ನಡೆ ಮುಂದೆ
ಕೂರದಿರು ಮೂಲೆ ಗುಂಪಾಗಿ
ಮಂಕು ಬಡಿದಂತೆ ,
ಬದುಕು ಸದಾ ಪ್ರವಾಹಿ
ಹರಿಯೋ ನದಿಯಂತೆ .
ನಿಜ …. ಒಂಟಿ ಕೈಯ್ಯಿಂದ
ತಟ್ಟಲಾಗದು ಚಪ್ಪಾಳೆ,
ಮನ ಬಯಸುವುದು ಆಸರೆ
ತುಸು ದೂರ ಸಾಗುವಾಗ
ಬಿಸಿಲು ಸರಿದು ಇಳಿ ಸಂಜೆ
ಕಾಲಿಡೋ ವೇಳೆ .
ಬದುಕಾಗದಿರಲಿ ನಿರೀಕ್ಷೆಗಳ
ಆಗರ,
ದೊರೆತ ಕ್ಷಣವ ದೊರೆತಂತೆಯೇ
ಸವಿಯುವುದರಲ್ಲಿಹುದು
ಸಂತಸದ ಸಾರ.
ಸಹಜ ತೋರುವುದು ತನ್ನ ಕರಾಳ
ಮುಖಗಳ ಸೋಲು,
ಹಾಗೆಂದು ನಿಲ್ಲದಿರು ಕಳೆದುಕೊಂಡು ಭರವಸೆ
ನೀ ಎಲ್ಲೂ.
ಒಂದೇ ತರ ಇರದಿಲ್ಲಿ
ಎಲ್ಲರ ಬದುಕು ,
ಇರುಳು ಸರಿದ ನಂತರವೇ
ಮೂಡುವುದು ಬೆಳಕು.
ಯಾರಿಲ್ಲದಿದ್ದರೇನು ಸಾಗು
ದೂರ ದೂರದವರೆಗೂ ಒಂಟಿಯಾಗಿ,
ಹಿಂದಿರುಗಿ ನೋಡಲೊಮ್ಮೆ ಸಾಗಿ ಬಂದ
ಹಾದಿ
ಬೆಳೆದಿರುವೆ ನಿನಗರಿವಿಲ್ಲದಂತೆಯೇ
ಗಟ್ಟಿಯಾಗಿ .
ಬಿಡು ಭಯ
ಮುಕ್ತ ಮನಸಾಗಿದ್ದಲ್ಲಿ ಕಾರಣವಿಲ್ಲದೆಯೇ
ಬೆಸೆಯುವುದು ಸ್ನೇಹ ಬಂಧನ,
ಭದ್ರವಾಗಿರಿಸು ಹೃದಯದ
ತಿಜೋರಿಯೊಳಗೆ
ಈ ಸುಂದರ ನೆನಪುಗಳನ್ನ.
ಕೂರದಿರು ಯಾವ ಸಂಬಂಧಗಳ
ಸಲುವಾಗಿಯೂ ನೀ
ಅಳುತ್ತಾ ,
ಬಿಟ್ಟು ಬಿಡು ನಿರಾಳವಾಗಿ
ಅದೃಷ್ಟವಿದ್ದಲ್ಲಿ ಹಿಂತಿರುಗಿ ಬರುವುದದು
ಮತ್ತೆ ನಿನ್ನತ್ತ .
– ನಯನ ಬಜಕೂಡ್ಲು
ಬಹಳ ಸ್ಫೂರ್ತಿದಾಯಕ ಕವನ
Thank you ji
‘ನಡೆ ಮುಂದೆ, ನುಗ್ಗಿ ನಡೆ ಮುಂದೆ’…ಈ ದಿನಗಳ ಆದ್ಯತೆ, ಸ್ವಾಮಿ ವಿವೇಕಾನಂದರ ಆಶಯ ಕೂಡ. ಸುಂದರ ಕವನ’
ಧನ್ಯವಾದಗಳು ಹೇಮಕ್ಕ.
ಬದುಕಲ್ಲಿ ಭರವಸೆ ತುಂಬುವ ಕವನ…ಚೆನ್ನಾಗಿದೆ.
Thank you madam
ಸೋತವರಿಗೆ ಧೈರ್ಯ ತುಂಬುವ,ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರಿಗೆ ಹುಮ್ಮಸ್ಸು ನೀಡುವಂತಹ ಕವನ
ಚೆಂದವಾಗಿದೆ