ಆ ದಿನಗಳ ಮೆಲುಕು

Share Button

ಗತ ಬದುಕಿನ‌ ಇತಿಹಾಸದಲ್ಲಿ ನಾವು ಅದೆಷ್ಟೋ ದಿನಗಳನ್ನು ಕಳೆದು ಬಂದುದರ ನೆನಪುಗಳಿವೆ. ಅಲ್ಲಿ ನೋವೂ ಇದೆ, ಮರೆಯಲಾಗದ ನಲಿವೂ ಇದೆ. ಇನ್ನು ಕೆಲವು ಕ್ಷಣಗಳು ಸ್ಮೃತಿಪಟಲದಿಂದ ಸಂಪೂರ್ಣವಾಗಿ ಮಾಸಿ, ಮರೆಯಾಗಿಬಿಟ್ಟಿವೆ. ಬೇಕೆಂದು ನೆನಪಿನ ಬಾಗಿಲನ್ನುತೆರೆದರೂ, ಏನೂ ಪ್ರಯೋಜನವಾಗುತ್ತಿಲ್ಲ. ಮನುಷ್ಯನಿಗೆ ಬುದ್ಧಿಶಕ್ತಿ ಜಾಗ್ರತವಾದಾಗಿನಿಂದಲೇ ಅವನ ಚಿತ್ತವು ಅನೇಕ ಸಂಗತಿಗಳನ್ನು ಸೆರೆಹಿಡಿದುಕೊಳ್ಳಲು ತೊಡಗುತ್ತದೆ‌ಎಂದು ಕೇಳಿದ್ದೇವೆ. ಆದರೆ ನಮಗೆ ಬೇಕೆನಿಸಲೀ, ಬೇಡವೆನಿಸಲೀ ಅದ್ಯಾವುದನ್ನೂ ಗಮನಿಸದ ಸ್ಮೃತಿಯುತನಗೆ ಬೇಕಾದುದನ್ನು ಮಾತ್ರ ತನ್ನೊಳಗೆ ಇರಿಸಿಕೊಳ್ಳುತ್ತದೆ. ಅದೇನೇ‌ಇದ್ದರೂ, ನಮ್ಮ ಹಿಂದಿನ ಬದುಕಿನ ಪುಟ ಪುಟಗಳನ್ನು ತೆರೆಯುತ್ತಾ ಹೋದಂತೆ‌ಅಲ್ಲಿ ‘ಆ ದಿನಗಳೂ’ ಕೂಡ ಬಹಳಷ್ಟಿವೆ ಎನಿಸುತ್ತದೆಯಲ್ಲವೇ?ಅದು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದೂ ಆಗಿರಬಹುದು.

ವಿದ್ಯಾರ್ಥಿಗಳಾಗಿದ್ದು, ಒಂದೂರಿನಿಂದ ಮತ್ತೊಂದೂರಿಗೆ ಬಂದು ಉಳಿದುಕೊಂಡವರಿಗೆ ‘ಆ ದಿನಗಳು’ ತುಂಬಾ ಸಂತಸವನ್ನೇಕೊಟ್ಟಿರುತ್ತವೆ. ಸಂಬಂಧಿಕರ ಮನೆಯಲ್ಲೋ, ಸ್ನೇಹಿತರ ಮನೆಯಲ್ಲೋ‌ ಇದ್ದರೆ ಬಹುಶಃ ಇಷ್ಟೊಂದು‌ ಆನಂದ ಸಿಗಲಿಕ್ಕಿಲ್ಲ. ಆದರೆ, ಅನೇಕ ವಿದ್ಯಾರ್ಥಿಗಳೊಂದೆಡೆ ಸೇರಿ, ಒಂದೇ ಸೂರಿನಡಿಯಲ್ಲಿ ದಿನಕಳೆಯುವಾಗ ಖಂಡಿತಾ ಬಹಳಷ್ಟು ಸಿಹಿಘಟನೆಗಳು ನಡೆದಿರಲೇಬೇಕಲ್ಲ?ಇದರ ನಡುವೆ ಕಹಿಘಟನೆಗಳೂ ಆಗಾಗ ಮಿಂಚಿನಂತೆ ಬಂದು ಮರೆಯಾಗಬಹುದು; ಇಲ್ಲದು ಮುಖ್ಯವಲ್ಲ. ವಿದ್ಯಾರ್ಥಿನಿಲಯವೆಂದರೆ ಹಾಗೆಯೇ.ಅಲ್ಲಿ ವಿಭಿನ್ನ ಸ್ವರೂಪದ, ಭಿನ್ನ ಸ್ವಭಾವದ ವಿದ್ಯಾರ್ಥಿಗಳಿರುತ್ತಾರೆ. ಒಂದೇ ಮನೆಯವರಲ್ಲ, ಒಂದೇ‌ ಊರಿನವರಲ್ಲ, ಒಂದೇ ನಗರದವರೂ‌ ಅಲ್ಲದಿದ್ದರೂ‌ ಒಂದಾಗಿ‌ ಇರುವುದಕ್ಕೆ ಪ್ರಯತ್ನಿಸುತ್ತಾರೆ. ಒಂದೇಕೋಣೆಯಲ್ಲಿ ನಾಲ್ಕೈದು ಜನರು‌ ಅನಾಯಾಸವಾಗಿ ಹಗಲು ರಾತ್ರಿಗಳನ್ನು ಸಾಗಿಸುತ್ತಾರೆ. ಅಲ್ಲಿ‌ ಅವರಿವರ ಸುದ್ದಿಯೂ ನುಸುಳಿಕೊಳ್ಳುತ್ತದೆ, ಪಟ್ಟಾಂಗವನ್ನೂ ಹೊಡೆಯುತ್ತಾರೆ.ಒಂದರ್ಥದಲ್ಲಿ‌ ಅಲ್ಲಿಗೆ ಬಾರದ ವಿಷಯಗಳೇ ಇಲ್ಲವೆನ್ನಬಹುದು.ಆಗಾಗ ಮುನಿಸಿಕೊಳ್ಳುತ್ತಾರೆ; ಮರುಕ್ಷಣವೇ‌ಒಬ್ಬರಮೇಲೊಬ್ಬರು ಬಿದ್ದುಕೊಂಡು ನಿದ್ದೆಮಾಡುತ್ತಾರೆ. ‘ತಿಂಡಿತೀರ್ಥ’ವನ್ನೂ‌ಒಟ್ಟಾಗಿ ಸೇವಿಸುತ್ತಾರೆ! ಹೌದು, ಕೆಲವು ಕಡೆ ತೀರ್ಥವೂ‌ ಇರುತ್ತದೆ! ಬಹಳ ಹಿಡಿತದಲ್ಲಿರುವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿಯ ವಿಚಾರಕರಾದ ವಾರ್ಡನ್‌ಗಳ ಕಾಟವೇ ಹೆಚ್ಚು. ದಿನಬೆಳಗಾದರೆ ಐದುಗಂಟೆಗೇ ಏಳಬೇಕು, ವರಾಂಡವನ್ನು ಸ್ವಚ್ಛಗೊಳಿಸಬೇಕು, ಕೋಣೆ, ಹೊರಾಂಗಣವನ್ನೆಲ್ಲಾ ಶುದ್ಧಗೊಳಿಸಬೇಕು, ಆ ಬಳಿಕ ಪುಸ್ತಕ ಹಿಡಿದು‌ಓದಬೇಕು, ಶಾಲೆಗೆ ಓಡಬೇಕು… ಇಂಥಹ‌ ಅವರ ಒಣ ಉಪದೇಶಗಳು ಕೋಪವನ್ನೇತರಿಸುತ್ತವೆ.

ಒಂದಿಷ್ಟು ಸಮಯದ ಹಿಂದೆ ನಾವೂ ಹಾಸ್ಟೆಲ್ ವಿದ್ಯಾರ್ಥಿಗಳೇ .ಅದು ಹಾಸ್ಟೆಲ್ ಹೌದೋ‌ ಅಲ್ಲವೋ‌ ಎಂದು ಈಗೀಗ ನಮಗೇ ಸಂಶಯ ಮೂಡಲು ಪ್ರಾರಂಭಿಸಿದೆ.ಇದಕ್ಕೆ ಕಾರಣಗಳಿಲ್ಲದೇ ಇಲ್ಲ. ನೋಡುವುದಕ್ಕೆ ವಿಶಾಲವಾಗಿ, ಪಟ್ಟಣದ ಮುಖ್ಯ ರಸ್ತೆಗೆ ತಾಗಿದ‌ ಉಪರಸ್ತೆಯ ಪಕ್ಕದಲ್ಲೇ‌ ಇತ್ತು.ಆದರೂ‌ಅದು ಹಾಸ್ಟೆಲ್‌ನ ರೀತಿಯಲ್ಲಿರಲಿಲ್ಲ. ನಾವು ಅಲ್ಲಿಗೆ ಕಾಲಿಡುವ‌ ಅರವತ್ತು‌ ಎಪ್ಪತ್ತು ವರ್ಷಗಳ ಹಿಂದೆಯೇ‌ ಅದಲ್ಲಿ‌ ಎದ್ದು ನಿಂತಿತ್ತಂತೆ.ಇದಕ್ಕಿಂತಲೂ ಹೆಚ್ಚು ವರ್ಷ‌ ಆಗಿದ್ದರೂ‌ ಆಗಿರಬಹುದು; ನಮಗೆ ತಿಳಿದಿರುವುದು ಇಷ್ಟೇ. ಹುಟ್ಟಿಕೊಂಡ ಅಂದಿನಿಂದ ನಾವು ಹೊರಬರುವವರೆಗೂ‌ ಒಮ್ಮೆಯೂ ಆ ಕಟ್ಟಡಕ್ಕೆ ನವೀಕರಣ ಪ್ರಕ್ರಿಯೆಯ‌ ಅರ್ಥವೂ ತಿಳಿದಿರಲಿಕ್ಕಿಲ್ಲ. ನಾನು ಬಂದ ಹೊಸತರಲ್ಲಿ ಕೆಳಗಿನ ಕೋಣೆಯಲ್ಲಿದ್ದರೂ, ಒಂದು ವರ್ಷಕಳೆಯುವುದರ ಮೊದಲೇ ಮೊದಲ ಮಹಡಿಯನ್ನೇರಿಬಿಟ್ಟೆ. ಇದಕ್ಕೆಕಾರಣವಿಷ್ಟೇ, ಪುಂಡರ ದೊಡ್ಡಿಯಾದ, ಅರ್ಧರಾತ್ರಿ ಕಳೆಯುವುದರೊಳಗೆ ಊಟಕ್ಕೆ ಬಾರದ ಮಹಾನುಭಾವರುಗಳೇ ಅಲ್ಲಿದ್ದವರು. ನನ್ನ ಸ್ವಭಾವಕ್ಕಿವರು ಯಾವ ಮೂಲೆಯಿಂದಲೂ, ಏಳೇಳು ಜನ್ಮದಲ್ಲಿಯೂ ಹೊಂದಿಕೆಯಾಗುವವರಲ್ಲ. ಹಾಗಾಗಿಯೇ ನಾನು ಎತ್ತರಕ್ಕೆ‌ಏರಬೇಕಾಯಿತು.

ಒಂದುಕಾಲದಲ್ಲದು ಹಾಸ್ಟೆಲು ಎಂದು ಕರೆಸಿಕೊಳ್ಳುವುದಕ್ಕಿಂತ ರೌಡಿಗಳು, ಗೂಂಡಾಗಳ ಆವಾಸಸ್ಥಾನವೆಂದೇ ಕರೆಸಿಕೊಳ್ಳುತ್ತಿತ್ತಂತೆ. ಪ್ರತೀಕೋಣೆಯಲ್ಲಿಯೂ ಕತ್ತಿ, ಕೋಲು, ಚಾಕು, ಚೂರಿಗಳೇ ವಿರಾಜಿಸುತ್ತಿದ್ದವಂತೆ. ಆ ವಿದ್ಯಾರ್ಥಿನಿಲಯದ ಹೆಸರು ಹೇಳಿದ ಕೂಡಲೇ ಸುತ್ತಲಿನವರು ಭಯಗೊಳ್ಳುತ್ತಾ, ಮುಖ ತಿರುಹಿಸುತ್ತಾ ಸಾಗುತ್ತಿದ್ದರಂತೆ.ಅಷ್ಟೊಂದು ಕೆಳಮಟ್ಟಕ್ಕೆ ತಂದಾಗಿತ್ತು‌ ಅಲ್ಲಿಯ ಸ್ಥಿತಿಯನ್ನು.ಇನ್ನು ನಮ್ಮಕಾಲಕ್ಕದನ್ನು ನೀವೇ ಊಹಿಸಿ.ಒಂದೆರಡು ದಿನಗಳ ಕಾಲ ಹಾಸ್ಟೆಲಿನ ಕೋಣೆಯಲ್ಲಿಯೇ ಹೆಣವನ್ನೂ ಇರಿಸಿಕೊಂಡು ಕಾದಘಟನೆಯೂ ನಡೆದಿತ್ತಂತೆ. ಸ್ವತಃ ನನ್ನ ಮಿತ್ರನೇ ಹೇಳಿದ ಸಂಗತಿಯಿದು. ಇಷ್ಟೊಂದು ದೊಡ್ಡ‌ ಇತಿಹಾಸವನ್ನು ಹೊಂದಿದ ಹಾಸ್ಟೆಲಿನಲ್ಲಿ ನಾವೂ ಬಿಡಾರಹೂಡಿದ್ದೆವು! ಹಾಗೆಂದು ಪ್ರಾರಂಭದಿಂದಲೂ‌ ಅದು ಕೆಡುಕರ ನಿಲಯವೇನಲ್ಲ. ನಮಗೆ ಕಲಿಸಿದ ಕೆಲವು ಹಿರಿಯ ಗುರುಗಳೂ ಅಲ್ಲಿಯೇ‌ಇದ್ದು, ಓದಿ ಬಂದವರಂತೆ.ಇದನ್ನು‌ಅವರವರೇ ನಮ್ಮೊಂದಿಗೆ ಹಂಚಿಕೊಂಡಿದ್ದರು.ಹೀಗೆ ಎರಡೂ ರೀತಿಯ‌ ಅನುಭವವನ್ನು ಪಡೆದುಕೊಂಡ ವಿದ್ಯಾರ್ಥಿನಿಲಯವದು.

ನಾವೆಲ್ಲ‌ ಅಲ್ಲಿಗೆ ಪಾದಬೆಳೆಸಿದ ಹೊತ್ತಿಗೆ ಹಿಂದಿನವರಷ್ಟು ಹಾವಳಿಗಳಿರಲಿಲ್ಲವಾದರೂ, ಕೆಲವಷ್ಟು ಪೀಡಕರು ನಮ್ಮೊಂದಿಗೇ ಬೆರೆತುಹೋಗಿದ್ದರು.ಇದು ಮತ್ಯಾವುದಕ್ಕೂ‌ಅಲ್ಲ, ಹಿಂದಿನವರ ಹೆಸರನ್ನು‌ಅಷ್ಟಿಷ್ಟಾದರೂ ಉಳಿಸುವ ಒಂದೇ‌ ಉದ್ದೇಶದಿಂದ! ಎಷ್ಟೇ ದೂರ‌ ಇರುತ್ತಿದ್ದರೂ ಆಗಾಗ ಸೀನಿಯರ್‌ಗಳಿಂದ ರ್‍ಯಾಗಿಂಗ್, ಸಣ್ಣಪುಟ್ಟ ಕಿರಿಕಿರಿ‌ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತಿತ್ತು.  ಆಮೇಲಾಮೇಲೆ ನಾವೂ ಹಿರಿಯರಾದೆವಲ್ಲಾ, ನಿಧಾನಕ್ಕೆಲ್ಲವೂ ಸರಿಯಾಯಿತು ಬಿಡಿ.

ನಾವಿದ್ದ ಹಾಸ್ಟೆಲಿನ ನಿಜಸ್ಥಿತಿಯ ಅರಿವು ನಮಗಿನ್ನೂ ಮರೆತುಹೋಗಿಲ್ಲ. ಅರ್ಧಶತಮಾನಕ್ಕಿಂತಲೂ‌ ಅಧಿಕಾಧಿಕ ಸಮಯವನ್ನು ಕಳೆದ ಕಟ್ಟಡವದು. ಅಲ್ಲಿ ವಿಶೇಷವಾದ ಸುಣ್ಣ ಬಣ್ಣಗಳೇನೂ ಇರಲಿಲ್ಲ. ಕೆಳಗಿನ ಕೋಣೆಗಳು ಸಾಧಾರಣ ಸ್ವರೂಪದಲ್ಲಿದ್ದರೂ, ಮೇಲಿನ ಕೋಣೆಯೊಳಗಣ ಸ್ಥಿತಿ ಅನುಭವಿಸಿದವರಿಗೇ ಗೊತ್ತು! ಬೇಸಿಗೆಯಲ್ಲಿ ಹೇಗೋ ಸುಧಾರಿಸುತ್ತದೆ; ಮಳೆಗಾಲ ಬಂತೆಂದರೆ ವಾಸ ಬಲುಪ್ರಯಾಸ! ಕತ್ತೆತ್ತಿ ನೋಡಿದರೆ‌ಅಲ್ಲಿ ಹಂಚೂ ಇಲ್ಲ, ಮೇಲೊಂದು‌ ಉಪ್ಪರಿಗೆಯೂ‌ ಇಲ್ಲ. ಕೇವಲ ಸಿಮೆಂಟಿನ ಸಾಮಾನ್ಯ ಹೊದಿಕೆಯಷ್ಟೇ.ನಿರಂತರವಾಗಿ ಗಾಳಿ ಮಳೆಯನ್ನು ಸಹಿಸಿಕೊಂಡು ಅವುಗಳಿಗೂ ಬೇಸರ ಬಂದಾಗಿತ್ತು. ಎಲ್ಲೆಂದರಲ್ಲಿ ರಂದ್ರಗಳು, ಒಡಕುಗಳು, ಚಿಲಕಗಳಿಲ್ಲದ ಬಾಗಿಲುಗಳು, ಅರ್ಧರ್ಧ ಮುರಿದ ಕಿಟಕಿಗಳು. ಹೊರಗಡೆ ಬಿಡುವಿಲ್ಲದೇ ಸುರಿಯುವ ಹುಚ್ಚುಮಳೆಯಾದರೆ, ಒಳಗಡೆ ನೀರಿನ ಸಂಗ್ರಹಕ್ಕಾಗಿ‌ ಇಟ್ಟಿರುವ ಒಂದಿಲ್ಲೊಂದು ಪಾತ್ರೆ! ಮೈಮೇಲೆಲ್ಲಾ ಬೀಳುವ ಮಳೆನೀರಿನ ಕಾಟ‌ಒಂದೆಡೆ, ಅಷ್ಟರಮೇಲೂ ಸಿಮೆಂಟಿನ ಪದರದ ಮೇಲೆ ಕಲ್ಲೆಸೆವ ಪುಂಡರ‌ ಆಟವೊಂದೆಡೆ. ಇವುಗಳೊಂದಿಗೇ ನಮ್ಮ ಆ ದಿನಗಳೂ ಕಳೆಯುತ್ತಿತ್ತು.

ಕೋಣೆಗಳ ಪರಿಸ್ಥಿತಿ ಹೀಗಾದರೆ, ಶೌಚಾಲಯಗಳ ಅವಸ್ಥೆಯನ್ನು‌ಏನೆಂದು ಬಣ್ಣಿಸಲಿ? ನಿಜಕ್ಕೂ‌ಅದು‌ ಅರಮನೆಯಂತೆಯೇ‌ ಇತ್ತು!! ನಾಲ್ಕಾರು ಸ್ನಾನದ ಕೋಣೆ. ಮೂರ್‍ನಾಲ್ಕು ಶೌಚಾಲಯಗಳು.ಯಾವಾಗ? ಬಹಳ ಹಿಂದೆಯೇ; ನಾವಿರುವಾಗಲಲ್ಲ. ನಮ್ಮ ಕಾಲಕ್ಕೆ ಮೂರೇ ಸ್ನಾನದಕೋಣೆ. ಎರಡೇ ಶೌಚಾಲಯಗಳು! ಅದರಲ್ಲಿಯೂ ಮುಂಭಾಗದವುಗಳಿಗೆ ಬಾಗಿಲುಗಳೇ ಇಲ್ಲ. ಹಿಂದಿನ ಮಲವಿಸರ್ಜನಾ ಕೋಣೆಗಳಿಗೆ ಬಾಗಿಲುಗಳಿದ್ದರೂ ಸರಿಯಾದ ಚಿಲಕ(ಅಗುಳಿ)ಗಳಿಲ್ಲ. ಮೇಲೆ ನೋಡಿದರೇನಿದೆ? ನೀಲಾಕಾಶವನ್ನೇತೋರಿಸುವ‌ಒಡಕು ಹಂಚುಗಳು.ಇವಿಷ್ಟು ಬಿರುಬೇಸಗೆಯ ಚಿತ್ರಣವಾದರೆ, ಮಳೆಗಾಲದಲ್ಲಿ ಇದರ‌ ಉತ್ತುಂಗ ಸ್ಥಿತಿಯನ್ನು ನೀವೇ ಒಮ್ಮೆ ಕಲ್ಪಿಸಿಕೊಳ್ಳಿ. ಮಳೆಗಾಲದಲ್ಲಿ ಮೇಲಿಂದಮೇಲೆ ಸ್ನಾನ! ನಮ್ಮಿಂದಲೂ, ಮೇಲಿನ ಒಡಕು ಹಂಚಿನಿಂದಲೂ. ಆ ಚಳಿಯ ನಡುವೆ, ಸುರಿಯುವ ಮಳೆಯ ನಡುವೆ, ಇರುವ ಮೂರೇ ಕೋಣೆಯಲ್ಲಿ ಕಾದುನಿಂತ ಎಷ್ಟೋ ಹೊತ್ತಿನ ಮೇಲೆಯೇ ನಮ್ಮದೇಹಶುದ್ಧಿ ಕಾರ್‍ಯ.ಒಂದು, ಎರಡರ ಸಂಪೂರ್ಣದ ಕಾಲದಲ್ಲಿ ಸಮಯವಾಗಲೇ‌ ಆಗಿಹೋಗಿರುತ್ತಿತ್ತು. ಮಳೆಗಾಲದ ವಿಸರ್ಜನಾಕೋಣೆಯಲ್ಲಿ ನಿತ್ಯವೂ ಕೊಡೆ ಹಿಡಿದುಕೊಂಡೇ ನಮ್ಮ ವಿಸರ್ಜನಾಕ್ರಿಯೆ! ಅದನ್ನು ಯೋಚಿಸಿದರೆ ನಿಮಗೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಬಹುದು. ಈಗ ನಮಗೂ ಹಾಗೆಯೇ ಬಿಡಿ. ಆದರೆ, ಅಂದು ನಾವಿದ್ದ ಪರಿಸ್ಥಿತಿಯಲ್ಲಿ?

ಹಾಸ್ಟೆಲ್‌ಗೆ ಮುಖ್ಯವಾಗಿ‌ ಇರಬೇಕಾಗಿದ್ದ ಬಾಗಿಲೇ ಇರಲಿಲ್ಲ. ಇದ್ದದ್ದು ಮರದ ತಡಿಕೆಯ ರೀತಿಯದ್ದು ಮಾತ್ರ. ಅದೂ ಮುಚ್ಚುವುದಿಲ್ಲ. ದಿನದ‌ ಇಪ್ಪತ್ನಾಲ್ಕುಗಂಟೆ, ವಾರದ ಏಳು ದಿನವೂ ತೆರೆದುಕೊಂಡೇ‌ ಇರುತ್ತಿತ್ತು. ಆ ಮಹಾ ಅರಮನೆಗೆ ಬೀದಿಯ ಕುಡಕನೊಂದು ದಿನ ಬಂದು ಉಳಿದುಕೊಂಡರೆ, ಮತ್ತೊಂದು ದಿನ ಇನ್ಯಾವುದೋ‌ ಒಬ್ಬ ಹುಚ್ಚನ ಆಗಮನವಾಗುತ್ತಿತ್ತು.ಇಡೀ ವರ್ಷದಲ್ಲಿ ಗಣೇಶಚತುರ್ಥಿಯಂದು ಮಾತ್ರ ಆ ಬಾಗಿಲು ಮುಚ್ಚಿಕೊಂಡಿದ್ದನ್ನು‌ ಒಂದೇ‌ ಒಂದುಸಲ ಗಮನಿಸಿದ್ದೆನಷ್ಟೆ. ಅದೂ ಅಗುಳಿಯೇನಿಲ್ಲ. ಕಾರಣವಿಷ್ಟೆ, ಎಲ್ಲರೂ ಹಬ್ಬಕ್ಕೆಂದು ಮನೆಗೆ ಹೋಗುತ್ತಿದ್ದರು.ಬರುವುದು ವಾರದ ಬಳಿಕವೇ. ಹಾಗಾಗಿ ಕೆಲವೊಮ್ಮೆ ಆ ಮಹಾದ್ವಾರವನ್ನು ತೆರವುಗೊಳಿಸುವ ಭಾಗ್ಯ ನನ್ನ ಪಾಲಿಗೇ ಒದಗಿ ಬರುತ್ತಿತ್ತು.

ಹೊಸವರ್ಷ ಬಂತೆಂದರೆ ಕೆಲವು ವಿದ್ಯಾರ್ಥಿಗಳೆನಿಸಿಕೊಂಡಿದ್ದ ಪುಂಡರಿಗೆ ಹಬ್ಬ. ಸಿಹಿಹಂಚಿ ತಿನ್ನುವುದಕ್ಕಲ್ಲ; ಕುಡಿದು ಕುಣಿಯುವುದಕ್ಕೆ. ಹೌದು, ನಮ್ಮ ನಡುವೆಯೇ ಕೆಲವರು ಕುಡುಕರೂ, ಪ್ರಖಾಂಡ ಕುಡುಕರೂ ಸಹಜವೆಂಬಂತೆ ಸೇರಿಕೊಂಡುಬಿಟ್ಟಿದ್ದರು. ಅನ್ನದ ನಡುವೆಕಲ್ಲು ಸಿಕ್ಕಿಕೊಂಡಂತೆ! ಇದ್ದೊಬ್ಬರು ವಾರ್ಡನ್‌ ಕೂಡ‌ ಅವರಿಗೆ ಲೆಕ್ಕದಿಂದ ಹೊರಗೆ ಹಾಕಲ್ಪಟ್ಟವರು. ಹೊಸ ವರ್ಷಾರಂಭದಲ್ಲಿ ನಾವು ಮಲಗುವ ಕೋಣೆಯ ಮತ್ತೂ ಮೇಲಿನ ಟೆರಾಸಿನಲ್ಲಿ, ನಡುರಾತ್ರಿಯ ನೀರವತೆಯಲ್ಲಿ‌ ಅವರ‌ ಉತ್ಸವ, ಮೋಜು ಮಸ್ತಿ! ಖಾಲಿಯಾದಂತೆಲ್ಲ, ಬೀರು ಬ್ರಾಂಡಿಯ ತುಂಬಿದ ಬಾಟಲಿಗಳು ಮೇಲಕ್ಕೆ ಸರಬರಾಜಾಗುತ್ತಿದ್ದವು.ಮೇಲೆ ಕೂಗುತ್ತಾ, ಕಿರುಚುವ ಶಬ್ದ ಕೆಳಗೆ ಮಲಗಿದ ನಮಗೆ ಸ್ಪಷ್ಟವಾಗಿಯೇ ಕೇಳಿಸುವುದು.ಇದರ ನಡುವೆ ನಿದ್ದೆಯ ಮಾತೆಲ್ಲಿ? ಹಾಸ್ಟೆಲ್‌ ಎದುರಿನ‌ ಅಪಾರ್ಟ್‌ಮೆಂಟ್ ನವರ ಮುಂದೆಯೇ‌ ಅಸಭ್ಯವಾಗಿ ವರ್ತಿಸುವುದು, ಹಿಂಭಾಗದಲ್ಲಿ ಬೆಂಕಿ ಹೊತ್ತಿಸಿಕೊಂಡು ಕುಣಿಯುತ್ತಾ, ಕೂಗುತ್ತಾ ‘ಗುಂಡು’ ಹೊಡೆಯುವುದು.ಒಟ್ಟಂದದಲ್ಲಿ‌ಇಡೀ ಪಟ್ಟಣವೇ ಮಲಗಿ ನಿದ್ರಿಸುತ್ತಿರುವ ಸಂದರ್ಭದಲ್ಲಿ‌ ಇವರ‌ ಆರ್ಭಟ!

ನಾವಿದ್ದ ಹಾಸ್ಟೆಲಿನಲ್ಲಿ‌ ಅಡುಗೆಯ ವ್ಯವಸ್ಥೆ‌ ಇರಲಿಲ್ಲ. ಬಹುತೇಕರು ಮಠಕ್ಕೆ‌ಊಟಕ್ಕೆ ಹೋಗುತ್ತಿದ್ದರೂ, ನಮ್ಮ‌ ಅಡುಗೆ ಕಾರ್‍ಯ ಮಾತ್ರ‌ ಅಲ್ಲಿಯೇ. ಮಾಡಿದ ಚಿತ್ರ ವಿಚಿತ್ರ‌ ಅಡುಗೆಗೆ ವಿಧವಿಧದ ಹೆಸರುಗಳನ್ನಿಟ್ಟು ಸೇವಿಸುವವರೂ ನಾವೇ. ತಿಂದು ತೇಗಿದ ಬಳಿಕ ಇದೆಯಲ್ಲ, ಪಾತ್ರೆ ತೊಳೆಯುವ ಕಾಯಕ; ಅದೂ ನಮ್ಮದೇ. ಮೇಲಿಂದ ನೀರು ಹಾಕಿಕೊಂಡು ಪಾತ್ರೆ ತೊಳೆಯುವಾಗ ನೀರು ಸಹಜವಾಗಿ ಕೆಳಗೇ ಬೀಳುವುದು.ಇದಕ್ಕೂ ನ್ಯೂಟನ್ನನ ಗುರುತ್ವಾಕರ್ಷಣ ಶಕ್ತಿಯೇ ಕಾರಣ ಸ್ವಾಮೀ… ಆದರೆ, ಕೆಳಗೆ ಕುಳಿತು ಲೋಕದ ಸಮಸ್ಯೆ‌ ಎಲ್ಲವೂ ತಮ್ಮದೇ‌ ಎಂಬಂತೆ ಚರ್ಚಿಸುತ್ತಿರುವ ಕೆಲವು ಮೇಧಾವಿಗಳಿದ್ದಾರಲ್ಲ! ಅವರ ಮೈಮೇಲೆ ನೀರು ಬಿದ್ದಾಗ ವಿಶ್ವಾಮಿತ್ರನಂತೆ ಸಿಟ್ಟುಗೊಂಡು ಉಗಿಯುತ್ತಾರೆ. ಕೆಳಗಿದ್ದಾಗ ನಮಗಾದ‌ ಅನುಭವವೇ ಈಗ ಅವರಿಗೂ‌ ಆಗುತ್ತಿದೆ‌ ಎಂದು ನಾವೂ ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ ಬಿಡಿ.

ಇಷ್ಟೆಲ್ಲಾ ಕೆಡುಕುತನದ ಜೊತೆಯಲ್ಲಿಯೇ ಕೆಲವರಲ್ಲಿ ವಿಶೇಷವಾದ ಪ್ರತಿಭೆಯೂ‌ ಇತ್ತೆಂಬುದನ್ನು ಮರೆಯುವಂತಿಲ್ಲ. ವಾರ್ಡನ್ ಹಾಸ್ಟೆಲ್‌ನ ವಿದ್ಯುತ್ ಬಿಲ್ಲನ್ನು ಕಟ್ಟದೇ, ಫ್ಯೂಸ್‌ ಕಿತ್ತು ಹಾಕುವಾಗಲೆಲ್ಲಾ ಈ ಪ್ರತಿಭೆಗಳೇ ಅದಕ್ಕೆ ತಂತಿ ಜೋಡಿಸಿ ಸರಿಮಾಡಿ ಬಿಡುತ್ತಿದ್ದರು. ಹೇಳುತ್ತಾ ಹೋದರೆ, ಒಬ್ಬೊಬ್ಬರ ವಿಷಯವೂ‌ ಒಂದೊಂದು ಲೇಖನವಾಗಬಹುದು; ಅಂಥಹ ಮಹಾನ್ ಪ್ರತಿಭಾವಂತರೇ‌ ಎಲ್ಲರೂ. ಅಲ್ಲಿ‌ ಆರಾಮಾಗಿ ಕೈಕಾಲು ಚಾಚಿಕೊಂಡು ನಾವಿದ್ದರೂ, ತಿಂಗಳಿಗೆ ಕೊಡುತ್ತಿದ್ದುದು ಕೇವಲ ನೂರೇ ರೂಪಾಯಿ ರೆಂಟ್.ಹಾಗೆಂದು‌ ಅದೇನೂ ಸರ್ಕಾರಿ ವಿದ್ಯಾರ್ಥಿ ನಿಲಯವಲ್ಲ; ಅದರ ಅವಸ್ಥೆಗೆ ಅಷ್ಟೇ ಸರಿಯಾದ ಸಂಭಾವನೆಯಾಗಿತ್ತು. ಹೀಗಿದ್ದರೂ ಆ ದಿನಗಳು ಮತ್ತೆ ಮತ್ತೆ ನೆನಪಾಗುತ್ತವೆ. ಬಾಲ್ಯದ ದಿನಗಳಂತೆಯೇ ಎಲ್ಲಾ ಸವಿಕ್ಷಣಗಳೂ ಪುನರಾವರ್ತನೆಯಾಗಿದ್ದರೆ‌ ಎಷ್ಟೊಂದು ಸೊಗಸಾಗಿರುತ್ತಿತ್ತು… ದೊಡ್ಡವರಾಗುವುದೇ ಬೇಡವಿತ್ತೆನಿಸುತ್ತದೆ. ನಿಮ್ಮ ಮನಸ್ಸೂ‌ ಇದನ್ನೇ‌ ಅಪೇಕ್ಷಿಸುತ್ತದೆಯಲ್ಲವೇ..?.

-ಶಿವಕುಮಾರ ಬಿ.ಎ. ಅಳಗೋಡು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: