ತವರೆಂಬ ಸೆಳೆತ

Share Button

 

‘ಕೊಟ್ಟ ಹೆಣ್ಣು ಕುಲದಿಂದ ಹೊರಗೆ’  ಎಂಬುದೊಂದು ಎಲ್ಲೆಡೆ ಪ್ರಚಲಿತದಲ್ಲಿರುವ ಮಾತು . ಇದರ ಅರ್ಥ ಮದುವೆಯಾಗಿ ಇನ್ನೊಂದು ಮನೆ ಸೇರಿದ ಹೆಣ್ಣಿಗೆ ಗಂಡನ ಮನೆಯೇ ಶಾಶ್ವತವಾದ  ಮನೆ, ಹುಟ್ಟಿ ಬೆಳೆದ ತವರಲ್ಲ  ಎಂದು. ಈ ಸತ್ಯವನ್ನು ಪ್ರತಿಯೊಬ್ಬ ಹೆತ್ತವರು ತಮ್ಮ ಮುದ್ದಿನ ಕಣ್ಮಣಿಯ  ತಲೆಯಲ್ಲಿ ಹಂತ ಹಂತವಾಗಿ ಬೆಳೆಯುತ್ತಿರುವಾಗಲೇ ತುಂಬುತ್ತಿರುತ್ತಾರೆ. ಹಾಗಾಗಿ ಅವಳು ಈ ಸತ್ಯವನ್ನು ಅರಗಿಸಿಕೊಂಡಿರುತ್ತಾಳೆ .

ಮಗಳೆಂಬ ಆಪ್ತ ಜೀವವನ್ನು ಮದುವೆ ಮಾಡಿ ಕೊಟ್ಟೊಡನೆ  ಹೆತ್ತವರು ಮತ್ತು ಒಡಹುಟ್ಟಿದವರೊಂದಿಗಿನ  ಕರುಳಿನ  ಸಂಬಂಧ  ಯಾವತ್ತೂ ಕಡಿದು ಹೋಗುವುದಿಲ್ಲ . ಹೆಣ್ಣು ಸಂಸಾರದ ಕಣ್ಣು ಅನ್ನುವ ಮಾತಿನಂತೆ ಹೆಣ್ಣು ಹುಟ್ಟಿದ ಮನೆ ಹಾಗೂ ಹೊಕ್ಕ ಮನೆ ಎರಡೂ ಕಡೆಯೂ ಶ್ರೇಯಸ್ಸನ್ನು  ತರುವವಳು. ಒಂದು ಹೆಣ್ಣಿಗಿರುವ  ಜವಾಬ್ದಾರಿ ಏನೂ ಕಡಿಮೆ ಅಲ್ಲ . ಮನೆ, ಸಂಸಾರವನ್ನು  ನಿಭಾಯಿಸುವುದು   ಸುಲಭದ ಕೆಲಸವೂ ಅಲ್ಲ .

ಮದುವೆಗೆ ಮೊದಲು ಹೆಣ್ಣು ತನ್ನ ತವರಲ್ಲಿ ರಾಜಕುಮಾರಿ. ಮದುವೆಯಾದ ನಂತರ ತನ್ನಿಂದ ತಾನೇ ಹೊಕ್ಕ ಮನೆಯ ಎಲ್ಲಾ ಜವಾಬ್ಧಾರಿಗಳನ್ನು ನಿಭಾಯಿಸೋ ಧೀರೆ , ಗಂಭೀರೆ . ಮದುವೆಯಾಗುತಿದ್ದ  ಹಾಗೆಯೇ ಅವಳ ತುಂಟಾಟಗಳೆಲ್ಲ  ಮಾಯವಾಗಿ ಅದು ಹೇಗೆ ಸಾಂಸಾರಿಕ ಜೀವನಕ್ಕೆ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತಾಳೋ  ಆ ದೇವನೇ ಬಲ್ಲ. ತುಂಟಾಟದ ಜಾಗದಲ್ಲಿ ಗಾಂಭೀರ್ಯ ಮನೆ ಮಾಡುತ್ತದೆ . ಗಂಡ , ಮನೆ , ಮಕ್ಕಳು, ಅತ್ತೆ ಮಾವನ ಸೇವೆ , ಗಂಡನ ಅಕ್ಕ ,ತಂಗಿ ,ತಮ್ಮಂದಿರನ್ನು ಆಧರಿಸುವುದು ಹೀಗೆ ಜವಾಬ್ಧಾರಿಗೋ ಹಲವಾರು ಮುಖ.

PC: Internet, oil on canvas painted by artistelayarajamo:+919841170866

ಸಂಸಾರ ಜಂಜಡಲ್ಲಿ  ಮುಳುಗೇಳುವ  ಮಗಳು ತವರಿಗೆ ಬಂದಾಗ ಪ್ರೀತಿ , ವಾತ್ಸಲ್ಯದಿಂದ ಆಧರಿಸುವುದು ಆ ಮನೆಯ ಅಣ್ಣ ತಮ್ಮಂದಿರ ಕರ್ತವ್ಯ. ಗಂಡನ ಮನೆ ಎಷ್ಟೇ ಶ್ರೀಮಂತಿಕೆಯಿಂದ ಕೂಡಿದ್ದರು ಕೂಡ, ಗುಡಿಸಲಾಗಿದ್ದರೂ ತವರೇ ಹೆಣ್ಣಿಗೆ ಪ್ರೀತಿ. ಅರಮನೆಯಂತಹ  ಗಂಡನ ಮನೆ ಇದ್ದರೂ ಹೆಣ್ಣಿನ ಮನಸಿಗೆ ನೆಮ್ಮದಿ ನೀಡುವ ತಾಣ ತವರು.

ಹೆಣ್ಣು ಬಯಸೋ ತವರಲ್ಲಿ ಅಪ್ಪ ಅಮ್ಮನ ಮಮತೆ, ಅಣ್ಣ ತಮ್ಮಂದಿರ ಅಕ್ಕರೆ, ವಾತ್ಸಲ್ಯ , ಬಾಲ್ಯದ ಸುಂದರ ಆಟ, ಹುಡುಗಾಟದ ನೆನಪಿನ ಖಜಾನೆ, ಅಪ್ಪನ ಮನೆ ಎಂಬ ಆಪ್ತತೆ, ಅಣ್ಣ ತಮ್ಮಂದಿರಿಗೆ ಮದುವೆಯಾಗಿದ್ದಲ್ಲಿ ಆ ಅತ್ತಿಗೆ, ನಾದಿನಿಯರ ಪ್ರೀತಿ, ವಿಶ್ವಾಸ, ಆದರ, ಸಂತೋಷ ಎಲ್ಲವೂ ಅಡಗಿದೆ. ಆದರೆ……….ಇವೆಲ್ಲವೂ ಸಾಧ್ಯ ಯಾವಾಗ ಎಂದರೆ … ಆ ಮನೆ ಮಗಳೂ ಕೂಡ ಆಸ್ತಿ ಅಂತಸ್ತಿನ ಹಮ್ಮು ತೊರೆದು , ಆಸ್ತಿ ಪಾಸ್ತಿಗೆ ಕಿತ್ತಾಡದೆ, ತನ್ನ ಪಾಲಿಗೆ ಬಂದುದನ್ನು  ಬಂದಂತೆ ಸ್ವೀಕರಿಸುತ್ತಾ , ಅಣ್ಣ ತಮ್ಮಂದಿರು, ಅತ್ತಿಗೆ ನಾದಿನಿಯರ ಜೊತೆ ನವಿರಾದ ಅನುಬಂಧ ಬೆಳೆಸಿಕೊಂಡು ಸಾಗಿದಾಗ ಮಾತ್ರ. ಇದರ ಹೊರತಾಗಿ ಮನೆ ಮಗಳು ದುರಾಸೆ, ಲೋಭ, ಇನ್ನೊಬ್ಬರ ಮೇಲೆ ಹಕ್ಕು ಚಲಾವಣೆ ಮಾಡುವಂತಹ ಬುದ್ದಿಯ ಕೈ ವಶವಾದಲ್ಲಿ  ಆ ಸಂಸಾರದಲ್ಲಿ ಕೋಪ, ದ್ವೇಷ, ಆಸ್ತಿಯ  ಸಲುವಾಗಿ ಹೋರಾಟ , ಹೊಡೆದಾಟವನ್ನಷ್ಟೇ ಕಾಣಬಹುದು. ಕೆಲವೊಮ್ಮೆ ಈ ಕಾರಣಗಳ ಹೊರತಾಗಿಯೂ ಕೆಲವೊಂದು ಬೇರೆ ಪರಿಸ್ಥಿತಿಗಳಿಂದಾಗಿಯೂ ತವರು ಹೆಣ್ಣಿನ ಪಾಲಿಗೆ ಮರೀಚಿಕೆಯಾಗುವುದು ಇದೆ. ಇದನ್ನು ಹಣೆಬರಹ , ವಿಧಿಯಾಟ  ಎಂದಷ್ಟೇ ಹೇಳಬಹುದು.

 “ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ”  ಎಂದು ತವರನ್ನು ನೆನೆಯುವ ಹೆಣ್ಣು ಮಕ್ಕಳಂತೆ, “ಕುದುರೇನ ತಂದಿವ್ನಿ  ಜೀನಾವ ಬಿಡಿಸಿವ್ನಿ ಬರಬೇಕು ತಂಗಿ ಮದುವೇಗೇ”  ಅಂತ ತವರಿಗೆ ಸಹೋದರಿಯನ್ನು ಆದರದಿಂದ  ಕರೆಯೋ ಸಹೋದರ ಮನಸುಗಳೂ ನಮ್ಮ ನಡುವೆ ಸಾಕಷ್ಟು ಇದ್ದಾವೆ. ಈ ಸಂಬಂಧಗಳ ಸೊಗಡನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮನೋಭಾವ ಎಲ್ಲರಲ್ಲೂ ಮೂಡಲಿ ಅನ್ನುವ ಆಶಯ .

“ತವರೆಂಬ ಸೆಳೆತ,
ಹೆಣ್ಣಿನ ಹೃದಯವ ಮೀಟುವ
ಮಧುರ ಸಂಗೀತ,
ಹಲವು ಭಾವಗಳ ಮಿಳಿತ,
ಆಗದೇನೋ ಹೆಣ್ಣು ಎಂಬ ಜೀವಕ್ಕೆ
ಬೇರಾವುದೂ
ಈ ತವರಿನಂತೆ  ಆಪ್ತ “.

 –  ನಯನ ಬಜಕೂಡ್ಲು

14 Responses

  1. Krishnaprabha says:

    ತವರುಮನೆಯವರ ಪ್ರೀತಿ ಮತ್ತು ಗಂಡನ ಮನೆಯವರ ಪ್ರೀತಿ ಎರಡೂ ಮೇಳೈಸಿದರೆ, ಹೆಣ್ಣಿಗೆ ಅದಕ್ಕಿಂತ ಜಾಸ್ತಿ ಭಾಗ್ಯ ಬೇರೆ ಬೇಕೆ?

  2. ASHA nooji says:

    ಚಂದದ ಬರಹ ತವರನ್ನು ಚೆನ್ನಾಗಿ ಬಣ್ಣಿಸಿರುವಿರಿ,

  3. ಹರ್ಷಿತಾ says:

    ಹೆಣ್ಣಿನ ಜೀವನದ ವಿವಿಧ ಹಂತಗಳನ್ನು ಬಹಳ ಸುಂದರವಾಗಿ ವಿಶ್ಲೇಷಿಸಿದ್ದೀರಿ…ಸುಂದರ ಬರಹ ಮೇಡಮ್

  4. km vasundhara says:

    ‘ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ..’ ಕವಿ ಕೆ ಎಸ್ ನ ರ ಕವನ ನೆನಪಾಯ್ತು… ಹೆಣ್ಣು ಮಕ್ಕಳಿಗೆ ತವರೆಂದರೆ ಸದಾ ಕಾಡುವ ಒಂದು ಭಾವವೇ ಸರಿ…

  5. Shankari Sharma says:

    ದ್ವಿಗೃಹಗಳಲ್ಲಿ ರಂಜಿಸಬೇಕಾದ ಹೆಣ್ಣಿನ ಬಾಳು ತುಂಬಾ ವಿಚಿತ್ರ.. ಆದರೂ ಸತ್ಯ! ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆಯಿದ್ದರೆ ಅವಳು ಗೆದ್ದಂತೆ. ಚಂದದ ಸಾಂದರ್ಭಿಕ ಲೇಖನ ನಯನಾ ಮೇಡಂ.

  6. K Vishwanatha says:

    ನಮ್ಮ ತಾಯಿಗೆ ಖಾಸ ಅಣ್ಣ ತಮ್ಮಂದಿರಿಲ್ಲ! ದೊಡ್ಡಮ್ಮನ ಮಗ ಅಣ್ಣ ಇರುವುದಷ್ಟೆ. ಅದೊಂದು ಮದುವೆ ಆಮಂತ್ರಣ ‌ಪತ್ರಿಕೆ ಪೋಸ್ಟ್ ಆಫೀಸ್ ಅವ್ಯವಸ್ಥೆಯಿಂದ ಮನೆಗೆ ತಲಪಿರಲಿಲ್ಲ. ಆದರೆ ಮದುವೆ ಸುದ್ಧಿ ತಿಳಿದ ಅಮ್ಮ ಅಣ್ಣ ತನಗೆ ಆಮಂತ್ರಣ ನೀಡದಿರಲು ಸಾಧ್ಯವೇ ಇಲ್ಲ ಅಂತ ನೇರವಾಗಿ ಮದುವೆಗೆ ಹೋದರು. ನಮ್ಮ ಮಾವ(ಸೋದರ) ತಂಗಿಗೆ ತನ್ನ ಮೇಲೆಇರುವ ವಿಶ್ವಾಸ ನೋಡಿ ಕಣ್ಣೀರು ಹಾಕಿದ್ದರಂತೆ ! . ಅವರ ಬಂದುಗಳ ಹತ್ತಿರ ಈ ವಿಚಾರದಲ್ಲಿ ನಮ್ಮಮ್ಮನ ಗುಣಗಾನ ಮಾಡುತ್ತಿದ್ದರಂತೆ

  7. K Vishwanatha says:

    “ತವರೆಂಬ ಸೆಳೆತ” ಇದರಲ್ಲಿ ನಯನಕ್ಕ ನವಿರಾದ ಅನುಬಂಧ ಇರಬೇಕು ಎಂಬ ಆಶಯ ವ್ಯಕ್ತ ಪಡಿಸಿದ್ದಾರೆ. ಸಂಬಂಧ ಪರಿಸ್ಥಿತಿಗಳು ವಿಭಿನ್ನವಾಗಿದ್ದರೂ ಎಲ್ಲಾ ಕಡೆ ಬೇಕಾಗುವುದು ಅದೇ ನವಿರಾದ ಸಂಬಂಧ.ಇದಕ್ಕೆ ಪೂರಕವಾದ ನನ್ನ ಒಂದು ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ನನ್ನ ಅಮ್ಮನಿಗೆ ಖಾಸಾ ಅಣ್ಣ ತಮ್ಮಂದಿರಿಲ್ಲ .ಚಿಕ್ಕಮ್ಮ ಅಲ್ಲ ದೊಡ್ಡಮ್ಮನ ಮಗ ಅಣ್ಣ ಇದ್ದಾರಷ್ಟೆ.ಒಮ್ಮೆ ಆ ಅಣ್ಣನ ಮನೆಯಲ್ಲಿ ಒಂದು ಮದುವೆ ಫಂಕ್ಷನ್ ಇತ್ತು. ಪೋಸ್ಟ್ ಆಫೀಸ್ ನ ಅವ್ಯವಸ್ಥೆಯಿಂದ ನಮಗೆ ಪತ್ರ ಸಿಕ್ಕಿರಲಿಲ್ಲ . ಆದರೆ ಅಮ್ಮ ಕೇವಲ ಸುದ್ಧಿ ತಿಳಿದು ಮದುವೆಗೆ ಹೋದರು. ಕಾಗದ ಸಿಕ್ಕದ ವಿಚಾರವನ್ನು ಹೇಳಿದರಂತೆ. ಮಾವನ ಕಣ್ಣಲ್ಲಿ ನೀರು ಬಂತಂತೆ. ನೆಂಟರಿಷ್ಟರ ಬಳಿ ಹೇಳಿಕೊಡರಂತೆ. ಇತ್ತೀಚೆಗೆ (ಮಾವನ ಮಗ) ನಮ್ಮ ಸೋದರ ಬಾವನವರೂ ಅದೇ ವಿಷಯ ಪ್ರಸ್ತಾಪಸಿ ಸವಿ ನೆನಪನ್ನು ಹಂಚಿಕೊಂಡಿದ್ದರು!❤️

    • ನಯನ ಬಜಕೂಡ್ಲು says:

      Vishwanatha Kana
      superb. ಈ ಮನಸುಗಳನ್ನು ಬೆಸೆಯೋ ಪ್ರೀತಿಯೊಂದೇ ಎಲ್ಲರಿಗೂ ಬೇಕಾಗಿರೋದು, ಆಸ್ತಿ ಪಾಸ್ತಿ ,ಹಣ ಅಂತಸ್ತಲ್ಲ. ಆದರೆ ಕೆಲವು ಮನಸುಗಳಿಗೆ ಇದು ಅರ್ಥಾನೇ ಆಗೋದಿಲ್ಲ ,ಕಾಣದ ಮರೀಚಿಕೆ ,ತೃಷೆಯ ಹಿಂದೆ ಓಡುತ್ತಿರುತ್ತವೆ, ಕೊನೆಗೊಂದು ದಿನ ಎಚ್ಚರ ಆಗುವಾಗ ಸಮಯ ಮೀರಿರುತ್ತದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: