ಹೊತ್ತಿಗೆ
.
ಪುರಾಣ ಪುಣ್ಯಕಥೆ
ಆಗಮ ಶಾಸ್ತ್ರಗಳ
ಗಂಟನು ಮಸ್ತಕಕೆ
ಏರಿಸುವ ಜ್ಞಾನಬುತ್ತಿಯ
ಈ ಹೊತ್ತಿಗೆ…..!!
ವಿವಿಧ ದೇಶ ವಿದೇಶಗಳ
ಆಚಾರ- ವಿಚಾರ ರೀತಿ- ನೀತಿ
ವೇಷ- ಭಾಷೆ ಸಾಮಾಜಿಕ
ವೈವಿಧ್ಯತೆ ಆಹಾರ ಪದ್ದತಿ
ಕುಟುಂಬ ವ್ಯವಸ್ಥೆಯ
ಅರುಹುವದು
ಈ ಹೊತ್ತಿಗೆ…….!!
ರಾಜರ ಗಾಂಭಿರ್ಯ
ಅಂಬಾರಿಗಳ ವೈಭೋಗ
ಆಡಳಿತ ಜ್ಞಾನ
ರಾಜ ಚತುರತೆ
ಆರ್ಥಿಕ,ಶಿಕ್ಷಣ, ಕಲೆ
ವಾಸ್ತುಶಿಲ್ಪ, ಕಲಾ
ನೈಪುಣ್ಯತೆ ಸಾರಿ
ಸಾರಿ ಹೇಳುವದು
ಈ ಹೊತ್ತಿಗೆ…..!!
ಅಂತಃಪುರ ಸ್ತ್ರೀಯರ
ಸೌಂದರ್ಯ ಪ್ರಜ್ಞೆ
ಪ್ರಾಜ್ಞರ ಕಲಾಪಾಂಡಿತ್ಯ
ಮಹಾಪುರಾಣಗಳ ಪ್ರೇರಣೆ
ಬಿರುದು- ಬಾವಲಿ
ಕಿರೀಟ- ಖಡ್ಗಗಳು
ಸಾಮಂತ- ದೀಮಂತ
ವೀರ-ಉದಾತ್ತ-ಧೀರೋದಾತ್ತ
ಗುಣಗಳನ್ನು ಹೇಳುವದು
ಈ ಹೊತ್ತಿಗೆ….!!
ಕವಿಪುಂಗವರು
ಸಾರ್ವಭೌಮರು
ಕವಿಚಕ್ರವರ್ತಿಗಳು
ತೀರ್ಥಂಕರರು,ಮೋಕ್ಷ
ಸಾಧಕರ ಚರಿತೆಯನು
ಸ್ವರ್ಗ- ಕಲ್ಪ- ನರಕಗಳ
ಕಲ್ಪನೆಯನು ಬಿಂಬಿಸುವದು
ಈ ಹೊತ್ತಿಗೆ…..!!
ಬ್ರಹ್ಮರ್ಷಿ-ದೇವರ್ಷಿ
ರಾಜರ್ಷಿ ಚತುರ ರಾಜ
ಮಾತೆಯರು ಕಿಂಕರರು
ಅಕ್ಷೋಹಿನಿ ದಂಡು
ಕಾಲ್ದಳ,ರಥದಳ, ಗಜದಳ
ಕುರುಕ್ಷೇತ್ರ, ರಣರಂಗಗಳ
ಕಲ್ಪನೆಯ ಕಣ್ಣೆದುರು ಕಟ್ಟಿ
ಮೆರೆಸುವದು
ಈ ಹೊತ್ತಿಗೆ….!!
ಹಳಗನ್ನಡ ಹೊಸಗನ್ನಡ
ನಡುಗನ್ನಡ ಶೈಲಿಯ
ಶಾಸನಗಳ ಸಾಲಿನಲ್ಲಿ
ದೇಗುಲಗಳ ಭಿತ್ತಿಯಲಿ
ಶೈವ ಬೌದ್ದ ಜೈನ ಧರ್ಮಗಳ
ಸಾಮರಸ್ಯ ಕಾಣಿಸುತ
ಚಂದ್ರಾರ್ಕ ಸ್ಥಾಯಿಯವರೆಗೆ
ಇರುವ ಮಾಡಿದ ಕಾನೂನು
ಎಲ್ಲ ವಿವರ ಇರುವದು
ಈ ಹೊತ್ತಿಗೆ….!!
ಅರವಟ್ಟಿಗೆ- ಅಗ್ಗಿಷ್ಟಿಗೆ
ನಂದನವನ ಅಚ್ಚೋದ
ಸರೋವರ ,ಶ್ರೀ ಹರಿಯ
ದಶಾವತಾರಗಳು
ಶಿವನ ಲೀಲೆಗಳು
ಸೀತಾಪಹರಣ,ನಚೀಕೇತ
ಯಮನ ಸಂವಾದ
ದ್ರುವನ ಮಹಾತಪಸ್ಸು
ಪಾಂಡವರ ವನವಾಸ
ಅಜ್ಞಾತವಾಸ ಸವಿಸ್ತಾರ
ಮಾಹಿತಿಗಳ ಆಗರವು
ಈ ಹೊತ್ತಿಗೆ….!!
ಬದುಕು ಬದಲಿಸುವ
ಸನ್ಮಾರ್ಗ ತೋರಿಸುವ
ಸತ್ಪಥದಲ್ಲಿ ನಡೆಸುವ
ಅಜ್ಞಾನವಳಿಸಿ
ಸುಜ್ಞಾನ ನೀಡುವ
ಜೀವನಕೆ ದಾರಿದೀಪವಾಗಿ
ಪ್ರತಿಕ್ಷಣವು ಬೆಳಕು ನೀಡುವ
ದೀಪ್ತಿಯ ಕೀರಣವು
ಈ ಹೊತ್ತಿಗೆ….!!
-ಶಂಕರಾನಂದ ಹೆಬ್ಬಾಳ , ಇಲಕಲ್ಲ
ಓದಿನ ಮಹತ್ವ, ಜ್ಞಾನವನ್ನು ಪುಸ್ತಕಗಳು ಹೇಗೆ ವೃದ್ಧಿಸುತ್ತವೆ ಅನ್ನುವುದನ್ನು ಸಾರುವ ಸಾಲುಗಳು, ಅವೆಷ್ಟೋ ಪುರಾತನ ಕಾಲದ ರೀತಿನೀತಿಗಳು, ವಿಚಾರಗಳು ನಮಗೆ ತಿಳಿಯುವುದು ಈ ಪುಸ್ತಕಗಳಿಂದಲೇ. ಚಂದದ ಕವನ
ಪುಸ್ತಕ ತನ್ನ ಒಡಲಲ್ಲಿ ಏನೆಲ್ಲಾ ಅಡಗಿಸಿಕೊಂಡು ಇರುತ್ತದೆ ಎಂಬುದನ್ನು ಸ್ಪಷ್ಷೀಕರಿಸುವ ಕವನ ಸುಂದರವಾಗಿ ಮೂಡಿ ಬಂದಿದೆ.ಅಭಿನಂದನೆಗಳು ಸಾರ್.
ತ್ಯಾಂಕು
ಹೊತ್ತಗೆಗಳ ಪ್ರಾಮುಖ್ಯತೆಯನ್ನು, ಅವುಗಳಲ್ಲಿ ತುಂಬಿದ ಜ್ಞಾನ ಭಂಡಾರವನ್ನು ತಿಳಿಸುವ ಕವನ ಬಹಳ ಸೊಗಸಾಗಿದೆ.