ನೆನಪಿನ ಹೆಜ್ಜೆಗೆ ಗೆಜ್ಜೆಯ ಕಟ್ಟಿ..
ಬರವಣಿಗೆಯ ಬಗ್ಗೆ ಅತೀವ ಆಸಕ್ತಿಯನ್ನೂ, ಮುಗಿಯದ ಕುತೂಹಲವನ್ನೂ, ಜೊತೆಗೆ ಅವುಗಳ ಕುರಿತಾದ ಅನೇಕ ಶಂಕೆಯನ್ನು ಇಟ್ಟಿಕೊಂಡು ನಾನೇನು ಬರೆಯಲಾರೆ ಅನ್ನುತ್ತಲೇ ಈಗಾಗಲೇ ಅಕ್ಷರದ ಪಯಣದಲ್ಲಿ ರಹದಾರಿಯನ್ನು ಕ್ರಮಿಸಿರುವಾಕೆ ಸುನೀತ ಕುಶಾಲನಗರ. ಕತೆ, ಕವಿತೆ,ಪ್ರಬಂಧ, ಅನುವಾದ ಎಲ್ಲದ್ದಕ್ಕೂ ಸೈ ಎನ್ನುತ್ತಲೇ ಅವುಗಳೆಲ್ಲದರೊಂದಿಗೆ ಏಕಕಾಲದಲ್ಲಿ ತೊಡಗಿಸಿಕೊಳ್ಳುತ್ತಾ, ನಾನಿನ್ನೂ ಕಲಿಯುವುದು ಸಾಕಷ್ಟಿದೆ ಅನ್ನುವ ವಿಧೇಯತನದಿಂದಲೂ ತುಸು ಸಂಕೋಚದಿಂದಲೂ ಎಲೆ ಮರೆಯಲ್ಲೇ ಉಳಿಯುತ್ತಾ ತನ್ನ ಪಾಡಿಗೆ ತಾನು ಬರೆಯುತ್ತಿರುವ ಸುನೀತ ಕೊಡಗಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ನಾಲ್ಕು ಪುಸ್ತಕಗಳನ್ನು ಹೊರತಂದಿರುವ ಇವರ ಇತ್ತೀಚಿಗಿನ ಪುಸ್ತಕ ’ನೆನಪಿನ ಹೆಜ್ಜೆಗೆ ಗೆಜ್ಜೆಯ ಕಟ್ಟಿ’ ಅನ್ನುವ ಲಲಿತ ಪ್ರಬಂಧಗಳ ಸಂಕಲನ.
ನಮಗೆ ನೆನಪುಗಳಿಗೆ ಬರವಿಲ್ಲ. ಮತ್ತು ಅವುಗಳಿಗೆ ಸಾವು ಕೂಡ ಇಲ್ಲ. ಸಿಹಿಯೋ ಕಹಿಯೋ ನೆನಪಿನ ಜೋಳಿಗೆಯಲ್ಲಿ ತುಂಬಿ ಒಸರಿಕೊಂಡೇ ಇರುತ್ತದೆ. ಅದರಲ್ಲೂ ಬಾಲ್ಯವೆಂಬುದು ನೆನಪುಗಳ ಖಜಾನೆ. ನಮ್ಮ ಇಡೀ ವ್ಯಕ್ತಿತ್ವವನ್ನು ರೂಪಿಸುವುದೇ ನಮಗೆ ದಕ್ಕಿದ ಬಾಲ್ಯ. ಇಲ್ಲಿ ಲೇಖಕಿ ತಮ್ಮ ಪ್ರಬಂಧಗಳಲ್ಲಿ ಪದೇ ಪದೇ ಬಾಲ್ಯಕ್ಕೆ ಹೊರಳಿಕೊಳ್ಳುತ್ತಾರೆ. ಬಾಲ್ಯ ದಾಟಿ ಒಂದು ಕಾಲಘಟ್ಟಕ್ಕೆ ಬಂದು ನಿಂತಾಗ ಹಿಂದಿನ ಅನೇಕ ಅನುಭವಗಳು ಚಿತ್ತ ಭಿತ್ತಿಯಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತದೆ. ಅದನ್ನು ಸೃಜನಶೀಲವಾಗಿ ಹೊರಹಾಕುವುದು ಕೂಡ ಒಂದು ಕಲೆಗಾರಿಕೆ.
25 ಪ್ರಬಂಧಗಳನ್ನು ಒಳಗೊಂಡ ಈ ಸಂಕಲನದುದ್ದಕ್ಕೂ ಮುದಗೊಳಿಸುವ ಬೆಚ್ಚಿ ,ಬೀಳಿಸುವ, ಅರಿವಿಲ್ಲದೆಯೇ ತುಟಿಯಂಚಿನಲ್ಲಿ ಕಿರುನಗೆಯೊಂದನ್ನು ಹಾಯಿಸುವ ನವಿರು ಸಂಗತಿಗಳಿವೆ. ಹೇಳ ಬೇಕಾದುದ್ದನ್ನು ನಿರ್ಭಿಡೆಯಿಂದ ಹೇಳುವುದು ಲೇಖಕಿಗೆ ಸಿದ್ಧಿಸಿದೆ. ಇಲ್ಲಿ ಬರುವ ಎಲ್ಲಾ ಬರಹಗಳಲ್ಲೂ ಕೂಡ ಜೀವಂತಿಕೆ ಇದೆ. ಪ್ರಾಮಾಣಿಕವಾದ ಅಭಿವ್ಯಕ್ತಿಯಿದೆ. ಸ್ವತ: ತಾನೊಬ್ಬಳು ಕವಿ ಮತ್ತು ಕತೆಗಾರ್ತಿ ಆದಕಾರಣವೇ ಅವರ ಬರಹಗಳಲ್ಲಿ ಕಥನಗಾರಿಕೆಯ ಛಾಪು ಮತ್ತು ಕವಿತೆಯ ನಾದ ಎರಡು ಮೇಳೈಸಿ ಬರಹಗಳಿಗೆ ಹೊಸತೊಂದು ಸೊಗಸು ಪ್ರಾಪ್ತವಾಗಿದೆ. ಹೆಚ್ಚಿನ ಬರಹಗಳು ಕತೆಯ ಜಾಡಿನಲ್ಲಿ ಸಾಗುತ್ತಾ ಏಕಾಏಕಿ ಪ್ರಬಂಧದ ಬಯಲಿಗೆ ಜಿಗಿದಂತೆ ಭಾಸವಾಗುತ್ತದೆ. ಬಾಲ್ಯದಲ್ಲಿ ತಾನು ಕಂಡ ಕನಸು, ಅನುಭವಿಸಿದ ನೋವು, ಪಟ್ಟ ಕಷ್ಟ ಯಾವುದನ್ನೂ ಮುಜುಗರವಿಲ್ಲದೆ ಹೇಳುತ್ತಾ, ಎಲ್ಲವನ್ನು ಹೇಳಿ ಹಗುರವಾಗುವುದೇ ಬರಹದ ಉದ್ದೇಶ ಅನ್ನುವ ರೀತಿಯಲ್ಲಿ ಬರೆಯುತ್ತಾರೆ. ಅದು ಗೆಜ್ಜೆ ನಾದದಂತೆ ನಮ್ಮನ್ನು ಆವರಿಸುವುದರಲ್ಲಿ ಇಲ್ಲಿನ ಬರಹಗಳು ಸಫಲವಾಗಿದೆ. ಸುನೀತಾರವರ ಬರಹ ಹಾದಿಗೆ ಯಶಸ್ಸು ದಕ್ಕಲಿ.
-ಸ್ಮಿತಾ ಅಮೃತರಾಜ್. ಸಂಪಾಜೆ.
Suneetharavara maganendhu helikollalu hemme annisuthidhe❤
ಹೆಮ್ಮೆಎನಿಸುತ್ತಿದೆ ನನ್ನ ಸಹಪಾಠಿಯೊಬ್ಬಳ ಸಾಹಿತ್ಯ ಬೆಳವಣಿಗೆ.. ಹೌದು ಬಾಲ್ಯದ ನೋವುಗಳ ಬದುಕಿನ ಹಾದಿಯಲ್ಲಿ ಮನಸ್ಸು ಪಯಣಿಸಿದಾಗ ಮರುಕಳಿಸಿದ ನೆನಪುಗಳು ಅಕ್ಷರ ರೂಪದಲ್ಲಿ ಓದುಗರ ಮನಮುಟ್ಟುವ ರೀತಿಯಲ್ಲಿ ಇವರ ಬರವಣಿಗೆ ನಿಜಕ್ಕೂ ಕೊಡಗಿನ ಸಾಹಿತ್ಯ ಕ್ರಷೀಗೆ ಹೊಸ ರೂಪ ಕೊಡಲಿದೆ.. ಭರವಸೆ ಈ ಕವಿಯತ್ರಿಗೆ “ನಾ ಕನ್ನಡಿಗ” ನ ಮನದಾಳದ ಅಭಿನಂದನೆಗಳು
ಪುಸ್ತಕವನ್ನು ಪರಿಚಯಿಸುವ ನಿಮ್ಮ ಶೈಲಿ ಚಂದ.
ಪುಸ್ತಕ ಪರಿಚಯ, ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ.
ಕಥನಗಾರಿಕೆಯ ಛಾಪು ,ಕವಿತೆಯ ನಾದ ಮೇಳೈಸಿದೆ ಎಂಬ ಸಾಲು ಲಲಿತ ಪ್ರಬಂಧಗಳ ದಿಕ್ಕನ್ನು ಸೂಚಿಸುತ್ತದೆ. ಸ್ಮಿತಾ ಅವರು ಲೇಖಕರ ಅಕ್ಷರದ ನಾಡಿ ಹಿಡಿಯಬಲ್ಲರು…
ಪುಸ್ತಕ ಪರಿಚಯದ ಜೊತೆಗೆ ಲೇಖಕಿಯ ವ್ಯಕ್ತಿತ್ವವನ್ನು ಪರಿಚಯಿಸಿದ ರೀತಿಯೂ ಇಷ್ಟವಾಯಿತು .
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಋಣಿ.
ಸುರಹೊನ್ನೆ ಕೊಡುತ್ತಿರುವ ಪ್ರೋತ್ಸಾಹ ದೊಡ್ದದು