ಸಂತೆ-ಸಂತ
ಕನ್ನಡಿಯಲ್ಲಿ ತನ್ನ ತಾನೇ ಕಂಡು
ಬೆರಗಾಗಿದೆ ಸಂತೆ
ಮಾಯಾಲಾಂದ್ರದಿಂದ ಹೊರಬಂದಂತೆ
ಒಂದೊಂದೇ ಸರಕು ಸರಂಜಾಮು
ಅಂಗಡಿಗಳೇ ತೆರಪಿಲ್ಲದೇ ಬಂದು
ಶಿಸ್ತಾಗಿ ಕೂತ ಪರಿಗೆ
ಏನೆಲ್ಲ ವೈವಿಧ್ಯ-ಗಾತ್ರ ಗುಣಗಳಲ್ಲಿ
ದೃಶ್ಯ ರುಚಿ ಸದ್ದು ವಾಸನೆಯ
ಹಸಿವಿಗೆ ತೆರೆದುಕೊಳ್ಳುವ ಲೋಕ
ಕಂಡಷ್ಟೂ ಕಾಣುವ ಬಗೆದಷ್ಟೂ
ಮೊಗೆಯಲಿರುವ ತನ್ನೊಡಲು
ಬಿಚ್ಚಿ ಹರವಿದ ಢಂಗಿಗೆ
ಥಕ್ಕಾಗಿದೆ ಸಂತೆ
ಅಲ್ಲಿ ಮೂಲೆಯಲ್ಲಿ ನಿಂತಿದ್ದಾನೆ ಸಂತ
ಮಾಯದ ಮುಗುಳ್ನಗೆ ಬೆಳೆದಿದೆ
ಅವನ ತುಟಿ ಕಣ್ಣುಗಳಲ್ಲಿ
ನಿಧಾsನ ಸಂತೆಯ ಉದ್ದಗಲ
ಓಡಾಡುತ್ತಿದ್ದಾನೆ- ಯಾವ ಅವಸರ
ಅವನಿಗೆ
ಕೀಲಿ ಕೊಟ್ಟರೆ ಡ್ರಂ ಬಾರಿಸುವ
ಬೊಂಬೆಯನ್ನೆತ್ತಿ ಕೊಟ್ಟು ಕೀಲಿ
ಮುನ್ನಡೆದಿದ್ದಾನೆ ಅಲ್ಲಿ
ಕವಡೆ ಮಣಿಸರ ಕಪ್ಪೆಚಿಪ್ಪುಗಳ ಕರೆಗೆ
ಒಂದೊಂದೇ ಚಿಪ್ಪನ್ನೆತ್ತಿ ಕಿವಿಗಿಟ್ಟು ಆಲಿಸಿ
ಬಳಿಯ ಹೂವಿನಂಗಡಿಯಿಂದ
ಪಕಳೆಯೊಂದನ್ನೆತ್ತಿ ಮೂಸಿ ದಾರಿ
ತಪ್ಪಿ ಸಂತೆಗೆ ಬಂದು ಗೊಂದಲಿಸುವ
ಚಿಟ್ಟೆಯ ಕಣ್ಣಲ್ಲೇ ಮೈದಡವಿ
ಸಿಹಿತಿಂಡಿಗಳೆಡೆಗೆ ಬಂದು ಮೂಗರಳಿಸಿದ್ದಾನೆ
ನಿಲ್ಲದೇ ನಡೆದಿದ್ದಾನೆ ಕಾಲು
ತಿರುಗಿದ ಕಡೆಗೆ
‘ಸಂತ್ಯಾತನೋ ಅಜ್ಜಾ’ ಯಾರದೋ
ಕೂಗಿಗೆ ಹ್ಞೂಂ ಎಂದಿದ್ದಾನೆ
ಅದೇ ಮುಗುಳುನಗೆಯಲ್ಲಿ
ಸಂಜೆಯಾಗಿದೆ-ಒಂದೊಂದೇ
ಅಂಗಡಿ ಕಳಚುತ್ತ ಮತ್ತೆ
ಪೆಟ್ಟಿಗೆ ಸೇರಿ
ಬಯಲಾದ ಸಂತೆ
ಈಗ ಸಂತನೊಳಗೆ ಬಿಚ್ಚಿಕೊಳ್ಳುತ್ತ..
.
– ಗೋವಿಂದ ಹೆಗಡೆ