ಪ್ರೀತಿಯೆಂಬ ಮಾಯೆ..
ಹೃದಯಗಳ ಕಣಿವೆಯಲ್ಲಿ ಪ್ರವಾಸ ಹೊರಟಿದ್ದೆ. ನನಗೊಂದು ಹೃದಯ ಡಿಕ್ಕಿ ಹೊಡೆಯಿತು. “ಅಬ್ಬಾ, ಯಾಕಿಷ್ಟು ಭಾರವಾಗಿದ್ದೀಯಾ?” ಹೊಡೆತದ ನೋವಿಗೆ ಕೇಳಿದೆ. “ಪ್ರೀತಿಯ ನೋವಿಗೆ ಭಾರವಾಗಿದ್ದೇನೆ.” ನಿಡುಸುಯ್ದು ಅದು ಹೇಳಿತು.
ಮುಂದೆ ಹೋದಾಗ ಕಾಮನಬಿಲ್ಲಿನಂತೆ ವರ್ಣಮಯವಾಗಿ , ಚಿಟ್ಟೆಯಂತೆ ತೇಲುತ್ತಾ ಸಾಗುವ ಹೃದಯವನ್ನು ಕಂಡು ಆಶ್ಚರ್ಯದಿಂದ ಕಣ್ಣು ಬಿಟ್ಟು ನಿಂತಿದ್ದೆ. “ಯಾಕೆ ಹೀಗೆ ನೋಡ್ತೀಯಾ? ಇವು ಪ್ರೀತಿಯ ಬಣ್ಣಗಳು.”
ಅದು ತೇಲುತ್ತಾ ಮರೆಯಾದಾಗ ಈ ವಿಚಿತ್ರ ಹೃದಯಗಳ ಬಗ್ಗೆ ಗೊಂದಲದಿಂದಲೇ ಮುಂದಡಿಯಿಡುತ್ತಿದ್ದೆ. ತೀವ್ರ ಶಾಖ ತಗುಲಿದಂತಾಗಿ ಅತ್ತ ನೋಡಿದೆ. ಕೊತಕೊತನೇ ಕುದಿಯುತ್ತಾ ಗಾಳಿಯಂತೆ ವೇಗವಾಗಿ ಆ ಹೃದಯ ನನ್ನನ್ನು ದಾಟಿ ಹೋಗಬೇಕಾದರೆ ಕೂಗಿ ಕೇಳಿದೆ, “ಏಯ್ ಯಾಕೀ ವೇಗ, ಯಾಕೀ ಶಾಖ?.” “ಪ್ರೀತಿ, ಪ್ರೀತಿ..ಪ್ರೀತಿ” ಅಬ್ಬರಿಸುತ್ತಾ ಅದು ದೂರ ಮರೆಯಾಯಿತು.
ಅಷ್ಟರಲ್ಲಿ ಕಣ್ಣು ಕಾಣದೇ ತಡವರಿಸಿ ನಡೆಯುವ ಹೃದಯವೊಂದು ಎದುರಾಯಿತು. “ನಿನ್ನ ದೃಷ್ಟಿಗೇನಾಯಿತು!?” ಆಶ್ಚರ್ಯದಿಂದ ಕೇಳಿದೆ. “ಉಹುಂ, ಹಾಗಲ್ಲ, ಪ್ರೀತಿಯಿಂದ ಕುರುಡಾಗಿದ್ದೇನೆ ಅಷ್ಟೇ.” ಸಂತೋಷದಿಂದ ಸಿಳ್ಳೆ ಹೊಡೆಯುತ್ತಾ ಕುಣಿಯುತ್ತಾ ಹೊರಟ ಹೃದಯಕ್ಕೂ ಹೇಳಲು ಇದ್ದ ಕಾರಣವೊಂದೇ “ಪ್ರೀತಿ”.
ಮುಂದೆ ವಿವಿಧ ರೂಪ, ಭಾವಗಳ ಹೃದಯಗಳನ್ನು ಕಂಡೆ ಎಲ್ಲವೂ ” ಪ್ರೀತಿ, ಪ್ರೀತಿ” ಎಂದೇ ತಮ್ಮ ಅವಸ್ಥೆಯ ಕಾರಣ ತಿಳಿಸಿದರೆ ನನಗೆ ಹೊಸದೊಂದು ಗೊಂದಲ ಶುರುವಾಯ್ತು. ನಾನು ಕೂಡಾ ಇವರ ಹಾಗೇ ಒಂದು ಹೃದಯವೇ?ಹೃದಯವಿರುವ ಮನುಷ್ಯನೇ? ನನ್ನಲ್ಲಿನ ಭಾವವೇನು? ನನ್ನನ್ನೂ ನಿಯಂತ್ರಿಸುವ ಭಾವ ಪ್ರೀತಿಯೇ ಅಥವಾ ಇನ್ನು ಯಾವುದಾದರೂ ಭಾವನೆಯೇ? ಪ್ರೀತಿಯ ಕಣಿವೆಯಲ್ಲಿ ಎಲ್ಲಾ ಭಾವಕ್ಕೂ ಪ್ರೀತಿಯೇ ಅಡಿಪಾಯವಾಗಿರುವುದನ್ನು ಕಂಡು ಅಲ್ಲಿಂದ ಹೊರಬರುವ ದಾರಿಯತ್ತ ದೌಡಾಯಿಸಿದೆ.
ಪ್ರೀತಿಯ ವಿವಿಧ ಸ್ತರಗಳೊಡನೆ ನಿಮ್ಮ ಕಲ್ಪನಾವಿಹಾರ ಸೊಗಸಾಗಿದೆ
nice mam