ನೀನಾಸಂನಲ್ಲಿ 1.5 ದಿನ
ಮೇ ತಿಂಗಳ 10 ಅಥವ 11ನೇ ತಾರೀಖು ಇರಬೇಕು, ಸಂಬಂಧದಲ್ಲಿ ಅಣ್ಣನಲ್ಲದಿದ್ದರೂ ಅಣ್ಣನಾದ ವಿಜಯ ನಾನು ಛಾಯಚಿತ್ರದ 3 ದಿನದ ವಸತಿ ಕೂಡಿದ ವರ್ಕ್ ಶಾಪ್ಗೆ ಹೋಗುತ್ತಿದ್ದೇನೆ ಅಂದರು. ಹಾದಾ ಯಾರಾದರೂ ಬರಬಹುದಾ ಎಂದಿದ್ದಕ್ಕೆ, ಹೂಂಂ ಯಾರಾದರೂ ಬರಬಹುದು ಕ್ಯಾಮರಾ ಇದ್ದರೆ ಅಂದರು. ಸರಿ ಯೋಚಿಸಿ ಮನೆಯಲ್ಲಿ ವಿಚಾರಿಸಿ 2_3 ದಿನದಲ್ಲಿ ಹೇಳುವೆ ಎಂದೆ. ಮನೆಯಲ್ಲಿ ಮಕ್ಕಳ ಬಿಟ್ಟು ಹೋಗುವುದು ಶಾಲೆಯ ಸಮಯದಲ್ಲಿ ಎಂದರೆ ಸವಾಲು. ಅದರಲ್ಲೂ ನಾನು ಹೆಚ್ಚು ಚಳಿಯಲ್ಲಿ ಹೋಗುವುದೆಂದರೆ ಮತ್ತೊಂದು ಸವಾಲು.
ಆದರೂ ಮನೆಯಲ್ಲಿ ಹೋಗಿ ಬಾ ನಿನಗೂ ಬದಲಾವಣೆಯಿರಲಿ ಎಂದು ಎಲ್ಲರೂ ಒಪ್ಪಿದರು.ಹಣ ಕಟ್ಟಿದ್ದಾಯಿತು ಮನೆಯವರು ಜೊತೆಯಲ್ಲಿ ಬರುವುವುದು ಎಂದಾಯಿತು. ಹೊಸ ತರಹದ ಪ್ರಯೋಗ. ಗೊತ್ತಿಲ್ಲ ಹೇಗಿರಬಹುದು ಎಂದು ಕುತೂಹಲ. ಕ್ಯಾಮರ ಬಳಸುವುದರಲ್ಲಿ ಅಂತಹದೇನಿಲ್ಲ ಅನ್ನುವುದೂ ಒಂದು ಕಡೆ. ಸರಿ ನಿಗದಿತ 15ರಿಂದ 17ನೇ ತಾರೀಖು ಜೂನ್ ತಿಂಗಳ 2018 ಹತ್ತಿರ ಬಂತು. ಮಳೆ ಸ್ವಲ್ಪ ಹೆಚ್ಚೇ ಇದ್ದುದರ ಪರಿಣಾಮ ಚಳಿಯೂ ಸ್ವಲ್ಪ ಹೆಚ್ಚಿತ್ತು. 9ಕ್ಕೆ ನೀನಾಸಂ ತಲುಪಬೇಕಿತ್ತು ಹಾಗಾಗಿ 135 ಕಿಮೀ ದಾರಿ ಸವೆಸಲು 6 ಗಂಟೆಗೆ ಮನೆಬಿಟ್ಟಿದ್ದಾಯಿತು.
ಮಲೆನಾಡಿನ ಪರಿಸರದ ಮಧ್ಯೆ ನೀನಾಸಂ ಸುಂದರ. ಕೆಂಪು ಬಣ್ಣದ ನಡುವೆ ಬಿಳಿಯ ಬಣ್ಣದ ಚಿತ್ತಾರ ಗೋಡೆಯ ನೀನಾಸಂ ದೊಡ್ಡ ಆವರಣ. ಸುತ್ತ ರೂಮ್ಗಳು ಮತ್ತೊಂದೆಡೆ ಊಟದ ಮನೆ ಮಧ್ಯ ಥಿಯೇಟರ್. ನಮ್ಮೆಲ್ಲಾ ಕಾರ್ಯ್ಯಕ್ರಮ ಥಿಯೇಟರ್ನಲ್ಲಿಯೇ. ಮಧ್ಯ ಕಲಿಕೆಗೆ ಕ್ಯಾಮರಾ ಹಿಡಿದು ಹೊರಗೆ ಹೋಗುವುದು. ಮೊದಲ ದಿನದ ಮೊದಲ ಭಾಗ ಹೆಚ್ಚಾಗಿ ಕ್ಯಾಮರಾ ಬಳಸುವ ಪರಿಯ ಪರಿಚಯ. ಮೊದಲಿಗೆ ಬೇಕಾ ಎನ್ನಿಸಿತು. ನಂತರ ಕೆಲ ವಿಷಯಗಳು ತಿಳಿದಾಗ ಖುಷಿಯಾಯಿತು. ಮನೆಗೆ ಬಂದು ಪ್ರಯೋಗಿಸುವುದೂ ಇತ್ತು ಇನ್ನೂ.
ಚಳಿ ಹೆಚ್ಚಾಯಿತು. ಅದಕ್ಕಿಂತಾ ಸೊಳ್ಳೆಯ ವಿಪರೀತ ಕಾಟ. ಜೀನ್ಸ ಕಾಟನ್ ಮತ್ತೆ ಸ್ವೆಟರ್ ಕಿವಿಗೆ ಹತ್ತಿ ತಲೆಗೆ ಶಾಲ್ ಎಲ್ಲವೂ ಕಡಿಮೆಯಾಯಿತು. ಕೆಲ ಒಳ್ಳೆಯ ವಿಚಾರಗಳಂತೂ ತಿಳಿಯಿತು. ಅನುಭವ ಹಂಚಿಕೊಳ್ಳಲು ಬಂದವರೆಲ್ಲಾ ಅಂತರಾಷ್ಟ್ರೀಯ ಮಟ್ಟದಲ್ಲಿ ಪುರಸ್ಕೃತರೇ. ಒಂದು ರೀತಿಯಲ್ಲಿ ನಮ್ಮ ಪುಣ್ಯ. ಬೆಳಕಿನ ಆಟದ ಒಂದು ಅನುಭವಿಗಳ ನೋಟದೊಂದಿಗೆ ತಿಳಿಯುವ ಪರಿ. ಆದರೂ 7.30 ತನಕ ಎಲ್ಲರ ಅನುಭವ ಕೇಳಿ ಹೊರಡುವ ಹೊತ್ತಿಗೆ ನಡುಕ ಹೆಚ್ಚಾಗಿತ್ತು. ಸಾಗರದಲ್ಲಿ ಉಳಿದು ಮತ್ತೆ ಬೆಳಗಿನ 5:30ಕ್ಕೆ ತಯಾರಾಗಿ ಶರಾವತಿ ಹಿನ್ನಿರನ ಪ್ರದೇಶಕ್ಕೆ ಹೋಗಿದ್ದಾಯಿತು. ಇಲ್ಲಿಗೆ ಆಣೇಕಟ್ಟಿಗೆ ಹೆಚ್ಚಾಗಿ ಬಂದ ನೀರನ್ನು ಬಿಡಲಾಗುತ್ತದಂತೆ.
ಪರಿಸರವಂತೂ ಮನ ಸೂರೆಗೊಳ್ಳುವಂತಹುದು. ಒಬ್ಬರೇ ಬರುವ ಜಾಗವಂತೂ ಅಲ್ಲ. ಮರಗಳು ಬರುಡು. ಕಾಡುವ ಬೇರು. ದಡ ಕೊರೆದ ಮಣ್ಣಿನ ಹಾಸು. ನೀರಿನ ಹಲವೆಡೆ ಮರಗಳು ಒಂಟಿತನದ ಧೃಡತೆಯ ಛಾಪು. ಮುಂದೆ ಇಕ್ಕೆರಿ ದೇವಸ್ಥಾನ. ಹೋಯ್ಯಸಳರ ಪುರಾತನ ದೇವಸ್ಥಾನ. ಛಾಯಾಗ್ರಾಹಕರಿಗೆ ಸರಿಯಾದ ಜಾಗ ಕಲಿಯಲು. ಸ್ವಲ್ಪ ಹೆಚ್ಚು ಸಮಯ ಕೊಡಲೇ ಬೇಕಾದ ಜಾಗ. ಮರಳಿ ನೀನಾಸಂಗೆ ಬರುವ ಹೊತ್ತಿಗೆ ಮತ್ತೆ ಚಳಿ ನಡುಕ. ಹಂಚಿನ ಥಿಯೇಟರ್ನಲ್ಲಿ ಪ್ಯಾನಿನ ಗಾಳಿ ವಿಪರೀತವಾಗಿ ಚಳಿ ತಡಯಲಾಗದೆ 1.5 ದಿನಕ್ಕೆ ಪ್ರಯಾಣ ಹಿಂದಿರುಗಬೇಕಾಯಿತು. ಹೊಸದೊಂದು ಚಂದದ ಅನುಭವ..
-ಉಷಾ ಚಂದ್ರು