ಸೇರುವೆನೆ ನಿನ್ನ
ಯಾವ ತಿರುವನು ಬಳಸಿ
ಬರಲಿ ನಿನ್ನಲಿ ಗೆಳತಿ
ನಮ್ಮ ದಾರಿಯ ಬೆಸೆವ
ಬಿಂದುವೆಲ್ಲಿ ॥
ಅಡ್ಡ ಹಾಯುವ ಜಾಡು
ದಿಣ್ಣೆಗಳು ತಗ್ಗುಗಳು
ದಿಕ್ಕು ತಪ್ಪಿಸಿ ನನ್ನ
ಬಳಲಿಸಿವೆಯೇ ॥
ಕಲ್ಲು ಮುಳ್ಳಿನ ದಾರಿ
ಸುಳಿಯ ಸೆಳವಿನ ಹೊಳೆಯು
ಹೆಜ್ಜೆ ಹೆಜ್ಜೆಗು ಅಡರಿ
ತೊಳಲುತಿರುವೆ ॥
ನೇಸರನು ಮುಳುಗುತಿಹ
ಕತ್ತಲಿಳಿದಿದೆ ಕಣ್ಗೆ
ಕೈಹಿಡಿದು ನಡೆಸುವ
ಕರುಣೆಯೆಲ್ಲಿ ॥
ಕಾಲು ಸೋತಿವೆ ನೋಡು
ಎದೆಗೆಟ್ಟು ಕುಸಿಯುತಿಹೆ
ಮೃತ್ಯು ಎರಗುವ ಮುನ್ನ
ಸೇರುವೆನೆ ನಿನ್ನ ॥
* ಗೋವಿಂದ ಹೆಗಡೆ
ಈ ಗೆಳತಿಯರ ನೋಡಲು ಹೋಗುವ ದಾರಿ ಯಾವಾಗಲು ಬಳಸು,ತೆಗ್ಗು,ದಿಣ್ಣೆ,ಮುಳ್ಳು, ಕಲ್ಲುಗಳದ್ದು.ಕತ್ತಲೆಯಲ್ಲೇ ಹೋಗುವುದು ಬೇರೆ!
ಕಾಲು ಸೋಲದೆ ಏನು? ಅವಳಂತೆಯೆ ಇದ್ದಲ್ಲೆ ಇದ್ದು ಕಾಯ್ದುನೋಡಿ.ಅವಳೂ ಈ ರೀತಿಯ ಕವನ ಬರೆಯುವಳೆ ಎಂದು?.