ನಾಮ ಫಲಕ ಪಜೀತಿ!
ಒಮ್ಮೆ ಬೆಳ್ಳಂಬೆಳಗ್ಗೆ ಮನೆ ಮುಂದೆ ಪೋಲೀಸನೊಬ್ಬ ಹಾಜರಾಗಿ ನಮಸ್ಕಾರ ಸಾ ಎಂದ. ನನಗೆ ಗಾಬರಿ ನಾನೇನು ಅಪರಾಧ ಮಾಡಿದೆ ಈ ಪೊಲೀಸಪ್ಪನ ದರ್ಶನಕ್ಕೆ ಎಂಬ ಗೊಂದಲ ಕೊನೆಗೆ ಏನಪ್ಪಾ ಸಮಾಚಾರ ಎಂದು ಕೇಳಿದೆ.ಅವನು ಸ್ವಾಮಿ ನೀವು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದೀರಿ; ಅದಕ್ಕೆ ಕೋರ್ಟಿನಿಂದ ಸಮನ್ಸ್ ಬಂದಿದೆ. ನಾಳಿದ್ದು ಕೋರ್ಟಿಗೆ ವಿಚಾರಣೆಗೆ ಹಾಜರಾಗಬೇಕು ತಪ್ಪಿದಲ್ಲಿ ನಿಮ್ಮನ್ನ ಅರೆಸ್ಟ್ ಮಾಡಿ ಕರೆತರಲು ಜಡ್ಜ್ ಸಾಹೇಬರು ಸೂಚಿಸಿದ್ದಾರೆ ಎನ್ನಬೇಕೆ? ನನಗೆ ತಿಳಿದಿರುವಂತೆ, ಸ್ಟ್ರಿಕ್ಟ್ ಆಗಿ ರೂಲ್ಸ್ ಫಾಲೋ ಮಾಡುವವನು ನಾನು. ಹಾಗಿರುವಾಗ ನನ್ನ ಮೇಲೇ ಈ ಕೇಸು!
ಪೋಲೀಸಪ್ಪನನ್ನು ಪ್ರಶ್ನಿಸಿದೆ.ಎಲ್ಲಿ ಯಾವಾಗ ಬ್ರೇಕ್ ಮಾಡಿದ್ದೀನಿ ಅಂತ ಏನಾದರೂ ಪತ್ರದಲ್ಲಿ ತಿಳಿಸಿದೆಯಾ ಎಂದು ಪ್ರಶ್ನಿಸಿದೆ. ಓಹೊ ನೀವು ಕೆ.ಆರ್. ನಗರದಲ್ಲಿ ಕಳೆದ ವಾರ ಸಿಗ್ನಲ್ ಜಂಪ್ ಮಾಡಿ ಸಿಕ್ಕಿ ಹಾಕಿಕೊಂಡಿದ್ದೀರಿ ಎಂದ. ನಾನು ಯಾವಾಗ್ಲೂ ಕೆ.ಆರ್ ನಗರಕ್ಕೆ ಹೋಗೇ ಇಲ್ವಲ್ಲಪ್ಪ! ನನ್ನದೇನಿದ್ದರೂ ಲೋಕಲ್ ಅದು ಬಿಟ್ರೆ ಬೆಂಗಳೂರು. ಮಗಳ ಮನೆವರೆವಿಗೆ ಅಷ್ಟೇ ಅಂತಹುದರಲ್ಲಿ ಕೆಆರ್ ನಗರದಲ್ಲಿ ಅಪರಾದ ಎಸಗಲಿಕ್ಕೆ ಹೇಗೆ ಸಾಧ್ಯ? ನಿಮಗೆ ಏನೋ ಕನ್ಫ್ಯೂಜನ್ ಆಗಿರಬೇಕು ಎಂದೆ.ಸಾರ್ ಇಲ್ಲಿ ನೋಡಿ ನಿಮ್ಮ ವಿಳಾಸ ಕರೆಕ್ಟ್ ಆಗಿ ನಮೂದಾಗಿದೆ; ಹೆಸರು ಡ್ಯಾಷ್ ಡ್ಯಾಷ್ ಡ್ಯಾಷ್, ಕ್ರಾಸ್ ಡ್ಯಾಶ್, ಮೇನ್ ಡ್ಯಾಶ್, … ಪುರ, ಡ್ಯಾಶ್ ಊರು ಎಂದು ತೋರಿಸಿದ. ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲಪ್ಪಾ ಎಂದುಕೊಂಡೆ.
ಸ್ವಲ್ಪ ಆಲೋಚಿಸಿ ಅದರಲ್ಲಿ ಸೂಚಿಸಿರುವ ವಯಸ್ಸೆಷ್ಟು ಅಪ್ಪಾ ಎಂದೆ. ಅದಕ್ಕವನು ಇಪ್ಪತ್ತಮೂರು ವರ್ಷ ಸಾರ್ ಎಂದ. ತಕ್ಷಣವೇ ನಾನು, ನನ್ನ ವಯಸ್ಸು ಅರವತ್ತೈದು; ಆದುದರಿಂದ ಇದು ಸುಳ್ಳು ಕೇಸು ಎಂದು ತಿಳಿಸಿದೆ. ಅದು ಹೇಗೆ ಎಲ್ಲೋ ಇರುವವನು ನಿಮ್ಮ ವಿಳಾಸ ಅಷ್ಟು ಕರೆಕ್ಟಾಗಿ ಕೊಡಲು ಸಾಧ್ಯ ಸಾರ್ ಎಂದ. ಅದಕ್ಕೆ ನಾನು ಅದಕ್ಕೆ ನಾನು ಇದು ನಾವುಗಳು ಮನೆವಾಸಿಗಳು ಮಾಡುತ್ತಿರುವ ಮಹಾನ್ ತಪ್ಪು ಕಣಪ್ಪ. ಮನೆ ಕಟ್ಟಿಸಿದ ಖುಷಿಯಲ್ಲಿ ಮನೆ ಮುಂದೆ ಎಲ್ಲರಿಗೂ ಕಾಣುವ ಹಾಗೆ ನಮ್ಮ ಮತ್ತು ನಮ್ಮ ಮನೆಯಲ್ಲಿರುವ ಎಲ್ಲರ ಹೆಸರು, ಮನೆ ಸಂಖ್ಯೆ, ಬ್ಲಾಕು, ಕ್ರಾಸು, ಮೇನು ಎಲ್ಲ ಕಲ್ಲಿನಲ್ಲಿ ಕೆತ್ತಿಸಿ ಶಾಶ್ವತವಾಗಿ ಹಾಕಿಸಿರುತ್ತೇವೆ ಅಲ್ಲವಾ? ಅದನ್ನು ನೋಡಿಕೊಂಡ ಯಾರೋ ಕಿಡಿಗೇಡಿ ತಾನು ತಪ್ಪು ಮಾಡಿ ಸಿಕ್ಕಿಹಾಕಿಕೊಂಡಾಗ ಈ ರೀತಿ ವಿಳಾಸಗಳನ್ನು ನೀಡಿ ನಮ್ಮಂತಹವರನ್ನು ತೊಂದರೆಗೆ ಸಿಕ್ಕಿಹಾಕಿಸಿಬಿಡಬಹುದು ಎಂದೆ.
ಆಗ ಆತನು ನನ್ನ ಆಲೋಚನೆಗೆ ಸಹಮತಿ ಸೂಚಿಸಿದ. ಬಿಡಿ ಸರ್ ನೀವು ಅಂತಹವರಲ್ಲ, ಅದೂ ಅಲ್ಲದೆ ನಿಮ್ಮ ವಯಸ್ಸಿಗೂ ದೂರಿನಲ್ಲಿರುವ ವ್ಯಕ್ತಿಯ ವಯಸ್ಸಿಗೂ ಅಜಗಜಾಂತರ ವ್ಯತ್ಯಾಸ ಇದೆ. ಸಲಾಂ ಹೊಡೆದು ಇದು ಯಾವನೋ ತರ್ಲೆ ಗಿರಾಕಿ ಮಾಡಿರೋ ತರ್ಲೆ ಕೆಲ್ಸ ಎನ್ನುತ್ತಾ ಸಾಹೇಬರಿಗೆ ವರದಿ ನೀಡಲು ಹೊರಟುಹೋದ. ಅಲ್ಲಾ, ಇದನ್ನು ನಿಮ್ಮೊಡನೆ ಏತಕ್ಕೆ ಹಂಚಿಕೊಂಡೆ ಎಂದರೆ ನೀವೂ ಸಹ ಹುಷಾರಾಗಿರಿ. ಮೊದಲು ನಿಮ್ಮ ಮನೆಯ ಮುಂದಿನ ಹೆಸರು ವಿಳಾಸದ ವಿವರ ಇರುವ ಫಲಕಗಳನ್ನು ಕಿತ್ತು ಹಾಕಿ. ಅಷ್ಟು ಬೇಕಿದ್ದರೆ ನಿಮ್ಮ ಮನೆಯ ನಾಮವನ್ನು ಮಾತ್ರ ಉಳಿಸಿಕೊಳ್ಳಿ ಮತ್ತು ಇಂತಹ ಅನವಶ್ಯಕ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಎಂದು ತಿಳಿಸಲು ಮಾತ್ರ. *
ಚೆಂದದ ಬರಹ.
ನಿಮ್ಮ ಬರಹದಲ್ಲಿ ಬೇರೆಯವರೂ ಈ ತರ ತೊಂದರೆಯಲ್ಲಿ ಸಿಕ್ಕಿ ಹಾಕಿ ಕೊಳ್ಳುವುದು ಬೇಡ ಎಂದು ತುಂಬಿರುವ ಕಾಳಜಿ ಇಷ್ಟ ಆಯಿತು
ಇಂತಹ ಜನರೂ ಇದ್ದಾರಲ್ಲಾ..!! ಒಳ್ಳೇ ಫಜೀತಿಯಪ್ಪ. ಬೇರೆಯವರಿಗೂ ಎಚ್ಚರಿಕೆ ಸೂಚಿಸುವ ಒಳ್ಳೆಯ ಬರಹ.
ಈ ತರಹದ ವ್ಯಕ್ತಿಗಳೂ ಇದ್ದಾರೆಯೇ…ರಾಮಾ ರಾಮಾ