ಬದಲಾದ ಪಾತ್ರಗಳಲ್ಲಿ …ಭಾವಗಳ ಜಾಥಾ..
ಒಂದನೇ ತರಗತಿಯಲ್ಲಿರುವಾಗ ಮಧ್ಯಾಹ್ನ ಊಟಕ್ಕೆ ಬಿಟ್ಟ ಹೊತ್ತಲ್ಲಿ, ಪೇಟೆಗೆ ಹೋದ ಚಿಕ್ಕಮ್ಮ ಬರುವಾಗ ನನಗೆ ಇಷ್ಟವೆಂದು ಪೊಟ್ಟಣದಲ್ಲಿ ಸುತ್ತಿ ತಂದ ಕೆಂಪು ಮಸಾಲೆ ಕಡ್ಲೆಯನ್ನು ಶಾಲೆಯ ಗೇಟಿನ ಬಳಿ ಕೊಟ್ಟು ಹೋದದ್ದನ್ನ ಜಗಳ ಗಂಟಿ ನನ್ನ ಬೆಂಚಿನ ಗೆಳತಿ ತುಳಸಿ ನೋಡಿಯೇ ಬಿಟ್ಟಳು.ಆಗಲೇ ಅವಳ ಬಾಯಲ್ಲಿ ನೀರೂರಿರಬೇಕು.ನೀ ತಿಂದ್ರೆ ಟೀಚರ್ ಜೊತೆಗೆ ಹೇಳಿ ಕೊಡುವೆ ಅಂತ ನನಗೆ ಬೆದರಿಸಿ ದಬಾಯಿಸುತ್ತಾ,ಕೈಯಿಂದ ತಿವಿದೂ,ಚಿವುಟಿ ಕಡ್ಲೆಯನ್ನೆಲ್ಲಾ ಒಂದೂ ಬಿಡದಂತೆ ಅವಳೇ ಸ್ವಾಹ ಮಾಡಿದ್ದನ್ನ ಮನೆಯಲ್ಲಿ ಹೋಗಿ ಹೇಳಲಾಗದೆ,ಒತ್ತರಿಸಿ ಬಂದ ದು:ಖವನ್ನೆಲ್ಲಾ ಗಂಟಲಲ್ಲೇ ಅದುಮಿಟ್ಟುಕೊಂಡು ಸಂಕಟ ಪಟ್ಟಿದ್ದೆ.ಆಗ ಅವಳನ್ನು ನೋಡುವಾಗಲೆಲ್ಲಾ ಅವಳು ದೊಡ್ಡ ಡಾನ್ ನಂತೆ ಗೋಚರಿಸಿ ಬೆದರಿದ ಹುಲ್ಲೆಯಂತಾಗುತ್ತಿದ್ದೆ.ಈಗ ನೆನೆದು ಕೊಂಡಾಗಲೆಲ್ಲಾ ಅವಳ ಚಾಲಾಕಿತನಕ್ಕೆ ಭೇಷ್ ! ಅಂತ ಮನಸ್ಸು ತಲೆದೂಗಿ ಕಿರು ನಗೆಯೊಂದು ಸುಳಿದು ಹೋಗಿಬಿಡುತ್ತದೆ.
** ** ** ** **
ನಾನಾಗ ೪-೫ ನೇ ತರಗತಿಯಿರಬೇಕು. ಸರೀ ನೆನಪಿದೆ.ಅತ್ತೆ ಅತ್ತೆ ತಂದು ಕೊಟ್ಟ ಚೆಂದದೊಂದು ಫ್ರಿಲ್ ಇರುವ ಬಿಳೀ ಬಣ್ಣದ ,ಸೊಂಟದ ನಡುವೆ ಕೆಂಪನೆ ಲೇಸ್ ಪಟ್ಟಿ ಇರುವ ಫ್ರಾಕ್ ಹಾಗೂ ಕಪ್ಪು ಬಣ್ಣದ ಶೂ ತೊಟ್ಟು ಚಿಕ್ಕಮ್ಮನ ಕೂಡೆ ಸಂಭ್ರಮದಿಂದ ಪೇಟೆಗೆ ಹೊರಟಿದ್ದೆ. ಬಹುಷ: ಆದಿತ್ಯವಾರವೇ ಇರಬೇಕು.ಇಲ್ಲದಿದ್ದರೆ ಶಾಲೆ ತಪ್ಪಿಸಿ ಹೇಗೆ ತಾನೇ ಹೋಗಲು ಸಾಧ್ಯ? ಪೇಟೆಯಿಂದ ಹೋದ ಕೆಲಸ ಮುಗಿಸಿ ಬರುವಾಗ ನನಗೂ ಚಿಕ್ಕಮ್ಮಂಗೂ ತಾಗಿ ಬಂದು ಯಾಕೋ ಜಟಾ ಪಟಿ.ನಾನು ಎದುರುತ್ತರ ಕೊಟ್ಟಿದ್ದಕ್ಕೆ, ಅವಳು ಬಿಡದೇ ಎರಡು ಬಾರಿಸಿಯೂ ಆಗಿತ್ತು.ಚಿಕ್ಕಮ್ಮ ಅಂದರೆ ನನ್ನ ಅಮ್ಮನ ಕೊನೇ ತಂಗಿ.ನನಗೂ ಆಕೆಗೂ ಹೆಚ್ಚಿನ ವಯಸ್ಸಿನ ಅಂತರವಿಲ್ಲದಿದ್ದುದರಿಂದ,ಅವಳನ್ನು ಏಕವಚನದಲ್ಲಿ ಮಾತನಾಡಿಸುವಷ್ಟು ಧೈರ್ಯ ಮತ್ತು ಸಲಿಗೆ ಬಂದಿತ್ತು.ಆ ಕಾರಣಕ್ಕಾಗಿಯೇ ಅವಳೊಂದಿಗೇ ಕೋಪ,ತಾಪ,ರಾಜಿ-ಗೀಜಿ ಎಲ್ಲಾನೂ.
ಇವತ್ತೂ ಹಾಗೇ ಜಗಳವಾಡುತ್ತಲೇ ಮನೆ ಹತ್ತಿರ ಬಂದಾಗಿತ್ತು.ಮನೆ ಸೇರಬೇಕಾದರೆ ಅನತಿ ದೂರದಲ್ಲಿ ಸಣ್ಣ ನದಿಯೊಂದು ಹರಿಯುತ್ತದೆ.ದಾಟಲು ಸುಲಭವಾಗುವಂತೆ ಅದಕ್ಕೆ ಅಡ್ಡಲಾಗಿ ಒಂದು ಪಾಲ ಕಟ್ಟಿದ್ದರು.ಪಾಲವೆಂದರೆ ಸಪಾಟಾಗಿ ಕೆತ್ತಿದ ದಪ್ಪ ಹಲಗೆಯಂತಹ ಮರದ ತುಂಡು.ಯಾವೊತ್ತೂ ಮಳೆ,ಬಿಸಿಲು,ಚಳಿ ಎಲ್ಲದ್ದಕ್ಕೂ ಸೈ ಎನ್ನುತ್ತಾ ಒಡ್ಡಿಕೊಂಡು,ನಮ್ಮನ್ನೆಲ್ಲಾ ಕ್ಷೇಮವಾಗಿ ಮನೆ ತಲುಪಿಸುವ ತಂತುವಾಗಿ ಬೆಸೆದುಕೊಂಡಿತ್ತು.ಇಷ್ಟು ವರುಷವೂ ಅನಾಯಾಸವಾಗಿ ಪಾಲ ದಾಟಿ ಮನೆ ಸೇರಿದ್ದ ನನಗೆ,ಇವತ್ತು ಏನು ಗ್ರಹಚಾರ ಅಡರಿತ್ತೋ ಏನೋ..ಪಾಲದ ಕೊನೇ ತುದಿ ಇನ್ನೇನು ನೆಲಕ್ಕೆ ಕಾಲಿಡಬೇಕೆನ್ನುವಷ್ಟರಲ್ಲಿ ,ಆಯ ತಪ್ಪಿ ದಡಕ್ಕನೆ ನದಿಯೊಳಗೆ ಬಿದ್ದುಬಿಟ್ಟೆ.ಪುಣ್ಯಕ್ಕೆ ಬೇಸಿಗೆಯಾದ ಕಾರಣ ನೀರು ಹೆಚ್ಚಿಗೆ ಇರಲಿಲ್ಲ.ಚಿಕ್ಕಮ್ಮ ನನ್ನ ಎತ್ತಿ ಸಂತೈಸುವುದು ಹೋಗಲಿ,ಮೈಮೇಲೆ ಚೂರಾದರೂ ನಿಗಾಬೇಡವಾ…ಅಂತಾ ಯಾಮಾರಿಸುತ್ತಾ ಸಿಕ್ಕ ಚಾನ್ಸು ಅಂತ ದಡ ದಡನೇ ಮತ್ತೂ ಬಾರಿಸುತ್ತಿದ್ದಾಳೆ.ಅವತ್ತು ದು:ಖದಲ್ಲಿ ಹೃದಯವೇ ಒಡೆದು ಹೋದಂತಾಗಿತ್ತು.ಇವತ್ತು ಘಟನಾವಳಿಗಳೆಲ್ಲಾ ಚಿತ್ರ ಪಟಗಳಂತೆ ಸಾಲಾಗಿ ಸಂತೆ ನೆರೆದು ಹೃದಯವೇ ಬಾಯಿಗೆ ಬಂದಷ್ಟು ನಗು ಉಕ್ಕಿ ಬರುತ್ತದೆ.ಅಕ್ಕರೆ ತೋರುವ ಚಿಕ್ಕಮ್ಮನ ಕಾಣುವಾಗಲೆಲ್ಲಾ ಈಗ ಪ್ರೀತಿ ನದಿಯಂತೆ ಉಕ್ಕಿ ಹರಿಯುತ್ತದೆ.
** ** ** ** **
ಶಾಲೆಗೆ ನಡೆದುಕೊಂಡೇ ಹೋಗುವಾಗ ಗೆಳತಿಯ ತೋಟವನ್ನು ಬಳಸಿಯೇ ಹೋಗಬೇಕು.ಅವಳ ಕಾಫಿ ತೋಟದ ನಡುವಿನ ಕಿತ್ತಳೆ ಮರದಲ್ಲಿ ತೂಗಿ ತೊನೆಯುವಷ್ಟು ಗೊಂಚಲು ಗೊಂಚಲು ಕಿತ್ತಳೆ ಹಣ್ಣು.ಓರಗೇಯ ಮಕ್ಕಳು ಕಿತ್ತು ಕೊಟ್ಟ ಕಿತ್ತಲೆಯನ್ನು ಸುಲಿದು ತಿಂದು, ಕೈಗೆ ನೀರು ಹಾಕಿ ಚೆನ್ನಾಗಿ ತೊಳೆದರೂ ಕಿತ್ತಳೆ ಪರಿಮಳ ಮಾತ್ರ ಎಷ್ಟೋ ಹೊತ್ತಿನವರೆಗೂ ಹಾಗೆಯೇ ಅಂಟಿಕೊಂಡೇ ಇರುತ್ತಿತ್ತು.ಅವಳಿಗೋ ಸಣ್ಣಗೆ ಅನುಮಾನ.ಅವಳ ತೋಟದ ಹಣ್ಣನ್ನ ನಾವೇ ತಿಂದದ್ದು ಎಂದು.ಗೆಳತಿ ಆದ ಕಾರಣ ನೇರವಾಗಿ ಕೇಳೋಕೂ ಸಂಕೋಚ.ಹಾಗಾಗಿ ಒಮ್ಮೊಮ್ಮೆ ಅವಳು ನಮ್ಮನ್ನೆಲ್ಲಾ ಕೂಡಿಸಿಕೊಂಡು ಏನೆಲ್ಲಾ ರಸವತ್ತಾದ ಕಥೆಗಳನ್ನು ಹೇಳುತ್ತಿದ್ದಳು.ಅದರಲ್ಲಿ ಅವಳ ತೋಟದಲ್ಲಿ ಕಿತ್ತಲೆ ಹಣ್ಣಿಗೆ ಕಾವಲು ಕಾಯುವ ಮನೆಯಷ್ಟು ದೊಡ್ಡ ಗಾತ್ರವಿರುವ ಹಾವಿನ ಬಗ್ಗೆಯೂ ಹೇಳಿ ,ನಮ್ಮನ್ನ ಇನ್ನಿಲ್ಲದ ಭಯಕ್ಕೆ ನೂಕಿಬಿಡುತ್ತಿದ್ದಳು.ಅದರ ಜೊತೆಗೆ ಈ ವಿಷಯವನ್ನ ಯಾರ ಬಳಿಯಾದರೂ ಹೇಳಿಬಿಟ್ಟರೆ ದೊಡ್ಡ ಆಪತ್ತು ಬಂದೆರಗುತ್ತೆ ಅಂತ ಮತ್ತಷ್ಟು ಗಾಬರಿ ಹುಟ್ಟಿಸಿ ಭಯ ಭೀತಳನ್ನಾಗುವಂತೆ ಮಾಡಿ ಬಿಟ್ಟಿದ್ದಳು.ನಾನೋ…ಮನೆಯಷ್ಟು ದೊಡ್ಡಕ್ಕೆ ಇರುವ ಹಾವು ಹೇಗೆ ಗಿಡ ಮರಗಳ ಎಡೆಯಲ್ಲಿ ಹರಿದಾಡೋಕೆ ಸಾಧ್ಯ? ಅಂತ ತರ್ಕಿಸುತ್ತಲೇ ನಿದ್ರೆಯ ಮಂಪರಿನಲ್ಲಿ ಎಲ್ಲಿಯಾದರೂ ಈ ವಿಷಯ ಕನವರಿಸಿ ಬಿಡುತ್ತೇನೋ ಅಂತ ದಿಗಿಲುಗೊಂಡು ನಟ್ಟಿರುಳಲ್ಲೂ ಕೂಡ ಬೆಚ್ಚಿ ಬೀಳುವಂತಾಗುತ್ತಿತ್ತು.ನಂತರ ಓರಗೆಯವರು ಕಿತ್ತಲೆ ಹಣ್ಣು ಕೊಡಲು ಬಂದರೆ ತೆಗೆದುಕೊಳ್ಳುವುದ ಹೋಗಲಿ,ಆ ದಾರಿಯಲ್ಲಿ ಹೋಗೋಕೆ ಹಿಂಜರಿಕೆ.ಯಾರ ಜೊತೆಗೂ ಬಾಯಿ ಬಿಡಬಾರದು ಅಂದಿದ್ದಕ್ಕೆ,ಇಲ್ಲಿ ತನಕವೂ ಯಾರ ಜೊತೆಗೂ ಹೇಳೋ ಧೈರ್ಯ ಬಂದಿಲ್ಲ.ಹೇಳದಿದ್ದರೆ ನೆಮ್ಮದಿಯಿಲ್ಲ.ಅದಕ್ಕೆ ಮೌನವಾಗಿ ಹಾಳೆಗೆ ಇಳಿಸಿ ನಿರಾಳವಾಗುತ್ತಿರುವೆ.
** ** ** ** **
ಚಾಕಲೇಟಿಗೆ ಹತ್ತು ಪೈಸೆ ಕೊಡಿ ಅಂತ ದಮ್ಮಯ್ಯ ಗುಡ್ಡೆ ಹಾಕಿದರೂ(ನಾ ಅಜ್ಜಿ ಮನೆಯಿಂದ ಶಾಲೆಗೆ ಹೋಗುತ್ತಿದ್ದ ಕಾರಣ) ನನ್ನ ಮಾವ ಕೊಡ್ತನೇ ಇರಲಿಲ್ಲ.ಮಧ್ಯಾಹ್ನ ಬುತ್ತಿ ಊಟ ಮುಗಿಸಿ ಎಲ್ಲಾ ಮಕ್ಕಳು ಇಸುಬು ಕಾಕನ ಅಂಗಡಿಯಿಂದ ಕೋಲು ಮಿಠಾಯಿ ತಂದು ನನಗೆ ತೋರಿಸಿ ಕೊಂಡು ಚಪ್ಪರಿಸಿ ತಿನ್ನುವಾಗ,ಬಣ್ಣ ಬಣ್ಣದ ಐಸ್-ಕ್ಯಾಂಡಿ ಚೀಪುವಾಗ ,ನನಗೂ ಆಸೆ ಬರದೇ ಇರುತ್ತದೆಯೇ?ಪಕ್ಕದ್ಮನೆ ಗೆಳತಿಯೊಬ್ಬಳು ಇದಕ್ಕೆ ಸುಲಭ ಉಪಾಯ ಹೇಳಿ ಕೊಟ್ಟಿದ್ದಳು. ಅಂದಿನಿಂದ ನಮಗಿಬ್ಬರಿಗೂ ಶಾಲೆಯಿಂದ ಸಂಜೆ ಬಂದು ಅದೇ ಕೆಲಸ.ಮನೆಯ ಹಿತ್ತಲಿನಲ್ಲಿ ಸದ್ದಿಲ್ಲದೇ ಅರಳುತ್ತಿದ್ದ ಗೋರಟೆ, ಕನಕಾಂಬರ,ಮಲ್ಲಿಗೆ ಮೊಗ್ಗುಗಳನ್ನು ಮೆಲ್ಲಗೆ ಆಯ್ದು,ಮಾರುದ್ದ ಮಾಲೆ ಕಟ್ಟಿ,ರಾತ್ರೆಯಿಡೀ ಹಾಗೆಯೇ ಇಬ್ಬನಿ ಬೀಳುವ ಜಾಗದಲ್ಲಿ ಇಡುವುದು.ಮಾರನೆ ದಿನ ಬೆಳಗ್ಗೆ ಶಾಲೆಗೆ ಹೊರಡೋ ಸಮಯದಲ್ಲಿ,ಹೂ ಮುಡಿಯೋಕೆ ಅಂತ ಹೇಳಿ ಕಟ್ಟಿದ ಹೂವನ್ನು ಮುಡಿಯದೇ ,ಮೆಲ್ಲಗೆ ಪಾಟೀ ಚೀಲದೊಳಗೆ ಇಟ್ಟು,ಕಾಲು ಹಾದಿ ಕಳೆದು ನಡು ದಾರಿ ಸಿಕ್ಕಾಗ ಹಾದಿ ಬದಿಯಲ್ಲಿ ನಿಂತು,ಹೋಗುವ ಬರುವ ವಾಹನಗಳಿಗೆಲ್ಲಾ ಹೂ ಮಾಲೆಯನ್ನು ಎತ್ತಿ ಹಿಡಿದು ತೋರಿಸುತ್ತಿದ್ದೆವು.ಕಪ್ಪು ಕಾರಿನ ಬಗ್ಗೆ ಏನೆಲ್ಲಾ ಭೀತಿ ಹುಟ್ಟಿಸುವ ಗುಸು ಗುಸು ಸುದ್ದಿ ಇದ್ದ ಕಾರಣ,ಕಪ್ಪು ಕಾರು ಬಂದಾಗಲೆಲ್ಲಾ ತಿರುಗಿ ನಿಲ್ಲುತ್ತಿದ್ದೆವು.
ಯಾವುದಾದರೊಂದು ವಾಹನದವರು ನಿಲ್ಲಿಸಿ ಹೂ ಮಾಲೆ ಖರೀದಿಸಿಯೇ ಖರೀದಿಸುತ್ತಿದ್ದರು.ಮಾಲೆಗೆ ಎರಡು ರೂ. ಅಂದರೆ ಒಂದು ರೂ.ಆದರೂ ಗ್ಯಾರಂಟಿ ಸಿಕ್ಕೇ ಸಿಗುತ್ತಿತ್ತು.ಒಮ್ಮೊಮ್ಮೆಯಂತೂ ಬಡಪಾಯಿ ಮಕ್ಕಳು ಅಂತ ಕನಿಕರಿಸಿ ಪೂರ್ತಿ ಎರಡು ರೂ.ಕೂಡ ದಕ್ಕಿ ಬಿಡುತ್ತಿತ್ತು. ಆಗೆಲ್ಲಾ ನಮಗೆ ಡಬಲ್ ಧಮಾಕ.ಒಂದು ದಿನ ಹೀಗೆ ಮಾಲೆ ಎತ್ತಿ ತೋರಿಸುತ್ತಾ ಬರುವ ಬಸ್ಸಿಗೆ ಹಿಡಿದಿದ್ದೆ.ಜೊತೆಗೆ ನನ್ನ ಗೆಳತಿಯೂ…ಡ್ರೈವರ್ ಬಸ್ಸು ನಿಲ್ಲಿಸಿ ಹೂ ಮಾಲೆ ತೆಗೆದುಕೊಳ್ಳುವಾಗ,ಬಸ್ಸಿನ ಮುಂದುಗಡೆ ಸೀಟಿನಲ್ಲಿಯೇ ನನ್ನ ಮಾವ! ಒಮ್ಮೆಗೇ ಆಕಾಶ ಭೂಮಿ ಎಲ್ಲಾ ಮೇಲು ಕೆಳಗೆ ಆದಂತನಿಸಿ ,ಉತ್ಸಾಹವೆಲ್ಲಾ ಒಮ್ಮೆಗೆ ಜರ್ರನೆ ಇಳಿದಂತಾಗಿತ್ತು.ಆ ದಿನ ಯಾಕೋ ಕೋಲು ಮಿಠಾಯಿ ತಿನ್ನಲು ಮನಸ್ಸೇ ಆಗಲಿಲ್ಲ.ಆ ಸಂಜೆಯಂತೂ ಮನೆಗೆ ಹೋಗೋಕೆ ಹೆದರಿಕೆ.ಕಣ್ಣು ತಪ್ಪಿಸಿ ಆಚೆ ಈಚೆ ಎಡಕಾಡುತ್ತಿದ್ದ ನನ್ನ ನೋಡಿ ಮಾವ,ಅಷ್ಟೇ ಕಕ್ಕುಲಾತಿಯಿಂದ ಕರೆದು ತಲೆ ನೇವರಿಸಿ,ತಕೋ! ಇಸುಬು ಕಾಕನ ಅಂಗಡಿಯಿಂದ ನಾಳೆ ಚಾಕಲೇಟು ತಿನ್ನು ಅಂದಾಗ ನನಗೋ ಪರಮಾಶ್ಚರ್ಯ.ಇಲ್ಲಿ ಈಗ ಹಿತ್ತಲಿನಲ್ಲಿ ಹೂಗಳೆಲ್ಲಾ ನೆಲದ ಮೇಲೆ ಸುರಿದು ಕೊಂಡು ಬೀಳುವುದ ಕಂಡಾಗ ಮಾಲೆ ಕಟ್ಟಲೇ…? ಅಂತ ಮನಸ್ಸು ಹಾತೊರೆಯುತ್ತದೆ. ಗಂಧವಿಲ್ಲದ ಪರ್ಮನೆಂಟ್ ಪ್ಲಾಸ್ಟಿಕ್ ಹೂಗಳ ನಡುವೆ ಹಿತ್ತಲ ಹೂ ಮೌನವಾಗಿ ರೋಧಿಸಿದಂತಾಗಿ ಖೇದವೆನ್ನಿಸುತ್ತದೆ.
** ** ** **
ಆಗ 8 ನೇ ತರಗತಿಗೆ ಹಳ್ಳಿಯ ಮೂಲೆಯ ಕನ್ನಡ ಶಾಲೆಯಿಂದ ತೀರಾ ಧೀಮಾಕಿನಿಂದ ಸೀದಾ ಇಂಗ್ಲೀಷ್ ಮೀಡಿಯಮ್ ತರಗತಿ ಹೊಕ್ಕು ಬೆಪ್ಪು ತಕ್ಕಡಿಯಾಗಿದ್ದೆ. ಒಂದೇ ಒಂದು ಇಂಗ್ಲೀಷ್ ಪದಗಳು ಅರ್ಥವಾಗದೆ ಕಕ್ಕಾಬಿಕ್ಕಿ.ಟೀಚರ್ ಏನಾದ್ರು ಹೇಳಿ ನಕ್ರೆ ಅದು ಜೋಕ್ ಇರಬಹುದೇನೋ ಅಂದುಕೊಂಡು ನಾವೂ ಗುಂಪಿನಲ್ಲಿ ಗೋವಿಂದ ಆಗೋದು.ನಗು,ಅಳು,ಸಿಟ್ಟು ,ಜಗಳ ಎಲ್ಲವೂ ಇಂಗ್ಲೀಷ್ ಮಯದಂತಾಗಿ ನಾನು ಪೆಚ್ಚಾಗಿಬಿಟ್ಟಿದ್ದೆ. ಆದರೆ ಕನ್ನಡ ಪಾಠದಲ್ಲಿ ಮಾತ್ರ ನಾನೇ ನಂ.ಒನ್. ಶಾಲೆಯಲ್ಲಿ ಎಂದಿನಂತೆ ಆವತ್ತೂ ಮಕ್ಕಳನ್ನ ಅದಲು ಬದಲು ಕೂಡಿಸಿ ಪರೀಕ್ಶೆ ಬರೆಸುತ್ತಿದ್ದರು.ನನ್ನ ಡೆಸ್ಕಿನ ಆಚೆ ಬದಿಗೆ ಬಲು ಬುದ್ದಿವಂತ ಹುಡುಗ.ಇಂಗ್ಲೀಷ್ ಅರಳು ಹುರಿದಂತೆ ಮಾತನಾಡುತ್ತಿದ್ದ.ಆದರೆ ಕನ್ನಡ ಅವನಿಗೆ ಅಷ್ಟಕ್ಕಷ್ಟೆ.ನೆಟ್ಟಗೆ ವರ್ಣ ಮಾಲೆ ಬರೆಯೋಕೆ ಗೊತ್ತಿದ್ದರೆ ಕನ್ನಡ ಟೀಚರ ಪುಣ್ಯ.ಮೊದಲ ಪರೀಕ್ಷೆ ಕನ್ನಡ .ಅವನಿಗೆ ಪ್ರಶ್ನೆ ಪತ್ರಿಕೆಯ ಒಂದು ಉತ್ತರವೂ ಗೊತ್ತಿದ್ದಂತೆ ತೋರಿ ಬರುತ್ತಿರಲಿಲ್ಲ.ಪ್ಲೀಸ್..ಹೇಳಿ ಕೊಡೆ..ಹೇಳಿಕೊಡೇ..ನಿನಗೆ ನಾಳೆ ನಾನು ಎಲ್ಲಾ ಸಬ್ಜೆಕ್ಟ್ ಹೇಳಿ ಕೊಡುವೆ ಅಂತ ಸಪ್ಪೆ ಮೋರೆ ಹಾಕಿಕ್ಕೊಂಡು ಧೈನ್ಯದಿಂದ ಯಾಚಿಸುವಾಗ,ನನಗೋ..ಅಯ್ಯೋ! ಪಾಪ ಅಂತನ್ನಿಸಿ ಆಚೆ ಈಚೆ ನೋಡುತ್ತಾ ಬೆದರಿ ಬೆದರಿ ಅಲ್ಪ ಸ್ವಲ್ಪ ಹೇಳಿಕೊಟ್ಟೆ.ನನಗೆ ಇಂಗ್ಲೀಷ್ ಅಷ್ಟಾಗಿ ಅರ್ಥವಾಗದೆ,ಕಷ್ಟವಾದರೂ ಬಾಯಿಪಾಟ ಮಾಡಿಕೊಂಡಾದರೂ ಹೋಗುತ್ತಿದ್ದೆ. ಬೇರೆಯವರದ್ದು ನೋಡಿ ಬರೆಯುವುದು ಅಪರಾಧ ಅಂತ ಆಗಲೇ ಮನಸ್ಸಿನಲ್ಲಿ ನಾಟಿ ಬಿಟ್ಟಿತ್ತು. ಆದರೆ ನಿನ್ನೆ ಅಷ್ಟು ಚೆನ್ನಾಗಿ ಕಣ್ಣಿನ ಚಿತ್ರವನ್ನ ಬಿಡಿಸಿ ಕಲಿತು ಬಂದಿದ್ದೆ.ಈಗ ನೋಡಿದರೆ ನನಗೆ ಸೈನ್ಸ್ ಪರೀಕ್ಷೆ ದಿನ ಚಿತ್ರವೇ ಮರೆತಂತಾಗಿ,ಕಣ್ಣೇ ಮಯ ಮಯ ಮಸುಕಾಗುತ್ತಿದೆ.ಛೆ! ಅನಾಯಾಸವಾಗಿ ೫ ಅಂಕ ಕಳೆದುಕೊಳ್ಳುತ್ತೀನಲ್ಲ ಅಂತ ಅಳುವೇ ಬಂದಂತಾಗಿತ್ತು.ನನ್ನ ಬೆಂಚಿನ ಸಹಪಾಠಿಯೋ ಈಚೆಗೂ ತಿರುಗದೆ ಭಯಂಕರ ಹುಮ್ಮಸ್ಸಿನಲ್ಲಿ ಬರೆಯುತ್ತಿದ್ದಾನೆ.ಕೇಳಲೋ ಬೇಡವೋ,ಸರಿಯೋ ತಪ್ಪೋ ಅಂತ ತರ್ಕಿಸುತ್ತಲೇ…ನೀ ಬಿಡಿಸಿದ ಕಣ್ಣಿನ ಚಿತ್ರ ಒಮ್ಮೆ ತೋರಿಸುವೆಯಾ..ಅಂತ ಅಂದಿದ್ದೇ ತಡ,ಬೇಕಾದರೆ ನನ್ನ ಕಣ್ಣನ್ನೇ ನೋಡಿ ಬಿಡಿಸು ಅಂತ ದಬಾಯಿಸಿ ಬಿಡಬೇಕೇ? ಎಲಾ! ಎಂಥಾ ಮೋಸ! ಆಗ ಚಿಲ್ಲನೆ ಚಿಮ್ಮಿದ ಅಪಮಾನದ ಕಣ್ಣಿರು ,ಈಗ ನೆನೆದು ನಕ್ಕ ರಭಸಕ್ಕೆ ಫಳ್ಳನೆ ಕಣ್ಣ ತುದಿಯಲ್ಲಿ ಹನಿ ನೀರು.
** ** **
ಎಷ್ಟೊ ವರುಷಗಳ ಬಳಿಕ, ಅಲ್ಲಿ ಇಲ್ಲಿ ಸಮಾರಂಭಗಳಲ್ಲಿ ಈಗ ಹಳೆಯ ಗೆಳತಿಯರು ಸಿಕ್ಕಾಗ,ಜೋಳಿಗೆಯಿಂದ ಕೆದಕಿ ಕೆದಕಿ ನೆನಪುಗಳನ್ನು ಹೆಕ್ಕಿ ತೆಗೆದು ಅವರ ಮುಂದೆ ಹರವಿದರೆ, ಅವರುಗಳೋ ಈ ವಯಸ್ಸಿಗೇ ಎಲ್ಲ ಮರೆತವರಂತೆ ಒಂದೂ ನೆನಪಿಲ್ಲದೆ,ಸಂಬಂಧವಿಲ್ಲದ ವಿಷಯ ಹೇಳುತ್ತಿರುವೆನೋ ಎಂಬಂತೆ ನಿರ್ಲಿಪ್ತ ನಗೆ ಚೆಲ್ಲುವಾಗ, ನನಗೆ ಹೇಗೆ ಹೇಗೋ ಆಗಿಬಿಡುತ್ತದೆ.ಇಷ್ಟೊಂದು ನೆನಹುಗಳು ನನ್ನೊಳಗೆ ಮಾತ್ರ ಅವಿತು ಕುಳಿತಿರುವುದೇ ಅಂತ ಅಚ್ಚರಿಯೂ ಆಗುತ್ತದೆ.ನೆನಪುಗಳನ್ನು ಹೊತ್ತು ತಿರುಗುವುದೆಂದರೆ ..ಎಷ್ಟು ಸುಖ ಮತ್ತು ಎಂತಹ ಹಗುರ! ಅವರಿಗ್ಯಾಕೆ ಅನುಭವವಾಗುವುದಿಲ್ಲಾ? ನನ್ನೊಳಗೆ ನಾನೇ ಪ್ರಶ್ನಿಸಿ ಕೊಳ್ಳುತ್ತಾ ಮತ್ತಷ್ಟು ನೆನಪುಗಳಿಗಾಗಿ ತಡಕಾಡುತ್ತೇನೆ.
-ಸ್ಮಿತಾ ಅಮೃತರಾಜ್, ಸಂಪಾಜೆ.
ನೈಸ್. ನೆನಪುಗಳ ಮಾತು ಮಧುರ..
ಮಾಲ ಮೇಡಂ…ಬರಹಕ್ಕೆ ಚಿತ್ರದ ಪರಿಕಲ್ಪನೆ ಸೊಗಸಾಗಿದೆ.ವಂದನೆಗಳು-ಸ್ಮಿತಾ..
ನೆನಪುಗಳೇ ಮಧುರ .ಸಿಹಿಯಿರಲಿ ಕಹಿಯಿರಲಿ ಅದನ್ನು ನೆನಪಿಸಿ ಕೊಂಡು ಹ೦ಚಿಕೊಳ್ಳುವುದೊ೦ದು ಒ೦ನ್ದು ಕಲೆ.
ಬಾಲ್ಯದ ನೆನಪುಗಳು , ಸವಿ ನೆನಪುಗಳು