‘ಅಜ್ಞಾತ’: ತತ್ತಾಪಾನಿಯಲ್ಲಿ ತತ್ತರ..
ಹಿಮಾಚಲ ಪ್ರದೇಶದ ಶಿಮ್ಲಾ -ಟಿಬೆಟ್ ರೋಡ್ ಮೇಲೆ ನಾರ್ಖಂಡಾ ಪಾಸ್ ದಾಟಿದ ಮೇಲೆ ಕೆಳಗಿಳಿದರೆ ಪ್ರಪಾತದಲ್ಲಿ ಸಟ್ಲೇಜ್ ನದಿ. ಆಗ 1984 ನೇ ಇಸ್ವಿ.. ನಾನು ಪ್ರವಾಸಕ್ಕೆ ಅಂತ ಹೋಗಿದ್ದೆನೋ ನಿಜ. ಜಾಗ ಇಷ್ಟವಾದರೆ ಅಲ್ಲೇ ತಪಸ್ಸಿಗೆ ಕುಳಿತುಕೊಳ್ಳುವ ಮನಸ್ಸೂ ಇತ್ತು.(ಯಾವುದೇ ಇಚ್ಛಾರಹಿತವಾಗಿ) ಹಿಮಾಚಲಪ್ರದೇಶದ ಕುಮಾರಸೇನಾ ತಾಲೂಕಿನ ತನಕ 1969 ರಲ್ಲಿ ಹೋಗಿದ್ದೆ. ಅಲ್ಲಿ ಮನೆಯ ಎಲ್ಲರೂ ದುಡಿದರೆ ಒಂದು ಹೊತ್ತಿನ ಊಟಕ್ಕೆ ಸಾಕಾಗುವಷ್ಟು ಮಾತ್ರ ದೊರಕುವಂತಹ ದಾರಿದ್ರ್ಯ. ಹಾಗೇ ಸೇಬು ಬೆಳೆಯುವಲ್ಲಿ ಅತೀ ಶ್ರೀಮಂತಿಕೆಯ ಜನ. ಅಹಂಕಾರಿಗಳು.
ಕುಮಾರಸೇನ ತಾಲೂಕಿನಿಂದ 50 ಕಿ.ಮೀ ದೂರದಲ್ಲಿ ಸಟ್ಲೇಜ್ ನದಿಯ ದಡದಲ್ಲಿದ್ದ ತತ್ತಾಪಾನಿ (ಬಿಸಿನೀರಿನ ಬುಗ್ಗೆ) ನೋಡಲು ಹೋಗಬೇಕೆಂದು ಹೊರಟೆ. ವಾಹನವೊಂದೂ ಸಿಗಲಿಲ್ಲ. ಇಳಿದು ,ಇಳಿದು ಹೋಗುವಾಗ ಭಯಂಕರ ಹಸಿವಾಯ್ತು. ಅಲ್ಲಿ ದೂರ ದೂರದಲ್ಲಿರುವ ಮನೆ ಮನೆಯಲ್ಲಿ ಭಿಕ್ಷೆ ಬೇಡಿದೆ. ಹಣಕೊಡುತ್ತೇನೆ ಎಂದರೂ ಒಂದು ತುತ್ತು ಯಾರೂ ಕೊಡಲಿಲ್ಲ. ಪೂರ್ತಿ ಶಕ್ತಿ ಕಳೆದುಕೊಂಡಿದ್ದೆ. ಯಾರೋ ಒಂದು ದೇವಸ್ಥಾನದ ಜಾತ್ರೆ ಇದೆ.ಅಲ್ಲಿ ಹೋಗು, ಊಟ ಕೊಡ್ತಾರೆ ಅಂದ್ರು. ಹೇಗೋ ಹೋದೆ. ಆದರೆ ಅಲ್ಲಿ ಹಿಂದಿನವಾರ ವಿಗ್ರಹ ಕಳ್ಳನೊಬ್ಬ ಬಂದಿರುವ ಗುಮಾನಿಯ ಮೇಲೆ, ಅವರಿಗಿಂತ ನೋಡಲು ಭಿನ್ನವಾಗಿದ್ದ ನನ್ನನ್ನು ಅಲ್ಲಿಯೇ ವಿಚಾರಣೆಗೆ ಒಳಪಡಿಸಿದರು. ನನಗೆ ಊಟ ಕೊಟ್ಟರೆ ನನ್ನ ಬಗ್ಗೆ ಹೇಳುವದಾಗಿ ಹೇಳಿದೆ. ಕೊಡಲಿಲ್ಲ. ಸಧ್ಯ ಹೊಡೆಯದೇ ಬಿಟ್ಟರು. ಹೇಗೋ ಒಂದು ಶಾಲೆಯ ಜಗುಲಿಯ ಮೇಲೆ ಹೋಗಿ ಕುಳಿತೆ. ಅಲ್ಲಿಯೂ ಜನ ಮುತ್ತಿಗೆ ಹಾಕಿದರು.ರಾತ್ರಿಯಾಗಿತ್ತು. ಯಾರೋ ಒಬ್ಬ ಪುಣ್ಯಾತ್ಮ ಅಲ್ಲಿಯೇ ಒಂದು ಹೊತ್ತಿಸಿದ ರಾಳದ ಮರದ ಕಡ್ಡಿಯನ್ನು,(ಹಸಿ ಮರದ ಕಡ್ಡಿಗೆ ಬೆಂಕಿ ಹಿಡಿಯುತ್ತದೆ.ಅದನ್ನು ಮೊಂಬತ್ತಿಯಂತೆ ಅಲ್ಲಿ ಬಳಸುತ್ತಾರೆ. ಸತ್ತರೂ ಇದರಲ್ಲೇ ಸುಡುವ ಪದ್ಧತಿ) ಹಾಗೂ ಊಟವನ್ನು ತಂದು ಅಲ್ಲಿಯೇ ಕೊಟ್ಟ. ಬದುಕಿದೆಯಾ ಬಡ ಜೀವವೇ ಎಂದು ಉಂಡು ಮಲಗಿದೆ.
ಮರುದಿನ ಅಲ್ಲಿಯೇ ನಿತ್ಯಕರ್ಮ,ಯೋಗ ,ಧ್ಯಾನಗಳನ್ನು ಮುಗಿಸಿ, ಮುಂದಿನ ಊರಿಗೆ ಪ್ರಯಾಣ ಬೆಳೆಸಿದೆ.ನಡೆದೆ. ನಡೆದೆ. ಅಲ್ಲಿ ಕುರಿಗಾರರ ಬಳಿ ಆಹಾರ ಕೇಳಿದೆ. ಕೊಡಲಿಲ್ಲ. ನಾಯಿಬಿಟ್ಟು ಕಚ್ಚಿಸುವದಾಗಿ ಹೆದರಿಸಿದರು. ಹೇಗೋ ಹೋಗುತ್ತಿರುವಾಗ ಮೇಲಿನಿಂದ ಕಲ್ಲು ಬೀಳಲಾರಂಭಿಸಿತು. ಅವರು ನನ್ನನ್ನು ಬಿಡುವ ಹಾಗೆ ಕಾಣಲಿಲ್ಲ. ಅಷ್ಟು ಹೊತ್ತಿಗೆ ಹದಿನೇಳರ ಯುವಕನೊಬ್ಬ ನನ್ನ ಮೇಲೆ ಹೊದಿಕೆ ಹೊದಿಸಿ ನನಗೆ ರಕ್ಷಣೆ ಕೊಟ್ಟ.ಕಲ್ಲುಮಳೆ ನಿಂತಮೇಲೆ ಬೇಗ ಬೇಗ ಹೋಗುವಂತೆ ಹೇಳಿ ಅವನು ಹೊರಟು ಹೋದ. ಜೀವ ಉಳಿದರೆ ಆಹಾರ.. ಓಡಿದೆ. ಅಲ್ಲೊಂದು ಪುಟ್ಟ ಗೂಡಂಗಡಿ. ಅಲ್ಲಿ ಬಿಸ್ಕೇಟಿನಿಂದ ಹೊಟ್ಟೆ ತುಂಬಿಸಿಕೊಂಡು ಕುಳಿತೆ. ಅಲ್ಲಿಂದ ‘ಕೈರಾಲಿ ‘ ಎಂಬ ಎತ್ತರದಲ್ಲಿರುವ ಊರಿನಲ್ಲಿ ಅಲ್ಲಿಯ ರಾಜ ಕಟ್ಟಿಸಿದ ಸುಂದರವಾದ ದೊಡ್ಡ ಕೆರೆಯನ್ನು ನೋಡಿ ಬಂದೆ. ಅಲ್ಲಿನ ಜನರ ಜೀವನಕ್ರಮ ತಿಳಿಯುವ ಹಂಬಲ..ಆದರೆ ಅವರು ನನ್ನನ್ನು ಸಂಶಯದಿಂದ ನೋಡುತ್ತಿದ್ದರು. ಕೈರಾಲಿಯಲ್ಲೊಂದು ಹೈಸ್ಕೂಲ್ ಇತ್ತು. ಅಲ್ಲಿ ಶಿಕ್ಷಕನಾಗಿ ಸೇರಿಕೊಂಡು ಕೆಲದಿನ ಕೆಲಸಮಾಡಿದೆ.. ಅಲ್ಲಿಯ ಪ್ರಕೃತಿಯ ಮಡಿಲಲ್ಲಿ ಕಳೆದೇ ಹೋದೆ…
(ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ವ್ಯಕ್ತಿಯೊಬ್ಬರ ಸ್ವಾನುಭವದ ಸಾರಾಂಶವಿದು. ಅಜ್ಞಾತರಾಗಿರಬಯಸುವ ಇವರ ಕಥೆಗೆ ಅಕ್ಷರ ರೂಪ ಕೊಡುವ ಪ್ರಯತ್ನವಿದು)
,
ನಿರೂಪಣೆ : ಲತಿಕಾ ಭಟ್, ಬೆಳಗಾವಿ
ಮನ ತಟ್ಟಿದ ಬರಹ..