ಗಜ಼ಲ್-1 : ವಾಡಿಕೆಯಂತೆ
ದೀಪ – ಗಾಳಿ ನಿನ್ನವೇ ಎಂದಿದ್ದೇವೆ ವಾಡಿಕೆಯಂತೆ
ಆರದಿರಲಿ ಬೆಳಕು ಎಂದು ಬೇಡಿದ್ದೇವೆ ವಾಡಿಕೆಯಂತೆ
ಮಳೆ ಸುರಿದು ನೆರೆಯೇರಿ ಕೊಚ್ಚಿದೆ ಬದುಕುಗಳ
‘ನೀನೇ ಗತಿ’ಯೆಂದು ಬಾಗಿದ್ದೇವೆ ವಾಡಿಕೆಯಂತೆ
ಕತ್ತಲಿನ ಭಯದಲ್ಲಿ ಹೊಕ್ಕಿದ್ದೇವೆ ಬೆಳಕಿನ ಮೊರೆ
ಬಿಡದೆ ‘ತಮಸೋಮಾ’ ಹಾಡಿದ್ದೇವೆ ವಾಡಿಕೆಯಂತೆ
ಏನಾದರೂ ಮಾಡಿಕೋ ಎಂದರೆ ಆಯ್ಕೆ ಉಳಿದಂತೇನು
ನಮಗೆ ನಾವೇ ಹುಸಿಯಾಗಿದ್ದೇವೆ ವಾಡಿಕೆಯಂತೆ
ವಕಾಲತ್ತು ಕೊಟ್ಟು ಶರಣಾಗುವುದು ಸುಲಭವೇನು
ತುಟಿಯಂಚಿನ ಮಾತು ಆಡಿದ್ದೇವೆ ವಾಡಿಕೆಯಂತೆ
ಕನ್ನಡಿಯಲ್ಲಿ ಕಣ್ಣಿಟ್ಟು ನೋಡಲೂ ಧೈರ್ಯ ಬೇಕು
ಕಣ್ಣು ಮುಚ್ಚಿ ಹಾಲು ಕುಡಿದಿದ್ದೇವೆ ವಾಡಿಕೆಯಂತೆ
• ಡಾ. ಗೋವಿಂದ ಹೆಗಡೆ
ಸೊಗಸಾಗಿದೆ
ಮಾರ್ಮಿಕವಾದ ಗಜಲ್. ಚಂದ..
ಚೆನ್ನಾಗಿದೆ… ವಾಡಿಕೆಯಂತೆಯೇ
ಎಂದಿನಂತೆ ಸುಂದರ !
ಭಾವ ವಾಡಿಕೆಯಲ್ಲ , ಅಂತರಾಳದ ಮಾತಿನ ಹೊದಿಕೆ.
ಚೆನ್ನಾಗಿದೆ ಸರ್ ಗಝಲ್ ಗಳು .
‘ಕಣ್ಣು ಮುಚ್ಚಿ ಹಾಲು ಕುಡಿದಿದ್ದೇವೆ ವಾಡಿಕೆಯಂತೆ’,… ಈ ಸಾಲು ನಗು ತರಿಸಿತು 🙂 .. ಗಝಲ್ ಇಷ್ಟವಾಯಿತು.
ಅಪರೂಪದ ಚಂದದ ಗಝಲ್.
ಗಜಲ್ ಸೊಗಸಾಗಿದೆ ಸರ್
ಉತ್ತಮ ಗಜ಼ಲ್ ಸರ್
ಚೆನ್ನಾಗಿದೆ ಸರ್