ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು:ಪುಟ 10
“ಜಗನ್ನಾಥ ದರ್ಶನ”
ಭುಬನೇಶ್ವರದಲ್ಲೆಡೆ ಇರುವಂತಹ ಕಳಿಂಗ ಶಿಲ್ಪ ಶೈಲಿಯನ್ನು ಪುರಿಯಲ್ಲಿಯೂ ಕಾಣಬಹುದು. ಶಿಲಾ ದೇಗುಲದ ಒಳಗೆ ಹೋಗುತ್ತಿದ್ದಂತೆಯೇ ಅರ್ಚಕರು ನಮ್ಮನ್ನು ದೇವರ ದರ್ಶನಕ್ಕೆ ಕರೆದೊಯ್ದುರು. ಚಂಡಮಾರುತದ ಪ್ರಭಾವದಿಂದ ಭಕ್ತರ ಸಂಖ್ಯೆ ವಿರಳವಾಗಿದ್ದುದರಿಂದ ಎಲ್ಲರಿಗೂ ದರ್ಶನ ಬಹಳ ಸುಲಭದಲ್ಲಾಯಿತು. ದೇವರ ಮೂರ್ತಿಗಳನ್ನು ಕಂಡು ನನಗೆ ಮೊದಲು ಆಶ್ಚರ್ಯವಾಯ್ತು.. ಯಾಕೆ ಗೊತ್ತಾ? ಮೂರ್ತಿಗಳು ಎಲ್ಲಾ ಕಡೆ ಇರುವಂತೆ ಸರಿಯಾದ ಶರೀರ ಹೊಂದಿರದೆ , ಮೊದಲಿಗೇ ನಮಗೆ ಕಾಣುವುದು ಮೊಗದಲ್ಲಿ ದೊಡ್ಡದಾದ ಕಣ್ಣುಗಳೆರಡು, ಕೈಕಾಲುಗಳೇ ಇಲ್ಲ. ಇಂತಹ ಮೂರು ಕಾಷ್ಠ ಮೂರ್ತಿಗಳು ಇಲ್ಲಿ ಪೂಜಿಸಲ್ಪಡುತ್ತವೆ. ಮಧ್ಯದಲ್ಲಿ ತಂಗಿ ಸುಭದ್ರೆ, ಎರಡೂ ಬದಿಗಳಲ್ಲಿ ಶ್ರೀ ಜಗನ್ನಾಥ ದೇವರು ಮತ್ತು ಅಣ್ಣ ಬಲಭದ್ರ ದೇವರು. ಭಕ್ತಿ ಭಾವದಿಂದ ನಮಿಸಿ ಬಂದಾಗ ಎಲ್ಲರಲ್ಲೂ ಸಾರ್ಥಕ್ಯ ಭಾವ. ಜನ ದಟ್ಟಣೆ ಇಲ್ಲದುದರಿಂದ ಮತ್ತೆರಡು ಸಲ ಕ್ಯೂನಲ್ಲಿ ನಿಂತು ದರ್ಶನ ಪಡೆದುದು ನಮ್ಮ ಭಾಗ್ಯವೆಂದೇ ಹೇಳಬೇಕು. ಯಾವುದು ನಮಗೆ ಒದಗುವುದು ದುಸ್ಸಾಧ್ಯವೆಂದೇ ಬಗೆದಿದ್ದೆವೋ, ಅದು ಸುಲಲಿತವಾಗಿ ಒದಗಿದ ಬಗೆ ನಿಜಕ್ಕೂ ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸಿತು. ಎಲ್ಲಾ ಜಗನ್ನಾಥನ ಕೃಪೆಯಲ್ಲದೆ ಮತ್ತೇನು! ದರುಶನ ಪಡೆದು ಹೊರ ಬಂದಾಗ ನಮ್ಮ ಗೈಡ್.. ಅರ್ಚಕರು ಹಾಜರಿದ್ದು, ಜಗನ್ನಾಥ ದೇಗುಲದ ಹುಟ್ಟು, ಅಲ್ಲಿಯ ವಿಶೇಷತೆಗಳ ಬಗೆಗೆ ವಿವರಿಸುತ್ತಾ ನಮ್ಮನ್ನೆಲ್ಲ ಬೇರೆಯೇ ಲೋಕಕ್ಕೆ ಕರೆದೊಯ್ದುರು.
ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ದೇವರನ್ನು ಮೂರ್ತಿ ರೂಪದಲ್ಲಿ, ಅಂದರೆ ನಮ್ಮಂತೆಯೇ ಶರೀರವುಳ್ಳ ಅಥವಾ ಲಿಂಗರೂಪದಲ್ಲಿ ಪೂಜಿಸುವುದು ರೂಢಿ. ಆದರೆ ಇಲ್ಲಿ ಸಂಪೂರ್ಣ ದೇಹವಲ್ಲದ, ಅರ್ಧ ಕೈಕಾಲುಗಳ, ದೊಡ್ಡದಾದ ಕಣ್ಣುಗಳ, ಕಹಿ ಬೇವಿನ ಮರದ ಕಟ್ಟಿಗೆಯಿಂದ ರಚಿಸಿದ ಮೂರ್ತಿಯನ್ನು ಪೂಜಿಸಲಾಗುತ್ತದೆ. ಅರ್ಚಕರು ಇದರ ಬಗೆಗಿನ ಒಂದು ರೋಚಕ ಕತೆಯನ್ನು ಅರುಹಿದರು.
ಹಿಂದೆ ವಿಶ್ವಾವಸು ಎಂಬ ನೀಲಾಂಚಲ ಕಾಡಿನ ಬೇಡರಾಜನು, ಬಹಳ ಭಕ್ತಿಯಿಂದ ಪೂಜಿಸುತ್ತಿದ್ದ, ನೀಲ ಮಾಧವ ದೇವರ ಮೂರ್ತಿಯನ್ನು ಹೊಂದಿದ್ದನು. ಅದರ ಪ್ರಖ್ಯಾತಿಯನ್ನು ಕೇಳಿದ ಇಂದ್ರದ್ಯುಮ್ನನೆಂಬ ರಾಜನಿಗೆ ಆ ಮೂರ್ತಿಯನ್ನು ನೋಡುವ ಆಸೆಯಾಯಿತು. ಅಂತೆಯೇ ರಾಜನು, ವಿದ್ಯಾಪತಿಯೆಂಬ ಬ್ರಾಹ್ಮಣನೊಡಗೂಡಿ ಹೋದಾಗ ಮೂರ್ತಿಯು ಅಲ್ಲಿಯ ಸಮುದ್ರದ ಮರಳಿನೊಳಗೆ ಸೇರಿ ಮಾಯವಾಯ್ತು. ಅತ್ಯಂತ ಖೇದಗೊಂಡ ರಾಜನು, ನೀಲ ಮಾಧವನನ್ನು ಕಾಣುವ ತನಕ ಅನ್ನ, ನೀರು ತೊರೆದು ಕಠಿಣ ತಪಸ್ಸನ್ನಾಚರಿಸುವೆನೆಂದು ತೊಡಗಿದಾಗ, ಅಶರೀರವಾಣಿಯೊಂದು, ರಾಜನು ಸದ್ಯದಲ್ಲೇ ನೀಲಮಾಧವನನ್ನು ಕಾಣುವನೆಂದು ನುಡಿಯಿತು. ರಾಜನು ಸಾರ್ಥಕ್ಯ ಭಾವದಿಂದ ಜಗನ್ನಾಥನಿಗಾಗಿ ಬೃಹತ್ ದೇವಾಲಯವನ್ನು ಕಟ್ಟಿಸಲು, ಅಶ್ವಮೇಧಯಾಗವನ್ನು ಕೈಗೊಂಡು ಧನ ಸಂಗ್ರಹಣೆಗೈದನು. ದೈವಸಂಕಲ್ಪದಂತೆ, ಬ್ರಾಹ್ಮಣ ರೂಪದಲ್ಲಿ ಬಂದ ದೇವಶಿಲ್ಪಿ ವಿಶ್ವಕರ್ಮನಿಂದ ದಿನ ಬೆಳಗಾಗುವುದರೊಳಗಾಗಿ ಅತ್ಯದ್ಭುತ, ಸುಂದರ ಶಿಲಾದೇಗುಲದ ನಿರ್ಮಾಣವಾಯಿತು. ದೇಗುಲವು ಪೂರ್ತಿಗೊಂಡಂತೆಯೇ, ಅಶರೀರವಾಣಿಯೊಂದರ ಅಣತಿಯಂತೆ, ಕಡಲ ತೀರದಲ್ಲಿ ತೇಲಿ ಬರುವ ವಿಶೇಷವಾದ ಕಹಿಬೇವಿನ ಮರದಿಂದ; ಶ್ರೀ ಜಗನ್ನಾಥ, ಬಲಭದ್ರ, ಸುಭದ್ರಾ ಮತ್ತು ಸುದರ್ಶನ ಚಕ್ರ, ಈ ನಾಲ್ಕು ಮೂರ್ತಿಗಳ ರಚನೆಗಾಗಿ ಒಳ್ಳೆಯ ಬಡಗಿಗಳ ಹುಡುಕಾಟ ನಡೆಸತೊಡಗಿದನು. ನಿಬಂಧನೆಯಂತೆ ಮೂರ್ತಿಗಳನ್ನು 21ದಿನಗಳೊಳಗಾಗಿ ರಚಿಸಬೇಕಾಗಿತ್ತು. ಯಾವ ಬಡಗಿಗಳೂ ಮುಂದೆ ಬರದಾಗ ದೊರೆ ಹತಾಶನಾದ . ಆಗಲೇ, ಹಣ್ಣು ಹಣ್ಣು ಮುದುಕನಾದ ಬಡಗಿಯೊಬ್ಬನು ಬಂದು ನಿಬಂಧನೆಗೊಪ್ಪಿ, ಮೂರ್ತಿಗಳನ್ನು ತಯಾರಿಸಲು ಒಪ್ಪುವನು. ಆದರೆ ದೊರೆಗೇನೋ ಅನುಮಾನ.. ಶಾರೀರಿಕವಾಗಿ ಇಷ್ಟು ದುರ್ಬಲನಾದವನಿಗೆ ಅಂಥಹ ಮಹೋನ್ನತ ಕೆಲಸ ಕಷ್ಟಸಾಧ್ಯವೆಂದು. ಆದರೆ ಬೇರೆ ಯಾವ ಬಡಗಿಗಳೂ ದೊರೆಯದುದರಿಂದ, ಜಗನ್ನಾಥನ ಇಚ್ಛೆಯು ಇದೇ ಇರಬಹುದೇನೋ ಎಂದುಕೊಂಡ ರಾಜನು, ಮೂರ್ತಿಗಳ ರಚನೆಗೆ ಒಪ್ಪುವನು. ಆದರೆ ಆಶ್ಚರ್ಯವೆಂಬಂತೆ ಆ ಬಡಗಿಯೂ ರಾಜನಿಗೆ ಕೆಲವು ಶರತ್ತುಗಳನ್ನು ಹಾಕುವನು.
ಅವನ ಕೆಲಸಕ್ಕೆ ಬೇಕಾದಷ್ಟು ಮರಗಳು ಶೇಖರಿಸಿದ ಪ್ರತ್ಯೇಕ ಕೋಣೆಯೊಂದನ್ನು ಒದಗಿಸಿಕೊಡಬೇಕು. ಕೆಲಸ ಮಾಡುತ್ತಿರುವಾಗ ಯಾರೂ ನೋಡಬಾರದು. ಅಷ್ಟೂ ದಿನಗಳು ನೀರು, ಅಹಾರಗಳು ಕೂಡಾ ಆತನಿಗೆ ಬೇಕಾಗಿಲ್ಲ. ರಾಜನಿಗೋ ಅಚ್ಚರಿ..ಗಾಬರಿ! ಅಷ್ಟು ದಿನಗಳ ಪರ್ಯಂತ ಆಹಾರ, ನೀರು ಇಲ್ಲದೆ ಆ ಮುದುಕ ಸತ್ತು ಹೋದರೆ? ಅವನ ಯೋಚನೆಯನ್ನು ತಿಳಿದನೆಂಬಂತೆ, ಬಡಗಿಯು, “ಒಳಗಿನಿಂದ ಶಬ್ದ ಕೇಳಿ ಬರುವುದೇ ಕೆಲಸ ಮುಂದುವರಿಯುತ್ತಿರುವ ಸೂಚನೆ, ಹೆದರಬೇಡ. ಕೆಲಸ ಪೂರ್ತಿಯಾದಾಗ ನಾನೇ ಬಾಗಿಲು ತೆಗೆಯುವೆ” ಎಂದು ಧೈರ್ಯ ತುಂಬುವನು. ಮೂರ್ತಿಗಳ ರಚನೆಯ ಕಾರ್ಯ ಆರಂಭಗೊಂಡಂದಿನಿಂದ ದಿನಾಲೂ ರಾಜ ಮತ್ತು ರಾಣಿ ಆ ಕೋಣೆಯ ಹೊರಗಡೆ ನಿಂತು ಶಬ್ದವನ್ನಾಲಿಸಿ ಹೋಗುತ್ತಿದ್ಧರು. ದಿನಗಳುರುಳಿದವು..16ದಿನಗಳೂ ನಿರಂತರ ಸದ್ದನ್ನಾಲಿಸಿ, ನೆಮ್ಮದಿಯಿಂದಿದ್ದ ಭೂಪಾಲನಿಗೆ 17ನೇ ದಿನ ಸದ್ದು ನಿಂತಾಗ ಗಾಬರಿಯಾಯಿತು. ರಾಣಿಯಂತೂ ಅತ್ಯಂತ ಚಿಂತಿತಳಾದಳು. ಮುದುಕ ಸತ್ತೇ ಹೋಗಿರಬೇಕೆಂದು ತಿಳಿದು ಇಬ್ಬರೂ ಚಿಂತಾಕ್ರಾಂತರಾಗಿ ಬಾಗಿಲನ್ನು ತೆರೆಸಿದರು. ಒಳಗೆ ನೋಡಿ ದಿಗ್ಭ್ರಾಂತರಾದರು! ಮುದುಕ ಬಡಗಿ ಮಾಯವಾಗಿದ್ದ. ಅರ್ಧಂಬರ್ಧವಾಗಿದ್ದ ಮೂರ್ತಿಗಳು.. ಹಸ್ತ, ಪಾದಗಳಿಲ್ಲದ ಕೈಕಾಲುಗಳು.. ಮುಖದಲ್ಲಿ ಮೂಗು, ಕಿವಿಗಳಿರಲಿಲ್ಲ. ರೆಪ್ಪೆಯಿಲ್ಲದ ವೃತ್ತಾಕಾರದ ಎರಡು ಕಣ್ಣುಗಳು..! ಅತ್ಯಂತ ದುಃಖಿತರಾದ ರಾಜ ರಾಣಿಯರಿಗೆ ಅಶರೀರವಾಣಿಯೊಂದು ಕೇಳಿಸಿತು,”ಈ ಯುಗದ ಉದ್ಧಾರಕ್ಕಾಗಿಯೇ ವಿಶೇಷ ರೂಪದ ದಿವ್ಯ ವಿಗ್ರಹಗಳ ರಚನೆಯಾಗಿದೆ. ಲೋಕ ಕಲ್ಯಾಣಕ್ಕೋಸ್ಕರ ಜಗನ್ನಾಥನು ಭಕ್ತರಿಗೆ ಇದೇ ರೂಪದಲ್ಲಿ ದರ್ಶನ ಕೊಡುವನು”
ಅರ್ಚಕರು, ಭಗವಂತನ ಮೂರ್ತಿಗಳ ಹಾಗೂ ದೇಗುಲದ ವಿಶೇಷತೆಗಳನ್ನು ತಿಳಿಸುತ್ತಲೇ ಪ್ರಾಂಗಣದೊಳಗಿನ ಇತರ ದೇವಸ್ಥಾನಗಳಿಗೆ ಕರೆದೊಯ್ಯತೊಡಗಿದರು. ಆಗಲೇ ಮಧ್ಯಾಹ್ನ 2ಗಂಟೆ ದಾಟಿತ್ತು. ಬಿಸಿಲ ಬೇಗೆ, ಹೊಟ್ಟೆ ಹಸಿವು , ಇವುಗಳನ್ನೆಲ್ಲ ಕಿಂಚಿತ್ತೂ ಲೆಕ್ಕಿಸದೆ ಅವರ ಹಿಂದೆಯೇ ಕುತೂಹಲದಿಂದ ಹೆಜ್ಜೆ ಹಾಕಿದೆವು.
(ಮುಂದುವರಿಯುವುದು..)
ಹಿಂದಿನ ಪುಟ ಇಲ್ಲಿದೆ :ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 9
-ಶಂಕರಿ ಶರ್ಮ, ಪುತ್ತೂರು.
Madam ji, super. ಸುಂದರವಾದ , ಕುತೂಹಲಕಾರಿಯಾದ ಜಗನ್ನಾಥನ ಕಥೆ .
ಅಹಾ..ನಮಗೂ ಪುನ: ಪುರಿ ಜಗನ್ನಾಥನ ದರ್ಶನವಾಯಿತು… 🙂