ಭ್ರಾಮಕ ಬಿಂಬಿ
ಗೋರಿಯಲ್ಲಡಗಿ ಕೂತರೂ
ಎಲುಬಿನ ಚೂರುಗಳು
ಪೂರ್ತಿ ಮಣ್ಣಾಗಿಲ್ಲ.
ನಡುವಯಸ್ಸಿನ ಬಿಳಿಗೂದಲುಗಳು
ಮೊಳೆತು ಚಿಗುರುತ್ತಿದ್ದರೂ
ಭೂಮಿಯಾಳದ ಒಲ್ಮೆ
ಮರಿದುಂಬಿಯೇ…
ಜರಿನೂಲು, ರೇಷ್ಮೆಯ ನುಣುಪು
ಎಳೆಗಳು, ಹೂ ಪಕಳೆಗಳು
ತಿಂಗಳನ ತಂಪು ಬುಟ್ಟಿಯ ಅಲಂಕರಿಸುತ್ತವೆ.
ಹೃದ್ಗೋಚರ ದೀರ್ಘಕದಲ್ಲಿ
ಪಡಿಮೂಡಿದ ಮಂಜಿಷ್ಠ
ಪದೇ ಪದೇ ಸೆಳೆಯುತ್ತದೆ
ಕೊರೆಯುತ್ತದೆ, ಬಸವಳಿಸುತ್ತದೆ.
ನಯನ ದ್ವಯಗಳ ಅಂತರಪಟದಲ್ಲಿ
ಗಿರಗಿರನೇ ತಿರುಗಿ
ಸಮ್ಮೋಹಿತಗೊಳ್ಳುವ ಅದೇ ಚಕ್ರ.
ಕಾಲನ ಕೈಯಲ್ಲಿ ಕೀಲಿಕೈ ಸವೆದರೂ
ಉನ್ಮತ್ತ .
ತೊಳಲಾಡಿ ಮನ ಪರಿತಪಿಸಿ
ಅಲವತ್ತುಕೊಳ್ಳುತ್ತದೆ
ಸಿಗಬಾರದಿತ್ತೇ ಎಂದು.
ಸಿಕ್ಕಿದ್ದರೆ –
ಅಪೂರ್ವವಾಗುತ್ತಿರಲಿಲ್ಲ.
ಪಲ್ಲವಿಸಿ ಟಿಸಿಲೊಡೆದು
ಹಿಗ್ಗಿ ಬೆಳೆದು ಭಾರವಾಗುತ್ತಿತ್ತು
ಅದಕ್ಕೆ ಅಲ್ಲೇ ಇರು
ಭ್ರಾಮಕ ಬಿಂಬವಾಗಿ.
-ನಾಗರೇಖಾ ಗಾಂವ್ಕರ್
ನಾಗರೇಖ,ಒಳ್ಳೆದಿದೆ ಕವಿತೆ
“ಭೂಮಿಯಾಳದ ಒಲ್ಮೆ ಮರಿದುಂಬಿಯೆ ”
ಈ ಸಾಲುಗಳು ಬಹಳ ಇಷ್ಟ ಆಯಿತು . ಚೆನ್ನಾಗಿದೆ ಮಧುರ ಒಲವಿನ ಬಣ್ಣನೆ .
ಕವನ ಚೆನ್ನಾಗಿದೆ.
ಬಹಳ ಚಂದದ ಭಾಷೆ ಹಾಗೂ ಸುಂದರ ಕವನ..