ಬದುಕು ಮುಗಿಯುವ ಮುನ್ನ
“ಮಿಡಿಯುತ್ತಿರೋ ಹೃದಯ,
ಸರಿಯುತ್ತಿರೋ ಸಮಯ,
ಯಾವಾಗ ನಿಲ್ಲುವುದೆಂದು ಇಲ್ಲಿ
ಅರಿತವರಾರೋ ಗೆಳೆಯ?,
ಬರೆ ನೀ ಸುಂದರವಾಗಿ ಈ ಬಾಳೆಂಬ ಕಥೆಯ,
ಬದುಕು ಮುಗಿಯುವ ಮುನ್ನ”.
“ಕ್ಷಣ ಕ್ಷಣಕ್ಕೂ ಮುಸುಕಿನ ಗುದ್ದಾಟ,
ಜೊತೆಯವರೊಡನೆ ಆಸ್ತಿ ಅಂತಸ್ತಿನ ಸಲುವಾಗಿ ಹೊಡೆದಾಟ,
ಇವೆಲ್ಲವ ಬಿಟ್ಟು ಸಹಬಾಳ್ವೆಯ ಸುಂದರ ಪಾಠ,
ಕಲಿತು ಸಾಗು ಜೀವವೇ
ಬದುಕು ಮುಗಿಯುವ ಮುನ್ನ”.
“ಆವರಿಸಿರಬಹುದು ನೋವು,
ನೆರಳಿನಂತಿರಬಹುದು ಸಾವು,
ಆದರೂ ಮಾಸದಿರಲಿ ತುಟಿಯಂಚಿನ ನಗುವು,
ಜೊತೆಗಿರಲಿ ಎಲ್ಲವ ಗೆಲ್ಲೊ ಒಲವು,
ಸಾಗು ಹೃದಯವೇ ಈ ವಾತ್ಸಲ್ಯವ ಜೊತೆಯಾಗಿಸಿಕೊಂಡು ಇಲ್ಲಿ
ಬದುಕು ಮುಗಿಯುವ ಮುನ್ನ”.
“ಒಂದೊಂದು ಹೂವಿಗೂ ಒಂದೊಂದು ಬಣ್ಣ,
ಅಂತೆಯೇ ವೈವಿಧ್ಯಮಯ ಇಲ್ಲಿ ಜೀವನ,
ಕೆಲವೊಂದು ಬಂಧಗಳೋ ಹರಡೋ ಚಂದನ,
ಮತ್ತೆ ಕೆಲವೊಂದು ತೀರಿಸಿ ಮುಗಿಯದ ಋಣ,
ಬಾಳ ಹೂದೋಟದ ಈ ಬಗೆ ಬಗೆಯ ವರ್ಣ,
ಸವಿ ನೀ
ಬದುಕು ಮುಗಿಯುವ ಮುನ್ನ”.
“ವಿಧಿಯ ಸಂಚಿಲ್ಲಿ ನಿಗೂಢ,
ಒಮ್ಮೆ ವಾಸ್ತವ, ಮತ್ತೊಮ್ಮೆ ಪವಾಡ,
ಮಳೆಯಾಗಿ ಸುರಿವಂತೆ ಆಗಸದ ಕಾರ್ಮೋಡ,
ಹೊಂದಲು ಸಹನೆ ಕರಗಿ ಕಷ್ಟಗಳಿಲ್ಲಿ
ಸೇರುವುದು ಬಾಳಿನ ದೋಣಿ
ಒಂದಿಲ್ಲೊಂದು ದಡ,
ನಡೆ ನೀ ಆಹ್ಲಾದಿಸುತ್ತಾ ಕಷ್ಟ ಸುಖಗಳ ಈ ಪಯಣ,
ಬದುಕು ಮುಗಿಯುವ………….
ಮುನ್ನ…..”
– ನಯನ ಬಜಕೂಡ್ಲು.
ಸುಂದರ ಕವನ. ಅಭಿನಂದನೆಗಳು.
Good going Atte❤
ಚೆಂದದ ಕವನ …