ಓದು ಮತ್ತೊಮ್ಮೆ ಮಗುದೊಮ್ಮೆ

Share Button

ಬದುಕಿನ ವಿವಿಧ ಹಂತಗಳಲ್ಲಿ ನಾವೆಲ್ಲರೂ ವಿಭಿನ್ನ ರೀತಿಯ ಪುಸ್ತಕಗಳನ್ನು ಓದುತ್ತೇವೆ.  ಈಗಿನಂತೆ ದೂರದರ್ಶನ, ಮೊಬೈಲ್ ಫೋನ್, ವೀಡಿಯೋ ಗೇಮ್ಸ್ ಇಲ್ಲದಿದ್ದ ಕಾಲದಲ್ಲಿ ಹಾಗೂ  ಬೇಸಗೆ ಶಿಬಿರದ ಕಲ್ಪನೆಯೇ ಇಲ್ಲದಿದ್ದ ನಮ್ಮ ಬಾಲ್ಯದ ದಿನಗಳಲ್ಲಿ  ಅಜ್ಜಿಯ ಮನೆಗೆ ಹೋಗುವುದು,  ನೆಂಟರಿಷ್ಟರ ಮಕ್ಕಳ ಜೊತೆಗೆ ಕಾಡು-ಮೇಡು ಅಲೆಯುವುದು, ಮಾವಿನಕಾಯಿ, ಸೀಬೆಕಾಯಿ, ನೆಲ್ಲಿಕಾಯಿ ಮೊದಲಾದ ಮರಗಳಿಗೆ ಕಲ್ಲೆಸೆದು ಕಾಯಿ ಬೀಳಿಸುವುದು,   ಕುಂಟೇಬಿಲ್ಲೆ, ಚೆನ್ನೆಮಣೆ, ಲಗೋರಿ  ಆಡುವುದು, ಹಿರಿಯರಿಗೆ ಸಣ್ಣ-ಪುಟ್ಟ ಸಹಾಯ ಮಾಡುವುದು ……..ಹೀಗೆ ಹಲವಾರು ಚಟುವಟಿಕೆಗಳಲ್ಲಿ ಸಮಯ ಕಳೆಯುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ. ಮನೆಯ ಹಿರಿಯರಿಗೆ ಓದುವ ಹವ್ಯಾಸವಿದ್ದರೆ ಅಂಥಹ ಮನೆಗಳಲ್ಲಿ  ಚಂದಮಾಮ, ಬೊಂಬೆಮನೆ, ಮಕ್ಕಳ  ರಾಮಾಯಣ, ಮಹಾಭಾರತ, ತೆನಾಲಿ ರಾಮನ ಕಥೆಗಳು, ಅಕ್ಬರ-ಬೀರಬಲ್ ಕತೆಗಳು ಮೊದಲಾದ ಪುಸ್ತಕಗಳಿರುತ್ತಿದ್ದುವು. ಅಲ್ಲಿಗೆ ಹೋಗಿ ಅಥವಾ ಪುಸ್ತಕಗಳನ್ನು ಎರವಲು ತಂದು ಪುನ: ಪುನ: ಓದುವುದು ಕೂಡ ನಮಗೆ ಖುಷಿ ಕೊಡುವ ವಿಚಾರವಾಗಿತ್ತು.

ಈಗಿನ ಪುಟಾಣಿ ಮಕ್ಕಳಿಗೆ   ಪಾಲಕರು  ಆಕರ್ಷಕವಾದ ಬಣ್ಣಬಣ್ಣದ ಪುಸ್ತಕಗಳನ್ನು ತಂದುಕೊಡುತ್ತಾರೆ. ಪುಟ್ಟ ಮಕ್ಕಳು ಪುಸ್ತಕಗಳ ಜೊತೆಗೆ ಆಟವಾಡುತ್ತಾ, ತೋಚಿದಂತೆ ಬಣ್ಣ ಬಳಿಯುತ್ತಾ ಗೀಚುವುದನ್ನು ನೋಡಲು ಬಲು ಸೊಗಸು. ಹಾಗೆಯೇ ಮುಂದುವರಿದು ಮುಂದಿನ ಶಾಲಾದಿನಗಳಲ್ಲಿ ಮಕ್ಕಳಿಗೆ ಮಣಭಾರದ ಪುಸ್ತಕಗಳನ್ನು  ಹೊರಿಸಲಾಗುತ್ತಿದೆ. ಶಾಲಾಪಠ್ಯವಾಗಿ ಅಥವಾ ಉದ್ಯೋಗ ಸಂಬಂಧಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ   ಓದುವುದು  ವಿದ್ಯಾಭ್ಯಾಸದ ಅಂಗ ಹಾಗೂ ಆಧುನಿಕ ಬದುಕಿನ ಅನಿವಾರ್ಯತೆ.  ಆದರೆ ನಮ್ಮ ಮನೋರಂಜನೆಗಾಗಿ, ಜ್ಞಾನದ ಪರಿಧಿಯನ್ನು ವಿಸ್ತರಿಸುವುದಕ್ಕಾಗಿ ಓದುವುದು ವ್ಯಾಸಂಗದ ಹವ್ಯಾಸ ಎನಿಸುತ್ತದೆ.

ಓದುವ ಆಸಕ್ತಿ ಇರುವವರ ಮನೆಯಲ್ಲಿ ಬಹಳಷ್ಟು ಹೊಸತು, ಹಳೆಯ ಪುಸ್ತಕಗಳನ್ನು ಓರಣವಾಗಿ ಜೋಡಿಸಿರುತ್ತಾರೆ. ಇವುಗಳಲ್ಲಿ ಬಹಳಷ್ಟು ಮಕ್ಕಳ ಕಥೆ ಪುಸ್ತಕಗಳು, ರಾಮಾಯಣ, ಮಹಾಭಾರತದಂತಹ ಪೌರಾಣಿಕ ಗ್ರಂಥಗಳು, ಅವರವರ ಆಸಕ್ತಿಗೆ ತಕ್ಕಂತೆ ನಿಯತಕಾಲಿಕಗಳು, ಸಾಮಾಜಿಕ/ಪತ್ತೇದಾರಿ ಕಾದಂಬರಿಗಳು, ಪ್ರವಾಸಕಥನಗಳು, ವಿವಿಧ ಪಾಕಪುಸ್ತಕಗಳು, ವೈಜ್ಞಾನಿಕ  ಪುಸ್ತಕಗಳು ..ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮನೆಯಲ್ಲಿಯೇ ಇರುವ ಪುಟ್ಟ ಗ್ರಂಥಾಲಯದ ಶೆಲ್ಫ್ ಗಳನ್ನು ಗಮನಿಸಿದರೆ ವೈವಿಧ್ಯಮಯವಾದ ಲೋಕ ಅನಾವರಣಗೊಳ್ಳುತ್ತದೆ. ಯಾವುದೋ ಪುಸ್ತಕದ ಮಳಿಗೆಗಳಲ್ಲಿ ಕೊಂಡ ಪುಸ್ತಕಗಳು, ತಾವೇ ವಿಚಾರಿಸಿ ಕಾಯ್ದಿರಿಸಿ ಖರೀದಿಸಿದ ಪ್ರಸಿದ್ಧವಾದ ಪುಸ್ತಕಗಳು,  ಸ್ನೇಹಿತರು ಪ್ರೀತಿಯಿಂದ ಕೊಟ್ಟ ಪುಸ್ತಕಗಳು,  ಬರಹಗಾರರು  ಅಭಿಮಾನದಿಂದ ಕೊಟ್ಟ ಪುಸ್ತಕಗಳು, ಒಂದು ಪುಸ್ತಕ ಕೊಂಡಾಗ ಇನ್ನೊಂದು ಉಚಿತ ಎಂಬಂತೆ ಸಿಕ್ಕಿದ ಪುಸ್ತಕಗಳು, ಒಂದಕ್ಕಿಂತ ಹೆಚ್ಚು ಬಾರಿ ಓದಿದ ಪುಸ್ತಕಗಳು, ಒಮ್ಮೆಯೂ ಓದಿಲ್ಲದ ಪುಸ್ತಕಗಳು, ಅರ್ಧ ಓದಿದ ಪುಸ್ತಕಗಳು, ಹೊಸಕಾಗದದ ಸುವಾಸನೆಯನ್ನು ಬೀರುತ್ತಿರುವ ಪುಸ್ತಕಗಳು, ಕಾಗದಗಳು ಹಳದಿಬಣ್ಣಕ್ಕೆ ತಿರುಗು  ಗೆದ್ದಲು ತಿಂದ ಪುಟವಿರುವ ಪುಸ್ತಕಗಳು……. ಪುಸ್ತಕಲೋಕದ ಒಳಹೊಕ್ಕವರಿಗೆ ಮಾತ್ರ ಲಭ್ಯವಾಗುವ ಸುಂದರ ಅನುಭೂತಿ ಇದು.

 


ಬದಲಾದ ಜೀವನಕ್ರಮದಲ್ಲಿ ಪುಸ್ತಕದ ಶೈಲಿ ಹಾಗೂ ಓದಿನ ಸ್ವರೂಪಗಳೂ ಬದಲಾಗಿವೆ. ತಾಳೆಗರಿಯ ಪುಸ್ತಕಗಳಲ್ಲಿ ಮೂಡಿಬಂದ ಬರಹಗಳು  ಕಾಗದದ ಪುಸ್ತಕಗಳಾಗಿ ಮುಂದುವರಿದು ಈಗ ಡಿಜಿಟಲ್ ಪುಸ್ತಕಗಳು ಅಂಗೈಯಲ್ಲಿರುವ ಮೊಬೈಲ್ ಫೋನ್ ನಲ್ಲಿ ಸಿಗುತ್ತಿವೆ.  ಪುಸ್ತಕಗಳಿಗಾಗಿ ಗ್ರಂಥಾಲಯದ ಶೆಲ್ಫಿನಲ್ಲಿ ಪುಸ್ತಕಗಳನ್ನು ಹುಡುಕುವ ಬದಲು,  ಇ-ಬುಕ್ ಸ್ಟೋರ್ ನಲ್ಲಿ  ಬೇಕಾದ ಪುಸ್ತಕಗಳನ್ನು ಕೊಂಡು ಅಥವಾ ಡೌನ್ ಲೋಡ್ ಮಾಡಿ ನೂರಾರು ಇ-ಪುಸ್ತಕಗಳನ್ನು ಮೊಬೈಲ್ ಫೋನ್ ನಲ್ಲಿಯೇ ಓದಬಹುದು. ಪುಸ್ತಕಗಳನ್ನು ಓದಲು  ಎಷ್ಟೇ ನವನವೀನ  ಸೌಕರ್ಯಗಳಿದ್ದರೂ,   ಮುದ್ರಿತ ಪುಸ್ತಕವನ್ನು ಕೈಯಲ್ಲಿ ಹಿಡಿದು ಹೊಸಕಾಗದದ ಸುವಾಸನೆಯನ್ನು ಅಘ್ರಾಣಿಸುತ್ತಾ  ಓದುವ ಖುಷಿಗೆ ಬೆಲೆ ಕಟ್ಟಲಾಗದು.

‘ಜ್ಞಾನವು ಪುಸ್ತಕದಲ್ಲಿದ್ದರೆ ಸಾಲದು, ಮಸ್ತಕದಲ್ಲಿಯೂ ಇರಬೇಕು, ಅದಕ್ಕಾಗಿ ಶ್ರದ್ಧೆಯಿಂದ  ಓದಬೇಕು. ಉತ್ತಮ ಪುಸ್ತಕದಂತಹ ಗೆಳೆಯ ಬೇರೆ ಇಲ್ಲ’ ಎಂಬುದು ಓದಿನ ಮೌಲ್ಯ ಅರಿತವರ ಮಾತು.  ಪರೀಕ್ಷೆಗಾಗಿ, ಉದ್ಯೋಗಕ್ಕಾಗಿ ಓದು ಈ ದಿನಗಳ ಅನಿವಾರ್ಯತೆ.  ಮನೋರಂಜನೆಗಾಗಿ ಹಾಗೂ ಜ್ಞಾನವೃದ್ಧಿಗಾಗಿ ಓದು ಅವರವರ ಅಭಿರುಚಿ .  ನಮ್ಮ ಅಭಿರುಚಿಗೆ ಪೂರಕವಾದ ಉತ್ತಮ ಪುಸ್ತಕಗಳ ಓದುವಿಕೆಯು ನಮ್ಮ ವ್ಯಕ್ತಿತ್ವಕ್ಕೆ ಮೆರುಗನ್ನೀಯುತ್ತದೆ ಹಾಗೂ  ಅತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಸಾಧನೆಯ ಹಾದಿ ಸುಲಭವಾದುದಲ್ಲ. ಅದಕ್ಕೆ ಅಗತ್ಯವಾದ ಜ್ಞಾನವನ್ನು ಪಡೆದುಕೊಳ್ಳಲು  ವಿಸ್ತಾರವಾದ  ಓದಿನ ಅಗತ್ಯವಿದೆ. ಇಂದು ನಾವು ತಂತಮ್ಮ ಕ್ಷೇತ್ರದಲ್ಲಿ ಸಾಧಕರೆಂದು ಗುರುತಿಸುವವರಲ್ಲಿ ಹೆಚ್ಚಿನವರಿಗೆ ವಿಸ್ತಾರವಾದ ಓದು ಹಾಗೂ ಆಳವಾದ  ಅಧ್ಯಯನಶೀಲತೆ ಇದೆ. ಉತ್ತಮ ಪುಸ್ತಕಗಳನ್ನು ಒಂದು ಬಾರಿ ಓದಿದರೆ ಸಾಲದು, ಇನ್ನೊಮ್ಮೆ ಮಗುದೊಮ್ಮೆ ಓದಿದರೆ ನಮ್ಮ ಅರಿವಿನ ಹೊಳಹು ಹಾಗೂ ಪರಿಧಿ  ಹೆಚ್ಚಾಗುತ್ತದೆ.  ಓದುವಿಕೆ, ಪುಸ್ತಕ, ಪ್ರಕಾಶನ, ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮೂಡಿಸಲು ವಿಶ್ವಸಂಸ್ಥೆಯ  ಅಂಗವಾದ ಯುನೆಸ್ಕೋ (UNESCO) , ಎಪ್ರಿಲ್ 23′ ರನ್ನು ‘ವಿಶ್ವ ಪುಸ್ತಕ ದಿನ’ ಎಂದು ಘೋಷಿಸಿದೆ.

 – ಹೇಮಮಾಲಾ.ಬಿ, ಮೈಸೂರು,

9 Responses

  1. Shankari Sharma says:

    ಸಂದರ್ಭೋಚಿತ ಸುಂದರ ಲೇಖನ…ಧನ್ಯವಾದಗಳು.

  2. Shruthi Sharma says:

    ಓದು ಒಂದು ಉತ್ತಮ ಸಂಗಾತಿ. ಓದಿನ ಬಗೆಗಿನ ವಿಶೇಷ ಲೇಖನ ಚೆಂದವಾಗಿ ಮೂಡಿ ಬಂದಿದೆ 🙂

  3. Nayana Bajakudlu says:

    ಬಾಲ್ಯದ ದಿನಗಳಲ್ಲಿ ಪುಸ್ತಕಗಳನ್ನು ಸ್ವಲ್ಪವೂ ಬಿಟ್ಟಿರಲಾರದ ರೀತಿ ಓದುತಿದ್ದದ್ದು ನೆನಪಾಯಿತು . ಹೈಸ್ಕೂಲ್ ಅಲ್ಲಿ ಇರುವಾಗ ಪಾಠ ಪುಸ್ತಕಗಳ ನಡುವೆ ಬಾಲಮಂಗಳ, ಚಂದಮಾಮ ಗಳನ್ನೂ ಇಟ್ಟು ಓದುತ್ತಿರುವಾಗ ಟೀಚರ್ ಕೈಗೆ ಸಿಕ್ಕಿ ಹಾಕಿಕೊಂಡು ಕಿವಿ ಹಿಂಡಿಸಿಕೊಂಡ ಸೊಗಸಾದ ನೆನಪು ಮೂಡಿ ಏನೋ ಹರುಷ ಮತ್ತೊಮ್ಮೆ

  4. Anonymous says:

    ಹೇಮಮಾಲಾ ಒಳ್ಳೆಯ ಸಂದರ್ಭೋಚಿತ ಬರಹಗಳು. ನಮ್ಮ ಶಾಲೆಯಲ್ಲಿ ಮಕ್ಕಳು ಪುಸ್ತಕ ಓದಲು ಮನೆಗೆ ಕೊಂಡೊಯ್ಯವ ಸೌಲಭ್ಯ ವಿದೆ. ಕೆಲವು ಮಕ್ಕಳು ಅದರ ಓದಿಯಾದ ಪುಟಕ್ಕೆ ಮೂಲೆ ಮಡಿಸಿಡುವ ಕ್ರಮ.ನೋಡುತ್ತೇನೆ. ಇದು ಸರ್ವತಾ ಸಲ್ಲದು. ಓದಿಯಾದ ಗುರುತಿಗೆ ಬೇರೆ ಕಾಗದಚೂರೋ ಇನ್ನಿತರ ಪುಸ್ತಕಕ್ಕೆ ಧಕ್ಕೆಯಾಗದಂತೆ ಇಡಬೇಕು. ಪುಸ್ತಕ ಪ್ರೀತಿ ಇದ್ದವರು ಪುಸ್ತಕ ಜೋಪಾನವಾಗಿಡಲು ಕಲಿಯಬೇಕು ಎಂದು ಎಚ್ಚರಿಕೆ ನೀಡುತ್ತೇನೆ.ಇದು ನೆನಪಾಯ್ತು.
    ಒಳ್ಳೆಯ ಬರಹ.

  5. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

    “ಜ್ಞಾನವು ಪುಸ್ತಕದಲ್ಲಿದ್ದರೆ ಸಾಲದು. ಮಸ್ತಕದಲ್ಲೂ ಇರಬೇಕು.” ಒಳ್ಳೆಯ ಸಂದೇಶ. ಓದಿಸಿಗೊಂಡು ಹೋಗುವ ಲೇಖನ.
    ನಮ್ಮ ಶಾಲೆಯಲ್ಲಿ ಮಕ್ಕಳು ಪುಸ್ತಕ ಮನೆಗೊಯ್ದರೆ ಅದು ಕೆಲವು ವಾಪಾಸು ಬರುವಾಗ ಮೂಲೆಮಡಚುವುದೋ ಕಾಗದ ಹರಿಯುವುದೋ ಆಗುವುದಿದೆ. ಅದಕ್ಕೆ ನಾನು ಅವರಿಗೆ ಎಚ್ಚರಿಕೆ ಕೊಡುವುದಿದೆ. “ಪುಸ್ತಕ ಪ್ರೀತಿಯಿದ್ದವರು ಓದಿದರೆ ಪುಸ್ತಕ ಹಾಳಾಗದೆ ಹಾಗೇ ಇರುತ್ತದೆ. ಓದಿದ ಗುರುತಿಗೆ ಮೂಲೆ ಮಡಚಿಡುವುದಲ್ಲ. ಬೇರೆ ಕಾಗದ ಚೂರು ಇಡಬೇಕು”. ಎಂದು. ಹೀಗೆ ಹಲವು ಬಾರಿ ಹೇಳಿದಾಗ ಮತ್ತೆ ಸರಿಯಾಗುವುದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: