡಿಸುತ್ತಾರೆ.
–ಕೆ.ಎಲ್.ಪದ್ಮಿನಿ ಹೆಗಡೆ
ತುಂಬಾ ಚೆನ್ನಾಗಿದೆ.
ವಾವ್ ಹೂವಿನ ಅಂದಚೆಂದ ಅಲಂಕಾರದ ಜೊತೆಗೆ ತಮ್ಮ ಅನುಭವದ ನೆನಪುಗಳ ಅನಾವರಣ ಸೊಗಸಾದ ನಿರೂಪಣೆಯೊಂದಿಗೆ ಮೂಡಿಬಂದಿದೆ ನಿಮ್ಮ ಲೇಖನ.ಧನ್ಯವಾದಗಳು ಮೇಡಂ.
ಬಹಳ ಸವಿಸ್ತಾರವಾದ, ಸುಂದರ ಬರಹ
estondu vshaya. nice presentation.
ನೆನಪಿನಂಗಳದಿಂದ ಆಯ್ದ ಹೂಗಳ ಮಾಲೆ ತುಂಬಾ ಸೊಗಸಾಗಿ ನೀಡಿದ್ದೀರಾ
ಚೆಂದದ ನಿರೂಪಣೆ ಸೊಗಸಾದ ಬರಹ
ಸುಜಾತಾ ರವೀಶ್
ನಿಮ್ಮ ಹೂಮನದಲ್ಲಿ ಅಡಗಿದ್ದ ಹೂವಿನ ಕುರಿತಾದ ನವಿರು ಭಾವಗಳೆಲ್ಲಾ ಲೇಖನದ ಮೂಲಕ ಕಂಪ ಬೀರಿದೆ.
ಹೂಗಳ ಬಗ್ಗೆ ಸವಿಸ್ತಾರವಾಗಿ ಲೇಖನ ಚೆನ್ನಾಗಿ ಮೂಡಿಬಂದಿದೆ
ಹೂವಾಡಗಿತ್ತಿಯ ಸುಂದರ ಹಾಡಿನೊಂದಿಗೆ ಆರಂಭಗೊಂಡು, ಹೂವಿನೊಂದಿಗೆ ಬೆಸೆದ ಅನುಭವದ ಮಾಲೆಯ ಹರಹು, ಹೂಮಾಲೆಯೊಂದಿಗೆ ಪೈಪೋಟಿ ನಡೆಸಿದೆ! ಬಹಳ ಸೊಗಸಾದ, ಬಹು ಮಾಹಿತಿಗಳುಳ್ಳ ಬರಹ..ಧನ್ಯವಾದಗಳು ಮೇಡಂ.
ಹೂವಾಡಗಿತ್ತಿಯ ಸುಂದರ ಹಾಡು, ಹೂಗಳ ಸೊಗಸಾದ ಅಲಂಕಾರ, ಹೂವಿನೊಂದಿಗಿನ ಭಾವಾನುಬಂಧವನ್ನೆಲ್ಲಾ ಭಾವಿಸಿ ಆಸ್ವಾದಿಸಿದ ಹೂಮನ-ಸಹೃದಯಿಗಳಿಗೆಲ್ಲಾ ಧನ್ಯವಾದಗಳು!
ಪದ್ಮಿನಿ ಹೆಗಡೆ