ಅಪ್ಪನಿಗೊಂದು ನಮನ
ಅಪ್ಪ ಎಲ್ಲರ ಬದುಕಿನಲ್ಲಿಯೂ ವಿಶೇಷವಾದ ವ್ಯಕ್ತಿ. ಅಪ್ಪನನ್ನು ನಾವು ಮರೆಯುವಂತೆಯೇ ಇಲ್ಲ. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಬಹು ಜತನದಿಂದ ಬೆಳಸುವ ಅಪ್ಪನಿಗೆ ಮಕ್ಕಳ ಮೇಲೆ ಅತೀವ ಪ್ರೀತಿ, ಮಮತೆ, ವಾತ್ಸಲ್ಯ ವಿಪರೀತ ಕಾಳಜಿ . ಮಕ್ಕಳ ಸುಂದರ ಬದುಕಿಗಾಗಿ ಅವಿರತವಾಗಿ ಶ್ರಮಿಸುವ ಅಪ್ಪ, ಅದಕ್ಕಾಗಿ ಯಾವ ತ್ಯಾಗಕ್ಕು ಸಿದ್ದ . ತನ್ನ ಕರುಳ ಕುಡಿಗಳ ಭವ್ಯ ಭವಿಷ್ಯಕ್ಕಾಗಿ ಸದಾ ಹೋರಾಡುವ ಅಪ್ಪ, ಮಕ್ಳಳ ಸುಂದರ ಬದುಕಿನಲ್ಲಿ ಸಾರ್ಥಕ್ಯ ಕಾಣುತ್ತಾನೆ.
ನಮ್ಮ ದೇಶದಲ್ಲಿ ಮಕ್ಕಳ ಹಾಗು ಹೆತ್ತವರ ಬಾಂಧವ್ಯ ಅನನ್ಯವಾದುದು. ಈ ದೇಶದಲ್ಲಿ ಮಕ್ಕಳು ಹುಟ್ಟಿದಾಗಿನಿಂದ ಹಿಡಿದು ಅವರು ಬೆಳೆದು ವಯಸ್ಕರಾಗುವ ತನಕವೂ ಹೆತ್ತವರ ಆಶ್ರಯದಲ್ಲಿಯೇ ಇರುವುದು ಸಹಜ ಪ್ರಕ್ರಿಯೆ. ಮಕ್ಕಳನ್ನು ತಮ್ಮ ಕಣ್ಣೆದುರಿಗೇ ಜೋಪಾನ ಮಾಡಿ , ಅವರನ್ನು ಯೋಗ್ಯ ಪ್ರಜೆಗಳನನ್ನಾಗಿ ಮಾಡುವುದು ಅಪ್ಪ ಅಮ್ಮನ ಕರ್ತವ್ಯ. ಹಾಗು ಜವಾಬ್ದಾರಿ ಕೂಡಾ ಹೌದು. ಅದನ್ನು ಅತ್ಯಂತ ಪ್ರೀತಿಯಿಂದ ಕಾಳಜಿಯಿಂದ, ಹೆಮ್ಮೆಯಿಂದ ನಿರ್ವಹಿಸುವ ನಮ್ಮ ಹೆತ್ತವರು ಮಕ್ಕಳಿಗೆ ಪೂಜನೀಯ. ಹಾಗೆಂದೇ ಪ್ರತಿದಿನ ಮಕ್ಕಳು ತಮ್ಮ ತಂದೆ ತಾಯಿಯರಿಗೆ ನಮಸ್ಕರಿಸಿ ಅವರಿಂದ ಆಶಿರ್ವಾದ ಪಡೆಯುವುದು ಇಲ್ಲಿನ ಪದ್ದತಿ. ಹಬ್ಭ ಹರಿದಿನಗಳಲ್ಲಿ ಹೆತ್ತವರ ಪಾದ ಪೂಜೆ ಮಾಡಿ, ಸಿಹಿ ತಿನ್ನಿಸಿ. ಉಡುಗೊರೆ ನೀಡಿ ಸಂತುಷ್ಟಗೊಳಿಸಿ ಆ ಮೂಲಕ ತಾವೂ ಕೃತಾರ್ಥರಾಗುತ್ತಾರೆ. ಅಪ್ಪ ಅಮ್ಮಂದಿರನ್ನು ಗೌರವಿಸುವ ಸಂಸ್ಕೃತಿ ನಮ್ಮ ನಾಡಿನದ್ದು, ಮಾತೃ ದೇವೊಭವ, ಪಿತೃ ದೇವೋ ಭವ, ಆಚಾರ್ಯ ದೇವೊಭವ ಅನ್ನವ ನಮ್ಮ ಸಂಸ್ಕೃತಿಯಲ್ಲಿ ಬೆಳೆದ ನಮಗೆ ವಿದೇಶಿ ಆಚರಣೆಯಾದ ಅಮ್ಮನ ದಿನ ಹಾಗೂ ಅಪ್ಪನ ದಿನ ಎನ್ನುವುದು ಹೆತ್ತವರನ್ನು ಗೌರವಿಸುವ ಮತ್ತೊಂದು ರೂಪವೇ ಅಂತ ಅನ್ನಿಸುವುದು ಸಹಜ.
ವಿದೇಶಗಳಲ್ಲಿ ಅಪ್ಪ ಅಮ್ಮ ಹಾಗು ಮಕ್ಕಳ ನಡುವಿನ ಅನುಬಂಧ ನಮ್ಮ ದೇಶದಲ್ಲಿ ಕಾಣುವಷ್ಟು ಉತ್ಕಟತೆ ಅಲ್ಲಿ ಕಾಣ ಬರುವುದಿಲ್ಲ. ಹಾಗಾಗಿ ಅಪ್ಪ ಅಮ್ಮಂದಿರನ್ನು ನೆನಸಿಕೊಳ್ಳಲೆಂದೆ ಒಂದೊಂದು ದಿನವನ್ನು ಮೀಸಲಿಟ್ಟು ಬಿಟ್ಟಿದ್ದಾರೆ. ಅಲ್ಲಿ ಮಕ್ಕಳು ಹೆತ್ತವರಿಂದ ವಿದ್ಯಾಭ್ಯಾಸದ ಸಲುವಾಗಿಯೋ, ಉದ್ಯೋಗದ ಸಲುವಾಗಿಯೋ ದೂರವಿರುತ್ತಾರೆ. ಆದ್ದರಿಂದ ಹೆತ್ತವರಿಗಾಗಿ ಒಂದು ದಿನವನ್ನು ಮೀಸಲಿಟ್ಟು ಅವರಿಗೆ ಆ ದಿನ ಗ್ರೀಟಿಂಗ್ ಕಾರ್ಡು ಮತ್ತು ಉಡುಗೊರೆ ನೀಡಿ ಅಪ್ಪ ಅಮ್ಮಂದಿರನ್ನು ಖುಷಿಗೊಳಿಸುತ್ತಾರೆ. ಆ ನಂತರ ಅವರನ್ನು ನೆನಸಿಕೊಳ್ಳುವುದು ಮತ್ತೆ ಮುಂದಿನ ವರ್ಷವೇ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿಯೂ ಅಲ್ಲಿನ ಛಾಯೆ ಕಾಣುತ್ತಿದೆ. ವಿದೇಶಿ ಸಂಸ್ಕೃತಿ ನಮ್ಮ ನೆಲದವರನ್ನೂ ಕಾಡಿ ಅಪ್ಪಂದಿರ ದಿನವನ್ನು ಆಚರಿಸಿ ಸಂಭ್ರಮಿಸಿ ಆನಂತರ ಮರೆತು ಬಿಡುವ ಸಂಪ್ರದಾಯ ಹೆಚ್ಚಾಗುತ್ತಿದೆ. ಹೆತ್ತವರ ಮತ್ತು ಮಕ್ಕಳ ನಡುವಿನ ಬಾಂಧವ್ಯ ದಿನೇ ದಿನೇ ಕಡಿಮೆಯಾಗುತ್ತಾ ಹೋಗುತ್ತಿದೆ. ಕೃತಕ ಪ್ರೀತಿ, ತೋರಿಕೆ ,ವಿಶ್ವಾಸ ,ಆಡಂಬರ ಹೆಚ್ಚಾಗಿ ಹೆತ್ತವರನ್ನು ಮರೆಯುತ್ತಿರುವ ದಿನಗಳಲ್ಲಿ ಅಪ್ಪನ ದಿನ ಬಂದು ಹೋಗುತ್ತಿದೆ.
ಜನ್ಮಕ್ಕೆ ಕಾರಣನಾದ ಅಪ್ಪನೆಂದರೆ ಮಕ್ಕಳಿಗೆ ಅಪ್ಯಾಯಮಾನ. ತೋಳುಗಳಲ್ಲಿ ಅಪ್ಪಿ ಬದುಕಿನಲಿ ಭದ್ರತೆಯ ಭಾವ ಬಿಂಬಿಸಿ, ಕೈ ಹಿಡಿದು ತಪ್ಪು ಹೆಜ್ಜೆಯ ಜೊತೆ ಹೆಜ್ಜೆ ಬೆರೆಸಿ ಹೊರ ಜಗತ್ತಿಗೆ ತಮ್ಮನ್ನು ಪರಿಚಯಿಸುವ ಅಪ್ಪನೆಂದರೆ ಪುಳಕ, ಅಪ್ಪನೆಂದೆರೆ ಹೀರೋ. ಅಪ್ಪನೆಂದರೆ ಜಗದ ಸಿರಿಯನ್ನೆಲ್ಲ ಬೊಗಸೆ ಬೊಗಸೆಯಲಿ ಮೊಗೆದು ಕೊಟ್ಟವನು. ಅಪ್ಪನೆಂದರೆ ಬದುಕಿನಲಿ ಚೈತನ್ಯ ತುಂಬಿದವನು. ಅಪ್ಪನೆಂದರೆ ಬೆರಗುಗಣ್ಣಿನಲಿ ಪ್ರಪಂಚ ನೋಡುವಂತೆ ಮಾಡಿದವನು , ತಪ್ಪು ತಪ್ಪು ಹೆಜ್ಜೆ ಇರಿಸುವಾಗ ಕೈ ಹಿಡಿದು ನಡೆಸಿದವನು, ಹೆಗಲ ಮೇಲೆ ಕೂರಿಸಿಗೊಂಡು ಹಾದಿಯುದ್ದಕ್ಕೂ ನಡೆದವನು, ಬಿದ್ದು ಗಾಯ ಗೊಂಡಾಗ ಮೈ ದಡವಿ ರಮಿಸಿದವನು, ಹೊಳೆಯಲ್ಲಿ ಈಜು ಕಲಿಸಿದವನು, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ಅಮ್ಮನಂತೆ ಸೇವೆ ಮಾಡಿದವನು ಹೀಗೆ ಬದುಕಿನ ಒಂದೊಂದು ಮಜುಲುಗಳಲ್ಲೂ ತನ್ನ ಛಾಪು ಮೂಡಿಸಿ “ನಿನ್ನಂತ ಅಪ್ಪ ಇಲ್ಲಾ” ಅಂತ ಅನ್ನಿಸಿಕೊಂಡಂತಹ ಅಪ್ಪ ಎಲ್ಲರ ಬದುಕಿನಲ್ಲು ಮಹತ್ವದ ಸ್ಥಾನ ಪಡೆದು ಗೆಳೆಯನಂತೆ, ತಾಯಿಯಂತೆ, ಗುರುವಂತೆ, ಮಾರ್ಗದರ್ಶಿಯಂತೆ, ಹಿತೈಷಿಯಂತೆ ಮಕ್ಕಳ ಬಾಳಿನಲ್ಲಿ ಬೆಳಕಾಗಿ ಬೆಳಕು ನೀಡುತ್ತಿದ್ದಾನೆ.
ಪ್ರತಿಯೊಂದು ಮಗುವಿಗೂ ತಾಯಿಯ ಪ್ರೀತಿಯ ಅವಶ್ಯಕತೆಯಂತೆ ತಂದೆಯ ಪ್ರೀತಿಯೂ ಅತ್ಯಾವಶ್ಯಕ. ಮಗುವನ್ನು ಹೊತ್ತು, ಹೆತ್ತು ಲಾಲನೆ ಪಾಲನೆ ಮಾಡುವವಳು ತಾಯಿಯೆ ಆದರೂ , ಆ ಕಾರ್ಯದಲ್ಲಿ ನೆರವಾಗಿ ತನ್ನ ಕರುಳ ಕುಡಿಯನ್ನು ಅತ್ಯಂತ ಜತನದಿಂದ ನೋಡಿಕೊಳ್ಳುವ ಹೊಣೆಗಾರಿಕೆಯೂ ಪ್ರತಿಯೊಬ್ಬ ತಂದೆಯದಾಗಿರುತ್ತದೆ. ಮಗುವನ್ನು ಯೋಗ್ಯವಾಗಿ ಬೆಳೆಸಿ ಸನ್ಮಾರ್ಗದಲ್ಲಿ ನಡೆಸಿ ಸಮಾಜದಲ್ಲಿ ಸತ್ಪಜೆಯನ್ನಾಗಿಸುವ ಗುರುತರವಾದ ಜವಾಬ್ದಾರಿ ಅಪ್ಪನದೆ ಆಗಿರುತ್ತದೆ. ಮಕ್ಳಳನ್ನು ಬೆಳೆಸುವಲ್ಲಿ ತಂದೆಯ ಪಾತ್ರ ಗುರುತರವಾದದು, ಹಾಗು ಗಂಭಿರವಾದುದು ಹೌದು. ಇಂದಿನ ಬದುಕಿನಲ್ಲಿ ತಂದೆಯು ತಾಯಿಗೆ ಸರಿಸಮಾನವಾಗಿ ಮಕ್ಕಳ ಜವಾಬ್ದಾರಿಯನ್ನು ಸಂತೋಷವಾಗಿಯೇ ಹೊರುತ್ತಿದ್ದಾರೆ. ಮಹಿಳೆ ಇಂದು ಹೊರಜಗತ್ತಿಗೆ ತೆರೆದು ಕೊಂಡಿದ್ದಾಳೆ, ಮಗುವನ್ನು ನೋಡಿಕೊಳ್ಳುವ ಕೆಲಸದಲ್ಲಿ ಪತಿಯ ಸಹಕಾರವನ್ನು ಬಯಸುವುದರಿಂದ ಮಗುವಿನ ಸಾಮಿಪ್ಯ ಅಪ್ಪಂದಿರಿಗೆ ಈಗ ಅನಿವಾರ್ಯ, ಹೆಂಡತಿ ಮಗುವನ್ನು ಗಂಡನಿಗೆ ಒಪ್ಪಿಸಿ ಮನೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ಆ ಸಮಯದಲ್ಲಿ ಮಕ್ಕಳನ್ನು ಸ್ನಾನ ಮಾಡಿಸಿ, ಬಟ್ಟೆ ಹಾಕಿ, ತಿಂಡಿ ತಿನ್ನಿಸಿ ಶಾಲೆಗೆ ಸಿದ್ದಪಡಿಸುವುದು ತಂದೆಯ ಪಾಲಿಗೆ ಬಂದಿರುವುದು ಸಹಜವಾಗಿದೆ. ಆ ಕಾರ್ಯವನ್ನು ಇಂದಿನ ಅಪ್ಪಂದಿರು ಬಹಳ ಇಷ್ಟ ಪಟ್ಟು ಹಾಗು ಬಹು ಯಶಸ್ವಿಯಾಗಿ ನಿರ್ವಹಿಸುತ್ತಿರುವುದನ್ನು ನೋಡುತ್ತಿದ್ದೆವೆ, ಹಾಗಾಗಿಯೆ ಇಂದಿನ ಅಪ್ಪಂದಿರಿಗೆ ಮಕ್ಕಳ ಸಾಮಿಪ್ಯ ಹೆಚ್ಚಾಗಿ ಮಕ್ಕಳ ಹಾಗು ತಂದೆಯ ನಡುವಿನ ಬಾಂಧವ್ಯ ಕೂಡಾ ವೃದ್ದಿಸಿದೆ, ಮಗುವನ್ನು ತಾಯಿಯಿಲ್ಲದ ಕ್ಷಣಗಳಲ್ಲಿಯೂ ತಾಯಿಯಷ್ಟೇ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಕೂಡಾ ಇಂದಿನ ಅಪ್ಪಂದಿರಲ್ಲಿ ಕಾಣಬಹುದು. ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ತಮ್ಮ ಪಾತ್ರ ಮುಖ್ಯವಾದುದು ಅಂತ ಎಲ್ಲಾ ತಂದೆಯರಿಗೂ ಅರಿವಿದೆ, ಹಾಗೆಂದೆ ಮಕ್ಕಳಿಗೂ ಅಪ್ಪನೆಂದೆರೆ ಅಚ್ಚು ಮೆಚ್ಚು. ಇತ್ತೀಚೆಗೆ “ಅಪ್ಪಂದಿರ ದಿನ’ ವನ್ನು ವಿಶೇಷವಾಗಿ ಆಚರಿಸಿ ಅಪ್ಪನ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಭಾರತದಲ್ಲೂ ಈ ಸಂಭ್ರಮವನ್ನು ಕಾಣ ಬಹುದು.
ಸುಂದರ, ಸವಿ ಬದುಕಿನ ಕಾರಣ ಕರ್ತನಿಗೆ ಒಂದು ದಿನದಲ್ಲಿ ಕೃತಜ್ಞತೆ ಸಲ್ಲಿಸಿ ಅಪ್ಪನ ದಿನ ಆಚರಿಸಿದರೆ ತಮ್ಮ ಕರ್ತವ್ಯ ಮುಗಿದು ಹೋಗುವುದಿಲ್ಲ. ಹೆತ್ತವರ ದಿನವನ್ನು ಆಚರಿಸಿದರಷ್ಟೆ ಸಾಲದು, ನಿಮ್ಮ ಬದುಕಿನ ಮುಸ್ಸಂಜೆಯಲಿ ನಾವೂ ನಿಮ್ಮ ಜೊತೆ ಇದ್ದೆವೆ ಅನ್ನುವ ಭಾವ ಬಿಂಬಿಸುವ ನಮ್ಮ ನಿಮ್ಮ ನಡವಳಿಕೆಯೂ ಅಷ್ಟೆ ಮುಖ್ಯವಾಗ ಬೇಕು. ಹೆತ್ತವರಿಗೆ ಅವರ ವೃದ್ಧಾಪ್ಯದಲ್ಲಿ ಬೇಕಾದದ್ದು ಹಿಡಿಯಷ್ಟು ಪ್ರೀತಿ, ಒಂದಿಷ್ಟು ಕಾಳಜಿ ,ನಿಮ್ಮೊಡನಿದ್ದೆವೆ ಎಂಬ ಭರವಸೆ ಮಾತ್ರ. ಅದನ್ನು ಕೊಡುತ್ತೆವೆಂದು ಪ್ರತಿಜ್ಞೆ ಮಾಡೊಣ. ನಮಗಾಗಿ ಅವಿರತ ದುಡಿದು ನಮ್ಮನ್ನು ಪ್ರೀತಿಯಿಂದ ಸಲಹಿದ, ನಮಗೊಂದು ಸುಂದರ ಬದುಕು ಕೊಟ್ಟ , ನಮ್ಮನ್ನು ಒಬ್ಬ ವ್ಯಕ್ತಿಯನ್ನಾಗಿ ರೂಪಿಸಿದ ಅಪ್ಪನಿಗೆ ಈ ಲೇಖನದ ಮೂಲಕ ಒಂದು ನಮನ.
–ಎನ್. ಶೈಲಜಾ ಹಾಸನ
ಲೇಖನ ಚೆನ್ನಾಗಿದೆ, ನಮ್ಮ ದೇಶದಲ್ಲಿಯೇ ವಿದೇಶಿ ಸಂಸ್ಕೃತಿ ಬೆಳೆಯುತ್ತಿರುವುದನ್ನು ಕಾಣಬಹುದು,
ಧನ್ಯವಾದಗಳನ್ನು ಸರ್
ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೆಡಂಮ್ ಈಗಿನ ಮಕ್ಕಳು ಅಪ್ಪ ಅಮ್ಮನನು ಎಲ್ಲಿ ನೋಡಿಕೊಳ್ಳುತ್ತಾರೆ ಅವರ ದಾರಿಯನ್ನು ಅವರೆ ನೋಡಿಕೊಳ್ಳಬೇಕು ಅಷ್ಟೇ.
ಬಹಳ ಅರ್ಥ ಪೂರ್ಣ ಲೇಖನ
ಸುಂದರವಾದ ಲೇಖನ.ಅಪ್ಪ ಅಂದರೆ ಒಂದು ನವ ಚೈತನ್ಯ. ಬದುಕಿನ ದಾರಿಯ ಬಹು ದೊಡ್ಡ ಬೆಳಕಿನ ರಶ್ಮಿ. ಆ ಬೆಳಕು ಸೂಸುವ ದಾರಿಯಲ್ಲಿ ಮಕ್ಕಳ ಪಯಣ. ನಾವೆಷ್ಟೆ ದೂರ ಸಾಧನೆ ಯ ಪಯಣ ಮಾಡಿದ್ದರೂ ಅಪ್ಪ ಹಚ್ಚಿದ ದೀಪದ ಆ ಬೆಳಕ ದಾರಿಯಲ್ಲಿ ಯೆ.ಅಲ್ಲವೇ?.. …. ಇಟ್ಸ್ ವೆರಿ ನೈಸ್ ಮ್ಯಾಮ್.
ವೆರಿ ನೈಸ್.
ಅಬಿನಂದಾನೆಗಳು