ಪುಸ್ತಕ ನೋಟ: ‘ಬೊಗಸೆಯೊಳಗಿನ ಅಲೆ’
ಡಾ.ಎಂ.ಆರ್.ಮಂದಾರವಲ್ಲಿ ಅವರ ‘ಬೊಗಸೆಯೊಳಗಿನ ಅಲೆ’ ಎಂಬ ಕಥಾ ಸಂಕಲನವು ತನ್ನ ಹೆಸರಿನ ವೈಶಿಷ್ಟ್ಯದಿಂದಲೇ ಗಮನ ಸೆಳೆಯುತ್ತದೆ. ಈ ಪುಸ್ತಕದಲ್ಲಿರುವ ಹನ್ನೊಂದು ಕತೆಗಳಲ್ಲಿ, ಹೆಚ್ಚಿನ ಕತೆಗಳು ಮಹಿಳಾ ಕೇಂದ್ರಿತವಾಗಿದ್ದು, ಬಹಳ ನಾಜೂಕಾದ ಕಥಾ ಹಂದರವನ್ನು ಹೊಂದಿವೆ. ಸಾಮಾನ್ಯವಾಗಿ ಮಹಿಳೆಯರ ಬಗ್ಗೆ ಹೆಣೆಯಲಾದ ಕತೆಗಳಲ್ಲಿ ಅತ್ತೆ-ಸೊಸೆ, ಗಂಡ-ಮಾವ, ಅತ್ತಿಗೆ-ನಾದಿನಿ ಮೊದಲಾದವರು ನಡೆಸುವ ದೌರ್ಜನ್ಯ ಹಾಗೂ ಕಥಾನಾಯಕಿಯ ಅಸಹಾಯಕತೆಯನ್ನು ತೆರೆದಿಡುತ್ತವೆ ಹಾಗೂ ಕತೆಯ ಅಂತ್ಯ ಹೇಗಿರಬಹುದು ಎಂದು ತಾರ್ಕಿಕವಾಗಿ ಊಹಿಸುವಷ್ಟರ ಮಟ್ಟಿಗೆ ಏಕತಾನತೆ ಅಥವಾ ಸ್ಟೀರಿಯೋಟೈಪಿಕ್ ಎನಿಸಿಬಿಡುತ್ತವೆ. ಆದರೆ ‘ಬೊಗಸೆಯೊಳಗಿನ ಅಲೆ’ಯಲ್ಲಿರುವ ಕತೆಗಳ ಕಥಾವಸ್ತುಗಳು ವಿಭಿನ್ನವಾಗಿ, ಸಮಕಾಲೀನ ಎನಿಸುತ್ತವೆ. ಕತೆಯ ಅಂತ್ಯದಲ್ಲಿ ಅಸಹಾಯಕ ಅಳುಮುಂಜಿ ನಾಯಕಿಯ ಬದಲು, ತನ್ನ ವರ್ತಮಾನ ಅಥವಾ ಭವಿಷ್ಯದ ಬಗ್ಗೆ ಸ್ಪಷ್ಟವಾದ ಗುರಿ ಹಾಗೂ ದಾರಿಯನ್ನು ನಿರ್ಧರಿಸುವ ಆತ್ಮವಿಶ್ವಾಸಿ ನಾಯಕಿಯನ್ನು ರೂಪಿಸಿರುವುದು ನನಗೆ ಬಹಳ ಇಷ್ಟವಾಯಿತು.
‘ಸೂತ್ರ‘ ಕಥೆಯಲ್ಲಿ, ಕಾಳಜಿಯ ಮುಸುಕಿನಲ್ಲಿ ತನ್ನ ಹೆಣ್ಣುಮಕ್ಕಳ ಸ್ವಾತಂತ್ರ್ಯ ಹಾಗೂ ವೈಯುಕ್ತಿಕ ಜೀವನವನ್ನು ಕಸಿದುಕೊಳ್ಳುವ ಅಪ್ಪ, ಅಪ್ಪನ ನಿರ್ಧಾರ ಯಾವತ್ತೂ ಸರಿ ಎಂಬ ನಂಬಿಕೆಯಲ್ಲಿರುವ ಅಕ್ಕ, ‘ಅಪ್ಪ ತಮ್ಮನ್ನು ಮಾತ್ರ ಪ್ರೀತಿಸುತ್ತಾರೆ ಮಕ್ಕಳಾದ ನಮ್ಮನ್ನು ಅಲ್ಲ’ ಎಂಬ ತನಗೂ, ಗೆಳತಿಗೂ ಅರ್ಥವಾದ ವಿಷಯ ತನ್ನ ಅಕ್ಕನಿಗೆ ಅರ್ಥವಾಗುವುದಿಲ್ಲ ಎಂದು ಕೊರಗುವ ಲಕ್ಷ್ಮಿ..ಈ ಎಲ್ಲಾ ಪಾತ್ರಗಳನ್ನು ಲೇಖಕಿಯು ಬಹಳ ಸೂಕ್ಷ್ಮವಾಗಿ ನಿರ್ವಹಿಸಿದ್ದಾರೆ.
‘ಬಿಲ್ಲು ಬಾಗಿತೇ ವೈಶಾಲಿ’ ಕಥೆಯ ‘ ಹೊಡೆತ ಅವಳ ಬದುಕಿನ ವ್ಯವಸ್ಥೆಯಾಗಿತ್ತು’ ಎಂಬ ಸಾಲಿನಲ್ಲಿ ದೈಹಿಕ ಹೊಡೆತದ ಹಿನ್ನೆಲೆಯಲ್ಲಿ ಬಿಂಬಿಸಲಾದ ಕಥಾನಾಯಕಿಯ ಮಾನಸಿಕ ತಲ್ಲಣಗಳು ಹಾಗೂ ಆಕೆ ವಿಷಮ ಸನ್ನಿವೇಶಗಳನ್ನು ನಿರ್ವಹಿಸುವ ರೀತಿ ಓದುಗರನ್ನು ತಟ್ಟುತ್ತದೆ. ಲೇಖಕಿಯು ವೈಶಾಲಿಯ ಅಜ್ಜಿಯ ಪಾತ್ರದ ಮೂಲಕ ‘ಬದುಕಿನ ಸೌಂದರ್ಯ ಇರುವುದು ಪರಿಸ್ಥಿತಿಗಳನ್ನು ಎದುರಿಸುವುದರಲ್ಲಿ’ ಎಂದು ಹೇಳಿದ ಕಿವಿಮಾತು ಸಾರ್ವಕಾಲಿಕ ಸತ್ಯ.
‘ಬಿಂಬ’ ಕತೆಯಲ್ಲಿ ಸ್ನೇಹಿತೆಯರಾಗಿದ್ದರೂ, ಪರಸ್ಪರ ತಿವಿಯುತ್ತಲೇ ಮಾತನಾಡುವ ಚಂದ್ರ ಮತ್ತು ಧ್ರುವ ಇವರಿಬ್ಬರ ಸಂವಾದ ಮನಸೆಳೆಯುತ್ತದೆ. ಕಾಳಜಿ, ಸ್ವಾರ್ಥ, ಸ್ವಾಭಿಮಾನ, ದುರಭಿಮಾನ ಎಲ್ಲದರ ಸಮ್ಮಿಶ್ರಣವಾಗಿರುವ ವಿಶಿಷ್ಟ ಕಥಾವಸ್ತುವನ್ನು ಹೊಂದಿರುವ ಬಿಂಬ ಕತೆಯಲ್ಲಿ ಬರುವ ‘ಸುತ್ತುವುದರಲ್ಲಿ ಇರುವುದು ಚಂಚಲತೆ ಅಲ್ಲ, ಚಲನಶೀಲತೆ’ … ‘ಒಳ್ಳೆಯತನವನ್ನು ಆಸ್ತಿಯಲ್ಲಿ ತೂಗಿ ನೋಡ್ತಿದ್ದೀಯಾ‘ ಇತ್ಯಾದಿ ಸಾಲುಗಳು ನೆನಪಿನಲ್ಲಿ ಉಳಿಯುವಂತವುಗಳು.
‘ಅಳುವಿದಿಲ್ಲವೇ ವಸೂ’ ಕಥೆಯಲ್ಲಿ, ತನ್ನನ್ನು ಅತಿಯಾಗಿ ಹಿಂಸಿಸಿ ಶೋಷಣೆ ಮಾಡುತ್ತಾ, ಮೇಲ್ನೋಟಕ್ಕೆ ಸಭ್ಯ ಮುಖವಾಡ ಧರಿಸಿ ಇತರರನ್ನು ನಂಬಿಸುತ್ತಾ ಬದುಕಿದ ವಿಕೃತ ಮನಸ್ಸಿನ ಸ್ಯಾಡಿಸ್ಟ್ ಗಂಡ ಹಾಗೂ ಸಾಧು ಸ್ವಭಾವದ ಮುಗ್ಧೆಯ ಸಾಂಸಾರಿಕ ಚಿತ್ರಣ ಹಾಗೂ ಕೊನೆಗೆ ಗಂಡನ ಆಕಸ್ಮಿಕ ಮರಣವಾದಾಗ ಅಳದೆ ಇರುವ ‘ವಸೂ’…ಇವುಗಳನ್ನು ಓದಿದಾಗ, ವಸೂ ಯಾಕೆ ಅಳಬೇಕು? ಇನ್ನಾದರೂ ನೆಮ್ಮದಿ ಕಾಣಲಿ ಅಂತ ನಾವೂ ಹಾರೈಸುತ್ತೇವೆ!
ಮುಂದಿನ ‘ಬೊಗಸೆಯೊಳಗಿನ ಅಲೆ’, ‘ಚಣ ಚಣವೂ ಮಾಗಿ’ ‘ನೀರ ಮೇಲಿನ ಗುಳ್ಳೆ‘ ಈ ಕತೆಗಳಲ್ಲಿ, ವಿಭಿನ್ನ ಸನ್ನಿವೇಶಗಳಲ್ಲಿ, ವಾಸ್ತವಕ್ಕೆ ನಿಲುಕದ ಆದರ್ಶಗಳನ್ನು ಬೆಂಬೆತ್ತಿ ಹೋಗಿ ಎಲ್ಲೂ ತಲಪಲಾಗದ, ಏನನ್ನೂ ಸಾಧಿಸಲಾಗದ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳುವ ಪಾತ್ರಗಳನ್ನು ಲೇಖಕಿಯವರು ಸೊಗಸಾಗಿ ಚಿತ್ರಿಸಿದ್ದಾರೆ. ಈ ಕತೆಗಳಲ್ಲಿ ಅಲ್ಲಲ್ಲಿ ವರ್ಣಿಸಲಾದ ಪ್ರಕೃತಿಯ ಸೊಬಗು ಕತೆಗೆ ಪೂರಕವಾಗಿ ಹೊಂದುತ್ತವೆ.
ಕೊನೆಯ ನಾಲ್ಕು ಕಥೆಗಳಾದ ‘ಮಿಕ್ಸಿ’, ‘ಇರುವುದೆಲ್ಲವ ಬಿಟ್ಟು’ ‘ಬಿಡುಗಡೆ’ ‘ಒಂದು ಭಿನ್ನಹ ಹುಲಿಯೆ’ ಇವುಗಳಲ್ಲಿ ಸಮಕಾಲೀನ ವಿಷಯಗಳನ್ನು ಒರೆ ಹಚ್ಚುವ ಪ್ರಯತ್ನವಿದೆ. ಆಧುನಿಕ ಹಾಗೂ ಸಾಂಪ್ರದಾಯಿಕ ಮನಸ್ಸುಗಳ ಸಂಘರ್ಷ, ಅನಿವಾರ್ಯದ ಹೊಂದಾಣಿಕೆ, ದುಂದುವೆಚ್ಚ, ಈಗಿನ ಕಾಲಕ್ಕೆ ಪ್ರಸ್ತುತ ಅನಿಸುವ ವಿಚಾರಗಳು, ಕಥಾ ಸನ್ನಿವೇಶದಲ್ಲಿ ಸಿಗುವ ಅನಿರೀಕ್ಷಿತ ತಿರುವು ಹಾಗೂ ಸಕಾರಾತ್ಮಕ ಫಲಿತಾಂಶಗಳು… ಹೀಗೆ ಆಸಕ್ತಿ ಹುಟ್ಟಿಸುತ್ತಾ ಓದಿಸಿಕೊಂಡು ಹೋಗುತ್ತವೆ.
ಎಲ್ಲಿಯೂ ಪದಗಳನ್ನು ಅತಿಯಾಗಿ ಬಳಸದೆ, ಎಲ್ಲಿಯೂ ಲೋಪವನ್ನೂ ಮಾಡದೆ ತಮ್ಮ ವಿಶಿಷ್ಟ ಕಥನ ಶೈಲಿಯ ಮೂಲಕ ‘ಬೊಗಸೆಯೊಳಗಿನ ಅಲೆ’ ಯನ್ನು ಓದುಗರ ಕೈಗಿಟ್ಟ ಡಾ.ಮಂದಾರವಲ್ಲಿ ಅವರಿಗೆ ಅಭಿನಂದನೆಗಳು. ಅವರ ಸಾಹಿತ್ಯಕೃಷಿ ನಿರಂತರವಾಗಿ ಮುಂದುವರಿಯಲಿ ಎಂಬ ಹಾರೈಕೆ ನಮ್ಮದು.
-ಹೇಮಮಾಲಾ.ಬಿ. ಮೈಸೂರು
ಚಿಕ್ಕ, ಚೊಕ್ಕ, ಚಂದದ ಪುಸ್ತಕ ಪರಿಚಯ. ಕಥೆಗಳ ರೀತಿಯೇ ಮುಂದೆ ಏನಿದೆ ಅಂತ ಎದುರು ನೋಡುವ ರೀತಿ ಓದಿಸಿಕೊಂಡು ಹೋಗುತ್ತದೆ , ಪುಸ್ತಕದ ಪ್ರತಿ ಓದಬೇಕು ಅನ್ನೋ ಹಂಬಲವನ್ನು ಜಾಗೃತ ಗೊಳಿಸುವಂತಿದೆ . ಸುಪರ್ಬ್ ಹೇಮಕ್ಕ.
ಕಥಾ ಸಂಕಲನ ವಿಮರ್ಶೆ ಚೆನ್ನಾಗಿ ಮೂಡಿಬಂದಿದೆ.