ಸಾಂಬಾರು
ಅದೇ ಮೆಣಸಿನಪುಡಿಯ ಘಾಟು
ಮೂಗು ಹೊಕ್ಕಾಗಲೆಲ್ಲಾ
ಅವನ ಖಾರದ ಮಾತುಗಳು
ಜ್ಞಾಪಕಾರ್ಥವಾಗಿ…!
ಹುಣಸೆ ಹಿಂಡುವಾಗೆಲ್ಲಾ
ಹುಳಿ ಹಿಂಡಲು ಬಂದವಳೆಂಬ
ಅತ್ತೆಯ ಧೋರಣೆಯ
ನುಡಿಗಳು ಕಿವಿಗಪ್ಪಳಿಸಿ
ಒಡಲಾಗ್ನಿ ಜ್ವಲಿಸುವುದು..!!
ಬೆಂದ ಬೇಳೆಯ,
ಕುದಿಗೆ ಬೆರಸುವಾಗ
ತವರ ಹಂಗಿಸಿದ
ಹೆತ್ತವರ ನಿಂದಿಸಿದ
ಕರ್ಣಕಠೋರ ವ್ಯಂಗ್ಯಗಳು
ಉಕ್ಕೇರಿಸುತ ಎದೆಯ ಲಾವಾ..!
ಕೊತ ಕೊತ ಮಿಶ್ರಣಕೆ ಉಪ್ಪು
ಹಾಕುವ ಸಮಯ..
ಕಣ್ಣೀರ ಲವಣವೂ
ಮುಷ್ಠಿಯೊಳಗಿನ ಹರಳಲ್ಲಿ ಬೆರೆತು….
ಕೊತ್ತಂಬರಿ ಹೆಚ್ಚುವಾಗ ಬೆರಳು
ಚುರ್ ಎಂದ ಮರೀಚಿಕೆಯ ನೋವು..
ಕೆಂಪ ತೊಳೆದು ಅಟ್ಟಣಿಗೆಲಿದ್ದ
ಅರಿವೆ ಬಿಗಿದು, ಅರಿಶಿನ ಮೆಟ್ಟಿ..
ಉಬ್ಬೆದೆಯ ಮೇಲೆ
ಹೊಯ್ದಾಡುವ ಸಡಗರದ
ತಾಳಿ ಕಂಡಾಗ ಸರಪಳಿಯ ಭಾವ…!!
ಹರಿದ ರುಜುವಾತುಗಳ ಮೊಹರು
ಒಡಲು ತುಂಬಿದರೂ ಮೀಸೆಯಾ ಪೊಗರು..!
ಕಂಡಾಗಲೆಲ್ಲಾ ಬೆದರು ಬೆಮರು!!
ಉದ್ಭವಿತ ಭಾವಗಳ ಇಕ್ಕಳದಲಿ
ಹಿಡಿದು ಮತ್ತೆ ಒಗ್ಗರಣೆ ಹಾಕಿದ್ದೆ..
ರಾಗ ದ್ವೇಷ ಅಸೂಯೆಗಳೆಲ್ಲವೂ
ಸರತಿಯಲ್ಲಿ ಪಟಗುಟ್ಟಿದವು..
ಇಂಗು ಹಾಕುವ ಸಮಯ
ಮಂಗನಾಗಿಹ ಮನವ
ತಹಬದಿಗೆ ತಂದು
ಘಮ್ಮನೆ ಒಲವ ಆಘ್ರಾಣಿಸುತಲಿ
ಸಾಂಬಾರಿನ ಪಾತ್ರೆಯೊಳಗೆ
ಸೌಟು ಅದ್ದಿ…
ಮತ್ತದೆ ಚುರುಚುರು ಸದ್ದು!
ಒಳಗಿರುವ ಮಗು ನಗುತ ಒದ್ದು..!!
ಮರೆತ ನಿಂಬೆ ಗಾತ್ರದ ಬೆಲ್ಲ
ಬೆರೆಸಿ ತೊಳಸಿ….
ಸಿಹಿ ಬೆರೆತ ಸಂಭ್ರಮದಿ
ಒಲೆಯಿಂದ ಪಾತ್ರೆ ಇಳಿಸಿ..
-ಅರ್ಚನಾ. ಎಚ್ , ಬೆಂಗಳೂರು
ತುಂಬಾ ಚಂದದ ಕವನ… ಓದುತ್ತಾ ಓದುತ್ತಾ ರೋಮಾಂಚನ….
ಧನ್ಯವಾದಗಳು
ಬದುಕಿನ ಅನುಭವ ಪದಗಳ ಲಾಲಿತ್ಯದಲಿ ಮೇಳೈಸಿ ಕಾವ್ಯದೀಪಿಕೆಯಾಗಿ ಬೆಳಗಿದೆ.ಅಭಿನಂದನೆಗಳು ಅರ್ಚನಾ
ಧನ್ಯವಾದಗಳು ಮೇಡಮ್..
ಚಂದ ವಾಗಿದೆ
ಧನ್ಯವಾದಗಳು…
Beautiful. ಬದುಕಿನ ವಾಸ್ತವದ ಪಾಕ ಬಹಳ ಚಂದ ಮೂಡಿ ಬಂದಿದೆ.
ಧನ್ಯವಾದಗಳು
ಮನದ ಭಾವನೆಗಳಿಗೆ ಸುಂದರ ಚೌಕಟ್ಟಿನಲ್ಲೇ ಕೊಟ್ಟಿರುವ ಕವನ.ಚಂದವಾಗಿದೆ.ಅಭಿನಂದನೆಗಳು ಮೇಡಂ.
ಧನ್ಯವಾದಗಳು…
‘ಘಮಘಮಿಸುವ’ ಕವನ ಇಷ್ಟವಾಯಿತು
ಧನ್ಯವಾದಗಳು…
ಸಾಂಬಾರು..ಕವನ ಹೆಸರಿನಂತೆ ಖಾರ,ಹುಳಿ,ಉಪ್ಪು,ಸಿಹಿ ಯಾಗಿ..ಒಗ್ಗರಣೆಯ ಘಮವೂ ಸೇರಿ ಚೆನ್ನಾಗಿತ್ತು
ಧನ್ಯವಾದಗಳು
ನನಗೂ ಘಟನೆ ಪರಿಮಳಬಂತು
ಧನ್ಯವಾದಗಳು
ತುಂಬಾ ಚೆನ್ನಾಗಿದೆ..
ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು…
ಚೆನ್ನಾಗಿದೆ
ಧನ್ಯವಾದಗಳು…
ಜೀವನದ ಕಷ್ಟ ಸುಖಗಳು ನಿಮ್ಮ ಕವನದಲ್ಲಿ ಖಾರ, ಹುಳಿ, ಉಪ್ಪು, ಬೇಳೆ, ಬೆಲ್ಲವಾಗಿ ಸಾಂಬಾರ್ ಆದ ಬಗೆ ವಿಶಿಷ್ಟವಾಗಿದೆ.. ಚಂದದ ಕವನ.
ಧನ್ಯವಾದಗಳು…
ಅರ್ಥಪೂರ್ಣ ಕವನ. ವಿವಿಧ ಮಜಲುಗಳ ದರ್ಶನ ಮಾಡಿಸಿದೆ. ಪ್ರಾರಂಭದಿಂದ ಅಂತಿಮದವರೆಗು ಸಹ ತುಂಬ ಲವಲವಿಕೆಯಿಂದ ಓದಿಸಿಕೊಂಡು ಹೋಯಿತು. ತಾವು ಬಳಸಿರುವ ಪದ ಚಮತ್ಕಾರಕ್ಕೆ ನಮ್ಮ ಶರಣು. ಕವನಗಳು ಎಂದರೆ ಹೀಗಿರಬೇಕು. ತಮ್ಮ ಲೇಖನಿಯಿಂದ ಮತ್ತಷ್ಟು ಕವನಗಳು ಹರಿದುಬರಲಿ. ಶುಭಾಶಯಗಳೊಂದಿಗೆ.
ಕಾಳಿಹುಂಡಿ ಶಿವಕುಮಾರ್, ಮೈಸೂರು.
ಅನಂತ ಧನ್ಯವಾದಗಳು ಸರ್…
ಪಾಕದ ಪಕ್ವತೆ ಬದುಕು.
ಧನ್ಯವಾದಗಳು