ಮನುಷ್ಯತ್ವದ ಪಾಠ
ಕಣ್ಣಮುಂದೊಂದು ಹೆಣ್ಣು
ಮಗು ಜನ್ಮತಳೆದಿದೆ
ನೆರೆಮನೆಯಲ್ಲೊಂದಿಷ್ಟು ಮುಗ್ಧೆಯರು
ಬೆಳೆಯುತ್ತಿದ್ದಾರೆ
ಮಾನವ ಕುಲದ ಅಳಿವು ಇವರಿಂದ
ಎಂದು ಖುಷಿಪಡಬೇಕೋ?
ಅಥವಾ ಹೆಣ್ಣು ಸಂತತಿಯ ಅಳಿವಿಗೆ
ಕಾರಣರಾದ ಕ್ರೂರಿಗಳ ನಡುವೆ
ಜನಿಸಿದರೆಂದು ಭಯಪಡಬೇಕೋ?
ಒಂದೂ ತಿಳಿಯದೇ ಮನ ಕಕ್ಕಾಬಿಕ್ಕಿಯಾಗಿದೆ
ಮನೆಯ ನಂದಾ ದೀಪ,
ದೀಪಬೆಳಗಲೆಂದು
ಬತ್ತಿಯಂತೆ ಅಚ್ಚ ಬಿಳುಪಿನ
ಜೀವನ ಕೊಟ್ಟು ಬೆಳೆಸಿದ ಮಗಳು
ಕ್ರೂರಿಗಳ ಅಟ್ಟಹಾಸಕ್ಕೆ ನಲುಗಿ ನಂದಿಹೋಗಿದೆ
ಭಸ್ಮವಾಗಿದ್ದನ್ನು ನೋಡಿ ಆನಂದಿಸುವ
ಕ್ರೂರಿಗಳ ದೇಹವಾದರೂ
ಆ ಜ್ವಾಲೆಯ ಉರಿಗೆ
ಅಲ್ಲೇ ಉರಿದು ಭಸ್ಮವಾಗಬಾರದಿತ್ತೇ?
`ಹೆಣ್ಣು ಭ್ರೂಣ ಹತ್ಯೆ ನಿಷೇಧ’ ಕಾಯ್ದೆಯ
ಬದಲು,`ಅತ್ಯಾಚಾರಿಗಳ ಹತ್ಯೆ’ಎಂಬ
ಅಶರೀರವಾಣಿಯಾದರೂ ನುಡಿಯಬಾರದೇ?
ಮಾನವರಾಗಿಸುವದಕ್ಕೂ ಮುನ್ನ
ಮನುಷ್ಯತ್ವ ಪಾಠವನ್ನೂ
ದೇವ ಮಾಡಿ ಕಳಿಸಬೇಕೇ ಇನ್ನೂ?
– ಬೀನಾ ಶಿವಪ್ರಸಾದ
ಹೃದಯಸ್ಪರ್ಶಿ ಕವನ. ಮನುಷ್ಯನ ರಾಕ್ಷಸ ಪ್ರವೃತ್ತಿಗೆ ಕೊನೆಯೇ ಇಲ್ವಾ ಅನ್ನೋ ಪ್ರಶ್ನೆ ಮನದಲ್ಲಿ ಹಾದು ಹೋಗುತ್ತದೆ .
ತಂಗಿ ಕವನ ತುಂಬಾ ಚೆನ್ನಾಗಿದೆ ಭಾಷೆಯ ಮೇಲಿ ಹಿಢಿತ appreciable .ಶುಭಾಸಯಗಳು
ಸಮಾಜದ ಕ್ರೂರತೆಯ ಮಗ್ಗುಲನ್ನು ಚೆನ್ನಾಗಿ ಚಿತ್ರಿಸಿರುವಿರಿ.