ಫೇಸ್ಬುಕ್ – ಮುಖಪುಸ್ತಕ ಎಂಬ ಮಾಯಾ ಲೋಕ
ಫೇಸ್ಬುಕ್ ಒಂದು ಅಗಾಧ ಸಾಗರ .ಇಲ್ಲಿ ಬೆಸೆಯುವ ಸ್ನೇಹ ತಂತುಗಳು ನೂರಾರು, ಸಾವಿರಾರು. ಒಳಿತು ಎಷ್ಟಿದೆಯೋ ಅಷ್ಟೇ ಕೆಡುಕು ತುಂಬಿರುವ ಜಾಲತಾಣ. ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ಬಿಡಬೇಕು ಅನ್ನುವ ವಿವೇಚನೆ, ವಿವೇಕ ಇಲ್ಲಿ ನಮ್ಮ ನಮ್ಮ ಮನಸಿಗೆ ಬಿಟ್ಟದ್ದು.
ಇದೊಂದು ಬಣ್ಣ ಬಣ್ಣದ ಪ್ರಪಂಚ. ಒಂದು ರೀತಿಯಲ್ಲಿ ಮುಖವಾಡಗಳಿಂದ ಆವೃತ ಜಗತ್ತು ಎಂದರೂ ತಪ್ಪಿಲ್ಲ. ಒಳ್ಳೆಯತನದ ಸೋಗಲ್ಲಿ ಇನ್ನೊಬ್ಬರ ಒಳಿತನ್ನು ಕಂಡು ಕರುಬುವ ಅವೆಷ್ಟೋ ಮನಸುಗಳಿಲ್ಲಿ ಸಿಗುತ್ತವೆ. ಹಾಗೆಯೇ ಸಮಾನ ಮನಸ್ಥಿತಿ, ಅಭಿರುಚಿ, ವಿಚಾರಗಳನ್ನು ಹೊಂದಿರುವಂತಹ ಸಾಕಷ್ಟು ಮನಸ್ಸುಗಳೂ ಇಲ್ಲಿ ಬೆರೆಯುತ್ತವೆ . ಕೆಲವೊಂದು ಅತೃಪ್ತ ಆತ್ಮಗಳಂತಹ ಮನಸುಗಳು ಬರೀ ಕುಹುಕ, ಕೊಂಕು, ತರ್ಕವಿಲ್ಲದ ವಾದ ವಿವಾದಕ್ಕಾಗಿಯೇ ಕಾದುಕೊಂಡಿರುತ್ತವೆ. ಇಂತಹವರ ಸ್ನೇಹ ತುಂಬಾ ದೂರದವರೆಗೆ ಉಳಿಯುವುದಿಲ್ಲ.
ಇಲ್ಲಿ ಕವಿತೆ, ಕಥಾಲೋಕ, ಲೇಖನ, ಪ್ರಬಂಧ, ಹಾಸ್ಯಲೇಖನ, ಪ್ರವಾಸ ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಮೇಲುಗೈ ಸಾಧಿಸಿದವರ ಪರಿಚಯ ಬಹಳ ಅಪ್ಯಾಯಮಾನ. ದೊಡ್ಡ ದೊಡ್ಡ ಸಾಹಿತಿಗಳು ಇಲ್ಲಿ ಸಾಮಾನ್ಯರಂತೆ ಹಮ್ಮು , ಅಹಂಭಾವವಿಲ್ಲದೆ ಎಲ್ಲರೊಂದಿಗೆ ಬೆರೆಯುವ ರೀತಿ ಅದ್ಭುತ .
ಇವತ್ತಿನ ಬಿಡುವಿಲ್ಲದ ದಿನಗಳಲ್ಲಿ ಈ ಫೇಸ್ಬುಕ್ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳನ್ನು ದೂರ ದೂರದಲ್ಲಿದ್ದರೂ ಇಷ್ಟರ ಮಟ್ಟಿಗಾದರೂ ಬೆಸೆಯುತ್ತದೆ ಅನ್ನುವುದು ಸಂತಸದ ವಿಚಾರ.ಈ ಮುಖ ಪುಸ್ತಕಕ್ಕೆ ಊರು, ನಾಡು, ರಾಜ್ಯ, ದೇಶಗಳ ಗಡಿಯ ಹಂಗಿಲ್ಲ. ಸಾಗರದಾಚೆಯ ಮನಸುಗಳೂ ಇಲ್ಲಿ ಒಳ್ಳೆಯ ವಿಚಾರಗಳಿಗೆ ಸ್ಪಂದಿಸುವ, ಸ್ನೇಹ ಹಸ್ತ ಚಾಚುವ, ರೀತಿ ಅಚ್ಚರಿ, ಅದ್ಭುತ, ಹಾಗು ಸಂತಸವನ್ನುಂಟು ಮಾಡುವಂತದ್ದು.
ಇಲ್ಲಿ ಒಳ್ಳೆಯ ವಿಷಯ , ವಿಚಾರಗಳಿಗೆ ಸ್ಪಂದಿಸುವ ಒಳ್ಳೆಯ ಮನಸಷ್ಟೇ ಮುಖ್ಯ ಹೊರತು ಬೇರೇನೂ ಅಲ್ಲ. ಈ ಮುಕ್ತ ವಾತಾವರಣ ಹೊಸ ವಿಚಾರಗಳನ್ನು ಅರಿಯಲು ಒಂದು ವೇದಿಕೆಯೂ ಹೌದು, ಹಂತ ಹಂತವಾಗಿ ಬೆಸೆಯುವ ಸುಂದರ ಸ್ನೇಹಕ್ಕೆ ಬುನಾದಿಯೂ ಹೌದು. ಅಂಗೈಯ್ಯಗಲ ಪೆಟ್ಟಿಗೆಯೊಳಗೆ ಒಂದು ಸುಂದರ ಸ್ನೇಹ ಪ್ರಪಂಚ.
ಕೆಟ್ಟ ನಡತೆ, ಅನಗತ್ಯ ವಾದ ವಿವಾದಗಳಿಗಷ್ಟೇ ಹೊಂಚು ಹಾಕೋ ಕೆಟ್ಟ ಅಭಿರುಚಿಯ ವ್ಯಕ್ತಿಗಳೂ ಇಲ್ಲಿ ಸಿಗುತ್ತಾರೆ, ಅಂತಹ ವ್ಯಕ್ತಿತ್ವಗಳಿಗೆಲ್ಲಾ ಬ್ಲಾಕ್ ಅನ್ನೋದು ಒಂದೇ ಮದ್ದು ಇಲ್ಲಿ. ಕೆಲವರಿಗೆ ಇನ್ನೊಂದು ಚಾಳಿ , ಫ್ರೆಂಡ್ ಆಗಿ ಇದ್ರೆ ಸಾಲದು , ಅಲ್ಲಿಂದಲೂ ಮುಂದುವರೆದು ಮೊಬೈಲ್ ನಂಬರ್ ಕೇಳೋ ಚಟ , ಆಮೇಲೆ ಬೇರೆ ಬೇರೆ ರೀತಿಯಲ್ಲಿ ಟಾರ್ಚರ್ ಕೊಡುವ ಉದ್ದೇಶ .ಇಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಅಪರಿಚಿತರಿಗೆ ಪರ್ಸನಲ್ ಫೋನ್ ನಂಬರ್ ಕೊಡುವಾಗ ಬಹಳಷ್ಟು ಯೋಚನೆ ಮಾಡಬೇಕು.
ಫೇಸ್ಬುಕ್ ಪ್ರಪಂಚದಲ್ಲಿ ಎಷ್ಟೇ ಸ್ನೇಹವಿರಲಿ ಅಲ್ಲಿನ ವಿಚಾರಗಳು ಆದಷ್ಟು ಸಂಸಾರದಲ್ಲಿ ಗಂಡ-ಹೆಂಡತಿ, ಮಕ್ಕಳು-ಹೆತ್ತವರು ಇವರ ನಡುವೆ ಎಲ್ಲವೂ ಗೊತ್ತಿರುವ ರೀತಿಯಲ್ಲಿ ಮುಕ್ತವಾಗಿ ಇದ್ದರೆ ಯಾವುದೇ ಸಮಸ್ಯೆಗಳಿಗೆ ಅವಕಾಶವಿಲ್ಲ . ಗೌಪ್ಯವಾಗಿದ್ದಾಗ ಮಾತ್ರ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು, ಸಮಸ್ಯೆಗಳು ಉದ್ಭವಿಸುವುದು. ಪರಸ್ಪರ ನಂಬಿಕೆಯಿಂದ ವಿಚಾರಗಳು ಗೊತ್ತಿದ್ದಲ್ಲಿ ಸಮಸ್ಯೆ ಬಂದರೂ ಜೊತೆಯವರು ಅದನ್ನು ಪರಿಹರಿಸಲು ನೆರವಾಗುತ್ತಾರೆ, ಜೊತೆಯಾಗುತ್ತಾರೆ . ಹೀಗೆ ಇದ್ದಾಗ ಮಾತ್ರ ಮುಖ ಪುಸ್ತಕವೆಂಬ ಮಾಯಾ ಲೋಕ ಸುಂದರವಾಗಿ ಕಾಣುವುದು.
.
– ನಯನ ಬಜಕೂಡ್ಲು
ಬಹಳ ಚೆನ್ನಾಗಿ ಬಂದಿದೆ. ಸದ್ಯದ ಸಮಾಜಕ್ಕೆ ಅತೀ ಅಗತ್ಯ ಅರಿವು. ಈ ಮಾಯಾಲೋಕ ಸಮಸ್ಯೆಗೆ ನಾಂದಿ ಆಗಬಾರದು
ಉತ್ತಮ ಲೇಖನ. ಇಂದಿನ ಜಗತ್ತಿಗೆ ಇದರ ಅರಿವು ಬಹಳ ಮುಖ್ಯ. ಈ ಮಾಯಾಲೋಕ ಸಮಸ್ಯೆಗೆ ನಾಂದಿಯಾಗಬಾರದು
ಹೌದು . ಧನ್ಯವಾದಗಳು
ಸಾಮಾಜಿಕ ಜಾಲತಾಣಗಳ ಬಳಕೆ ಮಿತಿಯಲ್ಲಿದ್ದು ಸರಿಯಾದ ರೀತಿಯಲ್ಲಿ ಬಳಕೆಯಾದರಷ್ಟೇ ಒಳಿತು..ಚೆನ್ನಾಗಿ ಹೇಳಿದ್ದೀರಿ ಮೇಡಮ್
ನಿಜ ಧನ್ಯವಾದಗಳು ಮೇಡಂ
ಚೆಂದದ ಬರಹ..ನಿಜ ಫೇಸ್ ಬುಕ್ ನಮ್ಮನ್ನು ವಶೀಕರಣ ಮಾಡಿದಂತೆ ಸೆಳೆಯುತ್ತದೆ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು
ಹೌದು ಹೇಮಕ್ಕ . Thank you
ಒಳ್ಳೆಯ ಲೇಖನ ಎಂಬುದು ಸತ್ಯ.
ಯಾವ ಹವ್ಯಾಸವಾದರೂ ಅತಿಯಾದರೆ ಕೇಡು ಎನ್ನುವಂತೆ ವಾಟ್ಸಪ್, ಫೇಸ್ಬುಕ್ ಯಾದಿ ಎಲ್ಲವೂ ಒಂದು ನಿಯಮ ಬದ್ಧತೆ ಆರೋಗ್ಯಕರ.ಇಂದಿನ ಜನರ ಬಹುತೇಕ ಸಮಯವು ಪೋಲಾಗುವುದು ಇಲ್ಲಿಯೇ.
ನಿಜ ನಿಮ್ಮ ಮಾತು .ಧನ್ಯವಾದಗಳು ಮೇಡಂ
ಚೆನ್ನಾಗಿದೆ ಬರಹ
ಈ ಮಾಯೆಯ ಬಲೆಗೆ ಸಿಲುಕಿ ನರಳಿದವರು ಅದೆಷ್ಟೋ ಮಂದಿ, ಅದರಿಂದ ಬಿಡಿಸಿಕೊಳ್ಳಲು ಒದ್ದಾಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿರುವುದು ಸತ್ಯ. ಅದರ ಅರಿವು ಎಲ್ಲರಿಗೂ ಮೂಡಬೇಕಾಗಿದೆ. ಸಕಾಲಿಕ ಲೇಖನ. ನಯನ ಮೇಡಂ, ಧನ್ಯವಾದಗಳು.
ಒಳ್ಳೆಯ ಲೇಖನ ಮೇಡಂ