‘ನೆಮ್ಮದಿಯ ನೆಲೆ’-ಎಸಳು 13
ನನ್ನನ್ನು ಬೆಂಗಳೂರಿನಲ್ಲಿ ಕರೆದುಕೊಂಡು ಹೋಗಲು ಬಂದಿದ್ದರು ಪತಿರಾಯರು. ಎಲ್ಲ ಫಾರ್‍ಮಾಲಿಟೀಸ್ ಮುಗಿಸಿ ಲಗೇಜು ಎತ್ತಿಕೊಂಡು ಏರ್‌ಪೋರ್ಟಿನಿಂದ ಹೊರಬಂದೆ. ಎಂದೂ ನೋಡೇ ಇಲ್ಲವೇನೋ ಎಂಬಂತೆ ನನ್ನನ್ನೇ ನೋಡುತ್ತಾ ‘ಸುಕನ್ಯಾ ಅಲ್ಲಿನ ಹವಾ ಒಗ್ಗಿದ ಹಾಗೆ ಕಾಣಿಸುತ್ತಿಲ್ಲ. ಬಹಳ ಇಳಿದು ಹೋಗಿದ್ದೀಯಾ’ ಎಂದರು. ‘ಹಾಗೇನಿಲ್ಲ ಬಿಡಿ, ನಾನೇನು ಹೊಸದಾಗಿ ಅಲ್ಲಿಗೆ ಹೋಗಿ ಬರುತ್ತಿದ್ದೀನಾ? ‘ಎಂದೆ. ಅದಕ್ಕೆ ‘ಸುಕನ್ಯಾ ನಾನು ಆ ಹವಾಮಾನದ ಬಗ್ಗೆ ಹೇಳಲಿಲ್ಲ. ಮನೆಯೊಳಗಿನ ಹವಾಮಾನ, ಮೂರೂ ಮೊಮ್ಮಕ್ಕಳು ನಿನ್ನನ್ನು ಸರಿಯಾಗಿ ಗೋಳು ಹೊಯ್ದುಕೊಂಡಂತೆ ಕಾಣುತ್ತದೆ. ಅವುಗಳ ಹಿಂದೆ ಓಡಾಡಿ ಓಡಾಡಿ ದಣಿದಂತೆ ಕಾಣುತ್ತಿದ್ದೀ. ಈಗಿನ ಕಾಲದ ಮಕ್ಕಳು ನಮ್ಮ ಮಕ್ಕಳಂತಲ್ಲಾ ಪಟಿಂಗರಿರಬೇಕು ‘ ಎಂದು ನಕ್ಕರು. ಮನಸ್ಸಿನಲ್ಲಿ ಹೂಂ ಆ ಹಸುಗೂಸುಗಳಿಂದ ಇಷ್ಟು ಕಾಲ ಹೇಗೋ ನೂಕಿದೆ. ಇಲ್ಲದಿದ್ದರೆ ! ಅಂದುಕೊಂಡೆ ಅವರಿಗೆ ಉತ್ತರ ಕೊಡದೆ ಮನೆಗೆ ನಡೆದೆ.
ಮಗಳು ಅಳಿಯ ಆಫೀಸಿನ ಕಡೆಯಿಂದ ಯಾವುದೋ ಕೆಲಸದ ಸಲುವಾಗಿ ಜರ್ಮನಿಗೆ ಟೈನಿಂಗ್ ಪಡೆಯಲು ಹೋಗಿದ್ದಾರೆ ಮುಂದಿನ ವಾರ ಬರಬಹುದೆಂದರು ನನ್ನವರು. ‘ಹೌದೇ ! ಫೋನ್ ಮಾಡಿದಾಗ ನೀವಾಗಲೀ, ಅವಳಾಗಲೀ ನನಗೆ ಏನೂ ಹೇಳಲಿಲ್ಲ’ ಎಂದೆ. ‘ವಿಷಯ ತಿಳಿದರೆ ನೀನು ಇಲ್ಲಿಯ ಬಗ್ಗೆಯೇ ಚಿಂತೆಮಾಡುತ್ತೀಯಾ, ಅದಕ್ಕೆ ಹೇಳಬೇಡವೆಂದು ಮಗಳು ಆದೇಶಿಸಿದ್ದಳು. ಅದಕ್ಕೇ ತಿಳಿಸಲಿಲ್ಲ’ ಎಂದರು. ‘ಹಾಗಾದರೆ ನಿಮ್ಮ ಊಟ ತಿಂಡಿಯ ವ್ಯವಸ್ಥೆ? ಕನಿಷ್ಟ ಒಂದು ಅನ್ನ ಸಾರು ಮಾಡುವುದನ್ನಾದರೂ ಕಲಿತಿದ್ದರೆ ಎಷ್ಟು ಅನುಕೂಲವಾಗುತ್ತಿತ್ತು. ಬರೀ ಉಡುಪಿ ಮಾವನ ಮನೆಗೇ ಜೋತುಬಿದ್ದಿರುತ್ತೀರಾ, ಅದು ಸರಿಯಾ?’ ಎಂದೆ. ‘ಹೂ ಸುಕನ್ಯಾ ಏನುಮಾಡಲಿ ನನಗೆ ಅಡುಗೆ ಕೆಲಸ ಅಬ್ಬಾ ! ನನ್ನ ಕೈಯಲ್ಲಿ ಆಗೋಲ್ಲ ಮಾರಾಯಿತಿ’ ಎಂದರು. ‘ಹೋಗಲಿ ಬಿಡಿ ಇನ್ನು ಮೇಲೆ ಎಲ್ಲೂ ಹೋಗಲ್ಲ’ ಎಂದೆ.’ ಏಕೆ ಸುಕನ್ಯಾ ಈ ಸಾರಿ ನೀನು ಅಲ್ಲಿಗೆ ಹೋಗಿ ಬಂದಾಗಿನಿಂದ ತುಂಬ ಸಪ್ಪಗಾಗಿದ್ದೀ, ಹೆಚ್ಚು ಮಾತುಕತೆಯೂ ಇಲ್ಲ. ಮೌನಗೌರಿಯಂತಾಗಿಬಿಟ್ಟಿದ್ದೀ. ಆದಿಯಿಂದಲೂ ಯಾವುದೇ ಫೋನ್ ಬಂದಿಲ್ಲ. ನಾನೇ ನೀನು ಸುಖವಾಗಿ ತಲುಪಿದೆ ಎಂದು ಮೆಸೇಜ್ ಮಾಡಿದ್ದೆ. ಅದಕ್ಕೆ ಮಾತ್ರ ಉತ್ತರಿಸಿದ್ದ ಅಷ್ಟೇ. ಅಲ್ಲೇನೋ ನಡೆಯಬಾರದ್ದು ನಡೆದಿದೆ ಎಂದು ನನಗನ್ನಿಸುತ್ತಿದೆ. ಇಷ್ಟವಿದ್ದರೆ ಹೇಳಿಕೋ. ನಾನೇನೂ ಬಲವಂತ ಮಾಡಲ್ಲ. ಹೇಳಿಕೊಂಡರೆ ಮನಸ್ಸು ಹಗುರಾಗುತ್ತದೆ. ನಾನೇನೂ ಎಲ್ಲೂ ಪ್ರಚಾರ ಮಾಡಲು ಹೋಗುವುದಿಲ್ಲ. ಅದು ನಿನಗೂ ಗೊತ್ತು’ ಎಂದು ಬಹಳಷ್ಟು ಒತ್ತಾಯಿಸಿದರು. ಅವರಿಗೆ ಚುಟುಕಾಗಿ ವಿಷಯ ತಿಳಿಸಿದೆ. ‘ಹಾಗೇ ನಮ್ಮ ಮಗ ಮಾಡಿದ್ದು ಸರಿಯಲ್ಲ. ಯಾರಿಗಾದರೂ ಕೋಪ ಬರುವುದು ಸಹಜವೇ. ಸೊಸೆಯ ಸ್ಥಾನದಲ್ಲಿ ನಾನೇ ಇದ್ದರೂ ಹಾಗೇ ನಡೆದುಕೊಳ್ಳುತ್ತಿದ್ದೆನೇನೋ?’ ಎಂದೆ. ಅವರು ಮುಂದಕ್ಕೇನೂ ಪ್ರಶ್ನೆ ಮಾಡಲಿಲ್ಲ. ಸುಮ್ಮನಾದರು.
ದಿನಗಳು ಯಥಾರೀತಿಯಲ್ಲಿ ಸಾಗಿದವು. ಮನೆ, ಮನಗಳನ್ನು ಒಂದು ಹಂತಕ್ಕೆ ತರುವಷ್ಟರಲ್ಲಿ ಮಗಳು, ಅಳಿಯಂದಿರ ಆಗಮನವಾಯಿತು. ನನ್ನ ಸ್ನೇಹಿತೆಯರನ್ನು ಭೇಟಿಯಾಗಿದ್ದೂ ಆಯಿತು. ಎಲ್ಲರ ಬಾಯಲ್ಲೂ ಒಂದೇ ಮಾತು ‘ನೀನು ತುಂಬಾ ಇಳಿದು ಹೋಗಿದ್ದೀಯಾ’ ಎಂದು. ‘ಎದೆಯಲ್ಲಿ ಮುಚ್ಚಿಟ್ಟುಕೊಳ್ಳುವ ಮಡಿಕೆಗಳನ್ನು ಬಿಚ್ಚಿಟ್ಟರೆ ನಾವೇ ಬೆತ್ತಲಾದಂತೆ’ ಎಂದುಕೊಂಡು ನನ್ನವರು ಹೇಳಿದಂತೆ ಮಕ್ಕಳನ್ನು ನೋಡಿಕೊಳ್ಳುವ ಕಷ್ಟದ ಕೆಲಸದಿಂದ ಸ್ವಲ್ಪ ಸೊರಗಿದಂತೆ ಕಾಣುತ್ತಿರಬಹುದು. ಸ್ವಲ್ಪ ದಿನ ಕಳೆದರೆ ಸರಿಹೋಗುತ್ತೇನೆ. ಅನಾರೋಗ್ಯವೇನೂ ಇಲ್ಲ ಎಂದು ಅವರೆಲ್ಲರಿಗೆ ಸಮಝಾಯಿಷಿ ಕೊಟ್ಟು ಪ್ರಸಂಗದಿಂದ ಪಾರಾದೆ.
ಆಗೊಮ್ಮೆ ಈಗೊಮ್ಮೆ ಮಗನಿಂದ ಫೋನ್ ಬರುತ್ತಿತ್ತು. ಮೊಮ್ಮಕ್ಕಳು ಎದ್ದಿದ್ದರೆ ಅವರು ‘ಹೌ ಆರ್ ಯು ಗ್ರ್ಯಾಂಡ್‌ಮಾ, ವಿ ಆರ್ ಮಿಸ್ಸಿಂಗ್ ಯು, ವೆನ್ ಆರ್ ಯು ಕಮಿಂಗ್ ಬ್ಯಾಕ್? ಪ್ಲೀಸ್ ಕಮ್ ಸೂನ್, ಟೇಕ್‌ಕೇರ್ ಬೈ’ ಎನ್ನುತ್ತಿದ್ದವು. ಆದರೆ ಸೊಸೆಯ ಸೊಲ್ಲೇ ಇಲ್ಲ. ಇದರಲ್ಲಿ ನನ್ನ ಪಾತ್ರವೇನು? ಎಷ್ಟು ಹಠಮಾರಿ ಹೆಣ್ಣು ಎಂದೆನ್ನಿಸಿತು. ಹೆಚ್ಚು ಯೋಚಿಸುವುದನ್ನು ಬಿಟ್ಟು ಸ್ನೇಹಿತರ ಒಡನಾಟ, ಓದುವುದು, ಭಜನೆ ಕಾರ್ಯಕ್ರಮ, ನಾಟಕ ಸಿನೆಮಾ ವೀಕ್ಷಣೆ ಇತ್ಯಾದಿ ಹವ್ಯಾಸಗಳಲ್ಲಿ ತೊಡಗಿಕೊಂಡೆ.
ವರ್ಷಗಳುರುಳಿದವು. ನನ್ನ ಮಗಳು ಅಳಿಯ ವಿದೇಶಕ್ಕೆ ಹೋಗುವುದೂ, ಬರುವುದೂ ಹೆಚ್ಚಾಯಿತು. ಆಫೀಸಿನ ಕಾರುಬಾರೂ ಹೆಚ್ಚಾಯಿತು. ಈ ಅಂತರದಲ್ಲಿ ಮಗಳ ಕಡೆಯಿಂದ ಯಾವುದೇ ವಿಶೇಷ ಸುದ್ಧಿಯೂ ತಿಳಿಯಲಿಲ್ಲ. ಮಗನ ಮಕ್ಕಳ ಒಡನಾಟವಂತೂ ಇನ್ನು ದೂರವೇ ಉಳಿಯಿತು. ನನ್ನ ಮಗಳೂ ಮದುವೆಯಾಗಿ ಹತ್ತಿರ ಹತ್ತಿರ ಏಳೆಂಟು ವರ್ಷಗಳೇ ಆಗಿದ್ದವು. ಅಭವಿಲ್ಲ ಶುಭವಿಲ್ಲ, ಅವಳನ್ನೇ ಕೇಳಿ ಬಿಡೋಣವೆಂದು ಒಂದುದಿನ ಅವಳೊಬ್ಬಳೇ ಇದ್ದಾಗ ಪ್ರಶ್ನಿಸಿದೆ. ನಾನು ಕೇಳಿದ ಪ್ರಶ್ನೆಗೆ ತಕ್ಷಣ ಉತ್ತರ ಹೇಳದೇ ಸ್ವಲ್ಪ ಹೊತ್ತು ಬಿಟ್ಟು ‘ಅಮ್ಮಾ ನಾನೀಗ ಹೇಳುವ ವಿಷಯ ನಿನಗೆ ಆಘಾತವನ್ನುಂಟು ಮಾಡಬಹುದು. ಆದರೇನು ಮಾಡಲಿ. ನೀನು ಕೇಳುತ್ತಿದ್ದೀಯಲ್ಲಾಂತ ಹೇಳುತ್ತಿದ್ದೇನೆ. ಇದುವರೆಗೂ ನನ್ನಲ್ಲೇ ಮುಚ್ಚಿಟ್ಟ ಗುಟ್ಟು ಬಯಲು ಮಾಡಬೇಕಾಗಿದೆ. ಅದು ಅನಿವಾರ್ಯವೂ ಹೌದು’ ಎಂದಳು. ನನಗೋ ಅವಳ ಮಾತನ್ನು ಕೇಳುತ್ತಿದ್ದರೆ ಕ್ಷಣಕ್ಷಣಕ್ಕೂ ರಕ್ತದೊತ್ತಡ ಏರಿದಂತೆ ಅನುಭವವಾಗುತ್ತಿತ್ತು. ಇದ್ದುದರಲ್ಲಿ ಧೈರ್ಯ ತಂದುಕೊಂಡು ‘ಅದೇನು ಗುಟ್ಟು ಮಾಧವಿ? ಏನಾದರೂ ಆರೋಗ್ಯದ ಸಮಸ್ಯೆಯೇ? ನಿನಗಾ ಅಥವಾ ಅಳಿಯಂದಿರಿಗಾ? ಈಗೇನು ವಿಜ್ಞಾನ ಒಂದಲ್ಲ ಒಂದು ಪರಿಹಾರ ಕೊಡುತ್ತದೆ’ ಎಂದೆ.
‘ಅಂಥದ್ದೇನೂ ಇಲ್ಲಮ್ಮಾ, ನಮ್ಮಿಬ್ಬರಲ್ಲಿ ಯಾರಿಗೂ ಪ್ರಾಬ್ಲಮ್ ಇಲ್ಲ. ಮತ್ತೆ ನನ್ನ ಗಂಡ ನನ್ನನ್ನು ಕೈಹಿಡಿಯುವಾಗಲೇ ನಮಗೆ ಮಕ್ಕಳ ಹಂಬಲವನ್ನು ನೀನು ಇಟ್ಟುಕೊಳ್ಳಬಾರದೆಂಬ ಕರಾರು ಹಾಕಿಯೇ ಒಪ್ಪಿದ್ದ. ಆಗ ನಾನು ಅಯ್ಯೋ ಅಷ್ಟೇ ತಾನೇ, ಶುರುವಿನಲ್ಲಿ ಎಲ್ಲರೂ ಹಾಗೇ, ಅದರಲ್ಲೂ ಆತ ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡು ಯಾರದ್ದೋ ಆಶ್ರಯದಲ್ಲಿ ಎಡಬಲವಿಲ್ಲದೆ ಒಂಟಿಯಾಗಿ ಬೆಳೆದಿದ್ದಾನೆ. ನಮಗೇನಾದರೂ ಮಕ್ಕಳಾಗಿಬಿಟ್ಟರೆ ಆಗ ಹಿರಿಯರಂತೆ ನಾವೂ ದೇವರ ಪಾದ ಸೇರಿಬಿಡುತ್ತೇವೋ ಮಕ್ಕಳು ಅನಾಥರಾಗಿಬಿಡುತ್ತಾರೆ ಎಂಬ ವಿಚಿತ್ರ ಕಲ್ಪನೆ ಅವನನ್ನು ಕಾಡಿರಬಹುದು. ನಿಧಾನವಾಗಿ ಅರ್ಥಮಾಡಿಸಿದರಾಯಿತು ಎಂದು ಕರಾರಿಗೆ ಒಪ್ಪಿಕೊಂಡೆ. ವರ್ಷಗಳು ಕಳೆದಂತೆ ಆತನೇ ಆಸೆಪಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಈಗ ಅವನ ಮಾತುಗಳು ಬದಲಾವಣೆಯಾಗದಂಥಹವು. ಅವನನ್ನು ತಿದ್ದಲು ಮಾಡಿದ ನನ್ನ ಪ್ರಯತ್ನಗಳೆಲ್ಲವೂ ವ್ಯರ್ಥವಾದವು. ಇನ್ನು ಈ ವಿಷಯವನ್ನೇ ಪಟ್ಟು ಹಿಡಿದರೆ ಘೋರ ಪರಿಣಾಮಕ್ಕೆ ಅವಕಾಶ ಕೊಟ್ಟು ಅದು ವಿಚ್ಛೇದನಕ್ಕೂ ಕಾರಣವಾಗಬಹುದೆಂದು ಹೇಳಿಬಿಟ್ಟರು. ಅವನ ಈ ನಿರ್ಧಾರ ನನ್ನನ್ನು ಪಾತಾಳಕ್ಕೆ ದೂಡಿಬಿಟ್ಟಿತು. ಅವನನ್ನು ಬಿಟ್ಟು ನನಗೆ ಬದುಕುವ ಶಕ್ತಿಯಿಲ್ಲ. ಮಕ್ಕಳು ಬೇಡ ಎನ್ನುವ ಒಂದು ಕಾರಣ ಬಿಟ್ಟರೆ ಉಳಿದೆಲ್ಲ ವಿಷಯಗಳಲ್ಲಿ ಆತ ಬಹಳ ಒಳ್ಳೆಯ ಪತಿ, ನನ್ನ ಹಿತೈಷಿ, ಪ್ರಪಂಚದಲ್ಲಿ ಎಷ್ಟೋ ಜನರು ಮಕ್ಕಳಿಲ್ಲದವರಿದ್ದಾರೆ. ಅವರಲ್ಲಿ ನಾವೂ ಒಬ್ಬರೆಂದು ಅಂದುಕೊಂಡಿದ್ದೇವೆ. ನಮ್ಮ ಕೆಲಸ ಕಾರ್ಯಗಳಲ್ಲಿ ಮುಳುಗಿಹೋಗಿದ್ದೇವೆ. ನೀನೂ ಈಬಗ್ಗೆ ಹೆಚ್ಚು ತಲೆಗೆ ಹಚ್ಚಿಕೊಳ್ಳದೆ ಇರುವುದು ಉತ್ತಮ. ಹೇಗಿದ್ದರೂ ಅಣ್ಣನಿಗೆ ಮೂರು ಜನ ಮಕ್ಕಳಿದ್ದಾರೆ. ನಿನಗೂ ಮೊಮ್ಮಕ್ಕಳಿಲ್ಲ ಎಂಬ ಭಾವನೆ ಬಾರದು. ಮುಂದೆ ಕೂಡ ಈ ವಿಚಾರವಾಗಿ ಚರ್ಚೆ ಮಾಡದಿರು. ಇದು ನನ್ನ ಕೋರಿಕೆ ಅಮ್ಮ ‘ಎಂದು ನನ್ನನ್ನಪ್ಪಿಕೊಂಡು ಅತ್ತು ತನ್ನ ದುಗುಡವನ್ನೆಲ್ಲ ಹೊರಹಾಕಿದಳು. ತನ್ನ ಮನೆಗೆ ಹೊರಟುಹೋದಳು.
ನನಗೆ ನನ್ನ ಮಗಳ ಮಾತುಗಳನ್ನು ಕೇಳಿ ನೂರಾರು ಭರ್ಜಿಗಳು ಒಮ್ಮಲೇ ನನ್ನ ದೇಹದೊಳಕ್ಕೆ ಚುಚ್ಚಿ ಇರಿದಷ್ಟು ನೋವಾಯಿತು. ಹೂ ಹೋದ ಜನ್ಮದಲ್ಲಿ ನಾನು ಯಾರು ಯಾರನ್ನು ಹೇಗೆ ಗೋಳಾಡಿಸಿದ್ದೇನೋ ಅದೆಲ್ಲ ಈ ಜನ್ಮದಲ್ಲಿ ಬಡ್ಡಿಸಮೇತ ವಸೂಲಿಯಾಗುತ್ತಿದೆ. ಹಿಂದೆ ಮಾಡಿದ್ದು ಈಗ, ಈಗ ಮಾಡುವುದು ಮುಂದಕ್ಕೆ ಎಂಬ ತರ್ಕ ಯಾರು ಮಾಡಿದ್ದಾರೋ ತಿಳಿಯದು. ನನ್ನಪ್ಪ ಕೆಲವೊಮ್ಮೆ ತುಂಬ ಬೇಸರವಾದಾಗ ಹೇಳಿಕೊಳ್ಳುತ್ತಿದ್ದ ಮಾತುಗಳು ನೆನಪಾದವು. ‘ಯಾರೇನ ಮಾಡುವರು, ಯಾರಿಂದಲೇನಹುದು, ಪೂರ್ವ ಜನ್ಮದ ಕರ್ಮ ಬಿನ್ನ ಬಿಡದು’ ಎಂದು. ಮಗನ ಸಂಸಾರದಲ್ಲಿ ಎಲ್ಲವೂ ಇದೆ ಅವರೊಡನೆ ಇದ್ದು ಆನಂದವನ್ನು ಅನುಭವಿಸುವ ಯೋಗ ನನಗಿಲ್ಲ. ಮಗಳ ಸಂಸಾರದಲ್ಲಿ ಅಳಿಯನಿಗೆ ಕುಟುಂಬ ಬೆಳವಣಿಗೆ ಜವಾಬ್ದಾರಿಯೇ ಬೇಡವಾಗಿದೆ. ಅತ್ತದರಿ, ಇತ್ತ ಪುಲಿ ಇನ್ನು ಹೋಗುವುದೆಲ್ಲಿಗೆ? ಎಂದುಕೊಂಡೆ.
ಹೌದು ಹೋಗುವುದೆಲ್ಲಿಗೆ? ಮನದಲ್ಲಿ ಅದರ ಬಗ್ಗೆ ಚಿಂತನ ಮಂಥನ ನಡೆಸಿದೆ. ನಿರ್ವಹಿಸಬೇಕಾದ ಜವಾಬ್ದಾರಿಗಳನ್ನೆಲ್ಲ ಮಾಡಿ ಮುಗಿಸಿದ್ದಾಗಿದೆ. ಹೊಸ ಜವಾಬ್ದಾರಿಗಳ್ಯಾವುವೂ ಹುಟ್ಟಿಕೊಂಡಿಲ್ಲ. ಸದ್ಯಕ್ಕೆ ನಮ್ಮಿಬ್ಬರ ಆರೋಗ್ಯವೂ ಚೆನ್ನಾಗಿದೆ. ಆದ್ದರಿಂದ ಈಗ ನನ್ನ ಬಹುದಿನದ ಈಡೇರದ ಕನಸನ್ನು ಈಗ ಸಾಕಾರ ಮಾಡಿಕೊಂಡರೆ ಹೇಗೆ? ಈ ಜಂಝಾಟದಿಂದ ಸ್ವಲ್ಪ ಕಾಲ ಬಿಡುಗಡೆ ಸಿಗುವುದೆಂದರೆ ಅದು ಹೊರ ಪ್ರವಾಸ ಹೋಗುವುದರಿಂದ ಮಾತ್ರ ಎಂದೆನ್ನಿಸಿತು. ಹುಟ್ಟಿದಾಗಿನಿಂದ ಮದುವೆಯಾಗುವವರೆಗೂ ಮೈಸೂರಿನ ಸುತ್ತಮುತ್ತ, ನಂತರವೂ ಅದೇ ಜಿಲ್ಲೆಯಲ್ಲೇ ವಾಸ್ತವ್ಯ ಮುಂದುವರಿದಿತ್ತು. ನನ್ನವರ ಸೋದರರು, ಸೋದರಿ ಬರೋಡ, ಚೆನ್ನೈ, ಮಹಾರಾಷ್ಟ್ರದಲ್ಲಿನ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದು ಹಲವಾರು ಬಾರಿ ಆಹ್ವಾನಿಸಿದ್ದರೂ ನನ್ನವರು ಒಮ್ಮೆಯೂ ನಂಜನಗೂಡು, ಮೈಸೂರು, ಮಂಡ್ಯ ಬಿಟ್ಟು ಕದಲಿರಲಿಲ್ಲ.
ನಾನೊಬ್ಬಳೇ ಅವರನ್ನು ಬಿಟ್ಟು ಹೋಗಲು ಮನಸ್ಸು ಮಾಡಿರಲಿಲ್ಲ. ಕಾಲೇಜಿನ ವರ್ಗಾವಣೆ ಆದಾಗ ಹೊಸ ಜಾಗಗಳಿಗೆ ಹೋಗಬೇಕಾಗುತ್ತಿತ್ತು. ನನ್ನ ಪತಿ ಅದೇನು ಶಿಫಾರಸ್ಸು ಮಾಡಿಸುತ್ತಿದ್ದರೋ ಮೈಸೂರು, ಮಂಡ್ಯ ಬಿಟ್ಟು ಬೇರೆ ಜಾಗಗಳಿಗೆ ವರ್ಗಾವಣೆಯೇ ಆಗಲಿಲ್ಲ. ಹೀಗಾಗಿ ಯಾವುದೇ ಕಾರಣದಿಂದ ಇಲ್ಲಿಂದ ನಾನು ಹೋಗಲಾಗಲೇ ಇಲ್ಲ. ನಮ್ಮ ಮಕ್ಕಳ ಮದುವೆಯ ಕಾಲದಲ್ಲಾದರೂ ಬೇರೆ ಸ್ಥಳವನ್ನು ನೋಡಬಹುದೆಂದರೆ ಅವರಿಗೂ ನಂಜನಗೂಡಿನ ಸನ್ನಿಧಾನದಲ್ಲೇ ಕಲ್ಯಾಣ. ನಾವೇ ಅದನ್ನು ಸರಳ ವಿವಾಹವೆಂದು ಹಾಕಿಕೊಟ್ಟ ಮಾದರಿಯಾಗಿತ್ತು. ಈಗ ನನ್ನವರು ಸರ್ವೀಸಿನಿಂದ ನಿವೃತ್ತರಾಗಿದ್ದಾರೆ, ಆದರೆ ಕೆಲವು ಖಾಸಗಿ ಕಾಲೇಜುಗಳಿಗೆ ಬಿಡುವಿಲ್ಲದ ರೀತಿಯಲ್ಲಿ ತಗಲು ಹಾಕಿಕೊಂಡಿದ್ದಾರೆ. ಜೊತೆಗೆ ಮೊದಲಿನಿಂದಲೂ ನಡೆಸಿದ್ದ ಲೆಕ್ಕಪತ್ರದ ವ್ಯವಹಾರದಿಂದ ಮುಕ್ತಿ ಪಡೆದಿಲ್ಲ. ನನಗಂತೂ ಗುಂಡಿಯೊಳಕ್ಕೆ ಹೋಗುವವರೆಗೂ ಹೀಗೇ ಗಳಿಸುವುದನ್ನು ಮುಂದುವರೆಸುತ್ತಾರೇನೋ ಎಂದೆನ್ನಿಸುತ್ತಿತ್ತು. ಇವರನ್ನು ನೆಚ್ಚಿಕೊಂಡರೆ ಆಗೋಲ್ಲ. ಅಲ್ಲದೆ ಅವರಿಗೆ ಪ್ರವಾಸವೆಂದರೆ ಅಲರ್ಜಿಯಂತೆ. ಪದೇಪದೇ ನಾನು ಅದೇ ವಿಷಯದ ಬಗ್ಗೆ ಚರ್ಚಿಸಿದಾಗ ‘ನನ್ನನ್ನು ಒತ್ತಾಯಿಸಬೇಡ. ಸುಕನ್ಯಾ ನೀನು ಬೇಕಾದರೆ ಹೋಗಿ ಬಾ, ನಾನೇನೂ ಅಡ್ಡಿಪಡಿಸುವುದಿಲ್ಲ’ ಎಂದುಬಿಟ್ಟರು.
ನನ್ನ ಗೆಳತಿ ‘ಸಂಧ್ಯಾ’ಳ ಹತ್ತಿರ ಈ ವಿಷಯ ಚರ್ಚಿಸಬೇಕು. ಅವಳ ಮನೆಯವರು, ಮಗ ಟೂರ್‌ಗಳನ್ನು ಏರ್ಪಾಡುಮಾಡುವ ಏಜೆನ್ಸಿಯನ್ನೇ ನಡೆಸುತ್ತಿದ್ದಾರೆ. ಅವಳ ಗಂಡ ಜಾವಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಪಾಪ, ಅದು ಮುಚ್ಚಿದ ಮೇಲೆ ಅಪ್ಪ ಮಕ್ಕಳು ಮಗ ನಡೆಸುತ್ತಿದ್ದ ಚಿಲ್ಲರೆ ಅಂಗಡಿಯನ್ನೇ ಟ್ರಾವೆಲಿಂಗ್ ಏಜೆನ್ಸಿಯ ಆಫೀಸು ಮಾಡಿಕೊಂಡರು. ಅವರಿಗೆ ಅದೇ ಆಧಾರಸ್ಥಂಬವಾಗಿದೆ. ಜೊತೆಗೆ ಒಂದು ಹಣಕಾಸು ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಎರಡೂ ಅವರ ಕೈ ಹಿಡಿದಿವೆ, ಅವಳಿಗೂ ನನ್ನಂತೆಯೇ ಒಂದು ಗಂಡು ಮತ್ತು ಒಂದು ಹೆಣ್ಣು. ಮಗಳು ಬಿ.ಎಸ್.ಸಿ., ಬಿ.ಎಡ್., ಮಾಡಿ ಹೈಸ್ಕೂಲೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಅಳಿಯ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದಾನೆ. ಇಬ್ಬರು ಮಕ್ಕಳೂ ಅವಳ ಕಣ್ಮುಂದೆಯೇ ಇದ್ದಾರೆ. ನನ್ನ ಸಹಪಾಠಿಯಾಗಿದ್ದಾಗಿನಿಂದ ಗೆಳತಿಯಾಗಿದ್ದ ಸಂಧ್ಯಾ ಇವತ್ತಿಗೂ ಅದೇ ಸ್ನೇಹವನ್ನು ಮುಂದುವರಿಸಿಕೊಂಡು ಬಂದಿದ್ದಾಳೆ. ಒಳಗೊಂದು ಹೊರಗೊಂದಿಲ್ಲದ ನೇರ ಸ್ವಭಾವದವಳು. ನನ್ನ ಹಿತೈಷಿ, ಮಾರ್ಗದರ್ಶಿ, ಬಂಧುವಿನಂತೆ ಎಂದು ಹೇಳಬಹುದು. ಆದರೆ ನಾನು ಮಾತ್ರ ನನ್ನ ಸಂಸಾರದೊಳಗಿನ ಗುಟ್ಟನ್ನು ಯಾವತ್ತೂ ಅವಳ ಮುಂದೆ ಬಿಟ್ಟುಕೊಟ್ಟವಳಲ್ಲ. ಕಾರಣ ನನಗೆ ಅಪ್ಪ ಅಮ್ಮನಿಂದ ದತ್ತವಾಗಿದ್ದ ಸಹನೆ, ಮತ್ತು ವಾಸ್ತವಿಕ ಪ್ರಜ್ಞೆ . ಏನೇ ಬಂದರೂ ಹೊರಗಿನವರೆದುರಿಗೆ ತೋರ್ಪಡಿಸಿಕೊಂಡು ತಮ್ಮ ಮಕ್ಕಳ ಬೆಲೆಯನ್ನು ಕಳೆಯ ಬಾರದೆಂಬ ವಿವೇಚನೆ. ನಂತರ ನನಗೆ ದೊರಕಿದ್ದು ನನ್ನತ್ತೆಯವರ ತಿಳುವಳಿಕೆ, ನಿಸ್ವಾರ್ಥತೆ, ರೀತಿರಿವಾಜುಗಳು, ವಿಶಾಲ ಮನೋಭಾವ, ಇವೇ ದಾರಿದೀಪವಾಗಿದ್ದವು. ಏನೆಲ್ಲ ಮಾತನಾಡಿದರೂ ನನ್ನ ಸುತ್ತ ಅಷ್ಟೇ. ಏನೇ ಆಗಿದ್ದರೂ ನನ್ನ ಒಂಟಿತನದ ಬವಣೆಯನ್ನು ನಿಭಾಯಿಸಿಕೊಳ್ಳಲು ಹಲವು ಸಂಘಃಸಂಸ್ಥೆಗಳಿಗೆ ನನ್ನನ್ನು ಸೇರಿಸುವ ಮೂಲಕ ನಿವಾರಿಸಿದ್ದಳು ಸಂಧ್ಯಾ. ಹಾಗೇ ಜೊತೆಯಲ್ಲೇ ಹೆಜ್ಜೆ ಹಾಕುತ್ತಾ ಬಂದಿದ್ದಾಳೆ.
ಹೂಂ ಇರಲಿ, ಅವಳ ಹತ್ತಿರ ಮಾತನಾಡುವುದಕ್ಕೂ ಮೊದಲು ನನ್ನ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸೋಣವೆಂದು ನನ್ನ ಬ್ಯಾಂಕ್ ಪಾಸ್‌ಬುಕ್ ಮತ್ತು ಡಿಪಾಸಿಟ್ ಬಾಂಡುಗಳನ್ನು ತೆಗೆದು ಪರಿಶೀಲಿಸಿದೆ. ಹೋದ ವರ್ಷ ಅಪ್ಪ ದೈವಾಧೀನರಾದಾಗ ಅವರ ಮಾತಿನಂತೆ ಅವರ ಕಾರ್ಯಗಳನ್ನೆಲ್ಲ ಮುಗಿಸಿ ಮಿಕ್ಕಿದ್ದ ಹಣವನ್ನು ಇಬ್ಬರು ಹೆಣ್ಣುಮಕ್ಕಳಿಗೆ ಸಮನಾಗಿ ಹಂಚಿಬಿಡಿ ಎಂದಿದ್ದರು. ಅದರಂತೆ ನನ್ನ ಎರಡನೆಯ ಅಣ್ಣ ನನಗೆ ಮತ್ತು ಅಕ್ಕನಿಗೆ ಸಮಭಾಗವಾಗಿ ಹಣವನ್ನು ಕೊಟ್ಟಿದ್ದರು. ಆಗ ನನ್ನ ಭಾವ ‘ನಿನ್ನಕ್ಕನು ಮಾವನವರಿಗೆ ಏನೂ ಸೇವೆ ಮಾಡಲಾಗಲಿಲ್ಲ. ನೀನಾದರೋ ಇಲ್ಲೇ ಇದ್ದು ಅವರ ಯೋಗಕ್ಷೇಮ ನೋಡಿಕೊಂಡು ಕೊನೆಯವರೆಗೆ ಸಂಭಾಳಿಸಿದ್ದೀಯೆ’ ಎಂದು ಹೇಳಿ ಬೇಡವೆಂದರೂ ಕೇಳದೆ ಅಕ್ಕನ ಭಾಗದಲ್ಲಿ ಅರ್ಧವನ್ನು ನನಗೆ, ಮಿಕ್ಕ ಅರ್ಧವನ್ನು ನನ್ನಣ್ಣನ ಮಕ್ಕಳಿಗೆ ಹಂಚಿಬಿಟ್ಟರು. ನಾನು ಭಾವ ನೀವು ಅಕ್ಕನನ್ನು ಒಂದು ಮಾತು ಕೇಳದೇ ಹೀಗೆ ಎಂದಿದ್ದಕ್ಕೆ ಇಲ್ಲ ಸುಕನ್ಯಾ ಊರಿನಿಂದ ಬರುವಾಗಲೇ ಇದರ ಬಗ್ಗೆ ತೀರ್ಮಾನ ಮಾಡಿಕೊಂಡು ಬಂದಿದ್ದೆವು ಎಂದರು. ಅಕ್ಕನು ‘ಕನ್ಯಾ ಈಗ ನಮ್ಮತ್ತೆಯವರು ಇಲ್ಲವೆಂಬುದನ್ನು ಮರೆತೆಯಾ. ಆಕ್ಷೇಪಣೆ ಮಾಡುವವರ್‍ಯಾರೂ ಇಲ್ಲ. ಸುಮ್ಮನೆ ಅವರು ಕೊಟ್ಟಿದ್ದನ್ನು ತೆಗೆದುಕೋ’ ಎಂದಳು.
ಹಾ ! ಅಂತೂ ನನ್ನ ಭಾಗಕ್ಕೆ ಬಂದಿದ್ದ ಹಣ ಮತ್ತು ಅದಕ್ಕೆ ಇದುವರೆಗೆ ಬಂದಿದ್ದ ಬಡ್ಡಿ ಸೇರಿ ಸುಮಾರು ಹದಿನೈದು ಲಕ್ಷಕ್ಕೂ ಮಿಗಿಲಾಗಿತ್ತು. ಪರವಾಗಿಲ್ಲ ನನ್ನ ಪ್ರವಾಸಕ್ಕೆ ಸಾಕಾಗಬಹುದು. ತರುವುದಿಲ್ಲ ಕೊಡುವುದಿಲ್ಲ, ಬರೀ ಹೋಗಿ ಬರುವುದು ತಾನೇ ಎಂದುಕೊಂಡೆ. ಹಿಂದೆಯೇ ಮತ್ತೊಂದು ಯೋಚನೆಯೂ ಬಂತು. ಮಗನ ಮನೆಗೆಂದು ಈ ಹಿಂದೆ ಹೊರಟಾಗ ಮಗಳು ಹೇಳಿದ ಮಾತುಗಳು ನೆನಪಿಗೆ ಬಂದವು. ಒಂದು ಮಾತು ಕೇಳಿಯೇ ಬಿಡೋಣವೆಂದು ‘ಮಾಧವಿ, ನೀನು ಆದಿಗೇ ಎಲ್ಲವನ್ನೂ ಖರ್ಚುಮಾಡಿಬಿಟ್ಟರೆ ನನಗೇನು ಕೊಡುತ್ತೀ ಎಂದು ಕೇಳಿದ್ದೆಯಲ್ಲಾ. ಮೂರು ಸಾರಿ ವಿದೇಶಕ್ಕೆ ಹೋಗಿ ಬಂದೆ. ಅದರಲ್ಲಿ ನಾನು ಎರಡು ಸಾರಿ ತಾತ ಕೊಟ್ಟಿದ್ದ ಹಣವನ್ನು ಖರ್ಚುಮಾಡಿದ್ದೇನೆ. ಅದನ್ನು ಬರೆದಿಟ್ಟಿದ್ದೇನೆ. ಅದರಷ್ಟೇ ಹಣವನ್ನು ನಿನಗೂ ಕೊಡಬಲ್ಲೆ ತಗೋ’ ಎಂದೆ.. ಆಗ ‘ಅಮ್ಮಾ ಸಾರಿ, ಆಗ ಕೇಳಿದ್ದೆ ಈಗ ನನಗೆ ನಿನ್ನ ಹತ್ತಿರ ತೆಗೆದುಕೊಳ್ಳುವ ಮನಸ್ಸಿಲ್ಲ. ನನಗೇಕೆ ಬೇಕು? ಮಕ್ಕಳೇ ಮರಿಯೇ, ಯಾರಿಗಿಡಬೇಕು? ನಿನಗೇನಾದರೂ ಬೇಕಿದ್ದರೆ ಕೇಳು ನಾನೇ ಕೊಡುತ್ತೇನೆ’ ಎಂದು ನಿರಾಕರಿಸಿಬಿಟ್ಟಳು.
ಅವಳು ಹೇಳಿದ ರೀತಿ ನನ್ನ ಕರುಳನ್ನು ಇರಿದಂತಾಯಿತು. ಹೇಗಿದ್ದವಳು ಹೇಗಾಗಿದ್ದಾಳೆ. ಬಿಡುಬೀಸಾಗಿ ಓಡಾಡಿಕೊಂಡು ಹಕ್ಕಿಯಂತೆ ಹಾರಾಡುತ್ತಾ ನನ್ನ ಎದೆ ಬಡಿತವನ್ನು ಹೆಚ್ಚಿಸುತ್ತಿದ್ದ ಮಗಳೇ ಇವಳು? ಅವರಿಬ್ಬರು ತಾವೇ ಹಾಕಿಕೊಂಡ ಬೇಡಿ. ನಾವೇ ಒಂದುವೇಳೆ ಹುಡುಕಿ ಮಾಡಿದ್ದರೂ ಹೀಗೇ ಆಗಿದ್ದರೆ. ಅದೇನೋ ಹೇಳ್ತಾರಲ್ಲಾ ‘ಮ್ಯಾರೇಜಸ್ ಆರ್ ಮೇಡ್ ಇನ್ ಹೆವೆನ್’ ಅಂತ, ಇದೊಂದು ವಿಚಿತ್ರವೆಂದುಕೊಂಡೆ. ಇನ್ನು ನನ್ನವರನ್ನು ಒಂದು ಮಾತು ಕೇಳೋಣವೆಂದು ಅವರನ್ನೂ ಕೇಳಿನೋಡಿದೆ. ಅವರು ‘ಸುಕನ್ಯಾ ಅದು ನಿನ್ನ ಭಾಗಕ್ಕೆ ಬಂದಿರುವ ಹಣ. ಅದರ ಮೇಲೆ ನನಗ್ಯಾವ ಅಧಿಕಾರವೂ ಇಲ್ಲ. ನನಗೆ ಬೇಡವೂ ಬೇಡ. ನಿನಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿಕೋ’ ಎಂದುಬಿಟ್ಟರು. ನಾನು ಮನಸ್ಸಿನಲ್ಲಿ ಹಾಗಾದರೆ ಮಗನ ಮನೆಗೆ ಮತ್ತೆ ಮತ್ತೆ ಹೋಗುವಾಗ ನೀವೇಕೆ ಖರ್ಚಿನ ಬಗ್ಗೆ ಕೇಳಲಿಲ್ಲ. ಮಗನಿಂದಲೂ ಈ ಬಗ್ಗೆ ಚಕಾರವಿಲ್ಲ ಅಂದುಕೊಂಡೆ. ಹಿಂದೆಯೇ ಬಹಳ ಲೆಕ್ಕಾಚಾರದ ಮನುಷ್ಯ. ಯಾವಯಾವುದಕ್ಕೆ ಇನ್ವೆಸ್ಟ್ ಮಾಡಿದ್ದಾರೋ ಬಲ್ಲವರ್‍ಯಾರು. ಇನ್ನು ಈಗ ಮಗನ ಕಡೆಯಲ್ಲಿನ ಅವಸ್ಥೆ ಏನಾಗಿದೆಯೋ? ಅದರ ಬಗ್ಗೆ ಈಗ ಚಿಂತೆಯೇಕೆ. ಈಗಂತೂ ನನ್ನ ಎಲ್ಲ ಅನುಮಾನಗಳೂ ಪರಿಹಾರವಾಗಿ ಪ್ರವಾಸಕ್ಕೆ ಅಣಿಮಾಡಿಕೊಳ್ಳಲು ರಹದಾರಿ ಸಿಕ್ಕಂತಾಯಿತು. ಹೇಗಿದ್ದರೂ ಒಂದು ಡಿಪಾಸಿಟ್ ಹದಿನೈದು ದಿವಸದಲ್ಲಿ ಮೆಚೂರ್ ಆಗುವುದರಲ್ಲಿದೆ. ಅಷ್ಟರಲ್ಲಿ ಗೆಳತಿ ಸಂಧ್ಯಾಳ ಬಳಿ ಈಸಾರಿ ಯಾವಕಡೆಗೆ ಪ್ರವಾಸಕ್ಕೆ ನಿಗದಿ ಮಾಡುತ್ತಾರೆ? ಎಷ್ಟು ದಿನ? ಖರ್ಚುವೆಚ್ಚಗಳ ಬಗ್ಗೆ ವಿಚಾರಿಸಬೇಕು ಎಂದು ಗೆಳತಿ ಸಂಧ್ಯಾಳಿಗೆ ಪೋನ್ ಮಾಡಿದೆ.
ನಾನು ಕರೆ ಮಾಡಿದ ನಂಬರಿನ ಆಕಡೆಯಿಂದ ಬಂದ ಹಲೋ ಎಂಬ ಸ್ವರ ಸಂಧ್ಯಾಳದ್ದಲ್ಲ ಎಂಬ ಅನುಮಾನ ಬಂತು. ನಂಬರ್ ನೋಡಿದೆ ಸರಿಯಾಗಿದೆ ಮತ್ತೆ ಯಾರು? ಎಂದುಕೊಳ್ಳುವುದರಲ್ಲಿ ‘ಹಲೋ ಆಂಟೀ, ಏಕೆ ಮಾತನಾಡದೆ ಸುಮ್ಮನಾದಿರಿ. ನಾನು ರಜನಿ, ನಿಮ್ಮ ಗೆಳತಿ ಸಂಧ್ಯಾರವರ ಸೊಸೆ’ ಎಂದಳು. ‘ಚೆನ್ನಾಗಿದ್ದೀಯಾ ಅಮ್ಮ, ಎಲ್ಲಿ ನನ್ನ ಫ್ರೆಂಡ್?’ ಎಂದು ಕೇಳಿದೆ. ‘ಟೆನ್ಷನ್ ಮಾಡಿಕೊಳ್ಳಬೇಡಿ ಆಂಟಿ ನಿಮ್ಮ ಫ್ರೆಂಡ್‌ಗೇನೂ ಆಗಿಲ್ಲ. ಗುಂಡಕಲ್ಲಿನ್ಹಾಗೆ ಇದ್ದಾರೆ. ಮಗಳ ಮನೆಗೆ ಮೆಹರ್‌ಬಾನಿ ಮಾಡೋಕೆ ಹೋಗಿದ್ದಾರೆ. ಹೋಗೋ ಗಡಿಬಿಡಿಯಲ್ಲಿ ಅವರ ಮೊಬೈಲ್ ಇಲ್ಲಿಯೇ ಬಿಟ್ಟು ಹೋಗಿದ್ದಾರಷ್ಟೇ. ಅಲ್ಲಾ ನೀವೇ ಹೇಳಿ ಆಂಟಿ, ನಮ್ಮ ಅತ್ತೆ, ಮಾವ ಇರೋದೆ ಇಲ್ಲಿ. ಅವರ ಯೋಗಕ್ಷೇಮ ನಮ್ಮದೇ. ಹಾಗಿದ್ದೂ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇಡುತ್ತಾರೆ. ಅದೇ ನೀವು ನೋಡಿ ಮಗಳಿಗಿನ್ನ ಮಗ, ಸೊಸೆಯನ್ನು ಕಂಡರೆ ಎಷ್ಟು ಪ್ರೀತಿ. ಅವರಿಗೆ ಬಾಣಂತನವನ್ನು ಇಲ್ಲಿಂದ ಹೋಗಿ ಮಾಡಿ ಬಂದಿದ್ದೀರಿ. ಮಗ ಪರೀಕ್ಷೆ ಕಟ್ಟಿದ್ದಾನೆ ಮಕ್ಕಳನ್ನೂ ಸುಧಾರಿಸಿಕೊಂಡು ಓದಲು ತೊಂದರೆಯಾಗಬಹುದೆಂದು ತಿಳಿದ ತಕ್ಷಣ ಸಹಾಯ ಮಾಡುವುದಕ್ಕಾಗಿ ಹೋಗಿಬಂದಿರಿ. ನನ್ನ ಮಕ್ಕಳು ಅಜ್ಜೀ ಅಜ್ಜೀ ಅಂತ ಜೀವ ಬಿಡ್ತಾರೆ ಅವುಗಳ ಬಗ್ಗೆ ಅವರಿಗೆ ಅಕರಾಸ್ತೆಯೇ ಇಲ್ಲ. ಅದೇ ಮಗಳ ಮಕ್ಕಳಿಗೆ ಒಂದು ಚೂರೇನಾದರೂ ಆದರೆ ಬಿಟ್ಟದ್ದು ಬಿಟ್ಟಂಗೆ ನಿಂತ ಹೆಜ್ಜೇಲಿ ಓಡಿಬಿಡ್ತಾರೆ. ನನ್ನ ಕರ್ಮ ಅವರ ಮಗಳೂ ಇದೇ ಊರಿನಲ್ಲಿರೋದು’ ಎಂದೆಲ್ಲ ಸ್ವಾತಿ ಮಳೆ ಹೊಯ್ದಹಾಗೆ ಒಂದೇಸಮನೆ ಬಡಬಡಿಸಿದಳು.
ಆನಂತರ ‘ಸಾರಿ ಆಂಟಿ, ನೀವು ತುಂಬ ಬೇಕಾದವರಾದ್ದರಿಂದ ನನ್ನ ಹೊಟ್ಟೆ ಸಂಕಟ ನಿಮ್ಮೊಡನೆ ತೋಡಿಕೊಂಡೆ. ಇದನ್ನೆಲ್ಲ ನಮ್ಮ ಅತ್ತೆಯವರ ಮುಂದೆ ಹೇಳಬೇಡಿ. ಹೂಂ ಈಗ ನೀವು ಮಾಡಿದ್ದ ಮ್ಯಾಟರ್ ಏನೂಂತ. ನನಗೆ ಹೇಳಬಹುದಾಗಿದ್ದರೆ ಹೇಳಿ.’ ಎಂದಳು.’ ಅಂಥಹ ಪರ್‍ಸನಲ್ ಏನಿಲ್ಲ ರಂಜನಿ, ಟ್ಯೂರ್ ಹೋಗೋಣಾಂತ ಡಿಸೈಡ್ ಮಾಡಿದ್ದೇನೆ. ಅದರ ಬಗ್ಗೆ ಅವಳ ಹತ್ತಿರ ಮಾತನಾಡೋಣಾಂತ ಫೊನ್ ಮಾಡಿದ್ದೆ. ಅವಳು ಬಂದಮೇಲೆ ನನಗೆ ಫೋನ್ ಮಾಡ್ಲಿಕ್ಕೆ ಹೇಳ್ತೀಯಾ?’ ಎಂದೆ. ‘ಹೂಂ ಆಂಟಿ, ಮರೆಯದೇ ಹೇಳ್ತೀನಿ ಎಂದು ಕಾಲ್ ಕಟ್ ಮಾಡಿದಳು.
ನಾನು ಸಂಧ್ಯಾಳ ಹತ್ತಿರ ಮಾತನಾಡುವಾಗ ಮಕ್ಕಳ ವಿಚಾರಕ್ಕೆ ಬಂದಾಗಲೆಲ್ಲ ‘ನೀನೇ ಪುಣ್ಯವಂತೆ ಕಣೇ, ನಿನ್ನ ಇಬ್ಬರೂ ಮಕ್ಕಳು ನಿನ್ನ ಕಣ್ಮುಂದೆಯೇ ಇದ್ದಾರೆ. ಅಲ್ಲಿಗೂ ಇಲ್ಲಿಗೂ ಓಡಾಡಿಕೊಂಡಿರಬಹುದು’ ಎನ್ನುತ್ತಿದ್ದೆ. ಆಗ ಅವಳು ‘ಏನು ಪುಣ್ಯಾನೋ ಮಗಳಿಗೆ ಮಾಡಿದರೆ ಸೊಸೆಗೆ ಕೋಪ, ಸೊಸೆಗೆ ಮಾಡಿದರೆ ಮಗಳಿಗೆ ಕೋಪ. ಇನ್ನು ಮೊಮ್ಮಕ್ಕಳನ್ನು ಒಂದೇ ತರಹ ಪ್ರೀತಿ ಮಾಡಿದರೂ ಇಲ್ಲದ ಹುಳುಕುಗಳನ್ನು ಹುಡುಕಿ ಹಾರಾಡ್ತಾರೆ. ನನಗೆ ಸಾಕುಸಾಕಾಗಿದೆ ಸುಕನ್ಯಾ. ನನ್ನ ಗಂಡನೋ ವಿಪರೀತ ವ್ಯವಹಾರಸ್ಥ. ಮಗನ ಮದುವೆ ಮಾಡಿದ ತಕ್ಷಣ ನಾನು ಹೇಳಿದ್ದೆ ಅವರನ್ನು ಬೇರೆ ಮನೆ ಮಾಡಿಕೊಂಡು ಇರಲು ವ್ಯವಸ್ಥೆ ಮಾಡಿ, ಅವರಿಷ್ಟ ಬಂದಂತೆ ಇರಲೆಂದು. ಊಹುಂ ಕೇಳಲೇ ಇಲ್ಲ. ನಮ್ಮಿಬ್ಬರ ವ್ಯವಹಾರ ಒಂದೇ ಆಗಿರುವುದರಿಂದ ಬೇರೆ ಮನೆ ಯಾಕೆ? ಹಿರಿಯರಿದ್ದ ಈ ಮನೆಯೇ ಮೂರು ಸಂಸಾರಕ್ಕೆ ಆಗುವಷ್ಟಿದೆ. ಎಂದು ನಿರಾಕರಿಸಿಬಿಟ್ಟರು. ಮಗನೂ ಅವರಂತೆಯೇ ತಾಳಹಾಕಿದ. ಅದೇನೋ ಹೇಳ್ತಾರಲ್ಲಾ ‘ಹತ್ತಿರ ಇದ್ದರೆ ಹಡಕುನಾತ’ ಅಂತ. ಬಿಡು ಅದೆಷ್ಟು ಹೇಳಿದರೂ ಮಗಿಯದ ಕಥೆ ‘ ಎಂದು ಮುಕ್ತಾಯ ಹಾಡುತ್ತಿದ್ದುದು ನೆನಪಿಗೆ ಬಂತು. ನನ್ನದೋ ಮಗ ಪರದೇಶಿ, ಮಗಳು ಇಲ್ಲಿದ್ದರೂ ಪರದೇಶಿ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ತರಹ ಎಂದುಕೊಂಡೆ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31788
-ಬಿ.ಆರ್ ನಾಗರತ್ನ, ಮೈಸೂರು
ಸಂಸಾರವೆಂದರೆ ಸಾಗರ ಅನ್ನುವ ಮಾತು ಸುಳ್ಳಲ್ಲ ಅನ್ನುವುದು ಕಥೆ ಓದುವಾಗ ಮನಸಿಗೆ ಬರುವ ಅಂಶ. ಇಲ್ಲಿ ಬಂದು ಹೋಗುವ ಏಳು ಬೀಳು, ನೋವು ನಲಿವಿನ ಅಲೆಗಳು ನೂರಾರು. ಇವೆಲ್ಲವನ್ನೂ ಸಹಿಸಿ ಈ ಅಲೆಗಳೊಡನೆ ಹೋರಾಡಿ ದಡ ಸೇರುವ ಹೊತ್ತಿಗೆ ಹೇಗಾಗಬಹುದು ಅನ್ನುವ ಕಲ್ಪನೆ
ಸಾವಿಲ್ಲದ ಮನೇಯಂತೆ ತಾಪತ್ರಯಾ ಇಲ್ಲದ ಸಂಸಾರ ವೂ ಇಲ್ಲಾ, ಒಬ್ಬೊಬ್ಬರದು ಒಂದೊಂದು ಕಥೆ, ಆದರೇ ಸುಕನ್ಯಾ ಳ ಹಾಗೇ ಹೊಟ್ಟೆಯಲ್ಲಿ ಇಟ್ಟುಕೊಳ್ಳೋದು ಕಲಿಯಬೇಕು, ಸಹನೆ ಇದ್ದಾರೆ ಸಾಧ್ಯವೇನೋ…
ನೋವು ನಲಿವುಗಳ ಬದುಕು. ಒಬ್ಬೊಬ್ಬರ ಮನೆ ಕಥೆ ಒಂದೊಂದು ತರ. ಇವರಿಗೆ ಅವರು ಸುಖಿ, ಅವರಿಗೆ ಇವರು ಸುಖಿ.
ನೈಜ ಕೌಟುಂಬಿಕ ಜೀವನದ ಸಾರಾಂಶ ….. ಚೆನ್ನಾಗಿ ದೆ ….ಇನ್ನೂ ಏನೇನು ಆಗುವುದು ಎಂದು ಕುತೂಹಲ ಮತ್ತು ಬೇಸರ .ಜೀವನ ಎಂದರೆ ಎಷ್ಟು ಕಠಿಣ ಅಲ್ವಾ …ಅದರಿಂದ ಹೊರಬರಬೇಕು .. ಅಷ್ಟೆ
ಸಾಹಿತ್ಯ ಸಹೃದಯರಿಗೆ ನನ್ನ ಧನ್ಯವಾದಗಳು
ಸರಾಗವಾಗಿ ಓದಿಸಿಕೊಂಡು ಹೋಗುತ್ತಿರುವ ನೈಜತೆಯಿಂದ ಕೂಡಿದ ಸಾಂಸಾರಿಕ ಕಥೆ ಬಹಳ ಚೆನ್ನಾಗಿದೆ.
ಧನ್ಯವಾದಗಳು ಮೇಡಂ