ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 28
ಮಕ್ಕಳ ನಗೆ ನಾಟಕದ ನೋಟ
ಪೂರ್ವ ಹಿಮಾಲಯ ಪರ್ವತ ಪ್ರದೇಶದ ಸಂರಕ್ಷಿತ ಇಂಡೋ-ಚೀನಾ ಗಡಿಯಾದ ನಾಥುಲಾ ಪಾಸ್ ನಲ್ಲಿ ಕಳೆದ ಅಮೂಲ್ಯ ಸಮಯವು ನಮ್ಮೆಲ್ಲರಿಗೂ ಜೀವನದಲ್ಲಿ ಎಂದೆಂದಿಗೂ ಮರೆಯಲಾಗದ ಅದ್ಭುತ ಅನುಭವವಾಗಿ ಉಳಿಯಿತು. ಶರೀರದಲ್ಲಿ ಧರಿಸಿದ್ದ ಬಾಡಿಗೆಯ ಭಾರವಾದ ಚಳಿ ಉಡುಪುಗಳನ್ನು ಹಿಂತಿರುಗಿಸಿ, ಪರ್ವತದ ಇಳಿಜಾರು, ಕ್ಲಿಷ್ಟ ತಿರುವು ರಸ್ತೆಯಲ್ಲಿ ಇಳಿದು ನಮ್ಮ ಹೋಟೇಲ್ ಸಿಕ್ಕಿಂ ರಿಟ್ರೀಟ್ (ರೆಸ್ಟೋರೆಂಟ್)ಗೆ ತಲಪಿದಾಗ ದಟ್ಟ ಸಂಜೆಗತ್ತಲು… ನಮ್ಮ ಪ್ರವಾಸದ ಎಂಟನೇ ದಿನವು ಕೊನೆಗೊಳ್ಳುತ್ತಲಿತ್ತು. ಊಟದ ತಯಾರಿ ನಡೆದಿತ್ತು.. ಪಾಕ ಸಿದ್ಧತೆಗೆ ಇನ್ನೂ ಸಮಯವಿತ್ತು. ಜೊತೆಗೇ ಬಾಲಣ್ಣನವರ ಆದೇಶದಂತೆ, ರೂಮಿನ ಅಭಾವದಿಂದ ಪಕ್ಕದ ಹೋಟೇಲಿನಲ್ಲಿದ್ದವರು ಅದೇ ಹೋಟೇಲಿನ ರೂಮಿಗೆ ತಮ್ಮ ಲಗೇಜಿನೊಂದಿಗೆ ಸ್ಥಳಾಂತರಗೊಳ್ಳುವ ಏರ್ಪಾಡಾಗಿದ್ದು ತಿಳಿಯಿತು. ನಾವಿಬ್ಬರು ಕೂಡಾ ಅದರಲ್ಲಿ ಸೇರಿದ್ದೆವು. ಅದೃಷ್ಟವಶಾತ್, ನಮಗೆ ಪಕ್ಕದ ಹೋಟೇಲಲ್ಲಿ ಸಿಕ್ಕಿದ್ದ ರೂಮಂತೂ ಸಿಕ್ಕಾಪಟ್ಟೆ ಚೆನ್ನಾಗಿತ್ತು. ಅದನ್ನು ಮನಸ್ಸಿಲ್ಲದ ಮನಸ್ಸಲ್ಲಿ ಬಿಟ್ಟು ಬಂದು ನಮಗಾಗಿ ಕಾದಿರಿಸಿದ್ದ ಚಂದದ ಪುಟ್ಟ ರೂಮಿಗೆ ಸಾಮಾನುಗಳನ್ನು ಸಾಗಿಸಿದ್ದಾಯ್ತು.
ನಮ್ಮ ಪ್ರವಾಸ ಬಂಧುಗಳಲ್ಲೊಬ್ಬರನ್ನು ಮರೆಯುವಂತೆಯೇ ಇಲ್ಲ.. ಅವರೇ, ಮಹೇಶಣ್ಣನ ಮಾವ, ಸವಿತಕ್ಕನ ತಂದೆಯವರಾದ ಗಿರಿಗದ್ದೆ ಅಣ್ಣ. ಅತ್ಯಂತ ಹಾಸ್ಯಪ್ರಿಯರೂ, ಉತ್ಸಾಹಿಗಳೂ ಆದ ಅವರು ನಮ್ಮ ಪ್ರವಾಸ ತಂಡದಲ್ಲಿನ ಹಿರಿಯರು..ಯುವಕರನ್ನೂ ನಾಚಿಸುವಷ್ಟು ಚಟುವಟಿಕೆಯಿಂದಿರುವವರು, ಸದಾ ಎಲ್ಲರಲ್ಲೂ ಉತ್ಸಾಹ ತುಂಬುತ್ತಿರುವವರು. ಅನಾರೋಗ್ಯದ ನಿಮಿತ್ತ ನಾಥೂಲಾ ಪಾಸ್ ವೀಕ್ಷಣೆಗೆ ನಮ್ಮೊಂದಿಗೆ ಬರದುದು, ನಮಗೆಲ್ಲರಿಗೂ ಏನೋ ಕಳಕೊಂಡಂತೆ ಭಾಸವಾಗಿತ್ತು. ಈ ದಿನ
ಗೇಂಗ್ಟೋಕ್ ನಲ್ಲಿ ಕೊನೆಯ ದಿನ..ಮುಂದಿನ ಪಯಣ ಡಾರ್ಜಿಲಿಂಗ್ ಗೆ. ನಳಪಾಕದ ಸಿದ್ಧತೆಯ ಸಮಯವನ್ನು ಸದುಪಯೋಗಗೊಳಿಸಲು ಸಿದ್ಧತೆ ನಡೆಸಿದರು, ನಮ್ಮ ಪ್ರವಾಸದ ರೂವಾರಿಗಳಾದ ನಾರಾಯಣಣ್ಣನವರು. ರಾತ್ರಿ ಗಂಟೆ ಎಂಟಾಗಿತ್ತು. ನಮ್ಮ ದೇಶದ ಸರಹದ್ದು, ಪರ್ವತ ಪ್ರಯಾಣ ಮುಗಿಸಿ ಬಂದಿದ್ದರೂ, ಉತ್ಸಾಹ ಯಾರಲ್ಲೂ ಕುಗ್ಗಿರಲಿಲ್ಲ. ಅದ್ದರಿಂದಲೇ, ಸಭಾ ಕಾರ್ಯಕ್ರಮವೊಂದಕ್ಕೆ ತಯಾರಿ ನಡೆಯಿತು. ಊಟದ ಹಾಲ್ ನಲ್ಲಿದ್ದ ಕುರ್ಚಿಗಳು ಅಲ್ಲಿದ್ದ ಪುಟ್ಟ ವೇದಿಕೆಗೆ ಮುಖ ಮಾಡಿದುವು. ನಾರಾಯಣಣ್ಣನ ಪೀಠಿಕೆ ಹಾಗೂ ಮಹೇಶಣ್ಣನ ನಿರ್ವಹಣೆಯೊಂದಿಗೆ ಪ್ರಾರಂಭವಾಯ್ತು ಕಾರ್ಯಕ್ರಮ. ಆ ದಿನದ ವರೆಗಿನ ಪ್ರವಾಸದ ಅನುಭವಗಳನ್ನು ಪ್ರತಿಯೊಬ್ಬರೂ ಹಂಚಿಕೊಳ್ಳಲೇ ಬೇಕೆಂಬ ತಾಕೀತು ಬೇರೆ! ಎಲ್ಲರೂ ಉತ್ಸಾಹದಿಂದಲೇ ಭಾಗವಹಿಸಿದೆವು. ಹೆಚ್ಚಿನ ಎಲ್ಲಾ ಮಹಿಳಾಮಣಿಗಳ ಅನಿಸಿಕೆಯಂತೆ, “ರಾಜೇಶಣ್ಣನ ಹೊತ್ತಿಗೊಂದು ರೀತಿಯ ಸ್ಪೆಷಲ್.. ಸೂಪರ್ ಅಡಿಗೆಯನ್ನು ಸವಿದ ಮೇಲೆ ಇನ್ನು ಮನೆಗೆ ಹೋಗಲೇ ಬೇಜಾರು”. ಇದಂತೂ ನೂರಕ್ಕೆ ನೂರರಷ್ಟು ಸತ್ಯ! ಪುರಿ ಜಗನ್ನಾಥ ದೇವರ ದಿವ್ಯ ದರ್ಶನದಿಂದ ಹಿಡಿದು ನಾಥುಲಾ ಪಾಸ್ ನಲ್ಲಿ ಕಳೆದ ಅವಿಸ್ಮರಣೀಯ ಕ್ಷಣಗಳ ವರೆಗಿನ ಎಂಟು ದಿನಗಳ ಅತ್ಯದ್ಭುತ ಅನುಭವಗಳ ಬಗೆಗಿನ ಎಲ್ಲರ ಮಾತುಗಳು ನಿಜಕ್ಕೂ ಮನಮುಟ್ಟಿದುವು.
ಅದಾಗಲೇ ನಮ್ಮ ಪ್ರವಾಸ ತಂಡದಲ್ಲಿನ ಎಂಟು ಮಕ್ಕಳ ಗುಂಪಿನಿಂದ ಕಲರವ ಕೇಳಿಬರತೊಡಗಿತು. ಅಶ್ವಿನಿ ಮತ್ತು ಮಧುಕೇಶ ಕೂಡಿ ತಯಾರಿಸಿದ ಕಿರು ಪ್ರಹಸನದ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳ್ಳತೊಡಗಿದಾಗ ನಮಗೆಲ್ಲರಿಗೂ ಕುತೂಹಲವೋ ಕುತೂಹಲ! ಆದರೆ ವೇದಿಕೆ ಮೇಲೆ ಬೇಡವೆಂದು ಮಕ್ಕಳೆಲ್ಲಾ ಸೇರಿ ವೇದಿಕೆಯ ಕೆಳಗಡೆಯೇ ಕುರ್ಚಿಗಳನ್ನು ತರಗತಿಯಲ್ಲಿ ಇರಿಸುವಂತೆ ಸಾಲಾಗಿ ಇರಿಸತೊಡಗಿದಾಗ ಹಿರಿಯರಿಗೆಲ್ಲಾ ಕುತೂಹಲ ಇನ್ನೂ ಜಾಸ್ತಿಯಾಯ್ತು…ಇವರು ಏನು ಮಾಡುತ್ತಿರಬಹುದೆಂದು. ನಮ್ಮ ಚಿನಕುರಳಿ ಅಶ್ವಿನಿ ಕೈಯಲ್ಲಿ ಮೈಕ್(ಅಭಿನಯ) . “ಎಲ್ಲರಿಗೂ ಸ್ವಾಗತ. ಈಗ ನಾವು ಪುರಿ ದೇವಸ್ಥಾನ ನೋಡಲು ಪ್ರವಾಸ ಹೊರಟಿದ್ದೇವೆ. ಹೊರಡಲು ಸ್ವಲ್ಪ ತಡವಿದೆ…ಎಲ್ಲರೂ ಸ್ವಲ್ಪ ಎಜೆಸ್ಟ್ ಮಾಡ್ಕೊಳ್ಳಬೇಕಾಗಿ ವಿನಂತಿ”…ಹಾಂ..ಈಗ ಎಲ್ಲರಿಗೂ ತಿಳಿಯಿತು, ಇವರು ಬಾಲಣ್ಣನವರೆಂದು! ಹಾಗೇ ಮುಂದಕ್ಕೆ ಬಂತು ಮಧುಕೇಶನ ಮಾತು,”ಹಾಂ, ನಿಮಗೆಲ್ಲ ಈಗ ತುಂಬಾ ಬೋರ್ ಆಗ್ತಿರಬೇಕಲ್ವಾ? ತಗೊಳ್ಳಿ..”. ಕೈ ತುಂಬಾ ಮೈಸೂರು ಪಾಕ್, ಮಿಕ್ಚರ್ ಹಂಚಿಯಾಯ್ತು!(ಅಭಿನಯ) ಎಲ್ಲರೂ ಚಪ್ಪರಿಸಿ ತಿಂದದ್ದೇ ತಿಂದದ್ದು…ತಿಳಿಯಿತು ಇದು ಗಣೇಶಣ್ಣ! ಹಾಂ.. ಆಗ ಬಂದುದು ಮಹೇಶಣ್ಣನಾಗಿ ಭಾರ್ಗವ ಕೃಷ್ಣ. “ಈಗ ಎಲ್ರೂ ಅವರವರ ಪರಿಚಯ ಮಾಡಿಕೊಡಬೇಕು”. ಎಲ್ಲರ ಪರಿಚಯವಾಗುತ್ತಿದ್ದಂತೆ ಸವಿತಕ್ಕನ ಸರದಿ ಬಂದಾಗ, ಮಹೇಶಣ್ಣ ತನ್ನ ಮಡದಿ ಸವಿತಾರಿಗೆ,”ಏ ಸವಿತಾ, ಪರಿಚಯ ಹೇಳ್ಳಿಕ್ಕೆ ಎಂತದ್ದಾ ನಾಚಿಕೆ! ” ಆಗ ಸವಿತ ನಾಚಿಕೆಯಿಂದ ಮುಖ ಕೆಂಪಗೆ ಮಾಡಿಕೊಂಡು,” ಛೇ..ನನ್ನಿಂದಾಗದಪ್ಪ”..ಮುಖಕ್ಕೆ ಶಾಲು ಮುಚ್ಚುತ್ತಾರೆ..ಇಷ್ಟನ್ನೂ ಅತ್ಯಂತ ಸಹಜವಾಗಿ ಅಭಿನಯಿಸಿದರು, ಮಕ್ಕಳು! ಮುಂದಕ್ಕೆ ಶರ್ಮರ ಪಾತ್ರದಲ್ಲಿ ರಂಜಿಸಿದ ಭಾರ್ಗವ,”ಮಕ್ಳು ಎಲ್ಲಾ ಹಿಂದಿನ ಸೀಟಿನಲ್ಲಿ ಕುಳಿತು ನಿಮ್ಮಷ್ಟಕ್ಕೇ ಮಾತಾಡುವುದಲ್ಲ, ಮೈಕ್ ಖಾಲಿ ಬಿಡ್ಬಾರ್ದು, ನಾಚಿಕೆ ಯಾಕೆ? ಎಲ್ಲಾ ಮುಂದೆ ಬನ್ನಿ..ಮುಂದೆ ಬನ್ನಿ”. ಗೋಪಾಲಣ್ಣನವರಾಗಿ ನಟನೆಯಲ್ಲಿ,” ಹಾಂ, ಈಗೊಂದು ಜಾಣ್ಮೆ ಲೆಕ್ಕ. ಹೋಟೇಲಿಗೆ ಊಟಕ್ಕೆ ಮೂರು ಜನ ಹೋಗ್ತಾರೆ. ಅವರ ಬಿಲ್ಲು ರೂ…… ಕೊನೆಗೆ ಆ ಒಂದು ರುಪಾಯಿ ಎಲ್ಲಿ ಹೋಯ್ತು? ಹಾಂ..ಈಗ ಇಳಿಯಲಿಕ್ಕಾಯ್ತು. ಎಲ್ಲರೂ ಲೆಕ್ಕ ಮಾಡಿ ಆಮೇಲೆ ಹೇಳಿ ನೋಡೋಣ? “.
ಮಧ್ಯದಲ್ಲಿ ಒಂದು ಗೊಣಗುಟ್ಟುವಿಕೆ, “ಈ ಗೋಪಾಣ್ಣನತ್ರ ಸಾಧ್ಯವಿಲ್ಲಪ್ಪಾ.. ಕೊರೆಯಲು ತಲೆಯೊಳಗೆ ಹುಳ ಬಿಟ್ರು!” ಹೀಗೆಯೇ ಮಕ್ಕಳೆಲ್ಲಾ ಪ್ರವಾಸದ ಸಮಯದಲ್ಲಿ ಗಮನಿಸಿದ ಘಟನೆಗಳನ್ನು ನಾಜೂಕಾಗಿ ಜೋಡಿಸಿ ಮಾಡಿದ ಅಭಿನಯ ಇದೆಯಲ್ಲಾ.. ಸುಪರ್ರೋ ಸುಪರ್. ತಮ್ಮ ಅತ್ಯಲ್ಪ ಸಮಯದಲ್ಲೇ ಮಕ್ಕಳ ಇಂತಹದೊಂದು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಕೊಂಚವೂ ಅಳುಕದೆ ಸಹಜವಾಗಿ ನಟಿಸಿ, ನಗಿಸಿ ನಮ್ಮೆಲ್ಲರ ಹೊಟ್ಟೆ ಹುಣ್ಣಾಗಿಸಿದ ನಮ್ಮ ಈ ಮಕ್ಕಳ ತಂಡಕ್ಕೆ ಚಪ್ಪಾಳೆಯ ಸುರಿಮಳೆ!! ಅವಿಸ್ಮರಣೀಯ ಅನುಭವಗಳ ಕಂಪು ಬೀರುವ ಸುಮ ಮಾಲೆಯಲ್ಲಿ ಮತ್ತೊಂದು ಸುಂದರ ಪುಷ್ಪದ ಜೋಡಣೆ.! ಅಷ್ಟರಲ್ಲಿ ನಮ್ಮ ಪಾಕಜ್ಞರು ತಟ್ಟೆ, ಲೋಟಗಳ ಸದ್ದಿನೊಂದಿಗೆ ನಮ್ಮ ಭೋಜನವನ್ನು ನೆನಪಿಸಿದರು. ಹೊಟ್ಟೆಗೆ ಭರ್ಜರಿ ಊಟ..ಮನಸ್ಸಿಗೆ ತಂಪೆರೆದ ದಿನದ ಸವಿ ನೆನಪುಗಳು…ಇನ್ನೇನು ಬೇಕು ಈ ಜೀವಕ್ಕೆ..!!
(ಮುಂದುವರಿಯುವುದು..)
ಹಿಂದಿನ ಪುಟ ಇಲ್ಲಿದೆ : ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :ಪುಟ 27
-ಶಂಕರಿ ಶರ್ಮ, ಪುತ್ತೂರು.
ಚೆನ್ನಾಗಿದೆ
ಧನ್ಯವಾದಗಳು.
ಓದಲು ಕಾಯುವಂತೆ ಸೊಗಸಾಗಿ ಬರೆಯುತ್ತೀರಿ.
ಮೆಚ್ಚುಗೆಗಾಗಿ ಧನ್ಯವಾದಗಳು.
ನಿಮ್ಮ ಪ್ರವಾಸದ ಅನುಭವದ ಸವಿ ಮನಕ್ಕೆ ಮುದ ನೀಡಿತು. ನಿರೂಪಣೆ ತುಂಬಾ ಇಷ್ಟವಾಯಿತು..ಮುಂದಿನ ಸಂಚಿಕೆ ಯಾವಾಗ..
ಹಂಚಿಕೊಂಡ ನಿಮಗೆ ಧನ್ಯವಾದಗಳು
ಮೆಚ್ಚಿ ಹಾರೈಸಿದ ನಿಮಗೆ ಕೃತಜ್ಞತೆಗಳು
ಪ್ರವಾಸದ ಕುರಿತು ಸುಂದರ ಬರಹ.ಇನ್ನು ಒದುವ ಕುತುಹಲ
ತಂತು.ಧನ್ಯವಾದಗಳು.
ಮೆಚ್ಚಿ ಪ್ರತಿಕ್ರಯಿಸಿದ ತಮಗೆ ಕೃತಜ್ಞತೆಗಳು.