ನೆನಪು 13 : ಪ್ರೊ.ಅ ರಾ ಮಿತ್ರ ; ಕೆ ಎಸ್‌ ನ ರ ಕಾವ್ಯಮಿತ್ರ

Share Button

ಕನ್ನಡ ಸಾಹಿತ್ಯಲೋಕದ ವಿದ್ವಾಂಸ, ಲಲಿತ ಪ್ರಬಂಧಕಾರ, ಹಾಸ್ಯಪಟು, ವಿಮರ್ಶಕ ಹಾಗೂ ಶ್ರೇಷ್ಠ ಭಾಷಣಕಾರ  ಪ್ರೊ.ಅ ರಾ ಮಿತ್ರರವರು   ನಮ್ಮ ತಂದೆಯವರ  ಕಾವ್ಯಗಳಿಗೆ  ಸಹೃದಯ  ಪ್ರಚಾರ ನೀಡುತ್ತಿರುವ‌  ಮಹನೀಯರು. ತಮ್ಮ ಭಾಷಣಗಳಲ್ಲಿ  ಅವರು  ಕೆ ಎಸ್ ನ  ಅವರ  ಬಹುಪಾಲು  ಕವನಗಳನ್ನು  ಯಾವುದೇ  ಬರವಣಿಗೆಯ  ಸಹಾಯವಿಲ್ಲದೆ  ಉದ್ಧರಿಸಬಲ್ಲರು.

ನಮ್ಮ ತಂದೆಯರಿಗೂ ಮಿತ್ರ ಅವರಿಗೂ ಒಂದು ನಿಕಟವಾದ ಸ್ನೇಹವಿತ್ತು.ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ  ತಮ್ಮ  ಕನ್ನಡ  ಅಧ್ಯಾಪನ  ವೃತ್ತಿ ಆರಂಭಿಸಿ, ಹಲವು  ಕಾಲದ  ನಂತರ ಸರ್ಕಾರಿ  ಕಾಲೇಜಿಗೆ  ನೇಮಕಗೊಂಡು, ನಾಡಿನ ವಿವಿಧೆಡೆ  ಸೇವೆ ಸಲ್ಲಿಸಿ ನಿವೃತ್ತರಾದವರು. ಸೇವೆಯಲ್ಲಿದ್ದಾಗ ಹಾಗೂ ನಂತರ  ತಮ್ಮ ಪಾಂಡಿತ್ಯಪೂರ್ಣವಾದ  ಮಾತುಗಾರಿಕೆಯಿಂದ  ಕನ್ನಡ  ಜನಮಾನಸದಲ್ಲಿ ಸ್ಥಿರವಾಗಿ ನಿಂತವರು.

ಒಂದು ದೃಷ್ಠಿಯಿಂದ ಮಿತ್ರ ಅವರು ಕೆ ಎಸ್ ನ ಅವರ ಕಾವ್ಯದ ನಿಜವಾದ ಅಭಿಮಾನಿಗಳೆಂದೇ ಹೇಳಬಹುದು. ಒಮ್ಮೆ ಅವರು ನಮ್ಮ ತಂದೆಯವರಿಗೆ  ರಸ್ತೆಯಲ್ಲಿ  ಭೇಟಿಯಾದಾಗ  “ಸಾರ್ ಏನಾದರೂ  ಹೊಸದಾಗಿ ಬರೆದಿದ್ದೀರಾ “ ಎಂದು ಕೇಳಿದರು. ಅದಕ್ಕೆ  ನಮ್ಮ  ತಂದೆ  “ಮನೆಯಲ್ಲಿದೆ  ಬನ್ನಿ  ಹೋಗೋಣ’  ಎನ್ನುತ್ತಾ  ಮಿತ್ರ  ಅವರನ್ನು  ಅವರ ಜತೆಗಿದ್ದ  ಇನ್ನೊಬ್ಬ ಮಿತ್ರರ  ಸಮೇತ  ಮನೆಗೆ  ಕರೆದುಕೊಂಡು  ಬಂದರು.  ನಮ್ಮ ತಂದೆ  ಮನೆಗೆ ಬಂದವರೇ  ತಾಯಿಯವರಿಗೆ  “ಮಿತ್ರ ಬಂದಿದ್ದಾರೆ, ಕಾಫಿ , ಉಪ್ಪಿಟ್ಟು  ಮಾಡು”  ಎಂದರು.  ನಮ್ಮ  ತಾಯಿಯವರೂ  ಹೊರಬಂದು  ಮಿತ್ರರ  ಹಾಗೂ  ಅವರ  ಕುಟುಂಬದವರೆಲ್ಲರ  ಯೋಗಕ್ಷೇಮ ವಿಚಾರಿಸಿದರು.  ಮಿತ್ರ  ಅವರು  ಮಡಿಕೇರಿ  ಸರ್ಕಾರಿಯಲ್ಲಿ  ಸೇವೆಯಲ್ಲಿದ್ದಾಗ  ನಮ್ಮ ತಂದೆ, ತಾಯಿ  ಒಂದು ವಾರ  ಕಾಲ  ಅವರ ಅತಿಥಿಯಾಗಿದ್ದರು. ಹಾಗಾಗಿ ಇಡೀ ಕುಟುಂಬದವರು ಆತ್ಮೀಯರಾಗಿಬಿಟ್ಟಿದ್ದರು.  ಇಂಥ  ಕಾವ್ಯವಾಚನ, ಚರ್ಚೆಗಳು ಅವರಿಬ್ಬರ ನಡುವೆ ಆಗಾಗ್ಗೆ ನಡೆಯುತ್ತಿತ್ತು.

ಪ್ರೊ.ಅ ರಾ ಮಿತ್ರ

ಒಮ್ಮೆ ಭಾರತೀಯ ವಿದ್ಯಾಭವನದಲ್ಲಿ ಕೆ ಎಸ್ ನ ಕಾವ್ಯದ ಬಗ್ಗೆ ಮಿತ್ರ ಅವರಿಂದ ಒಂದು ಉಪನ್ಯಾಸ ಏರ್ಪಾಟಾಗಿತ್ತು. ಆ ದಿನ  ಅವರು  ಕೆ ಎಸ್ ನ  ಕಾವ್ಯದ  ಬಗ್ಗೆ  ಒಂದು  ಸೋದಾರೋಹಣ  ಭಾಷಣ ನೀಡಿ,  ಸಭಾಸದರಿಗೆ  ಕವಿಯ ಕಾವ್ಯದ  ಬಗ್ಗೆ ಆಸಕ್ತಿ  ಹೆಚ್ಚುವಂತೆ  ಮಾಡಿದರು.

2013ರಲ್ಲಿ ವಸಂತ ಪ್ರಕಾಶನದವರು ಕೆ ಎಸ್ ನ ಅವರ ಸಮಗ್ರ ಕಾವ್ಯ “ಮಲ್ಲಿಗೆ”ಯ ಮಾಲೆಯನ್ನು ಪುನರ್ಮುದ್ರಣ ಮಾಡಿದಾಗಮಿತ್ರ  ಅವರು  ಲೋಕಾರ್ಪಣೆ  ಸಮಾರಂಭದಲ್ಲಿ  ಭಾಗವಹಿಸಿ  ಕವಿಯ  ಬದುಕು  ಬರಹಗಳನ್ನು  ನೆನೆಸಿಕೊಂಡು  ಭಾವನಾತ್ಮಕವಾಗಿ  ಮಾತನಾಡಿದರು.

ನಮ್ಮ ತಂದೆಯವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಜೈನ್ ಕಾಲೇಜಿನ  ಸಹಯೋಗದೊಡನೆ  ವಿಚಾರ ಸಂಕಿರಣ  ಏರ್ಪಡಿಸಿದ್ದಾಗ  ಸಮಾರೋಪ  ಭಾಷಣ  ಮಾಡಲು  ಮಿತ್ರ ಅವರಿಗೆ  ಕೇವಲ  ಹತ್ತು ನಿಮಿಷ  ನೀಡಲಾಗಿತ್ತು.  ಆ ದಿನ ಅವರು ಹೆಚ್ಚೇನೂ  ಮಾತನಾಡಲಿಲ್ಲ. ಸಮಾರಂಭದ ನಂತರ  ನಾನು  ಪ್ರೊ .ಮಿತ್ರ  ಅವರಿಗೆ ”ಸಾರ್ ಜನ  ನಿಮ್ಮಿಂದ ಇನ್ನಷ್ಟು  ಮಾಹಿತಿ ಬಯಸಿದ್ದರು “ ಎಂದೆ. ಅದಕ್ಕೆ ಅವರು  “ಏನು ಮಾಡಲಯ್ಯ, ನಿಮ್ಮಪ್ಪನ  ಬಗ್ಗೆ  ಮಾತನಾಡಲು  ಹತ್ತು  ದಿನವೂ  ಕಡಿಮೆಯೇ. ಈ ವಿಷಯದಲ್ಲಿ ‌ ನನಗೂ ಅಸಮಾಧಾನವಿದೆ.” ಎಂದರು.

ನಮ್ಮ ಕುಟುಂಬದವರಿಗೆ ಇರುವಂತೆ ಮಿತ್ರ   ಅವರಿಗೂ ಅಕ್ಕಿ ಹೆಬ್ಬಾಳು ನರಸಿಂಹನೇ ಮನೆದೇವರು. 2016ರ  ನವೆಂಬರ್ ನಲ್ಲಿ  ನಾನು  ಹಾಗೂ  ಕೃಷ್ಣ ಸುಬ್ಬರಾವ್  ಅಕ್ಕಿಹೆಬ್ಬಾಳಿನಲ್ಲಿ  ಲಲಿತ ಪ್ರಬಂಧ  ಕಮ್ಮಟ ನಡೆಸಿಕೊಟ್ಟಾಗ  ಸಮಾರೋಪ  ಸಮಾರಂಭಕ್ಕೆ  ಬಂದ ಮಿತ್ರ  ಪಾರಿಭಾಷಿಕ  ಪದಗಳ ಬಗೆಗೆ  ವಿಚಾರ ಪ್ರಚೋದಕವಾಗಿ  ಮಾತನಾಡಿದರು. ಕಮ್ಮಟಿಗರೊಂದಿಗೆ ಹಾಗೂ ದೇವಸ್ಥಾನದಲ್ಲಿ ಬಂದ ಭಕ್ತಾದಿಗಳೊಂದಿಗೆ ಮುಕ್ತವಾಗಿ ಮಾತನಾಡಿ ಎಲ್ಲರ ಮನಗೆದ್ದರು.

ಇಂದಿಗೂ ನಮ್ಮ ತಂದೆ ತಾಯಿಯವರಿಗೆ ಹೇಗೋ ನಮ್ಮ ಕುಟುಂಬದ ಎಲ್ಲರಿಗೂ ಪ್ರೊ .ಅ ರಾ ಮಿತ್ರ ಸನ್ಮಿತ್ರರೇ.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=29531

-ಕೆ ಎನ್  ಮಹಾಬಲ
(ಕೆ ಎಸ್ ನ  ಪುತ್ರ, ಬೆಂಗಳೂರು )  

3 Responses

  1. ನಯನ ಬಜಕೂಡ್ಲು says:

    ಹೊಸ ಹೊಸ ಸಂಗತಿಗಳನ್ನೊಳಗೊಂಡ ಲೇಖನ ಮಾಲೆ ಸೊಗಸಾಗಿ ಮೂಡಿ ಬರುತ್ತಿದೆ ಸರ್.

  2. Hema says:

    ಮೂವತ್ತು ವರ್ಷಗಳ ಮೊದಲು, ಬಹುಶ: ನಾನು ಪಿ.ಯು.ಸಿ.ಯಲ್ಲಿರುವಾಗ , ‘ಮೂರು ಗಂಟೆಗಳು’ ಎಂಬ ಪ್ರಬಂಧವು ಕನ್ನಡ ಪಠ್ಯದ ಭಾಗವಾಗಿತ್ತು. ತಿಳಿ ಹಾಸ್ಯವನ್ನೊಳಗೊಂಡಿದ್ದ ಆ ಸೊಗಸಾದ ಪ್ರಬಂಧವನ್ನು ಬರೆದವರು ಪ್ರೊ.ಅ.ರಾ.ಮಿತ್ರ ಎಂಬ ನೆನಪು. ಈ ಲೇಖನದ ಮೂಲಕ ಆ ಪಠ್ಯ ನೆನಪಾಯಿತು.
    ಲೇಖನ ಸರಣಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ತಮಗೆ ಅಭಿನಂದನೆಗಳು.

  3. ಶಂಕರಿ ಶರ್ಮ says:

    ತಮ್ಮ ತಂದೆಯವರ ಹಿರಿ ಸಾಹಿತಿಗಳ ಜೊತೆಗಿನ ಒಡನಾಟ, ಸಂಬಂಧಗಳ ಬಗೆಗೆ ತಿಳಿದುಕೊಳ್ಳುವ ಸದವಕಾಶ ಕಲ್ಪಿಸಿಕೊಡುತ್ತಿರುವ ತಮಗೆ ಹೃತ್ಪೂರ್ವಕ ಕೃತಜ್ಞತೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: