ಇಂಜಿನಿಯರ್ ದಿನ : ಸೆಪ್ಟೆಂಬರ್ 15
ಇಂಜಿನಿಯರ್ ಎಂದರೆ ‘ವಿಶ್ವೇಶ್ವರಯ್ಯನವರ ಹಾಗೆ ಇರಬೇಕು’ ಎಂದು ಪ್ರಪಂಚವೇ ಕೊಂಡಾಡಿದ ಭಾರತದ ಅದ್ವಿತೀಯ ಮೇಧಾವಿ ‘ಭಾರತರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ’ನವರು. ಅವರ ಜನ್ಮದಿನ 15 ಸೆಪ್ಟೆಂಬರ್ 1860. ಅವರು ತಮ್ಮ ಬಾಲ್ಯದಲ್ಲಿ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿದ್ದರು. ತನ್ನ ಉದ್ಯೋಗ ಪರ್ವದಲ್ಲಿ ದೇಶದ ವಿವಿದೆಡೆ ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ಕರ್ನಾಟಕಕ್ಕೆ ಸರ್. ಎಮ್. ವಿ ಕೊಡುಗೆ ಅಪಾರ. ಅವರ ಶಿಸ್ತಿನ ಜೀವನ, ಸಮಯಪರಿಪಾಲನೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಇವೆಲ್ಲಾ ಪ್ರಶ್ನಾತೀತ. .
ಸರ್. ಎಂ.ವಿ ಅವರ ಜೀವಿತಾವಧಿ 1860-1962. ಎಳವೆಯಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡ ಬಾಲಕ ವಿಶ್ವೇಶ್ವರಯ್ಯ ಅವರು ಕಡು ಬಡತನದ ನಡುವೆ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಮುಂಬೈ ಪ್ರಾಂತದಲ್ಲಿ ವೃತ್ತಿಜೀವನ ಆರಂಭಿಸಿದರು. ವಿಶ್ವೇಶ್ವರಯ್ಯ ಅವರಿಗೆ ಅಂದಿನ ಸರಕಾರವು ಪೂನಾ, ನಾಸಿಕ್, ಹೈದರಾಬಾದ್ ಮೊದಲಾದ ಕಡೆ ಪ್ರಮುಖ ನೀರಾವರಿ ಯೋಜನೆಗಳ ಉಸ್ತುವಾರಿಯನ್ನು ವಹಿಸಿತು. ತಮ್ಮ ಅಪಾರವಾದ ತಂತ್ರಜ್ಞಾನ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಕಾರ್ಯತತ್ಪರತೆಯಿಂದಾಗಿ, 1924 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ದಿವಾನ್ ಆಗಿ ನಿಯೋಜಿತರಾದರು
ನೀರಾವರಿ ಯೋಜನೆಗಳಲ್ಲಿ ಸರ್. ಎಂ.ವಿ ಅವರು ಅವಿಷ್ಕರಿಸಿದ ‘ಜಲಾಶಯಗಳಿಗೆ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸುವ ಪದ್ಧತಿ‘ಯು ವಿಶ್ವಮಾನ್ಯಗೊಂಡು ಅವರಿಗೆ ಈ ಸಾಧನೆಗಾಗಿ ಪೇಟೆಂಟ್ ಲಭಿಸಿತು. ಈಗಿನ ಮಂಡ್ಯಜಿಲ್ಲೆಯಲ್ಲಿರುವ ಪ್ರಸಿದ್ಧ ಕೃಷ್ಣರಾಜಸಾಗರ ಅಣೆಕಟ್ಟಿನ ವಾಸ್ತುಶಿಲ್ಪಿ ಸರ್. ಎಂ.ವಿ. ಮೈಸೂರಿನ ದಿವಾನರಾಗಿದ್ದ ಕಾಲಾವಧಿಯಲ್ಲಿ, ಅವರ ಮುಂದಾಳುತನದಲ್ಲಿ ಸ್ಥಾಪಿಸಲ್ಪಟ್ಟಿರುವ ಕೈಗಾರಿಕೆಗಳಲ್ಲಿ ಭದ್ರಾವತಿಯ ಉಕ್ಕು ಕಾರ್ಖಾನೆ, ಜೋಗದ ಜಲವಿದ್ಯುತ್ ಯೋಜನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಮೈಸೂರು ಸಕ್ಕರೆ ಕಾರ್ಖಾನೆ ಇತ್ಯಾದಿ ಪ್ರಮುಖವಾದುವು . ಇವಲ್ಲದೆ, ಮೈಸೂರು, ಬೆಂಗಳೂರಿನಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಗ್ರಂಥಾಲಯಗಳು, ನೀರಾವರಿ ಯೋಜನೆಗಳು, ಕನ್ನಡ ಸಾಹಿತ್ಯ ಪರಿಷತ್, ಬ್ಯಾಂಕ್ ಗಳು ಇತ್ಯಾದಿ ಸಮಾಜಮುಖಿ ವ್ಯವಸ್ಥೆಗಳನ್ನು ರೂಪಿಸಿದ ಕೀರ್ತಿ ಸರ್. ಎಂ.ವಿ.ಗೆ ಸಲ್ಲುತ್ತದೆ. ತಮ್ಮ ಅಪ್ರತಿಮ ಸಾಧನೆಗಾಗಿ ಬ್ರಿಟಿಷ್ ಸರಕಾರವು ಕೊಡುವ ‘ನೈಟ್ ಹುಡ್ ‘ ಪದವಿಯನ್ನು 1915 ರಲ್ಲಿಯೂ , ಸ್ವತಂತ್ರ ಭಾರತ ಸರಕಾರದ ಅತ್ಯುನ್ನತ ಪದವಿಯಾದ ‘ಭಾರತ ರತ್ನ’ವನ್ನು 1955 ರಲ್ಲಿಯೂ ಪಡೆದುಕೊಂಡರು. ಶತಾಯುಷಿಯಾದ ಸರ್. ಎಂ.ವಿ ಅವರು ಎಪ್ರಿ ಲ್ 14,1962 ರಂದು ದೈವಾಧೀನರಾದರು.
ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಸರ್. ಎಂ.ವಿ ಅವರು ವಾಸವಿದ್ದ ಮನೆಯು ನವೀಕರಣಗೊಂಡು ಮ್ಯೂಸಿಯಂ ಆಗಿದೆ. ಅದೇ ಆವರಣದಲ್ಲಿ ಅವರು ಹಿಂದೆ ವಾಸಿಸುತ್ತಿದ್ದ ಹೆಂಚಿನ ಮನೆ ಇದೆ. ಅವರಿಗೆ ಲಭಿಸಿದ ನೂರಾರು ಉಪಾಧಿಗಳು, ಪ್ರಶಸ್ತಿಗಳು, ಬಳಸುತ್ತಿದ್ದ ವಸ್ತುಗಳು ಇತ್ಯಾದಿಗಳನ್ನು ಅಲ್ಲಿ ಪ್ರದರ್ಶನಕ್ಕಿಡಲಾಗಿದೆ. ಅನತಿ ದೂರದಲ್ಲಿ, ಅವರ ಸಮಾಧಿಯೂ ಇದೆ.
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಸರ್ ಎಂ.ವಿ ಅವರ ಗೌರವಾರ್ಥ ಅವರ ಜನ್ಮದಿನವಾದ 15 ಸೆಪ್ಟೆಂಬರ್ ಅನ್ನು ‘ಇಂಜಿನಿಯರ್ ಗಳ ದಿನ’ ವನ್ನಾಗಿ ಆಚರಿಸಲಾಗುತ್ತಿದೆ.
– ಹೇಮಮಾಲಾ.ಬಿ
ನಾಡು ಕಂಡ ಶ್ರೇಷ್ಠ ತಂತ್ರಜ್ಞ, ಮೇಧಾವಿ, ದೂರದೃಷ್ಟಿ ಉಳ್ಳ ಆಡಳಿತಗಾರ, ನವಕರ್ನಾಟಕ ನಿರ್ಮಾತೃ, ಪ್ರಾಮಾಣಿಕತೆ ಮತ್ತು ಶಿಸ್ತಿಗೆ ಉತ್ತಮ ಉದಾಹರಣೆ ಮತ್ತು ಸರ್ವಕಾಲಕ್ಕೂ ವಂದನೀಯರಾದ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಗೆ ನನ್ನ ನಮನಗಳು.