ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 23

Share Button


ಮಹಾತ್ಮಾ ಗಾಂಧಿ ರಸ್ತೆ ಸೊಬಗು

ಸುಮಾರು 1945ರಲ್ಲಿ ನಿರ್ಮಾಣಗೊಂಡಿದ್ದ ಟಿಬೆಟಿಯನ್ನರ ಬುದ್ಧ ಸ್ತೂಪವನ್ನು ಭೇಟಿ ಮಾಡಿದ ಬಳಿಕ ಗೇಂಗ್ಟೋಕ್ ನಗರದ ಮಧ್ಯ ಭಾಗದಲ್ಲಿರುವ, ಸುಂದರ ವ್ಯಾಪಾರೀ ಕೇಂದ್ರ ಮಹಾತ್ಮಾ ಗಾಂಧಿ ರಸ್ತೆಗೆ ಸಂಜೆ ಸುಮಾರು 6:30ಕ್ಕೆ ಕಾರುಗಳು ತಲಪಿದಾಗ, ಪ್ರವಾಸಿಗರ ದಟ್ಟಣೆಯಿಂದಾಗಿ ಅವುಗಳನ್ನು ಇರಿಸಲು ಸ್ಥಳ ಸಿಗದೆ ಪರದಾಡುವಂತಾಯಿತು. ಅದಾಗಲೇ ಕತ್ತಲು ಕವಿಯಲಾರಂಭಿಸಿತ್ತು. ನಮ್ಮನ್ನು ಮಹಾತ್ಮಾ ಗಾಂಧಿ ರಸ್ತೆಯ ಬಳಿಯಲ್ಲಿ ಇಳಿಸಿ, ವಾಹನಗಳು ಹಿಂತಿರುಗಿದುವು.ಅಲ್ಲಿ ಬೇಕಾದಷ್ಟು ಹೊತ್ತು ಅಡ್ಡಾಡಿ, ಅಲ್ಲಿಗೆ ಹತ್ತಿರದಲ್ಲೇ ಇದ್ದ ಹೋಟೇಲಿಗೆ ನಾವೇ ಹಿಂತಿರುಗಲು ತಿಳಿಸಿದ್ದರು ಬಾಲಣ್ಣನವರು. ನಮ್ಮೊಂದಿಗೆ ಇರುವವರಿಗೆ ದಾರಿ ತಿಳಿದಿರುವ ಬಗ್ಗೆ ಖಾತ್ರಿ ಇರಲಿಲ್ಲ.ನಮಗಂತೂ ಮೊದಲೇ ಗೊತ್ತಿಲ್ಲ! ಆದರೂ ಮೊಂಡು ಧೈರ್ಯದಿಂದ ಸುತ್ತಾಡಲು ಹೊರಟೆವು.

ತುಂಬಾ ಸ್ವಚ್ಛ, ಸುಂದರ, ಅಗಲವಾದ, ಸುಮಾರು ಒಂದು ಕಿ.ಮೀ.ನಷ್ಟು ಉದ್ದಕ್ಕಿರುವ ರಸ್ತೆಯ ಇಕ್ಕೆಲಗಳಲ್ಲಿ ತರಹೇವಾರು ಅಂಗಡಿಗಳು ವಿದ್ಯುದ್ದೀಪಗಳಿಂದ ಝಗಝಗಿಸುತ್ತಿದ್ದರೆ; ರಸ್ತೆಯು ಮಾತ್ರ ಮಂದ ಬೆಳಕಿನಲ್ಲಿ ಕಂಗೊಳಿಸುತ್ತಿತ್ತು.ವಿಶೇಷವೆಂದರೆ, ರಸ್ತೆಯಲ್ಲಿ ವಾಹನ ಸಂಚಾರವಿರಲಿಲ್ಲ.ರಸ್ತೆಯ ಮಧ್ಯ ಭಾಗದಲ್ಲಿ,ಬಣ್ಣ ಬಣ್ಣದ ಹೂಗಳ ಕುಂಡಗಳು ಹಾಗೂ ಅಲ್ಲಿಯೇ ಪ್ರವಾಸಿಗರು ಆರಾಮವಾಗಿ ಕುಳಿತು ಸಮಯ ಕಳೆಯಲು ಕಲ್ಲು ಬೆಂಚುಗಳು.. ಬೀಸುವ ತಂಗಾಳಿ.. ಯಾರಿಗಾದರೂ ಆಲ್ಲೇ ಇದ್ದು ಬಿಡೋಣ ಎನ್ನಿಸದೆ ಇರದು. ಆ ಜಾಗದಲ್ಲಿ ಧೂಮಪಾನ ನಿಷೇಧವಿತ್ತು ಹಾಗೂ ವಾಹನ ಸಂಚಾರವಿಲ್ಲದಿರುವುದರಿಂದ ಹೊಗೆಯಿಲ್ಲದ ಶುದ್ಧವಾದ ಗಾಳಿ,ಮೈ ಮನಸ್ಸನ್ನು ಅಹ್ಲಾದಗೊಳಿಸುವುದರಲ್ಲಿ ಎರಡು ಮಾತಿಲ್ಲ. ಎದುರಿಗೇ ಇದ್ದ ಗಾಂಧೀಜಿಯವರ ಪುತ್ಥಳಿಯೆದುರು ನಿಂತು ಸೆಲ್ಫಿ ತೆಗೆದಾಯ್ತು..ಯಾಕೆಂದರೆ ನಮ್ಮ ಫೋಟೋ ಕ್ಲಿಕ್ಕಿಸುವವರು ಯಾರೂ ಕಾಣಲಿಲ್ಲ.

ಆದರೆ ಇವುಗಳೆಲ್ಲದರ ನಡುವೆಯೂ,ನಾನು ಪೂರ್ತಿ ಸಂತೋಷಪಡುವ ಸ್ಥಿತಿಯಲ್ಲಿರಲಿಲ್ಲ. ಯಾಕೆ ಗೊತ್ತಾ? ಇನ್ನು ಸ್ವಲ್ಪ ಹೊತ್ತಿನಲ್ಲಿ, ಅಂದರೆ ಒಂಭತ್ತು ಗಂಟೆಗೆ ಹೊತ್ತಿಗೆ ತಾಳಮದ್ದಳೆ ಪ್ರಾರಂಭವಾಗುವುದರಲ್ಲಿತ್ತು. ನನ್ನ ಸುಭದ್ರೆ ಪಾತ್ರದ ಮಾತುಗಳು ಮರೆತು ಹೋಗದಂತೆ ಮನನ ಮಾಡಬೇಕಿತ್ತಲ್ಲಾ? ರಸ್ತೆಯಲ್ಲಿ ಸ್ವಲ್ಪ ದೂರ ನಡೆದಾಡಿ, ಒಂದಕ್ಕೆರಡು ಪಟ್ಟು ಬೆಲೆ ಇದ್ದರೂ,ಅಲ್ಲಿಯ ನೆನಪಿಗೋಸ್ಕರ ಖರೀದಿ ನಡೆಸುವಾಗಲೂ ನನ್ನ ಕಣ್ಣೆಲ್ಲ ಗಡಿಯಾರದ ಮೇಲೆ! ಸರಿಯಾಗಿ 7ಗಂಟೆಗೆ ಹೋಟೇಲಿಗೆ ತಲಪುವ ಅರ್ಜೆಂಟ್. ಅದಾಗಲೇ ಕತ್ತಲಾಗುತ್ತಾ ಬಂದಿತ್ತು. ನಾವು ಸ್ವಲ್ಪ ಮಂದಿ ಅಲ್ಲಿಂದ ಹೊರಡಲು ಅನುವಾದೆವು. ವಾಹನ ಹಾಗೂ ಜನದಟ್ಟಣೆಯ ಆ ಜಾಗದಲ್ಲಿ ರಸ್ತೆ ದಾಟಲು ಸ್ವಲ್ಪ ಕಷ್ಟ ಪಡಬೇಕಾಯಿತು. ಅಟೋದಲ್ಲಿ ಇಷ್ಟು ಮಂದಿ ಹೋಗಲು ಸಾಧ್ಯವಿರಲಿಲ್ಲ. ಯಾರೋ ‘ಟಾಕ್ಸಿ ಸಿಗಬಹುದೇನೋ’ ಅಂದರು. ಆದರೆ ಒಂದು ಟ್ಯಾಕ್ಸಿಯೂ ಸಿಗದಿದ್ದುದರಿಂದ ನಾವು ನಜರಾಜ ಸರ್ವೀಸ್ ಮಾಡದೆ ಬೇರೆ ಗತಿ ಇರಲಿಲ್ಲ. ಸರಿ..ದಾರಿ ಮಧ್ಯೆ ಸಿಕ್ಕಿದವರೆಲ್ಲರಲ್ಲೂ ವಿಚಾರಿಸುತ್ತಾ,ಬೀದಿ ದೀಪಗಳು ಇರದ ಕಡೆಯಲ್ಲಿ, ಅರೆ ಕತ್ತಲಲ್ಲಿ ನಡೆದದ್ದೇ ನಡೆದದ್ದು ..ಹೊಸ ಜಾಗದಲ್ಲಿ ದಾರಿ ತಪ್ಪುವ ಸಂಭವವೂ ಇತ್ತು! ಬಾಲಣ್ಣನವರು, ಅಲ್ಲಿಂದ ಹತ್ತಿರದಲ್ಲೇ ಇರುವ ಸ್ಟೇಡಿಯಂನ ಬಳಿ ಇರುವ ನಮ್ಮ ಹೋಟೇಲಿನ ಗುರುತು ಹೇಳಿದ್ದು ನೆನಪಿತ್ತು. ಆದ್ದರಿಂದ ಸ್ಟೇಡಿಯಂನ ಬಗ್ಗೆ ದಾರಿಯಲ್ಲಿ ಸಿಕ್ಕಿದ ಅಂಗಡಿಗಳಲ್ಲಿ ವಿಚಾರಿಸುತ್ತಾ ಎಷ್ಟು ನಡೆದರೂ ಹೋಟೇಲ್ ಸಿಕ್ಕದೆ, ಗಾಬರಿ..! ಆದರೂ “ಧೈರ್ಯಂ ಸರ್ವತ್ರ ಸಾಧನಂ” ಅಲ್ಲವೇ? ಆ ಗಾಬರಿಯಲ್ಲೂ ನಡೆದು ಗುರಿ ಮುಟ್ಟಿದಾಗ,ಎವರೆಸ್ಟ್ ಹತ್ತಿಳಿದ ಅನುಭವ!

ಗಂಟೆ 7:30..ತಾಳಮದ್ದಳೆಗೆ ಸಮಯ ಹತ್ತಿರವಾಗುತ್ತಿತ್ತು.ನನ್ನೆದೆಯಲ್ಲಿ ಅವಲಕ್ಕಿ ಕುಟ್ಟುತ್ತಿತ್ತು.ಒಮ್ಮೆಯಂತೂ ಈ ಸಾಹಸಕ್ಕೆ ಯಾಕಾಗಿ ಕೈ ಹಾಕಿದೆನೋ ಎನ್ನಿಸಿತು. ರಾತ್ರಿ ಊಟಕ್ಕೆ ಇನ್ನೂ ತಡವಿತ್ತು.ಊಟದ ಹಾಲ್ ನಲ್ಲೇ ಪುಟ್ಟ ವೇದಿಕೆ. ಆದರೆ ಭಾಗವತರು ಮತ್ತು ಇತರ ಪಾತ್ರಧಾರಿಗಳಿಗೆ ಕುಳಿತುಕೊಳ್ಳಲು ಅದು ಸಾಕಾದೆಂದು,ಭಾಗವತರಿಗೆ ಮತ್ತು ಚೆಂಡೆಯವರಿಗೆ ಮಾತ್ರ ವೇದಿಕೆ, ಉಳಿದವರು ಸ್ವಲ್ಪ ಎತ್ತರದಲ್ಲಿ ಕುಳಿತರೆ ಹೇಗೆಂದು ಯೋಚಿಸಿ ಊಟದ ಮೇಜುಗಳನ್ನು ಉಪಯೋಗಿಸಲು ತಯಾರಿ ನಡೆಸಿದೆವು.ಆಗಲೇ ಒಬ್ಬರು ಅದರ ಮೇಲೆ ಕುಳಿತುಕೊಳ್ಳತೊಡಗಿದಾಗ..ಇದೇನಾಯ್ತು..? ಮೇಜು ಬೀಳುವಂತಾಯ್ತು! ಸರಿ, ಅಲ್ಲಿದ್ದ ಕುರ್ಚಿಗಳನ್ನೇ ಎದುರು ಬದುರಿಗೆ ಇರಿಸಿ ಅದರಲ್ಲೇ ತೃಪ್ತಿ ಪಡಬೇಕಾಯ್ತೆನ್ನಿ. ಎಲ್ಲಾ ಸಿದ್ಧತೆಗಳೇನೋ ಮುಗಿದರೂ ಸಭಿಕರೆಲ್ಲಾ ಇನ್ನು ಬಂದು ಸೇರಬೇಕಷ್ಟೆ..ಚಪ್ಪಾಳೆ ತಟ್ಟಲು. ಸ್ವಲ್ಪ ಹೊತ್ತು ಕಾಯೋಣ ಅಲ್ವಾ..ಏನ್ಹೇಳ್ತೀರಿ ನೀವು?

(ಮುಂದುವರೆಯುವುದು..)

ಹಿಂದಿನ ಸಂಚಿಕೆ ಇಲ್ಲಿದೆ :ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 22   

-ಶಂಕರಿ ಶರ್ಮ, ಪುತ್ತೂರು.

4 Responses

  1. ಜಯಲಕ್ಷ್ಮಿ ಪಿ ರಾವ್ says:

    ಚೆನ್ನಾಗಿದೆ.

  2. ನಯನ ಬಜಕೂಡ್ಲು says:

    ಪ್ರತಿಯೊಂದು ದೃಶ್ಯವೂ ಕಣ್ಣಿಗೆ ಕಟ್ಟುವಂತಹ ವಿವರಣೆ. ಮದ್ಯೆ ಮದ್ಯೆ ಎಲ್ಲರ ಜೊತೆ ಸೇರಿ ನಡೆಸಿದ ಮೋಜು, ಮಸ್ತಿ. ಎಲ್ಲವೂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: