ಬಿದಿರೆಂಬ ಸೋಜಿಗ
ಬಿದಿರು ಮೆಳೆಗಳು ಸುರಿಸಿದೆ ಅಕ್ಕರೆಯ ಅಕ್ಕಿಯನು
ಉದರ ಪೊರೆಯಲು ಯೋಗ್ಯವಾಗಿಸಿ ಅಗುಳನು
ಮೆದುವಾದ ಅನ್ನ ಹೊಕ್ಕಿತೆಂತು ಗಟ್ಟಿ ಬಿದಿರನು
ಹುದುಗಿದೆ ಸೋಜಿಗ ನೋಡು ಮೇಳೈಸಿದೆ ತುತ್ತನು||
ಗಳೆಗಾರನ ಗಳಿಕೆಯದು ತುಂಬಿದೆ ಗಳಗೆಯೊಳು
ಬೆಳೆದ ಗಳೆಗಳು ಕೆಳಗೆ ಗಳಿಯಿಸಿದೆ ಅಕ್ಕಿಗಳು
ಕಳಮೆಯೊಳಗುಂಟು ರೋಗಹರ ಗುಣಸತ್ವದಗುಳು
ಕಳಚುವುದು ಚಿಗುರೆಲೆ ಲೇಪದಲಿ ನೋವು ಬಾವುಗಳು||
ಕಳಲೆಯಲ್ಲಿದೆ ನೋಡು ರಕ್ತಶೋಧಕ ಗುಣವು
ಕೊಳಲು ಮೂಡುತಲಾಗ ಹೊಮ್ಮಿಸಿತು ನಾದವು
ಸೆಳೆವ ಬಾನ್ಸುರಿಯಾಗಿ ತೇಲಿಸಿದ ರಾಗವು
ತಳಿರಾದ ತೆನೆಹುಲ್ಲು ಮರವಾದ ಸೋಜಿಗವು ||
ಮೊರವಾಗಿ ಹಾರಿಸಿ ಕೊಳೆ ಕಲ್ಮಶಗಳ ಬೇರ್ಪಡಿಸಿದೆ
ಗುರುವ ಕೈಯಲ್ಲಿ ಹೊಳೆಯುವ ದಂಡವಾದೆ
ವಿರಮಿಸಲು ಚೆಲುವ ಶೃಂಗಾರ ಪೀಠವಾಗಿ ಮೈದಳೆದೆ
ಕರೆಬಂದಾಗ ಅಣಿಯಾಗುತ ಒಯ್ಯಲು ಚಟ್ಟವಾದೆ ||
-ಪದ್ಮಾ ಆಚಾರ್ಯ
ಸುಂದರ ಕವನ ಅಭಿನಂದನೆಗಳು ಮೇಡಂ
ಬಿದಿರಿನ ಗುಣ ಮತ್ತು ಉಪಯೋಗಗಳು ಚೆನ್ನಾಗಿ ಮೂಡಿದೆ. ಮಾಹಿತಿಭರಿತ ಕವನ.
Very nice. ಪ್ರಾಸ ಬದ್ದ ಕವನ, ಸಾಕಷ್ಟು ವಿಚಾರಗಳಿಂದ ಕೂಡಿದೆ
ಅರ್ಥಪೂರ್ಣ ಕವನ
ಬಿದಿರಿನ ಸಕಲಗುಣಗಳ ಗಾನ ತುಂಬಿಬಂದಿದೆ ತಮ್ಮ ಸೊಗಸಾದ ಅರ್ಥಪೂರ್ಣ ಕವನದಲ್ಲಿ.. ಧನ್ಯವಾದಗಳು ಪದ್ಮಾ ಮೇಡಂರವರೀಗೆ.