ಗುರುವಿನ ಗುಲಾಮನಾಗುವ ತನಕ
ಜಗವ ಬೆಳಗುವುದು ಸೂರ್ಯನ ಬೆಳಕು,
ಕತ್ತಲೆಯ ದೂರವಾಗಿಸುವುದು ದೀವಿಗೆಯ ಬೆಳಕು,
ಆದರೆ ಮನಗಳ ತಮವ ಹೋಗಲಾಡಿಸುವುದು
ಗುರು ಉರಿಸೋ ಜ್ಞಾನವೆಂಬ
ಹಣತೆಯ ಬೆಳಕು.
ಗುರುವಿಗೆ ತಿಳಿದಿಹುದು ಕಲ್ಲನ್ನೂ ಕರಗಿಸೋ ಯುಕ್ತಿ,
ಅವರ ಮಾತಿಗಿಹುದು ಮನಸ್ಸುಗಳ ಕಠಿಣತನವ ಹೋಗಲಾಡಿಸೋ ಶಕ್ತಿ,
ಹೃದಯಗಳಲ್ಲಾವರಿಸುವುದು ಗುರು ಭಕ್ತಿ,
ಹೊಂದಿ ಹಿರಿದಾದ ಬೆಲೆ ಅವರಾಡೋ ಪ್ರತಿಯೊಂದು ಉಕ್ತಿ.
ಕಣ್ಣಿಗೆ ಕಾಣಿಸೋ ಜೀವಂತ ದೇವರು,
ಎಂದರೆ ಅದು ತಿದ್ದಿ ತೀಡಿ ಹೊಸ ಬದುಕನ್ನು ನೀಡೋ ಗುರು,
ಇಲ್ಲ ಅವರ ಮುಂದೆ ಯಾರೂ ತಲೆಬಾಗದವರು,
ಗುರುವಿನ ಶ್ರೇಷ್ಠತೆಯ ಮುಂದೆ ಕುಬ್ಜರು ನಾವೆಲ್ಲರೂ.
ನಡೆಸಿ ಅಕ್ಷರ ದಾಸೋಹ,
ನೀಗುವರು ಹಲವರ ಜ್ಞಾನ ದಾಹ,
ಆಲಿಸುತ್ತಾ ತಾಳ್ಮೆಯಿಂದ ಚಿಣ್ಣರ ಬಿನ್ನಹ,
ಮುಗ್ಧ ಮನಸುಗಳಿಗಾಗುವರು ಸನಿಹ.
ನೀಡಿ ಜ್ಞಾನ ಭಿಕ್ಷೆ,
ಮಾಡುವರು ನಮ್ಮ ಸಂಸ್ಕೃತಿ- ಸಂಸ್ಕಾರಗಳ ರಕ್ಷೆ,
ದೂರವಾಗಿಸುವುದು ಮನಸುಗಳ ಕತ್ತಲ ಗುರು ನೀಡೋ ವಿದ್ಯೆಯೆಂಬ ದೀಕ್ಷೆ,
ಇದುವೇ ಹಾಕಿ ಕೊಡುವುದು ಹಲವರ ಪಾಲಿನ ಬದುಕಿಗೆ ಸರಿಯಾದ ನಕ್ಷೆ.
ಕೂಡಿಹುದು ಬಣ್ಣಗಳಿಂದ ಮಕ್ಕಳ ಪ್ರಪಂಚ,
ತಿದ್ದಿ ಸುಂದರಗೊಳಿಸುವುದು ಅದನ್ನು ವಿದ್ಯೆಯ ಕುಂಚ,
ಈ ಜಗವೆಂಬ ರಂಗಮಂಚ,
ಎದುರಿಸಲು ಕಲಿಸುವುದು ಸಮರ್ಥವಾಗಿ ಕೊಂಚ ಕೊಂಚ.
ಗುರುವೆಂದೊಡನೆ ಮೂಡುವುದು ಮನಗಳಲ್ಲಿ ಪೂಜ್ಯ ಭಾವನೆ,
ಸ್ಪಟಿಕದಂತೆ ಶುಭ್ರ ಗುರುವಿನ ಮನೋಕಾಮನೆ,
ಹಸನಾಗಿಸುವುದು ಹಲವರ ಬದುಕ ಗುರು ನೀಡೋ ಪ್ರೇರಣೆ,
ಹೇಗೆ ಮೂಡದಿರಲು ಸಾಧ್ಯ ಗುರುವೆಂದರೆ ಗೌರವ , ಆದರಣೆ…?.
ಹಿಡಿದಿಹುದು ಇಂದು ನಮ್ಮ ಸಂಸ್ಕೃತಿ ಅವನತಿಯ ಹಾದಿ,
ಗುರುವಿನಿಂದಷ್ಟೇ ಸಾಧ್ಯ ಸರಿ ಪಡಿಸಲು ತಿದ್ದಿ,
ಎಷ್ಟು ಸಾಗಿದರೂ ದಾಟಿ ಮುಗಿಯದು ಜ್ಞಾನದ ಶರಧಿ,
ಇದಕ್ಕಿಲ್ಲ ಯಾವುದೇ ಸೀಮಿತ ಪರಿಧಿ.
ಗುರುವೆಂದರೆ ದೇವರ ಪ್ರತಿರೂಪ ,
ಮಾಡುವರು ಹಚ್ಚುವ ಕೆಲಸ ಅರಿವಿನ ದೀಪ ,ಅಜ್ಞಾನಿಯ ಬಾಳೋ… ಕತ್ತಲ ಕೂಪ,
ದೂರವಾಗಿಸಲು ಆ ಕತ್ತಲೆಯ
ತೋರುವುದು ಗುರುವೇ
ನಿನ್ನಲ್ಲಿ ಸರಸ್ವತಿಯ ರೂಪ .
ಇಲ್ಲ ಗುರುವಿಗಿಂತ ಮಿಗಿಲಾದ ದೇವರು,
ಆಗಲಾರರು ಎಲ್ಲಾ ಗುರುವಿನಂತೆ ಶ್ರೇಷ್ಠರು,
ಸಿಂಗರಿಸಿ ಬಣ್ಣ ಬಣ್ಣದ ಮಕ್ಕಳ ಕನಸಿನೂರು,
ಗುರುವಷ್ಟೇ ಮಾಡಬಲ್ಲರು ಕೊನರುವಂತೆ
ಮನಗಳಲ್ಲಿ ಭರವಸೆಯ ಚಿಗುರು.
ಬಯಸಿಹುದು ಆಧರಿಸಲು ವಿಶೇಷವಾಗಿ ಈ ದಿನ ,
ವಿದ್ಯೆಯ ಬೆಳಕು ನೀಡಿದ ಗುರುಗಳ ಈ ಮನ, ದೂರವಾಗಿಸುವಿರಿ ಮನಸುಗಳ ತಮ ತುಂಬಿ ಜ್ಞಾನ,
ನೀವಿರುವಲ್ಲಿ ಕಾಲಿಡದು ಎಂದಿಗೂ ಅಜ್ಞಾನ.
– ನಯನ ಬಜಕೂಡ್ಲು
ಬಹಳ ಸುಂದರವಾದ ಕವನ..
Thank you madam
ಅರ್ಥಪೂರ್ಣ ಸುಂದರ ಕವನ ..ನಯನ ಮೇಡಂ.
Thank you madam ji