ಗೋಪೀಗೀತ
ನನ್ನೊಳಗೆ ಅವನಿಹನೊ ಅವನೊಳಗೆ ನಾನಿಹೆನೊ
ಬಂಧವೆಂತಿದುವೆಂದು ಅರಿಯದಾದೆ.
ಮುನ್ನಡೆಸುತಿಹನೊ ಬೆನ್ಗಾವಲಾಗಿಹನೊ ಆ-
ನಂದದೀ ಘಳಿಗೆಯಲಿ ತಿಳಿಯದಾದೆ.
ಕೊಳಲು ನಾನಾಗಿಹೆನೊ ನನ್ನೊಳಗೆ ಕೊಳಲಿಹುದೊ
ಉಲಿಯುತಿರಲವನುಸಿರು ಬೆರೆತು ಹೋದೆ.
ಮಳಲಿನೊಳಗವನೊಡನೆ ಮರುಳಾಗಿ ನಲಿದಾಡಿ
ಕಳೆದು ಹೋಗುವ ಸುಖದೊಳಾನು ಇಳಿದೆ.
ರಾಧೆಯೊಳಗೂ ನಾನೆ ಮಾಧವನೊಳಗು ನಾನೆ
ಬಾಧೆಗಳು ಕಾಡದೀ ತೀರದಲ್ಲಿ.
ಕೋದು ಹೋಗಿರಲಾನು ಕೃಷ್ಣನೆದೆ ಮಾಲೆಯಲಿ
ಮೋದ ನೋಡುತ್ತಿಹಳು ಯಮುನೆಯಿಲ್ಲಿ.
– ಭಾವನಾ