ಅಡುಗೆಮನೆಯೆಂಬ ಸುಳಿಯೊಳಗೆ..
ಮೆಟ್ರೋ ರೈಲಿನಲ್ಲಿ ಪಕ್ಕದಲ್ಲಿ ಕುಳಿತ ಸುಮಾರು ನಲುವತ್ತೈದರ ಆಸುಪಾಸಿನ ಮಹಿಳೆ ಒಂದು ಸ್ಟೇಷನ್ನಿನಲ್ಲಿ ಹತ್ತಿದ ಯುವಕನ ಬಳಿ ಪರಿಚಯದ ನಗೆ ಬೀರಿ ಮಾತಾಡಲಾರಂಭಿಸಿದಳು. ಅತ್ಯಂತ ಉಚ್ಚ ಸ್ಥಾಯಿಯಲ್ಲಿ ಮಾತಾಡುತ್ತಿದ್ದ ಈಕೆಯ ಧ್ವನಿ ಬೇಡ ಬೇಡವೆಂದರೂ ಕಿವಿಗೆ ಬೀಳುತ್ತಿತ್ತು. ಇಳಿವತನಕ ಪ್ರಪಂಚದ ಆಗುಹೋಗುಗಳ ಬಗ್ಗೆ, ಹವಾಮಾನ, ಜಿ ಎಸ್ ಟಿ, ಮೋದಿ, ಟ್ರಂಪ್ ಹೀಗೆ ಒಂದೇ ಒಂದು ವಿಷಯವನ್ನೂ ಬಿಡದೇ ಮಾತಾಡುತ್ತಾ ಹೋದಳು. ತಿಳುವಳಿಕಸ್ಥೆಯಂತೆ ಕಾಣಿಸುವ ಈಕೆ ಆ ಹುಡುಗನಿಗೆ “ಸರಿ, ಊಟಕ್ಕೇನು ಮಾಡ್ಕೊಂಡಿದ್ದಿಯಾ?” ಎನ್ನುತ್ತಾಳೆ. “ಹೋಟೇಲ್ ಊಟ ತಿಂದೂ ತಿಂದೂ ಸಾಕಾಗಿದೆ ಮಾಮಿ” ಅಂದ ಆತ. ಒಂದೇ ಏಟಿಗೆ “ಹಾಗಾದರೆ ಮದುವೆ ಮಾಡ್ಕೊಂಡ್ ಬಿಡೋದಲ್ವಾ?” ಎಂದು ಅದೊಂದು ಪರಿಹಾರವೆಂಬಂತೆ ಹೇಳಿದ ಆಕೆಯ ಮೇಲ್ಯಾಕೋ ಅಸಹನೆ ಹುಟ್ಟಿತು.
“ಮದುವೆ” ಅನ್ನುವುದು ಪವಿತ್ರ ಬಂಧ ಅದು ಇದು ಎಂದೆಲ್ಲಾ ಕೇಳೀ ಕೇಳೀ ಬೇಸತ್ತು ಹೋಗಿರುವ ನಮಗೆ ಅದರ ಈ ಯಾವುದೇ ರಂಗಿಲ್ಲದ ಮುಖ ಹೊಸತಲ್ಲ. ಮಹಿಳೆಯಾಗಿದ್ದುಕೊಂಡು ಆಕೆ ತನ್ನ ಪರಿಚಯದ ಹುಡುಗನಿಗೆ “ಮದುವೆ ಮಾಡಿಕೊಂಡು ಬಿಟ್ಟರೆ ಆತನಿಗೆ ಅಡುಗೆ ಮಾಡಿಕ್ಕಲು ಯಾರೋ ಸಿಕ್ಕಂತಾಯಿತು, ಎಂಬಂತೆ ಮಾತಾಡಿದ ಪರಿ ನಿಜಕ್ಕೂ ಅಸಹನೀಯ. ಆಕೆಯ ಯೋಚನಾಲಹರಿಗೆ “ನೀನೇ ಅಡುಗೆ ಕಲಿತುಕೊಂಡು ಬಿಡು ಮಹರಾಯನೇ!” ಎನ್ನುವ ಮಾತಂತೂ ಹೊಳೆಯಲಿಲ್ಲ. ಅದೂ ಸಾಧ್ಯವಾಗದಿದ್ದಲ್ಲಿ ಅಡುಗೆಯವರನ್ನು ನೇಮಿಸಿದರಾಯಿತಲ್ವೇ! ಇದಕ್ಕಾಗಿ ಯಾಕೆ ಮದುವೆಯಾಗಬೇಕು?! ಅಥವಾ, ಮದುವೆಯಾಗಿ ಬರುವ ಹುಡುಗಿಗೆ ಇವರು ಕೊಡುವ ಸ್ಥಾನ ಇಷ್ಟೇ?!
ವಿದ್ಯಾವಂತರೂ ತಿಳುವಳಿಕಸ್ಥರೂ ಎಂದೆಲ್ಲಾ ಅನಿಸಿಕೊಂಡಿರುವವರೇ ಮಾತಾಡುವಾಗ ಒಂದೆರಡು ಹುಳುಕು ಅವರರಿವಿಲಿಲ್ಲದೇ ಹೊರಕಾಣಿಸಿಬಿಡುವುದುಂಟು. ಅದರಲ್ಲೂ ಮದುವೆಯ ವಿಚಾರಕ್ಕೆ ಬಂದಾಗ ಕೆಲವು ಬಾರಿ ಅತಿರೇಕಕ್ಕೆ ಹೋಗುವುದೂ ಇಲ್ಲದಿಲ್ಲ. ಇತ್ತೀಚೆಗೆ ಮದುವೆ ನಿಶ್ಚಯವಾದ ಹುಡುಗಿಗೆ ಮದುವೆಯ ದಿನ ಹತ್ತಿರ ಬರುತ್ತಿದ್ದಂತೇ ಆತಂಕ. ಕಂಡ ಕಂಡವರೆಲ್ಲಾ, “ನಿನಗೆ ಅಡುಗೆ ಬರುತ್ತದೆಯೇ?” ಎಂದು ಕೇಳುತ್ತಿದ್ದರು. ಅಡುಗೆ ಎನ್ನುವ ವಿದ್ಯೆ ತನಗೆ ಅಷ್ಟೊಂದು ಬರಲಿಲ್ಲವಾಗಿ ಮದುವೆಯಾದ ಮೇಲೆ ತಾನು ಅದನ್ನು ಸಂಭಾಳಿಸಲೇ ಬೇಕು, ಹೇಗೋ ಏನೋ ಎಂದು ಆತಂಕಗೊಂಡಿದ್ದಳಾಕೆ.
ಮದುವೆಯಾದ ಬಳಿಕ ಹುಡುಗಿ ಅಡುಗೆಮನೆ ಹೊಕ್ಕು ಸಮಸ್ತ ಅಡುಗೆ ಜವಾಬ್ದಾರಿ ಹೊತ್ತುಕೊಳ್ಳುವ ಈ ವ್ಯವಸ್ಥೆಗೆ ಸಮಾಜ ಅದೆಷ್ಟು ಒಗ್ಗಿಕೊಂಡಿದೆಯೆಂದರೆ ಅಲ್ಲಿ ಸಮಾನತೆಯ ಅವಶ್ಯಕತೆಯ ಕುರಿತು ಸಣ್ಣ ಯೋಚನೆಯೂ ಬರುವುದಿಲ್ಲ. ಹೆಚ್ಚಾಗಿ ಉಣ್ಣುವವರು, ದುಡಿವವರು ಇಬ್ಬರಾದರೂ ಅಡುಗೆ, ಪಾತ್ರೆ, ಮನೆಕೆಲಸ ಇತ್ಯಾದಿ ಮಹಿಳೆಯ ಹೆಗಲ ಮೇಲೆ ಎಗ್ಗಿಲ್ಲದೆ ಬೀಳುತ್ತದೆ. ವಿವಾಹಕ್ಕೂ ಮುನ್ನ ತನ್ನ ಮದುವೆಯಾಗುವ ಹುಡುಗನಿಗಿಂತಲೂ ಹೆಚ್ಚು ಮುದ್ದಿನಿಂದ ಬೆಳೆದ, ಅವನಿಗಿಂತಲೂ ಚಿಕ್ಕವಯಸ್ಸಿನ ಹುಡುಗಿಗೆ ಒಮ್ಮಿಂದೊಮ್ಮೆಲೇ ಒಂದಷ್ಟು ಭಾರ ಹೆಗಲ ಮೇಲೆ ಬಿದ್ದಾಗ ಕುಗ್ಗಿಬಿಡುವುದುಂಟು. ಆಫೀಸ್ ನಲ್ಲಿ ಲೇಡೀಸ್ ರೂಂನಲ್ಲಿ ಒಬ್ಬಳೇ ಕಣ್ಣಲ್ಲಿ ನೀರು ತುಂಬಿಸಿಕೊಂಡು ಕೂತಿದ್ದ ಇತ್ತೀಚೆಗೆ ಮದುವೆ ಆದ ಹುಡುಗಿಯೊಬ್ಬಳ ಕಣ್ಣೀರಿನಲ್ಲಿ ಹುದುಗಿದ್ದ ನೂರೆಂಟು ನೂವು ಇದನ್ನೇ ಹೇಳುತ್ತಿತ್ತು.
ತನ್ನ ಜೀವನದ ಮುಕ್ಕಾಲು ಭಾಗವನ್ನು ಮನೆಯವರಿಗೆ ಮೆದುವಾದ ಇಡ್ಲಿ, ತರಹೇವಾರಿ ದೋಸೆ ಮಾಡಿ ಕೊಟ್ಟುಕೊಂಡು ಬದುಕಿ ತನ್ನ ಇಷ್ಟಾನಿಷ್ಟಗಳನ್ನೇ ಮರೆತು ಬದುಕುವ ನೂರೆಂಟು ಮಹಿಳೆಯರನ್ನು ಕಾಣುವಾಗ ಸ್ವಂತಿಕೆ-ಸ್ವಾತಂತ್ರ್ಯಗಳ ಇಚ್ಛೆ ಕೂಡಾ ಇವರಲ್ಲಿ ಸತ್ತು ಹೋಗಿರುವಂತೆ ಕಾಣಿಸುತ್ತದೆ. ಅದರಲ್ಲೂ ಮನೆಯಲ್ಲಿ ತಲಾ ಒಬ್ಬರಿಗೊಂದರಂತೆ ವಿಧ ವಿಧದ ಅಡುಗೆಗಳನ್ನು ಮಾಡುತ್ತಾ ಅಡುಗೆಮನೆಯೊಳಗೆಯೇ ಬೆಂದು ಹೋಗುವ ಜೀವಗಳೂ ಅನೇಕ.
ಇಲ್ಲಿ ಬಹುತೇಕರ ಪದಕೋಶದಲ್ಲಿ “ಇಲ್ಲ” ಎಂಬ ಪದ ಇಲ್ಲವೇ ಇಲ್ಲವೇನೋ ಅನಿಸುತ್ತದೆ. ಅದೆಷ್ಟೇ ಬವಣೆಯಿರಲಿ, ಸುಸ್ತಿರಲಿ, ಚಕಾರವೆತ್ತದೆ ಸಾಂಗೋಪಾಂಗವಾಗಿ ಊಟೋಪಚಾರಗಳನ್ನು ಮಾಡಿ ಬಡಿಸುತ್ತಾ ತೊಳೆ, ತಿಕ್ಕು, ಒರೆಸು, ಮಾಡು ಎಂಬ ಅಡುಗೆಮನೆಯೊಳಗಿನ ಚಕ್ರದೊಳಗಿಂದ ಹೊರಬಾರದೆ ಜೀವ ಸವೆಸಿದ, ಸವೆಸುತ್ತಿರುವವ ಅನೇಕ ಮಂದಿಯಿದ್ದಾರೆ.
ಮದುವೆಯ ಶಾಸ್ತ್ರಗಳಲ್ಲಿ ವಧೂ ಗೃಹಪ್ರವೇಶದ ಬಳಿಕ ಸಟ್ಟುಗ ಹಿಡಿಸುವ, ತೆಂಗಿನಕಾಯಿ ತುರಿಯಿಸುವ ಶಾಸ್ತ್ರಗಳು ಅದ್ಯಾವುದೋ ಕಾಲದಲ್ಲಿ ಸಮಾಜ ಒಪ್ಪಿ ನಡೆಸಿಕೊಂಡು ಬರುತ್ತಿರುವ ಸಾಂಕೇತಿಕವಾದ ಆಚಾರಗಳಾದರೆ ಇಂದಿನ ವ್ಯವಸ್ಥೆಗಳಲ್ಲಿ ಇವಕ್ಕೆ ಪ್ರಾಮುಖ್ಯತೆ ಕೊಡಬಾರದೆನಿಸುತ್ತದೆ. ಹಾಗೂ ಹೀಗೂ ಪ್ರತಿ ಶಾಸ್ತ್ರಗಳನ್ನೂ ಮಾಡಿಯೇ ತೀರಬೇಕಿದ್ದರೆ, ವಧೂವರರಿಬ್ಬರನ್ನೂ ಇಂತಹ ಶಾಸ್ತ್ರಗಳೆಂಬ ಸಾಂಕೇತಿಕ ಆಚಾರಗಳನ್ನು ಪಾಲಿಸಿ ಆದರ್ಶಪ್ರಾಯರಾಗಿಸುವ ವ್ಯವಸ್ಥೆಗಳ ಅಗತ್ಯವಿದೆ.
ಕಡೆಯದಾಗಿ, ಅಡುಗೆ ಮಾಡುವುದು ತೊಂದರೆಯಲ್ಲ, ತಪ್ಪಲ್ಲ. ಆದರೆ ಇಲ್ಲಿ ಸಹಜವಾಗಿ ಎಲ್ಲ ಜವಾಬ್ದಾರಿಗಳು ಎಲ್ಲರದೆಂಬ ಮನಸ್ಥಿತಿ ಹುಟ್ಟಬೇಕಾಗಿರುವ ಅಗತ್ಯವಿದೆ. “ಮದುವೆ” ಗೂ “ಅಡುಗೆ” ಗೂ ಇರುವ ಅನಗತ್ಯ ನಂಟು ಪ್ರತಿ ಮನೆ-ಮನಗಳಿಂದ ಕಿತ್ತೊಗೆದಾಗ ಮಾತ್ರ ಇದು ಸಾಧ್ಯ.
.
– ಶ್ರುತಿ ಶರ್ಮಾ, ಬೆಂಗಳೂರು.
ಮೆಟ್ರೋ ರೈಲಿನಲ್ಲಿ ೪೫ರ ಮಹಿಳೆಯ ಮುಖಾಂತರ ಪ್ರಾರಂಭವಾದ “ರಾಜಕೀಯ. ಮದುವೆ. ಅಡುಗೆ ”
ಇತ್ತ್ಯಾದಿಗಳ ಕುರಿತಾಗಿ ನಿಮ್ಮ ಲೇಖನಿಯಿಂದ ಮೂಡಿ ಬಂದ ಸುವಿಚಾರಗಳು ಸಕಾಲಿಕವಾಗಿವೆ,
ಅರ್ಥ ಪೂರ್ಣವಾಗಿವೆ .ಇಂಥ ಬರೆಹಗಳು ಚಿಂತನೆ ಮಾಡುವದಕ್ಕೆ ಅವಕಾಶ ಒದಗಿಸುತ್ತವೆ,ಆದರೂ
ಗೃಹಿಣಿ ರುಚಿ ರುಚಿಯಾದ ಅಡುಗೆ ಮಾಡಿ ಉಣಬಡಿಸಿದ್ರೆ, ಪತಿಯ ದೈನಂದಿನ ಕೆಲಸಗಳಲ್ಲಿ ಬರುವ ಒತ್ತಡ
ಇತ್ತ್ಯಾದಿಗಳನ್ನು ಸಹಿಸಬಹುದಾಗಿದೆ ಅಲ್ಲವೆ? (ಇದು ನನ್ನ ೫೧ ವರ್ಷಗಳ ದಾಂಪತ್ತ್ಯದ ಅನುಭವ. )
ನಿಮ್ಮ , ಅನುಭವಗಳ ಸರಮಾಲೆ ಸಾಹಿತ್ಯದ ಮೂಲಕ ಮುಂದುವರೆಯಲಿ. ಶುಭಾಶೀರ್ವಾದಗಳು
Well written. ಅಡುಗೆ ಮಾಡುವುದು, ಅಥವಾ ಮನೆ ಕೆಲಸವನ್ನು ಮಾಡುವುದು ತಪ್ಪೇನು ಅಲ್ಲ. ಆದರೆ ಅಡುಗೆ, ಹಾಗು ಮನೆ ಕೆಲಸಕ್ಕಾಗಿಯೇ ಮದುವೆ ಮಾಡಿಕೋ ಎಂಬ ಮನಸ್ಥಿತಿ ನಿಜವಾಗಿಯೂ ಅಸಹನೀಯ. ಇಂತಹ ಮಾತುಗಳನ್ನು ಬಹಳಷ್ಟು ಬಾರಿ ಆಡುವುದು ಮಹಿಳೆಯರೇ ಎಂಬುವುದು ಇನ್ನೊಂದು ದುಸ್ಥಿತಿ.
ಶ್ರುತಿಯವರೇ, ಒಂದು ಜಾಹಿರಾತಿನಲ್ಲಿ ನೋಡಿದ ನೆನಪಾಯಿತು. ‘ಹುಡುಗಿ ನೋಡಲು’ ಒಂದು ಕುಟುಂಬದವರು ಹುಡುಗಿಯ ಮನೆಗೆ ಬರುತ್ತಾರೆ. (ಹುಡುಗಿ ನೋಡುವ ಪ್ರಹಸನ ಈಗ ತುಂಬಾ ಕಡಿಮೆ ಆಗಿದೆ ಎನ್ನಿ). ಹುಡುಗಿಯ ಪೈಕಿ ಯಾರೋ ಪರಿಚಾರಕರು ತಿಂಡಿ ಕೊಟ್ಟು, ಕಾಫೀ/ಚಾ ಕೊಡುವ ಸಮಯಕ್ಕೆ, ಅಮ್ಮನ ಬಳಿ ಕುಳಿತಿದ್ದ ಹುಡುಗಿ ನಗುತ್ತಾ ನೇರವಾಗಿ ಹುಡುಗನಲ್ಲಿ ಕೇಳಿಯೇ ಬಿಡುತ್ತಾಳೆ, “ನಿಮಗೆ ಅಡಿಗೆ ಚೆನ್ನಾಗಿ ಮಾಡಲು ಬರುತ್ಯೇ…?” ಒಮ್ಮೆ ತಬ್ಬಿಬ್ಬಾದಂತೆ ಹೊರಗಿನಿಂದ ನಟಿಸಿದ ಹುಡುಗ, “ನಿಮಗೆ ಯಾವುದಿಷ್ಟ..? ಉಪ್ಪಿಟ್ಟು, ಹಲ್ವಾ, ಮಸಾಲೆದೋಸೆ, ಬಿಸಿಬೇಳೆಬಾತ್, ಗೋಬಿಮಂಚೂರಿ, ವೆಜ್ ಪಕೋಡ…? ನಮ್ಮ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸ್ಪರ್ಧೆಯ ‘ಕುಕ್ ವಿದೌಟ್ ಫೈರ್’ ನಲ್ಲೂ ನನಗೇ ಫಸ್ಟ್ ಪ್ರೈಸ್.”
ನಿಮ್ಮ ಲೇಖನ ಚೆನ್ನಾಗಿದೆ, ಹಾಸ್ಯದ ಲೇಪನ ಒಂದು ಚಮಚೆ ಕಡಿಮೆ ಅನಿಸಿತು ನನಗೆ. ಆದರೂ, ರುಚಿಗೆ ಏನೂ ಕಡಿಮೆ ಆಗಲಿಲ್ಲ.